Sunday, 5 April 2026

ಎಡಮುರಿ -ಬಲಮುರಿ ಗಣಪತಿ:-



ಗಣಪತಿಯನ್ನು ಪ್ರಥಮ ವಂದಿಪ ಗಣಪ ಎಂದು ಕರೆಯುತ್ತೇವೆ. ಯಾವುದೇ ಶುಭ ಕಾರ್ಯದ ಆರಂಭದಲ್ಲಿ ಗಣೇಶನನ್ನು ಪೂಜಿಸಿ ಕಾರ್ಯಗಳನ್ನು ಮಾಡಿದರೆ ವಿಘ್ನ ನಿವಾರಣೆಯಾಗುತ್ತದೆ  ಎಂಬ ನಂಬಿಕೆ. ಗಣೇಶ ಪುರಾಣದಲ್ಲಿ, ಎಲ್ಲಾ ದೇವತೆ ಗಳಿಗೂ ಮತ್ತು ಬ್ರಹ್ಮ -ವಿಷ್ಣು- ಮಹೇಶ್ವರಾದ ತ್ರಿಮೂರ್ತಿ ದೇವರುಗಳಿಗೂ, ದೇವ  ಗಣಗಳಿಗೂ ‘ಗಣನಾಯಕ’ ನೇ ಅಧಿಪತಿಯಾಗಿದ್ದಾನೆ. ಪಾರ್ವತಿ ಪರಮೇಶ್ವರರ ಪುತ್ರ ಗಣೇಶ ಎಂದು ಗೊತ್ತು. ಗಣೇಶನಿಗೆ ಇಬ್ಬರು ತಾಯಂದಿರು  ಇದು ಹೇಗೆ? ಪದ್ಮ ಪುರಾಣದ ಪ್ರಕಾರ ದೇವಿ ಪಾರ್ವತಿ ಹಾಗೂ ಗಂಗೆಯ ಪುತ್ರ ಗಣೇಶ. ಒಮ್ಮೆ ಶಿವ-ಪಾರ್ವತಿ ಯರು ಸ್ನಾನಕ್ಕೆ ನದಿಗೆ ಹೋದರು. ಪಾರ್ವತಿ ಸುಗಂಧ ಭರಿತ ಅಂಗ ಲೇಪನ ಮಾಡಿಕೊಳ್ಳುತ್ತಾಳೆ ಮೈಗೆ ಹಚ್ಚಿಕೊಳ್ಳುವಾಗ ಭೂಮಿಯ ಮೇಲೆ ಬಿದ್ದ ಅಂಗಲೇಪನವನ್ನೆಲ್ಲಾ ಒಟ್ಟು ಮಾಡಿ  ಒಂದು ಗಂಡು ಮಗುವಿನ ಆಕಾರವನ್ನು ಮಾಡಿ  ಅದನ್ನು ನೀರಿಗೆ ಬಿಟ್ಟಳು. ನೀರಿನಲ್ಲಿದ್ದ ಗಂಗೆ ಅದನ್ನು ತೆಗೆದುಕೊಂಡು ಅದಕ್ಕೆ ಜೀವ ತುಂಬಿದಳು. ಹೀಗೆ ಪಾರ್ವತಿ ಮತ್ತು ಗಂಗೆ ಗಣೇಶನ ತಾಯಿ ಯಾದರು. ಈ ರೀತಿ ಬೇರೆ ಬೇರೆ ಪುರಾಣಗಳಲ್ಲಿ  ಹಲವು ಕಥೆಗಳಿವೆ. 

ಯಾವುದೇ ದೇವರ ವ್ರತ ಪೂಜೆಗಳನ್ನು ಹಾಗೂ ಶುಭ ಸಮಾರಂಭಗಳನ್ನು ಆರಂಭಿಸುವ ಮೊದಲು ಗಣೇಶನನ್ನು ಪೂಜಿಸಿಕೊಂಡು ಮುಂದಿನ ಕಾರ್ಯ ಶುರು ಮಾಡುವುದು ಪೂರ್ವದಿಂದಲೂ ಬಂದ ಪದ್ಧತಿ. ಗಜಮುಖ ಗಣಪತಿ  ಸೊಂಡಿಲಿಗೆ  ಅದರದೇ ಆದ ವಿಶೇಷತೆ ಇದೆ. ಗಣಪತಿ ಸೊಂಡಿಲು ಸಾಮಾನ್ಯವಾಗಿ ಎಡಗಡೆ ತಿರುಗಿರುತ್ತದೆ. ಬಹಳ ಅಪರೂಪ ಎಂಬಂತೆ ಬಲಗಡೆ ತಿರುಗಿದ ಸೊಂಡಿಲ  ಗಣಪನನ್ನು ನೋಡುತ್ತೇವೆ. ಎಡಗಡೆ  ತಿರುಗಿದ ಸೊಂಡಿಲ ಗಣಪತಿಗೆ ‘ಎಡಮುರಿ ಗಣಪತಿ’ ಎಂದೂ, ಬಲಕ್ಕೆ ಸೊಂಡಿಲು ತಿರುಗಿದ ಗಣಪತಿಯನ್ನು ‘ಬಲಮುರಿ ಗಣಪತಿ’ ಎನ್ನುತ್ತಾರೆ. ನಾವು ಹೆಚ್ಚಾಗಿ ನೋಡುವುದು ಎಡಮುರಿ ಗಣಪತಿ. ಅಪರೂಪ ಎಂಬಂತೆ ಬಲಮುರಿ ಗಣಪತಿ  ದೇವಾಲಯಗಳು  ತುಂಬಾ ಕಡಿಮೆ.‌ ಬಲಮುರಿ ಎಡಮುರಿ ಗಣಪತಿಯನ್ನು  ಸಮನಾಗಿ ಪೂಜಿಸುತ್ತಾರೆ. 

ಬಲಮುರಿ ಗಣಪತಿ ವಿಶೇಷ ಎನ್ನುವುದು ಮಾತ್ರವಲ್ಲ, ಬಲಮುರಿ ಗಣಪತಿ ಆರಾಧಿಸಿದರೆ ಜ್ಞಾನ ಸಾಧನೆಗೆ ಇರುವ ಅಡ್ಡಿ ಆತಂಕಗಳನ್ನು ನಿವಾರಿಸಿ ಬದುಕಿನ ಹಾದಿಯನ್ನು ಸುಗಮ ವಾಗಿ ಮಾಡುತ್ತಾನೆ ಎಂಬ ನಂಬಿಕೆ. ಬಲಮುರಿ ಗಣಪತಿಗೆ ದಕ್ಷಿಣಾಮೂರ್ತಿ ಎಂದು ಹೇಳುತ್ತಾರೆ. ಹಾಗೂ ಬಲಮುರಿ ಗಣಪತಿ ಜಾಗೃತ ಗಣಪತಿ ಎನ್ನುತ್ತಾರೆ. ಬಲಮುರಿ ದಕ್ಷಿಣ ದಿಕ್ಕನ್ನು ಸೂಚಿಸುವುದರಿಂದ ಅಲ್ಲಿ ಯಮಲೋಕದ ಪಾಪ ಪುಣ್ಯಗಳ ಪರೀಕ್ಷೆಯಾಗುವುದು ಎಂಬ ನಂಬಿಕೆ ಇದೆ. ಹಾಗಂತ ಬಲಮುರಿ ಗಣೇಶನನ್ನ ಸಾಮಾನ್ಯ ಜನರು ಪೂಜಿಸುವುದೇ ಇಲ್ಲ ಎಂದಲ್ಲ. ಬಲಮುರಿ ಗಣಪತಿಗೆ  ವಿಶೇಷವಾಗಿ ಅಂದರೆ ವಿಧಿ ವಿಧಾನಗಳ ಕ್ರಮದಲ್ಲಿ, ಶ್ರದ್ಧೆ ಮತ್ತು ಭಕ್ತಿಯಿಂದ ಪೂಜಿಸಿದರೆ ಅಂದುಕೊಂಡ ಕಾರ್ಯಗಳೆಲ್ಲ ನೆರವೇರುತ್ತದೆ.  ಆಕಸ್ಮಾತ್ ಬಲಮುರಿ ಗಣೇಶನ ಪೂಜೆಯಲ್ಲಿ ವ್ಯತ್ಯಾಸವಾದರೆ ತೊಂದರೆಯಾಗು ತ್ತದೆ ಎಂಬ ಮಾತಿದೆ. ಮನೆಗಳಲ್ಲಿ ಮಾಡುವ ಪೂಜೆ ಪುನಸ್ಕಾರ ಕ್ರಮವಾಗಿ ಅಂದರೆ ವಿಧಿ ವಿಧಾನಗಳಂತೆ ಮಾಡುವುದು ಕೆಲಸದ ಒತ್ತಡಗಳ ಮಧ್ಯೆ ಹೆಚ್ಚು ಕಡಿಮೆ ಆಗುವ ಸಾಧ್ಯತೆ ಇದೆ.  ಹೀಗಾಗಿ ಬಲಮುರಿ ಗಣಪತಿಯನ್ನು ಮನೆಗಳಲ್ಲಿ  ಇಟ್ಟುಕೊಳ್ಳುವುದು ಕಡಿಮೆ. ಬಲಮುರಿ ಗಣಪತಿ  ದೇವಸ್ಥಾನಗಳು  ಬೆರಳಿಕೆಯ ಷ್ಟು ಇದೆ. ಬಲ ಮುರಿ ಗಣೇಶನಿಗೆ ದೇವಾಲಯಗಳಲ್ಲಿ  ವಿಧಿ ವಿಧಾನಗಳಂತೆ ಕ್ರಮವಾಗಿ ಪೂಜೆ ನಡೆಸುತ್ತಾರೆ. ಆದ್ದರಿಂದ ಬಲಮುರಿ ಗಣಪತಿ ಇರುವ ದೇವಸ್ಥಾನ ಸ್ವಲ್ಪ ವಿಶೇಷ ಎಂಬಂತಿದೆ.   ಬಲಮುರಿ ಸೂರ್ಯ ನಾಡಿಗೆ ಸಂಬಂಧಿಸಿದೆ ಅಂದರೆ ಮೋಕ್ಷದ ಮಾರ್ಗ. 

ಬಲಮುರಿ ಗಣಪತಿ ‘ಮೋಕ್ಷ ಪ್ರಧ ಗಣಪ’ ಅಂದರೆ ಮೋಕ್ಷ ಕರುಣಿಸುವ ಗಣಪತಿ, ಇಹಲೋಕದ ಸುಖಗಳನ್ನು ತ್ಯಜಿಸಿದವರು, ಮೋಕ್ಷ  ಬಯಸುವವರು, ಆಸೆಗಳನ್ನು ತೊರೆದವರು ಮೋಕ್ಷ ಸಾಧಕರು ಬಲಮುರಿ ಗಣಪತಿ ಪೂಜೆ ಮಾಡಿ ನಡೆದು ಕೊಂಡಾಗ ಅವರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಬಲಮುರಿ ಗಣೇಶನ ಬಲಕ್ಕೆ ಬಾಗಿದ ಸೊಂಡಿಲಲ್ಲಿ ಕುಣಿಕೆ ಮತ್ತು ರತ್ನಗಳು ಸೇರಿದಂತೆ ಇತ್ಯಾದಿ ಅಲಂಕಾರಿಕ ವಸ್ತುಗಳನ್ನು ಧರಿಸುತ್ತಾನೆ. ಈ ಗಣೇಶನ ಆರಾಧನೆ ಮಾಡುವ ವ್ಯಕ್ತಿಗೆ ಶಕ್ತಿ, ಧೈರ್ಯ, ಜ್ಞಾನ,‌ ಬುದ್ಧಿವಂತಿಕೆ, ವಿಜಯ ಮತ್ತು ರಕ್ಷಣೆಯನ್ನು ನೀಡುತ್ತದೆ. ಇದಲ್ಲದೆ ಅಡೆತಡೆಗಳನ್ನು ನಿವಾರಿಸುತ್ತಾನೆ, ಶತ್ರುಗಳ ಮೇಲೆ ಜಯವನ್ನು ಕೊಡುತ್ತದೆ. ಮಂತ್ರ ತಂತ್ರದಲ್ಲಿ  ಯಶಸ್ಸು ಮತ್ತು ರೋಗರುಜನೆ ಗಳಿಂದ ಮುಕ್ತಿ, ಉದ್ಯೋಗದಲ್ಲಿ ಯಶಸ್ಸನ್ನು ಕರುಣಿಸುತ್ತದೆ. ಬಲಮುರಿ ಗಣಪತಿಯನ್ನು  ತಂತ್ರ ಮಂತ್ರಗಳ ಸಿದ್ಧಿ ಪಡೆಯಲು ಆರಾಧಿಸುತ್ತಾರೆ. 

‘ಎಡಮುರಿ ಗಣಪತಿ’ ಎಂದರೆ,  ಸೊಂಡಿಲು ಎಡಭಾಗದ ಕಡೆ ತಿರುಗಿರುತ್ತದೆ. ಎಡ ಭಾಗ ಅಂದರೆ ‘ವಾಮ ಮುಖಿ’ ಎನ್ನುತ್ತಾರೆ.‌ ಈ ಗಣಪತಿಗೆ ಉತ್ತರ ದಿಕ್ಕು. ಉತ್ತರ ದಿಕ್ಕು ಅಂದರೆ ಶಾಂತ ಸ್ವಭಾವ ಅಂತ. ಎಲ್ಲಾ ಮನೆಗಳಲ್ಲಿ ಎಡಮುರಿ ಸೊಂಡಿ ಲಿರುವ ಗಣೇಶನನ್ನು ತಂದು ಪೂಜಿಸುತ್ತಾರೆ. ಎಡಮುರಿ ಗಣಪತಿಗೆ ವಿಶೇಷವಾಗಿ ಪೂಜೆ ಮಾಡಬೇಕು ಎಂದು ಮನಸ್ಸಿನಲ್ಲಿ ಅಂದುಕೊಂಡ ದಿನ  ಮಾಡಿದರೂ ಸಾಕು ನಿತ್ಯ ಪೂಜೆಯಲ್ಲಿ ಹೂವು ಏರಿಸಿ, ಊದಿನ ಕಡ್ಡಿ ಹಚ್ಚಿ, ಎರಡು ಅಕ್ಷತೆ ಕಾಳು ಹಾಕಿ ಸ್ತೋತ್ರ ಹೇಳಿ ನಮಸ್ಕರಿಸಿದರೆ ಎಡಮುರಿ ಗಣಪತಿ ಅನುಗ್ರಹಿಸು ತ್ತಾನೆ. ಅಂದರೆ ಶ್ರದ್ಧೆ ಭಕ್ತಿಗೆ ಒಲಿಯುತ್ತಾನೆ. ಹಾಗೆ ಗಣಪತಿಯನ್ನು ಪೂಜಿಸಿದ ಮನೆಗಳಲ್ಲಿ ಶಾಂತಿ ಸಮಾಧಾನ ನೆಮ್ಮದಿ ತುಂಬಿರುತ್ತದೆ. ಎಡಮುರಿ ಅಂದರೆ ‘ಚಂದ್ರನಾಡಿ’ ತಂಪು  ಶೀತಲತೆಯಿಂದ ಕೂಡಿರುತ್ತದೆ.‌ ಉತ್ತರ ದಿಕ್ಕು ಆದ್ದರಿಂದ ಆಧ್ಯಾತ್ಮಕ್ಕೆ- ಅಭ್ಯಾಸಕ್ಕೆ ಪೂರಕವಾಗಿರುತ್ತದೆ. ಎಡಮುರಿ ಗಣಪತಿ  ಆನಂದ ಸೂಚಿಸುವ ಶಾಂತ ಮುಖ ನಿತ್ಯ ಪೂಜೆಗೆ ಎಡಮುರಿ ಗಣಪತಿಯೆ ಶ್ರೇಷ್ಠ ಎನ್ನುತ್ತಾರೆ. 

ಎಡಗಡೆ ಸೊಂಡಿಲು ತಿರುಗಿರುವ ಗಣಪತಿಯನ್ನು “ಭೋಗಪ್ರಧ” ಗಣಪತಿ ಎನ್ನುತ್ತಾರೆ. ಅಂದರೆ ಮಾನವ ಸಹಜವಾಗಿ ಬಹಳಷ್ಟು ಆಸೆಗಳನ್ನು ಇಟ್ಟುಕೊಂಡಿರುತ್ತಾನೆ. ಮನುಷ್ಯರು ಅವರಿಗಿರುವ ಹಲವಾರು ಆಸೆ ಆಕಾಂಕ್ಷೆ ಗಳನ್ನು ಪೂರೈಸಿಕೊಳ್ಳಲಿಕ್ಕಾಗಿ ಪೂಜೆ ಮಾಡುತ್ತಾರೆ. ಆಸೆ ಆಕಾಂಕ್ಷೆ ಇರುವವರು ಎಡಮುರಿ ಗಣಪತಿ ಪೂಜೆ ಮಾಡಿ ಪ್ರಾರ್ಥಿಸಿದರೆ “ಭೋಗಪ್ರದ” ನಾದ ಎಡಮುರಿ ಗಣಪತಿ ಇಷ್ಟಾರ್ಥಗಳನ್ನು ನೆರವೇರುತ್ತಾನೆ. ಎಡಮುರಿ ಗಣಪತಿ 4 ಕೈಗಳಲ್ಲಿ ಮೇಲಿನ ಎರಡು ಕೈಗಳಲ್ಲಿ ಶಂಖ -ಚಕ್ರ ಇದ್ದರೆ ಕೆಳಗಿನ ಎರಡು ಕೈಗಳಲ್ಲಿ ಒಂದರಲ್ಲಿ ಮೋದಕ ಅಥವಾ ಸಿಹಿ ಉಂಡೆ, ಮತ್ತೊಂದು ಕೈಯಲ್ಲಿ ಸ್ವಸ್ತಿಕ್ ಇರುತ್ತದೆ. ಆದ್ದರಿಂದ ಇವನು ಭೋಗ ಗಣಪ.

ಮನೆಗಳಲ್ಲಿ ಗಣೇಶನ ಸೊಂಡಿಲು ಎಡಕ್ಕೆ ತಿರುಗಿರುವುದನ್ನೇ ನೋಡಿ ತಂದು ಪೂಜೆ ಮಾಡುತ್ತಾರೆ. ಕೆಲವು ಬಲಕ್ಕೆ ತಿರುಗಿರುತ್ತದೆ- ಕೆಲವು ಎಡಕ್ಕೆ ತಿರುಗಿರುತ್ತದೆ
ಒಮ್ಮೊಮ್ಮೆ ಗೊತ್ತಾಗದೆ ಬಲಮುರಿ ಗಣಪತಿ  ಮನೆಗೆ ತಂದಿಟ್ಟು ಪೂಜೆ ಮಾಡು ತ್ತಾ ಇರುತ್ತಾರೆ. ಎಡಮುರಿ ಬಲಮುರಿ ಗಣಪತಿ ಬಗ್ಗೆ ಯಾರಾದರೂ ಹೇಳಿದ ಮೇಲೆ ಅದು ಗಮನಕ್ಕೆ ಬರುತ್ತದೆ ಹಾಗೆ ಆಗುವುದು ಸಹಜ. ಅದಕ್ಕಾಗಿ ಯೋಚಿಸ ಬೇಕಾಗಿಲ್ಲ ತಾನಾಗೇ ಬಲಮುರಿ  ಗಣಪತಿ ಬಂದಿದ್ದಾನೆ ಎಂದುಕೊಂಡು ಮಾಡುವ ಪೂಜೆಯನ್ನು ಶ್ರದ್ಧೆಯಿಂದ ಮಾಡಿದರೆ ಆಯಿತು.‌ ಗಣಪತಿಗೆ ಒಂದು ಚೂರು ಬೆಲ್ಲ 
ಅಥವಾ ನೆನೆಸಿದ ಇಡಿ ಕಡಲೆ ಐದು ಗಣಪತಿ ಮುಂದೆ ಇಟ್ಟು ಕೈಮುಗಿರಿ.‌ ನಮ್ಮ ಮನೆಯಲ್ಲಿ ಬಲಮುರಿ ಬೆಳ್ಳಿ ಗಣಪತಿ ಬಂದಿದೆ.‌ ಅಂದರೆ ಅತ್ತೆ ಮನೆಯಿಂದಲೋ ತಾಯಿ ಮನೆಯಿಂದಲೋ ಹೇಗೋ ಬಂದಿದೆ. ನಾನು ಇತ್ತೀಚಿಗೆ  ನೋಡಿದ ಮೇಲೆ ಗೊತ್ತಾಯಿತು. ನಿತ್ಯ ಪೂಜೆಯಂತೆ ಮಾಡುತ್ತೇನೆ.( ಕಡಲೆ ಅಥವಾ ಬೆಲ್ಲ ಅಥವಾ ಚೂರು ಸಕ್ಕರೆ ನೈವೇದ್ಯಕ್ಕೆ ಇಡುತ್ತೇನೆ) ಹೀಗೆ ಆಕಸ್ಮಿಕವಾಗಿ ಆಗುವುದೆಲ್ಲ ಒಳ್ಳೆಯ ದಕ್ಕೆ ಇದನ್ನು ಮರೆಯಬೇಡಿ. ಈ  ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ.

ಇದಕ್ಕೆ ನಾನು ಕಂಡ ಉದಾಹರಣೆ:-  ಬಹಳಷ್ಟು ಮನೆಗಳಲ್ಲಿ ಮನೆತನದ ಪದ್ಧತಿ ಯಂತೆ ಭಾದ್ರಪದ ಮಾಸದ ಚೌತಿದಿನ ಮಣ್ಣಿನ ಗಣಪತಿ ಕೂರಿಸುವುದು(ಇಲ್ಲಿ ಮಣ್ಣಿನ ಗಣಪತಿ ಅಂತ ಏಕೆ ಒತ್ತಿ ಹೇಳುತ್ತೇನೆ ಎಂದರೆ, ಯಾರ್ಯಾರೋ ಮಣ್ಣಿನ ಗಣಪತಿಯನ್ನು ಇಡುತ್ತಾರೆ ನಾವು ಏಕೆ ಇಡಬಾರದು ಎಂದು ಸುಮ್ಮ ಸುಮ್ಮನೆ ಆಡಂಬರಕ್ಕೆ ಮಣ್ಣಿನ ಗಣಪತಿ ತಂದು  ಇಡಬಾರದು ಮಣ್ಣಿನ ಗಣಪತಿ ಇಟ್ಟರೆ  ಪ್ರತಿಷ್ಠಾಪನೆ ಸಂಕಲ್ಪ ಸಹಿತ ಕ್ರಮಬದ್ಧವಾಗಿ ಪೂಜೆ ಮಾಡಬೇಕು, ಕ್ರಮದಂತೆ ವಿಸರ್ಜನೆ ಮಾಡಬೇಕು) ಹಾಗೆ ಅನಂತನ ವ್ರತ ಮಾಡುವ ಪದ್ಧತಿ ಇರುತ್ತದೆ. 
ಹಿಂದಿನಿಂದ ಬಂದ ಪದ್ಧತಿ ಎಂದು ನಡೆಸಿಕೊಂಡು ಬರುತ್ತಿರುತ್ತಾರೆ. ಆದರೆ ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ಪ್ರತಿವರ್ಷ ವ್ರತ ಮಾಡಲು  ಆಗುವುದಿಲ್ಲವೆಂದೋ, ಕೆಲಸದ ವರ್ಗಾವಣೆ ಅಥವಾ ಆರ್ಥಿಕ ಅಡಚಣೆ - ರಜೆ - ಸಮಯ ಮುಂತಾದ ಕಾರಣಗಳಿಂದಲೋ ಪದ್ಧತಿಯನ್ನು ಮುಂದುವರೆಸಲು ಆಗದಿದ್ದಾಗ, ಅಂತ ಸಮಯದಲ್ಲಿ ಅದನ್ನು ಪರಿಚಯದವರು ಯಾರಾದರೂ ಮಾಡುವರಿದ್ದರೆ ಶಾಸ್ತ್ರೋಕ್ತವಾಗಿ ಗಣಪತಿ ವಿಗ್ರಹ ಅಥವಾ ಅನಂತನ ವ್ರತವಾದರೆ ಅನಂತನ ಎಳೆಯನ್ನು ,‌ ದಾನ ಕೊಡುವ ಕ್ರಮದಲ್ಲಿ ಕೊಟ್ಟು ಅವರಿಗೆ ವರ್ಗಾಯಿಸಿ ದಂತೆ ಮಾಡುತ್ತಾರೆ. ಇದರಿಂದ ಯಾವುದೇ ದೋಷವಿಲ್ಲ ಇಬ್ಬರಿಗೂ ಒಳ್ಳೆಯದು.
ಇದು ಆಗದಿದ್ದಾಗ ಗಣಪತಿ ದೇವಸ್ಥಾನಗಳಿಗೆ ಹೋಗಿ ಪರಿಸ್ಥಿತಿಯನ್ನು ಹೇಳಿ ಕೊಡಬಹುದು.

ಹಿಂದಿನ ಕಾಲದ ಒಂದು ಕ್ರಮ :- ಬಡತನದಿಂದಾಗಿ ಮನೆತನದ ಪದ್ಧತಿಯಾಗಿ ಬಂದ ವ್ರತ- ಪೂಜೆಗಳನ್ನು ಕ್ರಮೇಣ ಮಾಡಲು ಸಾಧ್ಯವಿಲ್ಲದಾಗ, ಬೇರೆಯವರನ್ನು ಕೇಳಿ ಅವರಿಗೆ ಧಾರೆ ಎರೆವ ಮೂಲಕ ವರ್ಗಾವಣೆ ಮಾಡುತ್ತಿದ್ದರು. ಇದೂ ಆಗದಿದ್ದಾಗ, ಅಂಥವರು ಗಣಪತಿ ಅಥವಾ ಅನಂತನ ವ್ರತ ಮಾಡುವವರು ಅನಂತನ ಎಳೆಯನ್ನು  ವಿಳ್ಳೆದೆಲೆ ಅಡಿಕೆ ಮೇಲೆಟ್ಟು ಕೈಲಾದಷ್ಟು ದಕ್ಷಿಣೆ ಹಾಕಿ ಊರಿನ ಯಾರಾದರೂ (ಸಂಸ್ಕಾರವಂತರ) ಮನೆ ಮುಂದಿನ ಹೊಸಿಲ ಮೇಲೆ ಇಟ್ಟು ಮೌನವಾಗಿ ಬರುತ್ತಿದ್ದರು.‌ ಆ ಮನೆಯವರು ಮುಂಜಾನೆ ಬೀದಿ ಬಾಗಿಲು ತೆಗೆದು ನೋಡಿದಾಗ ಹೊಸಿಲ ಮೇಲೆ ಗಣಪತಿ ಅಥವಾ ಅನಂತನ ಎಳೆ ಇರುವುದು ಕಂಡು ಬಂದರೆ. ಅದನ್ನು ಭಕ್ತಿಯಿಂದ ಒಳಗೆ ತೆಗೆದುಕೊಂಡು ಹೋಗಿ ಕ್ರಮವಾಗಿ ಅವರು ವ್ರತ  ಪೂಜೆ ನಿಯಮ ಪಾಲಿಸುತ್ತಾರೆ. ಮುಂದೆ  ಅದು ಅವರ ಮನೆಯ ಪದ್ಧತಿಯಾಗುತ್ತದೆ ಮತ್ತು  ಅವರ ಮನೆಗೆ ತಾನಾಗೆ ಬಂದ ಗಣಪತಿಗೆ ವ್ರತ ಪೂಜೆ ಮಾಡುತ್ತಾ ಬಂದಂತೆ ಬಹಳಷ್ಟು ಒಳ್ಳೆಯದಾದ ಉದಾಹರಣೆಗಳು ಇವೆ (ನಮ್ಮ ಊರಿನ ಒಬ್ಬರ ಮನೆಯಲ್ಲಿ ಅನಂತನ ಎಳೆ ಹೊಸಿಲ ಮೇಲೆ ಇಟ್ಟು ಹೋಗಿದ್ದರಂತೆ, ಹಾಗೆ ಅನಂತನ ವ್ರತ ಆರಂಭವಾಯಿತು,‌ ಜೊತೆಗೆ ಸಂಪತ್ತು ಬಂತು, ಸಂತಾನ ಆಯಿತು ಎನ್ನುತ್ತಿದ್ದರು) ‌

ಎಡಮುರಿ–ಬಲಮುರಿ ಗಣಪತಿಯ ರೂಪಗಳು ಬೇರೆಬೇರೆ ಆದರೂ,  ಭಕ್ತಿ ಒಂದೇ, ಅನುಗ್ರಹವೂ ಒಂದೇ.  ಎಡಮುರಿ ಗಣಪತಿ ಇಹಲೋಕದ ಸುಖ–ಶಾಂತಿಯನ್ನು ನೀಡುವವನು;  ಬಲಮುರಿ ಗಣಪತಿ ಜ್ಞಾನ–ಸಾಧನೆ–ಮೋಕ್ಷದ ದಾರಿಯನ್ನು ತೆರೆದಿಡುವವನು.  

ಪದ್ಧತಿಗಳು, ವ್ರತಗಳು, ಸಂಪ್ರದಾಯಗಳು — ನಮ್ಮನ್ನು ಮಾರ್ಗದರ್ಶನ ಮಾಡಲು, ಇರುವುದು . ಭಕ್ತಿ ಇದ್ದಲ್ಲಿ ದೋಷವಿಲ್ಲ,  ಸಂಕಲ್ಪ ಇದ್ದಲ್ಲಿ ವಿಘ್ನವಿಲ್ಲ,  ಗಣೇಶನ ಕೃಪೆ ಇದ್ದಲ್ಲಿ ಅಡೆತಡೆಗಳಿಲ್ಲ. ಯಾವ ರೂಪ ಮನೆಗೆ ಬಂದರೂ ಅದು ದೈವಸಂಕೇತ. ಶ್ರದ್ಧೆಯಿಂದ ಪೂಜಿಸಿದರೆ ಶುಭ, ನೆಮ್ಮದಿ, ರಕ್ಷಣೆ ದೊರೆಯುತ್ತದೆ.

ಓಂ ಶ್ರೀ ಸಂಕಷ್ಟಹರ ಸ್ತೋತ್ರಮಂತ್ರಸ್ಯ|
ಶ್ರೀ ಮಹಾಗಣಪತಿರ್ದೇವತಾ |
ಸಂಕಷ್ಟಹರಣಾರ್ಥೇ ಜಪೇ ವಿನಿಯೋಗ:|
ಓಂ ಗಂ ಗಣಪತಿಯೇ ನಮಃ 
ಓಂ ಲಂಬೋದರಾಯ ನಮಃ|

॥ ಮಹಾಗಣಪತಿ ಧ್ಯಾನಂ ||

ಶ್ರೀರಸ್ತು ಗಜವಕ್ರಂ 
ಶೂರ್ಪಕರ್ಣ೦ 
ಗೌರೀದೇಹಮೃದುದ್ಭವಂ | 
ಚತುರ್ಭುಜಂ ಪಂಚಮುಖಂ 
ವರಮೂಷಕವಾಹನಂ ।।೧।।

ಮಹಾಕಾಯಂ 
ದಿವ್ಯದೇಹಾಧ್ಯಂ 
ದ್ವಾತ್ರಿಂಶದ್ರೂಪಧಾರಣಂ | 
ಷಟ್ಟೋಣಚಕ್ರಮಧ್ಯಸ್ಥಂ 
ಪಾಶಾಂಕುಶಲಸತ್ಕರಂ ||೨||

ದಂತಮೋಹಕಹಸ್ತಾಡ್ಯಂ 
ಚಂದ್ರಾಗರ್ವಾಪಹಾರಕಂ | 
ಸಿಂಧೂರಾಭಂ ಶಿವಸುತಂ ಹೇರಂಬಂ 
ವಲ್ಲಭಾಪ್ರಿಯಂ ।।೩।

ಆದಿಪೂಜ್ಯಂ ಚತುರ್ಧೀಶಂ 
ಸರ್ವದೇವ ನಮಸ್ಕೃತಂ| 
ಸರ್ವಾ ಭೀಷ್ಟಪ್ರದಾತಾರಂ 
ಸರ್ವವಿಘ್ನನಿವಾರಣಂ ||೪||

ನಾಗಬದ್ಯೋಧರಂ ದೇವಂ 
ನಾಗಯಜ್ಯೋಪವೀತಿನಂ | 
ಫಾಲಚಂದ್ರಂ ತ್ರಿನಯನಂ 
ಶ್ರೀಗಣೇಶಂ ನಮಾಮ್ಯಹಂ ||೫|

ವಂದನೆಗಳೊಂದಿಗೆ,
ಬರಹ: ©ಆಶಾ ನಾಗಭೂಷಣ — ಹಕ್ಕುಗಳು ಸಂರಕ್ಷಿತ
#ashanagabhushan #ಆಶಾನಾಗಭೂಷಣ

Thursday, 2 April 2026

ಹನುಮ ಜಯಂತಿ

***ಹನುಮ ಜಯಂತಿ***.                 
ಮಧುಕೈಟಭರ ವಧೆಯಾದ ಬಳಿಕ ನಿರ್ಮಾಣವಾದ ಈ ಮೇದಿನಿಯಲ್ಲಿ ಮೊದಲು ಪ್ರಜೆಗಳೇ ಇರಲಿಲ್ಲ. ಹೀಗಾಗಿ ತನ್ನ ಸೃಷ್ಟಿಕಾರ್ಯಕ್ಕೆ ಅನುಕೂಲಿಸಲು ಬ್ರಹ್ಮನು ಹತ್ತು ಜನರನ್ನು ಸೃಷ್ಟಿಸುತ್ತಾನೆ. ಅವರೇ ಮರೀಚಿ , ಅತ್ರಿ , ಅಂಗೀರಸ , ಪುಲಸ್ತ್ಯ , ಪುಲಹ , ಕ್ರತು , ಸ್ವಾಯಂಭೂ ಮನ್ವಂತರದ ದಕ್ಷ , ವಸಿಷ್ಠ , ಭೃಗು ಮತ್ತು ನಾರದರೆಂಬ ಹತ್ತು ಮಂದಿ ಪ್ರಜಾಪತಿಗಳು. ಅವರು ಮುಖ್ಯವಾಗಿ ಪ್ರಜೆಗಳ ಸೃಷ್ಟಿಗಾಗಿಯೇ ಬ್ರಹ್ಮನಿಂದ ನಿಯುಕ್ತರಾದವರು. ಆದ್ದರಿಂದ ಅವರನ್ನು “ಪ್ರಜಾಪತಿಗಳು” ಎಂದು ಕರೆಯಲಾಯಿತು. ಆದರೆ ಅವರಿಂದಲೂ ಸೃಷ್ಟಿ ಕಾರ್ಯವು ವೇಗವನ್ನು ಪಡೆದುಕೊಳ್ಳದೇ ಇದ್ದಾಗ ಬ್ರಹ್ಮನು ತನ್ನನ್ನೇ ತಾನು ಎರಡಾಗಿ ಸೀಳಿಕೊಳ್ಳುತ್ತಾನೆ. ಆಗ ಶತರೂಪಾ ಎಂಬ ಹೆಣ್ಣು ಮತ್ತು ಸ್ವಯಂಭುವ ಎಂಬ ಗಂಡುಗಳ ಜನನವಾಗುತ್ತದೆ. ಅವರಿಬ್ಬರು ಸೃಷ್ಟಿಯ ಪ್ರಥಮ ಸ್ತ್ರೀ-ಪುರುಷ ಜೋಡಿಯಾಗುತ್ತಾರೆ.

ಈ ಹತ್ತು ಜನ ಪ್ರಜಾಪತಿಗಳು ಸ್ವಾರೋಚಿಷ , ಉತ್ತಮ , ತಾಮಸ , ರೈವತ , ಚಾಕ್ಷುಷ ಮತ್ತು ವೈವಸ್ವತ ಎಂಬ ಬೇರೆ ಆರು ಜನ ಮನುಗಳನ್ನು , ದೇವತೆಗಳನ್ನು ಮತ್ತು ಅನೇಕ ಮುನಿಗಳನ್ನು ಸೃಷ್ಟಿಸುತ್ತಾರೆ. ಯಕ್ಷ , ರಾಕ್ಷಸ , ಪಿಶಾಚ , ಗಂಧರ್ವ , ಅಪ್ಸರೆ , ಅಸುರ , ನಾಗ , ಸರ್ಪ , ಸುಪರ್ಣ , ಪಿತೃಗಣಗಳನ್ನೆಲ್ಲಾ ಸೃಷ್ಟಿಸುತ್ತಾರೆ.

ಕೇವಲ ಬ್ರಹ್ಮ ಅಥವಾ ಬ್ರಹ್ಮನಿಂದ ಸೃಷ್ಟಿಸಲ್ಪಟ್ಟ ಪ್ರಜಾಪತಿಗಳಿಂದ ಸೃಷ್ಟಿ ಕಾರ್ಯವು ನಡೆದರೆ ಆಗ ಸೃಷ್ಟಿ ಕಾರ್ಯವು ನಿಧಾನವಾಗುತ್ತದೆ. ಹೀಗಾಗಿ ಪ್ರಜೆಗಳ ಸಂಖ್ಯೆಯು ಶೀಘ್ರವಾಗಿ ಹೆಚ್ಚಳವಾಗಬೇಕಾದರೆ ಹೊಸ ರೀತಿಯ ಸೃಷ್ಟಿಯ ಕ್ರಮ ಬೇಕು ಎಂಬುದನ್ನು ಮನಗಂಡ ದಕ್ಷಪ್ರಜಾಪತಿಯು ಗಂಡು ಹೆಣ್ಣಿನ ಮೈಥುನದಿಂದ ಮಕ್ಕಳು ಹುಟ್ಟುವ ವ್ಯವಸ್ಥೆ ಮಾಡುತ್ತಾನೆ. ಅದಕ್ಕಿಂತ ಮೊದಲು ಆ ರೀತಿಯ ಸೃಷ್ಟಿ ಕ್ರಮವೇ ಇರಲಿಲ್ಲ. ಅದುವರೆಗೆ ಸಂಕಲ್ಪ , ದರ್ಶನ , ಸ್ಪರ್ಶ , ತಪಸ್ಸು ಮೊದಲಾದ ವಿಧಗಳಿಂದ ಮಕ್ಕಳ ಸೃಷ್ಟಿ ಕಾರ್ಯ ನಡೆಯುತ್ತಿತ್ತು. 

ಪ್ರಜಾಪತಿಗಳ ಜನನವು ಕೂಡಾ ಅದೇರೀತಿ ಬ್ರಹ್ಮನ ಸಂಕಲ್ಪದಿಂದ ಉಂಟಾದುದಾಗಿತ್ತು. ಮರೀಚಿಯು ಬ್ರಹ್ಮನ ಮನಸ್ಸಿನಿಂದಲೂ , ಅತ್ರಿಯು ಬ್ರಹ್ಮನ ಕಣ್ಣಿನಿಂದಲೂ , ಅಂಗೀರಸನು ಬ್ರಹ್ಮನ ಮುಖದಿಂದಲೂ , ಪುಲಸ್ತ್ಯನು ಬ್ರಹ್ಮನ ಕಿವಿಗಳಿಂದಲೂ  , ಪುಲಹನು ಬ್ರಹ್ಮನ ನಾಭಿಯಿಂದಲೂ , ಕ್ರತುವು ಬ್ರಹ್ಮನ ಕೈಯಿಂದಲೂ , ಸ್ವಾಯಂಭೂ ಮನ್ವಂತರದ ದಕ್ಷನು ಬ್ರಹ್ಮನ ಬಲಗೈ ಅಂಗುಷ್ಠದಿಂದಲೂ , ವಸಿಷ್ಠನು ಬ್ರಹ್ಮನ ಪ್ರಾಣದಿಂದಲೂ , ಭೃಗುವು ಬ್ರಹ್ಮನ ಚರ್ಮದಿಂದಲೂ ಮತ್ತು ನಾರದರು ಬ್ರಹ್ಮನ ತೊಡೆಯಿಂದಲೂ ಜನಿಸಿದವರಾಗಿದ್ದರು. ಹೀಗೇ ಇವರೆಲ್ಲ ಬ್ರಹ್ಮನ ದೇಹದ ಬೇರೆ ಬೇರೆ ಭಾಗಗಳಿಂದ ಜನಿಸಿದವರೇ ಆದರೂ ಕೂಡಾ , ಎಲ್ಲರೂ ಬ್ರಹ್ಮನ ಮನಸ್ಸಿನ ಸಂಕಲ್ಪದಿಂದಲೇ ಜನಿಸಿದವ ರಾಗಿರುವುದರಿಂದ ಈ ಎಲ್ಲರನ್ನೂ ಬ್ರಹ್ಮಮಾನಸ ಪುತ್ರರೆಂದೇ ಕರೆಯುತ್ತಾರೆ. 

ಭೂಲೋಕದಲ್ಲಿ ಈ ಪ್ರಜಾಪತಿಗಳ ಪಾರುಪತ್ಯವು ನಡೆಯುತ್ತಿದ್ದ ಸ್ವಾಯಂಭೂ ಮನ್ವಂತರದ ಆ ಆದಿ ಕಾಲದಲ್ಲಿಯೂ ದೇವಲೋಕವು ಇದ್ದಿತ್ತು. ಆ ದೇವಲೋಕದಲ್ಲಿ ದೇವತೆಗಳು , ಅವರ ಒಡೆಯ ದೇವೇಂದ್ರ , ಅಷ್ಟ ದಿಕ್ಪಾಲಕರು , ಸಪ್ತ ಮರುತ್ತುಗಳು , ಅಷ್ಟವಸುಗಳು , ಏಕಾದಶ ರುದ್ರರು ಮೊದಲಾದವರೆಲ್ಲ ಇದ್ದರು. ಇವರೆಲ್ಲರೂ ತ್ರಿಮೂರ್ತಿಗಳಾದ ಬ್ರಹ್ಮ , ವಿಷ್ಣು ಮತ್ತು ಮಹೇಶ್ವರರನ್ನು ಸಮಾನವಾಗಿ ಗೌರವಿಸಿಕೊಂಡು ಅವರ ಅನುಗ್ರಹದಿಂದ ಸ್ವರ್ಗದಲ್ಲಿ ಇದ್ದುಕೊಂಡೇ ಮೂರು ಲೋಕಗಳ ಅಧಿಪತ್ಯವನ್ನು ನಿಭಾಯಿಸುತ್ತಿದ್ದರು.

ಹೀಗಿರುವಾಗ ಒಮ್ಮೆ ಬ್ರಹ್ಮದೇವನು ಆಕಳಿಸಿದಾಗ ಅವನ ಬಾಯಿಯಿಂದ ಜಾಂಬವಂತ ಎಂಬ ಭಲ್ಲೂಕನೊಬ್ಬನು ಜನಿಸುತ್ತಾನೆ. ಇನ್ನೊಮ್ಮೆ ಬ್ರಹ್ಮದೇವನು ತನ್ನ ಕಮಂಡಲದಲ್ಲಿನ ಜಲವನ್ನು ಪ್ರೋಕ್ಷಿಸಿದಾಗ ಋಕ್ಷರಜಸ್ ಎಂಬ ವಾನರನ ಜನನವಾಗುತ್ತದೆ. ಹೀಗೆ ತನ್ನ ಸಂಕಲ್ಪದಿಂದಲೇ ಜನಿಸಿದ ಜಾಂಬವ ಮತ್ತು ಋಕ್ಷರಜಸ್ ಈ ಇಬ್ಬರನ್ನೂ ಬ್ರಹ್ಮದೇವನು ಭೂಲೋಕದ “ಕಿಷ್ಕಿಂಧೆ” ಎಂಬಲ್ಲಿಗೆ ಕಳುಹಿಸುತ್ತಾನೆ. ಈಗಿನ ಕೊಪ್ಪಳ ಜಿಲ್ಲೆಯ ಹಂಪಿ ಮತ್ತು ಆನೆಗೊಂದಿ ಪ್ರದೇಶವೇ ಈ ಹಿಂದೆ ರಾಮಾಯಣ ಕಾಲದಲ್ಲಿ ಕಿಷ್ಕಿಂದೆ ಆಗಿತ್ತು. “ಕಿಷ್ಕಿ” ಎಂಬ ವಾನರರಾಜನು ಆಳಿಕೊಂಡಿದ್ದರಿಂದ ಆ ಪ್ರದೇಶಕ್ಕೆ “ಕಿಷ್ಕಿಂಧೆ” ಎಂಬ ಹೆಸರು ಬಂದಿತ್ತು. ಕಿಷ್ಕಿಯ ಕಾಲಾ ನಂತರ ಕಿಷ್ಕಿಂಧೆಯು ಪಾಳುಬಿದ್ದಿತ್ತು. ಇಂತಹ ಕಿಷ್ಕಿಂದೆಗೆ ಋಕ್ಷನನ್ನು ಅರಸನನ್ನಾಗಿಯೂ ಮತ್ತು ಜಾಂಬವಂತನನ್ನು ಅವನ ಮಂತ್ರಿಯಾಗಿಯೂ ಬ್ರಹ್ಮನು ನೇಮಿಸುತ್ತಾನೆ. ಅಂದಿನಿಂದ ಋಕ್ಷರಜಸನು “ಋಕ್ಷರಾಜ” ಎನ್ನಿಸಿಕೊಳ್ಳುತ್ತಾನೆ. ಮುಂದೆ ಅವನು ಋಕ್ಷಿ ಎಂಬ ವಾನರ ಸ್ತ್ರೀಯೊಬ್ಬಳನ್ನು ಮದುವೆಯಾಗುತ್ತಾನೆ. 

ಹಲವು ವರ್ಷಗಳು ಉರುಳಿದರೂ ತನ್ನ ಹೆಂಡತಿ ಋಕ್ಷಿಯಲ್ಲಿ ಸಂತಾನವನ್ನು ಪಡೆಯಲು ಅಸಾಧ್ಯವಾದಾಗ ಋಕ್ಷನು ಪಂಪಾತೀರದಲ್ಲಿ ಶಿವನನ್ನು ಕುರಿತು ತಪಸ್ಸನ್ನು ಆರಂಭಿಸುತ್ತಾನೆ. ಒಂದು ದಿನ ಸ್ನಾನಕ್ಕಾಗಿ ಸರೋವರವೊಂದರಲ್ಲಿ ಮುಳುಗಿ ಏಳುವಾಗ ಅವನು ಹೆಣ್ಣು ಕಪಿಯಾಗಿ ಮಾರ್ಪಡುತ್ತಾನೆ. ಅಷ್ಟರಲ್ಲಿ ಶಿವಪೂಜೆಗಾಗಿ ಅಲ್ಲಿಗೆ ಬಂದ ದೇವೇಂದ್ರನು ಆಕೆಯ ರೂಪಕ್ಕೆ ಮನಸೋತು ಅವಳನ್ನು ಕೂಡುತ್ತಾನೆ. ಆಗ ಆ ವಾನರಿಯ ವಾಲ ಅಂದರೆ ಬಾಲದ ಕಡೆಯಿಂದ ಗಂಡು ಕಪಿಯೊಂದು ಜನಿಸುತ್ತದೆ. ಹೀಗೆ ವಾಲ ಪ್ರದೇಶದಿಂದ ಜನಿಸಿದ ಇಂದ್ರಕುಮಾರನೇ “ವಾಲಿ”. ಸ್ವಲ್ಪ ಸಮಯದ ಬಳಿಕ ಅಲ್ಲಿಗೆ ಬಂದ ಸೂರ‍್ಯದೇವನೂ ಕೂಡಾ ಆಕೆಯ ರೂಪಕ್ಕೆ ಸೋತು ಅವಳನ್ನು ಕೂಡುತ್ತಾನೆ. ಆಗ ಆಕೆಯ ಗ್ರೀವ ಅಂದರೆ ಕುತ್ತಿಗೆಯ ಭಾಗದಿಂದ ಇನ್ನೊಂದು ಗಂಡು ಕಪಿ ಜನಿಸುತ್ತದೆ. ಹೀಗೆ ಗ್ರೀವ ಪ್ರದೇಶದಿಂದ ಹುಟ್ಟಿದ ಸೂರ‍್ಯ ನಂದನನೇ “ಸುಗ್ರೀವ”. ತನಗೆ ಒದಗಿದ ಹೆಣ್ತನದ ಸ್ಥಿತಿಯಿಂದ ಕಳವಳಗೊಂಡ ಋಕ್ಷನು ಪುನಹ ಶಿವನನ್ನು ಧ್ಯಾನಿಸುತ್ತಾ ಅದೇ ಕೊಳದಲ್ಲಿ ಮತ್ತೊಮ್ಮೆ ಮುಳುಗುತ್ತಾನೆ. ಆಗ ಅವನು ತನ್ನ ಮೊದಲಿನ ಪುರುಷ ರೂಪವನ್ನು ಮರಳಿ ಪಡೆದುಕೊಳ್ಳುತ್ತಾನೆ. ಅಷ್ಟರಲ್ಲಿ ಶಿವನು ಪ್ರತ್ಯಕ್ಷನಾಗಿ ಆ ಇಬ್ಬರು ಮಕ್ಕಳನ್ನು ಸಲಹಿಕೊಳ್ಳುವಂತೆ ಸೂಚಿಸಿ ಮರೆಯಾಗುತ್ತಾನೆ. 

ಪುಂಜಿಕಸ್ಥಲೀ ಎಂಬ ಅಪ್ಸರೆಯೊಬ್ಬಳು ಅದ್ಯಾವುದೋ ಶಾಪದಿಂದಾಗಿ ವಾನರ ಜನ್ಮವನ್ನು ಪಡೆದು ಕುಂಜರ ಎಂಬ ಕಪಿನಾಯಕನೊಬ್ಬನಿಗೆ ಮಗಳಾಗಿ ಜನಿಸುತ್ತಾಳೆ. ಅವಳೇ ಅಂಜನೆ.  ಇತ್ತ ಗೋಕರ್ಣ ಕ್ಷೇತ್ರದಲ್ಲಿ ಋಷಿಗಳನ್ನು ಪೀಡಿಸುತ್ತಿದ್ದ ಶಂಬಸಾದ ಎಂಬ ರಾಕ್ಷಸನನ್ನು ಋಷಿಗಳ ಕೋರಿಕೆಯಂತೆ ಆ ಪರಿಸರದಲ್ಲೇ ವಾಸವಾಗಿದ್ದ ಕೇಸರಿ ಎಂಬ ವಾನರನು ಕೊಲ್ಲುತ್ತಾನೆ. ಇದರಿಂದ ಸಂತುಷ್ಟರಾದ ಮುನಿ ಪುಂಗವರು “ನಿನಗೆ ಸಕಲ ಶಾಸ್ತ್ರ ಪಾರಂಗತನೂ , ಕಾಮಚಾರಿಯೂ , ಬಲಾಧಿಕನೂ , ಬ್ರಹ್ಮನಿಷ್ಠನೂ ಆದ ಮಗನು ಜನಿಸಲಿ” ಎಂಬುದಾಗಿ ಹರಸುತ್ತಾರೆ. ಮುಂದೆ ಅದೇ ಕೇಸರಿಯನ್ನು ಅಂಜನೆಯು ಮದುವೆಯಾಗುತ್ತಾಳೆ. ಮದುವೆಯಾಗಿ ಹಲವು ವರ್ಷಗಳವರೆಗೂ ಮಕ್ಕಳಾಗದೇ ಇದ್ದಾಗ ಕೇಸರಿ ಮತ್ತು ಅಂಜನೆಯರು ಶಿವನನ್ನು ಕುರಿತು ತಪಸ್ಸು ಮಾಡುತ್ತಾರೆ. ಆಗ ಪ್ರತ್ಯಕ್ಷನಾದ ಶಿವನು “ನನ್ನ ಅಂಶದಿಂದಲೇ ನಿನಗಗೊಬ್ಬ ಮಗನು ಹುಟ್ಟುತ್ತಾನೆ” ಎಂಬುದಾಗಿ ವರವನ್ನು ಕರುಣಿಸುತ್ತಾನೆ. 

ಒಮ್ಮೆ ಕೈಲಾಸದಲ್ಲಿ ಕ್ರೀಡಿಸುತ್ತಿರುವ ಒಂದು ವಾನರ ಜೋಡಿಯನ್ನು ನೋಡುತ್ತಿದ್ದ ಪಾರ್ವತೀಪರಮೇಶ್ವರರು ತಾವೂ ಕೂಡಾ ಒಂದಾಗುತ್ತಾರೆ. ಆಗ ಉದ್ಭವವಾದ ಗರ್ಭವನ್ನು ಪಾರ್ವತಿಯು ತಾಳಲಾರದೇ ಹೋದಾಗ ಶಿವನು ಅದನ್ನು ವಾಯುವಿಗೆ ಕೊಡುತ್ತಾನೆ. ಶಿವನ ಸಂಕಲ್ಪವನ್ನು ಅರಿತ ವಾಯುವು ಅದನ್ನು ಅಂಜನೆಯ ಗರ್ಭದಲ್ಲಿ ಇಡುತ್ತಾನೆ. ಹೀಗೆ ಗರ್ಭ ಧರಿಸಿದ ಅಂಜನೆಯಲ್ಲಿ ಆಂಜನೇಯನ ಜನನವಾಗುತ್ತದೆ. 

ಹುಟ್ಟಿದಾಕ್ಷಣವೇ ಎದ್ದು ಬಂದು ತನ್ನನ್ನು ತಬ್ಬಿಕೊಂಡ ಮಗುವನ್ನು ಕಂಡ ಅಂಜನೆಯು ಅಚ್ಚರಿ , ಸಂಭ್ರಮಗಳಿಂದ ಮುದ್ದಿಸಿ ಅವನಿಗೆ ತಿನ್ನಲು ಫಲಗಳನ್ನು ತಂದುಕೊಡುವುದಕ್ಕಾಗಿ ಕಾಡನ್ನು ಪ್ರವೇಶಿಸುತ್ತಾಳೆ. ಅಷ್ಟರಲ್ಲಿ ಸೂರ‍್ಯನು ಕೆಂಪಗೆ ಕಾಣಿಸಿಕೊಂಡಾಗ ಅದು ಹಣ್ಣೆಂದು ಭ್ರಮಿಸಿದ ಆಂಜನೇಯನು ಸೂರ್ಯನೆಡೆಗೆ ನೆಗೆಯುತ್ತಾನೆ. ಈ ವಾನರನು ತನ್ನನ್ನು ತಿನ್ನಲು ಬರುತ್ತಿದ್ದಾನೆಂದು ಹೆದರಿದ ಸೂರ್ಯನು ಕಾಪಾಡುವಂತೆ ದೇವೇಂದ್ರನಲ್ಲಿ ಮೊರೆಯಿಡುತ್ತಾನೆ. ಆಗ ಇಂದ್ರನು ತನ್ನ  ವಜ್ರಾಯುಧದಿಂದ ಮಾರುತಿಯ ದವಡೆಗೆ ಹೊಡೆಯುತ್ತಾನೆ. ದೇವೇಂದ್ರನ ಹೊಡೆತದಿಂದ ಬಾಲಕ ಆಂಜನೇಯನ ಹನುವು ಅಂದರೆ ದವಡೆಯು ಶಾಶ್ವತವಾಗಿ ಊದಿಕೊಂಡು ಮುಂದೆ ಅವನು “ಹನುಮಂತ”ನಾಗುತ್ತಾನೆ. ಅಷ್ಟೇ ಅಲ್ಲದೇ ಹನುಮಂತನು ಸತ್ತು ಧರೆಗೆ ಬೀಳುತ್ತಾನೆ. 

ಆಗ ಕೋಪಗೊಂಡ ವಾಯುವು ಇವರಿಬ್ಬರಿಗೆ ಬುದ್ಧಿ ಕಲಿಸುತ್ತೇನೆ ಎಂದುಕೊಂಡು ತನ್ನ ಸಂಚಾರವನ್ನು ನಿಲ್ಲಿಸಿ ಹಿಮಾಲಯದ ಗುಹೆಯೊಂದರಲ್ಲಿ ಅಡಗಿ ಕುಳಿತುಕೊಳ್ಳುತ್ತಾನೆ. ವಾಯುವಿನ ಸಂಚಾರ ಇಲ್ಲದೇ ಲೋಕವೆಲ್ಲ ತಲ್ಲಣಗೊಂಡಾಗ ಎಲ್ಲಾ ದೇವತೆಗಳೊಡನೆ ಸ್ವತಹ ತ್ರಿಮೂರ್ತಿಗಳೇ ಬಂದು ಹನುಮಂತನನ್ನು ಬದುಕಿಸುತ್ತಾರೆ. ಅವನಿಗೆ ಇಚ್ಛಾಮರಣದ ವರವನ್ನು ಕೊಡುತ್ತಾರೆ. ಇದರಿಂದಾಗಿ ಮುಂದೆ ಅವನು ಚಿರಂಜೀವಿಯಾಗುತ್ತಾನೆ. ಅಲ್ಲದೇ ದೇವತೆಗಳೆಲ್ಲ ಸೇರಿ ಹನುಮಂತನಿಗೆ ವಾಯುವೇಗವನ್ನೂ , ಅತಿಯಾದ ದೈಹಿಕ ಬಲವನ್ನೂ ಕರುಣಿಸಿ ಅವನನ್ನು ದೈವಿಕ ವ್ಯಕ್ತಿಯನ್ನಾಗಿ ಮಾಡುತ್ತಾರೆ. ಹೀಗಾಗಿ ಆತನು “ವಜ್ರಶರೀರಿ” ಅಥವಾ “ವಜ್ರಾಂಗಬಲಿ” ಅಥವಾ “ಬಜರಂಗಬಲಿ”ಯಾಗುತ್ತಾನೆ. ಆಗ ವಾಯುವು ಪ್ರಸನ್ನನಾಗಿ ಲೋಕದಲ್ಲಿ ಪುನಹ ಪಸರಿಸಲು ಆರಂಭಿಸುತ್ತಾನೆ. ಬಾಲಕ ಹನುಮನ ಅತಿಯಾದ ದೈಹಿಕ ಶಕ್ತಿಯನ್ನು ಕಂಡು ಮುನಿಗಳು ಅವನಿಂದ ಅಚಾತುರ್ಯವಾದ ಘಟನೆಯೇನೂ ನಡೆಯದೇ ಇರಲಿ ಎಂಬ ಆಶಯದಿಂದ ಅವನಿಗೆ ಸ್ವಸಾಮರ್ಥ್ಯದ ಅರಿವು ಉಂಟಾಗದೇ ಇರುವಂತೆ ಮಾಡುತ್ತಾರೆ. 

ತಾಯಿ ಅಂಜನಾದೇವಿಯು ಹನುಮನ ಕಿವಿಗೆ ಕುಂಡಲವೊಂದನ್ನು ತೊಡಿಸಿ “ಬೇರೆ ಯಾರಿಗೂ ಈ ನಿನ್ನ ಕರ್ಣಕುಂಡಲವು ಕಾಣಿಸುವುದಿಲ್ಲ , ಯಾರಿಗೆ ಇದು ಕಾಣಿಸಿ ಅದರ ಗುರುತು ಹಿಡಿಯುತ್ತಾರೋ ಅವರೇ ನಿನ್ನ ಸ್ವಾಮಿ ಶ್ರೀರಾಮ ಎಂಬುದಾಗಿ ತಿಳಿದುಕೋ , ಅವರ ದರ್ಶನವಾದಕೂಡಲೇ ನಿನಗೆ ನಿನ್ನ ಸ್ವಸಾಮರ್ಥ್ಯದ ಅರಿವು ಉಂಟಾಗುತ್ತದೆ” ಎಂಬ ಗುಟ್ಟನ್ನು ಆತನಿಗೆ ಅರುಹುತ್ತಾಳೆ. ಬಳಿಕ ಹನುಮಂತನು ಸೂರ್ಯದೇವನಲ್ಲಿ ಸಕಲ ಶಾಶ್ತ್ರಗಳನ್ನು ಕಲಿತುಕೊಳ್ಳುತ್ತಾನೆ. ಮುಂದೆ ಋಶ್ಯಮೂಕ ಪರ್ವತದಲ್ಲಿ ವಾಸವಾಗಿದ್ದ ಸುಗ್ರೀವನನ್ನು ಆಶ್ರಯಿಸಿ ಅವನ ಮಂತ್ರಿಯಾಗುತ್ತಾನೆ. ಆಗ ಹೆಂಡತಿಯನ್ನು ಅರಸುತ್ತಾ ಅಲ್ಲಿಗೆ  ಬಂದ ಶ್ರೀರಾಮನು ಯಾರಿಗೂ ಕಾಣಿಸದೇ ಇರುವ ಹನುಮಂತನ ಕರ್ಣಕುಂಡಲವನ್ನು ಗುರುತಿಸುತ್ತಾನೆ. ಆಗ ಹನುಮಂತನಿಗೆ ತನ್ನ ತಾಯಿಯ ವಚನವು ನೆನಪಾಗಿ ಈತನೇ ತನ್ನ ಸ್ವಾಮಿ ಎಂಬುದು ಅರಿವಾಗುತ್ತದೆ. ಅಂದಿನಿಂದ ಆತನು ಶ್ರೀರಾಮನ ಬಂಟನಾಗುತ್ತಾನೆ. ಅಲ್ಲದೇ ಅಂದಿನಿಂದ ಹನುಮಂತನಿಗೆ ತನ್ನ ಸ್ವಸಾಮರ್ಥ್ಯದ ಅರಿವು ಕೂಡಾ ಉಂಟಾಗುತ್ತದೆ.  

ಚೈತ್ರ ಮಾಸದ ಹುಣ್ಣಿಮೆಯ ದಿನ ಹನುಮಂತನ ಜನ್ಮದಿನೋತ್ಸವವನ್ನು ಆಚರಿಸುತ್ತಾರೆ. ಆ ಪ್ರಕಾರ ದಿನಾಂಕ 02-04-2026 ನೇ ಗುರುವಾರದಂದು ಹನುಮ ಜಯಂತಿಯ ದಿನವಾಗಿದೆ. ಎಲ್ಲರಿಗೂ ಹನುಮಜ್ಜಯಂತಿಯ ಶುಭಾಶಯಗಳು. 

- ಹರಿಕೃಷ್ಣ ಹೊಳ್ಳ , ಬ್ರಹ್ಮಾವರ.