ಚಂಡಿಕೇಶ್ವರ:-
ಸಾಮಾನ್ಯವಾಗಿ ಶಿವನ ದೊಡ್ಡ ದೇಗುಲಗಳಿಗೆ ಹೋದಾಗ ಪ್ರದಕ್ಷಿಣೆ ಯನ್ನು ಅರ್ಧ ಚಂದ್ರಾಕಾರ ಮಾಡುತ್ತೇವೆ. ಇದನ್ನು 'ಸೋಮಸೂತ್ರ' ಎನ್ನುತ್ತಾರೆ. ಶಿವನ ಪಾಣಿಪೀಠದಿಂದ ಗೋಮಕಿ ಬಾಯಿಂದ ತೀರ್ಥ ಬೀಳುವ ಜಾಗದ ತನಕ ಹೋಗುತ್ತೇವೆ. ಅದನ್ನು ದಾಟಿ ಹೋಗುವುದಿಲ್ಲ. ಏಕೆಂದರೆ ಶಿವನ ಶಿರದಿಂದ ಇಳಿದು ಬಂದ ಅಭಿಷೇಕದ ತೀರ್ಥದಲ್ಲಿ ಗಂಗೆ ಹಾಗೂ ಗಣಗಳು ಇರುತ್ತಾರೆ ಅಂಥ ಪವಿತ್ರ ತೀರ್ಥವನ್ನು ದಾಟಬಾರದು ಹಾಗೂ ತೀರ್ಥದಲ್ಲಿ ಶಿವನ ಸಕಾರಾತ್ಮಕ ಅಪಾರ ಶಕ್ತಿ ಇದ್ದು, ಅದರ ಪ್ರಭಾವ ಮನುಷ್ಯನ ದೇಹದ ಮುಖ್ಯವಾದ ಶಕ್ತಿ ನಷ್ಟವಾಗುತ್ತದೆ ಎಂಬ ಕಾರಣಕ್ಕೆ ಸುತ್ತು ಪ್ರದಕ್ಷಿಣೆ ಹಾಕಬಾರದು ಎನ್ನುತ್ತಾರೆ.
ಶಿವನ ದೇವಸ್ಥಾನದಲ್ಲಿ ಕೆಲವು ಆಚರಣೆಗಳನ್ನು ಕಾಣುತ್ತೇವೆ. ಆಲಯದ ಒಳಗೆ ಹೋದಾಗ ಶಿವ ದರ್ಶನ ಮಾಡಿ ಬರುವಾಗ ನಂದಿಯ ಕಿವಿಯ ಮೇಲ್ಭಾಗವನ್ನು ಹೆಬ್ಬೆರಳಿನಿಂದ ತೋರುಬೆರಳೆತನಕ ಹಿಡಿದು ಶಿವನನ್ನು ನೋಡುತ್ತಾ ಇಷ್ಟಾರ್ಥಗಳನ್ನು ಹೇಳುತ್ತೇವೆ. ಧ್ಯಾನಾಸಕ್ತನಾದ ಶಿವನು ನಂದಿಯ ಮೂಲಕ ತಿಳಿಯುತ್ತಾನೆಎಂಬ ನಂಬಿಕೆ ಇದೆ. ಶಿವನ ದೇವಸ್ಥಾನ ದಿಂದ ವಿಭೂತಿ - ಪತ್ರೆ -ಫಲ -ಪುಷ್ಪ- ಪ್ರಸಾದ ಏನನ್ನೇ ತರುವುದಾದರೂ ಶಿವನ ಕುಟುಂಬದವನೇ ಆಗಿರುವ 'ಚಂಡಿಕೇಶ್ವರನ ಕಿವಿ ಬಳಿ ಜೋರಾಗಿ ಚಪ್ಪಾಳೆ ಹೊಡೆಯುವುದರ ಮೂಲಕ ತಿಳಿಸಿ ತರಬೇಕು. ಶಿವ ಮಂದಿರಗಳಲ್ಲಿ ಶಿವನ ಕುಟುಂಬವಾದ ಗಣಪತಿ, ಶಿವ- ಪಕ್ಕದ ಗುಡಿಗಳಲ್ಲಿ ಪಾರ್ವತಿ, ಹಾಗೆ ಸುಬ್ರಹ್ಮಣ್ಯ, ಈಶ್ವರನ ಎದುರಿಗೆ ನಂದಿ- ಹಾಗೆ ಬೃಂಗಿ ಮತ್ತು ಚಂಡಿಕೇಶ್ವರ ಮೂರ್ತಿಗಳನ್ನು ಇಟ್ಟಿರುತ್ತಾರೆ. ಶಿವನ ಗಣಗಳಲ್ಲಿ ನಂದಿ- ಬೃಂಗಿಯರ ಹಿನ್ನೆಲೆ ಸಾಧಾರಣ ಗೊತ್ತಿರುತ್ತದೆ. 'ಚಂಡಿಕೇಶ್ವರ'ನ ಕುರಿತಾಗಿ ಒಂದು ಕಥೆ ಇದೆ.
ದಕ್ಷಿಣ ಭಾರತದಲ್ಲಿ ಮಣಿಯಾರ್ ನದಿಯ ದಡದಲ್ಲಿ ಒಂದು ಅಗ್ರಹಾರವಿದ್ದು
ಅಲ್ಲಿ 'ಈಚದತ್ತ' ಶರ್ಮಾ ಎಂಬ ಬ್ರಾಹ್ಮಣ ವೇದಪಂಡಿತನಿದ್ದು ಮಕ್ಕಳಿಗೆ ವೇದ ಪಾಠ ಹೇಳಿಕೊಡುತ್ತಿದ್ದರು. ಚಂದೇಶನು ತಂದೆಯಂತೆ ವೇದಪಾರಂಗತ
ನಾಗಿದ್ದು, ಆರಾಧ್ಯ ದೈವ ವಾದ ಶಿವನ ಭಕ್ತನಾಗಿದ್ದನು. ಶಿವಧ್ಯಾನ ಶಿವ ಪೂಜೆ ಮಾಡುವುದರಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದನು. ನಿತ್ಯವೂ ಮಣಿಯಾರ್ ನದಿಯಲ್ಲಿ ಸ್ನಾನ, ದೇವತಾರಾಧನೆ ಮಾಡಿ ವೇದಾಧ್ಯಯನ ಮಾಡುತ್ತಿದ್ದ. ಅಂದು ನದಿಯಲ್ಲಿ ಸ್ನಾನ ಮಾಡಿ ನಿತ್ಯ ಕರ್ಮಗಳನ್ನು ಮುಗಿಸಿ ಬರುತ್ತಿರುವಾಗ ಒಬ್ಬ ಗೋಪಾಲಕ ಒಂದು ಹಸುವನ್ನು ಮನ ಬಂದಂತೆ ಹೊಡಿಸುತ್ತಿದ್ದ ಇದನ್ನು ಕಂಡ ಚಂದೇಶನ ಮನಸ್ಸಿಗೆ ನೋವಾಯಿತು. ಆತ ಹೇಳಿದ ಹೇ ಗೋಪಾಲಕ ಗೋವು ದೈವ ಸಮಾನವಾದದು ಅದನ್ನು ಹಿಂಸಿಸುವುದು ಹೊಡೆಯುವುದು ಸರಿಯಲ್ಲ ನಿನಗೆ ಈ ಹಸುವನ್ನು ಸಾಕುವುದು ಕಷ್ಟವಾದರೆ ನಾನು ಆದರ ಪಾಲನೆ ಪೋಷಣೆ ಮಾಡುತ್ತೇನೆ ಎಂದು ಹೇಳಿದ. ಕೋಪದಲ್ಲಿದ್ದ ಗೋಪಾಲಕ ಆಯಿತು ನನ್ನ ಎಲ್ಲಾ ಗೋವುಗಳನ್ನು ನಿನಗೆ ಕೊಡುತ್ತೇನೆ ಅದರ ಎಲ್ಲಾ ಜವಾ ಬ್ದಾರಿ ನಿನ್ನ ಮೇಲಿದೆ ಆದರೆ ಅದರ ಮೇಲಿನ ಹಕ್ಕು ನನ್ನದು ಅವುಗಳ ಹಾಲು ನನಗೆ ಸಿಗಬೇಕು ಎಂದನು. ಚಂದೇಶನು ಷರತ್ತುಗಳಿಗೆ ಸಂತೋಷದಿಂದ ಒಪ್ಪಿ ಅವನು ನದಿಯ ದಡದಲ್ಲಿ ಇದ್ದು ಗೋ ಪೋಷಣೆ ಮಾಡುತ್ತಾ, ಜೊತೆ ಯಲ್ಲಿ ವೇದಾಧ್ಯಯನ ಮುಂದುವರೆಸಿದ. ಚಂದೇಶನ ಪಾಲನೆ ಪೋಷಣೆ ಯಿಂದ ಗೋವುಗಳು ತೃಪ್ತಿ ಹೊಂದಿ ಚಂದೇಷನನ್ನು ಪ್ರೀತಿಸತೊಡಗಿದವು.
ಚಂದೇಶನು ನಿತ್ಯವೂ ಕಾಡಿಗೆ ಹೋಗಿ ಹುಲ್ಲು ಸೊಪ್ಪು ತಂದು ಹಸುಗಳಿಗೆ ಮೇವನ್ನು ಹಾಕುತ್ತಿದ್ದನು. ಮೇವು ತರುವ ಸಲುವಾಗಿ ಅವನ ಬಳಿ ಚಿಕ್ಕ ಕೊಡಲಿಯನ್ನು ಇಟ್ಟುಕೊಂಡಿದ್ದನು. ಚಂದೇಶನ ಪ್ರೀತಿಯ ಆರೈಕೆಯಿಂದ ಗೋವುಗಳು ಅವಾಗಿಯೇ ಹಾಲು ಸುರಿಸಲು ಪ್ರಾರಂಭಿಸಿದವು. ಹಾಲನ್ನು ಸಂಗ್ರಹಿಸಲು ಮಣ್ಣಿನ ದೋಣಿ ಮಾಡಿ ಹಾಲನ್ನು ಸಂಗ್ರಹಿಸುತ್ತಿದ್ದನು. ಅವನ ನಿತ್ಯ ಪೂಜೆಗಾಗಿ ನದಿಯಿಂದ ಮರಳನ್ನು ತಂದು ಶಿವಲಿಂಗ ತಯಾರಿಸಿದನು. ಮಣ್ಣಿನ ದೋಣಿಗಳಲ್ಲಿ ಹಾಲನ್ನು ಸಂಗ್ರಹಿಸಿ ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿದ್ದನು.
ಒಂದು ದಿನ ಅಗ್ರಹಾರದಿಂದ ಬರುತ್ತಿದ್ದ ಒಬ್ಬ ವ್ಯಕ್ತಿ . ಅಲ್ಲಿ ಗೋವುಗಳು ತಾವಾಗಿಯೇ ಹಾಲು ಸುರಿಸುವುದನ್ನು ಹಾಗೂ ಚಂದೇಶನು ಹಾಲನ್ನು ಸಂಗ್ರಹಿಸಿ ಶಿವಲಿಂಗಕ್ಕೆ ಅಭಿಷೇಕ ಮಾಡುವುದನ್ನು ನೋಡಿದನು. ಇದನ್ನು ಅಗ್ರಹಾರದಲ್ಲಿದ್ದ ಗೋವುಗಳ ಯಜಮಾನನಿಗೆ ತಿಳಿಸಿದನು. ಯಜಮಾನ ಚಂದೇಶನ ತಂದೆಯಲ್ಲಿ ದೂರು ಹೇಳಿದನು. ತನ್ನ ಮಗ ಅನ್ಯರ ಹಸುವಿನ ಹಾಲನ್ನು ಶಿವನಿಗೆ ಅಭಿಷೇಕ ಮಾಡುವುದನ್ನು ಕೇಳಿ ಕೋಪಗೊಂಡು ಕಣ್ಣಾರೆ ನೋಡಬೇಕೆಂದು ಚಂದೇಶನಿದ್ದಲ್ಲಿಗೆ ಬಂದನು.
ಆದರೆ ಆ ಸಮಯದಲ್ಲಿ ಚಂದೇಶನ ಏಕಾಗ್ರತೆಯಿಂದ ಶಿವನಿಗೆ ಹಾಲಿನ ಅಭಿಷೇಕ ಮಾಡುತ್ತಿದ್ದನು. ಗೋವುಗಳು ಸಹ ಇದನ್ನು ನೋಡುತ್ತಿದ್ದವು ಈಚದತ್ತ ಶರ್ಮನು ಮಗನನ್ನು ಕರೆದನು, ಕೇಳಲಿಲ್ಲವೆಂದು ಹತ್ತಿರಕ್ಕೆ ಹೋಗಿ ಅಲುಗಾಡಿಸಿದರೂ, ಧ್ಯಾನ ಮಗ್ನನಾಗಿದ್ದ ಚಂದೇಶನಿಗೆ ಎಚ್ಚರ ಆಗಲಿಲ್ಲ ಕೋಪಗೊಂಡ ಈಚದತ್ತ ಹಾಲು ತುಂಬಿಸಿ ಸಂಗ್ರಹಿಸಿಟ್ಟ ಮಣ್ಣಿನ ದೋಣಿ ಗಳನ್ನು ಕಾಲಿಂದ ಒದ್ದನು. ಹಾಲು ತುಂಬಿದ ಮಡಿಕೆಗಳು ಒಡೆದ
ತುಂಡುಗಳು ಮರಳಿನ ಶಿವಲಿಂಗಕ್ಕೆ ತಾಗಿ ಶಿವಲಿಂಗವು ಬಿರಿಯಿತು. ತಕ್ಷಣ ಎಚ್ಚರಗೊಂಡ ಚಂದೇಶ, ಕೋಪಗೊಂಡು ತನ್ನ ಶಿವ ಧ್ಯಾನವನ್ನು ಭಂಗ ಮಾಡಿ, ಅಭಿಷೇಕಕ್ಕೆ ಇಟ್ಟ ಹಾಲಿನ ಮಡಿಕೆಗಳನ್ನು ಕಾಲಿನಿಂದ ಒದ್ದು ಒಡೆದು ಆ ಚೂರುಗಳಿಂದ ಶಿವನ ಲಿಂಗವನ್ನು ಭಿನ್ನ ಮಾಡಿದ ನಿನ್ನ ಕಾಲುಗಳಿಗೆ ತಕ್ಕ ಶಾಸ್ತಿ ಮಾಡುವೆ ಎಂದು ತಂದೆಯೆನ್ನದೇ ಅವನ ಎರಡು ಕಾಲುಗಳನ್ನು ಕತ್ತರಿಸಿದನು. ತಂದೆಯ ಎರಡು ಕಾಲಿನಿಂದಲೂ ರಕ್ತ ಹರಿಯುವುದು ನೋವಿನಿಂದ ನೆರಳುತ್ತಾ ರಕ್ತದ ಮೇಲೆ ಕುಳಿತುಬಿಟ್ಟನು.
ತಂದೆ ಎನ್ನದೆ ತನ್ನ ಆರಾಧ್ಯ ದೈವ ಶಿವನ ಧ್ಯಾನಕ್ಕೆ ಅಪಚಾರ ಮಾಡಿದವನ ಕಾಲುಗಳನ್ನು ಕತ್ತರಿಸಿದ ಚಂದೇಶನ ಭಕ್ತಿಗೆ ಮೆಚ್ಚಿ ಭಿನ್ನವಾದ ಮರಳಿನ ಲಿಂಗದೊಳಗಿಂದ ಶಿವನು ಪ್ರತ್ಯಕ್ಷನಾದನು. ಸಾಮಾನ್ಯ ಮಾನವನಾದ ಚಂದೇಶನ ಶಿವ ಭಕ್ತಿಗೆ ಮೆಚ್ಚಿ ಚಂದೇಷನನ್ನು ತನ್ನ ಕುಟುಂಬದ ಸದಸ್ಯರನ್ನು ಗಣಪತಿ - ಸುಬ್ರಹ್ಮಣ್ಯರ ಜೊತೆ ಇವನು ತನ್ನ ಮಗನೆಂದು ಸ್ವೀಕರಿಸಿದನು.
ಚಂದೇಷನ ಹೆಸರನ್ನು ಚಂಡಿಕೇಶ್ವರ ಎಂದು ಮರುನಾಮಕರಣ ಮಾಡಿದನು. ಶಿವನ ಅನುಗ್ರಹದಿಂದ ಈಚದತ್ತ ಶರ್ಮನಿಗೆ ಕಾಲುಗಳು ಬಂದವು.
ಹೀಗೆ ಶಿವನ ಗುಡಿಯಲ್ಲಿ ಇರುವ ಚಂಡಿಕೇಶ್ವನಿಗೆ ಮುಂದೆ ಚಪ್ಪಾಳೆ ಅಥವಾ ಚಿಟಿಕೆ ಹೊಡೆಯಬೇಕು ಏಕೆಂದರೆ ಪರಮೇಶ್ವರನು ಧ್ಯಾನದಲ್ಲಿ ನಿರತನಾಗಿ ದ್ದುಳು. ಚಂಡಿಕೇಶ್ವರ ಸದಾ ಕಾಲವು ಶಿವನ ಧ್ಯಾನದಲ್ಲಿ ಮಗ್ನ ನಾಗಿರುತ್ತಾನೆ. ಹಾಗೆಂದ ಮಾತ್ರಕ್ಕೆ ಅವನಿಗೆ ಗೊತ್ತಿಲ್ಲದಂತೆ ಭಕ್ತರು ಶಿವನ ಪತ್ರ ಪುಷ್ಪ ಪ್ರಸಾದ ಭಸ್ಮ, ಇಂಥ ಯಾವುದೇ ವಸ್ತುವನ್ನು ತೆಗೆದುಕೊಂಡು ಹೋಗಬೇಕಾ ದರೆ, ಧ್ಯಾನದಲ್ಲಿ ಮುಳುಗಿರುವ ಚಂಡಿಕೇಶವನಿಗೆ ಚಪ್ಪಾಳೆ ತಟ್ಟಿ ಎಚ್ಚರ ಮಾಡಿ ಒಯ್ಯುವ ಶಿವನಿಗೆ ಪೂಜೆ ಮಾಡಿದ ಪ್ರಸಾದಗಳನ್ನು ಅವನಿಗೆ ತೋರಿಸಿ ತೆಗೆದುಕೊಂಡು ಹೋಗುವ ಪದ್ಧತಿ ಬಂದಿದೆ. ಇದನ್ನು ಕೆಲವರು ಈಶ್ವರನಿಗೆ ಕಿವಿ ಕೇಳುವುದಿಲ್ಲ ಎಂದು ತಿಳಿದಿದ್ದಾರೆ ಆದರೆ ಅವನು ಧ್ಯಾನದಲ್ಲಿ ಮಗ್ನನಾಗಿ ರುತ್ತಾನೆ ಧ್ಯಾನದಿಂದ ಎಚ್ಚರಗೊಳಿಸಲು ಚಪ್ಪಾಳೆ ತಟ್ಟಬೇಕು. ಈ ರೀತಿ
ಸಾಮಾನ್ಯ ಮಾನವನಾಗಿದ್ದ ಸಂದೇಶನ ಭಕ್ತಿಗೆ ಶಿವನು ಮೆಚ್ಚಿ ತನ್ನ ಕುಟುಂಬದ ಸದಸ್ಯನನ್ನಾಗಿ ( ಮಗನಾಗಿ) ಮಾಡಿಕೊಂಡನು.
ಕರ ಚರಣಕೃತಂ ವಾಕ್ಕಾಯಜಂ ಕರ್ಮಜಂ ವಾ
ಶ್ರವಣನಯನಜಂ ವಾ ಮಾನಸಂ ವಾಪರಾಧಮ್
ನಿಹಿತಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ
ಜಯ ಜಯ ಕರುಣಾಬ್ದೇ ಶ್ರೀ ಮಹಾದೇವ ಶಂಭೋ!!
ನನ್ನ ಕೈ ಕಾಲುಗಳ ಕ್ರಿಯೆಗಳಿಂದ ಮಾತಿನಿಂದ,
ಶರೀರದಿಂದ, ಕಣ್ಣು ಕಿವಿಗಳಿಂದ, ಮನಸ್ಸಿನಿಂದ,
ಅಥವಾ ಕರ್ಮಗಳಿಂದ, ನಿರ್ಧಾರಿತ ಕೆಲಸವನ್ನು ಮಾಡುವಾಗ,
ಯಾವ ಪಾಪಗಳಾಗಿದೆಯೋ, ಅವೆಲ್ಲವನ್ನು ಕ್ಷಮಿಸು
ಹೇ ಮಹಾದೇವ ಶಂಭೋ ಜಯವಾಗಲಿ,
ಕರುಣಾ ಸಾಗರನಾದ ನಿನ್ನಲ್ಲಿ ಅವೆಲ್ಲವನ್ನು ಅರ್ಪಿಸುತ್ತೇನೆ.
ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.
No comments:
Post a Comment