Wednesday, 24 June 2020

ಉಪವಾಸ

ಉಪವಾಸ
----------------
ಉಪವಾಸ ಎಂದರೆ ಉದರ ಶೋಷಣೆ ಅಲ್ಲ.ಉಪವಾಸದ ಬಗ್ಗೆ  ಕೃಷ್ಣನ ನಿರೂಪಣೆ ಈ ರೀತಿ ಇದೆ.
            ಒಮ್ಮೆ ದೂರ್ವಾಸರು ಯಮುನಾನದಿಯ ಮತ್ತೊಂದು ತೀರದಲ್ಲಿ ಬಿಡಾರ ಹೂಡಿದ್ದರು. ಅಂದು ಏಕಾದಶಿಯ ವ್ರತಾಚರಣೆ ಮಾಡುತ್ತಿದ್ದರು. ಈ ವಿಷಯ ಅರಿತ ಕೃಷ್ಣ ತನ್ನ ಸಹಚರರನ್ನು ಕಳಿಸಿ ದೂರ್ವಾಸರ ದರ್ಷನ ಮಾಡಿ ತನ್ನ ಪಾದ ತೀರ್ಥವನ್ನು ದೂರ್ವಾಸರಿಗೆ ತಲುಪಿಸಲು ಹೇಳಿದನು. ಬಲರಾಮ ಮತ್ತು ಇತರರು ಯಮುನಾನದಿಯ ಬಳಿ ಬಂದಾಗ ಯಮುನೆ ಭೋರ್ಗರೆದು ಹರಿಯುತ್ತಿದ್ದಳು.ನದಿ ದಾಟುವುದಾದರೂ ಹೇಗೆ?
ಕೃಷ್ಣನ ಬಳಿ ಬಂದು ಸಮಸ್ಯೆಯನ್ನು ಹೇಳಿದಾಗ
ಕೃಷ್ಣ ಹೇಳಿದ "ಕೃಷ್ಣ ನಿತ್ಯಭ್ರಹ್ಮಚಾರಿಯಾಗಿರುವುದು ಸತ್ಯವಾದರೆ ಯಮುನೆ ದಾರಿ ಬಿಡಲಿ " ಎಂದು ಪ್ರಾರ್ಥಿಸಿ ಎಂದನು.ಎಲ್ಲರಿಗೂ ವಿಸ್ಮಯವಾಯಿತು .ಆದರೂ ಕೃಷ್ಣನನ್ನು ಪ್ರೆಶ್ನಿಸಲಿಲ್ಲ.ಹಾಗೇ ಪ್ರಾರ್ಥಿಸಿದಾಗ ಯಮುನೆ ದಾರಿ ಬಿಟ್ಟಳು.
             ದೂರ್ವಾಸರ ಬಳಿ ಬರುವ ವೇಳೆಗೆ ಬಹಳ ಸಮಯವಾಗಿತ್ತು.ಅವರು ಆಪೂಷಣೆ ತೆಗೆದುಕೊಂಡು ಊಟಕ್ಕೆ ಕುಳಿತಿದ್ದರು. ಅವರಿಗೆ ಪಾದ ತೀರ್ಥ ತಲುಪಿಸಿದಾಗ ಅವರು ಸೇವನೆಮಾಡಿದರು.ಅವರಿಗೆ ನಮಸ್ಕರಿಸಿ ಹಿಂತಿರುಗಲು ಯಮುನೆಯ ಬಳಿ ಬಂದಾಗ ಮತ್ತೆ  ಯಮುನೆ ತನ್ನ ಆರ್ಭಟ ತೋರಿದಳು.ಎಲ್ಲರೂ ಮತ್ತೆ ದೂರ್ವಾಸರ ಬಳಿಗೆ ಬಂದು ಸಮಸ್ಯೆಯನ್ನು ಹೇಳಿದಾಗ ಅವರು "ದೂರ್ವಾಸರು ನಿತ್ಯ ಉಪವಾಸಿಯಾಗಿರುವುದು ಸತ್ಯವಾದರೆ ಯಮುನೆ ದಾರಿ ಬಿಡಲಿ ಎಂದು ಪ್ರಾರ್ಥಿಸಿ " ಎಂದರು ಅವರು ಪ್ರಾರ್ಥಿಸಿದ. ಕೂಡಲೆ ಯಮುನೆ ದಾರಿ ಬಿಟ್ಟಳು.
ಬರುವದಾರಿಯಲ್ಲಿ ಎಲ್ಲರೂ ಯೋಚಿಸಿದರು .
ಕೃಷ್ಣ ಅಷ್ಟಪತ್ನೀವಲ್ಲಭ. ಅವನು ಭ್ರಹ್ಮಚಾರಿ ಹೇಗಾಗಲು ಸಾಧ್ಯ? ,ಹಾಗು ದೂರ್ವಾಸರು ಊಟ ಮಾಡುತ್ತಿದ್ದುದನ್ನು ನಾವೇ ಕಣ್ಣಾರೆ ನೋಡಿದ್ದೇವೆ ಅಂದಮೇಲೆ ಉಪವಾಸಿ ಹೇಗೆ?
ಕೃಷ್ಣನನ್ನೇ ಕೇಳಬೇಕು ಎಂದು  ಚಿಂತಿಸಿದರು. 
                  ಕೃಷ್ಣ ಅವರ ಗೊಂದಲವನ್ನು ಪರಿಹರಿಸಿದನು. ಯಾರು ಸದಾ ಬ್ರಹ್ಮ ಭಾವದಲ್ಲಿ ಭ್ರಹ್ಮಾನಂದದಲ್ಲಿ ಮುಳುಗಿರಿತ್ತಾರೋ ಅವರು ನಿತ್ಯ ಭ್ರಹ್ಮಚಾರಿಗಳು.ಯಾರು ಸದಾ ಅವನ ಸಮೀಪದಲ್ಲಿ ಮನಸನ್ನು ಇರಿಸುತ್ತಾರೋ ಅವರು
ನಿತ್ಯ ಉಪವಾಸಿಗಳು.
                ಮಾಡಿದರೆ ನಾವು ಈ ರೀತಿಯ ಉಪವಾಸ ಮಾಡಬೇಕು. ನಿಮಗೆ ಏನೆನಿಸುತ್ತದೆ?
ಈಗ ಹೊಟ್ಟೆ ಒಣಗಿಸಿ ನಾನೇ ಪರಮಭಕ್ತ ಎಂದು ಬೀಗುವವರಿಗೆ ಏನೆನ್ನಬೇಕು?

No comments:

Post a Comment