*ಸಪ್ತರ್ಷಿಗಳು*
ಬ್ರಹ್ಮನ ಮಾನಸಪುತ್ರರಾದ ಏಳು ಮಂದಿ ಋಷಿಗಳನ್ನು ಸಪ್ತರ್ಷಿಗಳು ಎನ್ನುತ್ತಾರೆ.
೧೪ ಮನ್ವಂತರಗಳಲ್ಲಿ ಪ್ರತೀ ಮನ್ವಂತರಕ್ಕೂ ಸಪ್ತರ್ಷಿಗಳೂ ಬದಲಾಗುತ್ತಾರೆ. ಈಗ ನಡೆಯುತ್ತಿರುವ ಏಳನೇ ವೈವಸ್ವತ ಮನ್ವಂತರದಲ್ಲಿ,
"ಅತ್ರಿಶ್ಚೈವ ವಸಿಷ್ಠಶ್ಚ ಕಾಶ್ಯಪಶ್ಚ ಮಹಾನೃಷಿಃ |
ಗೌತಮಶ್ಚ ಭರದ್ವಾಜೋ ವಿಶ್ವಾಮಿತ್ರೋSಥ ಕೌಶಿಕಃ ||
ತಥೈವ ಪುತ್ರೋ ಭಗವಾನ್ ಶ್ರಚೋಂಕಸ್ಯ ಮಹಾತ್ಮನಃ|
ಆಂಗೀರಸಸ್ತು ಸಪ್ತೈತೇ ಮುನಯೋSತ್ರ ತಥಾಂತರೇ ||
ಅಥವಾ:-ಕಶ್ಯಪೋsತ್ರಿಃಭರದ್ವಾಜೋ ವಿಶ್ವಾಮಿತ್ರೋsಥ ಗೌತಮಃ। ಜಮದಗ್ನಿವ೯ಸಿಷ್ಠಶ್ಚ ಸಪ್ತೈತೇ ಋಷಯಃ ಸ್ಮೃತಾಃ।।
ಮಹಾನ್ ಋಷಿಗಳಾದ ಅತ್ರಿ, ವಸಿಷ್ಠ, ಕಶ್ಯಪ, ಗೌತಮ, ಭರದ್ವಾಜ, ವಿಶ್ವಾಮಿತ್ರ, ಆಂಗೀರಸರೆಂಬ ಸಪ್ತರ್ಷಿಗಳು ವೈವಸ್ವತ ಮನ್ವಂತರದ ಸಪ್ತರ್ಷಿಗಳು.
*ಅತ್ರಿ* : - ಬ್ರಹ್ಮಮಾನಸ ಪುತ್ರ, ಕರ್ದಮ ಋಷಿಯ ಮಗಳಾದ ಅನುಸೂಯೆಯನ್ನು ಮದುವೆಯಾಗಿ ದತ್ತಾತ್ರೇಯ, ದೂರ್ವಾಸಮುನಿ, ಚಂದ್ರ, ಈ ಮೂರು ಮಕ್ಕಳನ್ನು ಪಡೆದ. ಇವನು ಗೋತ್ರಪ್ರವರ್ತಕ.
*ವಸಿಷ್ಠ* : - ಇವನೂ ಬ್ರಹ್ಮಮಾನಸಪುತ್ರರಲ್ಲಿ ಒಬ್ಬ. ಸೂರ್ಯವಂಶದ ದೊರೆಗಳಿಗೆ ಪುರೋಹಿತ. ಈತನು ಕರ್ದಮಋಷಿಯ ಏಳನೇ ಮಗಳಾದ ಊರ್ಜಾದೇವಿಯನ್ನು ಮದುವೆಯಾಗಿ ಚಿತ್ರಕೇತು, ಸುರೋಚಿ, ವಿರಜ, ಮಿತ್ರ, ಉಲ್ಬಣ, ವಸುಭೃಧ್ಯಾನ, ದ್ಯುಮಂತರೆಂಬ ಏಳು ಮಕ್ಕಳನ್ನು ಪಡೆದ. ಮತ್ತೂ ಇದೇ ಕರ್ದಮಮುನಿಯಿಂದ ಸ್ವಾಯಂಭುವ ಮನ್ವಂತರ ಯುಗದಲ್ಲಿ ದೇವಹೂತಿ ಎಂಬಾಕೆಯಲ್ಲಿ ಜನಿಸಿದ ಅರುಂಧತಿಯನ್ನು ಮದುವೆಯಾಗಿ ಶಕ್ತಿಮಹರ್ಷಿ ಎಂಬ ಮಗನನ್ನು ಪಡೆದನು. ಇವನು ಗೋತ್ರ ಪ್ರವರ್ತಕ.
*ಕಶ್ಯಪ*: - ಇವನು ಬ್ರಹ್ಮಮಾನಸಪುತ್ರರಾದ ಮರೀಚಿ ಮಹರ್ಷಿಯ ಪುತ್ರ, ಗೋತ್ರಪ್ರವರ್ತಕ. ಕರ್ದಮಪುತ್ರಿಯಾದ ಕಲೆಯು ಇವನ ತಾಯಿ. ಈತನು ದಕ್ಷಪ್ರಜಾಪತಿಯ ಮಕ್ಕಳಾದ ಅದಿತಿ, ದಿತಿ, ಕದ್ರು ಮೊದಲಾದ ೧೩ ಕನ್ಯೆಯರನ್ನು ಮದುವೆಯಾಗಿ ಅನೇಕ ಮಂದಿ ಮಕ್ಕಳನ್ನು ಪಡೆದನು. ದಿತಿಯಲ್ಲಿ ದೈತ್ಯರೂ, ಅದಿತಿಯಲ್ಲಿ ದೇವತೆಗಳು, ಮತ್ತೂ ಇತರೇ ೧೧ ಮಂದಿಯಲ್ಲಿ ಸಿದ್ಧರು, ಗಂಧರ್ವರು, ಅಪ್ಸರಸ್ತ್ರೀಯರು, ಯಕ್ಷರು, ಲತಾವೃಕ್ಷಗಳು, ದುಷ್ಟಮೃಗಗಳು, ಅಶ್ವ, ಅಶ್ವತರ, ಗಾರ್ಧಭ, ಶ್ಯೇನ, ಗೃಧ್ರ, ಗೋವುಗಳು, ಅರುಣ, ಗರುಡ ಮತ್ತೂ ಕದ್ರುವಿನಿಂದ ಸರ್ಪಗಳು ಕಶ್ಯಪನ ಸಂತಾನಗಳು.
ದಕ್ಷಪ್ರಜಾಪತಿಯ ೧೩ ಕನ್ಯೆಯರು,
"ಪ್ರಜಾಜ್ಞಿರೇ ಮಹಾಭಾಗಾ ದಕ್ಷಕನ್ಯಾಸ್ತ್ರಯೋದಶ |
ಅದಿತಿರ್ದಿತಿಃ ದನುಃ ಕಾಲಾ ದನಾಯುಃ ಸಿಂಹಿಕಾ ತಥಾ|
ಕ್ರೋಧಾ ಪ್ರಾಧಾ ಚ ವಿಶ್ವಾ ಚ ವನಿತಾ ಕಪಿಲಾ ಮುನಿಃ |
ಕದ್ರುಶ್ಚ ಮುಜವ್ಯಾಘ್ರ ದಕ್ಷಕನ್ಯೈವ ಭಾರತ ||
ಭೂಮಿಯಲ್ಲಿ ಪ್ರಜೆಗಳ ಉತ್ಪತ್ತಿಗೆ ಕಾರಣರಾದ ದಕ್ಷಪ್ರಜಾಪತಿಯ ಹದಿಮೂರು ಕನ್ಯೆಯರು ಅದಿತಿ, ದಿತಿ, ದನು, ಕಾಲಾ, ದನಾಯು, ಸಿಂಹಿಕಾ, ಕ್ರೋಧಾ, ಪ್ರಾಧಾ, ವಿಶ್ವಾ, ವನಿತಾ, ಕಪಿಲಾಮುನಿ, ಕದ್ರು, ಮನುಜವ್ಯಾಘ್ರ ಇವರು ಭರತವರ್ಷದ ದಕ್ಷಕನ್ಯೆಯರು.
*ಗೌತಮ*: - ಉಚಥ್ಯನ ಮಗನಾದ ದೀರ್ಘತಮ ಮುನಿಯ ಮಗ,ತಾಯಿ ಪ್ರದ್ವೇಷಿಣಿ. ಗೋತ್ರಪ್ರವರ್ತಕ. ಅಹಲ್ಯೆಯ ಪತಿ. ಜನಕಮಹಾರಾಜನ ಪುರೋಹಿತನಾದ ಶತಾನಂದ ಈತನ ಮಗ.
*ಭರದ್ವಾಜ*: - ಗೋತ್ರಪ್ರವರ್ತಕ. ಉಚಥ್ಯ ಮುನಿಯ ಪತ್ನಿಯಾದ ಮಮತೆಯೆಂಬವಳಲ್ಲಿ ಬ್ರಹಸ್ಪತಾಚಾರ್ಯನಿಂದ ಜನಿಸಿದವ. "ದ್ವಾಭ್ಯಾಂ ಜಾತಃ ದ್ವಾಜಃ | ಈರ್ವರಿಂದ ಜನಿಸಲ್ಪಟ್ಟವನಾದ್ದರಿಂದ ದ್ವಾಜನಾದನು. (ಉಚಥ್ಯನ ಕ್ಷೇತ್ರದಲ್ಲಿ(ಮಮತೆಯಲ್ಲಿ) ಬ್ರಹಸ್ಪತಾಚಾರ್ಯನಿಂದ ಜನಿಸಿದ್ದರಿಂದ) ಅಕ್ರಮ ಸಂತಾನವೆಂದು ಹೆದರಿ ಮಮತೆಯು ಮಗುವನ್ನು ಬಿಟ್ಟುಹೋಗುವಾಗ ಬ್ರಹಸ್ಪತಿಯು ಅವಳನ್ನು ಕರೆದು "ಭರ" (ಪೋಷಿಸು) ಎಂದನು. ಅವನ ಮಾತನ್ನು ಒಪ್ಪದೇ ಮಮತೆಯು "ತ್ವಮಿಮಂ ಭರ" (ಮಹೋದಯರೇ ನೀವೇ ಪೋಷಿಸಿ) ಎನ್ನುತ್ತಾಳೆ. ಆ ಕಾರಣದಿಂದಾಗಿ "ಭರದ್ವಾಜ" ಎಂಬ ಹೆಸರು ಬಂತು. ಇಬ್ಬರೂ ಮಗುವನ್ನು ತ್ಯಜಿಸಲು ಮರುತ್ತರೆಂಬ ದೇವತೆಗಳು ಇವರನ್ನು ಪೋಷಿಸುತ್ತಾರೆ.
*ವಿಶ್ವಾಮಿತ್ರ*: - ಗೋತ್ರಪ್ರವರ್ತಕ. ಚಂದ್ರವಂಶದ ಕುಶಿಕರಾಜನ ಮಗನಾದ ಗಾಧಿರಾಜನ ಮಗ ಪೂರ್ವನಾಮ ವಿಶ್ವರಥ,(ಕೌಶಿಕ) ವಸಿಷ್ಠರ ಆಶ್ರಮದಿಂದ ನಂದಿನಿಯನ್ನು ಬಲಾತ್ಕಾರವಾಗಿ ತರುವಾಗ ವಸಿಷ್ಠರ ಮಂತ್ರಸಿದ್ಧಿ ಪ್ರಭಾವದಿಂದಾಗಿ ಸೋಲಲು, "ದಿಗ್ಬಲಂ ಕ್ಷತ್ರಿಯ ಬಲಂ ಬ್ರಹ್ಮತೇಜೋ ಬಲಂ ಬಲಂ" ಬ್ರಹ್ಮತೇಜಸ್ಸಿನ ಬಲದ ಮುಂದೆ , ಕ್ಷಾತ್ರಬಲಕ್ಕೆ ಧಿಕ್ಕಾರವಿರಲಿ ಎಂದು, ವಸಿಷ್ಟನಂತೇ ಬ್ರಹ್ಮರ್ಷಿಯಾಗುತ್ತೇನೆಂದು ಫಣತೊಟ್ಟು ತಪಸ್ಸನ್ನಾಚರಿಸಿ ಬ್ರಹ್ಮರ್ಷಿಯಾಗುತ್ತಾನೆ. ಅರಸನಾಗಿದ್ದಾಗ ಈತನ ಹೆಂಡಂದಿರು "ಹೈಮವತಿ, ಶಾಲಾವತಿ, ದೃಷದ್ವತಿ, ರೇಣು, ಮಾಧವಿ, ಯರಲ್ಲಿ ಮದುಚ್ಛಂದನೇ ಮೊದಲಾದ ಅನೇಕಮಂದಿ ಪುತ್ರರಿದ್ದರು. ಕತಿ, ಪಾಣಿನ, ಯಾಜ್ಞವಲ್ಕ್ಯ, ಸಾಂಕೃತಿ, ಗಾಲವ, ಮುದ್ಗಲ, ದೇವಲ, ಅಷ್ಟಕ, ಶುನಶ್ಯೇಪ (ದೈವರಾತ) ಮೊದಲಾದ ಅನೇಕಮಂದಿ ಮಕ್ಕಳಿದ್ದರು.
*ಅಂಗಿರಸ* : - ಇವನೂ ಗೋತ್ರಪ್ರವರ್ತಕ. ಬ್ರಹ್ಮಮಾನಸಪುತ್ರರಲ್ಲಿ ಒಬ್ಬ. ವೈವಸ್ವತಮನ್ವಂತರದಲ್ಲಿ ವರುಣ ಯಜ್ಞ ಮಾಡುತ್ತಿರುವಾಗ ಯಜ್ಞಕುಂಡದಿಂದ ಜನಿಸಿದ. ಈತನು ವಸುಧೆಯೆಂಬವಳನ್ನು ಮದುವೆಯಾಗಿ ಬೃಹತ್ಕೀಥಿ೯ ಬೃಹಜ್ಯೋತಿ, ಬೃಹದ್ಬ್ರಹ್ಮ, ಬೃಹನ್ಮನ, ಬೃಹನ್ಮಂತ್ರ, ಬೃಹದ್ಭಾಸ ಎಂಬ ಆರು ಮಂದಿ ಪುತ್ರರನ್ನೂ, ಭಾನುಮತಿ, ಅರ್ಚಿಷ್ಮತಿ, ಮಹಿಷ್ಮತಿ, ಮಹಾಮತಿಗಳೆಂಬ ನಾಲ್ಕು ಪುತ್ರಿಯರನ್ನೂ ಪಡೆದ. ಈತನು ಕರ್ದಮ ಬ್ರಹ್ಮನ ಮಗಳಾದ ಶ್ರದ್ಧೆಯೆಂಬವಳನ್ನು ಮದುವೆಯಾಗಿ ಉಚಥ್ಯ, ಬೃಹಸ್ಪತಿ, ಸಂವರ್ತ, ವಯಸ್ಯರೆಂಬ ನಾಲ್ಕು ಪುತ್ರರನ್ನೂ, ವಾಲಿ,ಕುಹು, ರಾಕಾ, ಅನುಮತಿಗಳೆಂಬ ನಾಲ್ಕು ಪುತ್ರಿಯರನ್ನೂ ಪಡೆದನು. ಸ್ವಧೆಯೆಂಬ ಹೆಂಡತಿಯಲ್ಲಿ ಪಿತೃದೇವತೆಗಳನ್ನೂ, ಸತಿಯೆಂಬ ಹೆಂಡತಿಯಲ್ಲಿ ಅಥರ್ವಾಂಗಿರಸರನ್ನು ಪಡೆದನು.
ಕೃಪೆ:-
ಇವಿಷ್ಟು ವೈವಸ್ವತ ಮನ್ವಂತರದ ಸಪ್ತರ್ಷಿಗಳ ವಿವರಣೆ. (ಫೇಸ್ಬುಕ್ ನಿಂದ)
No comments:
Post a Comment