Monday, 6 January 2020

ಪ್ರದಕ್ಷಿಣೆ ನಮಸ್ಕಾರ"ದ ಮಹತ್ವ

"ಪ್ರದಕ್ಷಿಣೆ ನಮಸ್ಕಾರ"ದ ಮಹತ್ವ

ಮಂದಿರಗಳಲ್ಲಿ,ಅಗ್ನಿಗೆ,ಅಶ್ವತ್ಥವೃಕ್ಷಕ್ಕೆ,ತುಳಸಿಗೆ ಸುತ್ತುವರಿದು ನಮಸ್ಕಾರ ಮಾಡುತ್ತೇವೆ.ಅದೇ ಪ್ರದಕ್ಷಿಣೆ ನಮಸ್ಕಾರ ಅಥವಾ ಪರಿಕ್ರಮ. ದೇವಸ್ಥಾನಕ್ಕೆ ಹೋಗಿ ದೇವರ ಪೂಜೆಯನ್ನು ಮಾಡಿ ಪ್ರದಕ್ಷಿಣೆ ನಮಸ್ಕಾರ ಸಲ್ಲಿಸುವುದು ಪದ್ಧತಿ.ಗರ್ಭಗುಡಿಯ ಸುತ್ತಲೂ ಪ್ರದಕ್ಷಿಣೆ ನಮಸ್ಕಾರ ಸಲ್ಲಿಸಬೇಕು.ದೇವರ ಅಭಿಮುಖವಾಗಿ ನಿಂತರೆ ಎಡಭಾಗ ಯಾವುದಾಗುವುದೋ ಅಲ್ಲಿಂದ ಪ್ರದಕ್ಷಿಣೆಯನ್ನು ಪ್ರಾರಂಭಿಸಬೇಕು.ಪ್ರದಕ್ಷಿಣೆಯನ್ನು ಮಾಡುವಾಗ ಮೌನದಿಂದ,ಸ್ತೋತ್ರಗಳನ್ನು ಪಠಿಸುತ್ತಾ,ಪ್ರಾರ್ಥಿಸುತ್ತಾ,ಏಕಾಗ್ರತೆಯಿಂದ ಪ್ರದಕ್ಷಿಣೆ ನಮಸ್ಕಾರವನ್ನು ಸಲ್ಲಿಸಬೇಕು.

ಒಂದು ವೃತ್ತಕ್ಕೆ ಒಂದು ಕೇಂದ್ರಬಿಂದುವಿರಲೇಬೇಕು. ಭಗವಂತನಿಂದ ರಚಿತವಾದ ಈ ಪ್ರಪಂಚ ಒಂದು ವೃತ್ತ(Circle). ಇಲ್ಲಿ ಕೇಂದ್ರಬಿಂದು (Center Point) ಪರಮಾತ್ಮ.ಕೇಂದ್ರಬಿಂದುವಿಲ್ಲದೇ ವೃತ್ತವಿಲ್ಲ.ಪರಮೇಶ್ವರನ ಅಸ್ತಿತ್ವವಿಲ್ಲದೇ ಲೋಕವಿಲ್ಲ. ಹಾಗಾಗಿ ಆ ಕೇಂದ್ರಬಿಂದುವಿನ ಸುತ್ತ ಭಕ್ತಿಯಿಂದ ಸುತ್ತಲೇಬೇಕು.ಹಾಗೇ ಸುತ್ತುವಾಗ ನಮ್ಮ ಕರ್ಮ ಹಾಗೂ ಚಿಂತನೆಗಳು ಕೇಂದ್ರಬಿಂದುವಾದ ಭಗವಂತನಲ್ಲಿ ಲೀನವಾಗುತ್ತವೆ.ಕೇಂದ್ರಬಿಂದು ಯಾವಾಗಲೂ ಸ್ಥಿರ.ಸೌರಮಂಡಲದಲ್ಲಿ ಸೂರ್ಯನೇ ಕೇಂದ್ರಬಿಂದು.ಆತನ ಸುತ್ತಲೂ ಉಳಿದ ಗ್ರಹಗಳು ಸುತ್ತುತ್ತಿರುತ್ತವೆ.ಹಾಗೇ ಪ್ರಪಂಚದಲ್ಲಿ ಭಗವಂತನೇ ಕೇಂದ್ರಬಿಂದು,ಹಾಗಾಗಿ ನಾವು ಭಗವಂತನ ಸುತ್ತ ಪ್ರದಕ್ಷಿಣೆಯನ್ನು ಮಾಡಬೇಕೆಂದು ತಿಳಿಯುತ್ತದೆ. ಕೇಂದ್ರಬಿಂದುವಿಲ್ಲದೇ ವೃತ್ತವನ್ನು ರಚಿಸಲು ಸಾಧ್ಯವಿಲ್ಲ.ಹಾಗೇ ನಮ್ಮ ಶರೀರದ ಕೇಂದ್ರಬಿಂದು ಮನಸ್ಸು.ಮನಸ್ಸಿನಲ್ಲಿ ಭಗವಂತನಿರದಿದ್ದರೆ ಶಾಂತಿ,ನೆಮ್ಮದಿ ದೊರಕುವುದಿಲ್ಲ.ಮನದಲ್ಲಿ ಭಗವಂತ ನೆಲೆಗೊಳ್ಳಲಿ ಎಂದು ಪ್ರದಕ್ಷಿಣೆ ನಮಸ್ಕಾರ ಮಾಡಬೇಕು.ವೃತ್ತದಲ್ಲಿರುವ ಪ್ರತಿಯೊಂದು ಬಿಂದುವೂ ಕೇಂದ್ರಬಿಂದುವಿಗೆ ಸರಿಸಮಾನವಾಗಿರುತ್ತದೆ.ಹಾಗೇ ನಾವೆಲ್ಲೇ ಇರಲಿ,ಏನನ್ನೇ ಮಾಡಲಿ ಅದು ಕೇಂದ್ರಬಿಂದುವಾದ ಭಗವಂತನಿಗೆ ಹತ್ತಿರವಾಗಿಯೇ ಇರುತ್ತದೆ.ಆತನ ದಯೆಯಿಲ್ಲದೇ ಏನನ್ನೂ ಸಾಧಿಸಲಾಗದು. ಹಾಗೇ ದೇವಾಲಯದ ಪರಿಸರ ಶಾಂತ ಹಾಗೂ ಸಕಾರಾತ್ಮಕ ಅಂಶಗಳಿಂದ ಕೂಡಿರುತ್ತದೆ.ಪ್ರದಕ್ಷಿಣೆಯ ಸಮಯದಲ್ಲಿ ಆ ಸಕಾರಾತ್ಮಕ ಶಕ್ತಿ ನಮ್ಮ ದೇಹವನ್ನು ಪ್ರವೇಶಿಸಿ ಶರೀರ ಚೈತನ್ಯಮಯವಾಗುತ್ತದೆ ಹಾಗೇ ಮಾನಸಿಕ ಶಾಂತಿಯೂ ಸಿಗುತ್ತದೆ.ಎಲ್ಲ ಜಂಜಾಟಗಳನ್ನು ಮರೆತು ಭಗವಂತನ ಸನ್ನಿಧಿಯಲ್ಲಿ ತುಸುಹೊತ್ತು ಕಳೆದರೆ ನವೋಲ್ಲಾಸ ಸಿಗುತ್ತದೆ.

ಸ್ಕಂದ ಪುರಾಣದ ಪ್ರಕಾರ ಮೊದಲ ಪ್ರದಕ್ಷಿಣೆಯಲ್ಲಿ ಮನದಿಂದ ಮಾಡಿದ ಪಾಪಗಳು ನಾಶವಾಗುತ್ತವೆ.ಎರಡನೇ ಪ್ರದಕ್ಷಿಣೆಯಲ್ಲಿ ಮಾತಿನಿಂದ ಮಾಡಿದ ಪಾಪಗಳು ದೂರವಾಗುತ್ತವೆ.ಮೂರನೇ ಪ್ರದಕ್ಷಿಣೆಯಲ್ಲಿ ದೇಹದಿಂದ ಮಾಡಿದಂತಹ ಪಾಪಗಳು ದೂರವಾಗುತ್ತವೆ.ಮಾನಸಿಕ,ವಾಚಿಕ,ದೈಹಿಕ ಪಾಪಗಳ ನಿವಾರಣೆಗಾಗಿ ಮೂರು ಪ್ರದಕ್ಷಿಣೆಗಳನ್ನು ಹಾಕುವ ಸಂಪ್ರದಾಯ ಬೆಳೆದುಬಂದಿದೆ.ಪುರಾಣಗಳಲ್ಲಿ ಗಣೇಶನಿಗೆ ಒಂದೇ ಪ್ರದಕ್ಷಿಣೆ,ಸೂರ್ಯನಿಗೆ ಎರಡು,ಈಶ್ವರನಿಗೆ ಮೂರು,ಶಕ್ತಿದೇವತೆಗಳಿಗೆ,ವಿಷ್ಣುವಿಗೆ ನಾಲ್ಕು,ಅಶ್ವತ್ಥವೃಕ್ಷಕ್ಕೆ ಏಳು ಪ್ರದಕ್ಷಿಣೆಗಳನ್ನು ಮಾಡಬೇಕೆಂದು ಹೇಳಲಾಗಿದೆ.

ಜಗತ್ತಿನ ಅಲೌಕಿಕ ಶಕ್ತಿಗೆ ನಮಸ್ಕರಿಸುವುದೇ ಪ್ರದಕ್ಷಿಣೆಯೆನಿಸುತ್ತದೆ. ಶಯನ ಪ್ರದಕ್ಷಿಣೆ ಹಾಗೂ ಆತ್ಮ ಪ್ರದಕ್ಷಿಣೆಯೂ ಸಹ ಪ್ರದಕ್ಷಿಣೆಯ ಭಾಗಗಳು.ಶಯನ ಪ್ರದಕ್ಷಿಣೆ ಅಂದರೆ ಮಲಗಿ ದೇವರಿಗೆ ಪ್ರದಕ್ಷಿಣೆಯನ್ನು ಹಾಕುವುದು ಇದಕ್ಕೆ ಉರುಳು ಸೇವೆ ಎನ್ನುತ್ತಾರೆ.ಆತ್ಮ ಪ್ರದಕ್ಷಿಣೆಯೆಂದರೆ ನಿಂತಲ್ಲೇ ಮೂರು ಪ್ರದಕ್ಷಿಣೆಯನ್ನು ಹಾಕಿ ದೇವರಿಗೆ ನಮಸ್ಕರಿಸುವುದು.

ಈ ಪ್ರಾರ್ಥನೆಯನ್ನು ಹೇಳುತ್ತಾ ಪ್ರದಕ್ಷಿಣೆ ಮಾಡಿದರೆ ಒಳ್ಳೆಯದು.

"ಯಾನಿ ಕಾನಿ ಚ ಪಾಪಾನಿ ಜನ್ಮಾಂತರ ಕೃತಾನಿ ಚ | ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣಂ ಪದೇ ಪದೇ ||"

(ಅರಿತೋ ಅರಿಯದೆಯೋ ಏನಾದರೂ ಪಾಪ ಮಾಡಿದ್ದರೆ,ಹಿಂದಿನ ಜನ್ಮಗಳಲ್ಲಿ ಪಾಪ ಮಾಡಿದ್ದರೆ,ಅಂತಹ ಪಾಪಗಳು ಪ್ರದಕ್ಷಿಣೆ ನಮಸ್ಕಾರದಿಂದ ನಾಶವಾಗುತ್ತವೆ.)
ಲೋಕಾಃ ಸಮಸ್ತಾಃ ಸುಖಿನೋ ಭವಂತು.

No comments:

Post a Comment