ನಂದಿಯು ಶಿವನ ಎದುರಿಗೆ ಇರಲು ಕಾರಣವೇನು?
ನಾವು ಶಿವನ ದೇವಾಲಯಕ್ಕೆ ಭೇಟಿ ನೀಡಿದಾಗ ಶಿವನ ಮುಂದಿರುವ ನಂದಿಯನ್ನು ನೋಡಿಯೇ ಇರುತ್ತೇವೆ. ಎಲ್ಲಾ ಶಿವನ ದೇವಾಲಯಗಳಲ್ಲಿ ಶಿವನ ಮುಂದೆ ದ್ವಾರಪಾಲಕ ನಾಗಿ ನಂದಿ ಏಕೆ ಇರುತ್ತಾನೆ ಎಂಬ ಸ್ವಾರಸ್ಯಕರವಾದ ಕತೆಯೊಂದು ಇಲ್ಲಿದೆ.
ಹಲವು ವರ್ಷಗಳಿಂದ ಮಕ್ಕಳಿಲ್ಲದೆ ಕೊರಗುತ್ತಿದ್ದ ಶಿಲಾದು ಮುನಿಯು ಶಿವನನ್ನು ಕುರಿತು ಕಠಿಣ ತಪಸ್ಸಿಗೆ ಕುಳಿತ. ಶಿಲಾದುವಿನ ಕಠಿಣ ತಪಸ್ಸಿಗೆ ಒಲಿದ ಶಿವನು ಪ್ರತ್ಯಕ್ಷನಾದಾಗ ಶಿಲಾದು ಮುನಿಯು ಅಮರನಾದ ಮಗನನ್ನು ವರವಾಗಿ ಬೇಡಿಕೊಂಡನು. ಶಿವನಿಂದ ವರವನ್ನು ಪಡೆದುಕೊಂಡ ನಂತರ ಶಿಲಾದು ಮುನಿಯು ಒಂದು ಯಜ್ಞವನ್ನು ಕೈಗೊಂಡನು. ಯಜ್ಞ ಮಾಡುವಾಗ ಯಜ್ಞಕುಂಡದಿಂದ ಒಬ್ಬ ಬಾಲಕನು ಹೊರಬಂದನು.
ಆ ಬಾಲಕನಿಗೆ ನಂದಿ ಎಂದು ಹೆಸರಿಟ್ಟು ಆಶ್ರಮದಲ್ಲಿ ಬೆಳೆಸಿದರು. ನಂದಿಯು ಅತಿ ಚುರುಕಾಗಿದ್ದು ಎಲ್ಲಾ ವಿದ್ಯೆಗಳನ್ನು ಅತಿ ಬೇಗನೆ ಪಾರಂಗತ ಮಾಡಿಕೊಳ್ಳುತ್ತಿದ್ದನು. ಹೀಗೆ ಇರಬೇಕಾದರೆ ಮಿತ್ರವರ್ಣವೆಂಬ ಮಹರ್ಷಿಯು ಆಶ್ರಮಕ್ಕೆ ಬಂದರು. ನಂದಿಯು ಮಹರ್ಷಿ ಗೆ ಸಕಲ ಗೌರವಗಳಿಂದ ಆಥಿತ್ಯವನ್ನು ನೆರವೇರಿಸಿದನು.
ಪುಟ್ಟ ಬಾಲಕನನ್ನು ಮೆಚ್ಚಿದ ಮಹರ್ಷಿಯು ಹೊರಡುವಾಗ ದೀರ್ಘಾಯುಷ್ಮಾನ್ ಭವ ಎಂದು ಆಶೀರ್ವದಿಸಲು ಮುಂದಾಗಿ ಮತ್ತೆ ಸುಮ್ಮನಾದರು. ಮಹರ್ಷಿಗಳು ದಿಗ್ಭ್ರಾಂತರಾಗಿ ನಿಂತದ್ದನ್ನು ಕಂಡ ಶಿಲಾದು ಮುನಿಗಳು ಏನೆಂದು ಕೇಳಿದಾಗ ಮಹರ್ಷಿಯು ಬಾಲಕನ ಆಯಸ್ಸು ಮುಗಿದಿರುವ ಬಗ್ಗೆ ತಿಳಿಸುತ್ತಾರೆ. ಈ ವಿಷಯ ಕೇಳಿದ ಶಿಲಾದು ಮುನಿಯು ಅತ್ಯಂತ ದುಃಖಿತರಾಗುತ್ತಾರೆ.
ಆದರೆ ನಂದಿಯು ಸ್ವಲ್ಪವೂ ವಿಚಲಿತನಾಗದೆ ಶಿವನನ್ನು ಕುರಿತು ತಪಸ್ಸಿಗೆ ಕೂರುವುದಾಗಿ ಹೇಳಿ ಹೋಗುತ್ತಾನೆ. ನಂತರ ಹಲವು ದಿನಗಳ ಕಾಲ ಕಠಿಣ ತಪಸ್ಸನ್ನು ಆಚರಿಸುತ್ತಾನೆ. ನಂದಿಯ ಕಠಿಣ ತಪಸ್ಸನ್ನು ಮೆಚ್ಚಿದ ಶಿವನು ಪ್ರತ್ಯಕ್ಷನಾಗುತ್ತಾನೆ. ಶಿವನನ್ನು ಕಂಡ ನಂದಿಯು ಇಡೀ ಜಗತ್ತನ್ನೇ ಮರೆತು ಶಿವನನ್ನು ನೋಡುತ್ತಾ ಮೈಮರೆಯುತ್ತಾನೆ.
ತಾನು ತಪಸ್ಸಿಗೆ ಕೂತ ಉದ್ದೇಶವನ್ನು ಮರೆತ ನಂದಿಯು ಶಿವನಲ್ಲಿ ಎಂದಿಗೂ ನಿಮ್ಮ ಕಾಲ ಬಳಿಯಲ್ಲಿಯೇ ಸೇವಕನಾಗಿ ರುವಂತೆ ಅನುಗ್ರಹಿಸಲು ಕೇಳಿಕೊಳ್ಳುತ್ತಾನೆ. ಅದಕ್ಕೆ ಶಿವನು ಒಪ್ಪಿ ತನ್ನ ವಾಹನ ಹಾಗೂ ದ್ವಾರಪಾಲಕ ನಾಗಿ ನೇಮಿಸಿಕೊಳ್ಳುತ್ತಾನೆ. ಅಂದಿನಿಂದ ಶಿವ ಮಂದಿರಗಳಲ್ಲಿ ನಂದಿಯು ದ್ವಾರಪಾಲಕ ನಾಗಿ ಇರುತ್ತಾನೆ.
ಸಂಗ್ರಹ :ಮಹೋನ್ನತಿ.
ಚಿತ್ರ :ಮಹೋನ್ನತಿ.