ಉಡುಪಿಯ ಶ್ರೀ ಕೃಷ್ಣನ ಬಗ್ಗೆ ನಿಮಗೆಷ್ಟು ಗೊತ್ತು......
ದಕ್ಷಿಣ ಭಾರತದ ಪ್ರಸಿದ್ದ ಕೃಷ್ಣನ ಕ್ಷೇತ್ರಗಳಲ್ಲಿ ಕಡೆಗೋಲು ಕೃಷ್ಣನ ಉಡುಪಿಯೂ ಒಂದು.
ಭಗವಾನ್ ಶ್ರೀ ಕೃಷ್ಣ ನೆಲೆಸಿದ ಅತಿ ಪುರಾತನ ಜಗತ್ಪ್ರಸಿದ್ದ ಕೃಷ್ಣ ದೇವಾಲಯವಿದು.
ಕುರುಕ್ಷೇತ್ರ ಯುದ್ದದ ನಂತರದ ದಿನಗಳು.
ಶ್ರೀ ಕೃಷ್ಣನು ದ್ವಾರಕೆಯ ಮಹಾರಾಜ..
ತನ್ನ ಹೆತ್ತತಾಯಿ ದೇವಕಿಗೆ ತನ್ನ ಮಗನ ಬಾಲ ಲೀಲೆಗಳನ್ನು ನೋಡುವ ಮನಸ್ಸಾಯಿತಂತೆ.
ಸಾಕು ತಾಯಿ ಯಶೋಧೆ ಕೃಷ್ಣನ ಮದುವೆ ಹೇಗೆ ನೋಡಿರುವುದಿಲ್ಲವೋ ಹಾಗೇ ದೇವಕಿಗೆ ಕೃಷ್ಣನ ಬಾಲ್ಯಲೀಲೆಗಳನ್ನು ನೋಡಿರುವುದಿಲ್ಲ. ಆವತ್ತು ಮೊಸರು ಕಡಿಯುತ್ತಿದ್ದ ದೇವಕಿಗೆ ಅದೆಂತದೋ ಬಯಕೆ ತನ್ನ ಮಗನ ಬಾಲ ಲೀಲೆಗಳನ್ನು ಕಣ್ಣಾರೆ ನೋಡಬೇಕೆಂದು. ಅದನ್ನು ಕೇಳಿದ ಶ್ರೀ ಕೃಷ್ಣ ತನ್ನ ತಾಯಿಯ ಆಸೆಯಂತೆ ಬಾಲಕೃಷ್ಣನಾಗಿ ತಾಯಿ ಮೊಸರು ಕಡೆಯುತ್ತಿದ್ದ ಕಡೆಗೋಲು ಮತ್ತು ಹಗ್ಗ ಹಿಡಿದು ಕೊಂಡು ತನ್ನ ಗೋಕುಲದ ಬಾಲ ಲೀಲೆಗಳನ್ನು ತೋರಿಸುತ್ತಾನೆ. ದೇವಕಿಯ ಆಸೆಯನ್ನು ಪೂರೈಸುತ್ತಾನೆ.
ಇದನ್ನೆಲ್ಲ ಬಾಗಿಲ ಬದಿಯಲ್ಲಿ ನೋಡುತ್ತಿದ್ದ ರುಕ್ಮಿಣಿಗೆ ತನ್ನ ಗಂಡನ ಬಾಲಲೀಲೆಗಳನ್ನು ನೋಡಿ ವಿಶ್ವಕರ್ಮನಲ್ಲಿ ಅಂತಹುದೇ ಸಾಲಿಗ್ರಾಮದ ಮೂರ್ತಿ ಮಾಡಿಸಿ ಪೂಜಿಸುತ್ತಾಳೆ. ಮುಂದೆ ದ್ವಾಪರ ಯುಗದ ಅಂತ್ಯದಲ್ಲಿ ದ್ವಾರಕೆ ಮುಳುಗುವ ಸಮಯದಲ್ಲಿ ರುಕ್ಮಿಣಿ ಆ ಮುದ್ದಾದ ಮೂರ್ತಿಯನ್ನು (ಗೋಪಿಚಂದನ) ಮಣ್ಣಿನ ಮುದ್ದೆಯಲ್ಲಿ ಮೂರ್ತಿಯನ್ನು ಬಚ್ಚಿಡುತ್ತಾಳೆ.
ಮುಂದೆ ದ್ವಾರಕೆಯಲ್ಲಿ ಮುತ್ತುಗಳು ಹೇರಳವಾಗಿ ಸಿಗುತ್ತಿದ್ದಾಗ ವ್ಯಾಪಾರಿಗಳು ಹಡಗಿನಲ್ಲಿ ಸರಕುಗಳನ್ನು ಹೇರಿಕೊಂಡು ಬರುವಾಗ ಕಡಿಮೆ ತೂಕದ ಮುತ್ತುಗಳು ಹಡಗು ಗಾಳಿಗೆ ಸಿಲುಕಬಾರದೆಂದು ಸಮುದ್ರದ ದಂಡೆಯಲ್ಲಿನ ಮಣ್ಣಿನ ಮುದ್ದೆಯನ್ನು ಹಡಗಿಗೆ ತುಂಬಿಸುತ್ತಾರೆ. ಅದರಲ್ಲಿ ಭಗವಂತನ ಮೂರ್ತಿಯೂ ಇರುತ್ತದೆ. ಆ ಹಡಗು ದಕ್ಷಿಣ ಭಾರತದ ಕಡೆ ಬರುವಾಗ ಉಡುಪಿಯ ಮಲ್ಪೆಯ ಸಮೀಪ ಭಯಂಕರ ಬಿರುಗಾಳಿಗೆ ಸಿಲುಕಿ ಹಡಗು ಮುಳುಗುತ್ತದೆ... ಮಧ್ವಾಚಾರ್ಯರು ಮಾರ್ಗಶಿರ ಮಾಸದ ಎಳ್ಳಮಾವಾಸ್ಯೆಯ ಸ್ನಾನಕ್ಕೆ ಬಂದಾಗ ತಮ್ಮ ಶಲ್ಯ ಬೀಸಿ ಸಮುದ್ರವನ್ನು ಶಾಂತ ಮಾಡುತ್ತಾರೆ. ತ್ರಿಕಾಲ ಜ್ಞಾನಿಗಳಾದ ಮಧ್ವಾಚಾರ್ಯರಿಗೆ ಶ್ರೀ ಕೃಷ್ಣನ ಆಗಮನ ಮೊದಲೇ ತಿಳಿದಿದ್ದರಿಂದ ಅದರಲ್ಲಿ ಬಂದಿದ್ದ ಕಡೆಗೋಲು ಕೃಷ್ಣನ ಮೂರ್ತಿಯನ್ನು ತಂದು ಉಡುಪಿಯಲ್ಲಿ ಪೂಜಿಸುತ್ತಾರೆ. ಮುಂದೆ ಎಂಟು ಬಾಲಯತಿಗಳನ್ನು ನೇಮಿಸಿ ಪೂಜೆಯ ಕೈಂಕರ್ಯಗಳನ್ನು ಒಪ್ಪಿಸುತ್ತಾರೆ. ಅದೇ ಪೊಡವಿಗೊಡೆಯ ಉಡುಪಿಯ ಭಗವಂತನ ಪುಣ್ಯ ನೆಲೆಯಾಗುತ್ತದೆ.
ಇಂದಿಗೂ ಕಡೆಗೋಲು ಶ್ರೀ ಕೃಷ್ಣನನ್ನು ಅಷ್ಟ ಮಠದ ಯತಿಗಳು ಪೂಜಿಸುತ್ತಾ ಬರುತ್ತಿದ್ದಾರೆ. ದೇವಕಿಗೆ ದರ್ಶನ ನೀಡಿದ ರೂಪದಲ್ಲೇ ಒಂದು ಕೈಯ್ಯಲ್ಲಿ ಕಡೆಗೋಲು ಇನ್ನೊಂದು ಕೈಯ್ಯಲ್ಲಿ ಹಗ್ಗ ಹಿಡಿದು ತಲೆಗೆ ಜುಟ್ಟು ಕಟ್ಟಿದ ಮುದ್ದಾದ ಬಾಲ ಕೃಷ್ಣ ಉಡುಪಿಯಲ್ಲಿ ದರ್ಶನ ಕೊಡುತ್ತಿದ್ದಾನೆ ಮತ್ತು ಈ ಜಗತ್ತನ್ನು ಉದ್ದರಿಸುತ್ತಿದ್ದಾನೆ.......!
'ಕೃಷ್ಣಂ ವಂದೇ ಜಗದ್ಗುರು'
No comments:
Post a Comment