Wednesday, 1 July 2020

ಭಗವಂತನ ವರ್ಣನೆ

ಭಗವಂತನ ವರ್ಣನೆ

ಕಠೋಪನಿಷತ್, ಯಮನ ವಿವರಣೆ
ದೇವರಿಗೆ ಶರೀರವಿಲ್ಲ, ಆಕಾರವಿಲ್ಲ. ಆದರೆ ಆತ ಎಲ್ಲರ ಶರೀರದೊಳಗೂ ಇದ್ದಾನೆ. ನಮಗೆ ಒಂದು ಶರೀರವಾದರೆ –ಎಲ್ಲಾ ಶರೀರವೂ ಅವನ ಶರೀರ! ಈ ರೀತಿ ಎಲ್ಲಾ ಶರೀರದಲ್ಲೂ ಇರುವ
ಭಗವಂತನಿಗೆ ಆ ಶರೀರದ ಲೋಪವಾಗಲಿ, ದುಃಖಾನುಭವವಾಗಲಿ, ಅಭಿಮಾನವಾಗಲೀ ಇಲ್ಲ. ಆದ್ದರಿಂದ ಭಗವಂತ ಅಶರೀರ. ನಮ್ಮ
ಶರೀರಕ್ಕೆ ನೆಲೆ ಇಲ್ಲ. ಒಂದು ದಿನ ಬಿದ್ದು ಹೋಗುವ ಈ ಶರೀರ ಗಟ್ಟಿಯಾಗಿ ನಿಲ್ಲುವಂತಹುದಲ್ಲ. ಇಂತಹ ನೆಲೆ ಇಲ್ಲದ ಶರೀರದಲ್ಲಿ ನೆಲೆಸಿ, ಅದಕ್ಕೊಂದು ನೆಲೆ ಕೊಟ್ಟು, ನಿಲ್ಲಲಾಗದ ದೇಹವನ್ನು ನಿಲ್ಲುವಂತೆ ಮಾಡಿ, ಚಲಿಸಲಾಗದ ದೇಹವನ್ನು ಚಲಿಸುವಂತೆ
ಮಾಡುವವ ಆ ಭಗವಂತ. ಇಂತಹ ಭಗವಂತ ದೇಹದಿಂದ ಹೊರಟು ಹೋದಾಗ ಈ ಶರೀರ ಬಿದ್ದು ಹೋಗುತ್ತದೆ. ಭಗವಂತ ನಮ್ಮ ಹೃದಯ ಗುಹೆಯಲ್ಲಿ ‘ಆತ್ಮ’ ಮತ್ತು ‘ಅಂತರಾತ್ಮ’
ನಾಮಕನಾಗಿ ಎರಡು ರೂಪದಲ್ಲಿ ನೆಲೆಸಿದ್ದಾನೆ.
ಇಲ್ಲಿ ಗುಹೆ ಎಂದರೆ ನಮ್ಮ ಹೃದಯ ಗುಹೆ. ಅದು ಹೃತ್ಕಮಲ ಮಧ್ಯದಲ್ಲಿನ ಅನಾಹತ ಚಕ್ರ(thymus gland)ವೆಂಬ ಶಕ್ತಿ ಕೇಂದ್ರ.
ಅಲ್ಲಿ ಜೀವಸ್ವರೂಪವನ್ನು ಧಾರಣೆ ಮಾಡಿಕೊಂಡು ಜೀವಸ್ವರೂಪದ
ಹೊರಗೆ ಆತ್ಮ ನಾಮಕನಾಗಿ, ಮತ್ತು ಜೀವ ಸ್ವರೂಪದ ಒಳಗೆ ಅಂತರಾತ್ಮ ನಾಮಕನಾಗಿ ಭಗವಂತ ನೆಲೆಸಿದ್ದಾನೆ. ಆತ ಎಲ್ಲಾ
ಯಥಾರ್ಥ ಕ್ರಿಯೆಗಳಿಂದ ಬರುವ ಪುಣ್ಯಫಲ ಮತ್ತು ಆನಂದವನ್ನು ಪಾನ ಮಾಡಿಕೊಂಡು, ಇಂದ್ರಿಯಗಳ ಅನುಭವವನ್ನು
ಸುಖಮಯನಾಗಿ ಆಸ್ವಾಧಿಸಿಕೊಂಡು, ಆ ಆನಂದದ ಭಾಗವನ್ನು ನಮಗೂ ಪಾನ ಮಾಡಿಸುತ್ತಾ ನೆಲೆಸಿದ್ದಾನೆ. ಪುಣ್ಯ ಫಲವಾಗಿ
ಬಂದಿರುವ ಮನುಷ್ಯ ಶರೀರ ಭಗವಂತನ ಮನೆ. ಅಲ್ಲಿ ದೇಹದ ಮಧ್ಯ ಭಾಗವಾದ ಹೃತ್ಕಮಲ ಭಗವಂತನ ಅಂತಃಪುರ. ಅದು ಆತನ
ವಾಸಸ್ಥಾನ. ಭಗವಂತನನ್ನು ಸೂರ್ಯನಾಗಲಿ, ಚಂದ್ರನಾಗಲೀ, ಮಿಂಚು- ನಕ್ಷತ್ರವಾಗಲೀ, ಅಗ್ನಿಯಾಗಲೀ ಬೆಳಗಿಸಿ ತೋರಿಸಲಾರವು. ಏಕೆಂದರೆ ಈ ಎಲ್ಲಾ ಬೆಳಕಿನ ಪುಂಜಗಳಿಗೆ ಬೆಳಕನ್ನೀಯುವ ಮೂಲ ಬೆಳಕು ಆ
ಭಗವಂತ. ಭಗವಂತನ ಬೆಳಕಿಗೆ ಅನುಗುಣವಾಗಿ ಕಣ್ಣಿಗೆ ಕಾಣುವ ಈ ಬೆಳಕುಗಳಿವೆ. ಎಲ್ಲಾ ಬೆಳಕುಗಳ ಒಳಗೆ ಬೆಳಕಾಗಿ ಭಗವಂತ
ತುಂಬಿದ್ದಾನೆ. ಎಲ್ಲಾ ಬೆಳಕುಗಳೂ ಭಗವಂತನ ಬೆಳಕಿನ ಪ್ರತಿಫಲನ. ಭಗವಂತನಲ್ಲದ, ಸ್ವತಂತ್ರವಾದ ಬೆಳಕು ಈ ಪ್ರಪಂಚದಲ್ಲಿಲ್ಲ. ಇದನ್ನೇ ಕೃಷ್ಣ ಗೀತೆಯಲ್ಲಿ ಹೀಗೆ ಹೇಳಿದ್ದಾನೆ:

ನ ತದ್ ಭಾಸಯತೇ ಸೂರ್ಯೋ ನ ಶಶಾಂಕೋ ನ ಪಾವಕಃ ।
ಯದ್ ಗತ್ವಾ ನ ನಿವರ್ತಂತೇ ತದ್ ಧಾಮ ಪರಮಂ ಮಮ ॥೧೫-೬॥

ಅದನ್ನು ಸೂರ್ಯ ಬೆಳಗಿಸಲಾರ; ಚಂದ್ರ ಬೆಳಗಿಸಲಾರ; ಬೆಂಕಿ ಕೂಡಾ.
ಅದರತ್ತ ತೆರಳಿದವರು ಮತ್ತೆ ಮರಳುವುದಿಲ್ಲ. ಅದು ನನ್ನ ಹಿರಿಯ ರೂಪ.
ಭಗವಂತ ಎಲ್ಲರೂ ಮಲಗಿದ್ದಾಗಲೂ ತಾನು ಎಚ್ಚರವಾಗಿದ್ದು, ಪ್ರಪಂಚದ ಎಲ್ಲಾ ಕಡೆ ಇರುವ ಎಲ್ಲಾ ಜೀವರನ್ನು ನಿಯಂತ್ರಿಸುತ್ತಿರುತ್ತಾನೆ.
“ಈ ವಿಶ್ವದ ಚಲನೆಗೆ ಯಾರು ಕಾರಣನೋ, ಎಲ್ಲಾ ದೇವತೆಗಳು ಯಾರನ್ನು ಆಶ್ರಯಿಸಿಕೊಂಡಿದ್ದಾರೋ, ಅವನೇ ನೀನು ತಿಳಿಯಲು ಬಯಸಿರುವ ಪರತತ್ವ” ಎನ್ನುತ್ತಾನೆ ಯಮ.

ಭಗವಂತ ಅಳೆಯಲಾಗದ ಅನಂತವಾದ ಸುಖದ ಕಡಲು. “ಇದು ನನ್ನದೇ ಆದ ಮಾನಸಿಕೆ ಭ್ರಮೆ ಅಲ್ಲ. ಪ್ರಪಂಚದಲ್ಲಿ ಭಗವಂತನನ್ನು
ಸಾಕ್ಷಾತ್ಕರಿಸಿಕೊಂಡ ಪ್ರತಿಯೊಬ್ಬ ಜ್ಞಾನಿಯ ಅನುಭವವೂ ಇದೇ” ಎನ್ನುತ್ತಾನೆ ಯಮ. ಆದ್ದರಿಂದ ಭಗವಂತನೆಂದರೆ ಅಪರಂಪಾರವಾದ,
ಜ್ಞಾನಾನಂದಸ್ವರೂಪವಾದ, ಯಾರಿಂದಲೂ ಪೂರ್ಣ ಗ್ರಹಿಸಲು ಸಾಧ್ಯವಾಗದ ಸರ್ವಜ್ಞತತ್ವ ಎಂದು ಉಪಾಸನೆ ಮಾಡುವುದು ಶಾಸ್ತ್ರ
ಸಮ್ಮತ. ಭಗವಂತನ ಬೇರೆ ಬೇರೆ ರೂಪಗಳಲ್ಲಿ ಯಾವ ವ್ಯತ್ಯಾಸವೂ ಇಲ್ಲ. ನಾವು ಭಗವಂತನನ್ನು ರಾಮನಾಗಿ,ಶಿವ,  ಕೃಷ್ಣನಾಗಿ, ನರಸಿಂಹನಾಗಿ ಅಥವಾ ನಮಗೆ ಇಷ್ಟವಾಗುವ ಮತ್ತು ಹಿಡಿಸುವ ಇತರ ಯಾವುದೇ
ರೂಪದಲ್ಲಿ ಉಪಾಸನೆ ಮಾಡಬಹುದು. ಸರ್ವಸಮರ್ಥನೂ, ಸರ್ವಜ್ಞನೂ ಆದ ಭಗವಂತ ಏಕ. ಆದ್ದರಿಂದ ಭಿನ್ನ ಮತ್ತು ಭೇದ
ಚಿಂತನೆ ಸರಿಯಲ್ಲ. ಭಗವಂತ ಜ್ಞಾನಾನಂದಗಳ ಮೊತ್ತ. ಅವನನ್ನು ನಮ್ಮ ಹೊರಗಣ್ಣಿನಿಂದ
ಕಾಣಲು ಅಸಾಧ್ಯ. ಆತ ಸಮಸ್ತ ಜೀವಗಳ ಹೃದಯ ಗುಹೆಯಲ್ಲಿ ಗೂಢವಾಗಿ ನೆಲೆಸಿದ್ದಾನೆ. ಇಂತಹ ಭಗವಂತ ಅತ್ಯಂತ ಪುರಾತನ(ಪುರಾಣ). ಅಂದರೆ ಎಲ್ಲಕ್ಕಿಂತ ಪ್ರಾಚೀನ. ಎಲ್ಲವೂ
ಇಲ್ಲದಿದ್ದಾಗ ಅವನಿದ್ದ ಹಾಗೂ ಈ ಸೃಷ್ಟಿಯಾದ ಮೇಲೆ ಬ್ರಹ್ಮಾಂಡ-ಪಿಂಡಾಂಡದೊಳಗೆ ಅಂತರ್ಯಾಮಿಯಾಗಿ ಆತ ತುಂಬಿದ.
ಇಂತಹ ಅಂತರ್ಯಾಮಿ ಭಗವಂತನನ್ನು ತಿಳಿಯಲು ಇರುವ ಒಂದೇ ಒಂದು ಉಪಾಯವೆಂದರೆ ಅಧ್ಯಾತ್ಮದ ಅರಿವು. ಒಮ್ಮೆ ಭಗವಂತನ ಅರಿವು ಬಂತೆಂದರೆ ಆಗ ನಾವು ಲೌಕಿಕ ಹರ್ಷ-ಶೋಕವನ್ನು ಮೀರಿ
ನಿಲ್ಲಬಹುದು. ಇಂತಹ ಸ್ಥಿತಿಯಲ್ಲಿ ಸ್ವರೂಪಾನಂದದ ಸುಖ ಸಿಗುತ್ತದೆ.
ಭಗವಂತನನ್ನು ಜ್ಞಾನದ ಕಣ್ಣಿನಿಂದ ಕಂಡ ಅಪರೋಕ್ಷ ಜ್ಞಾನಿ ಹುಟ್ಟು ಸಾವಿನಿಂದ ಮುಕ್ತನಾಗುತ್ತಾನೆ. ಮೋಕ್ಷವನ್ನು ಪಡೆದ ಜೀವ
ಮುಂದೆಂದೂ ದೈಹಿಕವಾಗಿ ಹುಟ್ಟು-ಸಾವಿಗೊಳಗಾಗುವುದಿಲ್ಲ. ನಮ್ಮ
ಹೃತ್ಕಮಲದಲ್ಲಿ ನೆಲೆಸಿರುವ ಭಗವಂತನಿಗೆ ಹುಟ್ಟು-ಸಾವುಗಳಿಲ್ಲ. ಆದ್ದರಿಂದ ಭಗವಂತನನ್ನು ಸಾಕ್ಷಾತ್ಕರಿಸಿ ಕೊಂಡವನೂ ಕೂಡಾ,
ದೇಹದಿಂದಲೂ ಹುಟ್ಟು-ಸಾವು ಹೊಂದುವುದಿಲ್ಲ. ಅಸಾಧಾರಣವಾದ ಈ ಸ್ಥಿತಿ ಸಿಗುವುದು ಭೌತಿಕ ದೇಹ ತ್ಯಾಗ ಮಾಡಿ ಮೋಕ್ಷವನ್ನು
ಸೇರಿದಾಗ ಮಾತ್ರ. ಬೇರೆ ಬೇರೆ ರೂಪನಾಗಿ ಅಭಿವ್ಯಕ್ತನಾಗುತ್ತಾನೆ. ಹೀಗೆ ಏಕರೂಪನಾದ ಆತ, ಅನಂತ ರೂಪದಲ್ಲಿ ಪ್ರಪಂಚದಲ್ಲಿ ತುಂಬಿ
ಪ್ರೇರಣೆ ಮಾಡುತ್ತಿದ್ದಾನೆ. ಇದು ಅವನ ಲೀಲೆ.
ಭಗವಂತನಿಗೆ ಇಡೀ ವಿಶ್ವ ಪ್ರಳಯ ಕಾಲದಲ್ಲಿ ಒಂದು ತುತ್ತು ಅನ್ನವಿದ್ದಂತೆ. ಬ್ರಾಹ್ಮಣ ವರ್ಣದ ಅಭಿಮಾನಿ ದೇವತೆ ಚತುರ್ಮುಖ
ಬ್ರಹ್ಮ, ಕ್ಷತ್ರೀಯ ವರ್ಣದ ಅಭಿಮಾನಿ ದೇವತೆಯಾದ ವಾಯುದೇವರು ಭಗವಂತನಿಗೆ ಪ್ರಳಯಕಾಲದಲ್ಲಿ ಒಂದು ತುತ್ತು ಅನ್ನ. ಮೃತ್ಯು(ಗರುಡ-ಶೇಷ-ರುದ್ರರು), ಭೂಲೋಕದಲ್ಲಿರುವ ಎಲ್ಲಾ ಜೀವರಿಗೂ
ಮೃತ್ಯುವಾಗಿರುವ ಯಮ- ಪ್ರಳಯಕಾಲದಲ್ಲಿ ಭಗವಂತನಿಗೆ ಊಟಕ್ಕೆ ಕಲಸಿಕೊಳ್ಳುವ ವ್ಯಂಜನವಿದ್ದಂತೆ. “ಇಂತಹ ಭಗವಂತನ ಎತ್ತರವನ್ನು ಅರಿತವರು ಯಾರಿದ್ದಾರೆ ಎನ್ನುತ್ತಾನೆ ಯಮ.
ವಸ್ತುತಃ ಜೀವಸ್ವರೂಪಕ್ಕೆ ಎಂದೂ ಹುಟ್ಟು-ಸಾವುಗಳಿಲ್ಲ. ನಾವು
ಕಾಣುವ ಹುಟ್ಟು-ಸಾವು ಕೇವಲ ಭೌತಿಕ ಶರೀರಕ್ಕೆ ಸಂಬಂಧ ಪಟ್ಟಿದ್ದು.
ಹುಟ್ಟುವುದು ಒಂದು ವಿಕಾರ, ಸಾಯುವುದು ಇನ್ನೊಂದು ಬದಲಾವಣೆ
ಅಷ್ಟೇ. ಒಬ್ಬ ವ್ಯಕ್ತಿ ಸತ್ತಾಗ ಅವನ ದೇಹ ನಾಶವಾಗುವುದೇ ಹೊರತು
ಆತನ ಜೀವ ನಾಶವಾಗುವುದಿಲ್ಲ. ಅನಾದಿ-ಅನಂತವಾಗಿರುವ ಜೀವ
ತನ್ನ ಪುರವನ್ನು(ದೇಹವನ್ನು) ಬದಲಿಸುವುದೇ ನಾವು ಕಾಣುವ
ಹುಟ್ಟು-ಸಾವು. ಮೋಕ್ಷದಲ್ಲಿ ಇಂತಹ ನಾಶವಾಗುವ ದೇಹವಿಲ್ಲ.
ಆದ್ದರಿಂದ ದೇಹ ನಾಶವೂ ಇಲ್ಲದ ಸ್ಥಿತಿ ಮೋಕ್ಷ.
ಶರೀರದಲ್ಲಿ ವಾಸಿಸುವ ಭಗವಂತ ಶರೀರದ ಪರಿಮಿತಿಯಲ್ಲಿಲ್ಲ. ಅವನು
‘ಮಹಾಂತ’. ದೇಹದೊಳಗಿರುವ ಭಗವಂತ ದೇಹ ಬಿದ್ದು ಹೋದಾಗ
ಬಿದ್ದು ಹೋಗುವುದಿಲ್ಲ. ಏಕೆಂದರೆ ದೇಹ ಬಿದ್ದು ಹೋದಾಗ ದೇಹದ
ಒಳಗಿರುವ ಭಗವಂತ ಮತ್ತು ಹೊರಗಿರುವ ಭಗವಂತ ಏಕರೂಪನಾಗುತ್ತಾನೆ ಅಷ್ಟೇ. “ಇಂತಹ ಭಗವಂತ ವಿಭುಃ” ಎನ್ನುತ್ತಾನೆ ಯಮ. 
ಅಂದರೆ ಆತ ಸರ್ವಗತ, ಸರ್ವಸಮರ್ಥ ಮತ್ತು ಅನೇಕ ರೂಪ(ವಿವಿದೋ ಭವತಿ). ಆತ ಎಲ್ಲಾ ಜೀವ ಜಂತುಗಳಲ್ಲೂ ನಿಂತು
ನಡೆಸುತ್ತಿದ್ದಾನೆ. ನಮ್ಮೊಳಗೆ ಅಂತರ್ಯಾಮಿಯಾಗಿದ್ದು, ನಮ್ಮನ್ನು
ನಿಯಮಿಸುವ ನಮ್ಮ ಸ್ವಾಮಿ ಆ ಭಗವಂತನ ಅರಿವು ಯಾರಿಗಿದೆಯೋ, ಅವನಿಗೆ ಎಂದೂ ಭಯ-ಶೋಕವಿರುವುದಿಲ್ಲ.
ಭಗವಂತ ಜ್ಞಾನಾನಂದ ಸ್ವರೂಪ. ಆದ್ದರಿಂದ ಅವನಲ್ಲಿ ಯಾವ ರೀತಿಯ ತಾರತಮ್ಯ ಚಿಂತನೆ ಮಾಡಬಾರದು. ನಾವು ಒಂದು ಕ್ರಿಯೆ
ಮಾಡಬೇಕಿದ್ದರೆ ಮೊದಲು ಅದರ ಬಗ್ಗೆ ತಿಳಿದುಕೊಳ್ಳುತ್ತೇವೆ. ನಂತರ
ತಿಳಿದುಕೊಂಡು ಮಾಡುತ್ತೇವೆ. ನಮ್ಮ ಇಚ್ಛೆ-ಜ್ಞಾನ-ಕ್ರಿಯೆ ಇವು
ಮೂರನ್ನು ತ್ರಿನೇತ್ರ ಎನ್ನುತ್ತಾರೆ. ಆದರೆ ಭಗವಂತನಲ್ಲಿ ಇವು ಮೂರು
ಬೇರೆ ಬೇರೆ ಅಲ್ಲ. ಆತನಲ್ಲಿ ಜ್ಞಾನ-ಇಚ್ಛೆ-ಕ್ರಿಯೆ ಎಲ್ಲವೂ ಅಖಂಡ. ಇಷ್ಟೇ ಅಲ್ಲದೇ ಭಗವಂತನ ಅವಯವಗಳೂ ಕೂಡ ಸ್ವರೂಪ
ಭೂತವಾಗಿ ಅಖಂಡವಾದುದು. ಅವನ ಕೈ-ಕಾಲು-ಕಣ್ಣು ಎಲ್ಲವೂ ಬೇರೆ
ಬೇರೆ ಅಲ್ಲ. ಅದೊಂದು ಅಖಂಡವಾದ ವಿಲಕ್ಷಣವಾದ ಶಕ್ತಿ. ಆತ
ಕಾಲದಿಂದ ಅಂತವಿಲ್ಲದವನು; ದೇಶದಿಂದ ಅಂತವಿಲ್ಲದವನು;
ಗುಣಗಳಿಂದ ಅಂತವಿಲ್ಲದವನು ಹಾಗೂ ಶಕ್ತಿಯಲ್ಲಿ ಅಂತವಿಲ್ಲದವನು.
ಇದು ನಾವು ಯೋಚಿಸಲೂ ಸಾಧ್ಯವಾಗದ ಭಗವಂತನ ಗುಣಧರ್ಮ.
ಭಗವಂತ ದುಃಖದ ಸ್ಪರ್ಶವೇ ಇಲ್ಲದವನು. ಜೀವಸ್ವರೂಪ ಆನಂದ
ಸ್ವರೂಪವಾದರೂ ಕೂಡ ದೇಹ ಮತ್ತು ಮನಸ್ಸಿನ ಮೂಲಕ ಅದು
ದುಃಖ ಮತ್ತು ಕೊಳೆಯನ್ನು ಅಂಟಿಸಿಕೊಳ್ಳುತ್ತದೆ. ಆದರೆ ಭಗವಂತ
ದುಃಖರಹಿತ, ಸ್ವಚ್ಛ, ನಿರ್ಮಲ ಮತ್ತು ಆನಂದಮಯ.
ಭಗವಂತನ ವರ್ಣನೆ
ಭಗವಂತನ ನಾಲ್ಕು ತೋಳುಗಳು ಧರ್ಮ,ಅರ್ಥ,ಕಾಮ ಮತ್ತು
ಮೋಕ್ಷದ ಸಂಕೇತ. ಇದಕ್ಕಣುಗುಣವಾಗಿ ನಾಲ್ಕು ಆಯುಧಗಳು
ಅಥವಾ ಅಭಯ ಹಾಗೂ ಧ್ಯಾನ ಮುದ್ರೆ .ಧ್ಯಾನ ಮುದ್ರೆ ಮತ್ತು
ಅಭಯ ಮುದ್ರೆ ಎಂದರೆ ತೋರು ಬೆರಳು. ಉಳಿದ ಮೂರು
ಬೆರಳುಗಳಿಂದ ಮುಂದೆ ಬಾಗಿ ಹೆಬ್ಬೆರಳನ್ನು ಸ್ಪರ್ಶಿವುದು ಧ್ಯಾನ ಮುದ್ರೆ.
ಇಲ್ಲಿ ತೋರು ಬೆರಳುಗಳು ಜೀವರನ್ನು, ಹೆಬ್ಬೆರಳು ಭಗವಂತನನ್ನು
ಸೂಚಿಸುತ್ತದೆ.ಉಳಿದ ಮೂರು ಬೆರಳುಗಳು ಅವಿಧ್ಯ, ಕಾಮ,
ಕರ್ಮವನ್ನು  ಸೂಚಿಸುತ್ತದೆ. ಜ್ಞಾನ,ಭಕ್ತಿ,ಮೋಕ್ಷವಾದ ಭಗವಂತನನ್ನು
ಸೇರುವುದನ್ನು ಧ್ಯಾನ ಮುದ್ರೆ ಪ್ರತಿಪಾದಿಸುತ್ತದೆ.ಅಭಯ ಭಗವಂತನ
ಪಾದವನ್ನು ತೋರಿಸುತ್ತದೆ.

#jnanaprachar
👉 ಹಿಂದಿನ ಕಥೆಗಳಿಗಾಗಿ  page ಹೋಗಿ ನೋಡಿ 👇
https://www.facebook.com/jnanaprachar/  

👉 page like ಮಾಡಿ 👍
 page like ಮಾಡಿದ್ರೆ ಡೈಲಿ ನಿಮ್ಮ fb ಅಲ್ಲಿ ಬರುತ್ತೆ, 

👉 👥👨‍👩‍👧‍👦 ನೀವು facebook ಅಲ್ಲಿ ಬೇರೆ ಆದ್ಯಾತ್ಮ ಗ್ರೂಪಗಳಲ್ಲಿ ಇದ್ರೆ ಆ ಗ್ರೂಪ್ ಗೆ ಈ ವಿಷಯ share ಮಾಡಿ, 

 "ನಾವು ತಿಳಿದುಕೊಂಡಿದ್ದನ್ನ ಬೇರೆಯವರಿಗೆ ತಿಳಿಸುವುದು ಒಂದು ದೇವರ ಸೇವೆ ]

ಆಷಾಢ ಏಕಾದಶಿ:

ಆಷಾಢ ಏಕಾದಶಿ: 
ಇಲ್ಲಿದೆ ಶುಭ ಮುಹೂರ್ತ, ಮಹತ್ವ ಹಾಗೂ ಉಪಯೋಗ

ಆಷಾಢ ಹುಣ್ಣಿಮೆಯ ತ್ರೈಮಾಸಿಕದ ಹನ್ನೊಂದನೇ ದಿನವನ್ನು ದೇವಶಯನಿ ಏಕಾದಶಿ ಎಂದು ಕರೆಯಲಾಗುತ್ತದೆ. ಪುರಾಣಗಳ ಪ್ರಕಾರ, ಈ ದಿನ ಆರಾಧನೆಯ ನಂತರ ವಿಷ್ಣು 4 ತಿಂಗಳುಗಳ ಕಾಲ ವಿಶ್ರಾಂತಿಗೆ ಹೋಗುತ್ತಾನೆ. ವಿಷ್ಣು ಈ ದಿನ ಕ್ಷೀರ ಸಾಗರಕ್ಕೆ ಹೋಗಿ ಬರೋಬ್ಬರಿ 4 ತಿಂಗಳುಗಳ ಕಾಲ ಮಲಗಿ ವಿಶ್ರಮಿಸುತ್ತಾನೆ. ಈ ಕಾರಣದಿಂದ ಏಕಾದಶಿಯನ್ನು ಹರಿ ಶಯನಿ ಏಕಾದಶಿಯೆಂದು ಕರೆಯಲಾಗುತ್ತದೆ. ನಾಲ್ಕು ತಿಂಗಳುಗಳ ಕಾಲ ನಿದ್ರೆಗೆ ಜಾರಿದ ವಿಷ್ಣು ಪ್ರಭೋದಿನಿ ಏಕಾದಶಿಯಂದು ಎಚ್ಚೆತ್ತುಕೊಳ್ಳುತ್ತಾನೆ. ಈ ನಾಲ್ಕು ತಿಂಗಳ ಅವಧಿಯನ್ನು ಚಾತುರ್ಮಾಸವೆಂದು ಕರೆಯಲಾಗುತ್ತದೆ.

ಆಷಾಢ ಏಕಾದಶಿಯ ವ್ರತಾಚರಣೆ:

ಈ ದಿನದಂದು ವಿಷ್ಣುವಿನ ಭಕ್ತರು ಭಗವಾನ್‌ ವಿಷ್ಣುವನ್ನು ಮತ್ತು ಲಕ್ಷ್ಮಿ ದೇವಿಯನ್ನು ಭಕ್ತಿಯಿಂದ ಆರಾಧಿಸುತ್ತಾರೆ. ಆಷಾಢ ಏಕಾದಶಿಯಂದು ಪ್ರಮುಖವಾಗಿ ಉಪವಾಸವನ್ನು ಕೈಗೊಳ್ಳಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ, ಆಷಾಢ ಏಕಾದಶಿ ವ್ರತಾಚರಣೆಯನ್ನು ಹೀಗೆ ಮಾಡಬೇಕು:

1) ದೇವಶಯನಿ ಏಕಾದಶಿ ವ್ರತವನ್ನು ಆಚರಿಸುವ ಭಕ್ತರು ಮುಂಜಾನೆ ಬೇಗ ಎದ್ದು, ಸ್ನಾನ ಮಾಡಿ ಶುದ್ಧರಾಗಬೇಕು.

2) ಮಧ್ಯಾಹ್ನದ ಸಮಯದಲ್ಲಿ ಸತ್ತ ಪೂರ್ವಜರನ್ನು ನೆನೆಯಲಾಗುತ್ತದೆ. ಅವರಿಗೆ ಮೋಕ್ಷ ಸಿಗಲೆಂದು ಭಕ್ತಿಯಿಂದ ಪ್ರಾರ್ಥಿಸಲಾಗುತ್ತದೆ.

3) ವಿಷ್ಣುವನ್ನು ಪೂಜಿಸಲು ಈ ದಿನದಂದು ಪೂಜಾ ಕೋಣೆಯಲ್ಲಿ ವಿಷ್ಣುವಿನ ವಿಗ್ರಹವನ್ನಿಟ್ಟು, ಆ ವಿಗ್ರಹವನ್ನು ಶುದ್ಧೀಕರಿಸಿ ಅಲಂಕರಿಸಲಾಗುತ್ತದೆ.

4) ವಿಷ್ಣುವಿನ ವಿಗ್ರಹವನ್ನು ಹಳದಿ ಬಣ್ಣದಿಂದ ಅಲಂಕರಿಸಬೇಕು.

5) ವಿಷ್ಣುವಿಗೆ ಪೂಜೆಯಲ್ಲಿ ಎಲೆ, ಅಡಿಕೆ, ಹಳದಿ ಬಣ್ಣದ ಹೂವುಗಳನ್ನು, ಶ್ರೀಗಂಧದ ಮರದ ತುಂಡುಗಳನ್ನು ಅರ್ಪಿಸಲಾಗುತ್ತದೆ.

6) ಆಷಾಢ ಏಕಾದಶಿ ವ್ರತವನ್ನು ಕೈಗೊಂಡವರು ದಿನಕ್ಕೆ ಒಂದು ಬಾರಿ ಮಾತ್ರ ಆಹಾರವನ್ನು ಸ್ವೀಕರಿಸಬೇಕು.

7) ಏಕಾದಶಿಯ ಮರುದಿನ ವಿಷ್ಣುವಿನ ಪಾರಾಯಣ ಅವಧಿಯಲ್ಲಿ ಆಹಾರವನ್ನು ತೆಗೆದುಕೊಳ್ಳುವ ಮೂಲಕ ಉಪವಾಸ ವ್ರತವನ್ನು ಕೈಬಿಡಬಹುದು.

ಆಷಾಢ ಏಕಾದಶಿ ವ್ರತದ ಕುರಿತಿರುವ ದಂತಕಥೆ:

ಒಂದು ಕಾಲದಲ್ಲಿ ಮಾಂಧಾತ ಎನ್ನುವ ರಾಜ ಆಳ್ವಿಕೆಯನ್ನು ನಡೆಸುತ್ತಿದ್ದನು. ಅವನ ಉತ್ತಮ ಆಳ್ವಿಕೆಯಿಂದ ರಾಜ್ಯವವು ಸಂಪನ್ನವಾಗಿತ್ತು ಹಾಗೂ ಪ್ರಜೆಗಳು ಸಂತೋಷದಿಂದ ದಿನವನ್ನು ಕಳೆಯುತ್ತಿದ್ದರು. ಆದರೆ ಅವನ ಆಡಳಿತದ ಅವಧಿಯಲ್ಲಿ ರಾಜ್ಯವು ಬರಗಾಲಕ್ಕೆ ತುತ್ತಾಯಿತು. ರಾಜ ಮಾಂಧಾತನು ಉತ್ತಮ ಆಡಳಿತಗಾರನಾಗಿದ್ದ ಕಾರಣ, ಪ್ರಜೆಯನ್ನು ಹಿಂಸಿಸಲು ಅವನು ಒಪ್ಪುತ್ತಿರಲಿಲ್ಲ. ಹಾಗಾಗಿ ಹೇಗಾದರೂ ತನ್ನ ಪ್ರಜೆಯನ್ನು ಇದರಿಂದ ಹೊರತರಲು, ರಾಜ್ಯವನ್ನು ಸಂತೋಷದಿಂದಿಡಲು ಪ್ರಯಾಣವನ್ನು ಕೈಗೊಳ್ಳುತ್ತಾನೆ. ದಾರಿಯಲ್ಲಿ ರಾಜ ಮಾಂಧಾತನಿಗೆ ಋಷಿ ಅಂಗೀರರು ಸಿಗುತ್ತಾರೆ.
ಮಾಂಧಾತ ರಾಜನು ಋಷಿ ಅಂಗೀರನ ಆಶೀರ್ವಾದವನ್ನು ಪಡೆದುಕೊಂಡು ತನ್ನ ರಾಜ್ಯದಲ್ಲಾಗುತ್ತಿರುವ ಸಂಕಷ್ಟವನ್ನು ಹೇಳಿಕೊಳ್ಳುತ್ತಾನೆ. ಆಗ ಋಷಿ ಅಂಗೀರನು ಈ ಸಮಸ್ಯೆಯಿಂದ ಹೊರಬರಲು ಆಷಾಢ ಏಕಾದಶಿಯಂದು ಉಪವಾಸವನ್ನು ಕೈಗೊಳ್ಳಲು ಸಲಹೆ ನೀಡುತ್ತಾನೆ. ಋಷಿ ಅಂಗೀರನ ಸಲಹೆಯ ಮೇರೆಗೆ ರಾಜ ಸೇರಿದಂತೆ ರಾಜ್ಯದ ಎಲ್ಲಾ ಪ್ರಜೆಗಳು ಆಷಾಢ ಏಕಾದಶಿಯಂದು ಉಪವಾಸವನ್ನು ಕೈಗೊಂಡು ಭಗವಾನ್ ವಿಷ್ಣು ಮತ್ತು ಲಕ್ಷ್ಮಿ ದೇವಿಯನ್ನು ಆರಾಧಿಸುತ್ತಾರೆ. ತಕ್ಕಣವೇ ಬರಗಾಲದಿಂದ ತುಂಬಿದ್ದ ರಾಜ್ಯದಲ್ಲಿ ಮಳೆಯ ಅಬ್ಬರ ಆರಂಭವಾಗುತ್ತದೆ. ರಾಜ್ಯವು ಮೊದಲಿದ್ದ ಸ್ಥಿತಿಗೆ ಪುನಃ ಬರುತ್ತದೆ. ಅಂದಿನಿಂದ ಆಷಾಢ ಏಕಾದಶಿಯನ್ನು ಆಚರಿಸಿಕೊಂಡು ಬರಲಾಗುತ್ತದೆ.

#jnanaprachar

ಗಜೇಂದ್ರ ಮೋಕ್ಷ

ಭಾಗವತ ಕಥೆಗಳು
ಗಜೇಂದ್ರ ಮೋಕ್ಷ
ತುಂಬಾ ಹಿಂದೆ ಪಾಂಡ್ಯ ರಾಜ್ಯದಲ್ಲಿ ಇಂದ್ರದ್ಯುಮ್ನ ಎಂಬ ರಾಜನಿದ್ದ. ವಿಷ್ಣು ಪರಮಾತ್ಮನ ಪರಮಭಕ್ತ. ಧರ್ಮಪರಿಪಾಲನೆಯ ರೀತಿಯಲ್ಲಿ ಪ್ರಜೆಗಳನ್ನು ಪಾಲಿಸುತ್ತಾ, ರಾಜ್ಯಭಾರ ಮಾಡುತ್ತಿದ್ದ. ಪ್ರಜೆಗಳೆಲ್ಲರೂ ಆತನನ್ನು ತಮ್ಮ ಭಾಗದ ತಂದೆ ಎಂದೇ ಭಾವಿಸಿದ್ದರು. ಒಂದು ಬಾರಿ ತ್ರಿಕೂಟಾಚಲ ಎಂಬ ಕಣಿವೆಯಲ್ಲಿ ತಪೋನಿರತನಾಗಿದ್ದ. ಬಾಹ್ಯ ವ್ಯವಹಾರದ ಜ್ಞಾನವೇ ಒಂದಿಷ್ಟೂ ಇರಲಿಲ್ಲ. ವಿಷ್ಣುವಿನ ಆರಾಧನೆಯಲ್ಲಿ ಧ್ಯಾನಮಗ್ನನಾಗಿದ್ದ. ಅಗಸ್ತ್ಯ ಮಹಾಮುನಿಗಳು ತಮ್ಮ ಪರಿವಾರದವರೊಂದಿಗೆ ಅಲ್ಲಿಗೆ ಬಂದರು. ತಪೋನಿರತನಾದ ರಾಜನಿಗೆ ಅವರ್ಯಾರೂ ಬಂದುದರ ಪರಿವೆಯೇ ಇಲ್ಲ. ಅಗಸ್ತ್ಯರು ತುಂಬಾ ಕಾಲ ಕಾದು ನೋಡಿದರು. ರಾಜನಿಗೆ ಅವರ ಕಡೆ ಗಮನವೇ ಇಲ್ಲ. ಅವರಿಗೆ ರಾಜನ ಮೇಲೆ ಕೋಪ ಬಂತು. ಕೂಡಲೇ ಕೋಪದಲ್ಲಿ ತಮ್ಮ ವಿವೇಕವನ್ನೇ ಕಳೆದುಕೊಂಡು ಶಾಪಕೊಟ್ಟರು:
“ನೀನು ಇದೇ ಸ್ಥಳದಲ್ಲಿ ಆನೆ ಆಗಿ ಹುಟ್ಟು”. ಶಾಪಗ್ರಸ್ತನಾದ ರಾಜ ಇಂದ್ರದ್ಯುಮ್ನ ಈಗ ತ್ರಿಕೂಟಾಚಲದ ಪ್ರದೇಶದಲ್ಲಿಯೇ ಆನೆಯಾಗಿ ಜನಿಸಿದ. ಈ ಪ್ರದೇಶ ಪವಿತ್ರ ತಪೋಭೂಮಿ ಎನಿಸಿತ್ತು. ದೇವತೆಗಳ ವಿಹಾರ ಸ್ಥಳವೆನಿಸಿತ್ತು. ಯಕ್ಷರೂ ಆಗಾಗ ಬೇಸರ ಕಳೆಯಲು ಇಲ್ಲಿಗೆ ಬಂದು ಹೋಗುತ್ತಿದ್ದರು. ಆನೆಗೆ ರಾಜಯೋಗ್ಯ ಗುಣಗಳೆಲ್ಲವೂ ಇದ್ದುದರಿಂದ ತ್ರಿಕೂಟಾಚಲ ಪ್ರದೇಶದ ಆನೆಗಳಿಗೆಲ್ಲಾ ಒಡೆಯನಾಗಿ, ಗಜೇಂದ್ರ ಎಂಬ ಹೆಸರು ಪಡೆಯಿತು. ಒಂದು ದಿನ ಅಲ್ಲಿ ಕೊಳವೊಂದಕ್ಕೆ ಬೇಸಿಗೆಯ ದಿನಗಳಲ್ಲಿ ನೀರಡಿಕೆಯ ನಿವಾರಣೆಗಾಗಿ ತನ್ನ ಬಳಗದವರೊಂದಿಗೆ ಬಂತು. ನೀರು ಕುಡಿಯಲು ಕೊಳದೊಳಗೆ ಕಾಲಿಟ್ಟಾಗ, ಕೊಳದಲ್ಲಿದ್ದ ಒಂದು ಮೊಸಳೆ ಅದರ ಕಾಲನ್ನು ಭದ್ರವಾಗಿ ಕಚ್ಚಿಕೊಂಡಿತು. ಕಾಲನ್ನು ಹೊರತೆಗೆಯಲು ಎಷ್ಟೇ ಯತ್ನಿಸಿದರೂ ಸಾಧ್ಯವಾಗಲಿಲ್ಲ. ನೋವಿನ ಬಾಧೆಯನ್ನು ತಾಳಲಾರದೆ ಘೀಳಿಡತೊಡಗಿತು. ಇತರ ಆನೆಗಳೂ ತಮ್ಮ ಒಡೆಯನನ್ನು ಮೊಸಳೆಯ ಬಾಯಿಂದ ಮುಕ್ತಗೊಳಿಸಲು ತುಂಬಾ ಯತ್ನಿಸಿದುವು. ಅವುಗಳ ಪ್ರಯತ್ನವೂ ನಿರರ್ಥಕ ಎನಿಸಿತು. ಕಡೆಗೆ ಪೂರ್ವಜನ್ಮದ ಸ್ಮರಣೆಯಾಗಿ, ಭಕ್ತಿಯಿಂದ ವೈಕುಂಠಪತಿಯಾದ ಶ್ರೀಮನ್ನಾರಾಯಣನನ್ನು ತದೇಕಚಿತ್ತದಿಂದ ಮುಕ್ತಗೊಳಿಸಲು ಮೊರೆಯಿಟ್ಟಿತು. “ನಾರಾಯಣಾ, ದೀನಬಂಧೂ, ಈಗ ನೀನೇ ನನಗೆ ಆಸೆರೆ, ಬೇಗ ಬಂದು ಕಾಪಾಡು”.
ಭಕ್ತನಾದ ಗಜೇಂದ್ರನ ಮೊರೆ ವೈಕುಂಠದಲ್ಲಿದ್ದ ಶ್ರೀ ವಿಷ್ಣುವಿನ ಕಿವಿ ಮುಟ್ಟಿತು. ಆತನು ದೇವತೆಗಳೊಂದಿಗೆ ಯಾವುದೋ ಗಹನವಾದ ವಿಷಯದ ಬಗ್ಗೆ ಚರ್ಚೆಯಲ್ಲಿ ಮುಳುಗಿದ್ದ. ಕೂಗು ಕಿವಿ ಮುಟ್ಟುತ್ತಲೇ ಅಲ್ಲಿಂದ ಎದ್ದು ಹೊರಟೇಬಿಟ್ಟ. ತನ್ನ ವಾಹನವಾದ ಗರುಡನ ಮೇಲೆ ಕುಳಿತು, ಮರುಕ್ಷಣದಲ್ಲೇ ಕೊಳದ ಬಳಿ ಕಾಣಿಸಿಕೊಂಡ. ಗಜೇಂದ್ರನಿಗಾದ ಆನಂದ ಅಷ್ಟಿಷ್ಟಲ್ಲ. ತನ್ನ ಸೊಂಡಿಲನ್ನು ಮೇಲೆತ್ತಿ ಭಕ್ತಿಯಿಂದ ನಮಿಸತೊಡಗಿತು. ಭಕ್ತರ ಅಧೀನನೆನಿಸಿದ ವಿಷ್ಣು ಪರಮಾತ್ಮ ತನ್ನ ಕೈಯಲ್ಲಿದ್ದ ಆಯುಧರೂಪದ ಸುದರ್ಶನ ಚಕ್ರವನ್ನು ಬೀಸಿದ. ಅದು ಮೊಸಳೆಯ ಮೂತಿಯನ್ನೇ ಕತ್ತರಿಸಿ ಹಾಕಿತು. ಮೊಸಳೆಯ ಜೀವ ಹೋಗಿ, ಈಗ ಅವನೊಬ್ಬ ಗಂಧರ್ವನಾದ.
ಅವನೇ ಹೂಹೂ ಎಂಬ ಗಂಧರ್ವ. ದೇವಲ ಮಹರ್ಷಿಗಳ ಶಾಪದಿಂದ ಮೊಸಳೆಯಾಗಿದ್ದ. ಅವನು ಪರಮಾತ್ಮನಾದ ವಿಷ್ಣುವನ್ನೂ, ಗಜೇಂದ್ರನನ್ನೂ ನಮಿಸುತ್ತಾ, ತನ್ನ ಗಂಧರ್ವಲೋಕ ಸೇರಿದ. ಮಹಾವಿಷ್ಣುವನ್ನು ಗಜೇಂದ್ರ ಪರಿಪರಿ ರೀತಿಯಲ್ಲಿ ಸ್ತುತಿಸಿದ. ಸಂತೃಪ್ತನಾದ ಶ್ರೀವಿಷ್ಣು ಗಜೇಂದ್ರನಿಗೂ ದೇವಸ್ವರೂಪವನ್ನು ನೀಡಿ, ತನ್ನ ಲೋಕಕ್ಕೆ ಕರೆದೊಯ್ದ. ಹೀಗೆ ಇಂದ್ರದ್ಯುಮ್ನ ರಾಜನು ಆನೆಯ ರೂಪದಿಂದ ಬಿಡುಗಡೆಹೊಂದಿ, ಮೋಕ್ಷ ಹೊಂದಿ, ಗಜೇಂದ್ರ ಮೋಕ್ಷ ಎಂದು ಪ್ರಸಿದ್ಧಿಯಾಯಿತು.

ಮುಂದಿನ  ಸಂಚಿಕೆ : 

👉 ಹಿಂದಿನ ಕಥೆಗಳಿಗಾಗಿ  page ಹೋಗಿ ನೋಡಿ 👇
https://www.facebook.com/jnanaprachar/  

👉 page like ಮಾಡಿ 👍
 page like ಮಾಡಿದ್ರೆ ಡೈಲಿ ನಿಮ್ಮ fb ಅಲ್ಲಿ ಬರುತ್ತೆ, 

👉 👥👨‍👩‍👧‍👦 ನೀವು facebook ಅಲ್ಲಿ ಬೇರೆ ಆದ್ಯಾತ್ಮ ಗ್ರೂಪಗಳಲ್ಲಿ ಇದ್ರೆ ಆ ಗ್ರೂಪ್ ಗೆ ಈ ವಿಷಯ share ಮಾಡಿ, 

 "ನಾವು ತಿಳಿದುಕೊಂಡಿದ್ದನ್ನ ಬೇರೆಯವರಿಗೆ ತಿಳಿಸುವುದು ಒಂದು ದೇವರ ಸೇವೆ ]