***ನಾಗ ಎಂದರೆ ಯಾರು?*** ಕುಟುಂಬದ ಮನೆಗಳಲ್ಲಿ ಪೂಜಿಸುವ ನಾಗ ಯಾರು? ಸರ್ಪ ಮೊಟ್ಟೆ ಕಪ್ಪೆಗಳನ್ನು ತಿನ್ನುವುದಾದರೆ ನಾಗಾರಾಧನೆಯಲ್ಲಿ ಅಷ್ಟೊಂದು ಶುದ್ಧಾಚಾರ ಏಕೆ ಪಾಲಿಸುತ್ತಾರೆ?
ನಾಗ ಎಂದಾಗ ನಮಗೆ ನೆನಪಿಗೆ ಬರುವುದು ನಾಗರಹಾವು..ನಾಗರ ಪಂಚಮಿ.. ನಾಗಬನಗಳು..ಕುಟುಂಬದ ನಾಗದೇವರು ಇನ್ನೂ ಮುಂದುವರಿದರೆ ನವನಾಗಗಳಾದ ಆದಿಶೇಷ,ವಾಸುಕಿ, ಕಾರ್ಕೋಟಕ, ತಕ್ಷಕ, ಅನಂತ, ಕಂಬಲ, ಕಾಲೀಯ, ಧಾರ್ತರಾಷ್ಟ್ರ ಇತ್ಯಾದಿ.
ನಾಗರಪಂಚಮಿಯಂದು ನಾವು ಪೂಜಿಸುವುದು ಅಥವಾ ಕುಟುಂಬದಲ್ಲಿ ಪೂಜಿಸಲ್ಪಡಬೇಕಾಗಿರುವುದು ನಾಗವೇ ಹೊರತು ಹಾವಲ್ಲ.
ಸರ್ಪದೋಷ ಹಾಗೂ ನಾಗದೋಷ ಎರಡೂ ಒಂದೇ ಅಲ್ಲ..
ನಮ್ಮ ಕೈಯಿಂದ ಸರ್ಪದ ಸಾವಾದರೆ ಸರ್ಪದೋಷ ತಗಲುತ್ತದೆಯೇ ಹೊರತು ನಾಗದೋಷವಲ್ಲ..ನಾಗಗಳು ಪಾತಾಳದಲ್ಲಿ ವಾಸವಿದ್ದವೇ ಹೊರತು ಸರ್ಪಗಳಲ್ಲ..
ನಾಗ ಮತ್ತು ಸರ್ಪ ಎರಡೂ ಒಂದೇ ಅಲ್ಲ. ಹಾಗಿದ್ದರೆ ಎರಡರ ನಡುವೆ ವ್ಯತ್ಯಾಸ ಏನು?
ಹಾಗಿದ್ದರೆ ಈ ನಾಗ ಎಂದರೆ ಯಾರು? ಕುಟುಂಬದ ಮನೆಗಳಲ್ಲಿ ಪೂಜಿಸುವ ನಾಗ ಯಾರು? ಸರ್ಪ ಮೊಟ್ಟೆ ಕಪ್ಪೆಗಳನ್ನು ತಿನ್ನುವುದಾದರೆ ನಾಗಾರಾಧನೆಯಲ್ಲಿ ಅಷ್ಟೊಂದು ಶುದ್ಧಾಚಾರ ಏಕೆ ಪಾಲಿಸುತ್ತಾರೆ?
ನಾವೆಲ್ಲರೂ ನಾಗವಂಶಿಗಳೇ? ಮನುಷ್ಯ ನಾಗ ಯೋನಿಯಲ್ಲಿ ಜನಿಸುತ್ತಾನೆಯೇ? ಈ ಎಲ್ಲಾ ಗೊಂದಲ, ಪ್ರಶ್ನೆಗಳು ನಮ್ಮಲ್ಲಿ ಬಂದಿರಬಹುದಲ್ಲವೇ?
ಸ್ಪಷ್ಟವಾದ ವಿವರಣೆ ನಿಮಗಾಗಿ ಇಲ್ಲಿದೆ.
ನಾಗ ಎಂದರೆ ಅರ್ಧ ಮನುಷ್ಯ ಹಾಗೂ ಅರ್ಧ ಹಾವಿನ ರೂಪವಿರುವ ಪ್ರಜಾತಿ ಮತ್ಸ್ಯ ಪ್ರಜಾತಿಯಂತೆ.
ನಮ್ಮ ಹಿಂದಿನ ತಲೆಮಾರುಗಳಲ್ಲಿ ಯಾವುದೋ ಒಬ್ಬ ತುಂಬಾ ಸಾತ್ವಿಕವಾದ ವ್ಯಕ್ತಿ ತನ್ನ ಮರಣಾನಂತರ ಮತ್ತೆ ಯಾವುದೇ ಯೋನಿಯಲ್ಲಿ ಮರುಜನ್ಮ ತಾಳದೆ ಇದ್ದು ಒಂದು ವೇಳೆ 16 ವರ್ಷಗಳವರೆಗೆ ಆತನಿಗೆ
ಆತನ ವಂಶಸ್ಥರು ಅಥವಾ ಮುಂದಿನ ತಲೆಮಾರಿನವರಿಂದ ಪಿತೃಕಾರ್ಯಗಳು ಸರಿಯಾಗಿ ನಡೆಯದೇ ಇದ್ದು ಅಥವಾ ಸರಿಯಾಗಿ ನಡೆದ ನಂತರವೂ ಆತನ ಆತ್ಮಕ್ಕೆ ಮೋಕ್ಷ ಪ್ರಾಪ್ತಿಯಾಗದೇ ಉಳಿದರೆ ಹಾಗೂ ಅವರ ಆತ್ಮ ತನ್ನ ಪರಿವಾರದ ಅಥವಾ ಪರಿಸರಕ್ಕೆ ಒಳ್ಳೆಯದು ಮಾಡಬೇಕೆಂದು ಬಯಸಿದ್ದಲ್ಲಿ ಅಂಥವ ಸಂದರ್ಭದಲ್ಲಿ ನಾಗಯೋನಿಯಲ್ಲಿ
ಜನ್ಮತಾಳುತ್ತದೆ..
ಇಂತಹ ದಿವ್ಯ ಆತ್ಮಗಳು ಅವರ ಪರಿವಾರದವರಿಗೆ ಕನಸಲ್ಲಿ ಕಾಣಿಸಿಕೊಂಡು ತನ್ನನ್ನು ನಂಬಿ ಪೂಜಿಸುವಂತೆ ಸೂಚಿಸುವುದು ನಡೆಯುತ್ತದೆ.
ಈ ಆಯಾಮಗಳು ನಾವೀಗ ಕಾಣುವಂತಹ ಸಹಜ ಸರ್ಪವಲ್ಲದೆ ನಾಗವಾಗಿರುತ್ತದೆ.
ನಂತರ ಆ ಪರಿವಾರದವರು ಆ ಗತಿಸಿಹೋದ ಪೂರ್ವಜರ ಹೆಸರು ತಿಳಿದಿದ್ದರೆ ಅವರ ಹೆಸರಿನ ನಾಗನನ್ನು ನಂಬುತ್ತಾ ಬರುತ್ತಾರೆ.
ದಕ್ಷಿಣಭಾರತದಲ್ಲಿ ಇದು ಹೆಚ್ಚಾಗಿ ಪ್ರಚಲಿತದಲ್ಲಿದೆ.
ಗುಜಾರಾತಿನಲ್ಲಿ ಈ ರೀತಿ ಮನುಷ್ಯರ ಹೆಸರಿನೊಂದಿಗೆ ಪೂಜಿಸುವ ಪದ್ಧತಿ ಇದೆ.. ಇವರನ್ನು ನಾಗ ಗಳನ್ನು 'ಮಹಾರಾಜ್' ಎಂದು ಕರೆಯುತ್ತಾರೆ. ಪ್ರತ್ಯೇಕವಾದ ನಿಜ ಹೆಸರಿನೊಂದಿಗೆ ಕೊನೆಯಲ್ಲಿ 'ಮಹಾರಾಜ್' ಎಂದು ಸೇರಿಸಿ ಪೂಜಿಸುತ್ತಾರೆ.
ಇನ್ನು ನಮ್ಮಲ್ಲಿ ಅದನ್ನು ನಾಗಬ್ರಹ್ಮ (ನಾಗಬೆಮ್ಮೆರ್) ವೆಂದು ಸಾಮಾನ್ಯವಾಗಿ ಒಂದೇ ವರ್ಗಕ್ಕೆ ಸೇರಿಸಲಾಗಿದೆ ಅನಿಸುವುದು ಸಹಜ. ನಾಗರಾಜ ಎಂದು ಕರೆಯುವುದೂ ರೂಢಿಯಲ್ಲಿದೆ.
ಸೂರ್ಯನನ್ನು ಪೂಜಿಸುವವರು ಸೂರ್ಯವಂಶಿ, ಚಂದ್ರನ ಆರಾಧಕರು ಚಂದ್ರವಂಶಿಯಂತೆ ನಾಗನ ಆರಾಧಕರು ನಾಗವಂಶಿ ಎಂದು ಕರೆಯಲ್ಪಡುತ್ತಾರೆ.
ಪ್ರತಿ ಕುಟುಂಬದವರಿಗೂ ಬೇರೆ ಬೇರೆ ಕಡೆ ನಾಗಬನಗಳಿರುವುದರ ಹಿಂದಿನ ರಹಸ್ಯವೂ ಆ ಪರಿವಾರದಲ್ಲಿ ಈ ಹಿಂದೇ ಎಷ್ಟೋ ತಲೆಮಾರುಗಳ ಹಿಂದೆ ಈ ರೀತಿ ಗತಿಸಿ ಮೋಕ್ಷದೊರೆಯದೆ ನಾಗ ಯೋನಿಯಲ್ಲಿ ಇನ್ನೊಂದು (ಜನ ಸಾಮಾನ್ಯರಿಗೆ ತಲುಪಲು ಅಸಾಧ್ಯವಾದ) ಆಯಾಮದಲ್ಲಿ ಜನಿಸಿರುವ ಪೂರ್ವಜರೇ ಆಗಿರುತ್ತಾರೇ ಹೊರತು ಸಾಮಾನ್ಯ ಸರ್ಪಗಳಲ್ಲ..
'ಪತಂಜಲಿ ಸೂತ್ರ' ಬರೆದ ಪತಂಜಲಿ ಇದೇ ನಾಗ ಪ್ರಜಾತಿಗೆ ಸೇರಿದವರು.
ನಮಗೆಲ್ಲ ಗೊತ್ತಿರುವ ಹಾಗೆ ನಾಗನಿಗೆ ಯಾವತ್ತಿಗೂ ಸಾತ್ವಿಕವಾದ ಆಹಾರವನ್ನು ನೀಡಲಾಗುತ್ತದೆ. ಅದೇ ಸರ್ಪ ಮೊಟ್ಟೆ, ಕಪ್ಪೆ ತಿನ್ನುವುದನ್ನೂ ನೋಡಿರುತ್ತೇವೆ.
ಸರ್ಪಗಳಿಗೆ ಹಾಲನ್ನು ಜೀರ್ಣಿಸಿಕೊಳ್ಳುವ ಶಕ್ತಿ ಇಲ್ಲ.. ಆದರೆ ಅದೇ ನಾಗ ಪ್ರಜಾತಿಗೆ ಇದೆ.
ಹಾಗಾಗಿ ಸರ್ಪಗಳಿಗೆ ಕೆಲವು ಕಡೆ ನೋಡಿರುವಂತೆ ಯಾವುದೇ ಕಾರಣಕ್ಕೆ ನೇರವಾಗಿ ಹಾಲು ಹಾಕುವುದು ತುಂಬಾ ದೊಡ್ಡ ತಪ್ಪು. ಇದರಿಂದ ಸರ್ಪಗಳಿಗೆ ತೊಂದರೆಯಾಗುತ್ತದೆ.
ಇವೆರಡೂ ಸರಿಯಾದ ಜ್ಞಾನವಿಲ್ಲದೆ ಭಕ್ರಿಮಾರ್ಗದಲ್ಲಿ ಕಲಬೆರಕೆಯಾಗಿರುವ ಕಾರಣ ನಮ್ಮ ಧರ್ಮವನ್ನು ಕೀಳಾಗಿ ಕಾಣುವವರಿಗೂ ನಾವು ಕಲ್ಲಿಗೆ ಹಾಲೆರೆಯುತ್ತೇವೆ ಆದರೆ ಅದೇ ನಿಜವಾದ ಹಾವು ಬಂದರೆ ಹಾಲು ನೀಡುವುದಿಲ್ಲ ಎಂದೆಲ್ಲ ಹೇಳುತ್ತಾರೆ. ಅವರಿಗೂ ಸರಿಯಾಗಿ ತಿಳಿದಿಲ್ಲ..ನಮ್ಮವರಿಗೂ ಸರಿಯಾಗಿ ತಿಳಿದಿರುವುದಿಲ್ಲ.
ಈಗ ನಾಗ ಮತ್ತು ಸರ್ಪಗಳ ನಡುವಿನ ಅಂತರ ತಿಳಿಯದೇ ಭಕ್ತಿಯ ಹೆಸರಲ್ಲಿ, ಭಕ್ತಿಮಾರ್ಗದಲ್ಲಿ ಎಲ್ಲವೂ ಕಲಬೆರಕೆಯಾಗಿದೆ.
ಇದೇ ರೀತಿ ಆ ಪೂರ್ವಜರೇನಾದರೂ ತಾಮಸಿಕ (ಮಾಂಸಾಹಾರ ಭಕ್ಷಣೆ ಇತ್ಯಾದಿ) ರೀತಿಯಲ್ಲಿ ಬದುಕು ಸಾಗಿಸಿ ಮೋಕ್ಷ ಸಿಗದೇ ಇದ್ದಾಗ ಆ ಆತ್ಮಗಳು ತಮ್ಮ ಪರಿವಾರಕ್ಕೆ ಸಹಾಯ ಮಾಡಬೇಕು ಎಂಬ ಆಸೆಯಿಂದ ಇದ್ದರೆ ಅವರು ವೀರ ಯೋನಿಯಲ್ಲಿ ಜನಿಸುತ್ತಾರೆ..
ಈ ವೀರ ಯೋನಿ ಹಾಗೂ ಅದರ ಪರಂಪರೆಯ ಹಾಗೂ ವೀರರು ಬಗ್ಗೆ ಹೆಚ್ಚಾಗಿ ಜನಸಾಮಾನ್ಯರಿಗೆ ಹೊರಗಡೆ ಯಾರಿಗೂ ತಿಳಿದಿರುವುದಿಲ್ಲ. ಸ್ವಲ್ಪ ಗೂಢವಾಗಿಯೇ ಇದನ್ನು ಇಟ್ಟಿರುತ್ತಾರೆ.
ನಾಗ ಎನ್ನುವುದು ದೈವಗಳಂತೆ ಆದರೆ ಸಾತ್ವಿಕ ಶಕ್ತಿ. ಹಾಗಿದ್ದರೂ ನಾಗ ಪ್ರಸಾದವನ್ನು ಯಾವುದೇ ಕಾರಣಕ್ಕೂ ನಮ್ಮ ಹುಬ್ಬಿನ ನಡುವೆ ಧರಿಸಬಾರದು. ದೈವದ ಪ್ರಸಾದಕ್ಕೂ ಇದು ಅನ್ವಯವಾಗುತ್ತದೆ.
ಈ ಹಿಂದೆ ತಿಳಿಸಿದಂತೆ ಕೇವಲ ದೇವಿ,ಶಿವ, ವಿಷ್ಣು,ಗಣಪತಿ, ಸುಬ್ರಹ್ಮಣ್ಯ ಈ ಮೂಲ ಪರಬ್ರಹ್ಮ ತತ್ವಗಳ ಪ್ರಸಾದವನ್ನು ಮಾತ್ರ ಹುಬ್ಬುಗಳ ನಡುವೆ ಧರಿಸಬಹುದು.
ಮತ್ತೆ ಉಳಿದ ಯಾವುದೇದೇವರ, ದೈವದ ಪ್ರಸಾದ ನಮ್ಮ ಕಂಠಕ್ಕೆ ಹಾಕಿಕೊಳ್ಳಬೇಕು. ಇಲ್ಲವಾದರೆ ನಾವೇ ನಮ್ಮ ಆತ್ಮಶಕ್ತಿಯನ್ನು ನಮ್ಮ ಮರಣಾನಂತರ ಪರಮಾತ್ಮನಲ್ಲಿ ಒಂದಾಗಿಸುವುದಕ್ಕೆ ನಾವೇ ಅಡ್ಡಗಾಲು ಹಾಕಿದಂತೆ. ಅಷ್ಟೊಂದು ಮಹತ್ತರವಾದ ಗೂಢ ವಿಷಯವಿದು.
ಈ ಮೊದಲು ತಿಳಿಯದೇ ಹಾಕಿದ್ದರೆ ಪರವಾಗಿಲ್ಲ..
ನಂಬಿಕೊಂಡು ಬಂದಿರುವ ಎಲ್ಲ ದೇವರ, ದೈವದ ಆರಾಧನೆ, ಅವರ ಮೇಲಿನ ಗೌರವ ಎಲ್ಲವೂ ಹಾಗೇ ಇರಲಿ. ಆದರೆ ಈ ಒಂದು ವಿಷಯ ನೆನಪಿನಲ್ಲಿಟ್ಟರೆ ಸಾಕು.
ದೈವಗಳನ್ನೂ ಇತ್ತೀಚೆಗೆ ಸಾತ್ವಿಕ ಶಕ್ತಿಯಾಗಿ ಪರಿವರ್ತಿಸುವ ಕ್ರಿಯೆ ಆರಂಭವಾಗಿದೆ. ಮಾಂಸಾಹಾರ ಅಥವಾ ಬಲಿ ಪದ್ಧತಿ ಕ್ರಮೇಣ ಕಡಿಮೆಯಾಗುತ್ತಾ ಬರುತ್ತಿದೆ.
ನಮ್ಮಲ್ಲಿನ ಅನೇಕ ಮಾರಿಯಮ್ಮ ಹಾಗೂ ಉಗ್ರ ಶಕ್ತಿಯರ ದೇವಸ್ಥಾನಗಳನ್ನು ವೈದೀಕರಣ ಮಾಡುತ್ತಿರುವ ಬಗ್ಗೆ ನಿಮಗೆ ಗೊತ್ತಿರಬಹುದು. ಮಂಗಳಾದೇವಿ, ಬಪ್ಪನಾಡು, ಸಸಿಹಿತ್ಲು ಭಗವತಿ, ಉರ್ವ, ಬೋಳಾರ ಇತ್ಯಾದಿ ದೇವಸ್ಥಾನಗಳನ್ನು ಕ್ರಮೇಣ ದೇವಿ ಶಕ್ತಿಯ ಸಾತ್ವಿಕ ಅಂಶಗಳೊಂದಿಗೆ ಸೇರಿಸುವ ಕಾರ್ಯ ನಡೆದಿದೆ. ಈ ಹಿಂದೆ ಕಟೀಲನ್ನು ಕೂಡ ವೈದೀಕರಣ ಮಾಡಿರುವುದರ ಬಗ್ಗೆ ಅನೇಕರ ಅಸಮಾಧಾನ ವ್ಯಕ್ತ ಪಡಿಸಿದ್ದರು..
ಮೊದಲಿನಿಂದಲೂ ಉಳ್ಳಾಲ್ತಿ ಎಂದು ಕರೆಯಲ್ಪಡುವ ಶಕ್ತಿಯನ್ನು ವೈದೀಕರಣದನಂತರ ದುರ್ಗಾಪರಮೇಶ್ವರಿ
ಎಂದು ಕರೆಯುವುದು ವಾಡಿಕೆಗೆ ಬಂತು. ಬಪ್ಪನಾಡಿನ ದುರ್ಗಾಪರಮೇಶ್ವರಿ ಯ ಹೆಸರೂ ವೈದೀಕರಣವಾದ ನಂತರ ಬಂದ ಹೆಸರು ಎನ್ನುತ್ತದೆ ಮೂಲ ಇತಿಹಾಸ.
ಸಾತ್ವಿಕ ಶಕ್ತಿಗಳು ಯಾವುದೇ ರೀತಿಯಲ್ಲಿ ಯಾರಿಗೇ ಆಗಲಿ ತೊಂದರೆ ಉಂಟುಮಾಡುವುದಿಲ್ಲ. ನಂಬಿದವರನ್ನು ಕೈಬಿಡುವುದಿಲ್ಲ. ರಾಜಸಿಕ ಶಕ್ತಿಗಳು ತಮ್ಮನ್ನು ನಂಬಿದವರ ರಕ್ಷಣೆಮಾಡುತ್ತದೆ. ತಾಮಸಿಕ ಶಕ್ತಿಗಳು ತಮಗೆ ಬೇಕಾದನ್ನು ನೀಡದೇ ಹೋದರೆ ಕೆಲವೊಂದು ಬಾರಿ ನಂಬಿದವರೆಂದೂ ನೋಡದೆ ತಮ್ಮ ಉಗ್ರ ಸ್ವರೂಪವನ್ನೂ ತೋರುತ್ತದೆ. ಇದೇ ಕಾರಣಕ್ಕೆ ಕಾಲಾಂತರದಲ್ಲಿ ಅನೇಕ ಕಡೆ ವೈದೀಕರಣ, ಜೀರ್ಣೋದ್ಧಾರ, ಬ್ರಹ್ಮಕಲಶಗಳಂತಹ ಕೆಲಸಗಳು ಆರಂಭವಾಯಿತು. (ಸಂಗ್ರಹಿಸಿದ್ದು)
No comments:
Post a Comment