Wednesday, 30 October 2019

ಶಿಬಿಚಕ್ರವರ್ತಿ

🔯🌹🌳🌹ಶಿಬಿಚಕ್ರವರ್ತಿ🌹🌳🌹🔯

👉ಹಿಂದೆ ಶಿಬಿಚಕ್ರವರ್ತಿ ಧರ್ಮದಿಂದ ರಾಜ್ಯಭಾರ ಮಾಡುತ್ತಿದ್ದನು. 

👉ಒಂದು ದಿನ ಗಿಡುಗವೊಂದು ಪಾರಿವಾಳವನ್ನು ತಿನ್ನುವ ಸಲುವಾಗಿ ಹರಿಸಿಯಾಡುತ್ತಾ ಬಂತು. ಪಾರಿವಾಳ ಪ್ರಾಣಭಯದಿಂದ  ಶಿಬಿಚಕ್ರವರ್ತಿಯ ಬಳಿಗೆ ಬಂದು ತನ್ನನ್ನು ರಕ್ಷಿಸುವಂತೆ ಬೇಡಿಕೊಂಡಿತು. ಅರಸನು ಅದರ ಪ್ರಾಣವನ್ನು ರಕ್ಷಿಸುವೆನೆಂದು ಮಾತು ಕೊಟ್ಟನು. . 

👉ಅಷ್ಟರಲ್ಲಿ ಗಿಡುಗ ಬಂದು ರಾಜನ ಮುಂದೆನಿಂತು ಅಯ್ಯಾ ರಾಜನೇ ನೀನು  ಮಹಾಧರ್ಮಿಷ್ಠ, ನನಗೆ ಆಹಾರ ಸಿಕ್ಕದೆ ಈ ಪಾರಿವಾಳವನ್ನು ಹಾರಿಸಿಕೊಂಡು ಬರುತ್ತಿದ್ದೆನು. ಅಷ್ಟರಲ್ಲಿ ಇದು ನಿನ್ನ ಮೊರೆಹೊಕ್ಕಿತು. ಅದನ್ನು ಈಚೆಗೆ ಕಳುಹಿಸಿಕೊಡೆಂದು ಕೇಳಿಕೊಂಡಿತು. 

👉ಆಗ ಶಿಬಿಯು ಅಯ್ಯಾ ಪಕ್ಷಿರಾಜನೇ ನನ್ನ ರಕ್ಷಣೆ ಬೇಡಿಬಂದ ಪಾರಿವಾಳವನ್ನು ರಕ್ಷಿಸುವುದು ನನ್ನ ಧರ್ಮವೆಂದು ಹೇಳಿದನು. ಗಿಡುಗವು ದೊರೆಯೇ ಆಹಾರವೇನೂ ಸಿಕ್ಕದೆ ಹಸಿವಿನಿಂದ ಈ ಪಕ್ಷಿಯನ್ನಾದರು ತಿನ್ನೋಣವೆಂದು ಬಂದ ನನ್ನನ್ನು ಹಸಿವಿನಿಂದ ಕಳುಹಿಸುವುದು ಮಾತ್ರ ಯಾವ ಧರ್ಮವೆಂದು ಪ್ರಶ್ನಿಸಿತು. 

👉ಅದಕ್ಕೆ ರಾಜನು ಹಾಗಾದರೆ ನಿನಗೆ ಬೇರೆ ಮಾಂಸವನ್ನು ತರಿಸಿಕೊಡುತ್ತೇನೆ ತಿಂದು ತೃಪ್ತನಾಗು ಎಂದನು.  ಇದ್ಯಾವುದಕ್ಕೂ ಒಪ್ಪದ ಗಿಡುಗ ಪಾರಿವಾಳವನ್ನು ಕಳುಹಿಸಿಕೊಡು, ಇಲ್ಲದಿದ್ದರೆ ನಿನ್ನ ಅಂಗದಿಂದ ಪಾರಿವಾಳದ ತೂಕಕ್ಕೆ ಸರಿಯಾಗಿ ಮಾಂಸವನ್ನು ಕುಯ್ದುಕೊಡು ಎಂದಿತು. 

👉ಈ ಮಾತಿಗೆ  ಚಕ್ರವರ್ತಿಯು ಸಂತೋಷಗೊಂಡು, ನೀನು ಹೇಳಿದಂತಾಗಲೆಂದು ತಕ್ಕಡಿಯನ್ನು ತರಿಸಿದನು. ಕೂಡಲೇ ಒಂದು ತಟ್ಟೆಯಲ್ಲಿ ಪಾರಿವಾಳವನ್ನು ಕೂರಿಸಿ ಕತ್ತಿಯನ್ನು ತೆಗೆದು ತನ್ನ ದೇಹದಿಂದ ಸ್ವಲ್ಪ ಮಾಂಸವನ್ನು ತೆಗೆದು ತಕ್ಕಡಿಯ ಇನ್ನೊಂದು ತಟ್ಟೆಯಲ್ಲಿ ಹಾಕಿದನು. 

👉ಪಾರಿವಾಳದ ತೂಕ ಹೆಚ್ಚಾಯಿತು. ಆಗ ರಾಜನು  ಮಾಂಸವನ್ನು ಇನ್ನಷ್ಟು ಮತ್ತಷ್ಟು ತೆಗೆದು ಹಾಕಿದರೂ ಪಾರಿವಾಳದ ತೂಕ ಹೆಚ್ಚುತ್ತಾ ಹೋಯಿತು.

 👉ಆಗ ದೊರೆಯು ಸತ್ಯಕ್ಕೆ ಕಟ್ಟುಬಿದ್ದು ಸಂತೋಷದಿಂದ ತನ್ನ ತಲೆಯನ್ನು ಕಡಿದು ಹಾಕಲು ಮುಂದಾದನು. ಆಗ ಇವನ ಸತ್ಯಕ್ಕೆ ಮೆಚ್ಚಿ ಗಿಡುಗನ ರೂಪದಲ್ಲಿದ್ದ ಇಂದ್ರ ಹಾಗೂ ಪಾರಿವಾಳದ ರೂಪದಲ್ಲಿದ್ದ ಅಗ್ನಿಯು ತಮ್ಮ ನಿಜರೂಪಕ್ಕೆ ಬಂದರು. 

👉 ನಾವು ಇಂದ್ರಾಗ್ನಿಗಳು, ನಿನ್ನ ಧರ್ಮ ನಿಷ್ಟೆಯನ್ನು ಪರೀಕ್ಷಿಸುವ ಸಲುವಾಗಿ ಈ ರೂಪ ಧರಿಸಿ ಬಂದಿದ್ದೆವೆಂದು ಹೇಳಿ ಅವನನ್ನು ಹರಸಿ ಹಿಂತಿರುಗಿದರು.

No comments:

Post a Comment