ಮಹಾಭಾರತ ಎಂಬುದು ಒಂದು ಮಹಾಕಾವ್ಯ ಮಾತ್ರವೇ ಅಲ್ಲ, ಅದೊಂದು ಜೀವನ ವಿಧಾನ. ಅಖಂಡ ಭಾರತೀಯರ ಪಾಲಿಗೆ ಇದು ಜೀವನ ಸೂತ್ರ. ಅನ್ಯಾಯ, ಅಧರ್ಮದ ಮಾರ್ಗದಲ್ಲಿ ನಡೆಯುವವನಿಗೆ ಭೀಕರವಾದ ಅಂತ್ಯ ಖಚಿತ ಎಂಬುದನ್ನು ಸಾರಿ ಹೇಳುವ ಮಹಾನ್ ಗ್ರಂಥ ಮಹಾಭಾರತ. ಮಹಾಭಾರತದಲ್ಲಿ ಅತಿಯಾಸ ಆಸೆ, ಅಹಂಕಾರದಿಂದ ಮೆರೆದು, ಸ್ತ್ರೀಯನ್ನು ಅಗೌರವದಿಂದ ಕಂಡವನು ಎಂದೊಡನೆ ನೆನಪಾಗುವುದು ಕೌರವನಾದ ದುರ್ಯೋಧನ. ಭೀಮನಿಗೆ ಸಮಬಲನಾದ ಈತನ ಇಡೀ ದೇಹ ವಜ್ರದಷ್ಟು ಗಟ್ಟಿಯಾದರೂ, ತೊಡೆಯ ಭಾಗ ಮಾತ್ರ ದುರ್ಬಲವಾಗಿ ಉಳಿದು ಆತನ ಸಾವಿಗೆ ಅದೇ ಕಾರಣವಾಗಿತ್ತು. ಆದರೆ ಆತನ ತೊಡೆಯ ಭಾಗ ದುರ್ಬಲವಾಗುವುದರ ಹಿಂದೆ ಕೂಡಾ ಆ ಲೀಲಾ ವಿಹಾರಿ ಶ್ರೀಕೃಷ್ಣನ ಮಾಯೆ ಇತ್ತು ಎಂಬುದು ವಾಸ್ತವ.
ನೂರೊಂದು ಜನ ಕೌರವರ ಮಾತೆಯಾದ ಗಾಂಧಾರಿ ದೇವಿ ಆ ಪರಮಶಿವನ ಅನನ್ಯ ಭಕ್ತೆ. ಆ ಭಕ್ತಿಯಿಂದಲೇ ಆಕೆಗೆ ಸಿಕ್ಕಿತ್ತು ಒಂದು ಅಪೂರ್ವವಾದ ವರ. ಅದೇನೆಂದರೆ ಆಕೆ ತನ್ನ ಕಣ್ಣಿಗೆ ಕಟ್ಟಿರುವ ಬಟ್ಟೆಯನ್ನು ತೆರೆದು ಯಾರ ದೇಹವನ್ನು ನೋಡುವಳೋ, ಅವರ ದೇಹ ವಜ್ರದಷ್ಟೇ ಗಟ್ಟಿಯಾಗಿರುವುದು ಎಂದು. ಗಾಂಧಾರಿ ತನ್ನ ಪುತ್ರ ದುರ್ಯೋಧನನನ್ನು ಕರೆದು, ಗಂಗಾ ಸ್ನಾನ ಮಾಡಿ ಮೈಮೇಲೆ ವಸ್ತ್ರ ಧರಿಸದೇ ತನ್ನ ಮುಂದೆ ಬರಲು ಹೇಳಿದಳು. ತಾಯಿಯ ಆಜ್ಞೆ ಪಾಲಿಸಲು ಹೋದ ದುರ್ಯೋಧನ ಸ್ನಾನ ಮುಗಿಸಿ ಮೈಮೇಲೆ ಯಾವುದೇ ವಸ್ತ್ರ ಇಲ್ಲದೇ ನಿರ್ವಸ್ತ್ರನಾಗಿ ಬರುವಾಗ ಎದುರಾದ ಶ್ರೀಕೃಷ್ಣ ಪರಮಾತ್ಮ. (ಕೆಲವು ಕಡೆ ಕೃಷ್ಣ ಕೌರವರ ಸಹೋದರಿ ದುಃಶಳೆಯ ರೂಪದಲ್ಲಿ ಬಂದ ಎಂಬುದಾಗಿ ಹೇಳಲಾಗಿದೆ)
ಕೃಷ್ಣ ದುರ್ಯೋಧನನಿಗೆ ವಯಸ್ಕನಾದ ನೀನು ತಾಯಿಯ ಮುಂದೆ ಹೀಗೆ ನಿರ್ವಸ್ತ್ರನಾಗಿ ಹೋಗುವುದು ಭರತ ವಂಶದ ಸಂಪ್ರದಾಯವಲ್ಲ ಎಂದು ನುಡಿದನು. ಹೇಗೂ ನೀನು ಅದನ್ನೆಲ್ಲಾ ಪಾಲಿಸುವುದೂ ಇಲ್ಲ, ಹೋಗು ಹೋಗು ಎಂದ. ಹಾಗೆ ಹೇಳಿ ಶ್ರೀಕೃಷ್ಣ ಹೊರಟ ನಂತರ, ದುರ್ಯೋಧನನಿಗೆ ಕೂಡಾ ನಿರ್ವಸ್ತ್ರನಾಗಿ ಹೋಗುವುದಕ್ಕೆ ಲಜ್ಜೆ ಎನಿಸಿ, ಬಾಳೆ ಎಲೆಯನ್ನು ತೆಗೆದುಕೊಂಡು ತನ್ನ ಜನನಾಂಗವು ಮುಚ್ಚುವಂತೆ ತೊಡೆಯ ಭಾಗವನ್ನು ಆ ಬಾಳೆ ಎಲೆಯಿಂದ ಮುಚ್ಚಿ ತಾಯಿಯ ಮುಂದೆ ಹೋಗಿ ನಿಂತ.
ಗಾಂಧಾರಿ ಮಗನನ್ನು ವಜ್ರಕಾಯನನ್ನಾಗಿ ಮಾಡಲು ತಾನು ವಿವಾಹವಾದಾಗ ಕಣ್ಣಿಗೆ ಕಟ್ಟಿದ್ದ ಬಟ್ಟೆಯನ್ನು ಬಿಚ್ಚಿದಾಗ, ಆಕೆಯ ಅದೆಷ್ಟೋ ವರ್ಷಗಳ ಪುಣ್ಯ ಫಲ ಶಕ್ತಿಯಾಗಿ ಹರಿದು ದುರ್ಯೋಧನನ ದೇಹವನ್ನು ಸೋಕಿ ಅವನು ವಜ್ರಕಾಯನಾದನು. ಆದರೆ ತೊಡೆಯ ಭಾಗವನ್ನು ಆತ ಬಾಳೆ ಎಲೆಯಿಂದ ಮುಚ್ಚಿದ್ದರಿಂದ ಆ ಭಾಗ ಮಾತ್ರ ದುರ್ಬಲವಾಗಿ ಉಳಿದುಹೋಯಿತು. ಗಾಂಧಾರಿ ಮಗನಿಗೆ ಹಿರಿಯರ ಮಾತು ಕೇಳದೆ ಹೋದುದರ ಫಲ ನಿನ್ನ ತೊಡೆಯ ಭಾಗ ಇನ್ನು ಮುಂದೆ ದೇಹ ದಷ್ಟು ಗಟ್ಟಿಯಲ್ಲ ಎನ್ನುತ್ತಾ ವೇದನೆಗೆ ಗುರಿಯಾದಳು. ಹೀಗೆ ಕೃಷ್ಣ ಮಾಡಿದ ಉಪಾಯವು ದುರ್ಯೋಧನನ ಪಾಲಿಗೆ ಸಾವಿನ ಕಾರಣವಾಗಿ ಹೋಯಿತು.
No comments:
Post a Comment