Wednesday, 24 June 2020

ತೀರ್ಥಯಾತ್ರೆಯ ಫಲ

ತೀರ್ಥಯಾತ್ರೆಯ ಫಲ
 
 ಒಮ್ಮೆ ಗಂಗಾನದಿಗೆ ಪುಷ್ಕರವು ಬಂದಾಗ ಅದೆಷ್ಟೋ ಜನ ಭಕ್ತರು ನದಿಯಲ್ಲಿ ಸ್ನಾನ ಮಾಡಿ ಕಾಶಿ ವಿಶ್ವನಾಥನ ದರ್ಶನವನ್ನು ಪಡೆದುಕೊಂಡರು. ಹಲವರು ಪುಷ್ಕರಕಾಲವು ಮುಗಿಯುವವರೆಗೆ ವಾರಣಾಸಿಯಲ್ಲೇ ಇದ್ದು ನದಿಯಲ್ಲಿ ಸ್ನಾನ ಮಾಡುತ್ತಾ ಪ್ರತಿನಿತ್ಯ ವಿಶ್ವನಾಥನ ದರ್ಶನವನ್ನು ಪಡೆದು ಪಾವನರಾದರು. ಪುಷ್ಕರವು ಮುಗಿದ ನಂತರ ಒಂದು ದಿನ ರಾತ್ರಿ ಮಲಗಿಕೊಂಡಿದ್ದಾಗ ಒಬ್ಬ ಪೂಜಾರಿಗೆ ಒಂದು ಕನಸು ಬಿತ್ತು.  ಆ ಕನಸಿನಲ್ಲಿ ಇಬ್ಬರು ದೊಡ್ಡ ವ್ಯಕ್ತಿಗಳು ಮಾತನಾಡಿಕೊಳ್ಳುತ್ತಿರುವುದನ್ನು ಅವನು ಕಂಡ. ಮೊದಲನೆಯವನು, "ಪುಷ್ಕರಕ್ಕೆ ಎಷ್ಟು ಜನ ಕಾಶಿಗೆ ಬಂದಿರಬಹುದು" ಎಂದು ಕೇಳಿದ. ಅದಕ್ಕೆ ಉತ್ತರವಾಗಿ ಎರಡನೆಯವನು, "ಆರು ಲಕ್ಷಕ್ಕೂ ಹೆಚ್ಚು ಜನ ಬಂದಿರಬಹುದು. ಆದರೆ ಯಾರ ಯಾತ್ರೆಯೂ ಕಂಚಿ ಪಟ್ಟಣದ ವೀರಯ್ಯ ಎನ್ನುವ ಚರ್ಮಕಾರನದಷ್ಟು ಶ್ರೇಷ್ಠದಾದುದಲ್ಲ" ಎಂದು ಹೇಳಿದನು.
 ಪೂಜಾರಿಗೆ ಥಟ್ಟನೇ ಎಚ್ಚರವಾಯಿತು. ಏನು ವೀರಯ್ಯ ಎನ್ನುವ ಚರ್ಮಕಾರನು ಕಾಶಿಗೆ ಬಂದಿದ್ದನೆ? ಚಪ್ಪಲಿಗಳನ್ನು ಹೊಲೆದು ಜೀವಿಸುವವರಾರೂ ಇಲ್ಲಿಗೆ ಬಂದಂತೆ ಕಾಣಲಿಲ್ಲವಲ್ಲ. ಅಂತಹ ಮಹಾನ್ ಭಕ್ತನಾಗಿದ್ದರೆ ಅವನ ಕುರಿತು ನನಗೆ ತಿಳಿಯದೇ ಇರುತ್ತದೆಯೇ? ಇಷ್ಟು ದಿನಗಳಲ್ಲಿ ಯಾವಾಗಲಾದರೂ ಬಂದು ಹೋಗಿರಬಹುದೇ? ಹೀಗೆ ಎಷ್ಟು ಆಲೋಚಿಸಿದರೂ ಆ ಪೂಜಾರಿಗೆ ತನ್ನ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ಅವನ ಮನಸ್ಸಿಗೆ ಸಮಾಧಾನವುಂಟಾಗಲಿಲ್ಲ. ಆದ್ದರಿಂದ ಹೇಗಾದರೂ ಮಾಡಿ ಆ ವೀರಯ್ಯ ಎನ್ನುವ ಚರ್ಮಕಾರನನ್ನು ಭೇಟಿಯಾಗಲೇ ಬೇಕೆಂದು ಅವನು ನಿರ್ಧರಿಸಿದ. 
ಮನಸ್ಸಿನಲ್ಲಿ ಆ ಆಲೋಚನೆ ಬಂದದ್ದೇ ತಡ ಆ ಪೂಜಾರಿ ಕಾಶಿಯಿಂದ ಪಯಣವನ್ನಾನರಂಭಿಸಿ ಕೆಲವು ದಿನಗಳಲ್ಲಿಯೇ ಕಂಚಿ ಪಟ್ಟಣವನ್ನು ಸೇರಿದ. ಅದು ಹೇಗೋ ಕಷ್ಟಪಟ್ಟು ವೀರಯ್ಯನ ವಿವರಗಳನ್ನು ತಿಳಿದುಕೊಂಡ ಪೂಜಾರಿ ನೇರವಾಗಿ ಅವನ ಮನೆಯ ಬಾಗಿಲಿಗೇ ಹೋದ. ತನ್ನ ಕುತೂಹಲವನ್ನು ಹತ್ತಿಕ್ಕಿಕೊಳ್ಳಲಾಗದೇ ಕಾಶಿ ಯಾತ್ರೆಯ ವಿವರಗಳನ್ನು ತನಗೆ ತಿಳಿಸುವಂತೆ ಪೂಜಾರಿಯು ವೀರಯ್ಯನನ್ನು ಕೇಳಿದ. ಪೂಜಾರಿಯ ಮಾತುಗಳನ್ನು ಕೇಳಿ ವೀರಯ್ಯನಿಗೆ ಆಶ್ಚರ್ಯವಾಯಿತು, "ಸ್ವಾಮಿ ಅಸಲಿಗೆ ನಾನು ಕಾಶಿ ಯಾತ್ರೆಯನ್ನೇ ಕೈಗೊಳ್ಳಲಿಲ್ಲ, ಇನ್ನು ಅದರ ವಿವರಗಳನ್ನು ಹೇಗೆ ಹೇಳಲಿ?" ಎಂದನು. ಆಗ ಪೂಜಾರಿ ತನ್ನ ಸ್ವಪ್ನ ವೃತ್ತಾಂತವನ್ನು ಹೇಳಿದಾಗ ವೀರಯ್ಯನು ಆನಂದಪರವಶನಾಗಿ, "ಕಳೆದ ಇಪ್ಪತ್ತು ವರ್ಷಗಳಿಂದ ಚಪ್ಪಲಿಗಳನ್ನು ಹೊಲೆದು ಗಳಿಸಿದ ಹಣದಲ್ಲಿ  ಸ್ವಲ್ಪ ಹಣವನ್ನು ಉಳಿಸಿಟ್ಟುಕೊಂಡಿದ್ದೆ. ಹಾಗೆ ಕೂಡಿಟ್ಟ ಹಣದಿಂದ ಈ ವರ್ಷ ಗಂಗಾನದಿ ಪುಷ್ಕರ ಸಮಯದಲ್ಲಿ ಕಾಶಿ ವಿಶ್ವೇಶ್ವರನನ್ನು ದರ್ಶನ ಮಾಡಬೇಕೆಂದುಕೊಂಡಿದ್ದೆ. ಆದರೆ, ಒಂದು ದಿನ ಪಕ್ಕದ ಮನೆಯಿಂದ ಬಂದ ಅಡುಗೆಯ ಪರಿಮಳ ನನ್ನ ಚಿಕ್ಕ ಮಗಳನ್ನು ಆಕರ್ಷಿಸಿತು. ಆಕೆ ಅವರು ಮಾಡಿದ ತಿನಿಸು ತನಗೆ ಬೇಕೆಂದು ಹಠಹಿಡಿದಳು. ಅವಳನ್ನು ಸಮಾಧಾನ ಪಡಿಸಲು ಪಕ್ಕದ ಮನೆಗೆ ಹೋಗಿ ಅವರು ಮಾಡಿದ ಪದಾರ್ಥವನ್ನು ಸ್ವಲ್ಪ ಕೊಡುವಂತೆ ಬೇಡಿಕೊಂಡೆ. ಆ ಮನೆಯವರು ತಾವು ಒಂದು ವಾರದಿಂದ ಆಹಾರವಿಲ್ಲದೆ ಹಸಿವೆಯಿಂದ ಬಳಲುತ್ತಿದ್ದೇವೆಂದೂ, ಗತ್ಯಂತರವಿಲ್ಲದೆ ಆಹಾರಕ್ಕಾಗಿ ಒಂದು ಸತ್ತ ಕತ್ತೆಯ ಮಾಂಸವನ್ನು ಬೇಯಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿದರು. ಅದನ್ನು ಕೇಳಿ ನನಗೆ ಹೃದಯ ಹಿಂಡಿದಂತಾಯಿತು. ನಾನು ಕಾಶಿಯಾತ್ರೆಗಾಗಿ ಕೂಡಿಸಿಟ್ಟುಕೊಂಡಿದ್ದ ಹಣವನ್ನು ಅವರಿಗೆ ಅನ್ನ ಮತ್ತು ವಸ್ತ್ರಗಳಿಗಾಗಿ ಉಪಯೋಗಿಸಿಕೊಳ್ಳಲು ಕೊಟ್ಟುಬಿಟ್ಟೆ. ಹಾಗಾಗಿ ನನಗೆ ಕಾಶಿಯಾತ್ರೆ ಮಾಡಲಾಗಲಿಲ್ಲ. ಮತ್ತೊಮ್ಮೆ ಹಾಗೆ ಧನವನ್ನು ಕೂಡಿಟ್ಟುಕೊಂಡು ಯಾತ್ರೆ ಮಾಡಲಾಗದೆಂದು ಭಯಪಟ್ಟಿದ್ದೆ. ಆದರೆ  ಭಗವಂತನ ಕೃಪಾಕಟಾಕ್ಷವು ನನಗೆ ಲಭಿಸಿದೆ ಎಂದು ನೀವು ಹೇಳಿದ ಮೇಲೆ ಅದಕ್ಕಿಂತ ಬೇರೆ ಸೌಭಾಗ್ಯ ಬೇಕೆ?" ಎಂದು ಹೇಳಿ ಆ ಪೂಜಾರಿಯ ಕಾಲಿಗೆ ಸಾಷ್ಟಾಂಗವೆರಗಿದನು. ವಿಷಯವನ್ನು ತಿಳಿದುಕೊಂಡ ಪೂಜಾರಿ ಚರ್ಮಕಾರ ವೀರಯ್ಯನ ತ್ಯಾಗ ಗುಣಕ್ಕೆ ಮಾರುಹೋದನು. 
ಈ ಕತೆಯ ಸಾರವನ್ನು ತಿಳಿದುಕೊಂಡು ಎಲ್ಲರೂ ಇದನ್ನು ಆಚರಣೆಯಲ್ಲಿಡುವ ಪ್ರಯತ್ನ ಮಾಡಿದರೆ ಎಷ್ಟು ಚೆನ್ನಾಗಿರುತ್ತದೆಯಲ್ಲವೇ? ಈ ಕಥೆ ನಡೆದ ಕಾಲಮಾನಕ್ಕಿಂತ ಈಗ ತೀರ್ಥಯಾತ್ರೆ ಮಾಡುವುದು ಬಹಳ ಸುಲಭವಾಗಿದೆ. ಇತ್ತೀಚೆಗೆ ಕಾಲು ಕೆಳಗಿಡದೆ ಕಾರುಗಳಲ್ಲಿ, ರೈಲುಗಳಲ್ಲಿ, ವಿಮಾನಗಳಲ್ಲಿ ಆರಾಮವಾಗಿ ಕುಳಿತು ಹೋಗುವ ವ್ಯವಸ್ಥೆ ಇರುವುದರಿಂದ ಎಲ್ಲರೂ ಯಾತ್ರೆಗಳನ್ನು ಹೆಚ್ಚಾಗಿ ಕೈಗೊಳ್ಳುತ್ತಿದ್ದಾರೆ. ಆದರೆ ಒಂದು ಯಾತ್ರೆಗಾಗುವ ಖರ್ಚನ್ನಾದರೂ ಒಬ್ಬ ಬಡ ಕುಟುಂಬಕ್ಕೆ ಸಹಾಯ ಮಾಡುವುದಕ್ಕಾಗಲಿ ಅಥವಾ ಒಂದಿಬ್ಬರು ಅನಾಥ ಬಾಲಕರ ಓದಿಗಾಗಿ ದಾನವಾಗಿ ಕೊಟ್ಟರೆ ಎಷ್ಟೋ ಒಳಿತಾಗುತ್ತದೆ. ಏಕೆಂದರೆ, ಮಾನವ ಸೇವೆಯೇ ಮಾಧವ ಸೇವೆ ಎಂದು ನಂಬುವ ಸಂಸ್ಕೃತಿ ನಮ್ಮದು. 
ಇನ್ನೊಂದು ವಿಷಯವನ್ನೂ ಸಹ ನಾವು ಗಮನಿಸಬೇಕು. ಸಾಮಾನ್ಯವಾಗಿ ಯಾತ್ರೆಯ ಸಮಯದಲ್ಲಿ ನಿತ್ಯಕೃತ್ಯಗಳಾದ ಸ್ನಾನ, ಪೂಜೆ, ಸಂಧ್ಯಾದಿಗಳನ್ನು ಸಮಯಕ್ಕೆ ಸರಿಯಾಗಿ ಮಾಡಲು ಅನುಕೂಲವಾಗುವುದಿಲ್ಲ. ಆದ್ದರಿಂದ ತೀರ್ಥಯಾತ್ರೆಗಳ ಸಂಖ್ಯೆಯನ್ನು ಪರಿಮಿತಗೊಳಿಸಿಕೊಳ್ಳುವುದೊಳಿತು. 
ತೀರ್ಥಯಾತ್ರೆಯಲ್ಲಿ ಎಲ್ಲಕ್ಕಿಂತಲೂ ಮುಖ್ಯವಾದದು ಶ್ರದ್ಧಾ ಭಕ್ತಿಗಳು. ದೊಡ್ಡಸ್ತಿಕೆಯನ್ನು ತೋರಿಸಲೋ, ಸುಮ್ಮನೆ ಕಾಲಕ್ಷೇಪಕ್ಕೋ ಅಥವಾ ಎಲ್ಲರೊಂದಿಗೆ ಸೇರಿ ತಿರುಗಬಹುದೆನ್ನುವ ಆಸೆಯಿಂದಲೋ ಕೈಗೊಳ್ಳುವ ಯಾತ್ರೆಗಳು ಫಲವನ್ನು ಕೊಡುವುದಿಲ್ಲ. " "ಭಕ್ತಿ ಶಿವನ ಮೇಲೆ ಚಿತ್ತ ಚಪ್ಪಲಿ ಮೇಲೆ" ಎನ್ನುವ ಗಾದೆ ಮಾತು ಸುಮ್ಮನೇ ಹುಟ್ಟಿಕೊಂಡಿಲ್ಲ. ಭಕ್ತಿಯಿಂದ ತೀರ್ಥಯಾತ್ರೆ ಮಾಡುವುದು, ಕರುಣೆಯಿಂದ ಇತರರಿಗೆ ಸಹಾಯ ಮಾಡುವುದು, ಭಗವಂತನು ಸರ್ವಾಂತರಯಾಮಿ ಎನ್ನುವ ನಂಬಿಕೆಗಳು ಮೋಕ್ಷದಾಯಕವಾಗಿವೆ. 

ಕೃಪೆ : what's app ಯಲ್ಲಿ ಬಂದಿದ್ದು 
ಇದನ್ನು ಬರೆದವರಿಗೆ 🙏🙏🙏🙏

ಹಿಂದಿನ ಕಥೆಗಳಿಗಾಗಿ  page ಹೋಗಿ ನೋಡಿ 👇
https://www.facebook.com/jnanaprachar/  

👉 page like ಮಾಡಿ 👍
 page like ಮಾಡಿದ್ರೆ ಡೈಲಿ ನಿಮ್ಮ fb ಅಲ್ಲಿ ಬರುತ್ತೆ, 

👉 👥👨‍👩‍👧‍👦 ನೀವು facebook ಅಲ್ಲಿ ಬೇರೆ ಆದ್ಯಾತ್ಮ ಗ್ರೂಪಗಳಲ್ಲಿ ಇದ್ರೆ ಆ ಗ್ರೂಪ್ ಗೆ ಈ ವಿಷಯ share ಮಾಡಿ, 

 "ನಾವು ತಿಳಿದುಕೊಂಡಿದ್ದನ್ನ ಬೇರೆಯವರಿಗೆ ತಿಳಿಸುವುದು ಒಂದು ದೇವರ ಸೇವೆ ]

No comments:

Post a Comment