Sunday, 9 August 2020

ಆಷಾಢ ಏಕಾದಶಿ:

ಆಷಾಢ ಏಕಾದಶಿ: 
ಇಲ್ಲಿದೆ ಶುಭ ಮುಹೂರ್ತ, ಮಹತ್ವ ಹಾಗೂ ಉಪಯೋಗ

ಆಷಾಢ ಹುಣ್ಣಿಮೆಯ ತ್ರೈಮಾಸಿಕದ ಹನ್ನೊಂದನೇ ದಿನವನ್ನು ದೇವಶಯನಿ ಏಕಾದಶಿ ಎಂದು ಕರೆಯಲಾಗುತ್ತದೆ. ಪುರಾಣಗಳ ಪ್ರಕಾರ, ಈ ದಿನ ಆರಾಧನೆಯ ನಂತರ ವಿಷ್ಣು 4 ತಿಂಗಳುಗಳ ಕಾಲ ವಿಶ್ರಾಂತಿಗೆ ಹೋಗುತ್ತಾನೆ. ವಿಷ್ಣು ಈ ದಿನ ಕ್ಷೀರ ಸಾಗರಕ್ಕೆ ಹೋಗಿ ಬರೋಬ್ಬರಿ 4 ತಿಂಗಳುಗಳ ಕಾಲ ಮಲಗಿ ವಿಶ್ರಮಿಸುತ್ತಾನೆ. ಈ ಕಾರಣದಿಂದ ಏಕಾದಶಿಯನ್ನು ಹರಿ ಶಯನಿ ಏಕಾದಶಿಯೆಂದು ಕರೆಯಲಾಗುತ್ತದೆ. ನಾಲ್ಕು ತಿಂಗಳುಗಳ ಕಾಲ ನಿದ್ರೆಗೆ ಜಾರಿದ ವಿಷ್ಣು ಪ್ರಭೋದಿನಿ ಏಕಾದಶಿಯಂದು ಎಚ್ಚೆತ್ತುಕೊಳ್ಳುತ್ತಾನೆ. ಈ ನಾಲ್ಕು ತಿಂಗಳ ಅವಧಿಯನ್ನು ಚಾತುರ್ಮಾಸವೆಂದು ಕರೆಯಲಾಗುತ್ತದೆ.

ಆಷಾಢ ಏಕಾದಶಿಯ ವ್ರತಾಚರಣೆ:

ಈ ದಿನದಂದು ವಿಷ್ಣುವಿನ ಭಕ್ತರು ಭಗವಾನ್‌ ವಿಷ್ಣುವನ್ನು ಮತ್ತು ಲಕ್ಷ್ಮಿ ದೇವಿಯನ್ನು ಭಕ್ತಿಯಿಂದ ಆರಾಧಿಸುತ್ತಾರೆ. ಆಷಾಢ ಏಕಾದಶಿಯಂದು ಪ್ರಮುಖವಾಗಿ ಉಪವಾಸವನ್ನು ಕೈಗೊಳ್ಳಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ, ಆಷಾಢ ಏಕಾದಶಿ ವ್ರತಾಚರಣೆಯನ್ನು ಹೀಗೆ ಮಾಡಬೇಕು:

1) ದೇವಶಯನಿ ಏಕಾದಶಿ ವ್ರತವನ್ನು ಆಚರಿಸುವ ಭಕ್ತರು ಮುಂಜಾನೆ ಬೇಗ ಎದ್ದು, ಸ್ನಾನ ಮಾಡಿ ಶುದ್ಧರಾಗಬೇಕು.

2) ಮಧ್ಯಾಹ್ನದ ಸಮಯದಲ್ಲಿ ಸತ್ತ ಪೂರ್ವಜರನ್ನು ನೆನೆಯಲಾಗುತ್ತದೆ. ಅವರಿಗೆ ಮೋಕ್ಷ ಸಿಗಲೆಂದು ಭಕ್ತಿಯಿಂದ ಪ್ರಾರ್ಥಿಸಲಾಗುತ್ತದೆ.

3) ವಿಷ್ಣುವನ್ನು ಪೂಜಿಸಲು ಈ ದಿನದಂದು ಪೂಜಾ ಕೋಣೆಯಲ್ಲಿ ವಿಷ್ಣುವಿನ ವಿಗ್ರಹವನ್ನಿಟ್ಟು, ಆ ವಿಗ್ರಹವನ್ನು ಶುದ್ಧೀಕರಿಸಿ ಅಲಂಕರಿಸಲಾಗುತ್ತದೆ.

4) ವಿಷ್ಣುವಿನ ವಿಗ್ರಹವನ್ನು ಹಳದಿ ಬಣ್ಣದಿಂದ ಅಲಂಕರಿಸಬೇಕು.

5) ವಿಷ್ಣುವಿಗೆ ಪೂಜೆಯಲ್ಲಿ ಎಲೆ, ಅಡಿಕೆ, ಹಳದಿ ಬಣ್ಣದ ಹೂವುಗಳನ್ನು, ಶ್ರೀಗಂಧದ ಮರದ ತುಂಡುಗಳನ್ನು ಅರ್ಪಿಸಲಾಗುತ್ತದೆ.

6) ಆಷಾಢ ಏಕಾದಶಿ ವ್ರತವನ್ನು ಕೈಗೊಂಡವರು ದಿನಕ್ಕೆ ಒಂದು ಬಾರಿ ಮಾತ್ರ ಆಹಾರವನ್ನು ಸ್ವೀಕರಿಸಬೇಕು.

7) ಏಕಾದಶಿಯ ಮರುದಿನ ವಿಷ್ಣುವಿನ ಪಾರಾಯಣ ಅವಧಿಯಲ್ಲಿ ಆಹಾರವನ್ನು ತೆಗೆದುಕೊಳ್ಳುವ ಮೂಲಕ ಉಪವಾಸ ವ್ರತವನ್ನು ಕೈಬಿಡಬಹುದು.

ಆಷಾಢ ಏಕಾದಶಿ ವ್ರತದ ಕುರಿತಿರುವ ದಂತಕಥೆ:

ಒಂದು ಕಾಲದಲ್ಲಿ ಮಾಂಧಾತ ಎನ್ನುವ ರಾಜ ಆಳ್ವಿಕೆಯನ್ನು ನಡೆಸುತ್ತಿದ್ದನು. ಅವನ ಉತ್ತಮ ಆಳ್ವಿಕೆಯಿಂದ ರಾಜ್ಯವವು ಸಂಪನ್ನವಾಗಿತ್ತು ಹಾಗೂ ಪ್ರಜೆಗಳು ಸಂತೋಷದಿಂದ ದಿನವನ್ನು ಕಳೆಯುತ್ತಿದ್ದರು. ಆದರೆ ಅವನ ಆಡಳಿತದ ಅವಧಿಯಲ್ಲಿ ರಾಜ್ಯವು ಬರಗಾಲಕ್ಕೆ ತುತ್ತಾಯಿತು. ರಾಜ ಮಾಂಧಾತನು ಉತ್ತಮ ಆಡಳಿತಗಾರನಾಗಿದ್ದ ಕಾರಣ, ಪ್ರಜೆಯನ್ನು ಹಿಂಸಿಸಲು ಅವನು ಒಪ್ಪುತ್ತಿರಲಿಲ್ಲ. ಹಾಗಾಗಿ ಹೇಗಾದರೂ ತನ್ನ ಪ್ರಜೆಯನ್ನು ಇದರಿಂದ ಹೊರತರಲು, ರಾಜ್ಯವನ್ನು ಸಂತೋಷದಿಂದಿಡಲು ಪ್ರಯಾಣವನ್ನು ಕೈಗೊಳ್ಳುತ್ತಾನೆ. ದಾರಿಯಲ್ಲಿ ರಾಜ ಮಾಂಧಾತನಿಗೆ ಋಷಿ ಅಂಗೀರರು ಸಿಗುತ್ತಾರೆ.
ಮಾಂಧಾತ ರಾಜನು ಋಷಿ ಅಂಗೀರನ ಆಶೀರ್ವಾದವನ್ನು ಪಡೆದುಕೊಂಡು ತನ್ನ ರಾಜ್ಯದಲ್ಲಾಗುತ್ತಿರುವ ಸಂಕಷ್ಟವನ್ನು ಹೇಳಿಕೊಳ್ಳುತ್ತಾನೆ. ಆಗ ಋಷಿ ಅಂಗೀರನು ಈ ಸಮಸ್ಯೆಯಿಂದ ಹೊರಬರಲು ಆಷಾಢ ಏಕಾದಶಿಯಂದು ಉಪವಾಸವನ್ನು ಕೈಗೊಳ್ಳಲು ಸಲಹೆ ನೀಡುತ್ತಾನೆ. ಋಷಿ ಅಂಗೀರನ ಸಲಹೆಯ ಮೇರೆಗೆ ರಾಜ ಸೇರಿದಂತೆ ರಾಜ್ಯದ ಎಲ್ಲಾ ಪ್ರಜೆಗಳು ಆಷಾಢ ಏಕಾದಶಿಯಂದು ಉಪವಾಸವನ್ನು ಕೈಗೊಂಡು ಭಗವಾನ್ ವಿಷ್ಣು ಮತ್ತು ಲಕ್ಷ್ಮಿ ದೇವಿಯನ್ನು ಆರಾಧಿಸುತ್ತಾರೆ. ತಕ್ಕಣವೇ ಬರಗಾಲದಿಂದ ತುಂಬಿದ್ದ ರಾಜ್ಯದಲ್ಲಿ ಮಳೆಯ ಅಬ್ಬರ ಆರಂಭವಾಗುತ್ತದೆ. ರಾಜ್ಯವು ಮೊದಲಿದ್ದ ಸ್ಥಿತಿಗೆ ಪುನಃ ಬರುತ್ತದೆ. ಅಂದಿನಿಂದ ಆಷಾಢ ಏಕಾದಶಿಯನ್ನು ಆಚರಿಸಿಕೊಂಡು ಬರಲಾಗುತ್ತದೆ.

#jnanaprachar

No comments:

Post a Comment