Monday, 15 March 2021

ಉಚ್ಚಿಷ್ಟಮ್ ಎಂದರೆ ಎಂಜಲು

*ಉಚ್ಚಿಷ್ಟಮ್ ಎಂದರೆ ಎಂಜಲು .* 

*ಯಾವ ಐದು ವಸ್ತುಗಳು ಎಂಜಲು* 

ಇದೊಂದು ಸುಭಾಷಿತಕಾರು ಬರೆದ ಒಂದು ಸುಭಾಷಿತ
ಆದರೆ ಸತ್ಯ .... ಯಾವ ಐದು ವಸ್ತುಗಳು ಅಪವಿತ್ರ ಆದರೂ ಪವಿತ್ರ . ಇಲ್ಲಿ ಯಾವುದೂ ಅಪವಿತ್ರವಲ್ಲ ಅನ್ನುವದೆ ಅವರ ಉದ್ದೇಶ ಓದಿ

*ಉಚ್ಚಿಷ್ಟಮ್ ಶಿವನಿರ್ಮಾಲ್ಯಂ ವಮನಮ್ ಶವಕರ್ಪಟಮ್ ಕಾಕವಿಷ್ಠಾಸಮುತ್ಪನ್ನಮ್ ಪಂಚೈತೇತಿಪವಿತ್ರಕಾಃ*

ಅಂದರೆ .. *ಎಂಜಲು, ಶಿವನ ನಿರ್ಮಾಲ್ಯ, ವಾಂತಿ, ಹೆಣದ ಬಟ್ಟೆ, ಕಾಗೆಯ ಮಲದಿಂದ ಹುಟ್ಟಿದ್ದು* . ಈ ಐದು ಅತ್ಯಂತ ಪವಿತ್ರವಾದವುಗಳು...!! ಎಂದು .

1. *ಉಚ್ಚಿಷ್ಟಮ್* - ಎಂದರೆ *ಎಂಜಲು* .

*ಹಾಲು ಕರುವಿನ ಎಂಜಲು. ಹಸುವಿನ ಹಾಲನ್ನು ಕರು ಕುಡಿದು ಹಾಗೇ ಬಿಟ್ಟಿರುತ್ತದೆ . ಆ ಎಂಜಲು ಹಾಲನ್ನೇ ನಾವು ಉಪಯೋಗಿಸುತ್ತೇವೆ. ಕರುವಿನಿಂದ ಎಂಜಲಾದ ಹಾಲು ದೇವರಿಗೆ , ಪಂಚಾಮೃತಾಭಿಷೇಕಕ್ಕೆ ಬೇಕಾದ ಅತ್ಯಂತ ಪವಿತ್ರ ವಸ್ತು.*

2. *ಶಿವನಿರ್ಮಾಲ್ಯಮ್* - ಎಂದರೆ *ಶಿವನ ಜಟೆಯಿಂದ ಹೊರಗೆ ಬಂದ ಗಂಗೆ.*

*ಗಂಗಾ ನದಿ ಸ್ವರ್ಗಲೋಕದಿಂದ ಭೂಲೋಕಕ್ಕೆ ಬರುವಾಗ ಅಹಂಕಾರದಿಂದ ಬರುತ್ತಿದ್ದಳು . ಆಗ ಗಂಗೆಯ ಗರ್ವವನ್ನು ದಮನ ಮಾಡುವುದಕ್ಕಾಗಿ ಪರಶಿವನು ಆ ಗಂಗೆಯನ್ನು ತನ್ನ ಜಟೆಯ ಮಧ್ಯೆ ಕಟ್ಟಿಹಾಕಿಬಿಟ್ಟ. ಅನಂತರ ಆ ಜಟೆಯಿ೦ದ ಗಂಗಾನದಿಯನ್ನು ಹೊರಕೆ ಹಾಕಿದ. ಶಿವನ ಜಟೆಯಲ್ಲಿದ್ದು ಅಲ್ಲಿಂದ ಮುಕ್ತಳಾದ್ದರಿಂದ ಗಂಗಾನದಿಯು ಶಿವನ ನಿರ್ಮಾಲ್ಯವಾಯಿತು. ಆದರೂ ಈ ಗಂಗೆಯು ಪವಿತ್ರ.*

3. *ವಮನಮ್* - ಎಂದರೆ *ವಾಂತಿ (ಜೇನುತುಪ್ಪ).* 

*ಜೇನುಹುಳುಗಳು ಬೇರೆಬೇರೆಯ ಗಿಡಮರಗಳಿಂದ ಮಕರಂದವನ್ನು ಬಾಯಲ್ಲಿ ಹಿಡಿದು ತಂದು, ಬಾಯಿಂದಲೇ ಆ ಮಕರಂದವನ್ನು ಗೂಡಿನಲ್ಲಿ ಇಟ್ಟಿರುತ್ತವೆ. ಅದೇ ಜೇನು ತುಪ್ಪ. ಇದು ಜೇನುಹುಳುಗಳ ವಮನ. ಆದರೆ ಜೇನು ತುಪ್ಪ ಪ್ರಶಸ್ತವಾದದ್ದು.*

4. *ಶವಕರ್ಪಟಮ್* - ಎಂದರೆ *ಶವದ ಬಟ್ಟೆ (ರೇಷ್ಮೆ ವಸ್ತ್ರ).* 

*ರೇಷ್ಮೆ ಹುಳುಗಳನ್ನು ಬೇಯಿಸಿ, ಸಾಯಿಸಿ ಅದರ ನೂಲಿನಿಂದ ಸಿದ್ದವಾದ ವಸ್ತು.*

5. *ಕಾಕವಿಷ್ಠಾಸಮುತ್ಪನ್ನಮ್* - ಅಂದರೆ *ಕಾಗೆಯ ಮಲದಿಂದ ಹುಟ್ಟಿದ್ದು (ಅರಳಿ ಮರ).* 

*ಕಾಗೆಯು ಅರಳಿಮರದ ಬೀಜವನ್ನು ತಿಂದಾಗ, ಅದು ಕಾಗೆಯ ಮಲದ ಮೂಲಕ ಹೊರಗಡೆಗೆ ಎಲ್ಲೋ .. ಬಿದ್ದಾಗ ಅದರಿಂದ ಅರಳಿ ಮರವು ಹುಟ್ಟುತ್ತದೆ. ಅಶ್ವತ್ಥವೃಕ್ಷವು ತ್ರಿಮೂರ್ತಿಸ್ವರೂಪದ್ದಾಗಿರುತ್ತದೆ.*

ಇದೊಂದು ಚಮತ್ಕಾರಿಕ ಸುಭಾಷಿತ. ಮಡಿ, ಮೈಲಿಗೆ ಎಂದು ಬಹಳ ಹಾರಾಡುವವರಿಗೆ, ಕವಿಯು ಎಲ್ಲವೂ ನೈರ್ಮಾಲ್ಯವೇ ಎಂದು ಚಾಟಿ ಬೀಸಿದ್ದಾನೆ. 

ಲೋಕದಲ್ಲಿ ಅಪವಿತ್ರವೆಂಬುದು, ಅಶುದ್ಧವೆಂಬುದು ನಮ್ಮ *"ಮನಸ್ಸು"* ಮಾತ್ರ. *"ಮನಸ್ಸ"* ನ್ನು ಶುದ್ಧವಾಗಿಸಿದಲ್ಲಿ ಸಕಲವೂ ಪವಿತ್ರವಾಗಿಯೇ ಇರುವುದು.

ಆಹಾರಕ್ಕೆ ಭಕ್ತಿಯನ್ನು ಸೇರಿಸಿದರೆ *ನೈವೇಧ್ಯ* ವಾಗುವುದು.
ನಿರಾಹಾರಕ್ಕೆ ಭಕ್ತಿಯನ್ನು ಸೇರಿಸಿದರೆ *ಉಪವಾಸ* ವಾಗುವುದು... 
ನೀರಿಗೆ ಭಕ್ತಿಯನ್ನು ಸೇರಿಸಿದರೆ *ತೀರ್ಥ* ವಾಗುವುದು... 
ಮಾತಿಗೆ ಭಕ್ತಿಯನ್ನು ಸೇರಿಸಿದರೆ *ಸ್ತೋತ್ರ* ವಾಗುವುದು... 
ಕೇಳುವುದಕ್ಕೆ ಭಕ್ತಿಯನ್ನು ಸೇರಿಸಿದರೆ *ಮಂತ್ರ* ವಾಗುವುದು.. 
ಆಲೋಚನೆಗೆ ಭಕ್ತಿಯನ್ನು ಸೇರಿಸಿದರೆ *ಧ್ಯಾನ* ವಾಗುವುದು.. 
ಕೆಲಸಗಳಿಗೆ ಭಕ್ತಿಯನ್ನು ಸೇರಿಸಿದರೆ *ಪೂಜೆ* ಯಾಗುವುದು. 
ಪ್ರೀತಿಗೆ ಭಕ್ತಿಯನ್ನು ಸೇರಿಸಿದರೆ *ಆರಾಧನೆ* ಯಾಗುವುದು.. 
ಸ್ನೇಹಕ್ಕೆ ಭಕ್ತಿಯನ್ನು ಸೇರಿಸಿದರೆ *ಸತ್ಸಂಗ* ವಾಗುವುದು... 
ಬದುಕಿಗೇ.. ಭಕ್ತಿಯನ್ನು ಸೇರಿಸಿದರೆ ಬದುಕೇ *ಪಾವನ* ವಾಗುವದು....

Wednesday, 3 March 2021

ಸಾಡೇಸಾಥ್

#ಓಂ_ಶಂ_ಶನೈಶ್ಚರಾಯ_ನಮಹ

ಇಂದು ನಾವು "ಸಾಡೇಸಾಥ್" ಬಗ್ಗೆ ಸ್ವಲ್ಪ ತಿಳಿದುಕೊಳ್ಳಲು ಪ್ರಯತ್ನಿಸೋಣ, ಹೆಚ್ಚಿನ ಜನರು ಈ ಪದವನ್ನು ಸಹ ಕೇಳಲು ಇಷ್ಟಪಡುವುದಿಲ್ಲ ಮತ್ತು ಕೇಳಿದರೆ ಹೆದರುತ್ತಾರೆ.

ಸಾಡೇಸಾಥ್ ಎಂದರೆ ಏಳು ಮತ್ತು ಅರ್ಧ ಎಂಬ ಅರ್ಥವಾಗುತ್ತದೆ ಸಾಮಾನ್ಯವಾಗಿ  ಶನಿ ಮಹಾತ್ಮ ಒಂದು ರಾಶಿಯನ್ನು ದಾಟಲು 2.5 ವರ್ಷಗಳನ್ನು ತೆಗೆದುಕೊಳ್ಳುತ್ತಾನೆ, ಕೆಲವೊಮ್ಮೆ 3 ವರ್ಷಗಳು ಸಹ ಆಗುತ್ತದೆ.

ಗ್ರಹಗಳಲ್ಲಿ ಅತಿ ನಿಧಾನವಾಗಿ ಚಲಿಸುವ ಗ್ರಹವೆಂದರೆ ಅದು ಶ್ರೀ ಶನಿ ಮಹಾತ್ಮ, ದ್ವಾದಶ ರಾಶಿ ಚಕ್ರವನ್ನು ಒಂದು ಸುತ್ತು ಪೂರ್ಣಗೊಳಿಸಲು ಶನಿ ಮಹಾತ್ಮ ತೆಗೆದುಕೊಳ್ಳುವ ಸಮಯ ೩೦ ವರ್ಷಗಳು.

ಯಾವಾಗ ಶನಿ ಮಹಾತ್ಮ ನಿಮ್ಮ ರಾಶಿಯಿಂದ 12 ನೇ ಮನೆಗೆ ಪ್ರವೇಶ ಮಾಡುತ್ತಾನೋ ಆಗ ಸಾಡೇಸಥ್ ಪ್ರಾರಂಭವಾಗುತ್ತದೆ.

ಶನಿಯು 12 ನೇ ಮನೆ, 1 ನೇ ಮನೆಯಾದ ಜನ್ಮ ರಾಶಿ ಮತ್ತು 2 ನೇ ಮನೆಗಳಲ್ಲಿ ಸಾಗುವಾಗ ಆ ಕಾಲಘಟ್ಟವನ್ನು ಸಾಡೇಸಾಥ್ ಎಂದು ಕರೆಯಲಾಗುತ್ತದೆ.

12 ನೇ ಮನೆಯಲ್ಲಿ 2.5 ವರ್ಷಗಳು, ಜನ್ಮ ರಾಶಿಯಲ್ಲಿ 2.5 ವರ್ಷಗಳು ಮತ್ತು ಎರಡನೇ ಮನೆಯಲ್ಲಿ 2.5 ವರ್ಷಗಳು, ಸಂಪೂರ್ಣವಾಗಿ 7.5 ವರ್ಷಗಳ ಕಾಲ ಒಬ್ಬ ಮನುಷ್ಯ ಶನಿ ಮಹಾತ್ಮನ ಪ್ರಭಾವದಲ್ಲಿ ಇರುತ್ತಾನೆ.

ಒಬ್ಬ ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ಸರಾಸರಿ 3 ಸುತ್ತುಗಳ ಸಾಡೇಸಾತ್ ನೋಡುತ್ತಾನೆ.

ಮೊದಲ ಸುತ್ತಿನ ಸಾಡೇಸಾತ್ ಹಾದುಹೋಗಲು ಕಠಿಣವಾಗಿರುತ್ತದೆ, ಎರಡನೇ ಸುತ್ತು ಅಷ್ಟು ಕಠಿಣವಿರುವುದಿಲ್ಲ ಮತ್ತು ಅಂತಿಮ ಸುತ್ತನ್ನು ಸಾಮಾನ್ಯವಾಗಿ ಮರಣ ಶನಿ ಎಂದು ಕರೆಯಲಾಗುತ್ತದೆ.

ಸಾಡೇಸಾತ್ ಒಬ್ಬರ ಜೀವನದಲ್ಲಿ ವೇಗ ನಿಯಂತ್ರಣ ಇದ್ದಂತೆ, ಇದು ವೇಗವಾಗಿ ಚಲಿಸುವ ವಾಹನವನ್ನು ನಿಲ್ಲಿಸಿ, ಯೋಚಿಸಿ ಮತ್ತು ಅನುಭವದೊಂದಿಗೆ ಮುಂದುವರಿಯುವಂತೆ ಮಾಡುತ್ತದೆ.

ನಿಮಗೆ ತೊಂದರೆ ಕೊಡುವುದು ಶನಿ ಮಹಾತ್ಮ ಅಲ್ಲ, ಸ್ವತಃ ನಿಮ್ಮ ಕರ್ಮ, ಅವರವರ ಕರ್ಮಾನುಸಾರವಾಗಿ ಫಲ ನೀಡಲು ಭಗವಂತ ಮಹಾದೇವನಿಂದ ನೇಮಿಸಲ್ಪಟ್ಟ ಮಾಸ್ತರ್ ಶನಿ ಎಂದು ಜನರು ಅರಿತುಕೊಳ್ಳಬೇಕು.

ನಿಮ್ಮ ಕೆಟ್ಟ ಕರ್ಮವನ್ನು ಶುದ್ಧೀಕರಿಸಲು ಶನಿ ಮಹಾತ್ಮ ಸಹಾಯ ಮಾಡುತ್ತಾನೆ, ಸಾಡೆ ಸಾಥ್ ಎನ್ನುವುದು ಒಬ್ಬ ವ್ಯಕ್ತಿಯು ಜೀವನದ ಎಲ್ಲಾ ಅಂಶಗಳು ಆಯಾಗಳ ಬಗ್ಗೆ ಕಲಿಯುವ ಕಾಲ, ಆದರೆ ಕಲಿಕೆಯ ಪ್ರಕ್ರಿಯೆಯು ಮಾತ್ರ ಕಠಿಣವಾಗಿರುತ್ತದೆ.

ಒಬ್ಬ ವ್ಯಕ್ತಿಯು ತನ್ನ ಸ್ವಂತ ಜಾತಕದಲ್ಲಿ ಒಳ್ಳೆಯ ದಶಾ ಭುಕ್ತಿಯಲ್ಲಿದ್ದರೆ ಅವನು ಹೆಚ್ಚು ತೊಂದರೆಯಿಲ್ಲದೆ ಸಾಡೇ ಸಾಥನ್ನು ಹಾದುಹೋಗಬಹುದು, ಆದರೆ ದಶಾ ಭುಕ್ತಿ ಪ್ರತಿಕೂಲವಾಗಿದ್ದರೆ ಅದು ಬೆಂಕಿಯಲ್ಲಿ ನಡೆಯುವಂತಾಗುತ್ತದೆ.

ಸಾಡೇಸಾತ್ ಕೊನೆಯ ಹಂತದಲ್ಲಿ ನಿಮ್ಮ ಜೀವನ ರೂಪಿಸಿಕೊಳ್ಳಲು ಶನಿ ಮಹಾತ್ಮ ಬುನಾದಿ ಹಾಕಿಕೊಡುತ್ತಾರೆ, ಅದು ಬಲವಾದ ಅನುಭವಗಳಿಂದ ತುಂಬಿರುತ್ತದೆ.

ಸಾಡೇಸಾತ್ ಪ್ರಕ್ರಿಯೆ ಬಗ್ಗೆ ಮುಂದಿನ ಸಂಚಿಕೆಯಲ್ಲಿ ಸಂಪೂರ್ಣವಾಗಿ ತಿಳಿಸುತ್ತೇನೆ.

ಮುಂದುವರಿಯುವುದು...

#JyothishyaAacharya #JyothishyaRatna #VijayendraRaj #KaalaPurushaGnyaniAstrology #KPGAstrology #KPGVaasthu #KPG #Astrology #Vaasthu