Monday, 6 January 2020

ಕೆಲವು ಸಂಧರ್ಭದಲ್ಲಿ ಮನುಷ್ಯ ಜೀವನದ ಅಸಂತೋಷಕ್ಕೆ ಕಾರಣ ಯಾವುದು

ಕೆಲವು ಸಂಧರ್ಭದಲ್ಲಿ ಮನುಷ್ಯ ಜೀವನದ ಅಸಂತೋಷಕ್ಕೆ ಕಾರಣ ಯಾವುದು?
ಎನ್ನುವ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದಾಗ, ಬಹುತೇಕ ಸಂದರ್ಭಗಳಲ್ಲಿ "ಸಮಾಜ ನಮ್ಮ ಬಗ್ಗೆ ಏನನ್ನುತ್ತದೋ, ನಮ್ಮ ಗೌರವಕ್ಕೆ ಎಲ್ಲಿ ಕುಂದು ಬರುತ್ತದೋ, ನಾವು ವಿಫ‌ಲರಾದಾಗ ಬೇರೆಯವರು ಏನು ಮಾತನಾಡುತ್ತಾರೋ' ಎನ್ನುವ ಭಯವೇ "ಅಸಂತೋಷಕ್ಕೆ' ಕಾರಣ ಎನ್ನುವ ಉತ್ತರ ದೊರಕುತ್ತದೆ. ಜನರು ನಮ್ಮ ಬಗ್ಗೆ ಏನು ಭಾವಿಸುತ್ತಾರೋ ಎನ್ನುವ ಸಂಗತಿ ನಮ್ಮ ತಲೆಕೊರೆಯಲಾರಂಭಿಸುತ್ತದೆ. ಯಾರು ನಮ್ಮ ಬಗ್ಗೆ ಏನು ಯೋಚಿಸುತ್ತಿದ್ದಾರೋ, ಅವರು ನಮ್ಮ ಬಗ್ಗೆ ಏನು ಮಾತನಾಡುತ್ತಿದ್ದಾರೋ ಎನ್ನುವುದನ್ನು ಊಹಿಸಿ ಕೊಂಡು ರಾತ್ರಿ ನಾವು ನಿದ್ದೆಗೆಡುತ್ತೇವೆ. ಅಂದರೆ, ನಮ್ಮ ಸ್ವಾತಂತ್ರ್ಯವನ್ನು ಜನರ "ತೀರ್ಪುಗಳಿಗೆ' ಸರೆಂಡರ್‌ ಮಾಡಿಸುತ್ತೇವೆ.ಸರಿಯಾಗಿ ಬೆನ್ನು ನೋಡಲಾಗದಿದ್ದರೂ ಬೆನ್ನ ಹಿಂದೆ ಮಾತಾಡುವವರ ಮಾತಿಗೆ ಚಿಂತಿಸುವುದು ಎಷ್ಟು ಸರಿ....? 

"ನಿಂದಕರಿರಬೇಕು
ಹಂದಿಯಿದ್ದರೆ ಕೇರಿ ಹೇಗ್ ಶುದ್ಧಿಯೋ ಹಾಗೆ....
ನಿಂದಕರಿರಬೇಕು
ಅಂದಂದು ಮಾಡಿದ ಪಾಪವೆಂಬ ಮಲ
ತಿಂದು ಹೋಗುವರಯ್ಯ ನಿಂದಕರು
ವಂದಿಸಿ ಸ್ತುತಿಸುವ ಜನರೆಲ್ಲರು ನಮ್ಮ 
ಪೊಂದಿದ ಪುಣ್ಯವನೊಯ್ಯುವರಯ್ಯ"

ಎಂಬ ಭಜನೆಯಲ್ಲಿ ಪುರಂದರದಾಸರು
ಬೆನ್ನ ಹಿಂದೆ ಮಾತಾಡುವವರ ವಿಷಯದಲ್ಲಿ 
ಅಮೋಘ ಸಂದೇಶವನ್ನು ನಮಗೆ ಕೊಟ್ಟಿದ್ದಾರೆ.

"ನಾವು ನಿಜಕ್ಕೂ ಯಡವಟ್ಟು ಮಾಡಿಕೊಂಡಾಗ, ತಪ್ಪು ಮಾಡಿದಾಗ ಮೋಸ ಹೋದಾಗ ಜನ ನಾವಂದು ಕೊಂಡಷ್ಟು ನಮ್ಮ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ, ನಮ್ಮ ಬಗ್ಗೆ ಕೇರ್‌ ಮಾಡುವುದಿಲ್ಲ' ಎನ್ನುವ ವಿಷಯ ಮೊದಲು ನಾವು ತಿಳಿಯಬೇಕು. ಅಂದರೆ, ನಾವು ಭಾವಿಸಿದ ಪ್ರಮಾಣದಲ್ಲಿ ನಮ್ಮ ವೈಯಕ್ತಿಕ ದುರಂತಗಳ ಬಗ್ಗೆ ಸಮಾಜ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ.ಕೆಲವೊಬ್ಬರು ನಮ್ಮತ್ತ ನೋಡಬಹುದು, ನಮ್ಮ ಮೂರ್ಖತನದ ಬಗ್ಗೆ ಬೇಸರಪಟ್ಟುಕೊಳ್ಳಬಹುದು, ಕುಹಕ ವಾಡಬಹುದು. ಆದರೆ ಕೆಲವೇ ಸಮಯದಲ್ಲಿ ಅವರು ತಮ್ಮ ಕಾಯಕದಲ್ಲಿ, ತಮ್ಮ ಜೀವನದಲ್ಲಿ ಬ್ಯುಸಿ ಆಗಿಬಿಡುತ್ತಾರೆ. ನಾವು ಚರ್ಚೆಯ ಕೇಂದ್ರಬಿಂದುವಾಗುವುದು ನಮ್ಮ ತಲೆಯಲ್ಲಿ ಮಾತ್ರ! ನಮಗೆ ಏನಾಗುತ್ತಿದೆ ಅಥವಾ ನಾವು ಏನು ಮಾಡುತ್ತಿದ್ದೇವೆ ಎನ್ನುವುದರ ಬಗ್ಗೆ ಬಹುತೇಕರು ಕೇರ್‌ ಮಾಡುವುದೇ ಇಲ್ಲ. ಈ ಜಗತ್ತಿನಲ್ಲಿ ನಾವು ಬದುಕಿದ್ದೇವೆ ಎಂಬ ಅರಿವೂ ಇಲ್ಲದ ಕೋಟ್ಯಂತರ ಜನರಿದ್ದಾರೆ. ಕೆಲವಮ್ಮೊ ನಾವು ಬದುಕಿದ್ದೆವು ಎಂದು ಕೂಡ ಅವರಿಗೆ ತಿಳಿಯುವುದಿಲ್ಲ. ಈಗ ನಿಮ್ಮ ಮೇಲೆ ಸಿಟ್ಟಾದವರು ಅಥವಾ ನಿಮ್ಮ ಬಗ್ಗೆ ನಿರಾಶೆಗೊಂಡಿರುವವರು ಕೆಲವೇ ಸಮಯದಲ್ಲಿ ಎಲ್ಲವನ್ನೂ ಮರೆತು ತಮ್ಮ ಜೀವನದಲ್ಲಿ ಮುಂದೆ ಸಾಗಿರುತ್ತಾರೆ. ನಮ್ಮ ನಾಚಿಕೆ‌/ತಪ್ಪುಗಳೂ ಕೂಡ ಕೆಲವೇ ಸಮಯದಲ್ಲಿ ವಿಶ್ವದ ಸಾಮೂಹಿಕ ವಿಸ್ಮ್ರತಿಗೆ ಅನುಗುಣವಾಗಿ ಕಳೆದುಹೋಗಿಬಿಡುತ್ತವೆ.
ಜಗತ್ತು ನಮ್ಮನ್ನು ನೋಡಲಿ ಎಂಬ ಆಸೆಯಿಂದ ಪರ್ವತ ಏರುವ ಬದಲು ನಾವು ಜಗತ್ತನ್ನು ನೋಡುವ ಇಚ್ಛೆಯಿಂದ ಮೇಲೇರಬೇಕು.
: ಪ್ರಶಾಂತಭಟ್ ಕೋಟೇಶ್ವರ

No comments:

Post a Comment