-: ಶುನಃಶ್ಯೇಫ
ತ್ರಿಶಂಕುವಿನ ಪುತ್ರ ಹರಿಶ್ಚಂದ್ರನಿಗೆ ಪುತ್ರ ಸಂತಾನ ಇರಲಿಲ್ಲ. ಹೀಗಾಗಿ ನಾರದರು ವರುಣನನ್ನು ಪ್ರಾರ್ಥಿಸುವಂತೆ ಸೂಚಿಸಿದರು. ಗಂಡು ಸಂತಾನವಾದರೆ ಯಜ್ಞದಲ್ಲಿ ಮಗನನ್ನೇ ಬಲಿ ಕೊಡುವುದಾಗಿ ತಿಳಿಸುವಂತೆ ಹೇಳಿದರು.
ಹರಿಶ್ಚಂದ್ರನು ಹಾಗೆಯೇ ಮಾಡಿದನು. ವರುಣನ ಕೃಪೆಯಿಂದ ರಾಜನಿಗೆ ಗಂಡು ಮಗು ಜನಿಸಿತು. ಕೆಲ ಸಮಯದ ನಂತರ ವರುಣನು ಆಗಮಿಸಿ ಮಗುವನ್ನು ಬಲಿ ನೀಡುವಂತೆ ಕೇಳಿದನು. ಮಗುವಿನ ನಾಮಕರಣದ ಬಳಿಕ ನೀಡುವೆನೆಂದು ರಾಜನು ಹೇಳಿದನು.
ಮಗುವಿಗೆ ರೋಹಿತ(ರೋಹಿತಾಶ್ವ) ಎಂಬ ನಾಮಕರಣವೂ ಆಯಿತು. ಮತ್ತೆ ವರುಣನು ತನ್ನ ಬಲಿಯನ್ನು ಕೇಳಿದನು. ಆಗ ಮಗುವಿಗೆ ಹಲ್ಲು ಹುಟ್ಟಲಿ , ಆಮೇಲೆ ಬಲಿ ಕೊಡುತ್ತೇನೆ ಎಂದು ಹೇಳಿದನು. ದಂತೋತ್ಪತ್ತಿಯಾದಾಗ ಬಂದಾಗ, ಹಾಲು ಹಲ್ಲು ಉದುರಿದ ಮೇಲೆ ಕೊಡುತ್ತೇನೆ, ಹೀಗೆ ಬೇರೆ ಬೇರೆ ಕಾರಣ ಹೇಳಿ ವರುಣನನ್ನು ಹಿಂದೆ ಕಳುಹಿಸುತ್ತಾನೆ.
ಹೀಗೆ ಕೆಲವು ವರ್ಷ ಕಳೆಯಿತು. ವರುಣನು ಬಂದು ಬಲಿ ನೀಡಲೇಬೇಕೆಂದು ಪಟ್ಟು ಹಿಡಿದಾಗ, ಮಗುವನ್ನು ಕರೆದು ಸತ್ಯ ಸಂಗತಿಯನ್ನು ತಿಳಿಸಿದನು.
ರೋಹಿತನು ಪ್ರಾಣಭೀತಿಯಿಂದ ಅರಮನೆ ಮತ್ತು ನಗರವನ್ನು ಬಿಟ್ಟು ಕಾಡನ್ನು ಸೇರಿದನು. ಬಲಿ ಕೊಡದುದಕ್ಕೆ ಕುಪಿತನಾದ ವರುಣನು ಹರಿಶ್ಚಂದ್ರನಿಗೆ ಜಲೋದರ ವ್ಯಾಧಿ ಬರುವಂತೆ ಮಾಡಿದನು.
ಆಗ ವಶಿಷ್ಟರು, ಜಲೋಧರ ರೋಗ ವಾಸಿಯಾಗಬೇಕಾದರೆ ಒಬ್ಬ ಬಾಲಕನನ್ನು ದತ್ತು ಪಡೆದು ಆತನನ್ನಾದರೂ ಬಲಿ ಕೊಡಬೇಕೆಂದು ಸೂಚಿಸುತ್ತಾರೆ. ಆಗ ಮಗನನ್ನು ದತ್ತು ಕೊಡಬಲ್ಲ ವ್ಯಕ್ತಿಯ ಅನ್ವೇಷಣೆ ನಡೆಯುತ್ತದೆ. ಆ ಸಮಯದಲ್ಲಿ ಕಣ್ಣಿಗೆ ಬಿದ್ದವನೇ ಅಜೀಗರ್ತ.
ಅತ್ಯಂತ ಬಡತನದಿಂದ ಜೀವನ ನಡೆಸುತ್ತಿದ್ದ, ಅಜೀಗರ್ತನಿಗೆ ನೂರು ಗೋವುಗಳನ್ನು ನೀಡುತ್ತೇನೆ. ಯಜ್ಞದ ಬಲಿಗಾಗಿ ನಿನ್ನ ಮೂವರು ಮಕ್ಕಳಲ್ಲಿ ಒಬ್ಬ ಮಗನನ್ನು ನೀಡುವಂತೆ ಕೇಳಿಕೊಂಡನು. ಇದಕ್ಕೆ ಅಜೀಗರ್ತನು ಒಪ್ಪಿದನು. ಮೊದಲ ಮಗ ಶುನಃಪುಚ್ಛನನ್ನು ಕಳುಹಿಸಲು ಅಜೀಗರ್ತನೇ ಒಪ್ಪಲಿಲ್ಲ. ಕೊನೆಯ ಮಗ ಶುನಃಲಾಂಗೂಲನನ್ನು ಕಳುಹಿಸಲು ಅವನ ತಾಯಿ ನಿರಾಕರಿಸಿದಳು. ಹೀಗಾಗಿ ಮಧ್ಯಮ ಪುತ್ರನಾದ ಶುನಃಶೇಫನನ್ನು ಖರೀದಿಸಿ ಹರಿಶ್ಚಂದ್ರನ ಬಳಿ ಕರೆತರುತ್ತಾರೆ.
ಹರಿಶ್ಚಂದ್ರ, ವರುಣನಿಗೆ ಬೇರೊಬ್ಬ ಬಾಲಕನನ್ನು ಬಲಿ ಕೊಡುವುದಾಗಿ ತಿಳಿಸಿದನು. ವರುಣನು ಬ್ರಾಹ್ಮಣ ಬಾಲಕನನ್ನು ಬಲಿ ಪಡೆಯಲು ಸಂತಸದಿಂದ ಒಪ್ಪಿದನು. ಯಾಗಕ್ಕೆ ವೇದಿಕೆಗಳು ಸಿದ್ಧವಾದವು. ಯಾಗಕ್ಕೆ ಹೋತೃವಾಗಿ ವಿಶ್ವಾಮಿತ್ರನು, ಅಧ್ವರ್ಯುವಾಗಿ ಜಮದಗ್ನಿಯು, ಬ್ರಹ್ಮನ ಸ್ಥಾನಕ್ಕೆ ವಸಿಷ್ಠರು, ಹಾಗೂ ಉದ್ಗಾತೃವಿನ ಸ್ಥಾನಕ್ಕೆ ಅಯಾಸ್ಯರು ನೇಮಕಗೊಂಡರು.
ಯೂಪಸ್ಥಂಭಕ್ಕೆ ಶುನಶ್ಯೇಪನನ್ನು ಕಟ್ಟಲಿಕ್ಕೆ ಯಾರೂ ತಯಾರಿರದಾಗ ಅಜೀಗರ್ತ ಮತ್ತೆ ನೂರು ಗೋವುಗಳನ್ನು ಪಡೆದು ಮಗನನ್ನೇ ಬಲಿ ಕಂಬಕ್ಕೆ ಕಟ್ಟುತ್ತಾನೆ. ಬಲಿಯ ಸಮಯದಲ್ಲಿಆತನ ತಲೆ ಕಡಿಯಲು ಪುನಃ ನೂರು ಗೋವುಗಳನ್ನು ಕೇಳುತ್ತಾನೆ.
ಆಗ ಶುನಃಶ್ಶೇಪ ದೇವತೆಗಳ ಮೊರೆ ಹೋಗುತ್ತಾನೆ. ಸೂರ್ಯನನ್ನು ಪ್ರಾರ್ಥಿಸಿದಾಗ, ಸೂರ್ಯನು ಬಂದು ವರುಣನಿಂದ ಬಂಧಿಯಾಗಿದ್ದುದರಿಂದ ಅವನನ್ನೇ ಸ್ಮರಿಸು ಎನ್ನುತ್ತಾನೆ. ವರುಣನನ್ನು ಸ್ಮರಿಸಿದಾಗ ವರುಣ ಪ್ರತ್ಯಕ್ಷನಾಗಿ ನರಬಲಿ ಬೇಡವೆಂದು ಹೇಳಿ ಶುನಃಶ್ಯೇಪನನ್ನು ಮುಕ್ತನನ್ನಾಗಿಸುತ್ತಾನೆ. ಅಜೀಗರ್ತ, ಪುನಃ ಮಗನನ್ನು ನನ್ನ ಜೊತೆಗೆ ಬಾ ಎಂದಾಗ, ದತ್ತು ಕೊಟ್ಟ ಆತನಿಗೆ ಮಗನ ಮೇಲೆ ಅಧಿಕಾರ ಇಲ್ಲ ಅಂತ ಹೇಳಿ ವಿಶ್ವಾಮಿತ್ರರು ಶುನಃಶ್ಯೇಪನನ್ನು ದತ್ತು ಪುತ್ರನಾಗಿ ತಾನೇ ಸ್ವೀಕರಿಸುತ್ತಾರೆ. ಮುಂದೆ ಆತನಿಗೆ ದೇವರಾತ ಎನ್ನುವ ಹೆಸರು ಬರುತ್ತದೆ.
ಸಂ. ದಾಮೋದರ ಶೆಟ್ಟಿ, ಇರುವೈಲು
ಮೊ.: 98203 93098