ಗಣಪತಿಯನ್ನು ಪ್ರಥಮ ವಂದಿಪ ಗಣಪ ಎಂದು ಕರೆಯುತ್ತೇವೆ. ಯಾವುದೇ ಶುಭ ಕಾರ್ಯದ ಆರಂಭದಲ್ಲಿ ಗಣೇಶನನ್ನು ಪೂಜಿಸಿ ಕಾರ್ಯಗಳನ್ನು ಮಾಡಿದರೆ ವಿಘ್ನ ನಿವಾರಣೆಯಾಗುತ್ತದೆ ಎಂಬ ನಂಬಿಕೆ. ಗಣೇಶ ಪುರಾಣದಲ್ಲಿ, ಎಲ್ಲಾ ದೇವತೆ ಗಳಿಗೂ ಮತ್ತು ಬ್ರಹ್ಮ -ವಿಷ್ಣು- ಮಹೇಶ್ವರಾದ ತ್ರಿಮೂರ್ತಿ ದೇವರುಗಳಿಗೂ, ದೇವ ಗಣಗಳಿಗೂ ‘ಗಣನಾಯಕ’ ನೇ ಅಧಿಪತಿಯಾಗಿದ್ದಾನೆ. ಪಾರ್ವತಿ ಪರಮೇಶ್ವರರ ಪುತ್ರ ಗಣೇಶ ಎಂದು ಗೊತ್ತು. ಗಣೇಶನಿಗೆ ಇಬ್ಬರು ತಾಯಂದಿರು ಇದು ಹೇಗೆ? ಪದ್ಮ ಪುರಾಣದ ಪ್ರಕಾರ ದೇವಿ ಪಾರ್ವತಿ ಹಾಗೂ ಗಂಗೆಯ ಪುತ್ರ ಗಣೇಶ. ಒಮ್ಮೆ ಶಿವ-ಪಾರ್ವತಿ ಯರು ಸ್ನಾನಕ್ಕೆ ನದಿಗೆ ಹೋದರು. ಪಾರ್ವತಿ ಸುಗಂಧ ಭರಿತ ಅಂಗ ಲೇಪನ ಮಾಡಿಕೊಳ್ಳುತ್ತಾಳೆ ಮೈಗೆ ಹಚ್ಚಿಕೊಳ್ಳುವಾಗ ಭೂಮಿಯ ಮೇಲೆ ಬಿದ್ದ ಅಂಗಲೇಪನವನ್ನೆಲ್ಲಾ ಒಟ್ಟು ಮಾಡಿ ಒಂದು ಗಂಡು ಮಗುವಿನ ಆಕಾರವನ್ನು ಮಾಡಿ ಅದನ್ನು ನೀರಿಗೆ ಬಿಟ್ಟಳು. ನೀರಿನಲ್ಲಿದ್ದ ಗಂಗೆ ಅದನ್ನು ತೆಗೆದುಕೊಂಡು ಅದಕ್ಕೆ ಜೀವ ತುಂಬಿದಳು. ಹೀಗೆ ಪಾರ್ವತಿ ಮತ್ತು ಗಂಗೆ ಗಣೇಶನ ತಾಯಿ ಯಾದರು. ಈ ರೀತಿ ಬೇರೆ ಬೇರೆ ಪುರಾಣಗಳಲ್ಲಿ ಹಲವು ಕಥೆಗಳಿವೆ.
ಯಾವುದೇ ದೇವರ ವ್ರತ ಪೂಜೆಗಳನ್ನು ಹಾಗೂ ಶುಭ ಸಮಾರಂಭಗಳನ್ನು ಆರಂಭಿಸುವ ಮೊದಲು ಗಣೇಶನನ್ನು ಪೂಜಿಸಿಕೊಂಡು ಮುಂದಿನ ಕಾರ್ಯ ಶುರು ಮಾಡುವುದು ಪೂರ್ವದಿಂದಲೂ ಬಂದ ಪದ್ಧತಿ. ಗಜಮುಖ ಗಣಪತಿ ಸೊಂಡಿಲಿಗೆ ಅದರದೇ ಆದ ವಿಶೇಷತೆ ಇದೆ. ಗಣಪತಿ ಸೊಂಡಿಲು ಸಾಮಾನ್ಯವಾಗಿ ಎಡಗಡೆ ತಿರುಗಿರುತ್ತದೆ. ಬಹಳ ಅಪರೂಪ ಎಂಬಂತೆ ಬಲಗಡೆ ತಿರುಗಿದ ಸೊಂಡಿಲ ಗಣಪನನ್ನು ನೋಡುತ್ತೇವೆ. ಎಡಗಡೆ ತಿರುಗಿದ ಸೊಂಡಿಲ ಗಣಪತಿಗೆ ‘ಎಡಮುರಿ ಗಣಪತಿ’ ಎಂದೂ, ಬಲಕ್ಕೆ ಸೊಂಡಿಲು ತಿರುಗಿದ ಗಣಪತಿಯನ್ನು ‘ಬಲಮುರಿ ಗಣಪತಿ’ ಎನ್ನುತ್ತಾರೆ. ನಾವು ಹೆಚ್ಚಾಗಿ ನೋಡುವುದು ಎಡಮುರಿ ಗಣಪತಿ. ಅಪರೂಪ ಎಂಬಂತೆ ಬಲಮುರಿ ಗಣಪತಿ ದೇವಾಲಯಗಳು ತುಂಬಾ ಕಡಿಮೆ. ಬಲಮುರಿ ಎಡಮುರಿ ಗಣಪತಿಯನ್ನು ಸಮನಾಗಿ ಪೂಜಿಸುತ್ತಾರೆ.
ಬಲಮುರಿ ಗಣಪತಿ ವಿಶೇಷ ಎನ್ನುವುದು ಮಾತ್ರವಲ್ಲ, ಬಲಮುರಿ ಗಣಪತಿ ಆರಾಧಿಸಿದರೆ ಜ್ಞಾನ ಸಾಧನೆಗೆ ಇರುವ ಅಡ್ಡಿ ಆತಂಕಗಳನ್ನು ನಿವಾರಿಸಿ ಬದುಕಿನ ಹಾದಿಯನ್ನು ಸುಗಮ ವಾಗಿ ಮಾಡುತ್ತಾನೆ ಎಂಬ ನಂಬಿಕೆ. ಬಲಮುರಿ ಗಣಪತಿಗೆ ದಕ್ಷಿಣಾಮೂರ್ತಿ ಎಂದು ಹೇಳುತ್ತಾರೆ. ಹಾಗೂ ಬಲಮುರಿ ಗಣಪತಿ ಜಾಗೃತ ಗಣಪತಿ ಎನ್ನುತ್ತಾರೆ. ಬಲಮುರಿ ದಕ್ಷಿಣ ದಿಕ್ಕನ್ನು ಸೂಚಿಸುವುದರಿಂದ ಅಲ್ಲಿ ಯಮಲೋಕದ ಪಾಪ ಪುಣ್ಯಗಳ ಪರೀಕ್ಷೆಯಾಗುವುದು ಎಂಬ ನಂಬಿಕೆ ಇದೆ. ಹಾಗಂತ ಬಲಮುರಿ ಗಣೇಶನನ್ನ ಸಾಮಾನ್ಯ ಜನರು ಪೂಜಿಸುವುದೇ ಇಲ್ಲ ಎಂದಲ್ಲ. ಬಲಮುರಿ ಗಣಪತಿಗೆ ವಿಶೇಷವಾಗಿ ಅಂದರೆ ವಿಧಿ ವಿಧಾನಗಳ ಕ್ರಮದಲ್ಲಿ, ಶ್ರದ್ಧೆ ಮತ್ತು ಭಕ್ತಿಯಿಂದ ಪೂಜಿಸಿದರೆ ಅಂದುಕೊಂಡ ಕಾರ್ಯಗಳೆಲ್ಲ ನೆರವೇರುತ್ತದೆ. ಆಕಸ್ಮಾತ್ ಬಲಮುರಿ ಗಣೇಶನ ಪೂಜೆಯಲ್ಲಿ ವ್ಯತ್ಯಾಸವಾದರೆ ತೊಂದರೆಯಾಗು ತ್ತದೆ ಎಂಬ ಮಾತಿದೆ. ಮನೆಗಳಲ್ಲಿ ಮಾಡುವ ಪೂಜೆ ಪುನಸ್ಕಾರ ಕ್ರಮವಾಗಿ ಅಂದರೆ ವಿಧಿ ವಿಧಾನಗಳಂತೆ ಮಾಡುವುದು ಕೆಲಸದ ಒತ್ತಡಗಳ ಮಧ್ಯೆ ಹೆಚ್ಚು ಕಡಿಮೆ ಆಗುವ ಸಾಧ್ಯತೆ ಇದೆ. ಹೀಗಾಗಿ ಬಲಮುರಿ ಗಣಪತಿಯನ್ನು ಮನೆಗಳಲ್ಲಿ ಇಟ್ಟುಕೊಳ್ಳುವುದು ಕಡಿಮೆ. ಬಲಮುರಿ ಗಣಪತಿ ದೇವಸ್ಥಾನಗಳು ಬೆರಳಿಕೆಯ ಷ್ಟು ಇದೆ. ಬಲ ಮುರಿ ಗಣೇಶನಿಗೆ ದೇವಾಲಯಗಳಲ್ಲಿ ವಿಧಿ ವಿಧಾನಗಳಂತೆ ಕ್ರಮವಾಗಿ ಪೂಜೆ ನಡೆಸುತ್ತಾರೆ. ಆದ್ದರಿಂದ ಬಲಮುರಿ ಗಣಪತಿ ಇರುವ ದೇವಸ್ಥಾನ ಸ್ವಲ್ಪ ವಿಶೇಷ ಎಂಬಂತಿದೆ. ಬಲಮುರಿ ಸೂರ್ಯ ನಾಡಿಗೆ ಸಂಬಂಧಿಸಿದೆ ಅಂದರೆ ಮೋಕ್ಷದ ಮಾರ್ಗ.
ಬಲಮುರಿ ಗಣಪತಿ ‘ಮೋಕ್ಷ ಪ್ರಧ ಗಣಪ’ ಅಂದರೆ ಮೋಕ್ಷ ಕರುಣಿಸುವ ಗಣಪತಿ, ಇಹಲೋಕದ ಸುಖಗಳನ್ನು ತ್ಯಜಿಸಿದವರು, ಮೋಕ್ಷ ಬಯಸುವವರು, ಆಸೆಗಳನ್ನು ತೊರೆದವರು ಮೋಕ್ಷ ಸಾಧಕರು ಬಲಮುರಿ ಗಣಪತಿ ಪೂಜೆ ಮಾಡಿ ನಡೆದು ಕೊಂಡಾಗ ಅವರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಬಲಮುರಿ ಗಣೇಶನ ಬಲಕ್ಕೆ ಬಾಗಿದ ಸೊಂಡಿಲಲ್ಲಿ ಕುಣಿಕೆ ಮತ್ತು ರತ್ನಗಳು ಸೇರಿದಂತೆ ಇತ್ಯಾದಿ ಅಲಂಕಾರಿಕ ವಸ್ತುಗಳನ್ನು ಧರಿಸುತ್ತಾನೆ. ಈ ಗಣೇಶನ ಆರಾಧನೆ ಮಾಡುವ ವ್ಯಕ್ತಿಗೆ ಶಕ್ತಿ, ಧೈರ್ಯ, ಜ್ಞಾನ, ಬುದ್ಧಿವಂತಿಕೆ, ವಿಜಯ ಮತ್ತು ರಕ್ಷಣೆಯನ್ನು ನೀಡುತ್ತದೆ. ಇದಲ್ಲದೆ ಅಡೆತಡೆಗಳನ್ನು ನಿವಾರಿಸುತ್ತಾನೆ, ಶತ್ರುಗಳ ಮೇಲೆ ಜಯವನ್ನು ಕೊಡುತ್ತದೆ. ಮಂತ್ರ ತಂತ್ರದಲ್ಲಿ ಯಶಸ್ಸು ಮತ್ತು ರೋಗರುಜನೆ ಗಳಿಂದ ಮುಕ್ತಿ, ಉದ್ಯೋಗದಲ್ಲಿ ಯಶಸ್ಸನ್ನು ಕರುಣಿಸುತ್ತದೆ. ಬಲಮುರಿ ಗಣಪತಿಯನ್ನು ತಂತ್ರ ಮಂತ್ರಗಳ ಸಿದ್ಧಿ ಪಡೆಯಲು ಆರಾಧಿಸುತ್ತಾರೆ.
‘ಎಡಮುರಿ ಗಣಪತಿ’ ಎಂದರೆ, ಸೊಂಡಿಲು ಎಡಭಾಗದ ಕಡೆ ತಿರುಗಿರುತ್ತದೆ. ಎಡ ಭಾಗ ಅಂದರೆ ‘ವಾಮ ಮುಖಿ’ ಎನ್ನುತ್ತಾರೆ. ಈ ಗಣಪತಿಗೆ ಉತ್ತರ ದಿಕ್ಕು. ಉತ್ತರ ದಿಕ್ಕು ಅಂದರೆ ಶಾಂತ ಸ್ವಭಾವ ಅಂತ. ಎಲ್ಲಾ ಮನೆಗಳಲ್ಲಿ ಎಡಮುರಿ ಸೊಂಡಿ ಲಿರುವ ಗಣೇಶನನ್ನು ತಂದು ಪೂಜಿಸುತ್ತಾರೆ. ಎಡಮುರಿ ಗಣಪತಿಗೆ ವಿಶೇಷವಾಗಿ ಪೂಜೆ ಮಾಡಬೇಕು ಎಂದು ಮನಸ್ಸಿನಲ್ಲಿ ಅಂದುಕೊಂಡ ದಿನ ಮಾಡಿದರೂ ಸಾಕು ನಿತ್ಯ ಪೂಜೆಯಲ್ಲಿ ಹೂವು ಏರಿಸಿ, ಊದಿನ ಕಡ್ಡಿ ಹಚ್ಚಿ, ಎರಡು ಅಕ್ಷತೆ ಕಾಳು ಹಾಕಿ ಸ್ತೋತ್ರ ಹೇಳಿ ನಮಸ್ಕರಿಸಿದರೆ ಎಡಮುರಿ ಗಣಪತಿ ಅನುಗ್ರಹಿಸು ತ್ತಾನೆ. ಅಂದರೆ ಶ್ರದ್ಧೆ ಭಕ್ತಿಗೆ ಒಲಿಯುತ್ತಾನೆ. ಹಾಗೆ ಗಣಪತಿಯನ್ನು ಪೂಜಿಸಿದ ಮನೆಗಳಲ್ಲಿ ಶಾಂತಿ ಸಮಾಧಾನ ನೆಮ್ಮದಿ ತುಂಬಿರುತ್ತದೆ. ಎಡಮುರಿ ಅಂದರೆ ‘ಚಂದ್ರನಾಡಿ’ ತಂಪು ಶೀತಲತೆಯಿಂದ ಕೂಡಿರುತ್ತದೆ. ಉತ್ತರ ದಿಕ್ಕು ಆದ್ದರಿಂದ ಆಧ್ಯಾತ್ಮಕ್ಕೆ- ಅಭ್ಯಾಸಕ್ಕೆ ಪೂರಕವಾಗಿರುತ್ತದೆ. ಎಡಮುರಿ ಗಣಪತಿ ಆನಂದ ಸೂಚಿಸುವ ಶಾಂತ ಮುಖ ನಿತ್ಯ ಪೂಜೆಗೆ ಎಡಮುರಿ ಗಣಪತಿಯೆ ಶ್ರೇಷ್ಠ ಎನ್ನುತ್ತಾರೆ.
ಎಡಗಡೆ ಸೊಂಡಿಲು ತಿರುಗಿರುವ ಗಣಪತಿಯನ್ನು “ಭೋಗಪ್ರಧ” ಗಣಪತಿ ಎನ್ನುತ್ತಾರೆ. ಅಂದರೆ ಮಾನವ ಸಹಜವಾಗಿ ಬಹಳಷ್ಟು ಆಸೆಗಳನ್ನು ಇಟ್ಟುಕೊಂಡಿರುತ್ತಾನೆ. ಮನುಷ್ಯರು ಅವರಿಗಿರುವ ಹಲವಾರು ಆಸೆ ಆಕಾಂಕ್ಷೆ ಗಳನ್ನು ಪೂರೈಸಿಕೊಳ್ಳಲಿಕ್ಕಾಗಿ ಪೂಜೆ ಮಾಡುತ್ತಾರೆ. ಆಸೆ ಆಕಾಂಕ್ಷೆ ಇರುವವರು ಎಡಮುರಿ ಗಣಪತಿ ಪೂಜೆ ಮಾಡಿ ಪ್ರಾರ್ಥಿಸಿದರೆ “ಭೋಗಪ್ರದ” ನಾದ ಎಡಮುರಿ ಗಣಪತಿ ಇಷ್ಟಾರ್ಥಗಳನ್ನು ನೆರವೇರುತ್ತಾನೆ. ಎಡಮುರಿ ಗಣಪತಿ 4 ಕೈಗಳಲ್ಲಿ ಮೇಲಿನ ಎರಡು ಕೈಗಳಲ್ಲಿ ಶಂಖ -ಚಕ್ರ ಇದ್ದರೆ ಕೆಳಗಿನ ಎರಡು ಕೈಗಳಲ್ಲಿ ಒಂದರಲ್ಲಿ ಮೋದಕ ಅಥವಾ ಸಿಹಿ ಉಂಡೆ, ಮತ್ತೊಂದು ಕೈಯಲ್ಲಿ ಸ್ವಸ್ತಿಕ್ ಇರುತ್ತದೆ. ಆದ್ದರಿಂದ ಇವನು ಭೋಗ ಗಣಪ.
ಮನೆಗಳಲ್ಲಿ ಗಣೇಶನ ಸೊಂಡಿಲು ಎಡಕ್ಕೆ ತಿರುಗಿರುವುದನ್ನೇ ನೋಡಿ ತಂದು ಪೂಜೆ ಮಾಡುತ್ತಾರೆ. ಕೆಲವು ಬಲಕ್ಕೆ ತಿರುಗಿರುತ್ತದೆ- ಕೆಲವು ಎಡಕ್ಕೆ ತಿರುಗಿರುತ್ತದೆ
ಒಮ್ಮೊಮ್ಮೆ ಗೊತ್ತಾಗದೆ ಬಲಮುರಿ ಗಣಪತಿ ಮನೆಗೆ ತಂದಿಟ್ಟು ಪೂಜೆ ಮಾಡು ತ್ತಾ ಇರುತ್ತಾರೆ. ಎಡಮುರಿ ಬಲಮುರಿ ಗಣಪತಿ ಬಗ್ಗೆ ಯಾರಾದರೂ ಹೇಳಿದ ಮೇಲೆ ಅದು ಗಮನಕ್ಕೆ ಬರುತ್ತದೆ ಹಾಗೆ ಆಗುವುದು ಸಹಜ. ಅದಕ್ಕಾಗಿ ಯೋಚಿಸ ಬೇಕಾಗಿಲ್ಲ ತಾನಾಗೇ ಬಲಮುರಿ ಗಣಪತಿ ಬಂದಿದ್ದಾನೆ ಎಂದುಕೊಂಡು ಮಾಡುವ ಪೂಜೆಯನ್ನು ಶ್ರದ್ಧೆಯಿಂದ ಮಾಡಿದರೆ ಆಯಿತು. ಗಣಪತಿಗೆ ಒಂದು ಚೂರು ಬೆಲ್ಲ
ಅಥವಾ ನೆನೆಸಿದ ಇಡಿ ಕಡಲೆ ಐದು ಗಣಪತಿ ಮುಂದೆ ಇಟ್ಟು ಕೈಮುಗಿರಿ. ನಮ್ಮ ಮನೆಯಲ್ಲಿ ಬಲಮುರಿ ಬೆಳ್ಳಿ ಗಣಪತಿ ಬಂದಿದೆ. ಅಂದರೆ ಅತ್ತೆ ಮನೆಯಿಂದಲೋ ತಾಯಿ ಮನೆಯಿಂದಲೋ ಹೇಗೋ ಬಂದಿದೆ. ನಾನು ಇತ್ತೀಚಿಗೆ ನೋಡಿದ ಮೇಲೆ ಗೊತ್ತಾಯಿತು. ನಿತ್ಯ ಪೂಜೆಯಂತೆ ಮಾಡುತ್ತೇನೆ.( ಕಡಲೆ ಅಥವಾ ಬೆಲ್ಲ ಅಥವಾ ಚೂರು ಸಕ್ಕರೆ ನೈವೇದ್ಯಕ್ಕೆ ಇಡುತ್ತೇನೆ) ಹೀಗೆ ಆಕಸ್ಮಿಕವಾಗಿ ಆಗುವುದೆಲ್ಲ ಒಳ್ಳೆಯ ದಕ್ಕೆ ಇದನ್ನು ಮರೆಯಬೇಡಿ. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ.
ಇದಕ್ಕೆ ನಾನು ಕಂಡ ಉದಾಹರಣೆ:- ಬಹಳಷ್ಟು ಮನೆಗಳಲ್ಲಿ ಮನೆತನದ ಪದ್ಧತಿ ಯಂತೆ ಭಾದ್ರಪದ ಮಾಸದ ಚೌತಿದಿನ ಮಣ್ಣಿನ ಗಣಪತಿ ಕೂರಿಸುವುದು(ಇಲ್ಲಿ ಮಣ್ಣಿನ ಗಣಪತಿ ಅಂತ ಏಕೆ ಒತ್ತಿ ಹೇಳುತ್ತೇನೆ ಎಂದರೆ, ಯಾರ್ಯಾರೋ ಮಣ್ಣಿನ ಗಣಪತಿಯನ್ನು ಇಡುತ್ತಾರೆ ನಾವು ಏಕೆ ಇಡಬಾರದು ಎಂದು ಸುಮ್ಮ ಸುಮ್ಮನೆ ಆಡಂಬರಕ್ಕೆ ಮಣ್ಣಿನ ಗಣಪತಿ ತಂದು ಇಡಬಾರದು ಮಣ್ಣಿನ ಗಣಪತಿ ಇಟ್ಟರೆ ಪ್ರತಿಷ್ಠಾಪನೆ ಸಂಕಲ್ಪ ಸಹಿತ ಕ್ರಮಬದ್ಧವಾಗಿ ಪೂಜೆ ಮಾಡಬೇಕು, ಕ್ರಮದಂತೆ ವಿಸರ್ಜನೆ ಮಾಡಬೇಕು) ಹಾಗೆ ಅನಂತನ ವ್ರತ ಮಾಡುವ ಪದ್ಧತಿ ಇರುತ್ತದೆ.
ಹಿಂದಿನಿಂದ ಬಂದ ಪದ್ಧತಿ ಎಂದು ನಡೆಸಿಕೊಂಡು ಬರುತ್ತಿರುತ್ತಾರೆ. ಆದರೆ ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ಪ್ರತಿವರ್ಷ ವ್ರತ ಮಾಡಲು ಆಗುವುದಿಲ್ಲವೆಂದೋ, ಕೆಲಸದ ವರ್ಗಾವಣೆ ಅಥವಾ ಆರ್ಥಿಕ ಅಡಚಣೆ - ರಜೆ - ಸಮಯ ಮುಂತಾದ ಕಾರಣಗಳಿಂದಲೋ ಪದ್ಧತಿಯನ್ನು ಮುಂದುವರೆಸಲು ಆಗದಿದ್ದಾಗ, ಅಂತ ಸಮಯದಲ್ಲಿ ಅದನ್ನು ಪರಿಚಯದವರು ಯಾರಾದರೂ ಮಾಡುವರಿದ್ದರೆ ಶಾಸ್ತ್ರೋಕ್ತವಾಗಿ ಗಣಪತಿ ವಿಗ್ರಹ ಅಥವಾ ಅನಂತನ ವ್ರತವಾದರೆ ಅನಂತನ ಎಳೆಯನ್ನು , ದಾನ ಕೊಡುವ ಕ್ರಮದಲ್ಲಿ ಕೊಟ್ಟು ಅವರಿಗೆ ವರ್ಗಾಯಿಸಿ ದಂತೆ ಮಾಡುತ್ತಾರೆ. ಇದರಿಂದ ಯಾವುದೇ ದೋಷವಿಲ್ಲ ಇಬ್ಬರಿಗೂ ಒಳ್ಳೆಯದು.
ಇದು ಆಗದಿದ್ದಾಗ ಗಣಪತಿ ದೇವಸ್ಥಾನಗಳಿಗೆ ಹೋಗಿ ಪರಿಸ್ಥಿತಿಯನ್ನು ಹೇಳಿ ಕೊಡಬಹುದು.
ಹಿಂದಿನ ಕಾಲದ ಒಂದು ಕ್ರಮ :- ಬಡತನದಿಂದಾಗಿ ಮನೆತನದ ಪದ್ಧತಿಯಾಗಿ ಬಂದ ವ್ರತ- ಪೂಜೆಗಳನ್ನು ಕ್ರಮೇಣ ಮಾಡಲು ಸಾಧ್ಯವಿಲ್ಲದಾಗ, ಬೇರೆಯವರನ್ನು ಕೇಳಿ ಅವರಿಗೆ ಧಾರೆ ಎರೆವ ಮೂಲಕ ವರ್ಗಾವಣೆ ಮಾಡುತ್ತಿದ್ದರು. ಇದೂ ಆಗದಿದ್ದಾಗ, ಅಂಥವರು ಗಣಪತಿ ಅಥವಾ ಅನಂತನ ವ್ರತ ಮಾಡುವವರು ಅನಂತನ ಎಳೆಯನ್ನು ವಿಳ್ಳೆದೆಲೆ ಅಡಿಕೆ ಮೇಲೆಟ್ಟು ಕೈಲಾದಷ್ಟು ದಕ್ಷಿಣೆ ಹಾಕಿ ಊರಿನ ಯಾರಾದರೂ (ಸಂಸ್ಕಾರವಂತರ) ಮನೆ ಮುಂದಿನ ಹೊಸಿಲ ಮೇಲೆ ಇಟ್ಟು ಮೌನವಾಗಿ ಬರುತ್ತಿದ್ದರು. ಆ ಮನೆಯವರು ಮುಂಜಾನೆ ಬೀದಿ ಬಾಗಿಲು ತೆಗೆದು ನೋಡಿದಾಗ ಹೊಸಿಲ ಮೇಲೆ ಗಣಪತಿ ಅಥವಾ ಅನಂತನ ಎಳೆ ಇರುವುದು ಕಂಡು ಬಂದರೆ. ಅದನ್ನು ಭಕ್ತಿಯಿಂದ ಒಳಗೆ ತೆಗೆದುಕೊಂಡು ಹೋಗಿ ಕ್ರಮವಾಗಿ ಅವರು ವ್ರತ ಪೂಜೆ ನಿಯಮ ಪಾಲಿಸುತ್ತಾರೆ. ಮುಂದೆ ಅದು ಅವರ ಮನೆಯ ಪದ್ಧತಿಯಾಗುತ್ತದೆ ಮತ್ತು ಅವರ ಮನೆಗೆ ತಾನಾಗೆ ಬಂದ ಗಣಪತಿಗೆ ವ್ರತ ಪೂಜೆ ಮಾಡುತ್ತಾ ಬಂದಂತೆ ಬಹಳಷ್ಟು ಒಳ್ಳೆಯದಾದ ಉದಾಹರಣೆಗಳು ಇವೆ (ನಮ್ಮ ಊರಿನ ಒಬ್ಬರ ಮನೆಯಲ್ಲಿ ಅನಂತನ ಎಳೆ ಹೊಸಿಲ ಮೇಲೆ ಇಟ್ಟು ಹೋಗಿದ್ದರಂತೆ, ಹಾಗೆ ಅನಂತನ ವ್ರತ ಆರಂಭವಾಯಿತು, ಜೊತೆಗೆ ಸಂಪತ್ತು ಬಂತು, ಸಂತಾನ ಆಯಿತು ಎನ್ನುತ್ತಿದ್ದರು)
ಎಡಮುರಿ–ಬಲಮುರಿ ಗಣಪತಿಯ ರೂಪಗಳು ಬೇರೆಬೇರೆ ಆದರೂ, ಭಕ್ತಿ ಒಂದೇ, ಅನುಗ್ರಹವೂ ಒಂದೇ. ಎಡಮುರಿ ಗಣಪತಿ ಇಹಲೋಕದ ಸುಖ–ಶಾಂತಿಯನ್ನು ನೀಡುವವನು; ಬಲಮುರಿ ಗಣಪತಿ ಜ್ಞಾನ–ಸಾಧನೆ–ಮೋಕ್ಷದ ದಾರಿಯನ್ನು ತೆರೆದಿಡುವವನು.
ಪದ್ಧತಿಗಳು, ವ್ರತಗಳು, ಸಂಪ್ರದಾಯಗಳು — ನಮ್ಮನ್ನು ಮಾರ್ಗದರ್ಶನ ಮಾಡಲು, ಇರುವುದು . ಭಕ್ತಿ ಇದ್ದಲ್ಲಿ ದೋಷವಿಲ್ಲ, ಸಂಕಲ್ಪ ಇದ್ದಲ್ಲಿ ವಿಘ್ನವಿಲ್ಲ, ಗಣೇಶನ ಕೃಪೆ ಇದ್ದಲ್ಲಿ ಅಡೆತಡೆಗಳಿಲ್ಲ. ಯಾವ ರೂಪ ಮನೆಗೆ ಬಂದರೂ ಅದು ದೈವಸಂಕೇತ. ಶ್ರದ್ಧೆಯಿಂದ ಪೂಜಿಸಿದರೆ ಶುಭ, ನೆಮ್ಮದಿ, ರಕ್ಷಣೆ ದೊರೆಯುತ್ತದೆ.
ಓಂ ಶ್ರೀ ಸಂಕಷ್ಟಹರ ಸ್ತೋತ್ರಮಂತ್ರಸ್ಯ|
ಶ್ರೀ ಮಹಾಗಣಪತಿರ್ದೇವತಾ |
ಸಂಕಷ್ಟಹರಣಾರ್ಥೇ ಜಪೇ ವಿನಿಯೋಗ:|
ಓಂ ಗಂ ಗಣಪತಿಯೇ ನಮಃ
ಓಂ ಲಂಬೋದರಾಯ ನಮಃ|
॥ ಮಹಾಗಣಪತಿ ಧ್ಯಾನಂ ||
ಶ್ರೀರಸ್ತು ಗಜವಕ್ರಂ
ಶೂರ್ಪಕರ್ಣ೦
ಗೌರೀದೇಹಮೃದುದ್ಭವಂ |
ಚತುರ್ಭುಜಂ ಪಂಚಮುಖಂ
ವರಮೂಷಕವಾಹನಂ ।।೧।।
ಮಹಾಕಾಯಂ
ದಿವ್ಯದೇಹಾಧ್ಯಂ
ದ್ವಾತ್ರಿಂಶದ್ರೂಪಧಾರಣಂ |
ಷಟ್ಟೋಣಚಕ್ರಮಧ್ಯಸ್ಥಂ
ಪಾಶಾಂಕುಶಲಸತ್ಕರಂ ||೨||
ದಂತಮೋಹಕಹಸ್ತಾಡ್ಯಂ
ಚಂದ್ರಾಗರ್ವಾಪಹಾರಕಂ |
ಸಿಂಧೂರಾಭಂ ಶಿವಸುತಂ ಹೇರಂಬಂ
ವಲ್ಲಭಾಪ್ರಿಯಂ ।।೩।
ಆದಿಪೂಜ್ಯಂ ಚತುರ್ಧೀಶಂ
ಸರ್ವದೇವ ನಮಸ್ಕೃತಂ|
ಸರ್ವಾ ಭೀಷ್ಟಪ್ರದಾತಾರಂ
ಸರ್ವವಿಘ್ನನಿವಾರಣಂ ||೪||
ನಾಗಬದ್ಯೋಧರಂ ದೇವಂ
ನಾಗಯಜ್ಯೋಪವೀತಿನಂ |
ಫಾಲಚಂದ್ರಂ ತ್ರಿನಯನಂ
ಶ್ರೀಗಣೇಶಂ ನಮಾಮ್ಯಹಂ ||೫|
ವಂದನೆಗಳೊಂದಿಗೆ,
ಬರಹ: ©ಆಶಾ ನಾಗಭೂಷಣ — ಹಕ್ಕುಗಳು ಸಂರಕ್ಷಿತ
#ashanagabhushan #ಆಶಾನಾಗಭೂಷಣ
No comments:
Post a Comment