ಭಾಗವತ ಕಥೆಗಳು
1) ಶ್ರೀ ಕೃಷ್ಣ ಸುಧಾಮನ (ಕುಚೇಲ) ಗಾಢವಾದ ಸ್ನೇಹ
ಶ್ರೀ ಕೃಷ್ಣ ಮತ್ತು ಕುಚೇಲ ಒಟ್ಟಿಗೆ ಸಾಂದೀಪ ಮುನಿಯ ಹತ್ತಿರ ಉಜ್ಜಯಿನಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಅಡಿಗೆ ಮಾಡಲು ಸೌದೆ ತರಲು ಅರಣ್ಯಕ್ಕೆ ಹೋದರು. ಕೃಷ್ಣ ಮರ ಹತ್ತಿ ಸೌದೆ ಕಡಿಯುತ್ತಿರುವಾಗ ಆಶ್ರಮದಲ್ಲಿ ಅಮ್ಮ ಕೊಟ್ಟ ಅವಲಕ್ಕಿಯನ್ನು ಎಲ್ಲಾ ಕುಚೇಲ ಒಬ್ಬನೆ ತಿಂದ. ಗುರುಕುಲ ವಾಸದಲ್ಲಿ ಮಾಡಿದ ಮೋಸ. ಇಬ್ಬರು ಗೃಹಸ್ಥಾಶ್ರಮ ಸ್ವೀಕರಿಸಿದರು. ಆದರೆ ಕುಚೇಲನಿಗೆ ಬಹಳ ಬಡತನ. ದೊರೆತ ಅಲ್ಪ ವಸ್ತುವಿನಿಂದಲೇ ಜೀವನ ಸಾಗಿಸುತ್ತಿದ್ದರು. ಸಂತಾನ ಮಾತ್ರ ಸಮೃದ್ಧಿಯಾಗಿತ್ತು. ಶ್ರೀ ಕೃಷ್ಣ ಅವನ ರಾಜಧಾನಿಯಲ್ಲಿ ರಾಜಭೋಗ ಅನುಭವಿಸುತ್ತಿದ್ದ. ಆದರೆ ಅವನ ಸ್ನೇಹಿತ ಕುಚೇಲ ಬಹಳ ಬಡವ, ವಾಸಕ್ಕೆ ಮನೆಯಿಲ್ಲ. ತಿನ್ನಲು ಅನ್ನವಿಲ್ಲ. ಮನೆ ತುಂಬ ಮಕ್ಕಳು ಕುಚೇಲನ ಹೆಂಡತಿ ಶ್ರೀ ಕೃಷ್ಣನನ್ನು ಕಂಡು ಬರಲು ಒತ್ತಾಯ ಮಾಡುತ್ತಿದ್ದಳು. ಒಂದು ಸಾರಿ ಕುಚೇಲ ತನ್ನ ಸ್ನೇಹಿತ ಶ್ರೀ ಕೃಷ್ಣನನ್ನು ಕಾಣಲು ಹೊರಟ. ಶ್ರೀ ಕೃಷ್ಣನು ಕುಚೇಲನನ್ನು ನಗರದ ಹೆಬ್ಬಾಗಿಲಿನಿಂದ ಪಲ್ಲಕ್ಕಿಯಲ್ಲಿ ಕರೆ ತಂದ. ಅವನನ್ನು ದ್ವಾರಕಾವತಿಯಲ್ಲಿ ತಾನೇ ಪಲ್ಲಕ್ಕಿ ಹೊತ್ತಿಕೊಂಡು ಅರಮನೆಯಲ್ಲಿಳಿಸಿ ಸಿಂಹಾಸನದ ಮೇಲೆ ಕುಳ್ಳಿರಿಸಿದ. ಅವನಿಗೆ ಉಪಹಾರ ಮಾಡಿಸಿದ. ನನಗೆ ಏನು ತಂದಿದ್ದೀಯ ಕೊಡು ಎಂದು ಕೃಷ್ಣ ಕೇಳುತ್ತಾನೆ. ಅರಮನೆಯ ವೈಭವದಲ್ಲಿ ಹೆಂಡತಿ ಕೊಟ್ಟ ಅವಲಕ್ಕಿ ಹಳೆಬಟ್ಟೆಯಲ್ಲಿ ಕಟ್ಟಿದ್ದನ್ನು ತೆಗೆಯಲು ಅಂಜಿಕೆ ಆಯಿತು. ಆಗ ಕೃಷ್ಣನೇ ಬಗಲಲ್ಲಿರುವ ಅವಲಕ್ಕಿ ಗಂಟನ್ನು ಎಳೆದ.
ಆ ಅವಲಕ್ಕಿ ಅರಮನೆಯ ತುಂಬಾ ಚೆಲ್ಲಿತು. ಶ್ರೀ ಕೃಷ್ಣನೆ ಆ ಅವಲಕ್ಕಿಯನ್ನು ಆರಿಸಿಕೊಂಡು ತಿಂದು ಬಹಳ ಚೆನ್ನಾಗಿದೆ ಎಂದು ತೇಗಿದ. ಕುಚೇಲ ತಾನು ಬಂದಿರುವ ಉದ್ದೇಶವನ್ನೇ ಮರೆತ. ದರಿದ್ರನಾದರೂ ಮತ್ತೊಬ್ಬರನ್ನು ಬೇಡುವುದು ಅವನಿಗೆ ಹಿಡಿಸುತ್ತಿರಲಿಲ್ಲ. ಕುಚೇಲ ತನ್ನ ಊರಿನ ಕಡೆ ಸಂತೋಷದಿಂದ ಹೊರಟ. ಶ್ರೀ ಕೃಷ್ಣನು ಏನೂ ಕೊಡಲಿಲ್ಲ. ಕುಚೇಲ ಏನನ್ನು ಕೇಳಲಿಲ್ಲ. ಕುಚೇಲ ತನ್ನ ಮನೆ ಹತ್ತಿರ ಹೋಗುತ್ತಾನೆ. ಅವನ ಗುಡಿಸಲು ಪತ್ತೆ ಇಲ್ಲ. ಆಶ್ಚರ್ಯವಾಯಿತು. ಆ ಸ್ಥಳದಲ್ಲಿ ಅರಮನೆಯಿದೆ. ಒಳಗಿನಿಂದ ಕುಚೇಲನ ಹೆಂಡತಿ ರೇಷ್ಮೆ ಸೀರೆ ಧರಿಸಿ ಪತಿಯ ಪಾದ ತೊಳೆಯಲು ಬಂದಳು. ಇವೆಲ್ಲಾ ಅವನಿಗೆ ಆಶ್ಚರ್ಯ.
ಹಿಂದೆ ವಿದ್ಯಾಭ್ಯಾಸದ ಕಾಲದಲ್ಲಿ ಸಾಂದೀಪ ಮುನಿ ಆಶ್ರಮದಲ್ಲಿ ಕಟ್ಟಿಗೆ ತರಲು ಹೋದಾಗ ಶ್ರೀ ಕೃಷ್ಣನಿಗೆ ಕೊಡದೆ ಅವಲಕ್ಕಿ ತಿಂದಿದ್ದರಿಂದ ಕುಚೇಲನಿಗೆ ದರಿದ್ರ ಬಂದಿತ್ತು. ಆ ಅವಲಕ್ಕಿಯನ್ನು ತನ್ನ ಹರಕು ಬಟ್ಟೆಯಲ್ಲಿ ಕಟ್ಟಿಕೊಂಡು ಶ್ರೀ ಕೃಷ್ಣನಿಗೆ ಕೊಟ್ಟಿದ್ದು ಅವನು ಹಿಂದೆ ತಿಂದ ಅವಲಕ್ಕಿಯ ಪಾಪ ನಿವಾರಣೆ ಆಯಿತು. ಆಗ ಕುಚೇಲನೂ ತೃಪ್ತಿ ಹೊಂದಿದ. ಯಾರ ವಸ್ತುವನ್ನು ಕದಿಯಬಾರದು. ಕದ್ದರೆ ಆ ಪಾಪವನ್ನು ಜೀವನದಲ್ಲಿ ಬಹುದಿವಸ ಅನುಭವಿಸಬೇಕಾಗುತ್ತದೆ. ನೀನು ಎಷ್ಟು ಕೊಡುತ್ತೀಯೋ ಅದರ ಹತ್ತರಷ್ಟು ನಿನಗೆ ಬರುತ್ತದೆ. ಕೊಡುವುದರಲ್ಲಿ ಶಾಂತಿ-ಸುಖ-ಆನಂದ ಇದೆ. ಮತ್ತೊಬ್ಬರ ವಸ್ತುವನ್ನು ಪಡೆಯುವುದರಲ್ಲಿ ದುಃಖ ಅಶಾಂತಿ ಇರುತ್ತದೆ.
🌺🌺🌺🌺🌺🌺🌺🌺🌺🌺🌺🌺🌺
2) ಅಧ್ಯಯನವಿಲ್ಲದೆ ವಿದ್ಯೆಯಿಲ್ಲ
ಯುವಕ್ರೀಧನೆಂಬ ಋಷಿಪುತ್ರನು
ಆಲಸ್ಯದಿಂದಾಗಿ ವೇದಶಾಸ್ತ್ರಗಳ ಅಧ್ಯಯನ ಮಾಡುತ್ತಿರಲಿಲ್ಲ. ಅದರಿಂದ ಅವನ ತಂದೆಗೆ ಬಹಳ ದುಃಖವಾಗುತ್ತಿತ್ತು, ಏಕೆಂದರೆ ಅವರ ಸ್ನೇಹಿತರ ಮಕ್ಕಳೆಲ್ಲ ಮಹಾನ ವಿದ್ವಾಂಸರಾಗಿ ರಾಜ ಮಹಾರಾಜರ ಗೌರವಾದರಗಳಿಗೆ ಪಾತ್ರರಾಗಿದ್ದರು. ತಂದೆಯು ಬುದ್ಧಿವಾದವನ್ನು ಹೇಳಿದಾಗ ಯುವಕ್ರೀಧನು ತನ್ನ ತಂದೆಯ ಸ್ನೇಹಿತರ ಮಕ್ಕಳನ್ನು ನೋಡಿ ಅಸೂಯೆ ಪಟ್ಟನು. ತಾನೂ ದೊಡ್ಡ ಪಂಡಿತನಾಗಿ ತೋರಿಸುತ್ತೇನೆ ಎಂದು ನಿರ್ಧರಿಸಿದನು. ಆದರೆ ಗುರುಗಳ ಬಳಿ ಹೋಗಿ ಗುರುಸೇವೆಯನ್ನು ಮಾಡಿ ಅಧ್ಯಯನ ನಡೆಸಲು ಅವನಿಗೆ ಇಷ್ಟವಿರಲಿಲ್ಲ. ದೀರ್ಘಾವಧಿಯ ಅಧ್ಯಯನ ಮಾಡದೆ ಸುಲಭ ರೀತಿಯಲ್ಲಿ ಮಹಾಪಂಡಿತನಾಗಬೇಕೆಂದು ಅವನ ಬಯಕೆಯಾಗಿತ್ತು. ಅದಕ್ಕಾಗಿ ಗಂಗಾತೀರದಲ್ಲಿ ಕುಳಿತು ಘೋರ ತಪಸ್ಸನ್ನು ಮಾಡತೊಡಗಿದನು. ದೇವಲೋಕದ ಒಡೆಯನಾದ ಇಂದ್ರನು ಇದನ್ನು ತಿಳಿದು ಯುವಕ್ರೀಧನಿಗೆ ಸರಿಯಾದ ಬುದ್ಧಿ ಕಲಿಸಬೇಕೆಂಬ ಉದ್ದೇಶದಿಂದ ಮಾರುವೇಷಧರಿಸಿ ಒಬ್ಬ ಮುದಿ ಬ್ರಾಹ್ಮಣನಾಗಿ ಬಂದು ಗಂಗಾತೀರದಲ್ಲಿ ಯುವಕ್ರೀಧನ ಸಮೀಪ ಕುಳಿತುಕೊಂಡು ಒಂದೊಂದೇ ಹಿಡಿ ಉಸುಕನ್ನು ನದಿಯಲ್ಲಿ ಹಾಕಲು ಪ್ರಾರಂಭಿಸಿದನು.
ಬಹಳ ಹೊತ್ತಿನಿಂದ ಅವನು ಮಾಡುತ್ತಿದ್ದ ವ್ಯರ್ಥ ಚಟುವಟಿಕೆಯನ್ನು ಕಂಡು ಯುವಕ್ರೀಧನು ಕುತೂಹಲ ತಾಳಲಾಗದೆ ‘ನೀನೇನು ಮಾಡುತ್ತಿದ್ದೀಯಾ?’ ಎಂದು ಕೇಳಿದನು. ನ’ದಿಗೆ ಅಣೆಕಟ್ಟು ಕಟ್ಟ ಬೇಕಾಗಿದೆ, ಅದಕ್ಕಾಗಿ ಉಸುಕನ್ನು ಹಾಕಿ ನದಿಯ ಪ್ರವಾಹವನ್ನು ತಡೆಗಟ್ಟಲು ಪ್ರಯತ್ನಿಸುತ್ತಿದ್ದೇನೆ’ ಎಂದು ವೇಷಧಾರಿ ಇಂದ್ರನು ಉತ್ತರಿಸಿದನು.
‘ಸಾವಿರಾರು ವರ್ಷಗಳ ಪ್ರಯತ್ನ ನಡೆಸಿದರೂ ಗಂಗಾಪ್ರವಾಹವನ್ನು ಈ ಹಿಡಿ ಉಸುಕಿನಿಂದ ತಡೆಯಲಾರೆ. ಹುಚ್ಚು ಸಾಹಸವನ್ನು ತೊರೆದು ಬಿಡು’ ಎಂದು ಯುವಕ್ರೀಧನು ಬುದ್ಧಿವಂತನಂತೆ ಮುದುಕನಲ್ಲಿ ಹೇಳಿದನು. ಆಗ ಮುದಿ ಬ್ರಾಹ್ಮಣನು, ‘ಏನೂ ಅಧ್ಯಯನ ಮಾಡದೇ, ಬರೀ ತಪಸ್ಸನ್ನು ಮಾಡಿ ನೀನು ಸ್ವಲ್ಪಕಾಲದಲ್ಲಿ ಮಹಾಪಂಡಿತನಾಗಬಹುದಾದರೆ, ಹಿಡಿ ಮಣ್ಣಿನಿಂದ ಅಣೆಕಟ್ಟನ್ನು ಕಟ್ಟುವುದು ನನಗೇಕೆ ಅಸಾಧ್ಯವಾಗಬೇಕು?’ ಎಂದು ಯುವಕ್ರೀಧನನ್ನೇ ಪ್ರಶ್ನಿಸಿದನು. ತನ್ನ ತಪಸ್ಸಿನ ಉದ್ದೇಶದ ಕುರಿತು ಹೇಳಿದ ಮಾತುಗಳನ್ನ ಕೇಳಿದಾಗ ಯುವಕ್ರೀಧನಿಗೆ ಜ್ಞಾನೋದಯವಾಯಿತು. ತನ್ನ ಕೃತಿಯೇ ನಿರರ್ಥಕವೆಂದೆನಿಸಿತು, ನಾಚಿಕೆಯಾಯಿತು. ಮುದಿ ಬ್ರಾಹ್ಮಣನಲ್ಲಿ ಶರಣಾದನು. ಬಳಿಕ ಯೋಗ್ಯ ಗುರುವನ್ನು ಹುಡುಕಿಕೊಂಡು ಹೋದನು.
ನಾಳೆ : ಮತ್ತೊಂದು ವಿಷಯದೊಂದಿಗೆ
ಹಿಂದಿನ ಕಥೆಗಳಿಗಾಗಿ ಈ ಲಿಂಕ್ ಮೂಲಕ page ಹೋಗಿ ನೋಡಿ, ಸುಮಾರು ಕಥೆಗಳು ಸಿಗುತ್ತವೆ 👇👇👇
https://www.facebook.com/jnanaprachar/
👉 page like ಮಾಡಿ 👍
page like ಮಾಡಿದ್ರೆ ಡೈಲಿ ನಿಮ್ಮ fb ಅಲ್ಲಿ ಬರುತ್ತೆ,
👉 👥👨👩👧👦 ನೀವು facebook ಅಲ್ಲಿ ಬೇರೆ ಆದ್ಯಾತ್ಮ ಗ್ರೂಪಗಳಲ್ಲಿ ಇದ್ರೆ ಆ ಗ್ರೂಪ್ ಗೆ ಈ ವಿಷಯ share ಮಾಡಿ,
"ನಾವು ತಿಳಿದುಕೊಂಡಿದ್ದನ್ನ ಬೇರೆಯವರಿಗೆ ತಿಳಿಸೋಣ ]
No comments:
Post a Comment