Thursday, 30 January 2020

ಭಕ್ತ ಧ್ರುವ

ಭಕ್ತ ಧ್ರುವ ನ ಕಥೆ ಇತಿಹಾಸ ಓದಿ ತಿಳಿಯಿರಿ
ಧ್ರುವ ನಕ್ಷತ್ರವನ್ನು ತಿಳಿಯದವರಾರು? ರಾತ್ರಿ ಕಾಲದಲ್ಲಿ ಕಾಡುಮೇಡುಗಳಲ್ಲಿ, ಸಮುದ್ರ ಪ್ರಯಾಣ ಮಾಡುವವರಿಗೆ ಧ್ರುವತಾರೆ ಮಾರ್ಗದರ್ಶನ ಮಾಡುತ್ತದೆ. ಸೂರ್ಯನಂತೆ ಪೂರ್ವದಲ್ಲಿ ಹುಟ್ಟಿ, ಪಶ್ಚಿಮದಲ್ಲಿ ಮುಳುಗುವ ಈ ನಕ್ಷತ್ರಕ್ಕೆ ಸಂಬಂಧಿಸಿದಂತೆ ಸ್ವಾರಸ್ಯಕರವಾದ ಪೌರಾಣಿಕ ಕಥೆಯೊಂದಿದೆ.

ಉತ್ತಾನಪಾದ ರಾಜ

ಹಿಂದಿನ ಕಾಲದಲ್ಲಿ ಒಬ್ಬ ರಾಜನಿಗೆ ಅನೇಕ ಮಂದಿ ಹೆಂಡತಿಯರಿರುತ್ತಿದ್ದರು. ಆಗಿನ ಕಾಲದಲ್ಲಿ ಇದು ರೂಢಿಯಾಗಿತ್ತು. ಆದರೂ ಎಷ್ಟೋ ಬಾರಿ ರಾಜನ ಹೆಂಡತಿಯರಲ್ಲಿ ಅನ್ಯೋನ್ಯ ಭಾವ ಇರುತ್ತಿರಲಿಲ್ಲ. ಯಾರಿಗೆ ಹೆಚ್ಚು ಮರ್ಯಾದೆ, ಹೆಚ್ಚು ವೈಭವ, ಯಾರ ಮಗ ರಾಜನಾಗಬೇಕು ಇಂತಹ ಯೋಚನೆಗಳಿಂದ ವಿರಸವೇ ಹೆಚ್ಚಾಗುತ್ತಿತ್ತು.

ಬಹುಕಾಲದ ಹಿಂದೆ ಒಬ್ಬ ಚಕ್ರವರ್ತಿ, ಉತ್ತಾನಪಾದ ಎಂದು ಅವನ ಹೆಸರು. ಆತನಿಗೆ ಇಬ್ಬರು ರಾಣಿಯರಿದ್ದರು. ಸುನೀತಿ ಮೊದಲನೆಯ ಹೆಂಡತಿ, ಪಟ್ಟದ ರಾಣಿ. ಕಿರಿಯವಳು ಸುರುಚಿ. ಸುನೀತಿ ಪ್ರಥಮ ಪತ್ನಿ ಮತ್ತು ಪಟ್ಟದ ರಾಣಿಯಾದರೂ ರಾಜನು ಸುರುಚಿಯನ್ನೇ ಹೆಚ್ಚು ಪ್ರೀತಿಸುತ್ತಿದ್ದನು. ಆಕೆಯ ಮಾತೆಂದರೆ ಅವನಿಗೆ ಆಜ್ಞೆಯಂತೆ. ಅವಳಿಗೆ ತಾಳ್ಮೆಯೇ ಇಲ್ಲ. ಬಹುಬೇಗ ಅವಳಿಗೆ ಕೋಪ ಬರುತ್ತಿತ್ತು. ಅವಳಿಗೆ ತನ್ನ ಸುಖ, ಬೈಭವ ಇವು ಮುಖ್ಯ. ಆದರೂ ರಾಜನಿಗೆ ಅವಳಲ್ಲಿಯೇ ಪ್ರೀತಿ. ಅವಳು ಏನೇ ಹೇಳಲಿ. ಅದು ಸರಿಯೆ, ತಪ್ಪೆ ಎಂದು ಯೋಚನೆ ಮಾಡುತ್ತಿರಲಿಲ್ಲ ರಾಜ. ಅವಳದು ತಪ್ಪು ಎಂದು ಸ್ಪಷ್ಟವಾಗಿ ಕಂಡಾಗಲೂ ಹಾಗೆಂದು ಹೇಳುವ ಧೈರ್ಯವೂ ಅವನಿಗಿರಲಿಲ್ಲ.

ಆದರೆ ಸುನೀತಿಯದು ಸೌಮ್ಯ ಸ್ವಭಾವ. ಯಾವುದು ಸರಿ, ಯಾವುದು ತಪ್ಪು ಎಂದು ಯೋಚಿಸಿ ಸರಿಯಾದ ರೀತಿಯಲ್ಲೆ ನಡೆಯುವಳು. ಅವಳದು ತಾಳ್ಮೆಯ ಸ್ವಭಾವ. ಸುರುಚಿಯ ದರ್ಪದ ಮುಂದೆ ಅವಳು ನಿಸ್ಸಹಾಯಕಳಾಗಿದ್ದಳು. ನ್ಯಾಯವಾಗಿ ಪಟ್ಟದ ರಾಣಿಯಾಗಿರಬೇಕಾದ ಸುನೀತಿಯ ಸ್ಥಾನ ಸುರುಚಿಗೆ ದೊರೆತಿತ್ತು. ರಾಜನು ಆಕೆಯ ಕೈಗೊಂಬೆಯಾಗಿದ್ದುದರಿಂದ, ರಾಜ್ಯದ ಹೆಚ್ಚು ಪಾಲು ಅಧಿಕಾರವು ಅವಳ ಹಿಡಿತದಲ್ಲೇ ಇದ್ದಿತು.

ಸುನೀತಿಗೆ ಒಬ್ಬ ಮಗ, ಅವನ ಹೆಸರು ಧ್ರುವ, ಸುರುಚಿಗೂ ಒಬ್ಬನೇ ಮಗ, ಅವನ ಹೆಸರು ಉತ್ತಮ.

ಧ್ರುವ ಅರಮನೆಯಲ್ಲಿ ಇರುವಂತಿಲ್ಲ

ತನಗೆ ವೈಭವ, ಅಧಿಕಾರ ದೊರೆತದ್ದರಿಂದ ಸುರುಚಿಗೆ ತೃಪ್ತಿಯಾಗಲಿಲ್ಲ. ಸುನೀತಿಗೂ ಧ್ರುವನಿಗೂ ಅರಮನೆಯಲ್ಲಿರಲು ಬಿಡಲಿಲ್ಲ. ತನ್ನ ಮಗ ಉತ್ತಮನೇ ಮುಂದೆ ರಾಜನಾಗಬೇಕು ಎಂದು ಅವಳ ಆಸೆ. ಅರಮನೆಯಲ್ಲೇ ಸುನೀತಿಯೂ ಧ್ರುವನೂ ವಾಸಿಸಿದರೆ, ಸುನೀತಿ ಪಟ್ಟದ ರಾಣಿ, ಧ್ರುವ ರಾಜನ ಮೊದಲನೆಯ ಮಗ ಎಂಬುದು ಜನರಿಗೆ ಸದಾ ನೆನಪಿರುತ್ತದೆ, ಮುಂದೆ ತನ್ನ ಮಗ ಉತ್ತಮನಿಗೆ ರಾಜ್ಯ ಸಿಕ್ಕದೆ ಹೋಗಬಹುದು ಎಂದು ಸುನೀತಿಯ ಹೆದರಿಕೆ. ಸುನೀತಿಯನ್ನೂ ಧ್ರುವನನ್ನೂ ಅರಮನೆಯಿಂದ ಹೊರಹಾಕಿದ್ದಳು. ಪಟ್ಟದ ರಾಣಿಯಾಗಿದ್ದರೂ ಪಟ್ಟಣದ ಹೊರವಲಯದಲ್ಲಿ ಸಾಮಾನ್ಯರಂತೆ ಸುನೀತಿಯು ಬಾಳುತ್ತಿದ್ದಳು. ಉತ್ತಾನಪಾದರಾಜ ಸುಮ್ಮನಿದ್ದ. ಅವನು ಸುನೀತಿಯ ಮನೆಯತ್ತ ಕಾಲಿಡುತ್ತಲೂ ಇರಲಿಲ್ಲ. ಸುರುಚಿಯನ್ನು ಕಂಡರೆ ಅವನಿಗೆ ಅಷ್ಟು ಹೆದರಿಕೆ ಮತ್ತು ಪ್ರೀತಿ.

ತಾಯಿಗೆ ಮಗ ಆಧಾರ, ಮಗನಿಗೆ ತಾಯಿ ಆಧಾರ

ಇಷ್ಟೆಲ್ಲಾ ಕಿರುಕುಳಗಳಾಗಿದ್ದರೂ ಸುನೀತಿಯು ತನ್ನ ಹೆಸರಿಗೊಪ್ಪುವಂತೆ ನೀತಿವಂತಳಾಗಿದ್ದಳು. ತನ್ನ ಪತಿಯನ್ನು ಕುರಿತು ಒಂದು ಆಕ್ಷೇಪಣೆಯ ಮಾತನ್ನೂ ಆಡಿದವಳಲ್ಲ, ಸುರುಚಿಯನ್ನು ದೂಷಿಸಿದವಳಲ್ಲ. ಅವರ ಅಭ್ಯುದಯವನ್ನೇ ಬಯಸುತ್ತಿದ್ದಳು. ತನ್ನ ಪಾಲಿಗೆ ಬಂದದ್ದೇ ಪಂಚಾಮೃತವೆಂದು ಎಲ್ಲವನ್ನೂ ಪರಮಾತ್ಮನಿಗೊಪ್ಪಿಸಿ, ಮೂಕಳಾಗಿದ್ದಳು. ಅವಳಿಗೆ ಈಗ ಉಳಿದಿದ್ದ ಸಂಪತ್ತೆಂದರೆ ಮಗ ಧ್ರುವನೇ. ಅವನನ್ನು ಹತ್ತಿರ ಕೂರಿಸಿಕೊಂಡು ಪ್ರತಿದಿನ ಪುರಾಣ, ಪುಣ್ಯಕಥೆ, ದಿವ್ಯ ಪುರುಷರ ಚರಿತ್ರೆಗಳನ್ನು  ಹೇಳಿಕೊಡುವಳು. ಹೀಗೆ ತನ್ನ ದುಃಖವನ್ನು ಮರೆಯುವಳು. ತನ್ನ ಬಾಳುಕುಡಿಯಾದ ಧ್ರುವನ ಅಭ್ಯುದಯವನ್ನೇ ಹಾರೈಸಿ, ದಿನಗಳನ್ನು ನೂಕುತ್ತಿದ್ದಳು.

ಧ್ರುವನಿಗೆ ತಾಯಿಯಲ್ಲಿ ಬಹಳ ಪ್ರೀತಿ, ದೇವರಲ್ಲಿ ಭಕ್ತಿ, ಹಿರಿಯರಲ್ಲಿ ಗೌರವ, ಚಿಕ್ಕವನಾದರೂ ಇತರರಿಗೆ ಸಂತೋಷವಾಗುವಂತೆ ನಡೆಯುವನು. ತಾಯಿಯ ಮಾರ್ಗದರ್ಶನದಲ್ಲಿ ಧ್ರುವನಿಗೆ ದೇವರಲ್ಲಿ ಅಪಾರ ಭಕ್ತಿ, ಶ್ರದ್ಧೆ ಮೊಳೆತು ಬೆಳೆಯುತ್ತಿತ್ತು. ಆಗಾಗ ಅವನಿಗೆ, ನಮ್ಮ ತಂದೆ ಮಹಾರಾಜ, ಆದರೆ ನನ್ನ ತಾಯಿ ಮತ್ತು ನಾನು ಅರಮನೆಯಲ್ಲಿ ಏಕೆ ವಾಸಮಾಡುತ್ತಿಲ್ಲ? ದೂರ ಏಕೆ ಇದ್ದೇವೆ? ನನ್ನ ತಂದೆ ನಮ್ಮ ಮನೆಗೆ ಏಕೆ ಬರುವುದಿಲ್ಲ? ಎನ್ನಿಸುತ್ತಿತ್ತು. ಇದನ್ನು ಕುರಿತು ಪದೇಪದೇ ತಾಯಿಯನ್ನು ಕೇಳುತ್ತಿದ್ದ. ಆಕೆ ಹೇಗೋ ಸಮಾಧಾನ ಹೇಳಿ ಸುಮ್ಮನಾಗುತ್ತಿದ್ದಳು.

ತನ್ನ ತಂದೆ ಮತ್ತು ತಾಯಿ ತನ್ನನ್ನು ಪ್ರೀತಿಯಿಂದ ಕಾಣಬೇಕು ಎಂದು ಪ್ರತಿ ಮಗುವಿಗೂ ಆಸೆ, ಅಲ್ಲವೆ? ಧ್ರುವನ ತಾಯಿ ಅವನನ್ನು ಮುದ್ದಿಸುತ್ತಿದ್ದಳು, ಅವನಿಗೆ ಕಥೆಗಳನ್ನು ಹೇಳುತ್ತಿದ್ದಳು. ಪ್ರೀತಿಯಿಂದ ಬಟ್ಟೆ ಹಾಕುತ್ತಿದ್ದಳು. ಆದರೆ ಧ್ರುವನಿಗೆ ತಂದೆಯ ಪ್ರೇಮ ಮಾತ್ರ ಸಿಕ್ಕಲಿಲ್ಲ. ಇದೊಂದು ಆತನ ಮನಸ್ಸನ್ನು ಚುಚ್ಚುತ್ತಿತ್ತು.

ಅಪ್ಪಾ, ನನ್ನನ್ನು ಎತ್ತಿಕೊ

ಒಂದು ದಿನ ಪುಟ್ಟ ಧ್ರುವನು ಆಡುತ್ತಾ ಅರಮನೆಯತ್ತ ನಡೆದಿದ್ದ. ಅವನಿಗಿನ್ನೂ ಐದು ವರ್ಷ. ರತ್ನಖಚಿತ ಸಿಂಹಾಸನದಲ್ಲಿ ಚಕ್ರವರ್ತಿಯು ಸುರುಚಿ ಮತ್ತು ಉತ್ತಮರೊಡನೆ ಕುಳಿತಿದ್ದನು. ದಿವ್ಯ ಸಭಾಂಗಣವು ಮುತ್ತು ರತ್ನಗಳಿಂದ ಶೋಭಾಯಮಾನವಾಗಿತ್ತು. ಅಲ್ಲಲ್ಲಿ ಶುಭ್ರವಾದ ಸುಪ್ಪತ್ತಿಗೆಗಳು, ನಡುನಡುವೆ ಬೆಳ್ಳಿಯ ಚಿತ್ರಕೆಲಸಗಳುಳ್ಳ ಬಂಗಾರದ ಪೀಠಗಳು, ಸ್ಫಟಿಕ ಗೋಡೆಗಳಲ್ಲಿ ಕೆತ್ತಿದ ವಿವಿಧ ಕಲಾಕೃತಿಗಳು ಕಣ್ಣಿಗೆ ಹಬ್ಬವಾಗಿದ್ದುವು.

ಧ್ರುವ ಸಭಾಂಗಣವನ್ನು ಪ್ರವೇಶಿಸಿದ. ತಂದೆಯ ತೊಡೆಯ ಮೇಲೆ ಉತ್ತಮನು ಕೂತಿರುವುದನ್ನು ನೋಡಿದ. ಅವನಿಗೂ ತಂದೆಯ ತೊಡೆಯ ಮೇಲೆ ಕುಳಿತುಕೊಳ್ಳಬೇಕು ಎಂದು ಆಸೆಯಾಯಿತು.  ಸಿಂಹಾಸನದ ಕಡೆಗೆ ಹೆಜ್ಜೆ ಹಾಕಿದ.

ಧ್ರುವನು ತಂದೆಯತ್ತ ಬರುತ್ತಿರುವುದನ್ನು ಸುರುಚಿಯು ನೋಡುತ್ತಿದ್ದಳು. ಆಕೆಯ ಸಹಜ ದುಷ್ಟಬುದ್ಧಿ ಹೆಡೆಯೆತ್ತಿ  ನಿಂತಿತು.

ಧ್ರುವನು ಸಿಂಹಾಸನದ ಮೆಟ್ಟಿಲುಗಳನ್ನು ಹತ್ತಿದ. ತನ್ನ ತಂದೆಯ ಹತ್ತಿರ ನಿಂತು, “ಅಪ್ಪಾ, ನಾನೂ ತೊಡೆಯ ಮೇಲೆ ಕುಳಿತುಕೊಳ್ಳುತ್ತೇನೆ, ಎತ್ತಿಕೊ” ಎಂದ.

‘ರಾಜ್ಯ ಪೀಠವೇರುವ ಯೋಗ್ಯತೆ ಇದೆಯೇ?’

ಚಕ್ರವರ್ತಿ ತನ್ನ ಹತ್ತಿರ ನಿಂತ ಧ್ರುವನನ್ನು ಕಣ್ಣೆತ್ತಿಯೂ ನೋಡಲಿಲ್ಲ. ಪಾಪ, ಧ್ರುವನಿಗೆ ತಂದೆಯ ತೊಡೆಯ ಮೇಲೆ ತಾನೂ ಉತ್ತಮನಂತೆ ಕುಳಿತುಕೊಳ್ಳಬೇಕು ಎಂದು ಬಹಳ ಆಸೆಯಾಯಿತು. ತಂದೆಯ ತೊಡೆಯ ಮೇಲೆ ಕೈಯಿಟ್ಟ.

‘ಸಿಂಹಾಸನ ಏರುವ ಯೋಗ್ಯತೆ ನಿನಗಿದೆಯೇ?’

ಸುರುಚಿಯು ಕೆಂಡವಾದಳು. ಅವಳ ಕಣ್ಣುಗಳಲ್ಲಿ ಸಿಟ್ಟಿನ ಕಿಡಿ ಹಾರಿತು. ಅವಳು ಸಿಡಿಮಿಡಿಗೊಂಡು ಧ್ರುವನನ್ನು ದುರುದುರನೆ ನೋಡುತ್ತಿದ್ದುದನ್ನು ರಾಜನೂ ಕಂಡ. ಅವನಿಗೂ ಧ್ರುವನನ್ನು ಕಂಡು ಅಯ್ಯೋ ಪಾಪ ಎನ್ನಿಸಿತು. ಆದರೂ ಒಂದು ಕಡೆ ತನ್ನ ಪುಟ್ಟ ಮಗನ ಸಹಜವಾದ ಬಯಕೆ, ಇನ್ನೊಂದು ಕಡೆ ಕೆಣಕಿದ ಸಿಂಹಿಣಿಯಂತೆ ದುರುದುರನೆ ಧ್ರುವನತ್ತ ನೋಡುತ್ತಿರುವ ಪ್ರೀತಿಯ ರಾಣಿ – ಸುರುಚಿ. ರಾಜನಿಗೆ ತನ್ನ ರಾಣಿಯ ಕೋಪವನ್ನೆದುರಿಸುವ ಶಕ್ತಿಯಿರಲಿಲ್ಲ. ಸುಮ್ಮನೆ ಕುಳಿತ.

ಸುರುಚಿಗೆ ಕೋಪ ತಡೆಯಲಾಗಲಿಲ್ಲ. ಮಗುವನ್ನು ಗದರಿಸಿದಳು. “ಎಲೋ ಹುಡುಗನೆ, ರಾಜನ ತೊಡೆ ಏರುವ ಆಸೆ ಮಾಡಿರುವ ನಿನ್ನ ಅಹಂಕಾರವೆಷ್ಟು? ನನ್ನ ಹೊಟ್ಟೆಯಲ್ಲಿ ನೀನು ಹುಟ್ಟಲಿಲ್ಲ. ರಾಜಪೀಠವೇರುವ ಯೋಗ್ಯತೆ ನಿನಗಿದೆಯೇ? ನೀನು ಸಿಂಹಾಸನವನ್ನು ಏರಬೇಕಾದರೆ ದೇವರನ್ನು ಕುರಿತು ತಪಸ್ಸು ಮಾಡಿ, ನನ್ನ ಹೊಟ್ಟೆಯಲ್ಲಿ ಹುಟ್ಟಿಬರಬೇಕು. ಆಗ ಉತ್ತಮ ಕುಮಾರನ ಹಾಗೆ ನೀನೂ ಆಗುವೆ. ದೂರ ನಿಲ್ಲು. ಇಲ್ಲದಿದ್ದರೆ ನಿನ್ನನ್ನು ನೂಕಬೇಕಾಗುತ್ತದೆ, ಹೋಗತ್ತ!” ಎಂದು ಮೂದಲಿಸಿದಳು.

ಮನೆಗೆ

ಪಾಪ, ಚಿಕ್ಕ ಹುಡುಗನಿಗೆ ದಿಗ್ಭ್ರಮೆಯಾಯಿತು. ತಂದೆಯ ಕಡೆ ನೋಡಿದ. ತಂದೆಯು ಅವನ ಕಡೆ ಕಣ್ಣನ್ನೂ ಹೊರಳಿಸಲಿಲ್ಲ. ಅವನಿಗೆ ದುಃಖ ಒತ್ತರಿಸಿ ಬಂದಿತು. ಜೊತೆಗೇ ಏಟು ತಿಂದ ನಾಗರಹಾವಿನಂತೆ ಸಿಟ್ಟು ಬಂದಿತು. ಅವನಿಗೆ ತುಂಬ ಅಪಮಾನವಾಗಿತ್ತು. ತಂದೆಯೂ ತನ್ನನ್ನು ಮತನಾಡಿಸಲಿಲ್ಲ. ಅಪಮಾನವಾದಾಗಲೂ ಸುಮ್ಮನಿದ್ದ ಎಂದೂ ಕೋಪ ಬಂದಿತು. ಕಣ್ಣಿನಿಂದ ನೀರು ಹರಿಯಿತು. ತಂದೆಯನ್ನು ಬಿಟ್ಟು ಸಿಂಹಾಸನದ ಮೆಟ್ಟಿಲುಗಳನ್ನಿಳಿದ. ಅಲ್ಲಿದ್ದ ದಾಸಿಯೊಬ್ಬಳಿಗೆ ಅವನಿಗಾದ ಅಪಮಾನವನ್ನೂ ಬಿಕ್ಕಿಬಿಕ್ಕಿ ಅಳುತ್ತಿದ್ದ ಅವನ ಕಣ್ಣೀರನ್ನೂ ನೋಡಿ ಕರುಣೆ ಬಂದಿತು. ಅವನನ್ನು ಎತ್ತಿಕೊಳ್ಳಲು ಮುಂದೆ ಬಂದಳು. ಆದರೆ ಧ್ರುವನು ತಪ್ಪಿಸಿಕೊಂಡು ಓಡಿದ. ದಾಸಿಯೂ ಅವನ ಹಿಂದೆಯೇ ನಡೆದಳು.

ಎಂದು ಅಳದೆ, ನಗುನಗುತ್ತಾ ಇರುತ್ತಿದ್ದ ಧ್ರುವನು ಅಳುತ್ತಾ ಬರುತ್ತಿರುವುದನ್ನು ದೂರದಿಂದಲೇ ಕಂಡ ಸುನೀತಿಗೆ ಆಕಾಶವೇ ಕಳಚಿ ಬಿದ್ದಂತಾಯಿತು.  ಓಡಿಬಂದು ಮಗುವನ್ನು ತಬ್ಬಿ ಎತ್ತಿಕೊಂಡಳು. ಅವನ ಅಳುವನ್ನು ತಡೆಯಲು ಪ್ರಯತ್ನಿಸಿದಳು. ಮುದ್ದಾಡಿದಳು. ಆದರೆ ಅವನ ಅಳು ನಿಲ್ಲಲಿಲ್ಲ. ಬಿಕ್ಕಿ ಬಿಕ್ಕಿ ಅಳುತ್ತಿದ್ದ ಹುಡುಗನಿಗೆ ಮಾತನಾಡುವುದಕ್ಕೇ ಆಗಲಿಲ್ಲ.

ಧ್ರುವನ ಜೊತೆಗೇ ದಾಸಿ ಬಂದಿದ್ದಳು, ಅಲ್ಲವೆ? ಸುನೀತಿ ಅವಳನ್ನು, ಏಕಮ್ಮಾ, ಮಗು ಅಳುತ್ತಿದ್ದಾನೆ? ನಿನಗೆ ಗೊತ್ತೆ? ಎಂದು ಕೇಳಿದಳು.

ದಾಸಿ ನಡೆದದ್ದನ್ನು ವಿವರಿಸಿದಳು.

‘ಎಲ್ಲ ದೇವರ ಇಚ್ಛೆ’

ಸುರುಚಿ ಧ್ರುವನಿಗೆ ಮಾಡಿದ ಅಪಮಾನ, ಆಡಿದ ಮಾತುಗಳು, ಪುಟ್ಟ ಹುಡುಗನಿಗೆ ತಂದೆ ಹತ್ತಿರ ಹೋಗಲೂ ಅವಕಾಶ ಇಲ್ಲ ಎಂಬಂತೆ ದೂರ ಇಟ್ಟಿದ್ದು ಎಲ್ಲವನ್ನೂ ಕೇಳಿ ಸುನೀತಿಗೆ ಕರುಳು ಕತ್ತರಿಸಿದಂತಾಯಿತು. ದುಃಖ ಉಕ್ಕಿ ಬಂತು. ಸ್ವಲ್ಪ ಕಾಲ ಅವಳಿಗೆ ಮಾತನ್ನೇ ಆಡಲು ಸಾಧ್ಯವಾಗಲಿಲ್ಲ. ಸುಮ್ಮನೆ ಕುಳಿತಳು. ಧ್ರುವ ರಾಜ್ಯಕ್ಕೆ ಹಕ್ಕುದಾರ, ಅವನನ್ನು ಅಪಮಾನಗೊಳಿಸಿದ ಸುರುಚಿಯ ಸ್ವಾರ್ಥಕ್ಕೆ ಆಕೆ ಮರುಗಿದಳು. ಪಾಪ, ಧ್ರುವ ಏನೂ ತಿಳಿಯದ ಹಸುಳೆ, ಅವನ ಮೇಲೆ ಕೈಮಾಡಬೇಕೆ? ಪಟ್ಟದರಸಿಯಾಗಿ ಮೆರೆಯಬೇಕಿದ್ದ ನಾನು, ಸಾಮಾನ್ಯಳಂತೆ ಜೀವಿಸುತ್ತಿದ್ದರೂ, ನನ್ನ ಮಗುವಿನ ಮೇಲೆ ಸುರುಚಿ ಸೇಡುತೀರಿಸಬೇಕೆ? ಎನ್ನಿಸಿತು ಸುನೀತಿಗೆ.

ಕಣ್ಣೀರು ಸುರಿಸುತ್ತ ಸುನೀತಿಯು ತನ್ನ ಮಗುವನ್ನು ಸಂತೈಸಿದಳು. “ಮಗೂ, ರಾಜಕುಮರನಾದ ನಿನಗೆ ಅದರ ಆನಂದ ಪಡೆಯುವ ಭಾಗ್ಯವಿಲ್ಲ. ದೇವರಿಗೆ ನಮ್ಮ ಮೇಲೆ ಕರುಣೆ ಬಂದಾಗ ನಮ್ಮ ಪರಿಸ್ಥಿತಿ ಸುಧಾರಿಸುವುದು. ನನ್ನದು ದುರದೃಷ್ಟ. ನನ್ನ ಹೊಟ್ಟೆಯಲ್ಲಿ ಹುಟ್ಟಿದ ನೀನು ದುಃಖಕ್ಕೆ ಗುರಿಯಾಗಬೇಕಾಯಿತು. ದೇವರಿಗೆ ಯಾವುದು ಒಪ್ಪಿಗೆಯೋ ಅದೇ ನಡೆಯುತ್ತದೆ. ನಮ್ಮ ಕಷ್ಟಗಳಿಂದ ಪಾರುಮಾಡಲು ಪರಮಾತ್ಮನಲ್ಲಿ ಮೊರೆ ಹೋಗಬೇಕು, ಅಷ್ಟೆ. ನಮಗೆ ಬೇರೆ ಯಾರು ಸಹಾಯ ಮಾಡುವರು? ಸಮಾಧಾನ ಮಾಡಿಕೊ. ಎಲ್ಲ ದೇವರ ಇಚ್ಛೆ” ಎಂದು ಸಮಾಧಾನ ಮಾಡಿದಳು.

‘ದೇವರನ್ನು ಕಾಣುವುದು ಹೇಗೆ?’

ತಾಯಿಯು ಪ್ರತಿ ದಿವಸ ಧ್ರುವನಿಗೆ ದೇವರ ವಿಷಯವಾಗಿ ಅನೇಕ ಕಥೆಗಳನ್ನು ಹೇಳುತ್ತಿದ್ದಳು. ಪರಮಾತ್ಮನು ಭಕ್ತರನ್ನು ಕಷ್ಟಕಾಲದಲ್ಲಿ ಉದ್ಧರಿಸಿದ ಕಥೆಗಳನ್ನು ಹುಡುಗನು ಕೇಳಿದ್ದ. ಕಷ್ಟಕಾಲದಲ್ಲಿ ಕಂಗಾಲಾದವರಿಗೆ ಈ ಕರುಣಾಮೂರ್ತಿ ಪರಮಾತ್ಮನೇ ಗತಿ ಎಂದು ಮತ್ತೆ ಈಗ ತಾಯಿ ಹೇಳಿದಳು. ಅವಳ ಮಾತನ್ನು ಕೇಳಿ ಅವನಲ್ಲಿ ಒಂದು ಹೊಸ ಚೇತನ ಮೂಡಿದಂತಾಯಿತು.

“ಅಮ್ಮಾ, ದೇವರನ್ನು ಕಾಣುವುದು ಹೇಗೆ? ಆತನನ್ನು ಮೊರೆಯಿಟ್ಟು ಕರೆದರೆ ಬರಲಾರನೇ?” ಎಂದ.

ಹೌದು ಮಗೂ, ಆ ಕರುಣಾಸಾಗರನನ್ನು ಶುದ್ಧ ಮನಸ್ಸಿನಿಂದ ನೆನೆದು, ನಮ್ಮ ಪ್ರಾರ್ಥನೆಯನ್ನು ಸಲ್ಲಿಸಿದರೆ ಖಂಡಿತ ಆತನು ನೆರವಾಗುವನು ಎಂದಳು ಸುನೀತಿ.

“ಆದರೆ, ಈಗ ಆತನನ್ನು ಕಾಣುವುದಾದರೂ ಎಲ್ಲಿ? ಅವನನ್ನು ಕಂಡು, ನಮ್ಮ ಕಷ್ಟಗಳನ್ನು ಹೇಳಿಕೊಂಡು, ಸಹಾಯ ಪಡೆಯಲು ಪ್ರಯತ್ನಿಸುವೆನು.”

‘ನಾನು ಕಾಡಿಗೆ ಹೋಗಿ ದೇವರನ್ನು ಕಾಣುತ್ತೇನೆ’

ಸುನೀತಿಗೆ ತನ್ನ ಕಂದನ ಮಾತುಗಳನ್ನು ಕೇಳಿ ನಗುವೂ ಬಂದಿತು. ಕರುಣೆಯೂ ಉಕ್ಕಿತು. “ಮಗೂ, ದೇವರಿಲ್ಲದ ಸ್ಥಳ ಇಲ್ಲವೇ ಇಲ್ಲ. ಆತ ಸರ್ವಾಂತರರ್ಯಾಮಿ; ಎಲ್ಲೆಲ್ಲೂ ಆತ ವಿವಿಧ ರೂಪದಲ್ಲಿದ್ದಾನೆ. ಆಡುವವ, ಆಡಿಸುವವ, ನೋಡುವವ, ನೋಡಿಸುವವ, ಕೆಟ್ಟದ್ದು, ಒಳ್ಳೆಯದು, ಸುಖ, ದುಃಖ ಎಲ್ಲದರಲ್ಲಿಯೂ ಆತನೇ ತಾನೇತಾನಾಗಿರುವನು. ಆದರೆ, ದೇವರನ್ನು ಕಾಣುವುದು ಸುಲಭವಲ್ಲ. ಶುದ್ಧ ಮನಸ್ಸಿನ ಭಕ್ತಿಗೆ ಆತ ಒಲಿಯುತ್ತಾನೆ. ಆತನನ್ನು ಕಾಣಲು ನಿಶ್ಚಲ ಮನಸ್ಸು, ಸ್ವಚ್ಛ ಭಕ್ತಿ , ನಂಬಿಕೆ ಬೇಕಪ್ಪಾ” ಎಂದಳು.

“ಆದರೆ, ಅಮ್ಮಾ, ನೀನು ಅನೇಕ ಸಲ ಋಷಿಗಳು, ಸನ್ಯಾಸಿಗಳು ದೇವರನ್ನು ಕಾಡಿಗೆ ಹೋಗುವರೆಂದಿದ್ದೆ, ಅವನು ಅಲ್ಲೂ ಇರುವನೇನಮ್ಮಾ ?”

“ಹೌದು ಮಗೂ, ಆತನು ಎಲ್ಲೆಲ್ಲೂ ಇರುವನು. ಆದರೆ, ಕಾಡಿನಲ್ಲಿ ತಪಸ್ಸು ಮಾಡುವುದು ಸುಲಭವಲ್ಲ, ಧ್ರುವ, ಕಾಡಿನಲ್ಲಿ ಹುಲಿ, ಸಿಂಹಗಳಂತಹ ಮೃಗಗಳಿರುತ್ತವೆ. ಹಾವು, ಚೇಳುಗಳಂತಹ ವಿಷಜಂತುಗಳಿರುತ್ತವೆ. ಸಿಕ್ಕ ಗೆಡ್ಡೆ-ಗೆಣಸು, ಹಣ್ಣು ಇವೇ ಆಹಾರ, ಮಳೆ, ಗಾಳಿ, ಚಳಿ, ಬಿಸಿಲು ಎಲ್ಲವನ್ನೂ ತಡೆದುಕೊಳ್ಳಬೇಕು. ನಿನ್ನಂತಹ ಪುಟ್ಟ ಹುಡುಗನಿಗೆ ಇದೆಲ್ಲ ಸಾಧ್ಯವಿಲ್ಲ ಮಗೂ” ಎಂದಳು.

ಈ ಮಾತು ಕೇಳಿದ ಧ್ರುವನ ಮುದ್ದು ಮುಖದಲ್ಲಿ ಯಾವುದೋ ನಿರ್ಧಾರದ ಕಳೆಯಿತ್ತು.

“ಅಮ್ಮಾ, ನಾನು ಕಾಡಿಗೆ ಹೋಗಿ ದೇವರನ್ನು ಕಾಣುತ್ತೇನೆ. ಅವನನ್ನು ಭಕ್ತಿಯಿಂದ ಒಲಿಸಿ ವರ ಪಡೆಯುತ್ತೇನೆ.  ನನಗೆ ಒಳ್ಳೆಯದಾಗಲಿ ಎಂದು ಆಶೀರ್ವಾದ ಮಾಡು” ಎಂದು ನಮಸ್ಕರಿಸಿದ.

‘ಅಷ್ಟು ಸುಲಭವಲ್ಲ’

ಸುನೀತಿಗೆ ಈ ಮಾತುಗಳನ್ನು ಕೇಳಿ ದಿಕ್ಕು ಕಾಣದಾಯಿತು. ಧ್ರುವನ ಇಂತಹ ನಿರ್ಧಾರವನ್ನು ಕೈಗೊಳ್ಳುವನೆಂದು ಆಕೆ ತಿಳಿದಿರಲಿಲ್ಲ.  ಈ ಹಸುಳೆ ಕಾಡಿಗೆ ಹೋಗುವುದೆ? ತಪಸ್ಸು ಮಾಡುವುದೆ? ಆದರೆ ಅವನು ದೃಢನಿಶ್ಚಯ ಮಾಡಿದ್ದಾನೆ. ಆತನನ್ನು ಸಂತೈಸುವ ಧ್ವನಿಯಲ್ಲಿ “ದೇವರನ್ನು ಕಾಣುವುದು ಅಷ್ಟು ಸುಲಬವಲ್ಲಪ್ಪಾ. ಆತನನ್ನು ಒಲಿಸಲು ನಿನ್ನಲ್ಲಿ ಏಕಾಗ್ರತೆ ಬೇಕು. ದೃಢನಂಬಿಕೆಯ ಹೃದಯದಲ್ಲಿ ಭಕ್ತಿಯ ಅಮೃತವನ್ನು ತುಂಬಿಕೊಂಡಿರಬೇಕು. ಅದು ನಿನ್ನಂತಹ ಹಸುಳೆಗೆ ಸಾಧ್ಯವಾಗದ ವಿಷಯ. ಬಂದ ಕಷ್ಟಸುಖವನ್ನೆಲ್ಲಾ ಅನುಭವಿಸಬೇಕು. ಕಷ್ಟಸುಖಗಳೇನೇ ಬರಲಿ, ಎಲ್ಲವೂ ದೇವರ ವರಪ್ರಸಾದವೆಂದು ಆತನಿಗೆ ಎಲ್ಲವನ್ನೂ ಅರ್ಪಿಸುವ ಭಕ್ತಿಯೊಂದೇ ನಮಗಿರುವ ದಾರಿ” ಎಂದು ಹೇಳಿ ಅವನನ್ನು ಎತ್ತಿಕೊಂಡಳು.

‘ದೇವರನ್ನೇ ಕಂಡೇ ಕಾಣುತ್ತೇನೆ’

ಆದರೆ, ಮುಗ್ಧ ಮನಸ್ಸಿನ ಧ್ರುವನ ಹೃದಯದಲ್ಲಿ ಒಂದು ತುಮುಲವೇ ಎದ್ದಿತು. ಎಷ್ಟು ಕಷ್ಟ ಬಂದರೂ ಸರಿಯೆ, ದೇವರನ್ನು ಕಾಣಲೇಬೇಕೆಂದು ನಿಶ್ಚಯಿಸಿದನು. ತನ್ನ ಮತ್ತು ತನ್ನ ತಾಯಿಯ ಕಷ್ಟಗಳನ್ನು ಆತನಲ್ಲಿ ಹೇಳಿಕೊಂಡು ಪಾರಾಗಲೇಬೇಕೆಂಬ ದೃಢಮನಸ್ಸು ಆತನನ್ನು ತಾಯಿಯ ಮಡಿಲಿನಿಂದ ಎಬ್ಬಿಸಿತು.

“ಅಮ್ಮಾ, ಇನ್ನು ನನಗೆ ಸಮಯ ಕಳೆಯಲು ಸಾಧ್ಯವಾಗದು. ಏನೇ ಆದರೂ, ಎಷ್ಟೇ ಕಷ್ಟಗಳೆರಗಿದರೂ ದೇವರನ್ನು ಕಂಡೇ ಕಾಣುತ್ತೇನೆ. ನಾನು ಆತನ ದರ್ಶನವನ್ನು ಪಡೆದು ಬರುವವರೆಗೆ ನೀನು ನಿಶ್ಚಿಂತಳಾಗಿರು. ಋಷಿಗಳಿಗೆ ದರ್ಶನವೀಯುವ ಆ ಪರಮಾತ್ಮನನ್ನು ನಾನು ಕಾಣಲಾರೆನೇ? ಆಶೀರ್ವದಿಸಿ ಕಳುಹಿಸು” ಎಂದು ಮತ್ತೆ ನಮಸ್ಕರಿಸಿದ.

ಸುನೀತಿ ಮಗನ ಮಾತನ್ನು  ಕೇಳಿದಳು. “ನನ್ನ ಹೊಟ್ಟೆಯಲ್ಲಿ ನೀನು ಹುಟ್ಟಲಿಲ್ಲ, ಸಿಂಹಾಸನವನ್ನೇರುವ ಯೋಗ್ಯತೆ ನಿನಗಿದೆಯೇ?” ಎಂದು ಸುರುಚಿ ಧ್ರುವನಿಗೆ ಹೇಳಿದ್ದ ಮಾತುಗಳು ನೆನಪಾದವು. ಸರಿ, ಧ್ರುವನಿಗೆ ಆದ ಅಪಮಾನ ಸರಿಹೋಗಬೇಕಾದರೆ ಅವನು ಹುಡುಕಿದ ದಾರಿಯೊಂದೇ ಉಳಿದಿರುವುದು ಎಂದು ಅವಳಿಗೂ ಎನ್ನಿಸಿತು. ಅವಳು ಹೇಳಿದಳು “ಮಗು, ನಿನ್ನ ಚಿಕ್ಕಮ್ಮ ಹೇಳಿದ ಮಾತು ನಿಜ . ನಿನ್ನ ತಂದೆಗೆ ನಾನು ಅವರ ಹೆಂಡತಿ ಎಂದು ಹೇಳಿಕೊಳ್ಳುವುದಕ್ಕೂ ಆಗದು. ನನ್ನ ಮಗನಾದ ನೀನು ರಾಜನಾಗುವುದು ಹೇಗೆ? ಸುರುಚಿಯ ಮೇಲೆ ಕೋಪ ಮಾಡಿಕೊಂಡು ಫಲವಿಲ್ಲ. ನೀನು ಪರಮಾತ್ಮನನ್ನು ಪೂಜಿಸುವುದೇ ಸರಿಯಾದ ದಾರಿ. ಒಂದೇ ಮನಸ್ಸಿನಿಂದ ದೇವರ ಧ್ಯಾನ ಮಾಡು. ನಿನಗೆ ಶುಭವಾಗಲಿ” ಎಂದಳು.

ಧ್ರುವ ತಾಯಿಗೆ ನಮಸ್ಕರಿಸಿದ. ಅವಳು ಅವನ ಮೈದಡವಿ ಮುದ್ದಾಡಿ ಹರಸಿದಳು. ಐದು ವರ್ಷದ ಹುಡುಗ ದೇವರನ್ನು ಕಾಣುತ್ತೇನೆ ಎಂದು ಕಾಡಿಗೆ ಹೊರಟ.

ಧ್ರುವನ ಮುಂದೆ ಒಂದೇ ಗುರಿ-ದೇವರನ್ನು ಕಾಣುವುದು . ಕಲ್ಲು-ಮುಳ್ಳು, ಹಳ್ಳ-ದಿಣ್ಣೆಯೆನ್ನದೆ, ಹಸಿವು, ನೀರಡಿಕೆ, ವಿಶ್ರಾಂತಿಯ ಪರಿವೆಯಿಲ್ಲದೆ ಮುಂದೆ ನಡೆದ. ಅವನ ಬಾಯಲ್ಲಿ ದೇವರ ನಾಮ. ಅವನ ಮನಸ್ಸಿನಲ್ಲಿ ಆ ಪರಮಾತ್ಮನ ನಾಮಾಮೃತವು ತಾನೇ ತಾನಾಗಿ ತುಂಬಿತ್ತು.

ಕಾಡಿನಲ್ಲಿ

ನಡೆದು ನಡೆದು ಧ್ರುವ ದಟ್ಟ ಅರಣ್ಯ ಪ್ರವೇಶಿಸಿದ . ದಾರಿಗಾಗಿ ತಡವರಿಸುತ್ತಾ ನಡೆದ.  ಕಲ್ಲು ಮುಳ್ಳುಗಳಿಂದ ಅವನ ಮೃದು ಪಾದಗಳಿಗೆ ಗಾಯಗಳಾದವು. ದಿನವಿಡೀ ಹುಡುಗ ನಡೆದ. ಆಯಾಸ, ಹಸಿವು, ನೀರಡಿಕೆ. ಧ್ರುವನು ಬಳಲಿ ಬೆಂಡಾಗಿದ್ದನು. ರಾತ್ರಿಯಾಗುತ್ತಿತ್ತು. ಕಾಡಿನಲ್ಲಿ ಘೀಳಿಡುವ ಆನೆಗಳ ಹಿಂಡು, ಗರ್ಜಿಸುವ ಸಿಂಹ, ಹುಲಿ, ಚಿರತೆಗಳ ಆರ್ಭಟಗಳು. ಆದರೆ ಧ್ರುವನಿಗೆ ಇದರ ಅರಿವೆ ಇಲ್ಲ. ಅವನ ಬಾಯಲ್ಲಿ ‘ಓಂ ನಮೋ ನಾರಾಯಣಾಯ’ ಎಂಬ ತಾರಕ ಮಂತ್ರ, ಅದೇ ಶ್ರೀರಕ್ಷೆ. ಕತ್ತಲಾಯಿತು. ಆ ಗೊಂಡಾರಣ್ಯದಲ್ಲಿ ದಾರಿ ಕಾಣದೆಹೋಯಿತು. ಮುಂದೇನೂ ಮಾಡಲಾರದೆ, ಶಕ್ತಿಗುಂದಿ ಒಂದು ದೊಡ್ಡ ಮರದಡಿಯಲ್ಲಿ ಧ್ರುವನು ಕುಸಿದುಬಿದ್ದನು. ಬಾಯಲ್ಲಿ ಮಾತ್ರ ಎಡಬಿಡದೆ ನಾರಾಯಣನ ಧ್ಯಾನ. ಅಲೆದು ದಣಿದ ದೇಹ ಗಾಡ ನಿದ್ರೆಯಲ್ಲಿ ಲೀನವಾಯಿತು.

ಧ್ರುವನ ಭಕ್ತಿಗೆ ಮೆಚ್ಚಿ ಶ್ರೀಮನ್ನಾನಾರಾಯಣನು ಪ್ರತ್ಯಕ್ಷನಾದನು.

ರಾತ್ರಿ ಕಳೆಯಿತು. ಅರುಣೋದಯವಾಯಿತು. ಪಕ್ಷಿಗಳು ಗೂಡುಗಳಿಂದ ಹೊರಬಂದು ಚಿಲಿಪಿಲಿಗುಟ್ಟಿದುವು. ತಮ್ಮ ಗೂಡುಗಳಿಂದ ಹೊರಬಂದ ಚಿಕ್ಕಪುಟ್ಟ ಪ್ರಾಣಿಗಳು ತರಗೆಲೆಗಳ ಮೇಲೆ ಮಲಗಿರುವ ಮಗುವನ್ನು ಕಂಡವು. ಜಿಂಕೆಗಳು ಹೆದರುತ್ತಾ ಒಂದೊಂದೇ ಹೆಜ್ಜೆಗಳನ್ನಿಟ್ಟು ಮುಂದುವರಿದು, ಧ್ರುವನನ್ನು ಮೂಸಿ ನೋಡಿದವು. ಒಂದನ್ನು ಕಂಡು ಮತ್ತೊಂದರಂತೆ ನೆರೆದ ಪ್ರಾಣಿ ಪಕ್ಷಿಗಳ ಸಮೂಹವು ಧ್ರುವನನ್ನು  ಸುತ್ತುವರಿದಿತ್ತು. ಈ ಗದ್ದಲದಿಂದ ಹುಡುಗನಿಗೆ ಎಚ್ಚರ ಆಯಿತು.  ಕಣ್ತೆರೆದು ನೋಡಿದ. ಬೆಳಗಾಗಿದ್ದನು ಕಂಡು ತಕ್ಷಣ ಎದ್ದು ನಿಂತ. ಪ್ರಾಣಿ ಪಕ್ಷಿಗಳು ಹೆದರಿ ದಿಕ್ಕಾಪಾಲಾಗಿ ಚದುರಿದವು.

ಧ್ರುವನ ಬಾಯಲ್ಲಿ “ಓಂ ನಮೋ ನಾರಾಯಣಾಯ” ಮಂತ್ರವೊಂದೇ ಹೊರಡುತ್ತಿತ್ತು. ಪರಮಾತ್ಮನನ್ನು ಕಾಣುವೆನೆಂಬ ದೃಢ ವಿಶ್ವಾಸ ಧ್ರುವನಿಗೆ.

ಪೂಜ್ಯರಾದ ತಾವು ದಾರಿ ತೋರಿಸಿ

ಕಾಣದ ದೇವರನ್ನು ಕಂಡೇ ಕಾಣುವೆನೆಂಬ ಹಂಬಲದಿಂದ ಅರಸಿಬಂದ ಧ್ರುವನು, ದಡಬಡಿಸಿ ಎದ್ದು ನಡೆಯತೊಡಗಿದ. ಮೊದಲೇ ಕಾಡುಮೇಡು ತುಳಿದು, ಕಲ್ಲುಮುಳ್ಳುಗಳಿಂದ ಗಾಯಗಳಾಗಿದ್ದ ಪುಟ್ಟ ಪಾದಗಳು. ನಡೆಯುವುದೇ ಕಷ್ಟವಾಗಿತ್ತು. ಸತತ ಪ್ರಯಾಣದಿಂದ ಧ್ರುವನು ಮತ್ತೊಂದು ಹೆಜ್ಜೆ ಯಿಡಲಾರದ ಸ್ಥಿತಿಗೆ ತಲುಪಿದ್ದನು.

ಆ ಹೊತ್ತಿಗೆ ಧ್ರುವನಿಗೆ ಅನಿರೀಕ್ಷಿತವಾಗಿ ನಾರದರ ದರ್ಶನವಾಯಿತು. ನಾರದರು ಶ್ರೀವಿಷ್ಣುವಿನ ಮಹಾಭಕ್ತರು. ಮೂರು ಲೋಕಗಳಲ್ಲಿ ಸಂಚಾರ ಮಾಡುವವರು. ಶ್ರೀಮನ್ನಾರಾಯಣನ ಸ್ಮರಣೆ ಮಾಡುತ್ತಾ, ಕೈಯಲ್ಲಿ ತಾಳ ತಂಬೂರಿ ಹಿಡಿದು ಬರುತ್ತಿದ್ದ ಮಹಾನುಭಾವರ ದರ್ಶನದಿಂದ ಧ್ರುವನಿಗೆ ತುಂಬ ಸಂತೋಷವಾಯಿತು. ಅವರ ಪಾದಗಳಿಗೆ ನಮಸ್ಕಾರ ಮಾಡಿದ.

ನಾರದರು ಧ್ರುವನ ಎಲ್ಲಾ ವಿಚಾರಗಳನ್ನು ತಮ್ಮ ಜ್ಞಾನದೃಷ್ಟಿಯಿಂದ ತಿಳಿದುಕೊಂಡಿದ್ದರು. ಹುಡುಗನನ್ನು ಮೇಲೆತ್ತಿದರು. ಧ್ರುವನು ಸ್ವಾಮಿ, “ನಾನು ದೇವರನ್ನು  ನೋಡಬೇಕು. ಅದಕ್ಕಾಗಿ ಬಂದಿದ್ದೇನೆ. ಪೂಜ್ಯರಾದ ತಾವು ದಾರಿ ತೋರಿಸಿ” ಎಂದು ಬೇಡಿದ.

ನಾರದರು ಅವನ ಬೆನ್ನು ಸವರುತ್ತ, “ಮಗೂ, ನೀನು ಬಹಳ ಪುಟ್ಟ ಹುಡುಗ, ದೇವರನ್ನು ಕಾಣಬೇಕೆಂಬ ಹುಚ್ಚಿನಲ್ಲಿ ಇಂತಹ ದಟ್ಟವಾದ ಅರಣ್ಯದಲ್ಲಿ ಜೀವಕ್ಕೆ ಆಪತ್ತು ತಂದುಕೊಳ್ಳುತ್ತಿದ್ದೆಯಲ್ಲಾ! ಎಂತಹ ಸಾಹಸಕ್ಕೆ ಕೈಹಾಕಿದೆ?” ಎಂದು ಪ್ರೀತಿಯಿಂದ ಕೇಳಿದರು. ನಾರದರ ಹಸ್ತಸ್ಪರ್ಶದಿಂದ ಧ್ರುವನಲ್ಲಿ ನವಚೇತನ ಮೂಡಿಬಂದಂತಾಯಿತು.

‘ಈಗ ಹಿಂದಕ್ಕೆ ಹೋಗು…’

ಧ್ರುವನು ತನ್ನ ಚಿಕ್ಕ ತಾಯಿಯಿಂದಾದ ಅಪಮಾನ, ತನ್ನ ತಂದೆಯು ತೋರಿಸಿದ ಆಲಕ್ಷ್ಯ, ತನ್ನ ತಾಯಿಯ ಉಪದೇಶ ಎಲ್ಲವನ್ನೂ ಸವಿಸ್ತಾರವಾಗಿ ಹೇಳಿದನು. ನಾರದರು ಧ್ರುವನನ್ನು ಆಲಿಂಗಿಸಿಕೊಂಡು, “ಮಗೂ, ನಿನ್ನನ್ನು ಪಡೆದ ತಂದೆತಾಯಿಗಳು ನಿಜವಾಗಿ ಧನ್ಯರು. ನೀನು ದೇವರನ್ನು ಕಾಣಲು ಇಟ್ಟ ದಿಟ್ಟ ಹೆಜ್ಜೆ ತುಂಬಾ ಮೆಚ್ಚುವಂತಹದ್ದು! ಆದರೆ ಮಗೂ, ದೇವರನ್ನು ಕಾಣುವುದು ಅಷ್ಟು ಸುಲಭವಲ್ಲಪ್ಪಾ! ಅವನನ್ನು ಕಾಣಲು ಋಷಿಗಳೆ ಅನೇಕ ಜನ್ಮಗಳ ತಪಸ್ಸನ್ನು ಮಾಡಿದರೂ ಸಾಧ್ಯವಾಗದೆ ನಿರಾಶರಾಗಿದ್ದಾರೆ . ನೀನು ಕಾಡಿನಲ್ಲಿ ಅನ್ನಾಹಾರವನ್ನು ತ್ಯಜಿಸಿ ಓಡಾಡಿದರೆ ಆತನನ್ನು ಕಾಣಲಾರೆ. ನೀನು ಇಂದು ಯಾವುದೋ ದುಃಖಾನುಭವದಿಂದ ಕಂಗೆಟ್ಟು ದೇವರನ್ನು ಕಾಣಲು ಆಸೆಪಡುತ್ತಿ. ಆದರೆ ಕಷ್ಟಸುಖಗಳನ್ನು ಸಮದೃಷ್ಟಿಯಿಂದ ನೋಡುವವನು ಮಾತ್ರ ದೇವರನ್ನು ಕಾಣಬಲ್ಲ . ಇಂದು ನೀನು ಮಲತಾಯಿಯ ಮಾತಿನಿಂದ ನೊಂದು, ಅದರ ಪರಿಹಾರಕ್ಕಾಗಿ ದೇವರನ್ನು ಹುಡುಕುತ್ತಿರುವೆ. ಆದರೆ ದೇವರನ್ನು ಕಾಣಬೇಕಾದರೆ ಆಸೆ, ಕೋಪ ಇವೆಲ್ಲವನ್ನು ಬಿಟ್ಟಿರಬೇಕು. ಇದು ಬೇಕು, ಅದು ಬೇಕು ಎಂಬ ಆಸೆ ಹೋಗಿರಬೇಕು. ನೋಡು, ನಿನ್ನ ಚಿಕ್ಕ ತಾಯಿ ನಿನಗೆ ಅಪಮಾನ ಮಾಡಿದಳು ಎಂದು ಬಂದೆ ಅಲ್ಲವೆ? ಅವಳ ಮಾತುಗಳಿಂದ ನಿನಗೆ ಕೋಪ ಬಂದಿತು.  ನೀನು ವಿವೇಕಿಯಾಗಿದ್ದರೆ ನಿನ್ನ ಚಿಕ್ಕ ತಾಯಿ ಏನೇ ಹೇಳಿದರೂ ಶಾಂತವಾಗಿರಬೇಕಾಗಿತ್ತು. ಮನಸ್ಸಿಗೆ ಶಾಂತಿ ಸಮಾಧಾನಗಳು ಇಲ್ಲದೆ ಹೋದರೆ ದೇವರನ್ನು ನೋಡಲು ಸಾಧ್ಯವೆ? ನೀನು ಪ್ರಾಪಂಚಿಕ ಆಗುಹೋಗುಗಳನ್ನರಿತು, ನಿನ್ನ ಮನಸ್ಸನ್ನು ಪರಿಪಕ್ಷ ಮಾಡಿಕೊಂಡರೆ ದೇವರನ್ನು ಕಾಣಬಲ್ಲೆ. ಈಗ ಹಿಂದಕ್ಕೆ ಹೋಗು. ಎಲ್ಲರ ಹಾಗೆ ಬದುಕು. ಕಷ್ಟ, ಸುಖ ಎಲ್ಲವನ್ನೂ ಅನುಭವಿಸಿ ಮುದುಕನಾದನಂತರ ಕಾಡಿಗೆ ಬಾ,  ತಪಸ್ಸು ಮಾಡು, ದೇವರನ್ನು ಕಾಣುವೆ”  ಎಂದರು.

ಮಂತ್ರೋಪದೇಶ

ಆದರೆ, ಧ್ರುವನು ಚಿಕ್ಕವನಾದರೂ ಈ ಮಾತು ಆತನಿಗೆ ರುಚಿಸಲಿಲ್ಲ. “ಮಹಾತ್ಮರೇ, ನಾನು ಕ್ಷತ್ರಿಯ ಕುಲದವನು.ನಿಮ್ಮ ಹಿತಬೋಧನೆಯಿಂದ ನನ್ನ ತೀರ್ಮಾನ ಬದಲಾಗುವುದಿಲ್ಲ. ದೇವರನ್ನು ನೋಡುತ್ತೇನೆ ಎಂದು ಬಂದೆ . ನನಗೆ ದಾರಿ ತೋರಿಸಿ, ಆಶೀವರ್ದಿಸಿರಿ, ನನ್ನ ತಾಯಿಯು, ಕಾಡಿನಲ್ಲಿ ತಪಸ್ಸನ್ನು ಮಾಡುವ ಋಷಿಗಳಿಗೆ ಆತನು ಕಾಣಿಸಿಕೊಳ್ಳುವನು ಎಂದಿರುವಳು. ದೇವರನ್ನು ಪ್ರೀತಿಸುವವನ ಬೆಂಗಾವಲಾಗಿ ಆತನಿರುತ್ತಾನೆ ಎಂದಿದ್ದಾಳೆ. ನನಗೀಗ ಸಿಂಹಾಸನ ಬೇಡ. ನಮ್ಮ ಹಿರಿಯರು ಯಾರೂ ಪಡೆಯದೆ ಇರುವ ಪದವಿ ಬೇಕು. ದೇವರನ್ನು ಕಂಡರೆ ಹಾಗೇ ಬೇಡುತ್ತೇನೆ. ದಾರಿ ತೋರಿಸಿರಿ” ಎಂದು ಪಾದಕ್ಕೆರಗಿದನು.

ನಾರದರಿಗೆ ಚಿಕ್ಕ ಹುಡುಗನ ಧೈರ್ಯ ಮತ್ತು ಆತ್ಮವಿಶ್ವಾಸಗಳನ್ನು ಕಂಡು ಸಂತೋಷವಾಯಿತು. ಅವರು, “ಮಗೂ, ನಿನ್ನ ತಾಯಿಯು ನಿನಗೆ ಹೇಳಿದ ಮಾತುಗಳು ನೆನಪಿದೆ ತಾನೆ? ಅವೇ ದೊಡ್ಡ ಉಪದೇಶ. ದೇವರನ್ನು ಒಂದೇ ಮನಸ್ಸಿನಿಂದ ಧ್ಯಾನ ಮಾಡು. ಯಮುನಾ ನದಿಯ ತೀರದಲ್ಲಿ ಮಧುವನ ಇದೆ. ನಿರ್ಮಲ ಮನಸ್ಸಿನಿಂದ ದೇವರ ಧ್ಯಾನಮಾಡು. ಮನಸ್ಸಿನಲ್ಲಿ ದೇವರ ಮೂರ್ತಿಯನ್ನು ನಿಲ್ಲಿಸಿಕೊ. ಮುದ್ದಾದ ಎಳೆಯ ಮಗುವಿನ ಮುಖದಂತೆ ಅವನ ಮುಖ, ತೇಜಸ್ಸಿನಿಂದ ಹೊಳೆಹೊಳೆಯುತ್ತಿರುತ್ತದೆ. ತುಟಿಯಲ್ಲಿ ಮುಗುಳ್ನಗೆ, ಬಹು ಸುಂದರವಾದ, ಬೆಳಕನ್ನು ಸುತ್ತ ಚೆಲ್ಲುವ ಮೂರ್ತಿ ಅವನದು. ಅಂತಹ ಮೂತಿಯನ್ನು ನಿಲ್ಲಿಸಿಕೊಂಡು, ಮನಸ್ಸಿಗೆಲ್ಲ ಆ ಮೂರ್ತಿಯನ್ನೆ ಕೇಂದ್ರ ಮಾಡಿಕೊಂಡು ಧ್ಯಾನಮಾಡು, ಮನಸ್ಸು ಬೇರೆಲ್ಲೂ ಹೋಗದಂತೆ ತಡೆ. ದೇವರು ನಿಜವಾದ ಭಕ್ತಿಗೆ ಒಲಿಯುತ್ತಾನೆ, ನಿನಗೆ ಶುಭವಾಗಲಿ ಎಂದು ಹೇಳಿದರು. ಅವನಿಗೆ ಶ್ರೀವಾಸುದೇವ ಮಂತ್ರವನ್ನು ಉಪದೇಶ ಮಾಡಿದರು. ಅವನಿಗೆ ಆಶೀರ್ವಾದ ಮಾಡಿದರು.

ಇಂತಹ ಪೂಜ್ಯರ ಉಪದೇಶ ಮತ್ತು ಆಶೀರ್ವಾದಗಳಿಂದ ಧ್ರುವನ ಹೃದಯ ಸಂತೋಷದಿಂದ ತುಂಬಿತು. ಆಯಾಸವೆಲ್ಲ ಮರೆತುಹೋಯಿತು. ದೇವರನ್ನು ಕಾಣುತ್ತೇನೆ ಎಂಬ ಹಿಗ್ಗಿನಿಂದ ಅವರ ಪಾದಗಳಿಗೆ ನಮಸ್ಕಾರ ಮಾಡಿ ಮಧುವನದತ್ತ ಹೆಜ್ಜೆ ಹಾಕಿದ.

‘ನಾನು ತಪ್ಪು ಮಾಡಿದೆ’

ಧ್ರುವನನ್ನು ಕಳುಹಿಸಿಕೊಟ್ಟು ನಾರದರು ಉತ್ತಾನಪಾದನ ಅರಮನೆಗೆ ಬಂದರು. ಸುರುಚಿ ಧ್ರುವನನ್ನು ಹೀಯಾಳಿಸಿ ಮಾತನಾಡಿದಾಗ ಅವಳಿಗೆ ಹೆದರಿ ರಾಜನು ಸುಮ್ಮನಿದ್ದ. ಆದರೆ ಹುಡುಗನ ದುಃಖ, ಕಣ್ಣೀರು ಎಲ್ಲ ಅವನ ಕಣ್ಣಿಗೆ ಕಟ್ಟಿದಂತಾಯಿತು. ಏನೇ ಆದರೂ ಅವನನ್ನು ಮರೆಯಲು ಸಾಧ್ಯವಾಗಲಿಲ್ಲ. ‘ಧ್ರುವನನ್ನು ಕರೆದುಕೊಂಡು ಬನ್ನಿ’ ಎಂದು ಸುನೀತಿಯ ಮನೆಗೆ ದೂತರನ್ನು ಕಳುಹಿಸಿದ. ಅವರು ಬಂದು, ಹುಡುಗನು ‘ದೇವರನ್ನು ನೋಡುತ್ತೇನೆ’ ಎಂದು ಕಾಡಿಗೆ ಹೋಧ ಎಂದು ಹೇಳಿದರು. ರಾಜನಿಗೆ ದುಃಖ ಒತ್ತರಿಸಿ ಬಂದಿತು.

ನಾರದರು ಬಂದಾಗ ಉತ್ತಾನಪಾದನು ದುಃಖದಿಂದ ಮಿಂಚಿಹೋದ ಕಾರ್ಯಕ್ಕೆ ಪಶ್ಚಾತ್ತಾಪ ಪಡುತ್ತಿದ್ದನು. ಎಲ್ಲರೂ ಸುರುಚಿಯನ್ನು ಶಪಿಸುತ್ತಿದ್ದರು. ಅಹಂಕಾರದಿಂದ ಮೆರೆಯುತ್ತಿದ್ದ ಸುರುಚಿ ಜನರಿಗೆ ಮುಖ ತೋರಿಸಲಾಗದೆ ಮೂಲೆ ಹಿಡಿದಿದ್ದಳು. ಮಗನನ್ನು ಕಳೆದುಕೊಂಡಿದ್ದ ಸುನೀತಿಯು ಅನ್ನಾಹಾರಗಳನ್ನು ಮುಟ್ಟದೆ ಕೃಶಳಾಗಿದ್ದಳು . ನಾರದ ಮಹಾಮುನಿ ಉತ್ತಾನಪಾದನ ಆಸ್ಥಾನಕ್ಕೆ ಬಂದರು. ರಾಜನು ಅವರನ್ನು ಗೌರವದಿಂದ ಬರಮಾಡಿಕೊಂಡ. ಉನ್ನತ ಪೀಠದಲ್ಲಿ ಕುಳ್ಳಿರಿಸಿದ. ನಾರದ ಮಹಾಮುನಿಗಳು, ರಾಜೇಂದ್ರ! ಏನಿದು! ನಿನ್ನ ಮುಖವು ಯಾವುದೋ ಚಿಂತಗೊಳಗಾದಂತಿದೆ. ಕಾರಣವೇನು?” ಎಂದು ಕೇಳಿದರು.

ರಾಜನು, ಪೂಜ್ಯರೇ ದುರ್ದೈವಿಯಾದ ನಾನು ತಪ್ಪುಮಾಡಿದೆ. ಸುರುಚಿಯ ಮೇಲಿನ ಪ್ರೀತಿಯಿಂದ ನನ್ನ ಮುದ್ದು ಬಾಲಕನನ್ನು ಅವನ ತಾಯಿಯೊಡನೆ ಹೊರಗಟ್ಟಿದೆನು. ತಾಯಿಯೊಡನೆ ಸುಖವಾಗಿದ್ದ ಧ್ರುವಕುಮಾರನನ್ನು ಅವಮಾನಿಸಿ ಆತನನ್ನು ಕಾಡಿಗಟ್ಟಿದ ಪಾಪವನ್ನು ಇಂದು ನಾನು ಕಟ್ಟಿಕೊಂಡಿರುವೆನು. ಮಗು ಕಾಡಿನಲ್ಲಿ ಏನು ಕಷ್ಟಪಡುತ್ತಿದ್ದಾನೊ, ಯಾವ ಕಾಡಮೃಗಗಳಿಗೆ ತುತ್ತಾದನೋ!” ಎಂದು ದುಃಖಿಸಿದನು.

‘ಪರಿಣಾಮ ಒಳ್ಳೆಯದೇ ಆಗುತ್ತದೆ’

ನಾರದನು, “ರಾಜೇಂದ್ರಾ! ನಿನ್ನ ಮಗ ಧ್ರುವನು ಅಸಾಧಾರಣ ಶಕ್ತಿಯುಳ್ಳವನು, ಭಗವಂತನೇ ಆತನ ಶ್ರೀರಕ್ಷೆಯಾಗಿದ್ದಾನೆ , ಚಿಂತಿಸಬೇಡ. ಧ್ರುವನು ತನ್ನ ಛಲದಿಂದ, ಯಾರಿಗೂ ದೊರಕದ ಪದವಿಯನ್ನು ಪಡೆದು ಹಿಂದಿರುಗುವನು, ಚಿಂತಿಸದಿರು,” ಎಂದು ಸಮಧಾನಗೊಳಿಸಿದನು. ಆದರೂ, ಉತ್ತಾನಪಾದನು ಪಶ್ಚಾತ್ತಾಪದಿಂದ “ಸ್ವಾಮೀ, ನಾನು ಅಂಧನಾಗಿ, ಪೂರ್ವಾಪರ ವಿವೇಚನೆಯಿಲ್ಲದೆ ಮಾಡಿದ ಶತಾಪರಾಧವನ್ನು ಕ್ಷಮಿಸಿ” ಎಂದು ನಮಸ್ಕಾರ ಮಾಡಿದ. ನರದನು ರಾಜನನ್ನು ಸಂತೈಸುತ್ತ “ರಾಜಾ! ನೀನು ಮಾಡಿದ್ದು ತಪ್ಪು. ಆದರೂ ಇದರ ಪರಿಣಾಮ ಒಳ್ಳೆಯದೇ ಆಗುತ್ತದೆ. ನೀನು, ನಿನ್ನ ಪಟ್ಟದ ರಾಣಿಯಾದ ಸುನೀತಿಯನ್ನು ಅರಮನೆಗೆ ತಂದು ಮರ್ಯಾದೆಯಿಂದ ನೋಡಿಕೋ” ಎಂದು ಬುದ್ಧಿ ಹೇಳಿದರು. ನಾರಾಯಣ ನಾಮಾಮೃತವನ್ನು ಹಾಡುತ್ತಾ ಹೊರಟುಹೋದರು.

‘ಧ್ರುವಾ! ಎದ್ದೇಳು!’

ಧ್ರುವನು ಕೂತಲ್ಲಿಂದ ಕದಲಲೇ ಇಲ್ಲ. ದಿವ್ಯರಾದ ವಾಸುದೇವ ಮಂತ್ರವನ್ನೇ ಉಚ್ಚರಿಸುತ್ತಾ, ತನ್ನ ಹೃದಯದಲ್ಲಿ ಆ ಪರಮಾತ್ಮನ ದಿವ್ಯಮಂಡಗಳ ಸ್ವರೂಪವನ್ನು ನೆಲೆಗೊಳಿಸಿದನು. ಅನ್ನಾಹಾರಗಳಿಲ್ಲದೆ ಮಳೆಬಿಸಿಲೆನ್ನದೆ, ಯಾವುದೇ ಬಾಹ್ಯ ಪ್ರಪಂಚದ ಪರಿವಯಿಲ್ಲದೆ, ಆ ದಿವ್ಯ ಮಂತ್ರವೊಂದನ್ನೇ ಜಪಿಸತೊಡಗಿದನು. ಒಂದು ದಿನ ಕಳೆಯಿತು , ಎರಡು ದಿನಗಳಾದುವು , ತಿಂಗಲೇ ಸಾಗಿ ಹೋಯಿತು . ಧ್ರುವನ ತಪಸ್ಸು ಕಠಿಣವಾಗತೊಡಗಿತು. ಹೃದಯದಲ್ಲಿ ನಿಲ್ಲಿಸಿಕೊಂಡ ಕರುಣಾಸಾಗರನ ಮೂರ್ತಿಯಲ್ಲಿ ತನ್ನನ್ನು ಅರ್ಪಿಸಿಕೊಂಡನು. ತಿಂಗಳುಗಳು ಉರುಳಿದವು. ಮೊದಮೊದಲು ಕೈಗೆ ಸಿಕ್ಕ ಹಣ್ಣುಗಳನ್ನು ತಿನ್ನುತ್ತಿದ್ದ. ಬರುಬರುತ್ತ ಆಹಾರದ ಯೋಚನೆಯೇ ಇಲ್ಲವಾಯಿತು. ದೇಹ ಮನಸ್ಸುಗಳೆಲ್ಲ ವಾಸುದೇವನ ಧ್ಯಾನದಲ್ಲಿ ಲೀನವಾದವು. ಧ್ರುವನ ಘೋರ ತಪಸ್ಸಿನಿಂದ ಅವನ ಸುತ್ತ ಒಂದು ದಿವ್ಯ ತೇಜಸ್ಸು ಪ್ರಕಾಶಿಸತೊಡಗಿತು. ಕಾಡಿನ ದುಷ್ಟ ಮೃಗಗಳು ಇದರಿಂದ ಗಾವುದ ಗಾವುದ ದೂರ ಬೆದರಿ ಓಡಿದವು. ಧ್ರುವನ ತಪೋಜ್ವಾಲೆ ಮೂರು ಲೋಕಗಳನ್ನೇ ಸುಡತೊಡಗಿತು.

ಧ್ರುವನ ಭಕ್ತಿಗೆ, ದೃಢ ಮನಸ್ಸಿಗೆ ಶ್ರೀಮನ್ನಾರಾಯಣನು ಮೆಚ್ಚಿದನು. ಶಂಖಚಕ್ರಗದಾಧಾರಿಯಾದ ಶ್ರೀಮನ್ನಾರಾಯಣನು ಪ್ರತ್ಯಕ್ಷನಾದನು. ಹಸುಳೆ ಧ್ರುವನ ತಲೆಯ ಮೇಲೆ ತನ್ನ ಅಮೃತಹಸ್ತವನ್ನಿಟ್ಟು, “ಧ್ರುವಾ! ಎದ್ದೇಳು, ನಿನ್ನನ್ನು ಮೆಚ್ಚಿರುವೆನು” ಎಂದನು. ಧ್ರುವನು ಕಣ್ಣು ಬಿಟ್ಟ. ತನ್ನ ಹೃದಯದಲ್ಲಿ ಪ್ರತಿಷ್ಠಿಸಿಕೊಂಡಿದ್ದ ಅದೇ ಮಂಗಳ ಸ್ವರೂಪಿ ತನ್ನ ಮುಂದೆ ಪ್ರತ್ಯಕ್ಷನಾಗಿರುವುದನ್ನು ಕಂಡನು. ಯಾರ ದರ್ಶನಕ್ಕಾಗಿ ಹಾತೊರೆದು, ತನ್ನ ನೆಚ್ಚಿನ ತಾಯಿ, ರಾಜ್ಯ ಅನ್ನಾಹಾರಗಳನ್ನು ಬಿಟ್ಟು ಪರಿತಪಿಸಿದನೋ ಆ ಕರುಣಾಸಾಗರನು ಹತ್ತಿರದಲ್ಲಿಯೇ ನಸುನಗುತ್ತಾ ನಿಂತಿದ್ದನು.

ಧ್ರುವನಿಗೆ ರೋಮಾಂಚನವಾಯಿತು. ಆಶ್ಚರ್ಯ ಸಂತೋಷಗಳಿಂದ ಬಾಯಿಂದ ಮಾತೇ ಹೊರಡದಂತಾಯಿತು. ಪರಮಾತ್ಮನ ಅಡಿದಾವರೆಗೆ ದಂಡಾಕಾರವಾಗ ನಮಸ್ಕರಿಸಿದ. ಎದ್ದು ಆ ದಿವ್ಯಮಂಗಳ ಮೂರ್ತಿಯನ್ನು ಕಣ್ಣಿನ ತುಂಬ ತುಂಬಿಕೊಳ್ಳುವಂತೆ ರೆಪ್ಪೆ ಹಾಕದೆ ನೋಡಿದ. ಧ್ರುವನಿಗೆ ಮಾತನಾಡಬೇಕು, ಪರಮಾತ್ಮನನ್ನು ಹೊಗಳಬೇಕು ಎಂಬ ತವಕ. ಆದರೆ ಬಾಯಿ ತೆರೆಯಲು ಸಾಧ್ಯವೇ ಆಗಲಿಲ್ಲ. ಶ್ರೀವಿಷ್ಣುವು ಪ್ರೀತಿಯಿಂದ ಅವನ ಕೆನ್ನೆಗಳನ್ನು ಸವರಿದನು. ಆ ಅಮೃತ ಸ್ಪರ್ಶದಿಂದ ಮಾತನಾಡಲು ಸಾಧ್ಯವಾಯಿತು.

ನಿನ್ನ ಭಕ್ತನಾಗಿದ್ದರೆ ಸಾಕು

ಧ್ರುವನು ಪರಮಾತ್ಮನನ್ನು ಸಂತೋಷದಿಂದ, ಕೃತಜ್ಞತೆಯಿಂದ ಹೊಗಳಿದನು. “ಪ್ರಭೂ, ನಿನ್ನ ಮಹಿಮೆ ಅಪಾರ. ಭಕ್ತಿಯಿಂದ ಬೇಡಿದುದನ್ನು ಕೊಡುವ ಕಲ್ಪವೃಕ್ಷ ನೀನು. ಸೃಷ್ಟಿಯಲ್ಲಿ ಎಲ್ಲೆಲ್ಲಿಯೂ ಇರುವೆ. ಎಂತಹ ಜ್ಞಾನಿಗೂ ನಿನ್ನನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ. ನನ್ನಂತಹ ಹುಡುಗನ ಪಾಡೇನು? ಆಗ ತಾನೆ ಹೆತ್ತ ಕರುವನ್ನು ಆಕಳು ಸಂರಕ್ಷಿಸುವಂತೆ ನನ್ನನ್ನು ನೀನೇ ಕಾಪಾಡಬೇಕು” ಎಂದು ಬೇಡಿದನು.

ಧ್ರುವನು ಕಾಡಿಗೆ ಬರುವಾಗ ಇದದ ಒಂದೇ ಇಚ್ಛೆಯೆಂದರೆ ಪರಮಾತ್ಮನನ್ನು ನೋಡುವುದು. ಆತನನ್ನು ಕಂಡ ಮೇಲೆ ಏನು ಕೇಳಬೇಕೆಂದೂ ತಿಳಿಯದಾದನು. ದೇವಾ! ನಿನ್ನ ದರ್ಶನ ಪಡೆಯಲೆಂದೇ ಈ ತಪಸ್ಸನ್ನಾಚರಿಸಿದೆನು. ನನಗೆ ನಿನ್ನ ದರ್ಶನವವಾದ ಮೇಲೆ ಮತ್ತೇನು ಕೇಳಲಿ? ನಾನು ಚಿಕ್ಕವನು , ನನಗೆ ನಿನ್ನನ್ನು ಹೇಗೆ ಪೂಜಿಸಿ, ಗೌರವಿಸಬೇಕೋ ತಿಳಿಯದು.  ನಾನು ನಿನ್ನಿಂದ ಏನನ್ನೂ ಬೇಡೆನು. ಬದಲು, ನಿನ್ನ ಭಕ್ತನಾಗಿರುವ ಆ ಉಚ್ಚಪದವಿಯೊಂದನ್ನು ಮಾತ್ರ ಕರುಣಿಸು” ಎಂದು ಹೇಳಿದ.

ಬಾಲಕನ ಮಾತುಗಳನ್ನು ಕೇಳಿ ಅವನನ್ನು ಆಲಂಗಿಸಿಕೊಂಡು “ಮಗೂ, ನಿನ್ನ ಆಸೆಗಳೆಲ್ಲಾ ನೆರವೇರುವುವು. ನಿನ್ನ ರಾಜ್ಯಕ್ಕೆ ಹಿಂದಕ್ಕೆ ಹೋಗಿ , ಪ್ರಾಪ್ತವಯಸ್ಸಿನಲ್ಲಿ ಪಟ್ಟವೇರಿ, ಧರ್ಮದಿಂದ ರಾಜ್ಯವಾಳು. ಪ್ರತಿಯೊಬ್ಬ ಪ್ರಜೆಯಲ್ಲೂ ನಿನ್ನ ಪ್ರತಿರೂಪವನ್ನು ಕಂಡು, ಅವರ ಆಸೆ ಅಭಿಲಾಷೆ, ಗೌರವ, ಪ್ರತಿಷ್ಠೆ, ಸುಖ, ದುಃಖಗಳಲ್ಲಿ ಭಾಗಿಯಾಗು. ಧರ್ಮದಿಂದ ರಾಜ್ಯವಾಳಿ, ಯಾರೂ ಇಂದಿನವರೆಗೆ ಗಳಿಸದ ಉಚ್ಚ ಪದವಿಯಾದ ನಕ್ಷತ್ರ ಲೋಕವನ್ನು ನೀನು ಸೇರು”  ಎಂದು ಆಶೀರ್ವದಿಸಿ, ಅಂತರ್ಧಾನನಾದನು.

ಪರಮಾತ್ಮನು ಹೊರಟುಹೋದ ಮೇಲೆ ಧ್ರುವನು ನೀರಿನಿಂದ ಹೊರಬಂದ ಮೀನಿನಂತೆ ಪರಿತಪಿಸಿದನು. ಪರಮಾತ್ಮನು ಪ್ರತ್ಯಕ್ಷನಾದಾಗ ನಾನು ಏನು ಅಪಚಾರ ಮಾಡಿದೆನೊ! ಆತನಲ್ಲಿ ಲೀನವಾಗುವ ಬಯಕೆಯನ್ನು ಬಿಟ್ಟು, ಮತ್ತೊಮ್ಮೆ ಈ ಪ್ರಾಪಂಚಿಕ ಆಗುಹೋಗುಗಳಿಗೆ ಬಲಿಯಾದೆನೆ? ಎಂದು ವಿಷಾದಪಟ್ಟನು. ನನ್ನನ್ನು ನಿನ್ನಲ್ಲಿ ಐಕ್ಯ ಮಾಡಿಕೊ ಎಂದು ಭಗವಂತನನ್ನು ಬೇಡಿಕೊಳ್ಳಬೇಕಾಗಿತ್ತು, ಹಾಗೆ ಮಾಡದೆ ಏನೋ ಬೇಡಿಕೊಂಡು ಬಂದೆನೇ! ಚಕ್ರವರ್ತಿಯ ಬಳಿ ಹೋಗಿ ಬೊಗಸೆ ಬತ್ತವನ್ನು ಬೇಡಿದ ಹಾಗೆ ಆಯಿತು ನನ್ನ ಸ್ಥಿತಿ ಎಂದು ಬೇಸರಪಟ್ಟುಕೊಂಡ. ಹಿಂದಕ್ಕೆ ಹೋಗಿ ರಾಜ್ಯವಾಳು ಎಂದು ಮಹಾವಿಷ್ಣುವೇ ಹೇಳಿದ್ದನಲ್ಲವೆ? ಈಗ ಮತ್ತೆ ಧ್ರುವನ ಮನಸ್ಸು ತಾಯಿಯ ಕಡೆಗೆ ತಿರುಗಿತು. ತನ್ನ ರಾಜ್ಯದತ್ತ ಹೆಜ್ಜೆಯಿಟ್ಟನು. ತನ್ನ ತಾಯಿಯು ತನ್ನ ಅಗಲುವಿಕೆಯಿಂದ ಅದೆಷ್ಟು ಪರಿತಪಿಸುವಳೋ ಎಂದು ಯೋಚನೆಯಾಯಿತು. ಆದರೂ ಭಗವಂತನನ್ನು ಕಂಡು ಧ್ರುವನಲ್ಲಿ ಹೊಸ ಶಕ್ತಿ, ಹೊಸ ಗೆಲವು ಮತ್ತು ಹೊಸ ತೇಜಸ್ಸು ಹೊರಹೊಮ್ಮುತ್ತಿತ್ತು.

ಮರಳಿ ಅರಮನೆಗೆ

ರಾಜ ಉತ್ತಾನಪಾದನಿಗೆ ಧ್ರುವನು ತನ್ನ ಪ್ರತಿಜ್ಞೆಯನ್ನೀಡೇರಿಸಿ, ರಾಜ್ಯಕ್ಕೆ ಮರಳುತ್ತಿರುವನೆಂದು ತಿಳಿಯಿತು. ಮನಸ್ಸಿನ ಆತಂಕ ಕಳೆಯಿತು, ತುಂಬ ಸಂತೋಷವಾಯಿತು. ರಾಜನು ತನ್ನ ಮಂತ್ರಿಗಳನ್ನೂ ರಾಜ್ಯದ ಹಿರಿಯರನ್ನೂ ಸಂಗಡ ಕರೆದುಕೊಂಡು ಮಂಗಳವಾದ್ಯಗಳೊಡನೆ ಧ್ರುವನನ್ನು ಬರಮಾಡಿಕೊಳ್ಳಲು ಹೊರಟನು. ಧ್ರುವನನ್ನು ನೋಡುತ್ತಲೆ ಉತ್ತಾನಪಾದನು ಅವನನ್ನು ಪ್ರೀತಿಯಿಂದ ಆಲಂಗಿಸಿಕೊಂಡನು. ಮಲತಾಯಿಯಾದ ಸುರುಚಿಯು ತನ್ನ ಪಾದಗಳಿಗೆ ಬಿದ್ದು ನಮಸ್ಕರಿಸಿದ ಧ್ರುವನನ್ನೆತ್ತಿ, ಆಲಿಂಗಿಸಿ, ಆನಂದಬಾಷ್ಪದೊನಡೆ ಆಶೀರ್ವದಿಸಿದಳು. ತಾಯಿ ಸುನೀತಿಯ ಸಂತೋಷಕ್ಕಂತೂ ಮಿತಿಯೇ ಇಲ್ಲ. ದುಃಖ ಸಂತೋಷ ಎರಡೂ ಬೆರೆತು ಅವಳಿಗೆ ಮಾತೇ ಹೊರಡದು. ಮಗನನ್ನು ಬಿಗಿದಪ್ಪಿದಳು. ಧ್ರುವನನ್ನು ಪಟ್ಟದಾನೆಯ ಮೇಲೆ ಕುಳ್ಳಿರಿಸಿ, ಉತ್ತಾನಪಾದನು ತನ್ನ ಪಟ್ಟಣದತ್ತ ಹೊರಟನು. ಪುರನಿವಾಸಿಗಳೆಲ್ಲಾ ಉತ್ಸಾಹದಿಂದ ಪಟ್ಟಣವನ್ನು ತಳಿರುತೋರಣಗಳಿಂದ ಅಲಂಕರಿಸಿದ್ದರು. ಅಲ್ಲಲ್ಲಿ ಪುಷ್ಪಮಾಲಿಕೆಗಳು, ಮುತ್ತಿನ ಕುಚ್ಚುಗಳು ತೂಗುತ್ತಿದ್ದವು. ಪ್ರತಿ ಮನೆಯಲ್ಲಿ ಬೆಳಗುತ್ತಿದ್ದ ಆರತಿ ದೀಪಗಳು. ಸ್ತ್ರೀಯರು ಫಲಪುಷ್ಪಗಳಿಂದ ತುಂಬಿದ ತಟ್ಟೆಗಳನ್ನು ಹಿಡಿದು ಸಾಲಾಗಿ ನಿಂತಿದ್ದರು. ಸಕಲ ಪುರಜನರಿಂದ ಸತ್ಕಾರ ಪಡೆದು, ಅವರ ಮಂಗಳಾಶೀರ್ವಾದಗಳೊಡನೆ ಧ್ರುವನು ಪಟ್ಟಣ ಸೇರಿದನು.

ಧ್ರುವ ಚಕ್ರವರ್ತಿ

ಉತ್ತಾನಪಾದನು ಧ್ರುವನಿಗೆ ಸಕಲ ವಿದ್ಯೆಯನ್ನು ಕಲಿಸಿದನು. ತನಗೆ ವಯಸ್ಸಾದಾಗ ರಾಜ್ಯಭಾರ ನಡೆಸಲು ಸರ್ವವಿದ್ಯಾಪಾರಂಗತನಾದ ಧ್ರುವನಿಗೆ ಪಟ್ಟಕಟ್ಟಲು ಏರ್ಪಾಡು ಮಾಡಿದನು. ಪ್ರಜಾಪತಿ ಶಿಂಶುಮಾರನೆಂಬ ರಾಜನ ಮಗಳಾದ ಭ್ರಮಿಯೆಂಬ ರಾಜಕುಮಾರಿಯನ್ನೂ ಮತ್ತು ವಾಯುವಿನ ಮಗಳಾದ ಇಳೆಯೆಂಬ ಮತ್ತೊಬ್ಬ ರಾಜಕುಮಾರಿಯನ್ನೂ ತಂದು ಧ್ರುವನಿಗೆ ವಿವಾಹ ಮಾಡಿದನು. ಮಗನಿಗೆ ಪಟ್ಟಾಭಿಷೇಕ ಮಾಡಿದನು. ತಾನು ತಪಸ್ಸಿಗಾಗಿ ಕಾಡಿಗೆ ಹೊರಟುಹೋದನು. ಧ್ರುವನು ಪ್ರಜೆಗಳನ್ನು ಪ್ರೀತಿಯಿಂದ ಕಾಣುತ್ತ ರಾಜ್ಯಭಾರ ಮಾಡಿದನು. ಧ್ರುವನನ್ನು ಸುರುಚಿಯ ಮಗ ಉತ್ತಮನು ಎಡಬಿಡದೆ ಪ್ರೀತಿಯಿಂದ ಅನುಸರಿಸಿದನು.

ಯಕ್ಷನಗರ ಸ್ಮಶಾನವಾಯಿತು

ಒಮ್ಮೆ ಉತ್ತಮನು ಬೇಟಗಾಗಿಹೊರಟ . ಅವನು ಅರಣ್ಯ ಸುತ್ತುತ್ತಿದ್ದಾಗ, ಬಲಾಢ್ಯನಾದ ಒಬ್ಬ ಯಕ್ಷನು ಅವನನ್ನು ಹಿಡಿದು ಕೊಂದನು. ತನ್ನ ಮಗನು ಬೇಟೆಯಿಂದ ಹಿಂದಿರುಗಲಿಲ್ಲ ಎಂದು ತಾಯಿ ಸುರುಚಿಗೆ ಯೋಚನೆಯಾಯಿತು. ಆತನನ್ನು ಹುಡುಕಲು ಕಾಡಿಗೆ ಹೋದಳು. ಯಕ್ಷನ ಯಕ್ಷಿಣೀ ಕಾಡ್ಗಿಚ್ಚಿಗೆ ಬಲಿಯಾದಳು. ತನ್ನ ನೆಚ್ಚಿನ ತಮ್ಮ ಮತ್ತು ಚಿಕ್ಕ ತಾಯಿಯರು ಯಕ್ಷನಿಂದ ಸತ್ತ ಸುದ್ದಿ ಧ್ರುವನಿಗೆ ತಿಳಿಯಿತು. ಅವನಿಗೆ ಬಹಳ ದುಃಖವಾಯಿತು, ಕೋಪ ಬಂದಿತು. ಯಕ್ಷರೊಡನೆ ಯುದ್ಧಸನ್ನದ್ಧನಾದನು.

ಧ್ರುವನು ಯಕ್ಷರ ನಿವಾಸಸ್ಥಾನವಾದ ಆಲಿಕಾಪುರಿ ಪಟ್ಟಣವನ್ನು ಮುತ್ತಿದ. ಯಕ್ಷರನ್ನು ಸದೆಬಡಿಯಲು ಪ್ರಾರಂಭಿಸಿದ. ಧ್ರುವನ ಬಾಣವರ್ಷದಿಂದ ಯಕ್ಷನು ತರಗೆಲೆಗಳಂತೆ ಉರುಳಿದರು. ಯಕ್ಷರು ಮಾಯಾವಿದ್ಯೆಯನ್ನು ಬಳಸಿದರು. ಕತ್ತಲು ಕವಿಯಿತು. ಪ್ರಚಂಡ ಬಿರುಗಾಳಿ ಎದ್ದಿತು. ಹಾವುಗಳು, ಸಿಂಹಗಳು ಅಟ್ಟಿಸಿಕೊಂಡು ಬಂದವು. ಧ್ರುವನಿಗೆ ಕೋಪ ಬಂದಿತು. ತನ್ನ ಬತ್ತಳಿಕೆಯಿಂದ ನಾರಾಯಣಾಸ್ತ್ರವನ್ನು ತೆಗೆದು ಪ್ರಯೋಗಿಸಿದ. ಯಕ್ಷರು, ಯಕ್ಷಪತ್ನಿಯರು, ಮಕ್ಕಳು ಹತರಾಗಿ ಅಲಕಾಪುರಿಯು ಸ್ಮಶಾನದಂತಾಯಿತು.

‘ಶ್ರೀಮನ್ನಾರಾಯಣನ ರೂಪ ಹೃದಯದಲ್ಲಿ ನಿಲ್ಲಲಿ’

ಧ್ರುವನು ಮನುವಂಶಕ್ಕೆ ಸೇರಿದವನು. ಧ್ರುವನ ಅಜ್ಜನಾದ ಸ್ವಾಯಂಭುವ ಮನುವು ಯಕ್ಷರು ಅನಾವಶ್ಯಕವಾಗಿ ಹತರಾಗುತ್ತಿರುವುದನ್ನು ಕಂಡ. ಅವನಿಗೆ ಮನಸ್ಸು ಕರಗಿತು. ಅನೇಕ ಮಹರ್ಷಿಗಳೊಡಗೂಡಿ ಬಂದು, ಧ್ರುವನಿಗೆ ತತ್ವೋಪದೇಶ ಮಾಡಿದನು. ತನ್ನ ಅಜ್ಜನಿಗೆ ಪ್ರಣಾಮ ಮಾಡಿದ ಧ್ರುವನನ್ನು ಕುರಿತು,  ಸ್ವಾಯಂಭುವ ಮನುವು “ಧ್ರುವಾ, ಯಾರೋ ಮಾಡಿದ ಒಂದು ತಪ್ಪಿಗಾಗಿ ನೀನು ನಿರಪರಾಧಿಗಳನ್ನು ಸಂಹರಿಸುತ್ತಿದ್ದೀ. ಈ ಕೋಪವನ್ನು ಬಿಡು. ಕೋಪವೇ ಎಲ್ಲಾ ಕಷ್ಟಗಳಿಗೂ ಕಾರಣ. ಅಜ್ಞಾನದಿಂದ ಕೋಪ ಉಂಟಾಗುತ್ತದೆ. ನೀನು ಜ್ಞಾನಿಯಾಗಿಯೂ ಈ ಮಹಾಪಾಪಕ್ಕೆ ಹೇಗೆ ಕೈ ಹಾಕಿದೆ? ಭಗವಂತನಲ್ಲಿ ಭಕ್ತಿಯಿರುವವನು ಎಂದೂ ಕೋಪದಿಂದ ದುಡುಕುವುದಿಲ್ಲ. ಶ್ರೀಮನ್ನಾರಾಯಣನ ದರ್ಶನ ಪಡೆದು ಪವಿತ್ರನಾದ ನೀನು ಇಂತಹ ಕ್ರೂರ ಕೆಲಸಕ್ಕೆ ಕೈಹಾಕಬಾರದು. ಅಪರಾಧಗಳನ್ನು ಮಾಡಿದವರಲ್ಲಿ ತಾಳ್ಮೆ ವಹಿಸಬೇಕಾದುದು ನಿನ್ನ ಕರ್ತವ್ಯ. ಅಪರಾಧಿಗಳಲ್ಲಿ ತಾಳ್ಮೆ,, ದುಃಖಿತರಲ್ಲಿ ದಯೆ, ಸಮಸ್ತ ಜಂತುಗಳಲ್ಲಿ ಸ್ನೇಹಬುದ್ಧಿ ಇರಬೇಕು. ಎಲ್ಲ  ಜೀವಿಗಳಲ್ಲಿಯೂ ಪರಮಾತ್ಮನಿದ್ದಾನೆ ಎಂದು ನಿನಗೆ ತಿಳಿಯದೆ? ಇಂದು ನೀನು ಯಕ್ಷರನ್ನು ಸಂಹರಿಸಿ, ಕುಬೇರನ ಪರಿವಾರದವರು. ಆತನ ಬಳಿಗೆ ನೀನು ಹೋಗಿ ವಿನಯದಿಮದ ಆತನನ್ನು ಪ್ರಸನ್ನನಾಗಿ ಮಾಡಿಕೊ’’ ಎಂದು ಹೇಳಿದನು.

ಅಜ್ಜ ಸ್ವಾಯಂಭುವ ಮನುವಿನ ಹಿತೋಪದೇಶವನ್ನು ಕೇಳಿ ಧ್ರುವನ ಕೋಪ ಅಡಗಿತು. ಅ?

Thursday, 16 January 2020

ಪೂಜೆ ಮಾಡುವಾಗ ದರ್ಭೆಯನ್ನು ಏಕೆ ಬಳಸುತ್ತಾರೆ ಗೊತ್ತಾ? ಇದಕ್ಕಿರುವ ಅದ್ಭುತ ಶಕ್ತಿಯ ಬಗ್ಗೆ ನೀವು ತಿಳಿಯಲೇ ಬೇಕು.!

ದರ್ಭೆಯನ್ನು ಅನಾದಿ ಕಾಲದಿಂದಲೂ ಪೂಜಾಕೈಂಕಾರ್ಯಗಳಲ್ಲಿ ಉಪಯೋಗಿಸಲಾಗುತ್ತದೆ. ಯಾಕೆ ಹೀಗೆ ದರ್ಬೆಯಲ್ಲಿ ಅಂಥದ್ದೇನಿದೆ ಅಂತ ಹಲವರಿಗೆ ತಿಳಿದಿಲ್ಲ. ಅದಕ್ಕಾಗಿಯೇ ಈ ಅಂಕಣ.
ವಿಷ್ಣುವು ವರಾಹ ಅವತಾರ ತಾಳಿದಾಗ ಅವನು ಒಮ್ಮೆ ಭೂಮಿಯ ಮೇಲೆ ನಿಂತು ಮೈ ಕೊಡವಿದಾಗ ಅವನ ಶರೀರದ ಕೆಲವು ರೋಮಗಳು ಬಿದ್ದು ಧರ್ಭೆಗಳಾದವು ಎಂದು ಹೇಳಲಾಗಿದೆ. ನಾವು ಯಾವ ವ್ರತವಾಗಲಿ, ಯಜ್ಞ ಯಾಗಾದಿಗಳಾಗಲಿ, ಪೂಜಾದಿಗಳಾಗಲಿ ಆಚರಿಸುವಾಗ ಭಗವಂತನ ಶಕ್ತಿಯ ಜೊತೆಗೆ ದುಷ್ಟ ಶಕ್ತಿಯೂ ಇರುತ್ತವೆ. ಆಗ ನಮ್ಮ ಕೈಯಲ್ಲಿರುವ ದರ್ಭೆಯ ದರ್ಶನ ಮಾತ್ರದಿಂದಲೇ ದುಷ್ಟ ಶಕ್ತಿಯು ಅಲ್ಲಿಂದ ಓಡಿ ಹೋಗುತ್ತವೆ. ಇದು ಇಂದ್ರನ ವಜ್ರಾಯುಧವಿದ್ದಂತೆ. ಆದ್ದರಿಂದ ಪೂಜಾಕೈಂಕಾರ್ಯಗಳಲ್ಲಿ ದರ್ಭೆಯನ್ನು ಬಳಸುತ್ತೇವೆ. ಈ ಧರ್ಭೆಯು ದೇವಲೋಕದಿಂದ ಯಜ್ಞ ಯಾಗಾದಿಗಳಿಗೆಂದೆ ಭೂ ಲೋಕಕ್ಕೆ ಭಗವಂತನು ಕಳಿಸಿರುತ್ತಾನೆ. ಬ್ರಹ್ಮಹತ್ಯಾ ದೋಷ ನಿವಾರಣೆಗೆ ದರ್ಭೆಯನ್ನು ಭೂಲೋಕಕ್ಕೆ ತರಬೇಕಾಯಿತು ಮತ್ತು ಶಿವನು ತನ್ನ ಹೆಬ್ಬೆರಳು ಮತ್ತು ಉಂಗುರ ಬೆರಳಿನಿಂದ ಬ್ರಹ್ಮನ ಶಿರವನ್ನು ತೆಗೆದುದರಿಂದ ಶುದ್ಧಿಗಾಗಿ ಪೂಜಾ ಅಧಿಕಾರ ಪ್ರಾಪ್ತಿಗಾಗಿ ದರ್ಭೆಯ ಪವಿತ್ರ ಉಂಗುರ ಧರಿಸಬೇಕೆಂದು ನಿಯಮಿಸಲಾಯಿತು. ಇದು ದರ್ಭೆಯ ಮಹತ್ವ.

ದರ್ಬೆ ಬಗ್ಗೆ ಇರುವ ಕಥೆಯೊಂದು ಇಲ್ಲಿದೆ ನೋಡಿ.. ಗರುಡ ರಾಜನು ತನ್ನ ಪರಿವಾರವನ್ನು ರಕ್ಷಿಸಿಕೊಳ್ಳಲು ನಾಗ ಕುಲದ ಕದ್ರುವಿನ ಪರಿವಾರಕ್ಕೆ ಸಹಾಯ ಮಾಡಲು ದೇವಲೋಕಕ್ಕೆ ಹೋಗಿ ಅಮೃತ ಕಲಶವನ್ನು ತರುತ್ತಾನೆ. ಆಗ ಆ ಕಳಶವನ್ನು ದರ್ಭೆ ಮೇಲಿಟ್ಟು ತನ್ನ ಮಕ್ಕಳನ್ನು ಕರೆತರಲು ಹೋಗುತ್ತಾಳೆ ಕದ್ರು. ಆಗ ಇಂದ್ರನು ಧಾವಿಸಿ ಬಂದು ಅಮೃತ ಕಲಶವನ್ನು ಅಪಹರಿಸಿ ದೇವಲೋಕಕ್ಕೆ ಒಯ್ಯುತ್ತಿದ್ದಾಗ ಅಮೃತದ ಕೆಲವು ಬಿಂದುಗಳು ತುಳುಕಿ ದರ್ಭೆ ಹುಲ್ಲಿನ ಮೇಲೆ ಬಿದ್ದವು ನಂತರ ಬಂದ ಸರ್ಪಗಳು ದರ್ಭೆಯ ಮೇಲೆ ಬಿದ್ದಿದ್ದ ಅಮೃತ ಬಿಂದುಗಳನ್ನು ನೆಕ್ಕಲು ಹೋಗಿ ತಮ್ಮ ನಾಲಗೆಗಳನ್ನು ಸೀಳಿಕೊಂಡವು . ಈ ಕಾರಣದಿಂದ ಸರ್ಪಗಳಿಗೆ ಸೀಳಿದ ನಾಲಿಗೆಗಳಾಗಿ ದ್ವಿಜಿಹ ಎಂಬ ಹೆಸರನ್ನು ಪಡೆದವು. ಅಮೃತ ಬಿಂದುಗಳು ತುಳುಕಿ ಧರ್ಭೆಗಳ ಮೇಲೆ ಬಿದ್ದಾಗ ಈ ಹುಲ್ಲು ಅಮೃತತ್ವವನ್ನು ಪಡೆದು ಪವಿತ್ರಿ ಎಂಬ ಹೆಸರನ್ನು ಪಡೆದುವಂತೆ. ದರ್ಭೆಗಳು ಒಂದೇ ರೀತಿಯ ಹುಲ್ಲಾಗಿದ್ದು ಅವು ಹಿಂದೂಗಳಿಗೆ ಪರಮ ಪವಿತ್ರವಾಗಿವೆ.

ಇನ್ನು ದೇವತಾ ಕಾರ್ಯವಿರಲಿ ಪಿತೃ ಕಾರ್ಯಗಳಲ್ಲಿ ದರ್ಭೆ ಇಲ್ಲದೆ ಮಾಡುವಂತಿಲ್ಲ. ಅಲ್ಲದೆ ಈ ಸಂದರ್ಭದಲ್ಲಿ ದರ್ಭೆಯಿಂದ ಮಾಡಿದ ಪವಿತ್ರವನ್ನು ಬಲಗೈ ಉಂಗುರದ ಬೆರಳಿಗೆ ಧರಿಸಬೇಕು. ಅಶುಭ ಸಂದರ್ಭಗಳಾದ ಸಾವು ಮೊದಲಾದ ಸಂದರ್ಭಗಳಲ್ಲಿ ಒಂದೇ ಎಳೆಯ ದರ್ಭೆಯನ್ನೂ, ನಿತ್ಯ ಪೂಜೆ ಹಾಗೂ ಶುಭ ಸಂದರ್ಭಗಳಲ್ಲಿ ಎರಡು ಎಳೆಯ ದರ್ಭೆಯನ್ನೂ, ಅಮಾವಾಸ್ಯೆ ಹಾಗೂ ಶ್ರಾದ್ಧ ಕರ್ಮಾದಿಗಳಲ್ಲಿ 3 ಎಳೆಯ ದರ್ಭೆಯನ್ನೂ ಮತ್ತೂ ದೇವಸ್ಥಾನಗಳಲ್ಲಿ ಮಾಡಲಾಗುವ ಪೂಜೆಗಳಲ್ಲಿ 4 ಎಳೆಯ ದರ್ಭೆಯನ್ನೂ ಪವಿತ್ರವಾಗಿ ನಮ್ಮ ಬಲಗೈ ಉಂಗುರದ ಬೆರಳಲ್ಲಿ ಧರಿಸಲಾಗುತ್ತದೆ. ದರ್ಬೆಯ ಆಗ್ರದಲ್ಲಿ ಶಿವನು, ಮಧ್ಯದಲ್ಲಿ ವಿಷ್ಣುವು, ಬುಡದಲ್ಲಿ ಬ್ರಹ್ಮನು ಉಪಸ್ಥಿತರಿರುತ್ತಾರೆ ಎಂದು ನಂಬಲಾಗಿದೆ. ಪೂರ್ವದಲ್ಲಿ ಮಾನವರು ಬಹುವಿಧವಾದ ದಾನಗಳನ್ನು ಮಾಡಿದರು ಆಗ ದೈತ್ಯರು ಈ ದಾನಗಳ ಫಲವನ್ನು ತಾವೇ ಪಡೆದರು ಈ ಬಗ್ಗೆ ಚಿಂತಿಸಿದ ಬ್ರಹ್ಮದೇವನು ಒಂದು ನಿಯಮವನ್ನು ಮಾಡಿದನು. ಇನ್ನು ಮುಂದೆ ದೇವತಾ ಕಾರ್ಯಗಳಲ್ಲಿ ದರ್ಭೆ ಅಕ್ಷತೆ ಮತ್ತು ಜಲವನ್ನು ಉಪಯೋಗಿಸಬೇಕು ಹಾಗೆಯೆ ಪಿತೃ ಕಾರ್ಯಗಳಲ್ಲಿ ದರ್ಭೆ ಅಕ್ಷತೆ ಮತ್ತು ತಿಲಗಳನ್ನು ಬಳಸಬೇಕು. ಇವುಗಳು ಯಜ್ಞಾಂಗಗಳಾಗಿ ಇರುವುದರಿಂದ ದೈತ್ಯರು ಅವುಗಳ ಹತ್ತಿರ ಬರಲಾಗುವುದಿಲ್ಲ ಈ ರೀತಿ ದೇವತಾ ಪಿತೃ ಕಾರ್ಯಗಳನ್ನು ರಕ್ಷಿಸಲು ಪರಮಾತ್ಮನು ದರ್ಬೆ ಮತ್ತು ತಿಲಗಳನ್ನು ಸೃಷ್ಟಿಸಿದನು. ಇನ್ನು ದರ್ಬೆ ಹುಲ್ಲನ್ನು ವಿಶೇಷವಾಗಿ ಗ್ರಹಣದ ವೇಳೆ ಬಳಸಲಾಗುತ್ತದೆ. ಇದರ ಬಗ್ಗೆ ಮುಂದಿನ ಅಂಕಣಗಳಲ್ಲಿ ತಿಳಿಸುತ್ತೇವೆ.

Monday, 6 January 2020

ಪರಶಿವನ__ವಿಭೂತಿಯ__ಮಹಿಮೆಯ__ಕಥೆ____

#ಪರಶಿವನ__ವಿಭೂತಿಯ__ಮಹಿಮೆಯ__ಕಥೆ____
ಹಣೆ, ಎದೆ, ತೋಳುಗಳ ಮೇಲೆ ಅಡ್ಡಲಾಗಿ ಎಳೆದಿರುವ ಭಸ್ಮದ ಮೂರು ಪಟ್ಟೆಗಳು  ಪ್ರಮುಖ ಲಾಂಛನ. ಈ ಮೂರು ಪಟ್ಟಿಗಳು ಇಚ್ಛಾ, ಕ್ರಿಯಾ, ಜ್ಞಾನಶಕ್ತಿಗಳ ಸಂಕೇತ. ಹಾಗೆ ಪರಬ್ರಹ್ಮನ ಪ್ರತಿಕವಾಗಿರುವ 'ಓಂ'ನ ಸಂಕೇತ ಕೂಡ. ಈ ಲಾಂಛನ ಮೂರು ವೇದಗಳಾದ ಋಗ್, ಯಜುರ್, ಸಾಮವೇದಗಳನ್ನು ಪ್ರತಿನಿಧಿಸುತ್ತದೆ. 

ಹಣೆ, ಎದೆ, ತೋಳುಗಳಿಗೆ ವಿಭೂತಿ ಪಟ್ಟೆ ಬಳಿದುಕೊಳ್ಳುವುದರಿಂದ 
ಶಿವನು ಸಂಪ್ರೀತನಾಗುತ್ತಾನೆ, ಮಹಾ ಪಾಪಗಳಿಂದ  ಮುಕ್ತಿ ಪಡೆಯಲು ಇದೊಂದು ಸುಲಭ ಹಾಗೂ ಸರಳ ಮಾರ್ಗ ಎನ್ನುತ್ತದೆ ಪುರಾಣ ಹಾಗೆ ಪುರಾಣದಲ್ಲಿ ಪರಶಿವನ ವಿಭೂತಿ ಮಹಿಮೆ ಕುರಿತಾಗಿ ಒಂದು ಕಥೆ ಬರುತ್ತದೆ. 

ಸರಸ್ವತಿ ಲಕ್ಷ್ಮಿ ಎಲ್ಲರು ಬಂಗಾರ ಹಾಕಿಕೊಂಡಿದ್ದಾರೆ. ಪಾರ್ವತಿ ತಾನು ಯಾಕೆ ಹಾಕಿಕೊಳ್ಳಬರದೆಂದು ಕೇಳಿದಳು. ಸ್ವಾಮಿ ನನಗೆ ಬಂಗಾರ
ಹಾಕಿಕೊಳ್ಳುವ ಬಯಕೆಯಾಗಿದೆ. ನನಗೆ ಅನುಗ್ರಹಿಸು ಎಂದು.

ಆಗ ಈಶ್ವರ ಒಂದು ಚಿಟಿಕೆ ಭಸ್ಮವನ್ನು ತೆಗೆದು ಪಾರ್ವತಿ ಕೈಗೆ ಕೊಟ್ಟ
ಇದೇನು ಸ್ವಾಮಿ ಬಂಗಾರ ಕೊಡಿ ಎಂದರೆ ಭಸ್ಮ ಕೊಟ್ಟಿದ್ದೀರಿ!
ನನ್ನಲ್ಲಿರುವುದು ಇದೆ. ಇದನ್ನು ತೆಗೆದುಕೊಂಡು ಹೋಗಿ ಕುಬೇರನಲ್ಲಿ
ಕೇಳು ಇದರ ತೂಕದ ಬಂಗಾರ ಕೊಡುತ್ತಾನೆ ಎಂದ.

ಪಾರ್ವತಿಯು ಅದನ್ನು ಅಲಕಪುರಕ್ಕೆ (ಕುಬೇರನ ವಾಸಸ್ಥಳ) ಕ್ಕೆ ಈ ಭಸ್ಮದ ತೂಕಕ್ಕೆ ಬಂಗಾರ ಕೊಡಬೇಕು ಎಂದು ಕೇಳಿದಳು.

ಆಗ ಕುಬೇರ ನಗುತ್ತಾ ಇದಕ್ಕೆ ಏನು ತುಕದ ಬಂಗಾರವ ಕೊಡಲಾಗುತ್ತದೆ.
ನಿಮಗೆಷ್ಟು ಬೇಕು ತೆಗೆದುಕೊಳ್ಳಿ ಎಂದ. ಇಲ್ಲ ನನಗೆ ಇದರ ತೂಕವೇ ಬೇಕು. ಎಂದು ಪಾರ್ವತಿ ಕೇಳಿದಾಗ ಕುಬೇರನು ಪಾರ್ವತಿಯ
ಅಣತಿಯಂತೆ, ತಕ್ಕಡಿಯಲ್ಲಿ ಭಸ್ಮವನ್ನು ಒಂದೆಡೆ ಇಟ್ಟ. ಮತ್ತೊಂದೆಡೆಗೆ 
ಬಂಗಾರ ಹಾಕಿದ. ಎಷ್ಟು ಬಂಗಾರ ಹಾಕಿದರೂ ತೂಕ ಮೇಲೆಳಲಿಲ್ಲ..

ಕುಬೇರ ಎಷ್ಟು ಬಂಗಾರ ಹಾಕಿದರೂ ತೂಕವದು ಮೇಲೆಳಲೇ ಇಲ್ಲ ಕೊನೆಗೆ ಕುಬೇರನು ತನ್ನ ಹೆಂಡತಿಯ ಬಂಗಾರವನ್ನು ಹಾಕತೊಡಗಿದ. 
ಕುಬೇರನಿಗೂ ನಾನೆಂಬ ಆಹಂ ಭಾವವಿತ್ತು ಅದಕ್ಕೆ ಹೀಗಾಯಿತು. 
ಕೊನೆಗೆ ಕುಬೇರನು ತನ್ನ ಹೆಂಡತಿಯ ತಾಳಿಯನ್ನು ತಕ್ಕಡಿಯಲ್ಲಿ 
ಹಾಕಿದ ಆಗ ತಕ್ಕಡಿ ಸ್ವಲ್ಪ ಮೇಲೇರಿತು. 

ಆಗ ಕುಬೇರನು ತಾಯಿ ನಾನು ಆಹಂಕಾರದಿಂದ ನುಡಿದೆ ಕ್ಷಮಿಸಿ. ಈ ಚಿಟಿಕೆ ಭಸ್ಮವು ಎಷ್ಟು ಬಂಗಾರ. ಹಾಕಿದರೂ, ಸರಿದೂಗಲಾರದು ಎಂದು 
ಕೈ ಮುಗಿದ. ಪಾರ್ವತಿ ತನ್ನ ಪತಿಯ ಭಸ್ಮದ ಮಹತ್ವವನ್ನು ಗಮನಿಸಿ, ನನಗೆ ಬಂಗಾರ ಬೇಡ "ಶಿವ ಕೊಟ್ಟ ಭಸ್ಮವೇ ಬಂಗಾರ" ಎಂದು ಧರಿಸಿಕೊಂಡಳು.

ಪ್ರದಕ್ಷಿಣೆ ನಮಸ್ಕಾರ"ದ ಮಹತ್ವ

"ಪ್ರದಕ್ಷಿಣೆ ನಮಸ್ಕಾರ"ದ ಮಹತ್ವ

ಮಂದಿರಗಳಲ್ಲಿ,ಅಗ್ನಿಗೆ,ಅಶ್ವತ್ಥವೃಕ್ಷಕ್ಕೆ,ತುಳಸಿಗೆ ಸುತ್ತುವರಿದು ನಮಸ್ಕಾರ ಮಾಡುತ್ತೇವೆ.ಅದೇ ಪ್ರದಕ್ಷಿಣೆ ನಮಸ್ಕಾರ ಅಥವಾ ಪರಿಕ್ರಮ. ದೇವಸ್ಥಾನಕ್ಕೆ ಹೋಗಿ ದೇವರ ಪೂಜೆಯನ್ನು ಮಾಡಿ ಪ್ರದಕ್ಷಿಣೆ ನಮಸ್ಕಾರ ಸಲ್ಲಿಸುವುದು ಪದ್ಧತಿ.ಗರ್ಭಗುಡಿಯ ಸುತ್ತಲೂ ಪ್ರದಕ್ಷಿಣೆ ನಮಸ್ಕಾರ ಸಲ್ಲಿಸಬೇಕು.ದೇವರ ಅಭಿಮುಖವಾಗಿ ನಿಂತರೆ ಎಡಭಾಗ ಯಾವುದಾಗುವುದೋ ಅಲ್ಲಿಂದ ಪ್ರದಕ್ಷಿಣೆಯನ್ನು ಪ್ರಾರಂಭಿಸಬೇಕು.ಪ್ರದಕ್ಷಿಣೆಯನ್ನು ಮಾಡುವಾಗ ಮೌನದಿಂದ,ಸ್ತೋತ್ರಗಳನ್ನು ಪಠಿಸುತ್ತಾ,ಪ್ರಾರ್ಥಿಸುತ್ತಾ,ಏಕಾಗ್ರತೆಯಿಂದ ಪ್ರದಕ್ಷಿಣೆ ನಮಸ್ಕಾರವನ್ನು ಸಲ್ಲಿಸಬೇಕು.

ಒಂದು ವೃತ್ತಕ್ಕೆ ಒಂದು ಕೇಂದ್ರಬಿಂದುವಿರಲೇಬೇಕು. ಭಗವಂತನಿಂದ ರಚಿತವಾದ ಈ ಪ್ರಪಂಚ ಒಂದು ವೃತ್ತ(Circle). ಇಲ್ಲಿ ಕೇಂದ್ರಬಿಂದು (Center Point) ಪರಮಾತ್ಮ.ಕೇಂದ್ರಬಿಂದುವಿಲ್ಲದೇ ವೃತ್ತವಿಲ್ಲ.ಪರಮೇಶ್ವರನ ಅಸ್ತಿತ್ವವಿಲ್ಲದೇ ಲೋಕವಿಲ್ಲ. ಹಾಗಾಗಿ ಆ ಕೇಂದ್ರಬಿಂದುವಿನ ಸುತ್ತ ಭಕ್ತಿಯಿಂದ ಸುತ್ತಲೇಬೇಕು.ಹಾಗೇ ಸುತ್ತುವಾಗ ನಮ್ಮ ಕರ್ಮ ಹಾಗೂ ಚಿಂತನೆಗಳು ಕೇಂದ್ರಬಿಂದುವಾದ ಭಗವಂತನಲ್ಲಿ ಲೀನವಾಗುತ್ತವೆ.ಕೇಂದ್ರಬಿಂದು ಯಾವಾಗಲೂ ಸ್ಥಿರ.ಸೌರಮಂಡಲದಲ್ಲಿ ಸೂರ್ಯನೇ ಕೇಂದ್ರಬಿಂದು.ಆತನ ಸುತ್ತಲೂ ಉಳಿದ ಗ್ರಹಗಳು ಸುತ್ತುತ್ತಿರುತ್ತವೆ.ಹಾಗೇ ಪ್ರಪಂಚದಲ್ಲಿ ಭಗವಂತನೇ ಕೇಂದ್ರಬಿಂದು,ಹಾಗಾಗಿ ನಾವು ಭಗವಂತನ ಸುತ್ತ ಪ್ರದಕ್ಷಿಣೆಯನ್ನು ಮಾಡಬೇಕೆಂದು ತಿಳಿಯುತ್ತದೆ. ಕೇಂದ್ರಬಿಂದುವಿಲ್ಲದೇ ವೃತ್ತವನ್ನು ರಚಿಸಲು ಸಾಧ್ಯವಿಲ್ಲ.ಹಾಗೇ ನಮ್ಮ ಶರೀರದ ಕೇಂದ್ರಬಿಂದು ಮನಸ್ಸು.ಮನಸ್ಸಿನಲ್ಲಿ ಭಗವಂತನಿರದಿದ್ದರೆ ಶಾಂತಿ,ನೆಮ್ಮದಿ ದೊರಕುವುದಿಲ್ಲ.ಮನದಲ್ಲಿ ಭಗವಂತ ನೆಲೆಗೊಳ್ಳಲಿ ಎಂದು ಪ್ರದಕ್ಷಿಣೆ ನಮಸ್ಕಾರ ಮಾಡಬೇಕು.ವೃತ್ತದಲ್ಲಿರುವ ಪ್ರತಿಯೊಂದು ಬಿಂದುವೂ ಕೇಂದ್ರಬಿಂದುವಿಗೆ ಸರಿಸಮಾನವಾಗಿರುತ್ತದೆ.ಹಾಗೇ ನಾವೆಲ್ಲೇ ಇರಲಿ,ಏನನ್ನೇ ಮಾಡಲಿ ಅದು ಕೇಂದ್ರಬಿಂದುವಾದ ಭಗವಂತನಿಗೆ ಹತ್ತಿರವಾಗಿಯೇ ಇರುತ್ತದೆ.ಆತನ ದಯೆಯಿಲ್ಲದೇ ಏನನ್ನೂ ಸಾಧಿಸಲಾಗದು. ಹಾಗೇ ದೇವಾಲಯದ ಪರಿಸರ ಶಾಂತ ಹಾಗೂ ಸಕಾರಾತ್ಮಕ ಅಂಶಗಳಿಂದ ಕೂಡಿರುತ್ತದೆ.ಪ್ರದಕ್ಷಿಣೆಯ ಸಮಯದಲ್ಲಿ ಆ ಸಕಾರಾತ್ಮಕ ಶಕ್ತಿ ನಮ್ಮ ದೇಹವನ್ನು ಪ್ರವೇಶಿಸಿ ಶರೀರ ಚೈತನ್ಯಮಯವಾಗುತ್ತದೆ ಹಾಗೇ ಮಾನಸಿಕ ಶಾಂತಿಯೂ ಸಿಗುತ್ತದೆ.ಎಲ್ಲ ಜಂಜಾಟಗಳನ್ನು ಮರೆತು ಭಗವಂತನ ಸನ್ನಿಧಿಯಲ್ಲಿ ತುಸುಹೊತ್ತು ಕಳೆದರೆ ನವೋಲ್ಲಾಸ ಸಿಗುತ್ತದೆ.

ಸ್ಕಂದ ಪುರಾಣದ ಪ್ರಕಾರ ಮೊದಲ ಪ್ರದಕ್ಷಿಣೆಯಲ್ಲಿ ಮನದಿಂದ ಮಾಡಿದ ಪಾಪಗಳು ನಾಶವಾಗುತ್ತವೆ.ಎರಡನೇ ಪ್ರದಕ್ಷಿಣೆಯಲ್ಲಿ ಮಾತಿನಿಂದ ಮಾಡಿದ ಪಾಪಗಳು ದೂರವಾಗುತ್ತವೆ.ಮೂರನೇ ಪ್ರದಕ್ಷಿಣೆಯಲ್ಲಿ ದೇಹದಿಂದ ಮಾಡಿದಂತಹ ಪಾಪಗಳು ದೂರವಾಗುತ್ತವೆ.ಮಾನಸಿಕ,ವಾಚಿಕ,ದೈಹಿಕ ಪಾಪಗಳ ನಿವಾರಣೆಗಾಗಿ ಮೂರು ಪ್ರದಕ್ಷಿಣೆಗಳನ್ನು ಹಾಕುವ ಸಂಪ್ರದಾಯ ಬೆಳೆದುಬಂದಿದೆ.ಪುರಾಣಗಳಲ್ಲಿ ಗಣೇಶನಿಗೆ ಒಂದೇ ಪ್ರದಕ್ಷಿಣೆ,ಸೂರ್ಯನಿಗೆ ಎರಡು,ಈಶ್ವರನಿಗೆ ಮೂರು,ಶಕ್ತಿದೇವತೆಗಳಿಗೆ,ವಿಷ್ಣುವಿಗೆ ನಾಲ್ಕು,ಅಶ್ವತ್ಥವೃಕ್ಷಕ್ಕೆ ಏಳು ಪ್ರದಕ್ಷಿಣೆಗಳನ್ನು ಮಾಡಬೇಕೆಂದು ಹೇಳಲಾಗಿದೆ.

ಜಗತ್ತಿನ ಅಲೌಕಿಕ ಶಕ್ತಿಗೆ ನಮಸ್ಕರಿಸುವುದೇ ಪ್ರದಕ್ಷಿಣೆಯೆನಿಸುತ್ತದೆ. ಶಯನ ಪ್ರದಕ್ಷಿಣೆ ಹಾಗೂ ಆತ್ಮ ಪ್ರದಕ್ಷಿಣೆಯೂ ಸಹ ಪ್ರದಕ್ಷಿಣೆಯ ಭಾಗಗಳು.ಶಯನ ಪ್ರದಕ್ಷಿಣೆ ಅಂದರೆ ಮಲಗಿ ದೇವರಿಗೆ ಪ್ರದಕ್ಷಿಣೆಯನ್ನು ಹಾಕುವುದು ಇದಕ್ಕೆ ಉರುಳು ಸೇವೆ ಎನ್ನುತ್ತಾರೆ.ಆತ್ಮ ಪ್ರದಕ್ಷಿಣೆಯೆಂದರೆ ನಿಂತಲ್ಲೇ ಮೂರು ಪ್ರದಕ್ಷಿಣೆಯನ್ನು ಹಾಕಿ ದೇವರಿಗೆ ನಮಸ್ಕರಿಸುವುದು.

ಈ ಪ್ರಾರ್ಥನೆಯನ್ನು ಹೇಳುತ್ತಾ ಪ್ರದಕ್ಷಿಣೆ ಮಾಡಿದರೆ ಒಳ್ಳೆಯದು.

"ಯಾನಿ ಕಾನಿ ಚ ಪಾಪಾನಿ ಜನ್ಮಾಂತರ ಕೃತಾನಿ ಚ | ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣಂ ಪದೇ ಪದೇ ||"

(ಅರಿತೋ ಅರಿಯದೆಯೋ ಏನಾದರೂ ಪಾಪ ಮಾಡಿದ್ದರೆ,ಹಿಂದಿನ ಜನ್ಮಗಳಲ್ಲಿ ಪಾಪ ಮಾಡಿದ್ದರೆ,ಅಂತಹ ಪಾಪಗಳು ಪ್ರದಕ್ಷಿಣೆ ನಮಸ್ಕಾರದಿಂದ ನಾಶವಾಗುತ್ತವೆ.)
ಲೋಕಾಃ ಸಮಸ್ತಾಃ ಸುಖಿನೋ ಭವಂತು.

ಶ್ರೀವಿಷ್ಣು ಸಹಸ್ರನಾಮದ ಮಹತ್ವ:

ಶ್ರೀವಿಷ್ಣು ಸಹಸ್ರನಾಮದ ಮಹತ್ವ:

ಮನುಷ್ಯನ ಆಯಸ್ಸು ನೂರ ಇಪ್ಪತ್ತು ವರ್ಷ... ಈ 120 ವರ್ಷಗಳಲ್ಲಿ ಅಂದಾಜು 36 ಸಾವಿರ ಹಗಲು ಮತ್ತು 36 ಸಾವಿರ ರಾತ್ರಿಗಳಿವೆ. ಮನುಷ್ಯ ದೇಹ 72 ಸಾವಿರ ನಾಡಿಗಳಿಂದಾಗಿದೆ. ಈ ನಾಡಿಗಳಲ್ಲಿ 36 ಸಾವಿರ ನಾಡಿಗಳು ಎಡ ಭಾಗದಲ್ಲೂ ಮತ್ತು 36 ಸಾವಿರ ನಾಡಿಗಳು ನಮ್ಮಬಲಭಾಗಲ್ಲೂ ಇರುತ್ತವೆ. ಈ ನಾಡಿಗಳಲ್ಲಿ ರಕ್ತ ಸಂಚಾರ ಸರಿಯಾಗಿ ಆದರೆ ಮನುಷ್ಯನಿಗೆ ಯಾವುದೇ ರೋಗ ಬರಲಾರದು.

ವೇದಗಳ ಸಾರವಾದ ಬ್ರಹತೀಸಹಸ್ರದಲ್ಲಿ ಒಂದು ಸಾವಿರ ಮಂತ್ರಗಳಿವೆ, ಹಾಗೂ ಈ ಒಂದು ಸಾವಿರ ಮಂತ್ರದಲ್ಲಿ 72 ,000 ಅಕ್ಷರಗಳಿವೆ. ಈ ಒಂದು ಸಾವಿರ ಮಂತ್ರಗಳ ಸಾರವನ್ನು ಒಂದು ಸಾವಿರ ನಾಮಗಳ ರೂಪದಲ್ಲಿ ವೇದವ್ಯಾಸರು (ಸಾಕ್ಷಾತ್ ಶ್ರೀಹರಿ)ನಮಗೆ ಕರುಣಿಸಿದ್ದಾರೆ..- 

ವಿಷ್ಣುಸಹಸ್ರನಾಮವನ್ನು ಪಠಿಸುವುದರಿಂದ ನಾವು ಬ್ರಹತೀಸಹಸ್ರದ 72 ಸಾವಿರ ಅಕ್ಷರಗಳನ್ನು ಜಪಿಸಿದಂತಾಗುತ್ತದೆ. ಇದರಿಂದ ನಮ್ಮ 72 ಸಾವಿರ ನಾಡಿಗಳಲ್ಲಿ ಪೂರ್ಣಪ್ರಮಾಣದ ರಕ್ತ ಸಂಚಾರವಾಗುತ್ತದೆ. ಆದ್ದರಿಂದ ವಿಷ್ಣುಸಹಸ್ರನಾಮ ಭವರೋಗ ಪರಿಹಾರಕ. ಆದರೆ ಅರ್ಥ ತಿಳಿದು ಹೃದಯತುಂಬಿ ಭಕ್ತಿಯಿಂದ ಪಾರಾಯಣ ಮಾಡುವುದು ಮುಖ್ಯ. 
ವೇದಗಳಿಗೆ ಕನಿಷ್ಠ 3 ಅರ್ಥಗಳಿವೆ, ಮಹಾಭಾರತ ಶ್ಲೋಕಗಳಿಗೆ ಕನಿಷ್ಠ 10 ಅರ್ಥಗಳಿದ್ದರೆ, ಶ್ರೀ ವಿಷ್ಣು ಸಹಸ್ರನಾಮದ ಪ್ರತೀ ನಾಮಕ್ಕೆ ಕನಿಷ್ಠ ನೂರು ಅರ್ಥಗಳಿವೆ !! ಈ ಕಾರಣಕ್ಕಾಗಿಯೇ ಪ್ರಾಚೀನರು ಭಗವದ್ಗೀತೆ ಮತ್ತು ಶ್ರೀ ವಿಷ್ಣುಸಹಸ್ರನಾಮವನ್ನು ಅತ್ಯಮೂಲ್ಯ ಗ್ರಂಥವಾಗಿ ಪರಿಗಣಿಸಿದ್ದಾರೆ. 
ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮರೊಳಗೆ ತಾನಿದ್ದು, ಲೋಕ ಕಲ್ಯಾಣಕ್ಕಾಗಿ ಅವರಿಂದ ವಿಷ್ಣು ಸಹಸ್ರನಾಮ ನುಡಿಸಿದ. ಹೊರಗೆ ಕುಳಿತು ಕೇಳಿದ ಪರಮಾತ್ಮ ನಾಟಕವಾಡಿ, ಸ್ವೀಕರಿಸಿದ ಭೀಷ್ಮ ರನ್ನ ಉದ್ಧರಿಸಿದ, ಪರಮ ಕರುಣಾಳು ಭಗವಂತ.
|
ಫಲಶ್ರುತಿಃ
ವಿಷ್ಣು ಸಹಸ್ರನಾಮ ಪಠಿಸುವುದರ ಮಹತ್ವ ಹಾಗು ಅದರ ಉಪಯೋಗವನ್ನು ಇಲ್ಲಿ ವಿವರಿಸಲಾಗಿದೆ: 
ಇತೀದಂ ಕೀರ್ತನೀಯಸ್ಯ ಕೇಶವಸ್ಯ ಮಹಾತ್ಮನಃ |
ನಾಮ್ನಾಂ ಸಹಸ್ರಂ ದಿವ್ಯಾನಾಮಶೇಷೇಣ ಪ್ರಕೀರ್ತಿತಮ್ || ೧ ||
ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರ -ನಿಯಮನಕ್ಕೆ ಕಾರಣನಾದ ಕೇಶವ ನಾಮಕ ಭಗವಂತನನ್ನು ಅವನ ಕೀರ್ತಿಯನ್ನು ಕೊಂಡಾಡುವ ಶ್ರೇಷ್ಠವಾದ ಸಹಸ್ರ ನಾಮ ವಿಷ್ಣು ಸಹಸ್ರನಾಮ. ಇದೊಂದು ಮಹಾಮಂತ್ರ. ಮಾನವನಿಂದ ಹಿಡಿದು ಚತುರ್ಮುಖನವರೆಗಿನ ಸಮಸ್ತ ಜೀವ ಜಾತಗಳಿಗೂ ಹಿರಿಯ ಶಕ್ತಿಯಾದ ಪರಮಾತ್ಮನ ಹೆಸರಿದು.
ಈ ಎಲ್ಲಾ ಭಗವಂತನ ನಾಮಗಳು ದಿವ್ಯ ನಾಮಗಳು; ಅನಾದಿನಿತ್ಯ, ಅಪ್ರಾಕೃತ(divine)ವಾದ ದಿವ್ಯ ನಾಮಗಳಿವು.ಇದು ಕೇವಲ ಸಾವಿರ ನಾಮವಷ್ಟೇ ಅಲ್ಲ, ಅನಂತನಾದ ಭಗವಂತನನ್ನು ಈ ಸಾವಿರ ನಾಮದಲ್ಲಿ ಚಿಂತನೆ ಮಾಡಬಹುದು. ಸಹಸ್ರ ಎಂದರೆ ಸಹ-ಸರಣ, ಭಗವಂತನ ಜೊತೆಗೆ/ಒಟ್ಟಿಗೆ ಆತನ ಅನಂತಗುಣಗಾನ ಈ ಸಹಸ್ರನಾಮ. 

ಯ ಇದಂ ಶೃಣುಯಾನ್ನಿತ್ಯಂ ಯಶ್ಚಾಪಿ
ಪರಿಕೀರ್ತಯೇತ್ |
ನಾಶುಭಂ ಪ್ರಾಪ್ನುಯಾತ್ ಕಿಂಚಿತ್ ಸೋಮುತ್ರೇಹ ಚ ಮಾನವಃ || ೨ ||
ಯಾರು ಇದನ್ನು ಕೇಳುತ್ತಾರೋ, ಯಾರು ಇದನ್ನು ಭಕ್ತಿಯಿಂದ ತಿಳಿದು ಪಠಿಸುತ್ತಾರೋ,ಅವರಿಗೆ ಎಂದೂ ಕೂಡಾ ಕೆಡುಕಾಗುವುದಿಲ್ಲ. ವಿಷ್ಣು ಸಹಸ್ರನಾಮವನ್ನು ಯಾರು ಬೇಕಾದರೂ ಪಠಿಸಬಹುದು. ಇದಕ್ಕೆ ಇಂತಹ ನಿರ್ಬಂಧವಿಲ್ಲ. ಇದಕ್ಕೆ ಬೇಕಾಗಿರುವುದು ಕೇವಲ ಭಕ್ತಿಮಾತ್ರ. ದೇವರ ನಾಮ ಇರುವುದೇ ನಮಗೆ. ನಮ್ಮ ಬದುಕಿನಲ್ಲಿ ಧೈರ್ಯ-ಆತ್ಮ ವಿಶ್ವಾಸ ತುಂಬಲು, ಭಯ ಪರಿಹರಿಸಲು. ಯಾರು ದೇವರನ್ನು ನಂಬುತ್ತಾನೋ ಅವನು ಎಂದೂ ಯಾವುದಕ್ಕೂ ಭಯಪಡಬೇಕಾಗಿಲ್ಲ. ಜಾತಿ-ಲಿಂಗ ಭೇದವಿಲ್ಲದೆ ಎಲ್ಲರೂ ಪಠಿಸಬಹುದಾದ ಸಹಸ್ರನಾಮ ವಿಷ್ಣುಸಹಸ್ರನಾಮ. 
ಯಾರು ಇದನ್ನು ಆಲಿಸುತ್ತಾರೆ ಮತ್ತು ಯಾರು ಇದನ್ನು ಪಠಿಸುತ್ತಾರೆ ಆ ಮಾನವನು ಇಹ-ಪರದಲ್ಲಿ ಕೆಡುಕನ್ನು ಹೊಂದಲಾರ. ನಾಮದ ಅರ್ಥವನ್ನು ತಿಳಿದು ಪಾರಾಯಣ ಮಾಡುವುದು ಮುಖ್ಯ. 
ವೇದಾಂತಗೋ ಬ್ರಾಹ್ಮಣಃ ಸ್ಯಾತ್ ಕ್ಷತ್ರಿಯೋ ವಿಜಯೀ ಭವೇತ್ |
ವೈಶ್ಯೋ ಧನಸಮೃದ್ಧಃ ಸ್ಯಾತ್ ಶೂದ್ರಸ್ಸುಖಮವಾಪ್ನುಯಾತ್ || ೩ || 
ವಿಷ್ಣು ಸಹಸ್ರನಾಮವನ್ನು ಎಲ್ಲಾ ವರ್ಣದವರೂ ಪಠಿಸಬಹುದು. ಇಲ್ಲಿ ವರ್ಣ ಎಂದರೆ ಜಾತಿ ಅಲ್ಲ. ಹಿಂದೆ ಹೇಳಿದಂತೆ ಮಾನವನ ಸ್ವಭಾವಕ್ಕೆ ಅನುಗುಣವಾಗಿ ಪ್ರಾಚೀನರು ನಾಲ್ಕು ವರ್ಣವನ್ನು ಗುರುತಿಸಿದರು. ಜ್ಞಾನಾರ್ಜನೆ, ಅಧ್ಯಯನ ಮತ್ತು ಚಿಂತನೆಯಲ್ಲಿ ಆಸಕ್ತಿ ಉಳ್ಳವ ಬ್ರಾಹ್ಮಣ(ಬೃಹತ್ ಆದುದ್ದನ್ನು ಅನ್ವೇಷಣೆ ಮಾಡುವವ-Intelligence); ಇನ್ನೊಬ್ಬರು ತೊಂದರೆಯಲ್ಲಿದ್ದಾಗ ರಕ್ಷಣೆ(Protection) ಮಾಡುವವ ಕ್ಷತ್ರಿಯ. ಆತನಲ್ಲಿ ಆಡಳಿತ(Administration) ಗುಣವಿರುತ್ತದೆ. ವೈಶ್ಯ ಹೊಟ್ಟೆಗೆ ಬೇಕಾದುದ್ದನ್ನು ಕೊಡುವ ವ್ಯಾಪಾರ ಮನೋವೃತ್ತಿ ಇರುವವರು(Production). ಆಹಾರ ಉತ್ಪತ್ತಿ, ಗೋವುಗಳನ್ನು ಸಾಕಿ ಹಾಲು ಮಾರುವುದು ಇತ್ಯಾದಿ. ಶೂದ್ರ ಅಂದರೆ ಇನ್ನೊಬ್ಬರ ಕಷ್ಟಕ್ಕೆ ಕರಗುವವ (Service). ಯಾರು ಶೂದ್ರನಲ್ಲವೋ ಅವನು ಮನುಷ್ಯನೇ ಅಲ್ಲ. ಈ ವರ್ಣ ಪದ್ಧತಿ ಪ್ರಪಂಚದ ಎಲ್ಲಾ ಭಾಗದಲ್ಲೂ ಇದೆ. ಬ್ರಾಹ್ಮಣನ ಮಗ ಕ್ಷತ್ರಿಯನಾಗಬಹುದು, ಇಲ್ಲಿ ಜೀವ ಸ್ವಭಾವ ಮುಖ್ಯ. ತಂದೆ-ತಾಯಿ ಜಾತಿ ಅಲ್ಲ! ಯಾರೂ ಏಕವರ್ಣದವನಲ್ಲ. ಎಲ್ಲರಲ್ಲೂ ಎಲ್ಲ ಸ್ವಭಾವವಿರುತ್ತದೆ. ಯಾವ ಸ್ವಭಾವ ನಮ್ಮಲ್ಲಿ ಹೆಚ್ಚಗಿದೆಯೋ ನಾವು ಆ ವರ್ಣಕ್ಕೆ ಸೇರುತ್ತೇವೆ.ಸ್ವಭಾವ ನೈಸರ್ಗಿಕ.
ವಿಷ್ಣು ಸಹಸ್ರನಾಮ ಕೇಳುವುದರಿಂದ, ಪಠಿಸುವುದರಿಂದ ಬ್ರಾಹ್ಮಣನ ಜ್ಞಾನ ವೃದ್ಧಿಯಾಗುತ್ತದೆ, ವೈಶ್ಯನ ವ್ಯಾಪಾರ ಹೆಚ್ಚುತ್ತದೆ, ಕ್ಷತ್ರಿಯನ ಶತ್ರು ನಿಗ್ರಹಕ್ಕೆ ಬೇಕಾದ ಬಲವೃದ್ಧಿಯಾಗುತ್ತದೆ. ಶೂದ್ರ ಸುಖವಾಗಿ ಬದುಕುತ್ತಾನೆ.
ಹೀಗೆ ದೇವರ ನಾಮ ಪಠಿಸಲು ಯಾವ ವರ್ಣ ಭೇದವಿಲ್ಲ. 

ಬ್ರಾಹ್ಮಣ( ಶಮಃ ದಮಃ ತಪಃ ಶೌಚಂ ಕ್ಷಾಂತಿ ಆರ್ಜವಮ್ ಏವ ಚ । ಜ್ಞಾನಂ ವಿಜ್ಞಾನಮ್ ಆಸ್ತಿಕ್ಯಂ ಬ್ರಹ್ಮಕರ್ಮ ಸ್ವಭಾವಜಮ್.
ಭಗವಂತನಲ್ಲಿ ನಿಷ್ಠೆ, ಇಂದ್ರಿಯಗಳಲ್ಲಿ ಹಿಡಿತ, ಉಪವಾಸಾದಿ ನೇಮಗಳು, ನೈರ್ಮಲ್ಯ,
ಅಪಕಾರಿಯನ್ನೂ ಮನ್ನಿಸುವ ಸೈರಣೆ, ನೇರ ನಡೆ-ನುಡಿ, ತಿಳಿವು, ಆಳವಾದ ಸಂಶೋಧನಾ ದೃಷ್ಟಿ ಮತ್ತು ಆಸನ ಇಂತಹ ಅನೇಕ ಗುಣ ಇದ್ದು ವೇದಗಳ ನಿರ್ಣಯ ಮಾಡುವವ) ಜ್ಞಾನವನ್ನು ಪಡೆದಾನು.

ಕ್ಷತ್ರಿಯನು ಗೆಲುವನ್ನು ಪಡೆದಾನು; ವೈಶ್ಯನು ತುಂಬು ಸಿರಿವಂತನಾದಾನು; ಶೂದ್ರನು ಸುಖವನ್ನು ಪಡೆದಾನು. 
ಧರ್ಮಾರ್ಥೀ ಪ್ರಾಪ್ನುಯಾದ್ಧರ್ಮಂ ಅರ್ಥಾರ್ಥೀ ಚಾರ್ಥಮಾಪ್ನುಯಾತ್ |
ಕಾಮಾನವಾಪ್ನುಯಾತ್ ಕಾಮೀ ಪ್ರಜಾರ್ಥೀ ಚಾಪ್ನುಯಾತ್ ಪ್ರಜಾಮ್ || ೪ ||
ಮನುಷ್ಯ ಪಡೆಯಲಿಕ್ಕೆ ಬಯಸುವುದು ಧರ್ಮ, ಅರ್ಥ, ಕಾಮ, ಮೋಕ್ಷ ಈ ನಾಲ್ಕನ್ನು. ಇದರಲ್ಲಿ ಕಾಮ ಮತ್ತು ಅರ್ಥ ಲೌಕಿಕವಾದದ್ದು. ಸಾಮಾನ್ಯವಾಗಿ ಧಾರ್ಮಿಕ ಪ್ರವೃತ್ತಿಯುಳ್ಳ(Elevated Souls)ವರು ಲೌಕಿಕವಾದದ್ದನ್ನು ಬಯಸದೇ ದೇವರನ್ನು ತಿಳಿಯುವ ಧರ್ಮ ಹಾಗು ಅದರಾಚೆಗಿನ ಮೋಕ್ಷವನ್ನು ಸುಖವೆಂದು ತಿಳಿದಿರುತ್ತಾರೆ. ಬಯಕೆಗಳೇ ಇಲ್ಲದಿರುವುದು ನಿಜವಾದ ಸುಖ.
ವಿಷ್ಣು ಸಹಸ್ರನಾಮ ಪಠಿಸುವುದು ಅಂದರೆ ಪ್ರತಿ ನಾಮದ ಉಚ್ಛಾರ ಹಾಗು ಅದರ ಹಿಂದಿನ ಅರ್ಥ ಸ್ಮರಣೆ.ಒಂದು ನಾಮ ಸ್ಮರಣೆ ಮಾಡಿದರೂ ಸಾಕು ನಮ್ಮ ಬದುಕು ಪಾವನವಾಗುತ್ತದೆ, ಧರ್ಮಮಯವಾಗುತ್ತದೆ . ಒಂದು ವೇಳೆ ನಮಗೆ ಅತೀ ಕಷ್ಟವಿದ್ದು ದುಡ್ಡಿನ ಅಗತ್ಯ ಇದ್ದಲ್ಲಿ ವಿಷ್ಣು ಸಹಸ್ರನಾಮವನ್ನು ಯಾವುದೇ ಲೋಭವಿಲ್ಲದೆ ನಿರ್ಮಲ ಮನಸ್ಸಿನಿಂದ ಭಕ್ತಿ ಪೂರ್ವಕವಾಗಿ ಚಿಂತನೆ ಮಾಡಿದರೆ ಖಂಡಿತ ನಾವು ಆ ಚಿಂತೆಯಿಂದ ಪಾರಾಗುತ್ತೇವೆ. ಆದರೂ ನಾವು ಏನನ್ನೂ ಬಯಸದೇ ದೇವರ ಸ್ಮರಣೆ ಮಾಡುವುದು ಅತೀ ಶ್ರೇಷ್ಠ. ಬಯಕೆಗಳಿಲ್ಲದೆ ಸ್ಮರಿಸಿದರೆ ನಾವು ಮಹಾಫಲವನ್ನು ಪಡೆಯುತ್ತೇವೆ; ಅರಿವನ್ನು ಪಡೆದು ಮೋಕ್ಷವನ್ನು ಪಡೆಯುತ್ತೇವೆ.
ಧರ್ಮ ಬೇಕೆನ್ನುವವನು ಪಡೆದಾನು ಧರ್ಮವನ್ನು;ಅರ್ಥ ಬೇಕೆನ್ನುವವನು ಪಡೆದಾನು ಅರ್ಥವನ್ನು. ಕಾಮಗಳನ್ನು ಪಡೆದಾನು-ಕಾಮ ಬೇಕೆನುವವನು. ಪ್ರಜ್ಞೆ ಬೇಕೆನುವವನು ಪಡೆದಾನು ಪ್ರಜ್ಞೆಯನ್ನು ಪಡೆಯುತ್ತಾನೆ.

ಮುಂದುವರಿಯುವುದು....

| ನಾಹಂ ಕರ್ತಾ ಹರಿಃ ಕರ್ತಾ 
ಲೋಕಾಃ ಸಮಸ್ತಾಃ ಸುಖಿನೋ ಭವಂತು.||
ಸಂಗ್ರಹ: ಪ್ರಶಾಂತಭಟ್ ಕೋಟೇಶ್ವರ.

ತಾರಾನುಕೂಲ(ತಾರಾಬಲ)*

*ತಾರಾನುಕೂಲ(ತಾರಾಬಲ)*

ಪ್ರಪಂಚ ನಿಂತಿರುವುದು ನಂಬಿಕೆಯ ಮೇಲೆ ಹಾಗೆ ಭಾರತೀಯರ ನಂಬಿಕೆಗೆ ಪಾತ್ರವಾಗಿರುವ ಶಾಸ್ತ್ರವೇ ಜ್ಯೋತಿಷ್ಯ ಶಾಸ್ತ್ರ. ಪುರಾತನ ಕಾಲದಿಂದಲೂ ಭವಿಷ್ಯವನ್ನು ತಿಳಿಯಲು ಈ ಶಾಸ್ತ್ರವನ್ನು ನಂಬಿಕೊಂಡು ಬಂದಿದ್ದಾರೆ. ನಮ್ಮ ಹಿರಿಯರು ಕೆಲವು ದೈನಂದಿನ ಮತ್ತು ಧಾರ್ಮಿಕ ಚಟುವಟಿಕೆಗಳ ಸಫಲತೆಗೆ ತಾರಾಬಲ ನೋಡುತ್ತಾರೆ. 

*ತಾರಾಬಲ ಏಕೆ ನೋಡಬೇಕು?*
ನಮ್ಮ ನಕ್ಷತ್ರಕ್ಕೂ ದಿನದ ನಕ್ಷತ್ರಕ್ಕೂ ಯಾವ ವಿಚಾರದಲ್ಲಿ ಸಂಬಂಧವಿರುತ್ತದೆ ಎಂಬುದನ್ನು ಅರಿಯಬೇಕು. ನಕ್ಷತ್ರ ಕಿರಣಗಳಲ್ಲಿ ಸಕಾರಾತ್ಮಕ ಹಾಗೂ ನಕಾರಾತ್ಮಕ ಎಂಬ ಎರಡು ವಿಧಗಳಿವೆ. ಯಾವುದೇ ನಕ್ಷತ್ರದವರಿಗೆ ಸಕಾರಾತ್ಮಕ ಕಿರಣಗಳು ಅನುಕೂಲ. ನಕಾರಾತ್ಮಕ ಕಿರಣಗಳು ಪ್ರತಿಕೂಲ. ಈ ಕಿರಣಗಳು ಮನಸು, ಆರೋಗ್ಯ, ಹಣ, ಕಷ್ಟ-ನಷ್ಟ, ವೈರತ್ವ, ಸಾಧನೆ, ವ್ಯಾಪಾರ-ವ್ಯವಹಾರ, ಮೈತ್ರಿ ಮೊದಲಾದವುಗಳ ಮೇಲೆ ಪ್ರಭಾವ ಬೀರುತ್ತವೆ. ಅತಿ ಮುಖ್ಯವಾಗಿ ಕೆಲವು ಅಂಶಗಳು ಈ ರೀತಿ ಇವೆ. ಜಾತಕಾದಿ ಸಂಸ್ಕಾರಗಳಲ್ಲಿ, ಉಪನಯನದಲ್ಲಿ, ವಿವಾಹದಲ್ಲಿ ಶಾಂತಿ ಒಡವೆ-ವಾಹನಾದಿ ಖರೀದಿಗೆ, ವಧು ವರರಿಗೆ ತಾರಾನುಕುಲವನ್ನು ನೋಡಿ ಮುಹೂರ್ತನಿರ್ಣಯಿಸಬೇಕು

೧ *ಜನ್ಮ ನಕ್ಷತ್ರ*
ಜಾತಕದಲ್ಲಿ ಚಂದ್ರನಿರುವ ನಕ್ಷತ್ರವನ್ನು ಜನ್ಮ ನಕ್ಷತ್ರ ಎನ್ನುತ್ತಾರೆ ಹತ್ತನೇ ನಕ್ಷತ್ರಕ್ಕೆ ಅನುಜನ್ಮ ವೆಂದು ಹತ್ತೊಂಬತ್ತನೇ ನಕ್ಷತ್ರವನ್ನು ತ್ರಿಜನ್ಮ ವೆಂದು ತಿಳಿಯಬೇಕು 
ನಿಮ್ಮ ಜನ್ಮ ನಕ್ಷತ್ರವಿರುವ ದಿನ ಅನುಕೂಲವಾಗಲಿ, ಅನನುಕೂಲವಾಗಲಿ ಇರುವುದಿಲ್ಲ. ಅಂದರೆ ಸಾಮಾನ್ಯ ಫಲ.
ಜನ್ಮ ನಕ್ಷ ತ್ರದಲ್ಲಿ ನವಾನ್ನ ಭೋಜನ, ನೂತನ ವಸ್ತ್ರಾಭರಣಧಾರಣ, ಪುಣ್ಯ ಕರ್ಮಗಳ ಹೊರತು ಇತರ ಕರ್ಮಗಳು ನಿಷಿದ್ಧ.

೨ *ಸಂಪತ್ ತಾರೆ*
ನಿಮ್ಮ ನಕ್ಷತ್ರದ ಮುಂದಿನ ನಕ್ಷತ್ರವೇ ಸಂಪತ್ ತಾರೆ. ಇದು ಹಣ, ಆಭರಣ, ವ್ಯವಹಾರಗಳಿಗೆ ಅನುಕೂಲ. ಧನಲಕ್ಷ್ಮೀ ಪೂಜೆಗೆ ಶ್ರೇಷ್ಠ ದಿನ. ಬರಬೇಕಾಗಿದ್ದ ಹಣ ಬರುವುದು. ಗೌರವ, ಕೀರ್ತಿ, ಉಡುಗೊರೆ ಪ್ರಾಪ್ತವಾಗುವ ದಿನ.ಒಡವೆ-ವಾಹನಾದಿ ಖರೀದಿಗೆ ಪ್ರಯತ್ನಪಟ್ಟಾಗ ಫಲದಾಯಕವಾಗುವ ದಿನ.

೩ *ವಿಪತ್ ತಾರೆ*
ನಿಮ್ಮ ನಕ್ಷತ್ರದಿಂದ 3ನೆಯ ನಕ್ಷತ್ರವೇ ವಿಪತ್ ತಾರೆ. ವಿಪತ್ ತಾರೆ ಇರುವ ದಿನ ಒಳ್ಳೆಯ ಕೆಲಸ ಪ್ರಾರಂಭವಾದರೆ ಕಲಹ, ನಷ್ಟ ಮೊದಲಾದ ತೊಂದರೆಗಳಾಗುವುದು. ಯಾವ ಶುಭಕಾರ್ಯ ಪ್ರಾರಂಭಕ್ಕೂ ಇದು ಸೂಕ್ತವಲ್ಲ.

೪ *ಕ್ಷೇಮ ತಾರೆ*
ನಿಮ್ಮ ನಕ್ಷತ್ರದಿಂದ 4ನೇ ತಾರೆಯೇ ಕ್ಷೇಮ ತಾರೆ. ಯಾರಿಗಾಗಲೇ ಕ್ಷೇಮ ತಾರೆಯಿದ್ದ ದಿನ ಮಾನಸಿಕ ಶಾಂತಿ, ಆರೋಗ್ಯ, ಆಪ್ತರ ಭೇಟಿ ಮೊದಲಾದ ಅನುಕೂಲಗಳಿರುತ್ತವೆ. ಅಧಿಕಾರಿ ಭೇಟಿ, ಒಪ್ಪಂದ ಕಾರ್ಯ, ಶಸ್ತ್ರಚಿಕಿತ್ಸೆ, ಹೊಸ ಕಾರ್ಯ ಪ್ರಾರಂಭ, ಆರೋಗ್ಯ ತಪಾಸಣೆ, ಪ್ರಯಾಣ, ತಂಟೆ-ತಕರಾರುಗಳನ್ನು ಬಗೆಹರಿಸಿಕೊಳ್ಳಲು, ನ್ಯಾಯಾಲಯದ ವ್ಯವಹಾರಗಳಿಗೆ ಅನುಕೂಲಕರ. 

೫ *ಪ್ರತ್ಯರ ತಾರೆ* 
ನಿಮ್ಮ ನಕ್ಷತ್ರದಿಂದ 5ನೇ ನಕ್ಷತ್ರವೇ ಪ್ರತ್ಯರ್ ತಾರೆ. ಇದು ಯಾವ ಕೆಲಸ, ಕಾರ್ಯಗಳಿಗೂ ಅನುಕೂಲವಲ್ಲ. ನಿರೀಕ್ಷೆಗೆ ವಿರುದ್ಧವಾದ ಫಲಗಳು ಉಂಟಾಗುತ್ತವೆ. 

೬ *ಸಾಧಕ ತಾರೆ*
ನಿಮ್ಮ ನಕ್ಷತ್ರದಿಂದ 6ನೇ ನಕ್ಷತ್ರವೇ ಸಾಧಕ ತಾರೆ. ಈ ಸಾಧನ ತಾರೆಯಿರುವ ದಿನ ವಿದ್ಯಾಭ್ಯಾಸ, ಮಂತ್ರಸಿದ್ಧಿ, ಸಂಶೋಧನೆ, ಹೂಡಿಕೆ, ನೂತನ ಕಾರ್ಯ ಪ್ರಾರಂಭ, ಹೋರಾಟ, ಶುಭ ಕಾರ್ಯ, ವ್ಯವಹಾರಗಳಿಗೆ ವಿವಾಹಾದಿಕಾರ್ಯಗಳಿಗೆ ಪ್ರಗತಿದಾಯಕ.

೭ *ವಧ ತಾರೆ* 
ನಿಮ್ಮ ನಕ್ಷತ್ರದಿಂದ 7ನೇ ನಕ್ಷತ್ರವೇ ವಧ ತಾರೆ. ಇದು ಅತಿ ತೊಂದರೆದಾಯಕವಾಗಿರುವುದರಿಂದ ಈ ದಿನ ಯಾವುದೇ ವೃಧ್ಧಿದಾಯಕ ಕೆಲಸ ಮಾಡದಿರುವುದು ಉತ್ತಮ.

೮ *ಮೈತ್ರತಾರೆ*
ನಿಮ್ಮ ನಕ್ಷತ್ರದಿಂದ 8ನೇ ತಾರೆಯು ಮಿತ್ರ ತಾರೆಯಾಗುವುದು. ಈ ನಕ್ಷತ್ರವಿರುವ ದಿನ ಅಧಿಕಾರಿ ಭೇಟಿ, ಆಪ್ತರನ್ನು ಸಂಪರ್ಕಿಸಲು, ವ್ಯಾಪಾರ ಅಭಿವೃದ್ದಿ ಇತರ ಎಲ್ಲ ಕಾರ್ಯಕ್ಕೆ ಉತ್ತಮ.

೯ *ಪರಮಮೈತ್ರತಾರೆ*
ನಿಮ್ಮ ನಕ್ಷತ್ರದಿಂದ 9ನೇ ತಾರೆಯು ಪರಮಮಿತ್ರ ತಾರೆಯಾಗುವುದು. ಇದು ಕೂಡ ಶುಭ ಕಾರ್ಯಕ್ಕೆ ಸಿಂಧು.

*ತಾರಾಬಲ ನೋಡುವ ಕ್ರಮ* 

ಅಶ್ವಿನಿ ನಕ್ಷತ್ರವು ನಿಮ್ಮ ಜನ್ಮ ನಕ್ಷತ್ರವಾದರೆ ಕ್ರಮವಾಗಿ

ಅಶ್ವಿನಿ -ಜನ್ಮ ನಕ್ಷತ್ರ
ಭರಣಿ - ಸಂಪತ್ ತಾರೆ.
ಕೃತಿಕಾ -ವಿಪತ್ ತಾರೆ
ರೋಹಿಣಿ -ಕ್ಷೇಮ ತಾರೆ.
ಮೃಗಶಿರಾ -ಪ್ರತ್ಯರ್ ತಾರೆ
ಆರ್ದ್ರಾ- ಸಾಧಕ ತಾರೆ
ಪುನರ್ವಸು -ವಧ ತಾರೆ
ಪುಷ್ಯ -ಮೈತ್ರತಾರೆ
ಆಶ್ಲೇಷಾ- ಪರಮಮೈತ್ರತಾರೆ

ಮಘಾ- ಅನುಜನ್ಮ ನಕ್ಷತ್ರ
ಹುಬ್ಬಾ-ಸಂಪತ್ ತಾರೆ. 
ಉತ್ತರ- ವಿಪತ್ ತಾರೆ
ಹಸ್ತಾ -ಕ್ಷೇಮ ತಾರೆ.
ಚಿತ್ರಾ ಪ್ರತ್ಯರ್ ತಾರೆ
ಸ್ವಾತಿ- ಸಾಧಕ ತಾರೆ
ವಿಶಾಖ -ವಧ ತಾರೆ
ಅನುರಾಧ ಮೈತ್ರತಾರೆ
ಜೇಷ್ಠಾ -ಪರಮಮೈತ್ರತಾರೆ

ಮೂಲ -ತ್ರಿಜನ್ಮ ನಕ್ಷತ್ರ
ಪೂರ್ವಾಷಾಢ-ಸಂಪತ್ ತಾರೆ.
ಉತ್ತರಾಷಾಢ-ವಿಪತ್ ತಾರೆ
ಶ್ರವಣ -ಕ್ಷೇಮ ತಾರೆ.
ಧನಿಷ್ಟಾ ಪ್ರತ್ಯರ್ ತಾರೆ
ಶತಭಿಷ -ಸಾಧಕ ತಾರೆ
ಪೂರ್ವಭಾದ್ರ -ವಧ ತಾರೆ 
ಉತ್ತರಭಾದ್ರ -ಮೈತ್ರತಾರೆ
ರೇವತಿ -ಪರಮಮೈತ್ರತಾರೆ

ಸಂಗ್ರಹ 
ಪ್ರಶಾಂತಭಟ್ ಕೋಟೇಶ್ವರ
ಹೆಚ್ಚಿನ ಮಾಹಿತಿಗಾಗಿ 
9886600332

ಗಂಡ ಹೆಂಡತಿಯರ ಪಾಪ ಪುಣ್ಯ ಲೆಕ್ಕಾಚಾರ ಹೇಗೆ ? ಶಾಸ್ತ್ರ ಆಧಾರವೇನು

ಗಂಡ ಹೆಂಡತಿಯರ ಪಾಪ ಪುಣ್ಯ ಲೆಕ್ಕಾಚಾರ ಹೇಗೆ ? ಶಾಸ್ತ್ರ ಆಧಾರವೇನು ?

ಉತ್ತರ : ಪತಿಯ ಪುಣ್ಯದಲ್ಲಿ ಅರ್ಧ ಭಾಗ ಸತಿಗೆ ಪಾಲು. ಆದರೆ ಪಾಪ ಸತಿಗೆ ಬರುವುದಿಲ್ಲ.
ಪತ್ನಿಯ ಪುಣ್ಯ ಪತಿಗೆ ಇಲ್ಲ ಆದರೆ ಪಾಪ ಅರ್ಧ ಭಾಗ ಪತಿಗೆ ಬರುತ್ತದೆ. ಆದಕಾರಣ ಪತಿಯನ್ನು ಯಜಮಾನ ಎಂದು ಹೇಳುವುದು. ಅವನು ಧರ್ಮವನ್ನು ಆಚರಣೆ ಮಾಡುವುದಲ್ಲದೆ ಕುಟುಂಬದಲ್ಲಿ ಎಲ್ಲರನ್ನು ಧರ್ಮಮಾರ್ಗದಲ್ಲಿ ಕೊಂಡುಯ್ಯುವುದು ಅವನ ದೊಡ್ಡ ಜವಾಬ್ದಾರಿ. ಈ ವಿಷಯ ಶತಾತಾಪ ಶೃತಿಯಲ್ಲಿ ದಾಖಲಿಸಲಾಗಿದೆ. 

 ಇದನ್ನ ದಾಸರು ಹೇಳಿದರು : 

 ಗಂಡ ಮಾಡಿದ ಪಾಪ ಹೆಂಡತಿಗಿಲ್ಲ 
 ಹೆಂಡತಿ ಮಾಡಿದ ಪಾಪ ಗಂಡಗುಂಟು
 ಹೆಂಡತಿ ಮಾಡಿದ ಪುಣ್ಯ ಗಂಡಗಿಲ್ಲ
 ಗಂಡ ಮಾಡಿದ ಪುಣ್ಯ ಹೆಂಡತಿಗುಂಟು
 ಜೀವ ಜೀವರ ಭೇದ ನೀನೆ ಉದ್ದರಿಸಯ್ಯ ಪುರಂದರ ವಿಠಲ

"ನವಗ್ರಹಗಳ ಪ್ರಭಾವ"

"ನವಗ್ರಹಗಳ ಪ್ರಭಾವ"

ನವಗ್ರಹಗಳು ನಮ್ಮ ದೇಹದಲ್ಲಿ  ಹಾಗು ನಿತ್ಯದ ಜೀವನದಲ್ಲಿ ಸದಾ ಸಂಚರಿಸುತ್ತ; ಅವುಗಳ ಗೋಚರದಲ್ಲಿ ನಾವಿರುತ್ತೇವೆ.ಕೆಲವು ಕೆಟ್ಟ ಅಭ್ಯಾಸಗಳಿಂದ ನಾವು ನವಗ್ರಹಗಳ ಅವಕೃಪೆಗೆ ಕಾರಣರಾಗುತ್ತೇವೆ.ಅವುಗಳಿಗೆ ಪರಿಹಾರವೆಂದರೆ:--

೧. ನಮ್ಮ ಮನೆಗಳಿಗೆ ಯಾರಾದರೂ ಅತಿಥಿಗಳು-ಅಭ್ಯಾಗತರು ಬಂದಾಗ, ಅವರು ಅತಿಥಿಗಳಿರಲಿ ಅಥವಾ ಕೆಲಸದ ನೌಕರರು/ಆಳುಗಳಿರಲಿ ಅವರಿಗೆ ಕುಡಿಯಲು ಲೋಟದಲ್ಲಿ ಶುದ್ದ ನೀರನ್ನು/ಹಾಲನ್ನು ಕೊಡಬೇಕು.
ಹೀಗೆ ಶುದ್ದ ನೀರನ್ನು   ಕುಡಿಯಲು ಕೊಟ್ಟರೆ ರಾಹುಗ್ರಹದಿಂದ ಯಾವುದೇ ದುಷ್ಪರಿಣಾಮಗಳು ಆಗುವುದಿಲ್ಲ. ಜೀವನದಲ್ಲಿ ಯಾವುದೇ ತೊಂದರೆಗಳು/ಅಘಾತಕರ ಘಟನೆಗಳು ಸಂಭವಿಸುವುದಿಲ್ಲ.

೨. ನಿಮಗೆ ಎಲ್ಲಂದರೆ ಅಲ್ಲಿ ಉಗುಳುವ ಅಭ್ಯಾಸವಿದ್ದರೆ, ನಿಮಗೆ ಅಕಸ್ಮಾತ್ ಹೆಸರು ಮತ್ತು ಗೌರವ ಬಂದಲ್ಲಿ, ಅದು ಬಹಳ ದಿನ ಇರಲಾರದು. ಎಲ್ಲಂದರೆ ಅಲ್ಲಿ ಉಗುಳಿದರೆ ಬುಧಗ್ರಹದ ಅವಕೃಪೆ.
ಉಗುಳುವುದನ್ನು ಕೈ ತೊಳೆಯುವ ಬಚ್ಚಲಿನಲ್ಲಿ(wash basin) ಮಾತ್ರ ಉಗಳಬೇಕು. ಆಗ ಮಾತ್ರ ನಿಮ್ಮ ಹೆಸರು ಮತ್ತು ಗೌರವ ವೃಧ್ಧಿಯಾಗುತ್ತವೆ.

೩. ಕೆಲವರಿಗೆ ತಿಂಡಿ, ತಿನಿಸು, ಊಟ ಮಾಡಿದ ತಟ್ಟೆಗಳನ್ನು /ಪಾತ್ರೆಗಳನ್ನು ಹಾಗೆ ಇಡುವ ಅಭ್ಯಾಸ ಇರುತ್ತದೆ.  ಅಂತಹವರಿಗೆ ಜೀವನದಲ್ಲಿ ಗೆಲವು ಖಾಯಂ ಆಗಿ ಸಿಗುವುದಿಲ್ಲ. ಅಂಥಹವರು ನಿರಂತರ ಹೋರಾಟ ಮಾಡುತ್ತಿರಬೇಕು ಹಾಗೂ ಆದರೂ ಅವರಿಗೆ ಒಳ್ಳೆಯ ಹೆಸರು ಸಿಗುವುದಿಲ್ಲ.
ನೀವು ಉಪಯೋಗಿಸಿದ ತಟ್ಟೆ/ಲೋಟ/ಪಾತ್ರೆಗಳನ್ನು (ಸಾಧ್ಯವಾದಷ್ಟು) ಬೇಗ ತೊಳೆದು ಅವುಗಳನ್ನು ಸರಿಯಾದ ಸ್ಥಳದಲ್ಲಿ ಇಡಬೇಕು.

ಹೀಗೆ ಮಾಡುವುದರಿಂದ  ಚಂದ್ರ ಮತ್ತು ಶನಿ ಗ್ರಹಗಳನ್ನು ಗೌರವಿಸಿದಂತಾಗಿ ಅವರುಗಳು ಸಂತೃಪ್ತರಾಗುತ್ತಾರೆ. 
ಇದರಿಂದ ನಿಮಗೆ ಮನಃಶಾಂತಿ ಸಿಗುತ್ತದೆ ಹಾಗೂ ಕೆಲಸದಲ್ಲಿ ಯಾವುದೇ ಅಡೆ-ತಡೆಗಳಿರುವುದಿಲ್ಲ.

೪. ನಮ್ಮ ಮನೆಗಳಲ್ಲಿ ಇರುವ ಗಿಡಗಳು ನಮ್ಮ ಕುಟುಂಬದ ಸದಸ್ಯರಿದ್ದಂತೆ. 
ಅವುಗಳಿಗೆ ನಮ್ಮ ಪ್ರೀತಿ ಮತ್ತು ಆರೈಕೆ ಅವಶ್ಯವಿದೆ. 

ನಿತ್ಯ ಮುಂಜಾನೆ ಮತ್ತು ಸಂಜೆ ಅವುಗಳಿಗೆ ನೀರು ಉಣಿಸಿದ್ದಲ್ಲಿ, ಗುರು, ಚಂದ್ರ ಮತ್ತು ಸೂರ್ಯ ಗ್ರಹಗಳನ್ನು ಆರಾಧಿಸಿ ಅವುಗಳ ಅನುಗ್ರಹ ಪಡೆದಂತೆ ಆಗುತ್ತದೆ.
ಇದರಿಂದ ನಮಗೆ ಕಷ್ಟಗಳನ್ನು ಧೈರ್ಯದಿಂದ ಎದುರಿಸಿ ಅವುಗಳನ್ನು ನಿವಾರಣೆ ಮಾಡಿಕೊಳ್ಳುವ ಶಕ್ತಿ ಬರುತ್ದದೆ.

ದಿನ ನಿತ್ಯ ಮರಗಿಡಗಳಿಗೆ ನೀರು ಉಣಿಸುವವರಿಗೆ ಮಾನಸಿಕ ಸಮಸ್ಯೆ/ಖಿನ್ನತೆ, ಮಾನಸಿಕ ಒತ್ತಡಗಳು ಎಂದೆಂದಿಗೂ ಆಗುವುದಿಲ್ಲ..!.

೫. ಯಾರು ತಮ್ಮ ಪಾದರಕ್ಷೆ /ಚಪ್ಪಲಿ, ಕಾಲ ಕವಚ (shoes), ಕೈ ಕವಚಗಳು ಮತ್ತು ಕಾಲು ಚೀಲಗಳನ್ನು ಮನೆಗೆ ಬಂದಾಗ ಎಲ್ಲೆಂದರೆ ಅಲ್ಲಿ ಬಿಟ್ಟಿರುತ್ತಾರೆಯೋ/ಎಸೆದಿರುತ್ತಾರೆಯೋ ಅವರಿಗೆ ಅವರ ಶತ್ರುಗಳು ಹೆಚ್ಚಿನ ತೊಂದರೆ ಕೊಡುತ್ತಾರೆ‌. ಅವುಗಳನ್ನು ಮನೆಗೆ ಬಂದಾಗ ಸರಿಯಾದ ಜಾಗದಲ್ಲಿ ವ್ಯವಸ್ಥಿತವಾಗಿ ಇಟ್ಟಲ್ಲಿ ಗುರುವು ಪ್ರಸನ್ನನಾಗಿ ಶತ್ರುಗಳು ದೂರವಾಗಿ ಸಮಾಜದಲ್ಲಿ ನಿಮ್ಮ ಘನತೆ ಗೌರವಗಳು ಹೆಚ್ಚಾಗುತ್ತವೆ.

 ೬. ಹಾಸಿಗೆಯಿಂದ ಮುಂಜಾನೆ ಎದ್ದ ನಂತರ  ನಿಮ್ಮ ಹಾಸಿಗೆ ಸ್ವಚ್ಚವಾಗಿ ಇಟ್ಟು ಕೊಳ್ಳ ಬೇಕು, ಹಾಗೆ ಇಡದೇ, ನೀವು ಎದ್ದ ನಂತರ ಹಾಸಿಗೆಯ ಹೊದಿಕೆ, ನಿಮ್ಮ ಹೊದಿಕೆ, ತಲೆದಿಂಬುಗಳು ಅಸ್ತವ್ಯಸ್ತವಾಗಿದ್ದರೆ ನಿಮ್ಮನ್ನು ಶನಿ ಮತ್ತು ರಾಹುಗಳು ಕಾಡುತ್ತವೆ. ನೀವು ನಿತ್ಯ ಧರಿಸುವ ಬಟ್ಟೆಗಳು ಸ್ವಚ್ಚ ಇಲ್ಲದಿದ್ದರೆ ನಿಮ್ಮ ನಿತ್ಯದ ಕೆಲಸ ಕಾರ್ಯಗಳು ಎಂದೆಂದಿಗೂ ಸುಗಮವಾಗಿ ನಡೆನಯುವುದಿಲ್ಲ..!
ನೀವೂ ಮತ್ತು ನಿಮ್ಮ ಸುತ್ತಲಿನವರೂ ಸಂತೋಷವಾಗಿರುವುದಿಲ್ಲ.

ಇದನ್ನು ತಡೆಯಲು ನೀವು ಮುಂಜಾನೆ ಎದ್ದ ನಂತರ ನಿಮ್ಮ ಹಾಸಿಗೆಯನ್ನು ಸ್ವಚ್ಚವಾಗಿ ಇಟ್ಟುಕೊಂಡರೆ ನಿಮ್ಮ ದೈನಂದಿನ ಕೆಲಸಗಳು ಸುಗಮವಾಗಿ ನಡೆಯುತ್ತವೆ.

೭. ನಾವು ಯಾವಾಗಲೂ ನಮ್ಮ ಕಾಲುಗಳನ್ನು ಹಾಗೂ ಪಾದಗಳನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು. ಸತ್ಯ ಸಂಗತಿಯೆಂದರೆ ನಾವುಗಳು ಯಾರೂ ಇದರ ಬಗ್ಗೆ ಗಮನ ಹರಿಸುವುದಿಲ್ಲ. ಕೈ ಕಾಲುಗಳನ್ನು ಮತ್ತು ಪಾದಗಳನ್ನು ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು. ಮನೆಗೆ ಹೊರಗಿನಿಂದ ಬಂದಾಗ  ಮುಖ,  ಕೈ ಕಾಲುಗಳನ್ನು ಸ್ವಚ್ಚವಾಗಿ ತೊಳೆದುಕೊಳ್ಳಬೇಕು.  ( ಸಾಧ್ಯವಾದರೆ ತೊಳೆದುಕೊಂಡೆ ಮನೆಯ ಒಳಗೆ ಪ್ರವೇಶಿಸಿದರೆ ಉತ್ತಮ )

ಇದರಿಂದ ನಿಮಗೆ ಮನಃಶಾಂತಿ ಹಾಗೂ ನೆಮ್ಮದಿ ದೊರೆಯುತ್ತದೆ ಹಾಗೂ ಅನವಶ್ಯಕ ಸಿಟ್ಟು ಹಾಗೂ ಮನಸ್ಸಿಗೆ ಕಿರಿ-ಕಿರಿ ಆಗುವುದಿಲ್ಲ ಹಾಗೂ ದಿನಃ ಪೂರ್ತಿ ಸಂತೋಷವಾಗಿರುತ್ತೀರ.
ಇನ್ನಾದರೂ ಈ ಬಗ್ಗೆ ವ್ಯವಸ್ಥೆ ಮಾಡಿಕೊಂಡು, ಅದನ್ನು ಪಾಲಿಸಿ ಜೀವನದಲ್ಲಿ ಆಗುವ ಆಧ್ಬುತ ಬದಲಾವಣೆಗಳನ್ನು ಗಮನಿಸಿರಿ..!
 
೮. ನೀವು ಪ್ರತಿದಿನ ಮನೆಗೆ ಬರುವಾಗ ಮನೆಯಲ್ಲಿ ಉಪಯೋಗಿಸುವ ಯಾವುದಾದರೂ ವಸ್ತುವನ್ನು ಹೂವು/ಹಣ್ಣು/ತರಕಾರಿ ಕೈಯಲ್ಲಿ ಹಿಡಿದು ಮನೆಗೆ ತರಬೇಕು. 
ಹಾಗೆ ಮಾಡಿದರೆ ಅಂತಹ ಮನೆಯಲ್ಲಿ, ಮನೆಯ ಲಕ್ಷ್ಮಿಯು (ಸಂಪತ್ತಿನ ಅಧಿಪತಿ) ಮತ್ತು ಶುಕ್ರನು ಮನೆಯಲ್ಲಿ ಖಾಯಂ ಆಗಿ ನೆಲಸುತ್ತಾರೆ.

೯. ನೀವು ಉಪಹಾರ/ಊಟ ಮಾಡಿದ ತಟ್ಟೆಯಲ್ಲಿ ಯಾವತ್ತೂ  ಆಹಾರವನ್ನು ಉಳಿಸಬೇಡಿರಿ.

ಹಾಗೆ ಉಳಿಸಿದರೆ ನವಗ್ರಹಗಳೆಲ್ಲವೂ ನಿಮಗೆ ವಿರೋಧವಾಗಿ ನೀವು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. 

ಮುಂದುವರೆಯುವುದು
ಸಂಗ್ರಹ: ಪ್ರಶಾಂತಭಟ್ ಕೋಟೇಶ್ವರ

ಭುವಿಯ ಅಮೃತ ಪಂಚಾಮೃತ.

ಭುವಿಯ ಅಮೃತ ಪಂಚಾಮೃತ.

ಪಂಚ ಎಂದರೆ ಐದು.ಗೋವಿನ ಹಾಲು, ಮೊಸರು, ತುಪ್ಪ, ಜೇನುತುಪ್ಪ ಹಾಗೂ ಬೆಲ್ಲ(ಸಕ್ಕರೆ)   ಈ ಐದು ವಸ್ತುಗಳು ಅಮೃತಕ್ಕೆ ಸರಿಸಮಾನವಾದವು. ಈ ಎಲ್ಲಾ ವಸ್ತುಗಳನ್ನು ಕೂಡಿಸಿ ತಯಾರಿಸಿದ್ದೇ ಪಂಚಾಮೃತ.

ದೇವಾಸುರರು ಸಮುದ್ರಮಥನ ಮಾಡುವಾಗ ಅಮೃತ ಸಿಕ್ಕಿತು.ಆ ಅಮೃತಕ್ಕೆ ಸಮಾನವಾದುದು ಭುವಿಯಲ್ಲಿ ಪಂಚಾಮೃತವೆಂಬ ನಂಬಿಕೆ ಬೆಳೆದುಬಂದಿದೆ.ಪಂಚಾಮೃತದ ಸೇವನೆಯಿಂದ ದೀರ್ಘಾಯುಷ್ಯ ಪ್ರಾಪ್ತಿಯಾಗುತ್ತದೆಂದು ಹೇಳಲಾಗುತ್ತದೆ. ಪುರಾಣಗಳ ಪ್ರಕಾರ ಪಂಚಾಮೃತದಲ್ಲಿರುವ ಪಂಚವಸ್ತುಗಳು ಈ ತತ್ವವನ್ನು ತಿಳಿಸುತ್ತವೆ.. ಹಾಲು ಶುದ್ಧತೆ ಹಾಗೂ ಧಾರ್ಮಿಕತೆಯ ದ್ಯೋತಕವಾಗಿದೆ.ಮೊಸರು ಸಮೃದ್ಧಿ ಹಾಗೂ ಸಂತಾನದ ಪ್ರತೀಕವಾಗಿದೆ. ಮಧು (ಜೇನುತುಪ್ಪ) ಮಧುರವಾದ ಮಾತು ಹಾಗೂ ಏಕತೆಯನ್ನು ಸಮರ್ಥಿಸುತ್ತದೆ.ಸಕ್ಕರೆ ಅಥವಾ ಬೆಲ್ಲ ಮಾಧುರ್ಯ ಹಾಗೂ ಆನಂದವನ್ನು ತಿಳಿಸುತ್ತದೆ.ತುಪ್ಪ ಜ್ಞಾನ ಹಾಗೂ ವಿಜಯವನ್ನು ಸಮರ್ಥಿಸುತ್ತದೆ.

ಧಾರ್ಮಿಕ ಪೂಜಾವಿಧಾನಗಳು ಪಂಚಾಮೃತವಿಲ್ಲದೇ ಪರಿಪೂರ್ಣತೆಯನ್ನು ಪಡೆಯುವುದಿಲ್ಲ.ದೇವರ ಪ್ರತಿಮೆಗೆ ಹಾಲು,ಮೊಸರು,ತುಪ್ಪ,ಸಕ್ಕರೆ.ಜೇನುತುಪ್ಪಗಳಿಂದ ಪಂಚಾಮೃತದ ಅಭಿಷೇಕ ಮಾಡಲಾಗುತ್ತದೆ.ಕೊನೆಯಲ್ಲಿ ಅದನ್ನು ಪಂಚಾಮೃತ ತೀರ್ಥವೆಂದು ಪ್ರಸಾದ ರೂಪದಲ್ಲಿ ಭಕ್ತರಿಗೆ ಹಂಚಲಾಗುತ್ತದೆ.

ಪಂಚಾಮೃತವನ್ನು ಪ್ರತಿನಿತ್ಯವೂ ಸೇವಿಸುವುದರಿಂದ ದೇಹದಲ್ಲಾಗುವ ಪರಿಣಾಮಗಳು..

ದೈಹಿಕ ಆರೋಗ್ಯದ ವೃದ್ಧಿ.ಶರೀರ ಆರೋಗ್ಯ ಹಾಗೂ ಬಲದಿಂದ ಕೂಡಿರುತ್ತದೆ.ಶೀತ ಹಾಗೂ ತಲೆನೋವಿನ ನಿವಾರಣೆಯಾಗುತ್ತದೆ.ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.ನೆನಪಿನ ಶಕ್ತಿಯ ವೃದ್ಧಿಯಾಗುತ್ತದೆ. ಕ್ರಿಯಾಶೀಲತೆ ಹಾಗೂ ಚರ್ಮದ ಕಾಂತಿ ಹೆಚ್ಚುತ್ತದೆ.ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ ಖಾಲಿಹೊಟ್ಟೆಯಲ್ಲಿ ಪಂಚಾಮೃತವನ್ನು ಸೇವಿಸಿದರೊಳಿತು. ಇನ್ನು ಗರ್ಭಿಣಿ ಸ್ತ್ರೀಯರು ಪಂಚಾಮೃತವನ್ನು ಪ್ರತಿನಿತ್ಯವೂ ಸೇವಿಸಿದರೆ ಉತ್ತಮವಾಗಿ ಮಗುವಿನ ಬೆಳವಣಿಗೆಯಾಗುತ್ತದೆ ಹಾಗೂ ತಾಯಿ,ಮಗುವಿಗೆ ಒಳ್ಳೆಯ ಶಕ್ತಿ (Energy Booster) ಸಿಗುತ್ತದೆಂದು ಆಯುರ್ವೇದದಲ್ಲಿ ತಿಳಿಸಲಾಗಿದೆ.

 ಪಂಚಾಮೃತವನ್ನು ತಯಾರಿಸುವ ವಿಧಾನ (ಪ್ರಮಾಣ)
 - ಹಾಲು ೫ ಚಮಚ (ಕಾಯಿಸಿದ ಹಾಲನ್ನು ಬಳಸಬಾರದು) ಮೊಸರು ೪ ಚಮಚ ಸಕ್ಕರೆ ಅಥವಾ ಬೆಲ್ಲ ೩ ಚಮಚ ಗೋವಿನ ತುಪ್ಪ ೨ ಚಮಚ ಜೇನುತುಪ್ಪ ೧ ಚಮಚ ಈ ಪಂಚವಸ್ತುಗಳನ್ನೂ ಸರಿಯಾಗಿ ಮಿಶ್ರಣ ಮಾಡಿ ಕದಡಬೇಕು.ಆಗ ಮಧುರವಾದ ಪಂಚಾಮೃತ ಸಿದ್ಧವಾಗುತ್ತದೆ.
ಕ್ರಮವಾಗಿ ಒಂದಕಿಂತ ಒಂದು ಕಡಿಮೆ ಇದ್ದರೆ ಒಳ್ಳೆಯದು.
 ಇನ್ನು ಎಳನೀರುಗಳನ್ನೂ  ಇದಕ್ಕೆ ಸೇರಿಸುತ್ತಾರೆ..ಹಲವೆಡೆ ತುಳಸಿ,ಡ್ರೈಪ್ರೂಟ್ಸಗಳನ್ನೂ ಪಂಚಾಮೃತಕ್ಕೆ ಸೇರಿಸುತ್ತಾರೆ. ಪಂಚಾಮೃತ ಭುವಿಯಲ್ಲಿನ ಅಮೃತವೆಂಬುದಂತೂ ಸತ್ಯ.

ಪಂಚಾಮೃತ ಅಭಿಷೇಕದ ಮಹತ್ವ 
 ಐದು ವಸ್ತುಗಳು ಅಮೃತದಂತೆ: ಹಾಲು, ಮೊಸರು, ಜೇನು, ಬೆಲ್ಲ ಮತ್ತು ತುಪ್ಪ. ಬೆಲ್ಲವನ್ನು ಬಳಸಬೇಕಾಗಿರುವುದಾದರೂ ಸಹ, ಈ ದಿನಗಳಲ್ಲಿ ಬೆಲ್ಲದ ಬದಲು ಸಕ್ಕರೆಯನ್ನು ಬಳಸಲಾಗುತ್ತಿದೆ.
ಅವುಗಳಲ್ಲಿ ಐದು ದೇವತೆಯರು ವಾಸಿಸುತ್ತಾರೆ. ಸಕ್ಕರೆಯಲ್ಲಿ ಸವಿತ್ರು, ಜೇನಿನಲ್ಲಿ ವಿಶ್ವೇದೇವ, ತುಪ್ಪದಲ್ಲಿ ಸೂರ್ಯ, ಮೊಸರಿನಲ್ಲಿ ವಾಯು ಮತ್ತು ಹಾಲಿನಲ್ಲಿ ಸೋಮ. ಹೀಗಾಗಿ, ಅವುಗಳನ್ನು ನೀವು ಅಭಿಷೇಕವಾಗಿ ಅರ್ಪಿಸುವಾಗ, ಅದರ ಉದ್ದೇಶವೆಂದರೆ - ದೇವತೆಯರ ಗುಣಗಳು ನಮ್ಮ ಜೀವನದಲ್ಲಿ ಅರಳಲಿ ಎಂಬುದಾಗಿದೆ.
ನಾವು, ಪ್ರತಿಯೊಬ್ಬರ ಮನಸ್ಸಿನ ಶಾಂತಿಗಾಗಿಯೂ ಪ್ರಾರ್ಥಿಸುತ್ತೇವೆ.
ಎಲ್ಲರ ಮನಸ್ಸಿನಲ್ಲಿಯೂ ಆನಂದವಿರಲಿ.
ಜನರ ಜೀವನಗಳಲ್ಲಿ ಶಕ್ತಿ, ಧೈರ್ಯ ಮತ್ತು ದೀರ್ಘಾಯುಷ್ಯವಿರಲಿ.
ಜನರ ಜೀವನಗಳಲ್ಲಿ ತೃಪ್ತಿ ಮತ್ತು ಸಮೃದ್ಧಿಯಿರಲಿ.
ಜೀವನದಲ್ಲಿ ಕಾಂತಿಯಿರಲಿ.
ಮಾರುತಗಳು ಮತ್ತು ನದಿಗಳು ಮಧುರವಾಗಿ ಹರಿಯುತ್ತಿರಲಿ.
ನಮ್ಮ ಹಗಲುಗಳು ಮತ್ತು ರಾತ್ರಿಗಳು ಮಧುರವಾಗಿರಲಿ.
ಮಣ್ಣಿನ ಪ್ರತಿಯೊಂದು ಕಣವೂ ನಮಗೆ ಸಿಹಿಯನ್ನು ತರಲಿ.
ಆಕಾಶದಿಂದ, ದೇವತೆಯರಿಂದ ಮತ್ತು ಪಿತೃಗಳಿಂದ ನಮಗೆ ಸಿಹಿ ಲಭಿಸಲಿ.
ನಮ್ಮ ಮಾತು ಮತ್ತು ಯೋಚನೆಗಳು ಮಧುರವಾಗಿರಲಿ.
ಸಮಾಜವು ನಮಗೆ ಸಿಹಿಯನ್ನು ತರಲಿ.
ವನಸ್ಪತಿ (ಅರಣ್ಯದ ದೇವತೆ)ಯು ನಮಗೆ ಸಿಹಿಯನ್ನು ತರಲಿ.
ಸೂರ್ಯನು ನಮ್ಮ ಜೀವನಗಳಿಗೆ ಸಿಹಿಯನ್ನು ತರಲಿ.
ನಮ್ಮ ಸಂಪೂರ್ಣ ಜೀವನವು ಇತರ ಜನರ ಜೀವನಗಳಿಗೆ ಸಿಹಿಯನ್ನು ತರಲಿ.

ಸಂಗ್ರಹ: ಪ್ರಶಾಂತಭಟ್ ಕೋಟೇಶ್ವರ

ಶುಭ ಸಮಾರಂಭಗಳಲ್ಲಿ ಮಾವಿನ ತೋರಣವನ್ನು ಯಾಕೆ ಕಟ್ಟುತ್ತಾರೆ

ಶುಭ ಸಮಾರಂಭಗಳಲ್ಲಿ ಮಾವಿನ ತೋರಣವನ್ನು ಯಾಕೆ ಕಟ್ಟುತ್ತಾರೆ .?
 ಮನೆಯಲ್ಲಿ ,ಮದುವೆ;ಮುಂಜಿ ಅಥವಾ ಶುಭ ಸಮಾರಂಭಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳಿದ್ದಾಗ ಮಾವಿನ ತೋರಣ ಕಟ್ಟುತ್ತಾರೆ.! 
 ಈ ತೋರಣ ಅಲಂಕಾರಕ್ಕೆ ;ಸಂಪ್ರದಾಯಕ್ಕೆ  ಮಾತ್ರ ಸಿಮಿತವಲ್ಲ.
 ಮಾವಿನ ಎಲೆಗಳು ದ್ಯುತಿಸಂಶ್ಲೇಷಣ ಕ್ರೀಯೆಯನ್ನು ನಡೆಸುತ್ತವೆ.ಅಂದರೆ ಇಂಗಾಲದಡೈಆಕ್ಸೈಡ್'ನ್ನು  ತನ್ನೊಳಗೆ ತೆಗೆದುಕೊಂಡು ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ.! ಅಂದರೆ ಶುಭ-ಸಮಾರಂಭಗಳಲ್ಲಿ ಅತಿ ಹೆಚ್ಚಿನ ಜನರು ಸೇರಿದಾಗ ಅಲ್ಲಿ ಆಮ್ಲಜನಕದ ಕೊರತೆ ಉಂಟಾಗುತ್ತದೆ,ಹೀಗೆ ಹಲವಾರು ಜನ ಸೇರಿದಾಗ ನಮಗೆ ಉಸಿರಾಟದ ತೊಂದರೆಯಾಗುತ್ತಲ್ಲವೆ.? ನಮ್ಮ ದೇಹಕ್ಕೆ ಆಮ್ಲಜನಕ ಬೇಕಲ್ಲವೆ‌ ?.ಆದುದರಿಂದ ಈ ಆಮ್ಲಜನಕದ ಕೊರತೆಯನ್ನು ನಿಗಿಸಲು ಮಂಟಪದ ಸುತ್ತಮುತ್ತ ಮಾವಿನ  ಎಲೆಯ ತೋರಣ ಕಟ್ಟುತ್ತಾರೆ.!!
ಮನಸ್ಸು ಉತ್ಸಾಹದಿಂದ,ಆಹ್ಲಾದಕರವಾಗಿರಲು ಅದೆ ರೀತಿ ಮನೆಯೊಳಗೆ ತಾಜಾತನ ಇರುವಂತೆ ಕಾಪಾಡಲು ಧನಾತ್ಮಕವಾಗಿ ಯೋಚಿಸಲು,ಮನಸ್ಸು ಹಿಡಿತದಲ್ಲಿರಲು ಈ ರೀತಿ ಮಾವಿನ ತೋರಣ ಕಟ್ಟುತ್ತಾರೆ.!
• ಮಾವಿನ ಎಲೆಯೆ ಏಕೆ ತೋರಣಕ್ಕೆ ಉಪಯೋಗಿಸುತ್ತಾರೆ.?
 ಇತರೆ ಮರದ ಎಲೆಗಳನ್ನು ಹೋಲಿಸಿದರೆ ಮಾವಿನ ಎಲೆ ಅತಿ ಹೆಚ್ಚು ಕಾಲ ತಾಜಾವಾಗಿ ಹಸಿರಾಗಿ ಇರುತ್ತದೆ.! ಹಸಿರಿದಷ್ಟು ಎಲೆಗಳು ಹೆಚ್ಚು ಆಮ್ಲಜನಕವನ್ನು ಉತ್ಪತಿ ಮಾಡುತ್ತವೆ.! 
ಸನಾತನವಾಗಿ ಆಚರಿಸಿಕೊಂಡು ಬರುತ್ತಿರುವ ಪದ್ಧತಿ ಅತಿ ಶ್ರೀಮಂತವಾದುದು.! ನಾವು ಅದನ್ನು ಅರಿತು,ಅದರ ಆಚರಣೆಯನ್ನು ಮಾಡಿದರೆ ನೆಮ್ಮದಿಯ ಜೀವನ ನಡೆಸಬಹುದು.!

ದೇವಸ್ಥಾನದಲ್ಲಿ ತೀರ್ಥ ಸೇವನೆ ಮಾಡುವ ಕ್ರಮ

ದೇವಸ್ಥಾನದಲ್ಲಿ ತೀರ್ಥ ಸೇವನೆ ಮಾಡುವ ಕ್ರಮ

1.ತೀರ್ಥವನ್ನು ಬಲಗೈಯಲ್ಲಿಯೇ ಸ್ವೀಕರಿಸಬೇಕೆಂಬುದು ನಿಯಮ.

2.ಕೈಕೆಳಗೆ ವಸ್ತ್ರವೊಂದನ್ನು ಇಲ್ಲವೇ ಉತ್ತರೀಯವನ್ನು, (ಸ್ತ್ರೀಯರು ತಮ್ಮ ಸೀರೆಯ ಸೆರಗಿನ ತುದಿಯನ್ನು) ಹಿಡಿದಿರಬೇಕು. ಇದರ ಉದ್ದೇಶವೇನೆಂದರೆ, ಸ್ವೀಕರಿಸುವಾಗ ಅಥವಾ ಪ್ರಾಶನ ಮಾಡುವಾಗ ತೀರ್ಥವು ಕೆಳಗೆ ಬೀಳದಂತೆ ಎಚ್ಚರ ವಹಿಸುವುದಾಗಿದೆ. 

2.ತೀರ್ಥವನ್ನು ಸ್ವೀಕರಿಸುವಾಗ ನಮ್ಮ ತೋರುಬೆರಳನ್ನು ಹೆಬ್ಬೆರಳಿನ ಅಂತಿಮ ರೇಖೆಗೆ ಮುಟ್ಟುವಂತೆ ಮಡಿಸಿ ಅದರ ಮೇಲೆ ಹೆಬ್ಬೆರಳನ್ನು ಮಡಿಚಿಡಬೇಕು. ಉಳಿದ ಮೂರು ಬೆರಳುಗಳಲ್ಲಿ ಮಧ್ಯದ ಬೆರಳು ಮೇಲಿರುವಂತೆ, ನಂತರ ಉಂಗುರದ ಬೆರಳು ಮತ್ತು ಕೊನೆಯಲ್ಲಿ ಕಿರುಬೆರಳಿರುವಂತೆ ನೇರವಾಗಿ ಚಾಚಿರಬೇಕು. 

4. ಪ್ರಪ್ರಥಮವಾಗಿ ತೀರ್ಥವನ್ನು ತಲೆಯಮೇಲೆ ಪ್ರೋಕ್ಷಿಸಿಕೊಳ್ಳಬೇಕು. (ಮಧ್ವಗುರು ಪೂಜೆಯಲ್ಲಾದರೂ ಸರಿ)

5. ಮುಂಜಾನೆ ಸಂಧ್ಯಾವಂದನೆ ;ದೇವರಪೊಜೆ ನಂತರ ಆಹಾರ ಸೇವನೆಗೂ ಮೊದಲು ಮೂರೂ ಸಲ ತೀರ್ಥವನ್ನು ಸ್ವೀಕರಿಸಬೇಕು.(ಸಾತ್ವಿಕ ಆಹಾರ ಇದ್ದಲ್ಲಿ ಅಡ್ಡಿ ಇಲ್ಲ )

6.ಮಹಾಪೂಜೆ ಯಲ್ಲೂ ಸಹ ಊಟದ ಮೊದಲು ಮೂರೂ ಸಲ ತೀರ್ಥವನ್ನು ಸ್ವೀಕರಿಸಬೇಕು.

7.ತೀರ್ಥಗಳನ್ನು ಪ್ರಾಶನ ಮಾಡಿದ ನಂತರ ಕೈಯಲ್ಲಿ ಉಳಿದಿರುವ ತೇವಾಂಶವೂ ನಷ್ಟವಾಗದಂತೆ ನೆತ್ತಿಯ ಮೇಲೆ ಸವರಿಕೊಳ್ಳಬೇಕು, ಇಲ್ಲವಾದರೆ ಕೈಗಳ ಕೆಳಗೆ ಹಿಡಿದಿದ್ದ ವಸ್ತ್ರದಿಂದ ಅದನ್ನು ಒತ್ತಿಕೊಂಡು ಒರೆಸಿಕೊಳ್ಳಬೇಕು. 

8.ತೀರ್ಥವನ್ನು ಸ್ವೀಕರಿಸುವಾಗ ದೇಹವನ್ನು ಬಗ್ಗಿಸಿರಬೇಕು. ಇದು ದೇವರ ಅಭೀಷೇಕದ ತೀರ್ಥಕ್ಕೆ ನಾವು ನೀಡುವ ಗೌರವ ಮತ್ತು ತೋರುವ ಭಕ್ತಿಯ ಸಂಕೇತವಾಗಿರುತ್ತದೆ. 

9.ಮೂರು ತೀರ್ಥಗಳ ಸಾಂಕೇತಿಕ ವಿವರಣೆ: 
ಪ್ರಥಮಂ ಕಾಯಶುದ್ಧ್ಯರ್ಥಂ
ದ್ವಿತೀಯಂ ಧರ್ಮಸಾಧನಂ 
ತೃತೀಯಂ ಮೋಕ್ಷಸಿದ್ಧ್ಯರ್ಥಂ 
ಏವಂ ತೀರ್ಥಂ ಪಿಬೇತ್||
ಅರ್ಥ: ಮೊದಲನೆಯದು ಕಾಯ ಅಥವಾ ದೇಹ ಶುದ್ಧಿಗಾಗಿ; ಎರಡನೆಯದು ಧರ್ಮಸಾಧನೆಗಾಗಿ ಮತ್ತು ಮೂರನೆಯದು ಮೋಕ್ಷಸಿದ್ಧಿಗಾಗಿ ಈ ತೀರ್ಥಗಳನ್ನು ಕುಡಿಯಬೇಕು. 
ಕೆಲವೆಡೆ ಒಂದೇ ಬಾರಿ ತೀರ್ಥವನ್ನು ನೀಡುವರಾದರೂ ಒಂದರಲ್ಲೇ ಮೂರು ತೀರ್ಥಗಳನ್ನು ಅನುಸಂಧಾನಿಸಿ ಕುಡಿಯಬೇಕು. 

10.ತೀರ್ಥ ಸೇವನೆ ಸಮಯದಲ್ಲಿ ಹೇಳುವ ಮಂತ್ರ* :

ಅಕಾಲ ಮೃತ್ಯು ಹರಣಂ ಸರ್ವವ್ಯಾಧಿ ನಿವಾರಣಂl
ಸರ್ವ ದುರಿತೋಪಶಮನಂ ವಿಷ್ಣು ಪಾದೋದಕಂ ಶುಭಂll
ಶರೀರೆ ಜರ್ಜರೀ ಭೂತೆ ವ್ಯಾಧಿಗ್ರಸ್ತೇ ಕಳೇವರೇl
ಔಷಧಂ ಜಾಹ್ನವಿ ತೋಯಂ ವೈದ್ಯೋ ನಾರಾಯಣೋ ಹರೀಃll
ಸಂಗ್ರಹ: ಪ್ರಶಾಂತಭಟ್ ಕೋಟೇಶ್ವರ

ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ.

ನಿಮಗಿದು ತಿಳಿದಿರಲಿ
ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ.

ಮೇಷ ರಾಶಿ
ಅಶ್ವಿನಿ ನಕ್ಷತ್ರ
ಭರಣಿ ನಕ್ಷತ್ರ 
ಕೃತಿಕೆ ನಕ್ಷತ್ರದ ಮೊದಲನೇ ಪಾದ

ವೃಷಭ ರಾಶಿ
ಕೃತಿಕಾ ನಕ್ಷತ್ರದ 2,3,4 ನೇ ಪಾದ 
ರೋಹಿಣಿ ನಕ್ಷತ್ರ 
ಮೃಗಶಿರಾ ನಕ್ಷತ್ರದ 1,2 ನೇ ಪಾದ

ಮಿಥುನ ರಾಶಿ
ಮೃಗಶಿರಾ ನಕ್ಷತ್ರದ 3,4 ನೇ ಪಾದ 
ಆದ್ರಾ ನಕ್ಷತ್ರ ಮತ್ತು 
ಪುನರ್ವಸು ನಕ್ಷತ್ರದ 1,2,3 ನೇಪಾದ

ಕಟಕ ರಾಶಿ
ಪುನರ್ವಸು 4 ನೇ ಪಾದ
ಪುಷ್ಯ ಮತ್ತು 
ಆಶ್ಲೇಷ ನಕ್ಷತ್ರ

ಸಿಂಹ ರಾಶಿ
ಮಘ ನಕ್ಷತ್ರ, 
ಹುಬ್ಬ ನಕ್ಷತ್ರ 
ಉತ್ತರ ನಕ್ಷತ್ರದ 1 ನೇ ಪಾದ

ಕನ್ಯಾ ರಾಶಿ
ಉತ್ತರ ನಕ್ಷತ್ರದ 2,3,4 ನೇ ಪಾದ
ಹಸ್ತ ನಕ್ಷತ್ರ
ಚಿತ್ರಾ ನಕ್ಷತ್ರದ 1,2 ನೇ ಪಾದ

ತುಲಾ ರಾಶಿ
ಚಿತ್ರಾ ನಕ್ಷತ್ರದ 3,4 ನೇ ಪಾದ 
ಸ್ವಾತಿ ನಕ್ಷತ್ರ 
ವಿಶಾಖ ನಕ್ಷತ್ರದ 1,2,3 ನೇ ಪಾದ

ವೃಶ್ಚಿಕ ರಾಶಿ
ವಿಶಾಖ ನಕ್ಷತ್ರದ 4 ನೇ ಪಾದ 
ಅನುರಾಧ ನಕ್ಷತ್ರ
ಜೇಷ್ಠಾ ನಕ್ಷತ್ರ

ಧನಸ್ಸು ರಾಶಿ
ಮೂಲ ನಕ್ಷತ್ರ 
ಪೂರ್ವಾಷಾಡ ನಕ್ಷತ್ರ 
ಉತ್ತರಾಷಾಡ ನಕ್ಷತ್ರ

ಮಕರ ರಾಶಿ
ಉತ್ತರಾಷಾಡ ನಕ್ಷತ್ರದ 2,3,4 ನೇ ಪಾದ
ಶ್ರವಣ ನಕ್ಷತ್ರ 
ಧನಿಷ್ಟ ನಕ್ಷತ್ರದ 1,2 ನೇ ಪಾದ

ಕುಂಭ ರಾಶಿ
ಧನಿಷ್ಟ ನಕ್ಷತ್ರದ 3,4 ನೇ ಪಾದ
ಶತಭಿಷ ನಕ್ಷತ್ರ
ಪೂರ್ವಭಾದ್ರ 1,2,3 ನೇ ಪಾದ

ಮೀನ ರಾಶಿ
ಪೂರ್ವಭಾದ್ರ 4 ನೇ ಪಾದ
ಉತ್ತರಭಾದ್ರ ನಕ್ಷತ್ರ
ರೇವತಿ ನಕ್ಷತ್ರ

ತೀರ್ಥಪ್ರಾಶನದ ಮಹತ್ವ.

ತೀರ್ಥಪ್ರಾಶನದ ಮಹತ್ವ.

ನೀವು ದೇವಸ್ಥಾನದಲ್ಲಿ ಅರ್ಚಕರು ಬೆಳ್ಳಿ ಅಥವಾ ತಾಮ್ರದ ಪಾತ್ರೆಯಲ್ಲಿ ತೀರ್ಥವನ್ನು ಕೊಡುವುದನ್ನು ಗಮನಿಸಿರಬಹುದು. ಶುದ್ಧನೀರು ತುಳಸಿ ಎಲೆ ಮತ್ತು ಬೆಳ್ಳಿ ಅಥವಾ ತಾಮ್ರದ ಪಾತ್ರೆಯಲ್ಲಿದ್ದರೆ ಅದು ತ್ರಿದೋಷಗಳನ್ನು (ವಾತ,ಪಿತ್ಥ,ಕಫ) ನಿವಾರಿಸುವ ಔಷಧಿಯಾಗುತ್ತದೆ ಎನ್ನುತ್ತದೆ ಆಯುರ್ವೇದ.

ಅಸ್ಥಮಾ,ನೆಗಡಿ,ಕೆಮ್ಮು,ಶ್ವಾಸ ಹಾಗೂ ಹೃದಯಸಂಬಂಧಿಕಾಯಿಲೆಗಳನ್ನು ಹಾಗೂ ಇತ್ತೀಚಿನ ಮಾರಕ ರೋಗ ಡೆಂಗ್ಯೂವನ್ನೂ ಸಹ ತುಳಸಿಯ ಮೂಲಕ ನಿಯಂತ್ರಿಸಬಹುದೆಂದು ಆಯುರ್ವೇದ ತಿಳಿಸುತ್ತದೆ.

ಪಚನಕ್ರಿಯೆಗೂ ತುಳಸಿ ಸಹಕಾರಿ. ತುಳಸಿ ಎಲೆಗಳನ್ನು ತಿಂದರೆ ಜೀರ್ಣಶಕ್ತಿಯ ಉದ್ದೀಪನವಾಗುತ್ತದೆಂದು ಆಯುರ್ವೇದ ಹೇಳಿದೆ.ಹಾಗಾಗಿ ತುಳಸಿನೀರಿನಿಂದ ತಯಾರಿಸಲ್ಪಟ್ಟ ತೀರ್ಥವೂ ಸಹ ಔಷಧಿಯೇ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಹಲವಾರು ವೈಜ್ಞಾನಿಕ ಸಂಶೋಧನೆಗಳಿಂದ ತಾಮ್ರ,ಬೆಳ್ಳಿ ಹಾಗೂ ಮಣ್ಣಿನ ಪಾತ್ರೆಗಳಲ್ಲಿ ಶೇಖರಿಸಿದ ನೀರು ಆರೋಗ್ಯಕ್ಕೆ ಪಥ್ಯಕರ ಎಂಬುದು ಸಾಬೀತಾಗಿದೆ.
ಹಾಗೇ, ಶಂಖದಿಂದ ಅಭೀಷೇಕದ ನೀರು ತೀರ್ಥವಾಗುತ್ತದೆ.ಆಯುರ್ವೇದದ ಪ್ರಕಾರ ಶಂಖದ ನೀರಿಗೆ ಅನೇಕ ಔಷಧೀಯ ಗುಣಗಳಿರುತ್ತವೆ.ಇದು ಹೊಟ್ಟೆನೋವು, ತಲೆನೋವು,ಅಜೀರ್ಣತೆ,ದೃಷ್ಟಿ ಸಂಬಂಧಿ, ಚರ್ಮಸಂಬಂಧಿ ದೋಷಗಳನ್ನು ನಿವಾರಿಸುತ್ತದೆ.ಇದರ ಜೊತೆ ದೇವರ ಕಲ್ಲಿನ ಪ್ರತಿಮೆ ಅಥವಾ ಪಂಚಲೋಹ ವಿಗ್ರಹದ ಮೇಲೆ ಅಭಿಷೇಕ ಮಾಡಿದ್ದರಿಂದ ಪ್ರತಿಮೆಯಲ್ಲಿರುವ ಅನೇಕ ಸಕಾರಾತ್ಮಕ ಅಂಶಗಳೂ ತೀರ್ಥದೊಂದಿಗೆ ಸೇರುತ್ತವೆ. ತುಳಸಿ,ತಾಮ್ರ ಅಥವಾ ಬೆಳ್ಳಿ ಪಾತ್ರೆಯಲ್ಲಿನ ನೀರು, ಶಂಖದ ನೀರು,ದೇವರ ವಿಗ್ರಹದ ನೀರು, ಈ ಎಲ್ಲವುಗಳ ಸಮ್ಮಿಶ್ರಣ ತೀರ್ಥ.ಹಾಗಾಗಿ ತೀರ್ಥವೂ ಸಹ ಔಷಧಿಯೇ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
ಲೋಕಾಃ ಸಮಸ್ತಾಃ ಸುಖಿನೋ ಭವಂತು.

“ರಾಮ್ ರಾಮ್”

ಹಿಂದಿನಕಾಲದಲ್ಲಿ ಪರಸ್ಪರರು ಭೇಟಿಯಾದಾಗ “ರಾಮ್ ರಾಮ್” ಎನ್ನುವ ಪದ್ಧತಿಯಿತ್ತು.”ರಾಮ” ಶಬ್ದವನ್ನು ಬಿಡಿಸಿದಾಗ ಮೂರು ಅಕ್ಷರಗಳು ಸಿಗುತ್ತವೆ.ರ್+ಆ+ಮ್.. “ರ” ವ್ಯಂಜನಗಳಲ್ಲಿ ಇಪ್ಪತ್ತೇಳನೆಯದು. “ಆ” ಸ್ವರಗಳಲ್ಲಿ ಎರಡನೆಯದು. “ಮ್” ವ್ಯಂಜನಗಳಲ್ಲಿ ಇಪ್ಪತ್ತೈದನೆಯದು. ಇಪ್ಪತ್ತೇಳು+ಎರಡು+ಇಪ್ಪತ್ತೈದು = ಐವತ್ತನಾಲ್ಕು. ”ರಾಮ್ ರಾಮ್” ಎಂದರೆ ಐವತ್ತನಾಲ್ಕು + ಐವತ್ತನಾಲ್ಕು = ನೂರಾಎಂಟು. ನೂರಾಎಂಟು ನಮಗೆ ಪವಿತ್ರ ಸಂಖ್ಯೆ.ಜಪಮಾಲೆಯಲ್ಲಿರುವ ಮಣಿಗಳ ಸಂಖ್ಯೆ.ಜಪಮಾಲೆಯನ್ನು ಹಿಡಿದು ನೂರಾಎಂಟು ಬಾರಿ ಜಪ ಮಾಡಬೇಕಿಂದಿಲ್ಲ.”ರಾಮ ರಾಮ” ಎಂದರೆ ಸಾಕು, ಒಂದು ಮಾಲೆ ಜಪವನ್ನು ಮಾಡಿದ ಫಲ ಸಿಗುತ್ತದೆ..!! “ಏಹಿ ಮಹಂ ರಘುಪತಿ ನಾಮ ಉದಾರಾ ಅತಿಪಾವನ ಪುರಾನ ಶ್ರುತಿ ಸಾರಾ | ಮಂಗಲ ಭವನ ಅಮಂಗಲ ಹಾರೀ ಉಮಾ ಸಹಿತ ಜೇಹಿ ಜಪತ ಪುರಾರೀ ||” “ರಾಮ” ಎಂಬುದು ರಘುಪತಿಯ ಉದಾರನಾಮ.ಅದು ಅತ್ಯಂತ ಪವಿತ್ರ ಹೆಸರು.ವೇದ-ಪುರಾಣಗಳ ಸಾರ.ಸಕಲ ಕಲ್ಯಾಣಗಳ ಭವನ.ಅಮಂಗಲಗಳ ಹರಣ.ಈ ರಾಮನಾಮವನ್ನು ಪಾರ್ವತಿ ಸಹಿತ ಪರಮೇಶ್ವರ ಸದಾ ಜಪಿಸುತ್ತಿರುತ್ತಾನೆ. “ರಾಮ”ವೆಂಬ ಪವಿತ್ರನಾಮ ಸದಾ ನಮ್ಮ ಮನದಲ್ಲಿರಲಿ.ಶ್ರೀರಾಮನ ಅನುಗ್ರಹ ಸದಾ ನಮಗಿರಲಿ.

ಲೋಕಾಃ ಸಮಸ್ತಾಃ ಸುಖಿನೋ ಭವಂತು.
🚩🚩 ಹರೇ ರಾಮ 🚩🚩

ಬಾಡಿದ ತುಳಸಿಗಿಡವನ್ನು ಏನು ಮಾಡಬೇಕು?

ಬಾಡಿದ ತುಳಸಿಗಿಡವನ್ನು ಏನು ಮಾಡಬೇಕು?

ಉತ್ತರ: ತುಳಸಿ ಒಂದು ಸಸ್ಯ. ಆ ಸಸ್ಯದಲ್ಲಿರುವ ಜೀವಕ್ಕೆ ಎಷ್ಟು ಆಯುಷ್ಯವಿದೆಯೋ ಅಷ್ಟು ದಿವಸ ಇರುತ್ತದೆ. ಆ ನಂತರ ಗಿಡ ಬಾಡಿ(ಸತ್ತು) ಹೋಗುತ್ತದೆ. 

ತುಳಸಿಕಟ್ಟೆಯ ಅಥವ ಮನೆಯ ಹತ್ತಿರದ ಬಾಡಿ ಹೋದ ತುಳಸೀ ಗಿಡವನ್ನು ಅವಶ್ಯವಾಗಿ ತೆಗೆಯಬಹುದು. ತೆಗೆದು ಹೊಸ ಸಸಿಯನ್ನು ತಂದು ನೆಡಬೇಕು. 

ಬಾಡಿ ಹೋದ ಗಿಡವನ್ನು, ಮಂಗಳವಾರ, ಶುಕ್ರವಾರ, ಅಮಾವಾಸ್ಯಾ, ಪೌರ್ಣಮಿ, ಸಂಕ್ರಾಂತಿಗಳಂದು ತೆಗೆಯಬಾರದು.. ದ್ವಾದಶಿಯಂತೂ ಸರ್ವಥಾ ತೆಗೆಯಬಾರದು. 

ಸಾಮಾನ್ಯವಾಗಿ ಯಾವುದೇ ಗಿಡವನ್ನು ಪುರುಷರೇ ತೆಗೆಯಬೇಕು. ವಂಶವನ್ನು ಬೆಳೆಸುವ ಮಹತ್ತರ ಸೌಭಾಗ್ಯದ ಕಾರ್ಯವನ್ನು ಹೊತ್ತಿರುವ ಸ್ತ್ರೀಯರು ಅದನ್ನು ಮಾಡತಕ್ಕದ್ದಲ್ಲ. ಅತ್ಯಂತ ಅನಿವಾರ್ಯ ಸಂದರ್ಭದಲ್ಲಿ ಸ್ತ್ರೀಯರು ಬಾಡಿ ಹೋದ ಗಿಡವನ್ನು ತೆಗೆಯಬಹುದು.ಹೊಸದಾದ ಗಿಡವನ್ನು ಮುತ್ತೈದೆಯಾದ ಸ್ತ್ರೀಯರು ನೆಡುವುದು ಇಡಿಯ ಕುಲಕ್ಕೆ ಯಶಸ್ಸನ್ನು ನೀಡುವ ಪುಣ್ಯಕಾರ್ಯ.

ಗಿಡ ತೆಗೆದಾದ ಮೇಲೆ ನೆರಳಿನಲ್ಲಿ ಒಂದಷ್ಟು ದಿವಸ ಪೂರ್ಣ ಒಣಗಿಸಬೇಕು. 
ಕಾಂಡದ ಬಳಿಯಿರುವ ದೊಡ್ಡ ಗಾತ್ರದ ಕಾಷ್ಠಗಳನ್ನು ಕೆಲವು ಹೋಮ ಹವನಗಳಲ್ಲಿ ಬಳಸುವುದರಿಂದ ಹತ್ತಿರದ ವೈದಿಕರಿಗೆ ಮತ್ತು ದೇವಾಲಯಗಳಲ್ಲಿ ನೀಡಬಹುದು .
ರೆಂಬೆ ಕೊಂಬೆಗಳಲ್ಲಿರುವ ಸಣ್ಣ ಸಣ್ಣ ಗಾತ್ರದ ಕಡ್ಡಿಗಳನ್ನೆಲ್ಲ ಪುಟ್ಟಪುಟ್ಟದಾಗಿ ಮುರಿದಿಟ್ಟುಕೊಳ್ಳಬೇಕು. ನಿತ್ಯ ವೈಶ್ವದೇವ ಮಾಡಬೇಕಾದರೆ, ಅಥವಾ ಹೋಮ ಮಾಡಬೇಕಾದರೆ ಅದನ್ನು ಬಳಸಬೇಕು. ದಪ್ಪ ಗಾತ್ರದ ಕಡ್ಡಿಯನ್ನು ಗಂಧ ತೇಯುವಾಗ ಬಳಸಬೇಕು. ತುಳಸೀಕಾಷ್ಠವನ್ನು ಸಾಣೆಕಲ್ಲಿನ ಮೇಲೆ ತೇದ ನಂತರ ಅದರಿಂದ ಬರುವ ಗಂಧದ ನೀರನ್ನು ಸ್ವಾದೂದದಕ್ಕೆ ಸೇರಿಸಿ ದೇವರಿಗೆ ಅಭಿಷೇಕ ಮಾಡಬೇಕು. ದೇವರಿಗೆ ಅತ್ಯಂತ ಪ್ರಿಯ. 

ಕಾಂಡದ ಬಳಿಯಿರುವ ದೊಡ್ಡ ಗಾತ್ರದ ಕಾಷ್ಠಗಳನ್ನು ತುಳಸೀ ಮಣಿಗಳನ್ನು ಮಾಡಲು ಎತ್ತಿಟ್ಟುಕೊಳ್ಳಬಹುದು. 

ಮತ್ತು ವಿಗ್ರಹಗಳನ್ನು ಸ್ವಚ್ಛ ಮಾಡಲು, ಪಂಚಾಮೃತ ಅಭಿಷೇಕ ಮಾಡಿದಾಗ ವಿಗ್ರಹದಲ್ಲಿ ಉಳಿಯುವ ಅಂಶಗಳನ್ನು ತೆಗೆಯಲು ಪುಟ್ಟ ಪುಟ್ಟ ತುಳಸೀಕಾಷ್ಠಗಳು ತುಂಬ ಉಪಯೋಗವಾಗುತ್ತವೆ. 

ತುಳಸಿಯ ಕಾಷ್ಠವನ್ನು ತೆಗೆಯುವಾಗ ಕೈಗೆ ಸಿಗದಷ್ಟು ಸಣ್ಣಸಣ್ಣ ತುಳಸೀಕಾಷ್ಠದ ಕಣಗಳು ನೆಲದ ಮೇಲಿರುತ್ತವೆ. ಜೋಪಾನವಾಗಿ ಅವೆಲ್ಲವನ್ನು ತೆಗೆದು ಒಂದು ಉತ್ತಮ ಪಾತ್ರೆಯಲ್ಲಿಟ್ಟುಕೊಂಡು ದೇವರಿಗೆ ಧೂಪ ಹಾಕುವಾಗ ಅದನ್ನು ಬಳಸಬೇಕು. ಇದು ದೇವರಿಗೆ ಅತ್ಯಂತ ಪ್ರಿಯ. 

ಮನೆಯಲ್ಲಿ ಮರಣವುಂಟಾದಾಗ, ದೇಹವನ್ನು ಸುಡಬೇಕಾದರೆ ಚಿತೆಯಲ್ಲಿನ ನೂರಾರು ಕಟ್ಟಿಗೆಗಳ ಮಧ್ಯದಲ್ಲಿ ಒಂದು ಸಣ್ಣ ತುಳಸೀಕಾಷ್ಠವಿದ್ದರೂ ಸಕಲ ಪಾಪಗಳಿಂದ ಜೀವ ಮುಕ್ತನಾಗುತ್ತಾನೆ ಎಂದು ಶಾಸ್ತ್ರದ ವಚನವಿದೆ. 

ಯದ್ಯೇಕಂ ತುಲಸೀಕಾಷ್ಠಂ
ಮಧ್ಯೇ ಕಾಷ್ಠಶತಸ್ಯ ಚ 
ದಾಹಕಾಲೇ ಭವೇನ್ಮುಕ್ತಿಃ 
ಪಾಪಕೋಟಿಯುತಸ್ಯ ಚ

ಹೀಗಾಗಿ ಸಾವುಂಟಾದವರ ಮನೆಗೆ ಹೋಗುವಾಗ ಮನೆಯಲ್ಲಿನ ಒಂದಷ್ಟು ಕಾಷ್ಠವನ್ನು ತೆಗೆದುಕೊಂಡು ಹೋಗಿ ಕೊಡಬೇಕು. 

ಹೀಗೆ, ಕೈಗೆ ಸಿಗಲಾರದಂತಹ ಕಣದಿಂದ ಪುಡಿಯಿಂದ ಆರಂಭಿಸಿ ಗಟ್ಟಿಯ ಕಾಷ್ಠದವರೆಗೆ ತುಳಸೀ ಗಿಡ ಭಗವಂತನಿಗೆ ಸಮರ್ಪಿತವಾಗಬೇಕು. ತುಳಸೀ ಕಾಷ್ಟದಿಂದ ಮಣಿಗಳ ಮಾಡಿ ಧಾರಣೆ ಮಾಡಬಹುದು ಇದು ಶರೀರ ಹಾಗೂ ಮನಸ್ಸನ್ನು ಶುದ್ಧೀಕರಿಸುವುದು. ದೇವರ ಪೂಜೆಗೆ ತುಳಸಿ ಸಿಗದಿದ್ದಾಗ ತುಳಸೀ ಕಾಷ್ಟವನ್ನಾದರೂ ಉಪಯೋಗಿಸಬಹುದು. ತುಲಸೀ ಕಾನನಂ ಯತ್ರ ಯತ್ರ ಪದ್ಮವನಾನಿ ಚ। ವಸಂತಿ ವೈಷ್ಣವಾ ಯತ್ರ ತತ್ರ ಸನ್ನಿಹಿತೋ ಹರಿಃ।

ಯಾವ ಕಾರಣಕ್ಕೂ ಬಿಸಾಡಬಾರದು.

ಒಂದೊಳ್ಳೆ ಸುವಿಚಾರದೊಂದಿಗೆ ನಿರಂತರ...
ಸಂಗ್ರಹ: ಪ್ರಶಾಂತಭಟ್ ಕೋಟೇಶ್ವರ

ಆತ್ಮಾವಲೋಕ

ಆತ್ಮಾವಲೋಕ

“ಆತ್ಮ” ಎಂದರೇನು...?ಹಲವರಿಗೆ ಅರ್ಥೈಸಿಕೊಳ್ಳಲಾಗದ ಕ್ಲಿಷ್ಟ ಪದ.ಹಲವರಿಗೆ ಆತ್ಮಜ್ಞಾನವೆಂಬುದು ಆಧ್ಯಾತ್ಮಜಿಜ್ಞಾಸುಗಳಿಗೆ ಮಾತ್ರ ಎಂಬ ತಪ್ಪು ಕಲ್ಪನೆ.ಹಲವರಿಗೆ ಇದೆಲ್ಲ ವಯಸ್ಸಾದವರಿಗೆ,ವಿರಕ್ತರಿಗೆ ಎಂಬ ತಿರಸ್ಕೃತ ಭಾವನೆ.ನಮಗೆ ಶರೀರ ಮುಖ್ಯ, ಶರೀರದ ಅವಯವಗಳು ಮುಖ್ಯ ,ಮನಸ್ಸು,ಇಂದ್ರಿಯಜ್ಞಾನಗಳು ಮುಖ್ಯ,ಆದರೆ ಇವುಗಳನ್ನೆಲ್ಲಾ ನಿಯಂತ್ರಿಸುವ ಆತ್ಮ ಮಾತ್ರ ಗೌಣ..!!”ಶರೀರದಲ್ಲಿ ಆತ್ಮವೊಂದಿದೆ” ಎಂಬ ವಿಚಾರವೇ ಹಲವರಿಗೆ ತಿಳಿದಿಲ್ಲ.ಶರೀರವೆಂಬ ರಥವನ್ನು ನಿಯಂತ್ರಿಸುವ ಸಾರಥಿಯ ಬಗ್ಗೆಯೇ ಅರಿವಿಲ್ಲ.”ಆತ್ಮಾನಂ ರಥಿನಂ ವಿದ್ಧಿ”ಎಂಬ ಉಪನಿಷತ್ ವಾಕ್ಯದ ಜ್ಞಾನವಿಲ್ಲ..!!ಹಾಗಾಗಿ ಅಂತರಾತ್ಮವನ್ನು ಮರೆತು ವ್ಯವಹರಿಸುತ್ತೇವೆ.ಶರೀರವನ್ನೇ ಮುಖ್ಯವೆಂದು ತಿಳಿದು ಅಂತರಾತ್ಮಕ್ಕೆ ದ್ರೋಹ ಬಗೆಯುತ್ತೇವೆ.ಹಾಗಾಗಿ ಆತ್ಮಸ್ವರೂಪವನ್ನು ಅರಿಯದ ಮನುಷ್ಯ ಹಲವು ಜನ್ಮಗಳವರೆಗೂ ಪತಿತನಾಗಿರುತ್ತಾನೆ.

.ಪ್ರತಿ ಜೀವಿಯ ಶರೀರಕ್ಕೆ ಸ್ವತಃ ಚೈತನ್ಯವಿಲ್ಲ.ಆತ್ಮಚೈತನ್ಯದಿಂದಷ್ಟೇ ದೇಹಚೈತನ್ಯ.ಹೇಗೆ ಸೂರ್ಯ ಚಂದ್ರನಿಂದ ಬೆಳಕನ್ನು ಪಡೆದು ಶೋಭಿಸುತ್ತಾನೋ ಹಾಗೇ ಶರೀರ,ಮನಸ್ಸು,ಬುದ್ಧಿಗಳು ಆತ್ಮದಿಂದ ಶೋಭಿಸುತ್ತವೆ.ನಮ್ಮ ಶರೀರ,ಮನಸ್ಸು,ಬುದ್ಧಿಗಳನ್ನು ನಿಯಂತ್ರಿಸುವುದು ಇದೇ ಆತ್ಮ.ಶರೀರದಿಂದ ಆತ್ಮ ನಿವೃತ್ತಿಯಾದಾಗ ಶರೀರ ಅಚೈತನ್ಯವಾಗುತ್ತದೆ.ಶರೀರಕ್ಕೆ ನಾಶವಿದೆ,ಆತ್ಮಕ್ಕೆ ನಾಶವಿಲ್ಲ.ಶರೀರ ವಿನಾಶಿ,ಆತ್ಮ ಅವಿನಾಶಿ.

ಭಗವದ್ಗೀತೆಯ ಎರಡನೆಯ ಅಧ್ಯಾಯ ಸಾಂಖ್ಯಯೋಗ.ಅಲ್ಲಿ ಭಗವಾನ್ ಶ್ರೀಕೃಷ್ಣ ಆತ್ಮದ ಗುಣ,ಮಹತ್ವಗಳನ್ನು ತುಂಬಾ ಸರಳವಾಗಿ ವಿವರಿಸಿದ್ದಾನೆ.
“ನ ಜಾಯತೇ ಮ್ರಿಯತೇ ವಾ ಕದಾಚಿತ್”
ಜಗತ್ತಿನಲ್ಲಿ ಜನಿಸುವ ಸಕಲ ಚರಾಚರಗಳ ವಸ್ತುಗಳಿಗೆ ಜನ್ಮದ ಜೊತೆ ಸಾವೂ ನಿಶ್ಚಯವಾಗಿರುತ್ತದೆ.ಆದರೆ ಆತ್ಮ ಹಾಗಲ್ಲ,ಆತ್ಮಕ್ಕೆ ಹುಟ್ಟಿಲ್ಲ,ಸಾವಿಲ್ಲ,ಏಕೆಂದರೆ ಆತ್ಮ ಜನ್ಮರಹಿತ,ನಿತ್ಯ,ಸನಾತನ ಹಾಗೂ ಪುರಾತನ.ಶರೀರವು ನಾಶವಾದರೂ ಆತ್ಮ ನಾಶವಾಗುವುದಿಲ್ಲ.ಹಾಗಾಗಿ “ನಾನು ಸಾಯುತ್ತೇನೆ” ಎಂಬ ವಾಕ್ಯ ದೋಷಪೂರ್ಣ.”ನಾನು” ಎಂಬುದು ಆತ್ಮ.ಆತ್ಮಕ್ಕೆ ಸಾವಿಲ್ಲ.ಹಾಗಾಗಿ “ನಾನು ಸಾಯುತ್ತೇನೆ” ಎಂಬುದರ ಬದಲು “ನನ್ನ ಶರೀರ ಸಾಯುತ್ತದೆ” ಎಂದು ಹೇಳುವುದು ಉಚಿತ..!!ಆತ್ಮ ನಾಶರಹಿತ,ನಿತ್ಯ ಹಾಗೂ ಅವ್ಯಯ.

ಹೇಗೆ ನಾವು ಹಳೆಯ ಬಟ್ಟೆಯನ್ನು ತ್ಯಜಿಸಿ ಹೊಸಬಟ್ಟೆಯನ್ನು ಧರಿಸುವೆವೋ ಹಾಗೇ ಆತ್ಮವೂ ಸಹ ಹಳೆಯ ಶರೀರವನ್ನು ತ್ಯಜಿಸಿ ಹೊಸಶರೀರವನ್ನು ಧರಿಸುತ್ತಲೇ ಇರುತ್ತದೆ.ಆತ್ಮ ಗಾಳಿಯಂತೇ ನಿರಾಕಾರ.ನಿರಾಕಾರ ಆತ್ಮವನ್ನು ಶಸ್ತ್ರಗಳು ಕತ್ತರಿಸುವುದು ಹೇಗೆ..?ನಿರಾಕಾರ ಆತ್ಮವನ್ನು ಅಗ್ನಿ ದಹಿಸುವುದು ಹೇಗೆ..?ಆತ್ಮ ಅಗ್ನಿಗಿಂತಲೂ ಸೂಕ್ಷ್ಮ. ನಿರಾಕಾರವಾದ ಆತ್ಮನನ್ನು ನೀರು ಹೇಗೆ ತೋಯಿಸಬಹುದು..?ಗಾಳಿ ಹೇಗೆ ಒಣಗಿಸಬಹುದು..?ಹಾಗಾಗಿ ಪಂಚಭೂತಗಳ ಅಂಕೆಗೂ ನಿಲುಕದ ನಿರ್ಗುಣ,ನಿರಾಕಾರ,ಅಚಲ,ಸ್ಥಿರ,ಸನಾತನ,ನಿತ್ಯರೂಪವೇ ಆತ್ಮ.

“ನೈನಃ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ |
ನ ಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ ||

ಶರೀರದಲ್ಲಿರುವ ಚೈತನ್ಯವೇ ಆತ್ಮ.ಈ ಆತ್ಮಕ್ಕೆ ಬಾಲ್ಯ,ಕೌಮಾರ,ಯೌವ್ವನ, ವಾರ್ಧಕಾವಸ್ಥೆಗಳಿಲ್ಲ.ಬಾಲ್ಯದಲ್ಲಿ ನಡೆದ ಘಟನೆಗಳು ವಾರ್ಧಕಾವಸ್ಥೆಯಲ್ಲಿ ಜ್ಞಾಪಕದಲ್ಲಿರುತ್ತದೆ.”ನಾನು ಅಲ್ಲಿಗೆ ಹೋಗಿದ್ದೆ’”ನಾನು ಅದನ್ನು ಮಾಡಿದ್ದೆ” ಮುಂತಾದ ಸಂದರ್ಭಗಳಲ್ಲಿ “ನಾನು” ಎಂಬುದು ಆತ್ಮದ ಅಸ್ತಿತ್ವವನ್ನು ಸಾರುತ್ತದೆ.ಶರೀರಕ್ಕೆ ಮುಪ್ಪಿದೆಯೇ ಹೊರತು ಆತ್ಮಕ್ಕಲ್ಲ.ಆತ್ಮಕ್ಕೆ ಶರೀರಾವಸ್ಥೆಗಳ ಸಂಬಂಧವಿರುವುದಿಲ್ಲ. ಎಲ್ಲಿಯವರೆಗೆ ಶರೀರದಲ್ಲಿ ಚೈತನ್ಯವಿರುವುದೋ ಆಲ್ಲಿಯವರೆಗೆ ಶರೀರ ಕ್ರಿಯಾಶೀಲವಾಗಿರುತ್ತದೆ.ಚೈತನ್ಯ ಹೊರಟುಹೋದಮೇಲೆ ಶರೀರ ನಿಷ್ಕ್ರಿಯವಾಗುತ್ತದೆ.ಆ ಚೈತನ್ಯವೇ ಆತ್ಮ.ಆತ್ಮ ಹೊರಟನಂತರ ಶರೀರ ಜಡವಾಗುತ್ತದೆ.ಮರಣಾನಂತರದ ಸಂಸ್ಕಾರ ಶರೀರಕ್ಕೇ ಹೊರತು ಆತ್ಮಕ್ಕಲ್ಲ..!!ಶರೀರದಿಂದ ನಿವೃತ್ತಿಯಾದ ಆತ್ಮ ಇನ್ನೊಂದು ಶರೀರವನ್ನು ಧರಿಸುತ್ತದೆ.

ಹಲವು ಜನರಲ್ಲಿ ಯಾವನೋ ಒಬ್ಬ ಮಹಾಪುರುಷ ಈ ಆತ್ಮವನ್ನು ಆಶ್ಚರ್ಯದಂತೇ ನೋಡುತ್ತಾನೆ. ಇನ್ನೊಬ್ಬ ಮಹಾಪುರುಷ ಆತ್ಮತತ್ವವನ್ನು ಆಶ್ಚರ್ಯದಂತೇ ವರ್ಣಿಸುತ್ತಾನೆ. ಯಾವನೋ ಒಬ್ಬ ಅಧಿಕಾರಿ ಪುರುಷ ಇದನ್ನು ಆಶ್ಚರ್ಯದಿಂದ ಕೇಳುತ್ತಾನೆ.ಇನ್ನು ಹಲವರು ಆತ್ಮತತ್ವವನ್ನು ಕೇಳಿಯೂ ಕೂಡ ಇದನ್ನು ಅರಿಯಲಾರರು.
ಆತ್ಮತತ್ವವನ್ನು ಅರಿಯಲು ಪ್ರಯತ್ನಿಸುವವರು ವಿರಳಾತಿವಿರಳ.ಶರೀರದಲ್ಲೇ ನೆಲೆಸಿರುವ ಆತ್ಮವನ್ನು ಅರಿಯುವ ಗೊಡವೆಗೆ ಯಾರೂ ಹೋಗಲಾರರು.ನಮ್ಮೊಳಗಿನ ಆತ್ಮಕ್ಕೆ ಬೆಲೆಯನ್ನು ನೀಡಲಾರರು.ನಾವು ಸದಾ ಮನದ ಮಾತಿಗೆ ಮಹತ್ವ ನೀಡುತ್ತೇವೆಯೇ ಹೊರತು ಅಂತರಾಳದ ಮಾತಿಗಲ್ಲ.ಶರೀರದಲ್ಲಿರುವ ಅಂತರಾಳ ಅಥವಾ ಆತ್ಮ ವಿವೇಕವನ್ನು ಜಾಗೃತಗೊಳಿಸುತ್ತಿರುತ್ತದೆ.ಪಾಪಕಾರ್ಯಗಳನ್ನು ಮಾಡುವಾಗ ತಪ್ಪೆಂದು ಎಚ್ಚರಿಸುತ್ತದೆ.ತಪ್ಪಿಗೆ ಪ್ರಾಯಶ್ಚಿತ್ತದ ದಾರಿಯನ್ನು ಹುಡುಕುತ್ತಿರುತ್ತದೆ.ಆದರೆ ಮನಸ್ಸಿನ ಮಾತು ಹಾಗಲ್ಲ,ಅದು ಚಂಚಲ ಹಾಗೂ ವಿವೇಕಶೂನ್ಯವಾಗಿರುತ್ತದೆ ಪ್ರತಿಯೊಂದು ಕಾರ್ಯವನ್ನು ಮಾಡುವಾಗ ನಾವು ಮನಸ್ಸಿನ ಮಾತಿಗೆ ಮಹತ್ವ ಕೊಡದೇ ಅಂತರಾಳದ ಮಾತಿಗೆ ಮಹತ್ವವನ್ನು ನೀಡಿದರೆ ಬಾಳು ಬಂಗಾರವಾಗುತ್ತದೆ.ಸನ್ಮಾರ್ಗದಲ್ಲಿ ನಡೆಯಲು ಪ್ರೇರಣೆ ಸಿಗುತ್ತದೆ.

“ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್ |
ಆತ್ಮೈವ ಹ್ಯಾತ್ಮನೋ ಬಂಧುಃ ಆತ್ಮೈವರಿಪುರಾತ್ಮನಃ ||”

ಮನುಷ್ಯ ತನ್ನಿಂದಲೇ ತನ್ನನ್ನು ಸಂಸಾರಸಾಗರದಿಂದ ಉದ್ಧರಿಸಿಕೊಳ್ಳಬೇಕು.ತನ್ನಿಂದಲೇ ಅಧೋಗತಿಗೆ ಸಾಗಬಾರದು.ಏಕೆಂದರೆ ಮನುಷ್ಯ ತನಗೆ ತಾನೇ ಮಿತ್ರ,ತನಗೆ ತಾನೇ ಶತ್ರುವೂ ಆಗಿದ್ದಾನೆ.

ನಮ್ಮಲ್ಲಿರುವ ಆತ್ಮವನ್ನು ಅರಿತಾಗ ನಮಗೆ ಸಂಸಾರಸಾಗರದಿಂದ ವಿಮುಕ್ತ ಸಿಗುತ್ತದೆ.ಆತ್ಮತತ್ವವನ್ನು ಅರಿಯದೇ ಬಾಳಿದಾಗ ಬದುಕು ವ್ಯರ್ಥವಾಗುತ್ತದೆ.ಮನುಷ್ಯ ಜೀವನದ ಉದ್ದೇಶವೇ ಪರಮಾನಂದವನ್ನು ಪಡೆಯುವುದು.ಪರಮಾನಂದವೆಂದರೆ ಮಸ್ತಿ-ಮೋಜಲ್ಲ.ಆತ್ಮತತ್ವವನ್ನು ಅರಿಯುವುದೇ ಪರಮಾನಂದ.ಆ ಪರಮಾನಂದ ನಮ್ಮೊಳಗಿದೆ.ಉಪನಿಷತ್ತುಗಳ ಪ್ರಕಾರ”ನಮ್ಮ ಆತ್ಮವೇ ಪರಮಾನಂದ.ಅದಿರುವುದು ನಮ್ಮಲ್ಲೇ.ಅದನ್ನು ಅರಿತುಕೊಳ್ಳಬೇಕು”.ಆ ಪರಮಾನಂದವನ್ನು ಅನ್ವೇಷಿಸುವ ಪ್ರಾಮಾಣಿಕ ಪ್ರಯತ್ನ ನಮ್ಮದಾಗಿರಲಿ..

ಹೆಣ್ಣು ಮಕ್ಕಳ ಕೂದಲು ಅತ್ಯಂತ ಪವಿತ್ರ

ಹೆಣ್ಣು ಮಕ್ಕಳ ಕೂದಲು ಅತ್ಯಂತ ಪವಿತ್ರ

ಮುತ್ತೈದೆಯರ ಕೂದಲು ಅಮೃತ ಸ್ವರೂಪ. 
ಆದ್ದರಿಂದ ಮುತ್ತೈದೆಯರು ಯಾವತ್ತೂ ಕೂದಲು ತೆಗೆಯಬಾರದು. 

ಸ್ತ್ರೀಯರ ಕೇಶ ಮಾಂಗಲ್ಯದ್ಯೋತಕವಾದ್ದರಿಂದ ಅದರ ಕರ್ತನ ಗಂಡನಿರುವಷ್ಟು ಸಮಯ ಮಾಡಲೇಬಾರದು. (ಹರಕೆ ಇತ್ಯಾದಿ ಹೊರತು ಪಡಿಸಿ)

ಹೆಣ್ಣು ಮಕ್ಕಳ ಕೂದಲಿನಲ್ಲಿ ಗಂಗಾ, ಯಮುನಾ, ಸರಸ್ವತಿ, ಲಕ್ಷ್ಮೀದೇವಿಯರ ಸನ್ನಿಧಾನವಿದೆ. ಕೂದಲನ್ನು ಮೂರುಭಾಗಮಾಡಿ ಜಡೆ ಹೆಣೆಯಬೇಕು. ಆ ಮೂರು ಭಾಗಗಳಲ್ಲಿ ಗಂಗಾ, ಯಮುನಾ, ಸರಸ್ವತಿರು ಇರುತ್ತಾರೆ. ಮಧ್ಯೆ ಬೈತಲೆಯಲ್ಲಿ ಲಕ್ಷ್ಮೀದೇವಿಯ ಸನ್ನಿಧಾನ. 
ಆದ್ದರಿಂದ ಸ್ತ್ರೀಯರು ಪ್ರತಿನಿತ್ಯ ತಲೆಗೆ ಸ್ನಾನ ಮಾಡಬಾರದು. 

ಶುಕ್ರವಾರ, ಮಂಗಳವಾರ, ಅತ್ತೆ ಮಾವಂದಿರ ಶ್ರಾದ್ಧದಂದು, ಉತ್ಸವದಂದು, ಅಭ್ಯಂಜನ ದಂದು, (ನದೀ ಸ್ನಾನ, ಸಮುದ್ರಸ್ನಾನ) ಮಾತ್ರ ತಲೆ ಸ್ನಾನ ಮಾಡಬೇಕು. ಉಳಿದ ದಿನಗಳಲ್ಲಿ ಕಂಠಪರ್ಯಂತ ಸ್ನಾನ ಮಾತ್ರ.

ಇದಲ್ಲದೆ ರಜಸ್ವಲೆಯಾದಾಗ, ಆಶೌಚವಿದ್ದಾಗ, ಅಸ್ಪರ್ಶರನ್ನು ಮುಟ್ಟಿದರೆ ಸಚೈಲವಾಗಿ ತಲೆಸ್ನಾನ ಮಾಡಬೇಕು. ಆದ್ದರಿಂದ ಸ್ತ್ರೀಯರ ಕೇಶವು ಕೇವಲ ಸೌಂದರ್ಯಕ್ಕಾಗಿ ಅಲ್ಲ.
ಸಂಗ್ರಹ: ಪ್ರಶಾಂತಭಟ್ ಕೋಟೇಶ್ವರ

ದೀಪ ಲಕ್ಷಣ: ಮನೆಯೊಳಗೆ ದೇವರ ದೀಪ ಹೇಗಿರ ಬೇಕು?

ದೀಪ ಲಕ್ಷಣ: ಮನೆಯೊಳಗೆ ದೇವರ ದೀಪ ಹೇಗಿರ ಬೇಕು?

ಇದೊಂದು ಮಹಾ ಜಿಜ್ಞಾಸೆಯ ವಿಷಯ ಆಗಿದೆ. ಒಬ್ಬೊಬ್ಬರು ಒಂದೊಂದು ತರಹ ಹೇಳಿ ತಲೆ ಕೆಡಿಸಿ ಬಿಡುತ್ತಾರೆ. ನಿಜವಾದ  ತತ್ವಗಳು, ವಾಡಿಕೆಗಳೇನು? ಅನೇಕ ಜನ ದೂರದರ್ಶನ ವಾಹಿನಿಗಳ ಪಾಠಗಳಿಂದ ಏನೇನೋ ಮಾಡ ಹೋಗಿ ಕೊನೆಗೆ ಗೊಂದಲದಲ್ಲಿ ಬಿದ್ದಿದ್ದೂ ಇದೆ. ನಾವು 'ತಸ್ಮತ್ ಶಾಸ್ತ್ರ ಪ್ರಮಾಣೇಶು' ಎಂದಂತೆ ಶಾಸ್ತ್ರ ವಚನವನ್ನು ಮಾತ್ರ ಹೇಳ ಬಹುದಷ್ಟೆ.

ತಿಲ ತೈಲ (ಎಳ್ಳೆಣ್ಣೆ) ತೆಂಗಿನಎಣ್ಣೆ ಮತ್ತು ಘೃತ (ತುಪ್ಪ) ದೀಪಗಳು ಮನೆಯೊಳಗೆ ದೇವರ ಕೋಣೆಯಲ್ಲಿಡಲು ಯೋಗ್ಯ. ಇನ್ಯಾವುದೇ ತೈಲಗಳು ದೇವರಿಗೆ ಯೋಗ್ಯವಲ್ಲ. ಆ ಇತರ ತೈಲಗಳು ವಾಮ ಪ್ರಯೋಗಾದಿಗಳಿಗೆ ಸಂಬಂಧಿಸಿದ್ದಾಗಿದೆ. ತಿಲವು ಪಾಪಹರವಾದರೆ, ಘೃತವು ಮೋಕ್ಷದಾಯಕ.

ಒಂದು ಸ್ಥಂಬದಲ್ಲಿ ಒಂದೇ ದೀಪ ಉರಿಯ ಬೇಕು ಅಥವಾ ದೀಪ ನಮಸ್ಕಾರ, ಉದ್ಘಾಟನೆಗಳ ಸಂದರ್ಭಗಳಲ್ಲಿ ಐದು (ಅದಕ್ಕಿಂತ ಹೆಚ್ಚು) ದೀಪ ಒಂದೇ ಸ್ಥಂಭದಲ್ಲಿ ಉರಿಯ ಬೇಕು. 
*ಎರಡು ದೀಪ ಒಂದೇ ಸ್ಥಂಭದಲ್ಲಿದ್ದರೆ ಇದು ಭಿನ್ನಾಭಿಪ್ರಾಯ ಸೂಚಕ.(ಒಂದೇ ದೀಪ ಇದ್ದರೆ ಹಚ್ಚಬಹುದು)
*ಮೂರು ಇದ್ದರೆ ಮರಣ ಸೂಚಕ.(ಒಂದೇ ಸ್ಥಂಭದಲ್ಲಿದ್ದರೆ)
*ನಾಲ್ಕು ಇದ್ದರೆ ಗೊಂದಲ. 
*ಐದು ದೀಪಗಳು ಆರಾಧನೆಗೆ ಮಾತ್ರ. 
 

ಇದರಲ್ಲಿ ಬತ್ತಿಗಳ ಪ್ರಮಾಣ: 
*ಎರಡು ಬತ್ತಿ ದೇಹ ಮತ್ತು ಪ್ರಾಣಗಳ ಸಂಕೇತ.
*ಮೂರು ಬತ್ತಿ ತ್ರಿಶಕ್ತಿ ರೂಪ.
*ನಾಲ್ಕು ಬತ್ತಿಯು ಉತ್ತಮವಲ್ಲ.
*ಐದು ಬತ್ತಿಗಳು ಪಂಚಭೂತಗಳ ಸಂಕೇತ. 
ಹಾಗಾಗಿ ನಾಲ್ಕು ಬತ್ತಿ ಬಿಟ್ಟು ಯಾವುದನ್ನೂ ಹಾಕ ಬಹುದು. ಆದರೂ ಎರಡು ಬತ್ತಿಯೇ ಮನಗಳಲ್ಲಿ ಶ್ರೇಷ್ಟ. ದೀಪ ಸ್ಥಂಭ, ದೀಪದ ಇಂಧನ ತೈಲವು ಮಲಿನ ಆಗಿರ ಬಾರದು. ಹಾತೆ, ಕೀಟಾದಿಗಳು ಬಿದ್ದಿದ್ದರೆ ಅದನ್ನು ಶುಚಿಯಾಗಿಡ ಬೇಕು. ಎಳ್ಳೆಣ್ಣೆ ಮತ್ತು ತುಪ್ಪ ಮಿಶ್ರಣವಾಗಲೇ ಬಾರದು. ಕೈಯಲ್ಲಿ ಯಾವುದಾದರೂ ಬೇರೆ ತೈಲ ಇದ್ದರೆ ಇನ್ನೊಂದು ತೈಲ ಮುಟ್ಟ ಬೇಕಾದರೆ ಕೈಯ್ಯನ್ನು ಪ್ರಕ್ಷಾಳನ (ತೊಳೆದು) ಮಾಡಿಯೇ ಮುಟ್ಟ ಬೇಕು. ಅಂದರೆ ತುಪ್ಪದ ಕೈಯಲ್ಲಿ ಎಳ್ಳೆಣ್ಣೆ ಮುಟ್ಟ ಬಾರದು ಎಂದರ್ಥ.

ದೇವರ ದೀಪವನ್ನು ದೇವರ ಬಲ ಭಾಗದಲ್ಲಿಡ ಬೇಕು. (ಒಂದೇ ದೀಪ ಇಡುವುದಿದ್ದರೆ ಮಾತ್ರ. ಎರಡಿದ್ದರೆ ಎಡ ಬಲಗಳಲ್ಲಿ ಇಡ ಬಹುದು) ದೀಪದ ಮುಖ ಯಾವಾಗಲೂ ನಮ್ಮ ಅಂದರೆ ಪೂಜಿಸುವವರ ಕಡೆಗೆ, ಪೂರ್ವಾಭಿಮುಖ, ಉತ್ತರಾಭಿಮುಖ ಅಥವಾ ದೇವರ ಕಡೆ ಸ್ವಲ್ಪ ವಾಲುವಂತೆಯೂ ಇಡ ಬಹುದು. ಇದು ಶಾಸ್ತ್ರೋಕ್ತವಾದ ದೀಪ ಲಕ್ಷಣ...

ಸಂವತ್ಸರ

📅📆📅📆📅📆📅📆📅📆

ನಾವೆಲ್ಲರೂ ನಮ್ಮ ಹುಟ್ಟಿದ ವರ್ಷವನ್ನು ಥಟ್ಟನೆ ಹೇಳುತ್ತೇವೆ. ಆದರೆ ಭಾರತೀಯ ಪಂಚಾಂಗ ರೀತ್ಯಾ ಹುಟ್ಟಿದ ಸಂವತ್ಸರದ ಹೆಸರು ಹೇಳಲು ಮಾತ್ರ ತಡಕಾಡುತ್ತೇವೆ . ಇಗೋ ಇಲ್ಲಿದೆ ನೋಡಿ ನಿಮ್ಮ ಹುಟ್ಟಿದ ವರ್ಷ ಯಾವ ಸಂವತ್ಸರದಲ್ಲಿದೆಯೆಂಬ ವಿವರ

*( 1867, 1927,1987,)*: ಪ್ರಭವ
*(1868,1928,1988)*: ವಿಭವ 
*(1869,1929,1989)*: ಶುಕ್ಲ 
*(1870,1930,1990)*: ಪ್ರಮೋದೂತ
*(1871,1931, 1991)*: ಪ್ರಜೋತ್ಪತ್ತಿ 
*(1872,1932,1992)*: ಅಂಗೀರಸ
*(1873,1933,1993)*: ಶ್ರೀಮುಖ 
*(1874,1934,1994)*: ಭಾವ 
*(1875,1935,1995)*:ಯುವ 
*(1876,1936,1996)*: ధాత
*(1877,1937,1997)*: ಈಶ್ವರ 
*(1878,1938,1998)*: ಬಹುಧಾನ್ಯ
*(1879,1939,1999)*: ಪ್ರಮಾದಿ 
*(1880,1940,2000)*: ವಿಕ್ರಮ
*(1881,1941,2001)*: ವೃಷ
*(1882,1942,2002)*: ಚಿತ್ರಭಾನು 
*(1883,1943,2003)*: ಸ್ವಭಾನು 
*(1884,1944,2004)*: ತಾರಣ 
*(1885,1945,2005)*: ಪಾರ್ಥಿವ 
*(1886,1946,2006)*: ವ್ಯಯ 
*(1887,1947,2007)*: ಸರ್ವಜಿತ್
*(1888,1948,2008)*:
ಸರ್ವಧಾರಿ 
*(1889,1949,2009)*: ವಿರೋಧಿ 
*(1890,1950,2010)*: ವಿಕೃತಿ 
*(1891,1951,2011)*: ಖರ
*(1892,1952,2012)*: ನಂದನ 
*(1893,1953,2013)*: ವಿಜಯ
*(1894,1954,2014)*: ಜಯ
*(1895,1955,2015)*: ಮನ್ಮಥ
*(1896,1956,2016)*: ದುರ್ಮುಖಿ
*(1897,1957,2017)*: ಹೇವಿಳಂಬಿ
*(1898,1958,2018)*: ವಿಳಂಬಿ 
*(1899,1959,2019)*: ವಿಕಾರಿ
*(1900,1960,2020)*: ಶಾರ್ವರಿ 
*(1901,1961,2021)*: ಪ್ಲವ 
*(1902,1962,2022)*: ಶುಭಕೃತ 
*(1903,1963,2023)*: ಶೋಭಕೃತ 
*(1904,1964,2024)*: ಕ್ರೋಧಿ 
*(1905,1965,2025)*: ವಿಶ್ವಾವಸು 
*(1906,1966,2026)*: ಪರಾಭವ
*(1907,1967,2027)*: ಪ್ಲವಂಗ 
*(1908,1968,2028)*: ಕೀಲಕ 
*(1909,1969,2029)*: ಸೌಮ್ಯ 
*(1910,1970,2030)*: ಸಾಧಾರಣ 
*(1911,1971,2031)*: ವಿರೋಧಿಕೃತ 
*(1912,1972,2032)*: ಪರಿಧಾವಿ
*(1913,1973,2033)*: ಪ್ರಮಾದ
*(1914,1974,2034)*: ಆನಂದ
*(1915,1975,2035)*: ರಾಕ್ಷಸ
*(1916,1976,2036)*: ನಳ
*(1917,1977,2037)*: ಪಿಂಗಳ
*(1918,1978,2038)*: ಕಾಳಯುಕ್ತಿ
*(1919,1979,2039)*: ಸಿದ್ಧಾರ್ಥಿ
*(1920,1980,2040)*: ರೌದ್ರಿ 
*(1921,1981,2041)*: ದುರ್ಮತಿ 
*(1922,1982,2042)*: ದುಂದುಭಿ
*(1923,1983,2043)*: ರುಧಿರೋದ್ಗಾರಿ 
*(1924,1984,2044)*: ರಕ್ತಾಕ್ಷಿ 
*(1925,1985,2045)*: ಕ್ರೋಧನ
*(1926,1986,2046)*: ಅಕ್ಷಯ.

ನರಕ ಚತುರ್ದಶಿ

ನರಕ ಚತುರ್ದಶಿ 27-10-2019 ಭಾನುವಾರ

ನರಕಚತುರ್ದಶಿ ಲೋಕ ಕಂಟಕನಾಗಿದ್ದ ನರಕಾಸುರ ಹತನಾದ ದಿನ.ಶ್ರೀಮನ್ ಮಹಾವಿಷ್ಣುವಿನ ಅವತಾರವೆಂದೇ ನಂಬಿರುವ ಶ್ರೀಕೃಷ್ಣ ನರಕಾಸುರನನ್ನು ವಧಿಸಿದ ದಿನ.ನರಕಾಸುರ ಬಂಧಿಸಿಟ್ಟಿದ್ದ ಹದಿನಾರು ಸಾವಿರದ ನೂರ ಎಂಟು ಸ್ತೀಯರನ್ನು ಬಂಧಮುಕ್ತಗೊಳಿಸಿ ತಾನೇ ಅವರೆಲ್ಲರನ್ನೂ ಶ್ರೀ ಕೃಷ್ಣ ವರಿಸುತ್ತಾನೆ.ಇದು ಲೀಲಾಮಯ ಶ್ರೀಕೃಷ್ಣನ ಭಾಗವತದ ಕತೆಗಳಲ್ಲಿ ಒಂದು.

ನರಕಾಸುರನೆಂಬ ರಾಕ್ಷಸನು ಹಿಂದೆ ಶೋಣಿತಾಪುರವನ್ನು ( ಪ್ರಾಗ್ಜ್ಯೋತಿಶಪುರ) ಆಳುತ್ತಿದ್ದ. ಈಶ್ವರನನ್ನು ತಪಸ್ಸು ಮಾಡಿ ತನಗೆ ಸ್ತ್ರೀಯರಿಂದ ಮಾತ್ರವೇ ಮರಣ ದೊರೆಯುವಂತಹ ಅಮೂಲ್ಯ ವರವೊಂದನ್ನು ಪಡೆದು ಜನ ಕಂಟಕನಾಗಿ ಮೆರೆಯತೊಡಗಿದನು.

ನರಕಾಸುರನು ಋಷಿಗಳ ತಪಸ್ಸಿಗೆ ತಪೋಭಂಗ ಮಾಡುತ್ತಿದ್ದನು. ಯಜ್ಞಯಾಗಾದಿಗಳಿಗೆ ಅಡ್ಡಿಮಾಡುತ್ತಿದ್ದನು. ಋಷಿಪತ್ನಿಯರನ್ನು ಹಿಂಸಿಸುತ್ತಿದ್ದನು. ಅಲ್ಲದೆ ಲೋಕಕಂಟಕನಾಗಿ ದೇವಾದಿದೇವತೆಗಳಿಗೆ ಉಪದ್ರವ ನೀಡುತ್ತಿದ್ದನು.

ಉದ್ಧಟತನದಿಂದ ಮೆರೆಯುತ್ತಿದ್ದ ನರಕಾಸುರನನ್ನು ಕೊಲ್ಲಲೇಬೇಕೆಂಬ ಪರಿಸ್ಥಿತಿ ಅನಿವಾರ್ಯವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಎಲ್ಲಾ ದೇವತೆಗಳು ಋಷಿಮುನಿಗಳು ನರಕಾಸುರನ ಸಂಹಾರ ಮಾಡಬೇಕೆಂದು ಕೃಷ್ಣನಲ್ಲಿ ವಿನಂತಿಸಿಕೊಂಡರು. ಇವರ ಪ್ರಾರ್ಥನೆಗೆ ಮನಸೋತ ಶ್ರೀಕೃಷ್ಣನು ನರಕಾಸುರನನ್ನು ಸಂಹಾರ ಮಾಡಲು ನಿರ್ಧರಿಸಿದನು.

ಆದರೆ ತನಗೆ ಸ್ತ್ರೀಯರಿಂದಲೇ ಮರಣ ಎಂಬ ವರಪಡೆದಿದ್ದ ಕಾರಣ ಆತನನ್ನು ಕೊಲ್ಲುವುದು ಕೃಷ್ಣನಿಗೆ ಸುಲಭವಾಗಿರಲಿಲ್ಲ. ಅದಕ್ಕಾಗಿ ಶ್ರೀಕೃಷ್ಣನು ಒಂದು ಉಪಾಯವನ್ನು ಮಾಡಿದನು. ತನ್ನ ಪತ್ನಿಯಾದ ಸತ್ಯಭಾಮೆಯ ಮುಖಾಂತರ ಆಶ್ವಯುಜ ಮಾಸದ ಕೃಷ್ಣಪಕ್ಷದಂದು ಅವನನ್ನು ಸಂಹರಿಸಿದನು.

ನರಕದಂತಾಗಿದ್ದ ಲೋಕವು ಅವನ ಸಂಹಾರದಿಂದ ಪುಣ್ಯಪಾವನವಾಯಿತು. ಯಜ್ಞಯಾಗಾದಿಗಳು ಯಾವುದೇ ಅಡ್ಡಿಯಿಲ್ಲದೆ ಸರಾಗವಾಗಿ ನಡೆಯತೊಡಗಿದವು. ತಪಸ್ಸುಗಳು ಉತ್ತಮ ರೀತಿಯಲ್ಲಿ ಸಾಗಿದವು.

ಇನ್ನೊಂದು ಹಿನ್ನೆಲೆಯ ಪ್ರಕಾರ, ನರಕಾಸುರನು 16,000 ಗೋಪಿಕಾ ಸ್ತ್ರೀಯರನ್ನು ಬಂಧನದಲ್ಲಿಟ್ಟಿದ್ದನು ಮತ್ತು ಅವರಿಗೆ ಅತೀವ ಕಿರುಕುಳವನ್ನು ನೀಡುತ್ತಿದ್ದನು. ಅಂತಹ ಪರಿಸ್ಥಿತಿಯಲ್ಲಿ ಗೋಪಿಕಾ ಸ್ತ್ರೀಯರೆಲ್ಲ ಶ್ರೀಕೃಷ್ಣನ ಮೊರೆ ಹೊಕ್ಕರು. ಶ್ರೀಕೃಷ್ಣನು ಗೋಪಿಕಾ ಸ್ತ್ರೀಯರಿಗಾಗಿ ಸತ್ಯಭಾಮೆಯ ಮುಖಾಂತರ ನರಕಾಸುರನ ವಧೆ ಮಾಡಿದನು.

ನರಕಾಸುರನ ವಧೆಯ ನಂತರ ಬಂಧನದಲ್ಲಿದ್ದ ಗೋಪಿಕಾ ಸ್ತ್ರೀಯರೆಲ್ಲ ಅತೀವ ಸಂತೋಷದಿಂದ ತೈಲಾಭ್ಯಂಜನವನ್ನು ಮಾಡಿ ಸ್ನಾನಗೈದು ಪವಿತ್ರಪಾವನರಾದರು.

ಸಾಯುವಾಗ ನರಕಾಸುರನು ಕೃಷ್ಣನಲ್ಲಿ ‘ಇಂದಿನ ತಿಥಿಗೆ ಯಾರು ಮಂಗಲಸ್ನಾನವನ್ನು ಮಾಡುತ್ತಾರೆಯೋ, ಅವರಿಗೆ ನರಕದ ತೊಂದರೆಯಾಗದಿರಲಿ’ ಎಂಬ ವರವನ್ನು ಬೇಡಿದನು ಮತ್ತು ಕೃಷ್ಣನು ಆ ವರವನ್ನು ಕೊಟ್ಟನು. ಅಂದಿನಿಂದ ಆಶ್ವಯುಜ ಕೃಷ್ಣ ಚತುರ್ದಶಿಯು ನರಕ ಚತುರ್ದಶಿಯೆಂದು ಪರಿಗಣಿಸಲ್ಪಟ್ಟಿತು ಮತ್ತು ಜನರು ಆ ದಿನ ಸೂರ್ಯೋದಯಕ್ಕೂ ಮೊದಲು ಎದ್ದು ಅಭ್ಯಂಗಸ್ನಾನವನ್ನು ಮಾಡತೊಡಗಿದರು.

ಶುಭಂ ಕರೋತಿ ಕಲ್ಯಾಣಂ ಆರೋಗ್ಯ ಧನಸಂಪದಂ। 
ಶತ್ರು ಬುದ್ಧಿ ವಿನಾಶಾಯ
ದೀಪಜ್ಯೋತಿರ್ನಮೋsಸ್ತುತೆ।।
ದೀಪಜ್ಯೋತಿಃ ಪರಬ್ರಹ್ಮ ದೀಪಜ್ಯೋತಿರ್ಜನರ್ಧನಃ । ದೀಪೋ ಹರತಿ ಪಾಪಾನಿ ಸಂಧ್ಯಾದೀಪ ನಮೋಸ್ತುತೇ ॥

ಸಮೃದ್ಧಿ, ಸಂಪ್ರೀತಿ, ಸಮಾನತೆ, ಸೌಜನ್ಯತೆ ದೀಪದ ಬೆಳಕಿನಂತೆ ಎಲ್ಲೆಡೆ ಹರಡಲಿ. ನಿಮಗೆ, ನಿಮ್ಮ
ಕುಟುಂಬದವರಿಗೆ  ಈ
ದೀಪಾವಳಿ ಮಂಗಳ ಮಾಡಲಿ ಎಂದು ಹಾರೈಸುತ್ತಾ...
ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

"ಗೋಗ್ರಾಸ" ಏಕೆ?

"ಗೋಗ್ರಾಸ" ಏಕೆ?

ನಾವು ಆಚರಿಸುವ ಯಾವುದೇ ಯಜ್ಞ ;ಯಾಗ ಪೂಜೆ, ಪಿತೃಕರ್ಮಗಳು ಗೋಗ್ರಾಸವನ್ನಿಡದೇ ಪೂರ್ಣವಾಗಲಾರವು.
ಯಜ್ಞ, ಶ್ರಾದ್ಧಾದಿಗಳಲ್ಲಿ ವಿಪ್ರಭೋಜನದಂತೆಯೇ ಗೋಗ್ರಾಸ ದಾನವೂ ಅನಿವಾರ್ಯ ಕರ್ತವ್ಯವಾಗಿದೆ.
ಗೋಗ್ರಾಸ ದಾನದ ಶಾಸ್ತ್ರವಿಧಿ ಬಹಳ ಸಣ್ಣದು. ಬಾಳೆ ಎಲೆ ಯಲ್ಲಿ ಗೋವು ತಿನ್ನಬಹುದಾದ ಅನ್ನ ಪಾಯಸ ಭಕ್ಷ್ಯಗಳನ್ನು( ಹಾಲು ಮೊಸರು ತುಪ್ಪ ಮೊದಲಾದ ಗವ್ಯ ಹೊರತು ಪಡಿಸಿ) ಬಡಿಸಿ ಎಲೆಯನ್ನು ಪೂರ್ವಾಗ್ರವಾಗಿ ಇಡಬೇಕು. ಆ ಅನ್ನಕ್ಕೆ ತೀರ್ಥ ನಿರ್ಮಾಲ್ಯ ಹಾಕಿ ಸೊಬಗಿನ ಅರ್ಥವುಳ್ಳ ಈ ಶ್ಲೋಕಗಳನ್ನು ಹೇಳಬೇಕು.

ಸುರಭಿರ್ವೈಷ್ಣವೀ ಮಾತಾ ನಿತ್ಯಂ ವಿಷ್ಣಪದೇ ಸ್ಥಿತಾ |
ಗೋಗ್ರಾಸಸ್ತು ಮಯಾ ದತ್ತಃ ಸುರಭೇ(ಸುರಭಿ) ಪ್ರತಿಗೃಹ್ಯತಾಮ್ ||1||

ಸೌರಭೇಯಃ ಸರ್ವಹಿತಾಃ ಪವಿತ್ರಾಃ ಪುಣ್ಯರಾಶಾಯಃ |
ಪ್ರತಿಗ್ರಹ್ಣತ್ವಿಮಂ ಗ್ರಾಸಂ ಗಾವಃ ತ್ರೈಲೋಕ್ಯ ಮಾತರಃ

ಗಾವೋ ಮೇ ಮಾತರಃ ಸರ್ವಾಃ ಪಿತರಶ್ಚಾಪಿ ಗೋವೃಷಾಃ |
ಗ್ರಾಸಮುಷ್ಟಿ ಪ್ರದಾನೇನ ಸ ಮೇ ವಿಷ್ಣುಃ ಪ್ರಸೀದತು || || 
ಗವಾಂತರಗತ ಗೋಪಾಲಕೃಷ್ಣ ಪ್ರಿಯತಾಂಮ ಪ್ರೀತೋಭವತು ತತ್ಸತ್ ಶ್ರೀಹರಿ ಕೃಷ್ಣಾರ್ಪಣಮಸ್ತು

“ದೇವಲೋಕದ ಕಾಮಧೇನು ಸುರಭಿ. ಕಾಮಧೇನುವಿನ ಜಾತಿಯೆನಿಸಿದ ಗೋಜಾತಿಯಲ್ಲಿ ಬಂದ ಎಲ್ಲಾ ಗೋವುಗಳನ್ನೂ ಕಾಮಧೇನುವಿನ ಸನ್ನಿಧಾನದ ಅನುಸಂಧಾನದೊಡನೆ ‘ಸುರಭಿ’ ಎಂದೇ ಕರೆಯಲಾಗುತ್ತದೆ. ಸುರಭಿಯು ವಿಷ್ಣುದೇವನ ಪ್ರತೀಕ. ಆಕೆ ಎಲ್ಲರಿಗೂ ಹಾಲು ನೀಡುವ ತಾಯಿ. ಎಂದೆಂದಿಗೂ ವಿಷ್ಣುಪದದಲ್ಲಿ ನೆಲೆಗೊಂಡ ಈ ಸುರಭಿ ನಾನಿತ್ತ ಗೋಗ್ರಾಸವನ್ನು ಸ್ವೀಕರಿಸಲಿ”

ಮೂರು ಲೋಕಕ್ಕೂ ಮಾತೆಯಾಗಿ ಸರ್ವ ಪುಣ್ಯ ರಾಶಿಯನ್ನು ಹೊಂದಿದ ಪವಿತ್ರವಾದ ಸುರಭಿಯ ಮಕ್ಕಳಾದ ಗೋವುಗಳು ನಾನಿತ್ತ ಗೋಗ್ರಾಸವನ್ನು ಸ್ವೀಕರಿಸಲಿ”

“ಹಸುಗಳೆಲ್ಲಾ ನಮ್ಮ ತಾಯಿ. ಎತ್ತುಗಳೆಲ್ಲಾ ನಮ್ಮ ತಂದೆಗೆ ಸಮ. ಅಂತಹ ಗೋವುಗಳಿಗಿತ್ತ ಈ ಮುಷ್ಟಿ ತುತ್ತಿನಿಂದ ಗೋವಿನ ಒಳಗಿರುವ ಶ್ರೀಕೃಷ್ಣ ಪ್ರೀತನಾಗಲಿ”
ಈ ಎರಡು ಶ್ಲೋಕಗಳಿಂದ ಪ್ರಾರ್ಥಿಸಿ ‘ಗವಾಂತರ್ಗತ ಗೋಪಾಲ ಕೃಷ್ಣಃ ಪ್ರೀಯತಾಮ್’ ಎಂದು ಗೋಗ್ರಾಸವನ್ನು ಗೋವಿಗೆ ನೀಡಬೇಕು.

ಬ್ರಹ್ಮಯಜ್ಞ, ದೇವಯಜ್ಞ, ಪಿತೃಯಜ್ಞಗಳೆಂಬ ಮೂರು ಯಜ್ಞಗಳನ್ನು ಗಮನಿಸಿದ್ದೇವೆ. ಇವಲ್ಲದೇ ಮನುಷ್ಯಯಜ್ಞ ಹಾಗೂ ಭೂತ ಯಜ್ಞಗಳೆಂಬ ಎರಡು ಯಜ್ಞಗಳೂ ಇವೆ. ಗೃಹಸ್ಥನಿಗೆ ಈ ಐದು ಯಜ್ಞಗಳು ಕರ್ತವ್ಯ.

ಮನೆಗೆ ಹಸಿದು ಬಂದ ವ್ಯಕ್ತಿಗೆ ಆತಿಥ್ಯವಿತ್ತು ಉಣಬಡಿಸುವಿಕೆಯೇ ಮನುಷ್ಯಯಜ್ಞ, ಈ ಯಜ್ಞದಲ್ಲಿ ಹಸಿದ ವ್ಯಕ್ತಿಯೇ ಅಗ್ನಿ. ಅನ್ನ ಭೋಜ್ಯಗಳೇ ಆಹುತಿ. ‘ಅನ್ನಸ್ಯ ಕ್ಷುಧಿತಂ ಪಾತ್ರಂ’ ಎಂಬಂತೆ ಅನ್ನದಾನಕ್ಕೆ ಬಂದ ಅತಿಥಿ ಗಳೆಲ್ಲಾ ಪಾತ್ರರು.
ಬರಿಯ ಅನ್ನದಾನವಲ್ಲದೇ ನಾಲ್ಕು ಜನರಿಗೆ ಉಪಕರಿಸುವ ಎಲ್ಲಾ ಸಮಾಜೋಪಯೋಗಿ ಸೇವೆಗಳೂ ಮನುಷ್ಯಯಜ್ಞದ ಪರಿಧಿಯಲ್ಲೇ ಸೇರಿವೆ. ನಾಲ್ಕನೆಯದಾದ ಈ ಮನುಷ್ಯಯಜ್ಞದಿಂದ ಸಮಾಜದ ಋಣ ಪರಿಹಾರವಾಗುತ್ತದೆ.ಕೊನೆಯದು ಭೂತಯಜ್ಞ. ಅಂದರೆ ಪಶುಪ್ರಾಣಿಗಳಿಗೆ ಆಹಾರ ನೀಡುವಿಕೆ.

ಮನುಷ್ಯ ತನ್ನ ಬದುಕಿನಲ್ಲಿ ಗೋವೃಷಭಾದಿ ಪಶುಗಳ ಉಪಕಾರ ಮರೆಯುವಂತಿಲ್ಲ. ಮನುಷ್ಯ ಗವ್ಯಗಳಾದ ಹಾಲು, ಮೊಸರು, ತುಪ್ಪಗಳಿಲ್ಲದೇ ಬದುಕಲಾರ. ದೇವಕರ್ಮಗಳನ್ನು ನಿರ್ವಹಿಸಲಾರ. ಹುಟ್ಟಿದ ಮೊದಲಲ್ಲಿ ತಾಯಿ ಆತನಿಗೆ ಹಾಲು ಕೊಟ್ಟು ಬೆಳೆಸಿದರೆ ಮುಂದಿನ ಆತನ ಜೀವನ ಪೂರ್ತಿ ಈ ಗೋಮಾತೆ ಹಾಲು ಕೊಡುತ್ತಾಳೆ. ಆದ್ದರಿಂದಲೇ ಗೋವಿಗೆ ಮಾತೃಸ್ಥಾನ, ವೃಷಭಕ್ಕೆ ಪಿತೃಸ್ಥಾನವಿದೆ. ತಂದೆಯು ಅನ್ನವಿತ್ತು ಪರಿಪೋಷಿಸುತ್ತಾನೆ. ಎತ್ತು ತಾನು ಉತ್ತು ಧಾನ್ಯ ಬೆಳೆಸುತ್ತದೆ. ತನ್ನ ಗೊಬ್ಬರದಿಂದ ಧಾನ್ಯ ಬೆಳೆಗೆ
ನೆರವಾಗುತ್ತದೆ. ಗಾಡಿ ಹೊತ್ತು ಧಾನ್ಯವನ್ನು ಮನೆಗೆ ಹೊರುತ್ತದೆ. ಆದ್ದರಿಂದಲೇ “ಗಾವೋ ಮೇ ಮಾತರಃ ಸರ್ವಾಃ ಪಿತರಶ್ಚಾಪಿ ಗೋವೃಷಾಃ”

ಇಂತಹ ಗೋವುಗಳಿಗೆ ಸಾಧ್ಯವಾದಷ್ಟು ಪ್ರತ್ಯುಪಕರಿಸಬೇಕು. ಈ ಮೂಲಕ ಭೂತಋಣದಿಂದ ಮುಕ್ತನಾಗಬೇಕು. ಉಳ್ಳವನು ಗೋಮಾಳವನ್ನು ರಕ್ಷಿಸುತ್ತಾನೆ. ಗೋಶಾಲೆಯನ್ನು ನಿರ್ವಹಿಸಬಲ್ಲ. ಕೊನೇ ಪಕ್ಷ ಪ್ರತಿದಿನ ಉಣ್ಣುವುದಕ್ಕೆ ಮುಂಚೆ ಒಂದು ಮುಷ್ಟಿ ಅನ್ನವನ್ನಾದರೂ ಗೋವಿಗಾಗಿ ತೆಗೆದಿಡಬೇಕು. ಇಂದು ‘ಗೋಗ್ರಾಸ" ಎಂಬ ಹೆಸರಿನಲ್ಲಿ ಭೂತಯಜ್ಞ ಉಳಿದುಕೊಂಡಿದೆ.

ಅಲ್ಲದೇ ಗೋಗ್ರಾಸದಾನವು ನಿತ್ಯಕರ್ಮ. ಅದನ್ನು ಮಾಡದಿರುವುದು ಅಪರಾಧ. ಯಾವುದನ್ನು ಮಾಡದಿದ್ದರೆ ಪಾಪ ಬರುವುದೋ ಅದು ನಿತ್ಯಕರ್ಮ. 

“ಯದಕರಣೇ ಪ್ರತ್ಯವಾಯಸ್ತನ್ನಿತ್ಯಮ್”
ಗವ್ಯ ಪದಾರ್ಥಗಳನ್ನೆಲ್ಲಾ ಯಥೇಷ್ಟವಾಗಿ ಉಪಯೋಗಿಸಿಕೊಳ್ಳುವ ವ್ಯಕ್ತಿ ಅವನ್ನು ಕೊಟ್ಟ ಗೋವಿಗೆ ಪ್ರಕೃತಿದತ್ತವಾದ ಹಿಡಿಹುಲ್ಲಿನ ಜೊತೆ ತಾನು ಉಣ್ಣುವ ಅನ್ನದಲ್ಲಿ ಒಂದು ಮುಷ್ಟಿಯನ್ನಾದರೂ ತೆಗೆದಿಡದಿದ್ದರೆ ಆತ ಕೃತಘ್ನನಾಗಲಾರನೇ?
ಅಲ್ಲದೇ ಗೋವು ಸಕಲದೇವತೆಗಳಿಗೆ ಅಧಿಷ್ಠಾನ. ‘ಗವಾಮಂಗೇಷು ತಿಷ್ಠಂತಿ ಭುವನಾನಿ ಚತುರ್ದಶ.’ ಹದಿನಾಲ್ಕು ಲೋಕಗಳು ಗೋವಿನ ಅಂಗಾಂಗಗಳಲ್ಲಿ ಅಧಿಷ್ಠಿತ ಎಂಬ ಮಾತಿದೆ. ಗೋಗ್ರಾಸದಿಂದಲೇ ಗೋಪಾಲಕೃಷ್ಣ ಪ್ರಸನ್ನನಾಗುತ್ತಾನೆ.

ಪಟ್ಟಣದಲ್ಲಿ ವ್ಯವಹಾರ ಉದ್ಯೋಗದ ಒತ್ತಡದಲ್ಲಿ ಇರುವ ಜನತೆಗೆ ಇಂದು ಗೋಗ್ರಾಸ ನೀಡುವುದು ಕ್ಲೇಶವೆನಿಸಿದೆ. ಆದರೂ ಆತ ಒಂದು ವಿಷಯವನ್ನು ಗಮನಿಸಬೇಕು. ತಾನು ಹಸುವನ್ನು ಸಾಕದಿದ್ದರೂ ಹಾಲು ಕುಡಿಯುವುದನ್ನು ಬಿಡಲಿಲ್ಲ. ಆದ್ದರಿಂದ ಹಸುವನ್ನು ಸಾಕುವ ಜವಾಬ್ದಾರಿ ಅವನಿಗಿದೆ. ಅದಕ್ಕಾಗಿ ಗೋಗ್ರಾಸದ ಹೆಸರಿನಲ್ಲಿ ಸ್ವಲ್ಪವಾದರೂ ಧನವನ್ನು ತೆಗೆದಿಡುವ ಕೆಲಸವನ್ನು ಆತ ಮಾಡಬಹುದು. ಆ ಹಣವನ್ನು ದೊಡ್ಡ ಮೊತ್ತವಾದಾಗ ಅಲ್ಲಲ್ಲಿ ನಡೆಯುತ್ತಿರುವ ಗೋಶಾಲೆಗಳಿಗೆ ನೀಡಿ ಭೂತ ಯಜ್ಞದ ಫಲ ಪಡೆಯಬಹುದು. ಧರ್ಮದ ನಡೆ ಆಧುನಿಕತೆಯಲ್ಲಿ ಕ್ಲಿಷ್ಟವೆನಿಸಿದರೂ ಮನಸ್ಸಿದಲ್ಲಿ ಮಾರ್ಗವಿದ್ದೇ ಇದೆ.
ಹೀಗೆ ಗೃಹಸ್ಥನಿಗೆ ನಿತ್ಯಕರ್ಮಗಳಾಗಿ ಐದು ಯಜ್ಞಗಳು. 

ಇವೇ ಪಂಚಯಜ್ಞ.

ಬ್ರಹ್ಮಯಜ್ಞೋ ದೇವಯಜ್ಞಃ ಪಿತೃಯಜ್ಞಸ್ತಥೈವ ಚ |
ಮನುಷ್ಯಭೂತಯಜ್ಞೌ ಚ ಪಂಚಯಜ್ಞಾಃ ಪ್ರಕೀರ್ತಿತಾಃ ||

ಈ ಐದು ಯಜ್ಞಗಳನ್ನು ನಡೆಸುವಲ್ಲಿ ಪ್ರಯತ್ನಶೀಲನಾದ ಗೃಹಸ್ಥ ವ್ಯಕ್ತಿ ಮೋಕ್ಷಪಡೆಯಲು ಅರ್ಹ ಅಧಿಕಾರಿಯಾಗುತ್ತಾನೆ.

ಸಂಗ್ರಹ: ಪ್ರಶಾಂತಭಟ್ ಕೋಟೇಶ್ವರ

ಉತ್ಪತ್ತಿ ಏಕಾದಶಿ. ಕಾರ್ತಿಕ ಮಾಸದ ಬಹುಳ ಏಕಾದಶಿ.

23-11-2019ಉತ್ಪತ್ತಿ ಏಕಾದಶಿ. ಕಾರ್ತಿಕ ಮಾಸದ ಬಹುಳ ಏಕಾದಶಿ.

ಮನುಷ್ಯ ತಿಂಗಳಿಗೊಮ್ಮೆ, ಎರಡು ಬಾರಿ ಸಂಪೂರ್ಣ ನಿರಾಹಾರನಾಗಿರಲು ಕಲಿತರೆ ಅನಾರೋಗ್ಯದ ನಿಮಿತ್ತ ವೈದ್ಯರ ಬಳಿ ಹೋಗಬೇಕಾದ ಅಗತ್ಯವಿಲ್ಲ. ಉಪವಾಸವೇ ದೊಡ್ಡ ಚಿಕಿತ್ಸೆ.”

ನಮ್ಮ ಆಯುರ್ವೆದವೂ ಎಲ್ಲ ರೋಗಗಳಿಗೂ ಅಜೀರ್ಣವೆ ಕಾರಣ ಎನ್ನುತ್ತದೆ: “ಅಜೀರ್ಣಪ್ರಭಾವಾ ರೋಗಾಃ.”

ಹೊಟ್ಟೆಕೆಟ್ಟು ಜೀರ್ಣಶಕ್ತಿ ಕಡಿಮೆಯಾದಾಗ ಎಲ್ಲ ರೋಗಗಳೂ ದಾಳಿ ಮಾಡುತ್ತವೆ. ಉಂಡದ್ದೆಲ್ಲ ಕರಗುತ್ತಿರುವ ತನಕ ಯಾವ ರೋಗವೂ ಬರುವುದಿಲ್ಲ. ಹೊಟ್ಟೆ ಹಾಳಾದಾಗ ದೇಹವೂ ಹಾಳಾಗುತ್ತದೆ.

ಹೊಟ್ಟೆ ಹಾಳಾಗದಂತೆ ಕಾಪಾಡುವ ವಿಧಾನ ಅದಕ್ಕೆ ಪೂರ್ಣ ವಿಶ್ರಾಂತಿ. ಮಲಗಿದಾಗ ಕಣ್ಣಿಗೆ, ಕಿವಿಗೆ, ಇತರ ಇಂದ್ರಿಯಗಳಿಗೆ ವಿಶ್ರಾಂತಿ. ಬೆಳಗ್ಗಿನಿಂದ ರಾತ್ರಿಯ ತನಕವೂ ತಿನ್ನುತ್ತಲೇ ಇದ್ದರೆ, ತಿಂದದ್ದನ್ನು ಬೆಳಗಿನ ತನಕ ಜೀರ್ಣಿಸಿಕೊಳ್ಳಲೂ ಅವಕಾಶ ನೀಡದೆ ಇದ್ದರೆ ಪಚನೆಂದ್ರಿಯಕ್ಕೆ ವಿಶ್ರಾಂತಿಯೇ ಇಲ್ಲ. ಅದು ಸೋತು ಕೈಕಟ್ಟಿ ಕೂತಿತು ಎಂದರೆ ಅಜೀರ್ಣ. ಹಾಗಾಗಿ 15ದಿನಗಳಿಗೊಮ್ಮೆ 24 ಗಂಟೆಗಳ ಕಾಲ ಪೂರ್ಣ ವಿಶ್ರಾಂತಿ ದೊರಕಿತೆಂದರೆ ಈ ಪಚನೆಂದ್ರಿಯ ಮತ್ತೆ ದಕ್ಷವಾಗಿ ಕೆಲಸ ಮಾಡಲು ಸಿದ್ಧವಾಗುತ್ತದೆ.

ಈ ಎಲ್ಲ ದೃಷ್ಟಿಯಿಂದ ಏಕಾದಶಿ ತುಂಬ ಮಹತ್ವದ ದಿನ. ಅಂದು ವಾತಾವರಣದಲ್ಲಿ ಕೂಡ ಒಂದು ವಿಶಿಷ್ಟ ಶಕ್ತಿ ತುಂಬಿರುತ್ತದೆ. ಏಕಾದಶಿಯನ್ನು ‘ಹರಿದಿನ’ ಎಂದು ಕರೆಯುತ್ತಾರೆ. ಅಂದು ವೈಷ್ಣವೀಶಕ್ತಿ ಜಾಗೃತವಾಗಿ ಕೆಲಸ ಮಾಡುತ್ತದೆ ಎನ್ನುವುದು ತಾತ್ಪರ್ಯ.
ಏಕಾದಶಿ ದಿನ ಆಹಾರತ್ಯಾಗ ಮಾಡಬೇಕು. ಆದರೆ ಮನಸ್ಸಿಗೆ ಹೆಚ್ಚು ಆಹಾರ ಕೊಡಬೇಕು. ಹೊಟ್ಟೆ ತುಂಬಿದರೆ ಬುದ್ಧಿ ಕೆಲಸ ಮಾಡೋದಿಲ್ಲ. ಹೀಗೆ ದೇಹ-ಬುದ್ಧಿ ಎರಡನ್ನೂ ಸಮತೋಲನದಲ್ಲಿಡಬೇಕಾಗುತ್ತದೆ. ಆಹಾರವನ್ನು ವರ್ಜಿಸುವುದು ಎಂದರೆ ಬುದ್ಧಿಯನ್ನು ಶುದ್ಧೀಕರಿಸುವುದು, ಚುರುಕುಗೊಳಿಸುವುದು ಎಂದೇ ಅರ್ಥ.

ಪ್ರತಿಪಕ್ಷದ ಹನ್ನೊಂದನೆಯ ದಿನ ಇಂಥ ಉಪವಾಸವನ್ನು ಆಚರಿಸುತ್ತಾರೆ. ಇಂಥ ಉಪವಾಸದೀಕ್ಷೆಯ ಮಹತ್ವದ ಬಗೆಗೆ ಪುರಾಣಗಳಲ್ಲಿ ಅನೇಕ ಕಥೆಗಳಿವೆ. ಅಂಬರೀಷ ಇಂಥ ಏಕಾದಶಿ ದೀಕ್ಷಿತರಲ್ಲಿ ಒಬ್ಬ.

ಏಕಾದಶಿಯ ದಿನ ಶುದ್ಧನಾಗಿ ನಿರಾಹಾರದಿಂದಿದ್ದು, ದ್ವಾದಶಿಯಂದು ಬೆಳಿಗ್ಗೆದ್ದು ದೇವರ ಪೂಜೆ ಮಾಡಿ ತೀರ್ಥ ಸ್ವೀಕರಿಸಿ ಆಹಾರ ಸೇವಿಸುವುದು ಅವನ ದೀಕ್ಷೆ. 

ಇಂಥ ಒಂದು ಘಟನೆಯ ಮೂಲಕ ಅಂಬರೀಷನ ಉಪವಾಸದ ಮಹತ್ವ, ಭಗವದ್ ಭಕ್ತಿಯ ಮಹತ್ವ ಇವೆರಡನ್ನೂ ಶುಕಾಚಾರ್ಯರು ಭಾಗವತದಲ್ಲಿ ವಿವರಿಸಿದ್ದಾರೆ.

ಒಂದು ಏಕಾದಶಿ. ಅಂಬರೀಷ ಉಪವಾಸವನ್ನಾಚರಿಸಿ ಮರುದಿನ ಬೆಳಗ್ಗೆದ್ದು ಮುಹೂರ್ತ ದಾಟುವುದರೊಳಗೆ ಪಾರಣೆ ಮಾಡಬೇಕು ಎನ್ನುವಷ್ಟರಲ್ಲಿ ದೂರ್ವಾಸರು ಅತ್ತ ಬಂದರು. ಅಂಬರೀಷ ಅವರನ್ನೂ ಪಾರಣೆಗೆ ಆಹ್ವಾನಿಸಿದ. ದುರ್ವಾಸರು ಮಹಾ ಕೋಪಿಷ್ಠ. “ಸ್ವಲ್ಪ ಕಾದಿರು, ಸ್ನಾನ ಮಾಡಿ ಬರುತ್ತೇನೆ,” ಎಂದು ಹೊರಟು ಹೋದರು.

ದುರ್ವಾಸರು ಇವನ ವ್ರತನಿಷ್ಟೆಯನ್ನು ಪರೀಕ್ಷಿಸಲೆಂದೇ ಬಂದವರು. ಅವರ ಕೋಪವೂ ಒಂದು ಅನುಗ್ರಹವೆ. ಮಕ್ಕಳು, ತಪ್ಪು ಮಾಡಿದಾಗ ದೊಡ್ಡವರು ಶಿಕ್ಷೆ ಕೊಡುವುದಿದೆ. ಅದು ಶಿಕ್ಷೆ ಅಲ್ಲ; ಶಿಕ್ಷಣ. ದುರ್ವಾಸರದೂ ಹಾಗೆಯೆ. ಭಕ್ತರ ಶಿಕ್ಷಣಕ್ಕಾಗಿ ಅವರದೊಂದು ನಾಟಕ.

ಇನ್ನೇನು ಪಾರಣದ ಮುಹೂರ್ತ ದಾಟುತ್ತದೆ. ಆದರೆ ದುರ್ವಾಸರ ಸುಳಿವಿಲ್ಲ. ಬಂದ ಅತಿಥಿಗೆ ಅಪಚಾರವಾಗಬಾರದು; ತನ್ನ ವ್ರತಕ್ಕೂ ಭಂಗ ಬರಬಾರದು. ಹೇಗೆ ನಡೆದುಕೊಳ್ಳಬೇಕು ಎನ್ನುವುದು ಸಮಸ್ಯೆ. ಅಂಬರೀಷನಿಗೆ ಉಭಯಸಂಕಟ.

ಹೊತ್ತು ಮೀರಿದರೆ ಏನು ಮಾಡುವುದು? ವ್ರತಲೋಪವಾಗಬಾರದಲ್ಲ? ಅಂಬರೀಷ ಈ ಸಮಸ್ಯೆಗೆ ಒಂದು ತಾತ್ಕಾಲಿಕ ಪರಿಹಾರ ಕೊಂಡುಕೊಂಡ. ಪಾರಣದ ಸಮಯ ಮೀರುವ ಮುನ್ನ ಊಟದ ಬದಲು ನೀರು ಕುಡಿದು ಬಿಡುವುದು. ನೀರು ಕುಡಿದರೆ ಊಟದ ಫಲವೂ ಆಯಿತು. ಉಪವಾಸದ ಫಲವೂ ಆಯಿತು. ಶಾಸ್ತ್ರಕಾರರು ನೀರನ್ನು ಆಹಾರದ ಪ್ರತಿನಿಧಿಯೂ ಹೌದು, ಉಪವಾಸದ ಪ್ರತಿನಿಧಿಯೂ ಹೌದು ಎಂದು ಒಪ್ಪಿಕೊಂಡಿದ್ದಾರೆ. ನಮ್ಮ ವೈದ್ಯಪದ್ಧತಿಗಳೂ ಇದನ್ನು ಅನುಮೋದಿಸಿವೆ.

ಹೀಗೆ ಯೋಚಿಸಿ ಅಂಬರೀಷ ಮಹಾರಾಜ ನೀರು ಕುಡಿದ. ಅಷ್ಟರಲ್ಲಿ ದುರ್ವಾಸರು ಬಂದರು. ವಿಷಯ ತಿಳಿದು ಸಿಟ್ಟುಗೊಂಡರು” “ನೀನು ಅತಿಥಿಗೆ ಅಪಚಾರ ಮಾಡಿದ್ದೀಯ, ನೀನು ಮೋಸಗಾರ, ನಿನಗೆ ಶಾಪ ಕೊಡುತ್ತೇನೆ,” ಎಂದು ಗುಡುಗಿದರು. ಕೃತ್ಯೆಯನ್ನು ಅಭಿಮಂತ್ರಿಸಿ ಅವನ ಮೇಲೆ ಛೂಬಿಟ್ಟರು. ಅಂಬರೀಷ ಮಹಾಭಗವದ್ ಭಕ್ತ. ಆತ ಭಗವಂತನಿಗೆ ಮೊರೆಹೊಕ್ಕ. ವಿಷ್ಣು ತನ್ನ ಭಕ್ತನ ರಕ್ಷಣೆಗಾಗಿ ಚಕ್ರವನ್ನು ಕಳುಹಿಸಿದ.

ದುರ್ವಾಸರ ಮಂತ್ರ ತಿರುಮಂತ್ರವಾಯಿತು. ವಿಷ್ಣುಚಕ್ರಕ್ಕೆ ಹೆದರಿದ ಕೃತ್ಯೆ ದುರ್ವಾಸರನ್ನೆ ಬೆನ್ನಟ್ಟಿತು. ಇದರಿಂದ ತಪ್ಪಿಸಿಕೊಳ್ಳಲು ದುರ್ವಾಸರು ಬ್ರಹ್ಮನಿಗೆ ಶರಣಾದರು. ತನ್ನನ್ನು ವಿಷ್ಣುಚಕ್ರದಿಂದ ಪಾರುಮಾಡಬೇಕೆಂದು ಪ್ರಾರ್ಥಿಸಿದರು. ಆಗ ಬ್ರಹ್ಮದೇವ ಹೇಳಿದ ಮಾತು: “ನಾರಾಯಣ ಜಗತ್ತಿನ ನಿಯಮಾಶಕ್ತಿ. ಅವನ ಆಜ್ಞೆಯಂತೆ ಚಲಿಸುವ ಭಕ್ತರು ನಾವು. ವಿಷ್ಣುಭಕ್ತನನ್ನು ತಡೆಯುವ ಶಕ್ತಿ ನಮಗಿಲ್ಲ. ನಾನು, ರುದ್ರಾದಿ ಸಮಸ್ತ ದೇವತೆಗಳು ಅವನ ಆಜ್ಞೆಯನ್ನು ತಲೆಯಲ್ಲಿ ಹೊತ್ತು ಬದುಕುವವರು. ಆ ಆಜ್ಞೆಯನ್ನು ಮೀರಿ ನಡೆಯುವ ಶಕ್ತಿ ಯಾರಿಗೂ ಇಲ್ಲ.”

ದುರ್ವಾಸರು ರುದ್ರನಲ್ಲಿಗೆ ಹೋಗಿ ಬೇಡಿದರು. ವಾಸ್ತವವಾಗಿ ದುರ್ವಾಸರು ಸ್ವಯಂ ರುದ್ರಾಂಶಸಂಭೂತರು. ಇದೆಲ್ಲ ಅಂಬರೀಷನ ಭಗವದ್ ಭಕ್ತಿಯ ಯೋಗ್ಯತೆಯ ಆಳವನ್ನು ಪರೀಕ್ಷಿಸಲು ದೊಡ್ಡವರು ಮಾಡಿದ ಒಂದು ನಾಟಕ. ಅದರಲ್ಲಿ ದುರ್ವಾಸರಿಗೆ ದ್ವಿಪಾತ್ರಾಭಿನಯ. ರುದ್ರದೇವರಿಂದಲೂ ನಿರಾಸೆಯ ಉತ್ತರವೆ ಬಂತು, “ಇಂಥ ಬ್ರಹ್ಮಾಂಡಗಳು ಎಷ್ಟೋ ಬಾರಿ ಸೃಷ್ಠಿಯಾಗಿವೆ; ನಾಶವಾಗಿವೆ. ಬ್ರಹ್ಮಾಂಡದಲ್ಲಿ ನೂರಾರು ಬಾರಿ ಸತ್ತು ಹುಟ್ಟುವ ಜೀವಗಳು ನಾವು. ಭಗವಂತನ ಲೀಲಾನಾಟಕದಲ್ಲಿ ನಾವೂ ಚಿಕ್ಕ ಪಾತ್ರಧಾರಿಗಳು. ಅವನು ಸೂತ್ರಧಾರ. ಅವನ ಆಜ್ಞೆಯನ್ನು ಮೀರಿ ನಾವೇನೋ ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಿನಗೆ ರಕ್ಷೆ ಬೇಕಿದ್ದರೆ ವಿಷ್ಣುವಿಗೇ ಶರಣಾಗು. ಅವನು ನಿನ್ನನ್ನು ಕಾಪಾಡುತ್ತಾನೆ.”

ದುರ್ವಾಸರು ನೇರ ವಿಷ್ಣುವಿನ ಬಳಿಗೆ ಬಂದರು. “ನಿನ್ನ ಚಕ್ರದಿಂದ ನನ್ನನ್ನು ಪಾರುಮಾಡು,” ಎಂದು ಪ್ರಾರ್ಥಿಸಿಕೊಂಡರು. ಆಗ ವಿಷ್ಣು ಹೇಳಿದ: “ನನ್ನಿಂದಲೂ ಸಾಧ್ಯವಿಲ್ಲ. ಏಕೆಂದರೆ, ನಾನು ಭಕ್ತರ ಪರಾಧೀನ. ನಾನೂ ಅವರ ಮಾತನ್ನು ಮೀರಲಾರೆ. ನಾನೆಂದರೆ ಅವರಿಗೆ ಮೆಚ್ಚು. ಅವರೆಂದರೆ ನನಗೆ ಮೆಚ್ಚು. ನಮ್ಮಿಬ್ಬರ ಹೃದಯವೂ ಒಂದೇ. ಅಂಬರೀಷ ನನ್ನ ಮಹಾಭಕ್ತ. ನನ್ನನ್ನು ಬಿಟ್ಟು ಇನ್ನೊಬ್ಬರನ್ನು ಸ್ಮರಿಸಿದವನಲ್ಲ. ನಾನೂ ಅವನನ್ನು ಬಿಟ್ಟು ಕೊಡಲಾರೆ. ಭಕ್ತರ ಮೇಲೆ ನನಗೂ ಅಂಥ ಗೌರವ. ಅಂಬರೀಷ ಇನ್ನೊಬ್ಬನಿಗೆ ತಲೆಬಾಗಿದವನಲ್ಲ. ಆತನಲ್ಲಿಗೇ ಹೋಗಿ ಕ್ಷಮೆ ಯಾಚಿಸು.”

ದುರ್ವಾಸರು ಮರಳಿ ಅಂಬರೀಷನಲ್ಲಿಗೆ ಬರುತ್ತಾರೆ. “ಅಯ್ಯಾ, ನೀನು ಗೆದ್ದೆ. ನಾನೇ ಸೋತೆ. ತಪ್ಪಾಯಿತು,” ಎಂದು ಕೇಳಿಕೊಳ್ಳುತ್ತಾರೆ. ಅಂಬರೀಷನ ಪ್ರಾರ್ಥನೆಯಂತೆ ವಿಷ್ಣುಚಕ್ರ ಮರಳಿ ಹೋಗುತ್ತದೆ.

ಹೀಗೆ ದುರ್ವಾಸರ ಪ್ರಸಂಗದ ಏಕಾದಶಿಯ ಮಹತ್ವವನ್ನೂ ಭಗವದ್ ಭಕ್ತಿಯ ಮಹಿಮೆಯನ್ನೂ ಭಾಗವತ ವಿವರಿಸುತ್ತದೆ.

ಒಂದು ಮಾಸದಲ್ಲಿ ಬರುವ 30 ತಿಥಿಗಳ ಪೈಕಿ ಇತರ ಎಲ್ಲ 28 ತಿಥಿಗಳ ನಿರ್ಣಯವು ಸೂರ್ಯೋದಯ ಸಮಯಕ್ಕಾದರೆ ಏಕಾದಶಿ ತಿಥಿಯ ನಿರ್ಣಯವು ಸೂರ್ಯೋದಕ್ಕೆ ಸ್ವಲ್ಪ ಮುಂಚಿತವಾಗಿ ಬರುವ ಅರುಣೋದಯ ಸಮಯಕ್ಕಾಗಿದೆ. ಸಂಪ್ರದಾಯ ಭೇದಗಳಿಂದಾಗಿ ಸ್ಮಾರ್ಥ, ಶ್ರೀ ವೈಷ್ಣವ ಮತ್ತು ವೈಷ್ಣವ ಏಕಾದಶಿ ದಿನದ ಆಚರಣೆಯ ಒಮ್ಮೊಮ್ಮೆ ಪರಸ್ಪರ ಒಂದು ದಿನದ ಮಟ್ಟಿಗೆ ವ್ಯತ್ಯಾಸವಾಗಬಹುದಾಗಿದೆ.

ಏಕಾದಶಿಗಳ ಹೆಸರುಗಳು ಮತ್ತು ಅವುಗಳ ಫಲ

೧) ಚೈತ್ರ ಶುಕ್ಲ ಏಕಾದಶಿ - ಕಾಮದಾ - ಕೋರಿಕೆಗಳನ್ನು ಪೂರೈಸುತ್ತದೆ.

೨) ಚೈತ್ರ ಬಹುಳ ಏಕಾದಶಿ - ವರೂಧಿನಿ - ಸಹಸ್ರ ಗೋದಾನ ಫಲವು ಲಭಿಸುತ್ತದೆ.

೩) ವೈಶಾಖ ಶುದ್ಧ ಏಕಾದಶಿ - ಮೋಹಿನಿ - ದರಿದ್ರನು ಧನವಂತನಾಗುತ್ತಾನೆ.

೪) ವೈಶಾಖ ಬಹುಳ ಏಕಾದಶಿ - ಅಪರಾ - ರಾಜ್ಯಪ್ರಾಪ್ತಿ

೫) ಜ್ಯೇಷ್ಠ ಶುಕ್ಲ ಏಕಾದಶಿ - ನಿರ್ಜಲ - ಆಹಾರ ಸಮೃದ್ಧಿ

೬) ಜ್ಯೇಷ್ಠ ಬಹುಳ ಏಕಾದಶಿ - ಯೋಗಿನಿ - ಪಾಪಗಳನ್ನು ಹರಿಸುತ್ತದೆ (ಪಾಪಗಳಿಂದ ಮುಕ್ತಗೊಳಿಸುತ್ತದೆ)

೭) ಆಷಾಢ ಶುದ್ಧ ಏಕಾದಶಿ - ದೇವಶಯನಿ - ಸಂಪತ್ ಪ್ರಾಪ್ತಿ - ವಿಷ್ಣುವು ಯೋಗನಿದ್ರೆಗೆ ಜಾರುವ ದಿನ

೮) ಆಷಾಢ ಬಹುಳ ಏಕಾದಶಿ - ಕಾಮಿಕಾ - ಬೇಡಿದ ವರಗಳು ಪ್ರಾಪ್ತಿಯಾಗುತ್ತವೆ.

೯) ಶ್ರಾವಣ ಶುಕ್ಲ ಏಕಾದಶಿ - ಪುತ್ರದಾ - ಸತ್ ಸಂತಾನ ಪ್ರಾಪ್ತಿ

೧೦) ಶ್ರಾವಣ ಬಹುಳ ಏಕಾದಶಿ - ಅಜಾ - ರಾಜ್ಯ, ಪತ್ನೀಪುತ್ರ ಪ್ರಾಪ್ತಿ ಮತ್ತು ಆಪತ್ ನಿವಾರಣೆ

೧೧) ಭಾದ್ರಪದ ಶುದ್ಧ ಏಕಾದಶಿ - ಪರಿವರ್ತನ (ಯೋಗ ನಿದ್ರೆಯಲ್ಲಿ ವಿಷ್ಣುವು ಪಕ್ಕಕ್ಕೆ ಹೊರಳುತ್ತಾನಂತೆ ಹಾಗಾಗಿ ಇದು ಪರಿವರ್ತನ) - ಯೋಗ ಸಿದ್ಧಿ

೧೨) ಭಾದ್ರಪದ ಬಹುಳ ಏಕಾದಶಿ - ಇಂದಿರಾ - ಸಂಪದಗಳು ಮತ್ತು ರಾಜ್ಯ ಪ್ರಾಪ್ತಿಯುಂಟಾಗುತ್ತದೆ.

೧೩) ಆಶ್ವಯುಜ ಶುಕ್ಲ ಏಕಾದಶಿ - ಪಾಪಾಂಕುಶ - ಪುಣ್ಯಪ್ರದವಾದುದು

೧೪) ಆಶ್ವಯುಜ ಬಹುಳ ಏಕಾದಶಿ - ರಮಾ - ಸ್ವರ್ಗಪ್ರಾಪ್ತಿ

೧೫) ಕಾರ್ತೀಕ ಶುಕ್ಲ ಏಕಾದಶಿ - ಪ್ರಬೋಧಿನಿ (ಯೋಗ ನಿದ್ರೆಯಿಂದ ವಿಷ್ಣುವು ಎಚ್ಚರಗೊಳ್ಳುವ ದಿನ) - ಜ್ಞಾನಸಿದ್ಧಿ

೧೬) ಕಾರ್ತೀಕ ಬಹುಳ ಏಕಾದಶಿ - ಉತ್ಪತ್ತಿ - ದುಷ್ಟ ಸಂಹಾರ (ಮುರಾಸುರನನ್ನು ಸಂಹರಿಸಿದ ಕನ್ಯೆಯು ವಿಷ್ಣುವಿನ ಶರೀರದಿಂದ ಜನಿಸಿದ ದಿನ)

೧೭) ಮಾರ್ಗಶಿರ ಶುಕ್ಲ ಏಕಾದಶಿ - ಮೋಕ್ಷದಾ - ಮೋಕ್ಷಪ್ರಾಪ್ತಿ (ಮಾರ್ಗಶಿರ ಶುಕ್ಲ ಏಕಾದಶಿಯು ಧನುರ್ಮಾಸದಲ್ಲಿ ಬಂದರೆ ಅದುವೇ ವೈಕುಂಠ ಏಕಾದಶಿಯಾಗುತ್ತದೆ*)

೧೮) ಮಾರ್ಗಶಿರ ಬಹುಳ ಏಕಾದಶಿ - ವಿಮಲಾ (ಸಫಲಾ) - ಅಜ್ಞಾನ ನಿವೃತ್ತಿ

೧೯) ಪುಷ್ಯ ಶುಕ್ಲ ಏಕಾದಶಿ - ಪುತ್ರದಾ - ಪುತ್ರಪ್ರಾಪ್ತಿ (ಪುಷ್ಯ ಶುಕ್ಲ ಏಕಾದಶಿಯು ಧನುರ್ಮಾಸದಲ್ಲಿ ಬಂದರೆ ಅದುವೇ ವೈಕುಂಠ ಏಕಾದಶಿಯಾಗುತ್ತದೆ*)

*ವೈಕುಂಠ ಏಕಾದಶಿ ಮಾರ್ಗಶಿರ ಅಥವಾ ಪುಷ್ಯ ಮಾಸದಲ್ಲಿ ಬರುತ್ತದೆಂದು ಈ ಮುಂಚೆಯೇ ಹೇಳಿದೆ.

೨೦) ಪುಷ್ಯ ಕೃಷ್ಣ ಏಕಾದಶಿ - ಕಲ್ಯಾಣೀ (ಷಟ್‌ತಿಲಾ) - ಶಾರೀರಿಕ ಬಾಧೆಗಳಿಂದ ಮುಕ್ತಿ (ತೆಲುಗಿನಲ್ಲಿ ಈತಿ ಬಾಧಾ ನಿವಾರಣಂ ಎಂದು ಹೇಳಲಾಗಿದೆ)

೨೧) ಮಾಘ ಶುಕ್ಲ ಏಕಾದಶಿ - ಕಾಮದಾ (ಜಯಾ) - ಶಾಪವಿಮುಕ್ತಿ

೨೨) ಮಾಘ ಕೃಷ್ಣ ಏಕಾದಶಿ - ವಿಜಯಾ - ಸಕಲ ಕಾರ್ಯ ವಿಜಯ (ಇದು ಭೀಷ್ಮೈಕಾದಶಿ ಎಂದು ಪ್ರಸಿದ್ಧಿಯಾಗಿದೆ)

೨೩) ಫಾಲ್ಗುಣ ಶುಕ್ಲ ಏಕಾದಶಿ - ಆಮಲಕೀ - ಆರೋಗ್ಯ ಪ್ರಾಪ್ತಿ

೨೪) ಫಾಲ್ಗುಣ ಕೃಷ್ಣ ಏಕಾದಶಿ - ಸೌಮ್ಯಾ - ಪಾಪ ವಿಮುಕ್ತಿ
ಸಂಗ್ರಹ: ಪ್ರಶಾಂತಭಟ್ ಕೋಟೇಶ್ವರ

‘ಕೆಟ್ಟ ಕಣ್ಣಿನ ದೃಷ್ಟಿ’ ನಿವಾರಿಸಿಕೊಳ್ಳುವ ಬಗೆ

‘ಕೆಟ್ಟ ಕಣ್ಣಿನ ದೃಷ್ಟಿ’  ನಿವಾರಿಸಿಕೊಳ್ಳುವ ಬಗೆ 

ನಮ್ಮ ನಿಮ್ಮೆಲ್ಲರ ಮನೆಗಳಲ್ಲಿ ಈಗಲೂ ಆರೋಗ್ಯವಂತ ವ್ಯಕ್ತಿ ಅನಾರೋಗ್ಯಕ್ಕೆ ಒಳಗಾದರೆ, ಹಣವಂತ ವ್ಯಕ್ತಿ ಹಣ ಕಳೆದುಕೊಂಡರೆ ಅಥವಾ ಇನ್ನೇನಾದರೂ ಸಂಭವಿಸಿದರೆ ಆತನಿಗೆ ದೃಷ್ಟಿಯಾಗಿರಬಹುದು ಎಂದು ಹೇಳುವ ಪರಿಪಾಠವಿದೆ.
ಹೌದು, ಈಗಲೂ ಕೆಲವೊಂದು ನಂಬಿಕೆಗಳು ಬಲವಾಗಿ ಬೇರೂರಿವೆ. ಹಿಂದೂ ಪುರಾಣಗಳಲ್ಲೂ ಕಣ್ಣದೃಷ್ಟಿಯ ಬಗ್ಗೆ ಉಲ್ಲೇಖವಿದೆ. ಮಾನಸಿಕ ಶಕ್ತಿಯು ಆಲೋಚನೆ, ಏಕಾಗ್ರತೆ, ದೃಷ್ಟಿ, ಹೊಟ್ಟೆಯುರಿ ಮತ್ತು ಮಾತಿನ ಮೂಲಕ ಹೊರಬರುವುದು. ಇದು ಇನ್ನೊಬ್ಬನ ಅಭಿವೃದ್ಧಿ, ಏಳಿಗೆ ಮತ್ತು ಸೌಂದರ್ಯದ ಮೇಲೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪರಿಣಾಮ ಬೀರುವುದೇ ಕಣ್ಣ ದೃಷ್ಟಿ ಎನ್ನುವುದು.
 ನಮ್ಮ ದೇಹದ ಕಾಲಿನಿಂದ ಹಿಡಿದು ಹಣೆಯ ತನಕ ಏಳು ಚಕ್ರಗಳಿವೆ. ಈ ಚಕ್ರಗಳು ತಿರುಗಳು ಪ್ರಾರಂಭಿಸಿದಾಗ ಮತ್ತು ಸಕ್ರಿಯವಾದಾಗ ನಮ್ಮ ದೇಹದಲ್ಲಿ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಕ ಶಕ್ತಿಯು ಚಟುವಟಿಕೆಯನ್ನು ಆರಂಭಿಸುವುದು. ನಕಾರಾತ್ಮಕ ಅಂಶಗಳು ಇವುಗಳ ಮೇಲೆ ಪರಿಣಾಮ ಬೀರಿದಾಗ ನಮ್ಮ ದೇಹದ ಚಕ್ರಗಳು ನಿಧಾನವಾಗಿ ದೈಹಿಕ ಹಾಗೂ ಮಾನಸಿಕ ಚಟುವಟಿಕೆಗಳು ನಿಧಾನವಾಗುವಂತೆ ಮಾಡುತ್ತದೆ.
ಕಣ್ಣದೃಷ್ಟಿಯನ್ನು ನಿವಾರಣೆ ಹೇಗೆ…?
ದೃಷ್ಟಿ ದೋಷವನ್ನು ಹಲವಾರು ರೀತಿಯಿಂದ ನಿವಾರಿಸುತ್ತಾರೆ. ಅದರಲ್ಲಿ ಸಾಮಾನ್ಯವಾಗಿ 
1)ದೃಷ್ಟಿಯಾಗದಂತೆ ತಡೆಯಲು ಹೆಚ್ಚಾಗಿ ನಾವು ಕಪ್ಪು ಚುಕ್ಕೆಯನ್ನು ಹಾಕಿಕೊಳ್ಳುತ್ತೇವೆ. ಮಕ್ಕಳು, ಮದುಮಗಳು ಅಥವಾ ಮದುಮಗನಿಗೆ ಕಪ್ಪುಚುಕ್ಕೆಯನ್ನು ಹಾಕುತ್ತೇವೆ. ಸಣ್ಣ ಮಕ್ಕಳ ಸೊಂಟಕ್ಕೆ ಇದೇ ಕಾರಣದಿಂದಾಗಿ ಕಪ್ಪು ನೂಲನ್ನು ಕಟ್ಟಿರುತ್ತಾರೆ.
2)ಹೊಸ ವಾಹನವನ್ನು ಖರೀದಿಸಿದಾಗ ಅದಕ್ಕೆ ಯಾವುದೇ ಕಣ್ಣು ಬೀಳದಿರಲೆಂದು ಚಕ್ರದಡಿಗೆ ನಿಂಬೆಹಣ್ಣನ್ನು ಇಟ್ಟು ವಾಹನವನ್ನು ಓಡಿಸುತ್ತಾರೆ.ಮತ್ತು ಕಾರುಗಳು, ಟ್ರಕ್ ಗಳು ಮತ್ತು ಮನೆಗಳ ಮೇಲೆ ಯಾವುದಾದರೂ ಒಂದು ರಾಕ್ಷಸನಂತೆ ಕಾಣುವ ಚಿತ್ರವನ್ನು ತೂಗು ಹಾಕಿರುತ್ತಾರೆ ಅಥವಾ ನಿಂಬೆಕಾಯಿ, ಮೆಣಸನ್ನು ಕಟ್ಟಿರುತ್ತಾರೆ.
3)ಲಿಂಬೆ/ ತೆಂಗಿನಕಾಯಿ ಅಥವಾ ಬೂದುಕುಂಬಳದಲ್ಲಿ ಆರತಿಯನ್ನು ಎತ್ತಿ ಬಳಿಕ ಅದನ್ನು ನೆಲಕ್ಕೆ ಬಡಿಯತ್ತಾರೆ.
 4) ವಿಶೇಷ  ದೇವತಾ ಕಾರ್ಯಕ್ರಮಗಳಲ್ಲಿ  ಕುಂಕುಮ ಅಥವಾ ಅರಿಶಿನ ನೀರನ್ನು ಸುತ್ತು ತಿರುಗಿಸುತ್ತಾರೆ. ಆಗ ನಕಾರಾತ್ಮಕ ಅಂಶಗಳು ದೂರ ಹೋಗುವುದು
5)ರಾತ್ರಿ ಮಲಗುವ ಮೊದಲು ಕರ್ಪೂರವನ್ನು ಹಿಡಿದುಕೊಂಡು ವ್ಯಕ್ತಿಯ ತಲೆಯ ಸುತ್ತಲು ತಿರುಗಿಸಿ ಇದನ್ನು  ಮನೆಯ ಹೊರಗಡೆ ಬಾಗಿಲಿನ ಎದುರುಗಡೆ ಉರಿಸುತ್ತಾರೆ.
5) ಕೆಂಪು ಮೆಣಸು, ಸಾಸಿವೆ ಮತ್ತು ಕರಿಮೆಣಸಿನ ಕಾಯಿ ಮತ್ತು ಉಪ್ಪನ್ನು  ಬಲದ ಅಂಗೈಯಲ್ಲಿ ಹಿಡಿದುಕೊಂಡು ಯಾರೊಂದಿಗೂ ಮಾತನಾಡದೆ ಏಕಾಗ್ರತೆಯಿಂದ ಬಲದ ಅಂಗೈನ್ನು ಎದುರಿಗಿನ ವ್ಯಕ್ತಿಯ ತಲೆಗೆ ಮೂರು, ಐದು ಅಥವಾ ಏಳು ಸುತ್ತು ಹಾಕಬೇಕು. ಇದರ ಬಳಿಕ ಇದನ್ನು ಒಲೆ ಅಥವಾ ಮಾರ್ಗ ಮಧ್ಯಕ್ಕೆ ಎಸೆಯುತ್ತಾರೆ.
6)ಕಣ್ಣದೃಷ್ಟಿ ಗಣಪತಿ ಅಥವಾ ನೀಲಿ ಕಣ್ಣಿನ ತಾಯಿತ ಮನೆಯ ಪ್ರವೇಶದ್ವಾರದಲ್ಲಿ ತೂಗು ಹಾಕತ್ತಾರೆ. ಇದರಿಂದ ಮನೆ ಅಥವಾ ಅಂಗಡಿಯೊಳಗೆ ನಕಾರಾತ್ಮಕ ಪರಿಣಾಮ ಬೀರುವುದು ಕಡಿಮೆಯಾಗುವುದು.
ಹೀಗೆ ಇನ್ನು ಹಲವಾರು ವಿಧಾನಗಳು ನಮ್ಮಲ್ಲಿನ ನಕಾರಾತ್ಮಕ ಶಕ್ತಿಯನ್ನು ದೂರಗೊಳಿಸಲು ಸಹಕಾರಿಯಾಗಿವೆ.

ದೈವಿಕ ಆಚರಣೆಯಲ್ಲಿ ಈರುಳ್ಳಿ; ಬೆಳ್ಳುಳ್ಳಿ ಮಸಾಲೆ ಪದಾರ್ಥಗಳ ಸೇವನೆಗೆ ನಿಷಿಧ್ಧವೇಕೆ

ದೈವಿಕ ಆಚರಣೆಯಲ್ಲಿ ಈರುಳ್ಳಿ; ಬೆಳ್ಳುಳ್ಳಿ ಮಸಾಲೆ ಪದಾರ್ಥಗಳ ಸೇವನೆಗೆ ನಿಷಿಧ್ಧವೇಕೆ

ಸನಾತನ ಧರ್ಮದಲ್ಲಿ ಹಲವಾರು ಜಾತಿ ಉಪಜಾತಿಗಳಿವೆ. ಇದರಲ್ಲಿ ಭಾಗಶಃ ಎಲ್ಲಾ ವರ್ಗದಲ್ಲೂ ದೇವರನ್ನು ಪೂಜಿಸುವ ಸಂಸ್ಕಾರ ಮತ್ತು ಧರ್ಮದ ಬಗ್ಗೆ ಅತಿಯಾದ ಜಿಜ್ಞಾಸೆ ಹೊಂದಿರುವ ಅತೀವ ದೈವಭಕ್ತರಾದ ಕೆಲವರು ಪೂಜೆ, ವ್ರತ ಪುನಸ್ಕಾರಗಳಂತಹ ತಮ್ಮ ಧರ್ಮದ ಕಟ್ಟುಪಾಡುಗಳನ್ನು ಬಹಳವಾಗಿ ಅನುಷ್ಠಾನಕ್ಕೆ ತರುತ್ತಾರೆ.ಅವರು ಇಂದಿಗೂ ಕೂಡ ಈರುಳ್ಳಿ ಮತ್ತು ಬೆಳ್ಳುಳ್ಳಿಗಳನ್ನು ಸೇವಿಸುವುದಿಲ್ಲ. ಅಷ್ಟೇ ಅಲ್ಲ, ದೇವರಿಗೆ ಸಲ್ಲುವ ನೈವೇದ್ಯದಲ್ಲಿಯೂ ಇವೆರಡು ತರಕಾರಿಗಳನ್ನು ಬಳಸಲಾಗುವುದಿಲ್ಲ. 

ಇದಕ್ಕೆ ಕಾರಣ:
ಆಯುರ್ವೇದದ ಪ್ರಕಾರ ನಾವು ಸೇವಿಸುವ ಆಹಾರಗಳನ್ನು ಮೂರು ವಿಧವಾಗಿ ವಿಂಗಡಿಸಬಹುದು. ಸತ್ವ, ರಜಸ್ ಮತ್ತು ತಮಸ್. ಸತ್ವಭರಿತ ಅಂದರೆ ಸಾತ್ವಿಕ ಆಹಾರಗಳು (ಹಣ್ಣು ಹಂಪಲು) ಮಾನಸಿಕ ಶಾಂತಿಯನ್ನು ನೀಡುತ್ತವೆ.
ಇವುಗಳ ಸೇವನೆಯಿಂದ ನೆಮ್ಮದಿ, ಸತ್ಯವನ್ನು ನುಡಿಯಲು ಮತ್ತು ಸದಾ ಮನಸ್ಸನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದೇ ಕಾರಣಕ್ಕೆ ಸಾತ್ವಿಕರು ಎಂದಿಗೂ ಸಾತ್ವಿಕ ಆಹಾರವನ್ನೇ ಸೇವಿಸಲು ಮೊದಲು ಆದ್ಯತೆ ನೀಡುತ್ತಾರೆ.

ರಜಸ್ ಆಹಾರಗಳು
ರಜಸ್ ಆಹಾರಗಳೆಂದರೆ ಈ ಭೂಮಿಯ ಮೇಲಿರುವ ಆನಂದ ಮತ್ತು ವಿಲಾಸಗಳನ್ನು ಅನುಭವಿಸುವ ಆಹಾರಗಳಾಗಿವೆ. ಉದಾಹರಣೆಗೆ ಈರುಳ್ಳಿ, ಅತಿಯಾದ ಹುಳಿ, ಖಾರ ಇತ್ಯಾದಿ. ಈರುಳ್ಳಿ ಬೆಳ್ಳುಳ್ಳಿ ಸೇವನೆಯಿಂದ ಲೈಂಗಿಕ ಬಯಕೆ ಹೆಚ್ಚುತ್ತದೆ. ಇದೇ ಕಾರಣಕ್ಕೆ ಈರುಳ್ಳಿಯನ್ನು ತಿನ್ನದಿರಲು ಹಿಂದಿನ ಕಾಲದಲ್ಲಿ ನಿಷೇಧಿಸಲಾಗಿತ್ತು.

ತಮಸ್ ಆಹಾರಗಳು
ತಮಸ್ ಆಹಾರಗಳೆಂದರೆ ಇದರ ಸೇವನೆಯಿಂದ ಮನದಲ್ಲಿ ಋಣಾತ್ಮಕ ಭಾವನೆಗಳಿಗೆ, ಸಿಟ್ಟು, ಕ್ರೌರ್ಯ, ರೌದ್ರತೆಗಳಿಗೆ ಪುಷ್ಟಿ ನೀಡುವ ಆಹಾರಗಳಾಗಿದ್ದು ಮನದ ನಿಯಂತ್ರಣವನ್ನು ಕಳೆದುಕೊಳ್ಳುವ ಮೂಲಕ ಮಾನವ ರಾಕ್ಷಸನಾಗಿ ಮಾರ್ಪಾಡುವ ಆಹಾರಗಳಾಗಿವೆ. 
ಉದಾಹರಣೆಗೆ ನಶೆ ಏರಿಸುವ ಮದ್ಯ, ಮಾಂಸ ಮಸಾಲೆ ಅಣಬೆ ಇತ್ಯಾದಿ. ಈರುಳ್ಳಿ ಮತ್ತು ಬೆಳ್ಳುಳ್ಳಿಗಳು ಕೂಡ ತಾಮಸ ಆಹಾರ ಎಂದು ಹೇಳಲಾಗುತ್ತದೆ.ಈ ಆಹಾರಗಳಿಂದ ಮನಸ್ಸಿನ ಏಕಾಗ್ರತೆ ಮತ್ತು ನಿಯಂತ್ರಣ ಕಷ್ಟ ಸಾಧ್ಯ.ಇದೇ ಕಾರಣದಿಂದ ಹಿಂದಿನ ಕಾಲದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಗಳನ್ನು ಸೇವಿಸಲು ಜನರು ಹಿಂದೇಟು ಹಾಕುತ್ತಿದ್ದರು. ಆದರೆ ಕೆಲವರು ಈರುಳ್ಳಿ;ಬೆಳ್ಳುಳ್ಳಿಯನ್ನು ಔಷಧಿಯ ರೂಪದಲ್ಲಿ ಫಲಕಾರಿ ಎಂದು ಕಂಡುಕೊಂಡು ಕೆಲವು ಕಾಯಿಲೆಗಳಿಗೆ ಔಷಧಿ ಎಂದು ಸೇವಿಸತೊಡಗಿ ಕ್ರಮೇಣ ತಮ್ಮ ಆಹಾರದಲ್ಲಿ ಅಳವಡಿಸಿಕೊಂಡರು.

ಇಂದಿಗೂ ತಮ್ಮ ಸಂಪ್ರದಾಯಗಳನ್ನೇ ಚಾಚೂ ತಪ್ಪದೇ ಅನುಸರಿಸಿಕೊಂಡು ಬರುತ್ತಿರುವ ಸಾತ್ವಿಕರು ಕೇವಲ ಸಾತ್ವಿಕ ಆಹಾರಗಳನ್ನು ಸೇವಿಸಿ ಇತರೆ ತಾಮಸ ಆಹಾರಗಳಾದ ಈರುಳ್ಳಿ, ಬೆಳ್ಳುಳ್ಳಿ, ಮಾಂಸ, ಮದ್ಯ ಮೊದಲಾದವುಗಳನ್ನು ಸೇವಿಸದೇ ಮನಸ್ಸಿನ ಮೇಲಿನ ನಿಯಂತ್ರಣ ಸಾಧಿಸಿ, ಮುಂದಿನ ಪೀಳಿಗೆಗೂ ಕೂಡ ಈ ಬಗ್ಗೆ ಸುಸಂಸ್ಕೃತರನ್ನಾಗಿಸುವಲ್ಲಿ ಇವರ ಕೊಡುಗೆ ಮಹತ್ವದ್ದಾಗಿದೆ. ತನ್ಮೂಲಕ ಮಾನಸಿಕ ನೆಮ್ಮದಿ, ಶಾಂತಿ ಹಾಗೂ ಜೀವನದ ಗುರಿಯನ್ನು ಸಾಧಿಸಲು ಇಚ್ಛಿಸುತ್ತಾರೆ.

ವೃಧ್ದಿ (ಜನನ) ಸೂತಕ ಏಕೆ?

ವೃಧ್ದಿ (ಜನನ) ಸೂತಕ ಏಕೆ?

ಜೀವಿಯು ದೇಹವನ್ನು ಬಿಟ್ಟರೂ ಸಹ ತನ್ನ ಸಂಬಂಧಿಕರೊಂದಿಗೆ ಇದ್ದ ಭಾವನಾತ್ಮಕ ಸಂಬಂಧವನ್ನು ಬಿಡುವುದಿಲ್ಲ. ದೇಹವು ಪಂಚಭೂತದಲ್ಲಿ ಲೀನವಾದರೂ ಸಹ ಜೀವಿಯ ಮನಸ್ಸಿನ ಸುಪ್ತ ಭಾವನೆಗಳು ಕೂಡಲೇ ನಾಶವಾಗುವುದಿಲ್ಲ.ಪ್ರಾಚೀನರು ಇದನ್ನು ಹತ್ತು ದಿನಗಳ ಕಾಲ ಗುರುತಿಸಿದರು.ಈ ಭಾವನೆಗಳು ಪ್ರಕೃತಿಯಲ್ಲಿ ವಿಕಿರಣದಂತೆ ಕಾರ್ಯ ನಿರ್ವಹಿಸುತ್ತವೆ. ಅಂದರೆ ಹುಟ್ಟು ಸಾವುಗಳು ಸಂಭವಿಸಿದಾಗ ಮನಸ್ಸಿನಲ್ಲಿ ; ದೇಹದಲ್ಲಿ; ಕೌಟುಂಬಿಕ ವಾತಾವರಣದಲ್ಲಿ ಒಂದು ಬಗೆಗಿನ ಅನಪೇಕ್ಷಿತವಾದ ವಿಕಿರಣ ಹಾಗೂ ವಿಕ್ರಿಯೆಯು ಸಂಭವಿಸುವುದು.ಮಾನಸಿಕ ಅನುಬಂಧಕ್ಕೆ ತಕ್ಕಂತೆ ಇವು ಹೆಚ್ಚು ಕಡಿಮೆಯಾಗುತ್ತವೆ. ಈ ವಿಕಿರಣಗಳು ಸಾತ್ವಿಕ ವಾತಾವರಣವನ್ನು ರಾಜಸ-ತಾಮಸಗಳಾಗಿ ಬದಲಾಯಿಸುತ್ತವೆ. ಆದ್ದರಿಂದಲೇ ದೇವಾಲಯ ಮತ್ತು ದೇವರ ಪೂಜೆಗಳಲ್ಲಿ ವಿರುದ್ಧ ಪ್ರಕ್ರಿಯೆಯನ್ನೇ ನಮಗೆ ಉಂಟುಮಾಡುತ್ತವೆ.ಅಲ್ಲದೆ ದೇಹ ಬಿಟ್ಟ ಆತ್ಮವು ಸಂಬಂಧಿಕರ ನೆನಪಿನ ಭಾವನಾತ್ಮಕ ವಿಚಾರವನ್ನು, ಕ್ರಿಯೆಯನ್ನು ಗಮನಿಸುತ್ತವೆ.ವಾಯುರೂಪಕವಾದ ಈ ವಿಕಿರಣಗಳಿಗೆ(ಆತ್ಮ) ಮಂತ್ರಗಳಿಂದ,ಗಂಟಾನಾದಗಳಿಂದ, ಸಾತ್ವಿಕತೆಯಿಂದ ತೊಂದರೆ ಉಂಟುಮಾಡುತ್ತವೆ. ಇವು ಕೌಟುಂಬಿಕವಾಗಿ ಬಾಧೆ ತರಬಹುದು.ಆದ್ದರಿಂದಲೇ ಪ್ರಾಚೀನರು ಈ ನಿರ್ಬಂಧವನ್ನು ವಿಧಿಸಿದ್ದಾರೆ.

ಜನನ ಸೂತಕ
ಉತ್ಪತ್ತಿ, ಸ್ಥಿತಿ ಮತ್ತು ಲಯ ಇವುಗಳು ಪ್ರಕೃತಿಯ ನಿಯಮವಾಗಿದೆ. ಉತ್ಪತ್ತಿಯೆಂದರೆ ಜನನ. ಇದು ರಜೋಗುಣಕ್ಕೆ ಸಂಬಂಧಿಸಿದೆ ಮತ್ತು ಲಯವೆಂದರೆ ಮೃತ್ಯು ಇದು ತಮೋಗುಣಕ್ಕೆ ಸಂಬಂಧಿಸಿದೆ. ಮಗುವಿನ ಜನನದ ಸಮಯದಲ್ಲಿ ಮಗುವಿನೊಂದಿಗೆ ಸಂಬಂಧಿಸಿರುವ ಇತರೆ ವ್ಯಕ್ತಿಗಳಲ್ಲಿಯೂ ರಜೋಗುಣಗಳು ವೃದ್ಧಿಸುತ್ತವೆ. ರಜೋಗುಣ ವೃದ್ಧಿಸಿರುವಾಗ ಮಾಡುವ ಧಾರ್ಮಿಕ ಕಾರ್ಯಗಳಿಂದ ವ್ಯಕ್ತಿಗೆ ಪೂರ್ಣವಾಗಿ ಲಾಭವಾಗುವುದಿಲ್ಲ. ಹಾಗೆಯೇ ಆ ವ್ಯಕ್ತಿಯು ಆ ಸಮಯದಲ್ಲಿ ದೇವಸ್ಥಾನಕ್ಕೆ ಹೋಗುವುದು, ತೀರ್ಥಯಾತ್ರೆ ಮಾಡುವುದು ಮುಂತಾದ ವಿಷಯಗಳನ್ನು ಮಾಡಿದರೆ, ಆ ವ್ಯಕ್ತಿಯಲ್ಲಿರುವ ರಜೋಗುಣಗಳ ಪರಿಣಾಮ ಅಲ್ಲಿಯ ಸಾತ್ತ್ವಿಕತೆಯ ಮೇಲೆ ಪರಿಣಾಮವಾಗಿ ಸಾತ್ತ್ವಿಕತೆಯು ಕ್ಷೀಣಿಸುತ್ತದೆ. ಇದರಿಂದ ಸಮಷ್ಟಿಗೆ ಲಾಭವಾಗುವುದಿಲ್ಲ. ಹಾಗಾಗಬಾರದೆಂದು ಆ ಸಮಯದಲ್ಲಿ ದೇವರ ಪೂಜೆ ಇತ್ಯಾದಿ ಸತ್ತ್ವಗುಣಗಳನ್ನು ವೃದ್ಧಿಸುವ ಕಾರ್ಯಗಳನ್ನು ಮಾಡಲು ನಿರ್ಬಂಧಿಸಲಾಗಿದೆ. ಈ ಕಾರಣದಿಂದ ಜನನಶೌಚದ ಸಮಯದಲ್ಲಿಯೂ ಸೂತಕವನ್ನು ಪಾಲಿಸಬೇಕಾಗುತ್ತದೆ. ಪಿತೃಗಳಿಗೆ ಕುಟುಂಬದಲ್ಲಿ ಜನನ ಕಾಲದಲ್ಲೂ ಅವರ ಭಾವನಾತ್ಮಕ ಅಂಶಗಳು ಕ್ಷಣ ಮಾತ್ರದಲ್ಲಿ ಸಂಚರಿಸಿದರೂ ನಮಗೆ ಅವರ ಒಂದು ಕ್ಷಣ ನಮಗೆ ಹತ್ತು ದಿನಗಳಾಗುತ್ತವೆ.
ಕುಟುಂಬದಲ್ಲಿನ ಜನನ ಮರಣ ಪ್ರಕ್ರಿಯೆ ವಂಶದ ವೃಧ್ದಿ ಮತ್ತು ಕ್ಷೀಣ ವಾಗುವ ಕಾಲದಲ್ಲಿ ಪಿತೃರ ಭಾವನೆ ಅವ್ಯಕ್ತ ಪ್ರತಿಕ್ರಿಯೆ ಇಲ್ಲದಿರಲು ಸಾಧ್ಯವೇ??
ನಮ್ಮ  ಭಾವನಾತ್ಮಕ ಸಂಬಂಧ ದ ನಂಬಿಕೆ "ಪಿತೃ" ಗಳು
ಕುಟುಂಬದಲ್ಲಿ ಒಂದು ಮರಣ ಅಥವ ಜನನ ಉಂಟಾದರೆ ಅಮೂರ್ತ ಸ್ವರೂಪ ದ ಪಿತೃ ವರ್ಗ ವು ಅದರಲ್ಲಿ ಅಲೌಕಿಕ ಸ್ವರೂಪದಲ್ಲಿ ರಜ ತಮ ಗುಣಗಳಲ್ಲಿ ಭಾಗವಹಿಸುವುದು ಸಾಧ್ಯವಿದೆ.

ಸೂತಕ ಆಚರಣೆಗಳ ಬಗ್ಗೆ  (ಅನುಮಾನ ಇದ್ದಲ್ಲಿ)
ನಿಮ್ಮ ಪ್ರಶ್ನೆಗಳನ್ನು whatsapp ಮಾಡಿ
9886600332

 ಪ್ರಶಾಂತಭಟ್ ಕೋಟೇಶ್ವರ