ಕೌರವರು 100 ಜನ ಅಣ್ಣತಮ್ಮಂದ್ರು ಅಂತ ನಮ್ಗೆಲ್ಲಾ ಗೊತ್ತೇ ಇದೆ. ಆದ್ರೆ ಅವ್ರಿಗೆ ಒಬ್ಬಳು ತಂಗಿನೂ ಇದ್ದಳು. ಅವಳ ಹೆಸರು #ದುಃಶಲಾ ಅಂತ
ಧೃತರಾಷ್ಟ್ರ-ಗಾಂಧಾರಿಗೆ ಒಬ್ಬಳೇ ಮಗಳು. ಪಾಂಡವರೂ ಕೂಡ ಆಕೆಯನ್ನು ತಮ್ಮ ತಂಗಿ ಥರಾನೇ ಪ್ರೀತಿಯಿಂದ ನೋಡ್ಕೋತಿದ್ರು. ಹಸ್ತಿನಾಪುರದಲ್ಲಿ ಭೀಷ್ಮನಿಂದ ಸಾಕಷ್ಟು ಜ್ಞಾನ, ವಿವೇಕ ಕಲಿತು ಚಿಕ್ಕ ವಯಸ್ಸಲೆಲ್ಲಾ ಚೆನ್ನಾಗಿ ಆಟ ಆಡ್ಕೊಂಡು ಬೆಳೆದಳು. ಅಣ್ಣಂದ್ರೆಲ್ಲಾ ಸೇರಿ ಮುದ್ದಾಗಿ ಬೆಳೆಸಿ ಮದ್ವೆಕೂಡ ಮಾಡಿದ್ರು. ದುಃಶಲಾ ಗಂಡನು ಸಿಂಧುದೇಶದ ರಾಜ #ಜಯದ್ರಥ. ಇಲ್ಲಿಂದಾನೇ ದುಃಶಲಾಗೆ ಯಮಯಾತನೆ ಶುರುವಾಯ್ತು.
ದುಃಶಲಾ ಮುಂದಿನ ಜೀವನ ಹೇಗಿತ್ತು? ಜಯದ್ರಥ ಯಾರು, ಹೇಗಿದ್ದ, ಏನ್ ಮಾಡಿದ ಅಂತ ತಿಳ್ಕೊಳಕ್ಕೆ ಮುಂದೆ ಓದಿ...
1. ಆಗಾಗ ಹೆಣ್ಮಕ್ಳು ಜೊತೆ ಒರಟು ಒರಟಾಗಿ ನಡ್ಕೋತಿದ್ದ. ಇದು ಬೇರೆಯವರಿಗೆ ಗೊತ್ತಾಗ್ತಿರ್ಲಿಲ್ಲ. ದುಃಶಲಾಗೆ ಮಾತ್ರ ಗೊತ್ತಿತ್ತು. ಹೆಣ್ಮಕ್ಳು ಜೊತೆ ತುಂಬಾ ಅಸಭ್ಯವಾಗಿ, ಒರಟಾಗಿ ನಡ್ಕೊತಿದ್ದ.
ಎಲ್ಲಾ ಅವ್ನ ಮೂಗಿನ ನೇರಕ್ಕೇ ನಡೀತಿರುತ್ತೆ... ವನವಾಸದಲ್ಲಿ ದ್ರೌಪದಿ ಒಂಟಿಯಾಗಿರೋ ಸಮಯ ನೋಡಿ ಜಯದ್ರಥ ಅಪಹರಣ ಮಾಡೋದಕ್ಕೆ ಪ್ರಯತ್ನ ಪಡುತ್ತಾನೆ. ಆಗ ಅವ್ನ ಗ್ರಹಚಾರ ಕೆಡತ್ತೆ.
2. ತನ್ನ ಅತ್ತಿಗೆಯಾದ ದ್ರೌಪದಿ ಜೊತೆನೇ ಜಯದ್ರಥ ಕ್ರೂರವಾಗಿ ನಡ್ಕೊಂಡಾಗ ದುಃಶಲಾಗೆ ಆದ ಅವಮಾನ ಅಷ್ಟಿಷ್ಟಲ್ಲ
ಆ ಕಡೆ ಜಯದ್ರಥ ದ್ರೌಪದಿಯನ ಅಪಹರಣ ಮಾಡ್ಕೊಂಡು ಹೋಗ್ತಿದ್ದಂಗೇ ಈ ಕಡೆ ಯುಧಿಷ್ಟಿರಂಗೆ ಆಕೆ ಎಲ್ಲಿ ಹೊದ್ಲು? ಏನಾಯ್ತು ಅಂತ ಗೊತ್ತಾಗುತ್ತದೆ. ಆಗ ಅವನು ಆಕೆಯನ್ನು ಕಾಪಾಡುವುದಕ್ಕೆ ಭೀಮ ಮತ್ತೆ ಅರ್ಜುನನ್ನ ಕಳಿಸ್ತಾನೆ. ಕೊನೆಗೆ, ಜಯದ್ರಥ ಸೋಲುತ್ತಾನೆ. ಅಷ್ಟೆಲ್ಲಾ ಅವಮಾನ ಆಗಿದ್ರೂ ದ್ರೌಪದಿ ಜಯದ್ರಥನನ್ನು ಕೊಲ್ಲುವುದು ಬೇಡ ಅಂತ ಭೀಮನನ್ನು ಕೇಳ್ಕೊತಾಳೆ. ಹಾಗೇನಾದ್ರು ಆದ್ರೆ, ಅವ್ರ ಒಬ್ಬಳೇ ತಂಗಿ ದುಃಶಲಾ ವಿಧವೆ ಆಗುತ್ತಾಳೆ ಅಂತ.
ಆದ್ರೆ ಹೆಂಡ್ತಿಗಾದ ಅಮಾನಕ್ಕೆ ಪಾಂಡವರು ಜಯದ್ರಥನನ್ನ ಸುಮ್ನೆ ಕಳಿಸುವುದಕ್ಕೆ ತಯಾರಿರಲಿಲ್ಲ. ಹಾಗಾಗಿ ಶಿಕ್ಷೆ ರೂಪದಲ್ಲಿ ಭೀಮನು ಜಯದ್ರಥನ ತಲೆಯನ್ನು ಬೋಳಿಸಿ, ಪಾಂಡವರು ಶಿಕ್ಷೆ ಕೊಟ್ಟೀರೋದು ಅಂತ ಎಲ್ರಿಗೂ ಗೊತ್ತಾಗ್ಲಿ ಅಂತ ಐದೇ ಐದು ಜುಟ್ಟು ಬಿಟ್ಟು ಕಳೀಸ್ತಾರೆ. ಇದರಿಂದ ಜಯದ್ರಥನಿಗೆ ತುಂಬಾ ಅಮಾನ ಆಗುತ್ತೆ ನಿಜ. ಆದರೆ ದುಃಶಲಾಳ ಸ್ಥಿತಿ? ಅಮಾನಕ್ಕೂ ಮೀರಿದ್ದು. ಗಂಡ ತನ್ನ ಅತ್ತಿಗೆಯ ಜೊತೆಗೇನೇ ಇಷ್ಟು ಕ್ರೂರವಾಗಿ ನಡ್ಕೊಂಡ್ರೆ, ಯಾವ್ ಹೆಣ್ಣು ತಾನೇ ಸಂಕಟ ಪಡಲ್ಲ.
ದುಃಶಲಾ ಬೇಡಾ ಅಂತ ಎಷ್ಟೇ ಬೇಡ್ಕೊಂಡ್ರೂ ಪಾಂಡವರನ್ನ ಮಟ್ಟ ಹಾಕಕ್ಕೆ ಶಿವನಿಂದ ವರ ಪಡ್ಕೊಳ್ತಾನೆ.
ಭೀಮನು ತಲೆ ಬೋಳಿಸಿದ ಮೇಲೆ ಜಯದ್ರಥನಿಗೆ ಪಾಂಡವರ ಬಗ್ಗೆ ಮೊದ್ಲೇ ಇದ್ದ ದ್ವೇಷ, ಇನ್ನೂ ಜಾಸ್ತಿಯಾಯ್ತು. ಅವ್ರನ್ನು ಸೋಲಿಸುವುದಕ್ಕೆ ಸಾಕ್ಷಾತ್ ಶಿವನ ಮೊರೆಹೋಗುತ್ತಾನೆ. ಜಯದ್ರಥನ ತಪಸ್ಸಿಗೆ ಮೆಚ್ಚಿ, ಶಿವನು ವರ ಏನೋ ಕೊಡುತ್ತಾನೆ. ಅದೂ ಎಂಥಾ ವರ?
#ಶಿವನ_ವರ
ಯುದ್ಧದಲ್ಲಿ ಒಂದು ದಿನದ ಮಟ್ಟಿಗೆ, ಪಾಂಡವರು ಏನೇನೆಲ್ಲ ಯೋಚನೆ ಮಾಡುತ್ತಾರೆ? ಅವ್ರ ಶಕ್ತಿ ಏನು? ಅಂತೆಲ್ಲಾ ರಹಸ್ಯವಾಗಿ ತಿಳ್ಕೊಳೊ ದಿವ್ಯದೃಷ್ಟಿ. ಹಾಗೇ ಶಿವ ಒಂದು ಎಚ್ಚರಿಕೆ ಕೊಡ್ತಾನೆ... ಅದೇನೆಂದರೇ, "ಅರ್ಜುನನ ಮೇಲೆ ಇದು ಯಾವ ಪರಿಣಾಮನೂ ಬೀರುವುದಿಲ್ಲ" ಅಂತ.
ಕಡೆಗೆ ಯುದ್ಧದಲ್ಲಿ ಅರ್ಜುನನು ಪಾಶುಪತಾಸ್ತ್ರ ಪ್ರಯೋಗ ಮಾಡಿ ಜಯದ್ರಥನನ್ನು ಕೊಲ್ಲುತ್ತಾನೆ.
ಅರ್ಜುನನು ಜಯದ್ರಥನಿಗೆ ಪಾಶುಪತಾಸ್ತ್ರವನ್ನು ಬಿಟ್ಟು ಅವನ ತಲೆಯನ್ನು ಆಕಾಶಕ್ಕೆ ಹಾರಿಸಿ, ನೆಲಕ್ಕೆ ಬೀಳುವುದರೊಳಗೆ ಅದಕ್ಕೆ ಜೋರಾಗಿ ಇನ್ನೊಂದು ಬಾಣ ಬಿಟ್ಟು, ಎಲ್ಲೋ ದೂರದ ನದಿ ದಡದಲ್ಲಿ ಸಂಧ್ಯಾವಂದನೆ ಮಾಡುತ್ತಿದ್ದ ಜಯದ್ರಥನ ತಂದೆಯ ತೊಡೆಯಮೇಲೆ ಬಿಳಿಸಿದ. ತಂದೆಯು ತಕ್ಷಣ ಎದ್ದೊಡನೆ ಜಯದ್ರಥನ ರುಂಡವು ಕೆಳಗೆ ಬೀಳಲು, ಜಯದ್ರಥನ ತಂದೆಯ ತಲೆಯು ಸಾವಿರ ಓಳಾಗಿ ಹೋಯಿತು.
(ಕೆಲವುಗಳಲ್ಲಿ ಕೈಯಿಂದ ರುಂಡವನ್ನು ಎತ್ತಿ ಬಿಸಾಡಿದ ಅಂತಾನೂ ಉಂಟು.)
ಇಲ್ಲಿ ಅರ್ಜುನನು ಪಾಶುಪತಾಸ್ತ್ರ ಉಪಸಂಹಾರದ ಮಂತ್ರ ಪಠಿಸಿದ ಕೂಡಲೇ ಸಾವಿರ ಕುಸುಮಗಳ ಸುಗಂಧವನ್ನು ಹೊತ್ತ ತಂಗಾಳಿ ತೀಡಿತು. ಲೋಕದಲ್ಲಿ ಶಾಂತಿ ನೆಲೆಸಿತು. ಕೃಷ್ಣನು ರಥದಿಂದಿಳಿದು ಅರ್ಜುನನ್ನು ಬಿಗಿದಪ್ಪಿ ಆನಂದಬಾಷ್ಪ ಸುರಿಸಿದ. ಅರ್ಜುನನ ಅಗ್ನಿಪ್ರವೇಶ ತಪ್ಪಿತೆಂದು ಅವನಿಗೆ ಬಹು ಸಂತೋಷವಾಗಿತ್ತು. ಅಪಮಾನ ತಡೆಯಲಾರದೇ ದುರ್ಯೋದನನು ಕಣ್ಣೀರು ಸುರಿಸಿದನು.
ಭೀಮನು ದಿಗ್ತಟಗಳೊಡೆಯುವಂತಹ ಸಿಂಹನಾದ ಮಾಡಿದ ಕೂಡಲೇ ಯುದಿಷ್ಟಿರನಿಗೆ ಜಯದ್ರಥನು ಸತ್ತನೆಂದು ಗೊತ್ತಾಗಿ ಖುಷಿಯಾಯಿತು.
ಕೃಷ್ಣನ ಪಾದಗಳಿಗೆ ನಮಸ್ಕರಿಸಿದ
ಅರ್ಜುನನು:- "ದೇವಾ, ಇದೆಲ್ಲ ಆದುದು ನಿನ್ನ ದಯೆಯಿಂದಲೇ, ಸತ್ಯ ಪಥದಲ್ಲಿ ನೀನೆ ನಮ್ಮ ಮಾರ್ಗದರ್ಶಿ" ಎನ್ನಲು,
ಕೃಷ್ಣನು, ಎಂದಿನ ತನ್ನ ಸುಂದರ ಮಂದಹಾಸವನ್ನು ಬೀರಿದ.
ಅರ್ಜುನನಿಗೆ,
ಕೃಷ್ಣನು:- "ಇಂದು ನೀನು, ಸಾತ್ಯಕಿ ಇಬ್ಬರೂ ಸೇರಿ ಅವರ ಏಳು ಅಕ್ಷೋಹಿಣಿ ಸೈನ್ಯವನ್ನು ನಿರ್ನಾಮ ಮಾಡಿದ್ದೀರಿ. ನಿಜವಾಗಿ ಹೇಳುವುದಾದರೇ ನಿನಗಿಂತ ಸಾತ್ಯಕಿ ಮಾಡಿರುವ ನಾಶವೇ ಹೆಚ್ಚು. ನೋಡು ರಣರಂಗವನ್ನು" ಎಂದು ತೋರಿಸಿದ.
ನಂತರ ಯುಧಿಷ್ಠಿರನನ್ನು ನೋಡಲು ವೇಗವಾಗಿ ಹೊರಟರು. ದಾರಿಯಲ್ಲಿ ಕೃಷ್ಣನು, ಜಯದ್ರಥನ ಬಗ್ಗೆ ಹೇಳತೊಡಗಿದ.
" ಬೃಹತ್ ಕ್ಷಾತ್ರನು ತೀವ್ರ ತಪಸ್ಸು ಮಾಡಿದ ನಂತರ, ಜಯದ್ರಥನನ್ನು ಪಡೆದ. ಆದರೂ ಸಾಲದೇ "ಯಾರು ಜಯದ್ರಥನ ತಲೆಯನ್ನು ಭೂಮಿಗೆ ಬೀಳುಸುತ್ತಾರೆಯೋ, ಅವರ ತಲೆ ಸಹಸ್ರ ಹೋಳಾಗಿ ಒಡೆದು ಹೋಗಬೇಕೆಂದೂ" ವರವನ್ನು ಪಡೆದ.
ಕೃಷ್ಣನು:- "ಅರ್ಜುನ, ಅದಕ್ಕೆ ನಾನು ನಿನ್ನ ಕೈಲಿ ಅವನ ತಲೆಯನ್ನು ಹಾರಿಸಿ, ಅವನ ತಂದೆಯ ತೊಡೆಯ ಮೇಲೆ ಹಾಕಿಸಿದೆ" ಎಂದು ಜಯದ್ರಥನ ಜನ್ಮವೃತ್ತಾಂತವನ್ನು ಹೇಳಿದ.
ಅಷ್ಟರಲ್ಲಿ ಅವರು ಯುಧಿಷ್ಠಿರನಿದ್ದಲ್ಲಿಗೆ ಬಂದರು. ಅರ್ಜುನನು ಅವನನ್ನು ನೋಡಿದಕೂಡಲೇ ರಥದಿಂದಿಳಿದು ಅವನನ್ನು ಆಲಿಂಗಿಸಿಕೊಂಡು, ಆನಂದಬಾಷ್ಪ ಸುರಿಸಿದ.
ಮತ್ತು
ಕೃಷ್ಣನನ್ನು ಕಂಡು,
ಯುಧಿಷ್ಠಿರನು:- "ನಿನ್ನ ದೆಯೆಯಿಂದ ನಾವೆಲ್ಲ ಇವತ್ತು ಅರ್ಜುನನನ್ನು ನೋಡುವಂತಾಗಿದೆ" ಎಂದನು.
ಕೃಷ್ಣನು:- "ಇಲ್ಲ ಯುದಿಷ್ಟಿರ. ಜಯದ್ರಥ ಸತ್ತಿದ್ದು ನೆನ್ನೆಯ ನಿನ್ನ ಕೋಪಾಗ್ನಿಯಿಂದ. ಸತ್ಪುರುಷನ ಕೋಪವೇ ಈ ಲೋಕದಲ್ಲಿ ಎಲ್ಲಾದಕ್ಕಿಂತ ಹೆಚ್ಚು ಶಕ್ತಿಶಾಲಿಯಾಗಿರುತ್ತದೆ. ಅದೇ ಈ ಎಲ್ಲಕ್ಕೂ ಅತಿ ಮಾನುಷ ಕಾರ್ಯಕ್ಕೂ ಕಾರಣ" ಎಂದನು.
ಅರ್ಜುನ ಅಜೇಯನೆಂಬ ಭೀಮನ ಮಾತು ನಿಜವೆಂದು ಮೊಟ್ಟ ಮೊದಲ ಬಾರಿಗೆ ದುರ್ಯೋದನನಿಗೆ ಅನ್ನಿಸಿತು. ಅವನು ತನ್ನ ಡೇರೆಯಲ್ಲಿ ಇಂದಿನ ಹಾಗೂ ಕಳೆದುಹೋದ ದಿನಗಳ ಘಟನೆಗಳನ್ನು ದೇನಿಸುತ್ತಾ ಕುಳಿತಿದ್ದ. ದ್ರೋಣ, ಕೃಪ, ಅಶ್ವತ್ಥಾಮ, ರಾಧೇಯ ಯಾರೂ ಅರ್ಜುನನನ್ನು ಸರಿಗಟ್ಟಲಾರರೆಂದು ಅವನಿಗೆ ಮನವರಿಕೆಯಾಯಿತು.
ಅರ್ಜುನನೊಬ್ಬನೇ ಸಂಚರಿಸಿ ಅಷ್ಟೊಂದು ಸೈನ್ಯವನ್ನು ನಾಶಮಾಡಿದ್ದ. ಎಲ್ಲರ ಕಣ್ಣೆದುರಿಗೆ ಜಯದ್ರಥನ್ನು ಕೊಂದಿದ್ದ. ಯಾರೂ ಏನೂ ಮಾಡಲಾಗದೇ ಸಾಧ್ಯವಾಗಲಿಲ್ಲ. ಈ ಜನರನ್ನ ನಂಬಿಕೊಂಡು ತಾನು ಕೃಷ್ಣನ ಮಾತನ್ನು ಮೂರ್ಖತನವೆಂದು ತಳ್ಳಿಹಾಕಿದ್ದೇನಲ್ಲ! ಹಸ್ತಿನಾಪುರಕ್ಕೆ ರಾಯಭಾರಿಯಾಗಿ ಬಂದಾಗ ಇವೆಲ್ಲವನ್ನೂ ಹೇಳಿ ಎಚ್ಚರಿಕೆ ಕೊಟ್ಟಿದ್ದನಲ್ಲವೇ! "ಅರ್ಜುನನ್ನು ಸೋಲಿಸಲು ಸಾಧ್ಯವೇ ಇಲ್ಲವೆಂದು" ವಿದುರನು ಸಾರಿ ಸಾರಿ ಹೇಳಿದ್ದ. ಆದರೇ ತಾನು ಅವರ ಯಾರ ಮಾತನ್ನೂ ಕೇಳಲಿಲ್ಲ".
ದುಃಖದಿಂದ ಮೂಕನಾಗಿವ ದ್ರೋಣನ ಬಳಿ ಹೋಗಿ ತನ್ನ ಸಂಕಟವನ್ನು ತೋಡಿಕೊಂಡ,
ದುರ್ಯೋಧನನು:- "ಆಚಾರ್ಯ, ಆ ಒಬ್ಬ ಅರ್ಜುನನಿಂದ ನಮ್ಮ ಸೈನ್ಯದಲ್ಲಿ ಆದ ನಾಶವನ್ನು ನೋಡು. ನನಗಾಗಿ ಎಷ್ಟು ಜನ ರಾಜರು ಪ್ರಾಣ ಒಪ್ಪಿಸಬೇಕಾಯಿತು! ಇಚ್ಛಾಮರಣಿ ಭೀಷ್ಮನನ್ನೇ ಅರ್ಜುನ ಶರಪಂಜರದ ಮೇಲೆ ಮಲಗುವಂತೆ ಮಾಡಿದ. ಈ ಹೊತ್ತು ಅರ್ಜುನ-ಸಾತ್ಯಕಿ ಇಬ್ಬರೂ ಸೇರಿ ಏಳು ಅಕ್ಷೋಹಿಣಿ ಸೈನ್ಯವನ್ನು ನಾಶಮಾಡಿದರು. ಯುದ್ಧ ಮಾಡಲಾರದ ಹೇಡಿ ನಾನು. ಮಿತ್ರರ ಸಾವನ್ನೆಲ್ಲಾ ನೋಡುತ್ತಾ ಬದುಕಿರುವನು ನಾನು. ಸಾವಿರ ಅಶ್ವಮೇಧಗಳನ್ನು ಮಾಡಿದರೂ ನನ್ನ ಪಾಪ ತೊಳೆದುಹೋಗದು.
ನಿನ್ನ ಕೂದಲು ಕೊಂಕಲೂ ಬಿಡುವುದಿಲ್ಲ ಎಂದು ಜಯದ್ರಥನಿಗೆ ವಚನ ಕೊಟ್ಟ ನಾನು, ಮಿತ್ರದ್ರೋಹವೆಸಗಿದಂತಾಯಿತು. ವೀರನಾದ ಜಲಸಂಧನನ್ನು ನೆನೆಸಿಕೊಂಡರೂ ನನ್ನ ಎದೆಯೊಡೆಯುವಂತಾಗುತ್ತದೆ. ನನ್ನ ಗೆಳೆಯರ ಸಾವಿನ ಸೇಡನ್ನು ನಾನು ತೀರಿಸಿಕೊಳ್ಳುವೆ
ಇಲ್ಲದಿದ್ದರೇ ನಾನೂ ಸತ್ತು ವೀರ ಸ್ವರ್ಗವನ್ನು ಸೇರುವೆ" ಎಂದನು.
ರಾಜನ ದುಃಖವನ್ನು ನೋಡಿ ದ್ರೋಣನಿಗೆ ಅಯ್ಯೋ ಎನ್ನಿಸಿತು.
ಆಗ
ದ್ರೋಣರು:- "ದುರ್ಯೋದನ, ಅರ್ಜುನ ಅಜೇಯನೆಂಬುದು ಗೊತ್ತಿರುವ ಸಂಗತಿ. ಆ ಸತ್ಯವನ್ನು ನಾವು ಒಪ್ಪಿಕೊಳ್ಳಲೇಬೇಕು. ಹಿಂದಿನದು ಚಿಂತಿಸುವುದು ಬೇಡ. ಆ ಬಗ್ಗೆ ಏನು ತಾನೆ ಮಾಡಬಲ್ಲೇವು? ಈಗ ನಾನು ನಿನ್ನ ಶತ್ರಗಳನ್ನು ಕೊಲ್ಲುವವರೆಗೆ ಈ ನನ್ನ ಕವಚವನ್ನು ತೆಗೆಯುವಯದಿಲ್ಲ. ನನ್ನ ದೇಹದಲ್ಲಿ ಉಸಿರಿರುವವರೆಗೆ ಹೋರಾಡುತ್ತೇನೆ. ಇಲ್ಲವೇ ಸಾಯುತ್ತೇನೆ. ಅಶ್ವತ್ಥಾಮನೂ ನನಗೆ ನೆರವಾಗುತ್ತಾನೆ. ಈ ರಾತ್ರಿ ಅವರಿಗೆ ನಿದ್ರಿಸಲೂ ಬಿಡದೆ ಯುದ್ಧವನ್ನು ಮುಂದುವರೆಸುತ್ತೇನೆ" ಎಂದು ದ್ರೋಣನು ರಣರಂಗದ ಕಡೆಗೆ ಹೊರಟನು.
ದುರ್ಯೋಧನ ರಾದೇಯನು ರಣರಂಗಕ್ಕೆ ಹೊರಟರು.
ದಾರಿಯಲ್ಲಿ
ದುರ್ಯೋಧನನು:- "ಹೇಗೆ ಅರ್ಜುನನು ವ್ಯೂಹವನ್ನು ಭೆದಿಸಿ ನಾವೆಲ್ಲ ರಕ್ಷಿಸುತ್ತಿದ್ದರೂ ಸಹ ಜಯದ್ರಥನನ್ನೂ ಕೊಂದಿರುವನು ನೋಡು! ನನ್ನ ಅರ್ಧಕ್ಕಿಂತ ಹೆಚ್ಚುಸೈನ್ಯ ಅರ್ಜುನ ಸಾತ್ಯಕಿ ಇಬ್ಬರಿಂದಲೇ ನಾಶವಾಗಿದೆ. ಪ್ರೀತಿಯ ಶಿಷ್ಯನೆಂದು ಆಚಾರ್ಯನು ವ್ಯೂಹದೊಳಗೆ ಬಿಟ್ಟಿರಬೇಕು ಅನ್ನಿಸುತ್ತದೆ. ಇಲ್ಲವಾದರೇ ರಾಧೇಯ, ಇದು ಹೇಗೆ ಹೀಗಾಗುವುದಕ್ಕೆ ಸಾಧ್ಯ? ಅರ್ಜುನ ದ್ರೋಣನನ್ನು ಮೀರಿ ಹೋಗುವುದೆಂದರೇನು? ದ್ರೋಣನು ಜಯದ್ರಥನಿಗೆ ನಿನ್ನನ್ನು ರಕ್ಷಿಸುತ್ತೇನೆಂದು ಮಾತು ಕೊಟ್ಟು, ಅನಂತರ ಅರ್ಜುನನ್ನು ವ್ಯೂಹದೊಳಕ್ಕೆ ಬಿಡುವುದರ ಮೂಲಕ ದ್ರೋಹವೆಸಗಿದ್ದಾರೆ. ನನಗಿದು ಗೊತ್ತಿದ್ದರೇ, ಜಯದ್ರಥನನ್ನು ತನ್ನ ರಾಜ್ಯಕ್ಕೆ ಕಳುಹಿಸಿಕೊಡುತ್ತಿದ್ದೆ. ಈ ಸತ್ತಿರುವ ಸೈನಿಕರನ್ನು ನೋಡು. ಒಬ್ಬೊಬ್ಬನ ಮೈ ಮೇಲೆ ಅರ್ಜುನನ ಹೇಸರಿರುವ ಬಾಣಗಳು. ನನ್ನ ಸೋದರರೆಷ್ಟು ಜನಸತ್ತಿರುವರು! ನನಗೆ ದ್ರೋಣರ ಮೇಲೆ ಬಂದಿರುವ ಸಿಟ್ಟು ಅಷ್ಟಿಷ್ಟಲ್ಲ" ಎಂದು ಅಲವತ್ತು ಕೊಂಡನು.
ಅದಕ್ಕೆ
ರಾಧೇಯನು:- "ನೀನು ಅಚಾರ್ಯನ ಬಗ್ಗೆ ಹೀಗೆಲ್ಲ ಮಾತಾಡಬಾರದು. ಅವನಿಂದಾದಷ್ಟು ಅವರು ಯುದ್ಧ ಮಾಡುತ್ತಿದ್ದಾರೆ. ಈ ವೃದ್ಧಾಪ್ಯದಲ್ಲಿ ಅವರು ಎಷ್ಟೊಂದು ನೆರವಾಗುತ್ತಿರುವರಲ್ಲ! ಅದಕ್ಕೆ ನೀನು ಕೃತಜ್ಞನಾಗಿರಬೇಕು. ದ್ರೋಣರಿಗೆ ಅರ್ಜುನನನ್ನು ಸೋಲಿಸಲು ಆಗುವುದಿಲ್ಲ. ಅರ್ಜುನನೇ ಉಪಾಯವಾಗಿ ದ್ರೋಣರನ್ನು ದಾಟಿಕೊಂಡು ಹೋಗಿದ್ದಾನೆ. ಇದಕ್ಕಾಗಿ ದ್ರೋಣರನ್ನು ಆಕ್ಷೇಪಿಸುವುದು ಸರಿಯಲ್ಲ. ನಾವೆಲ್ಲರೂ ಸಾಧ್ಯವಿದ್ದಷ್ಟು ಚೆನ್ನಾಗಿ ಹೋರಿದ್ದೇವೆ. ಆದರೂ ಜಯದ್ರಥನನ್ನು ಕಾಪಡಲು ಆಗಲಿಲ್ಲವಲ್ಲ. ಮಾನವನ ಪೌರುಷಕ್ಕಿಂತ ವಿಧಿಯ ಬಲವೇ ಮಿಗಿಲು ಎಂದಷ್ಟೆ ಹೇಳಬಲ್ಲೆ. ದುರ್ಯೋದನ, ನಾವು ಏನನ್ನಾದರೂ ಮಾಡಲು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ. ವಿಧಿ, ಅದಕ್ಕೆ ವ್ಯತಿರಿಕ್ತವಾಗಿದ್ದರೆ, ಅದಕ್ಕಾಗಿ ನಾವು ಪರಸ್ಪರ ಬೈದುಕೊಳ್ಳುವುದು ತಪ್ಪು. ವಿಧಿ ನಾವು ಮಾಡುವುದನ್ನೇ ಕಾದುಕೊಂಡೇ ಇರುತ್ತದೆ. ಕೊನೆಗೆ ಗೆಲ್ಲುವುದು ವಿಧಿಯೇ" ಎಂದನು.
ಅಷ್ಟೊತ್ತಿಗೆ ಅವರು ಸೈನ್ಯದ ಅಂಚಿಗೆ ಬಂದಿದ್ದರು. ಪಾಂಡವ ಸೈನ್ಯವೂ ಯುದ್ದಕ್ಕೆ ಸಜ್ಜಾಗಿತ್ತು.
ಅದೊಂದು ಭೀಕರ ಯುದ್ಧ. ಕಾಳರಾತ್ರಿಯ ಕಗ್ಗತ್ತಲ್ಲಿನಲ್ಲಿ ಎದುರಾಳಿ ಯಾರೆಂಬುದೇ ತಿಳಿಯದೇ ಮಾಡುವ ಕೊಲೆಗಳ ಸರಮಾಲೆ! ಎರಡೂ ಸೈನ್ಯಗಳು ಕಗ್ಗಕತ್ತಲಲ್ಲೇ ಒಂದರಮೇಲೊಂದು ಬಿದ್ದವು. ಧ್ವನಿಗಳ ಆಧಾರದ ಮೇಲೆಯೇ ಒಬ್ಬರನ್ನೊಬ್ಬರು ಗುರುತಿಸಬೇಕು. ಕೌರವರ ಮುತ್ತಿಗೆಗೆ ತಪ್ಪಿಸಿಕೊಳ್ಳದಂತೇಯೇ ಆಗದಂತಹ ಅವರ ಮುತ್ತಿಗೆಯಿಂದ ಪಾಂಡವ ಸೇನೆಯನ್ನು ಕಾಪಾಡಲು ಭೀಮನು ಮುಂದಾದನು. ದುರ್ಯೋದನ ಯುದಿಷ್ಠಿರರ ನಡುವೆ ಕೊನೆಯಿಲ್ಲವೇನೋ ಎಂದೆನಿಸುವಂತಿದ್ದ. ದ್ರೋಣನು ಬಂದು ಸಂಕುಲವನ್ನಾಗಿಸಿದನು. ಗುರಿಯಿಲ್ಲದ ಬಾಣಗಳು ಕತ್ತಲಲ್ಲಿ ಎಲ್ಲೆಂದರಲ್ಲಿ ಚೆಲ್ಲಾಡಿದವು. ಶಕ್ತ್ಯಾಯುಧಗಳು ಮಿಂಚಿನಂತೆ ಹೊಳೆದು ಮಾಯವಾಗುತ್ತಿದ್ದವು. ಸೈನ್ಯನಾಶದ ಕಾಲಪುರುಷನಾಗಲು ದ್ರೋಣನಿಗೂ ಭೀಮನಿಗೂ ಸ್ಪರ್ಧೆ ಏರ್ಪಟ್ಟಂತಿತ್ತು. ಕತ್ತಲಲ್ಲೂ ಭೀಮನ ಕೈಗೆ ಕೆಲವು ಧಾರ್ತರಾಷ್ಟ್ರರು ಸಿಕ್ಕಿ ಹತರಾದರು. ಸೋಮದತ್ತನು ಸಾತ್ಯಕಿಯನ್ನು ದ್ವಂದ್ವದಲ್ಲಿ ಸಿಲುಕಿಸಿಕೊಂಡನು. ತನ್ನ ಮಕ್ಕಳು ಶಲ, ಭೂರಿಶ್ರವಸ್ಸು ಇಬ್ಬರನ್ನೂ ಒಂದೇ ದಿನ ಕಳೆದುಕೊಂಡು ದುಃಖಿತನಾಗಿದ್ದ ಅವನ ಕೋಪ ಅಸಾಧ್ಯವಾಗಿತ್ತು.
ಯುದ್ಧ ಭೀಕರವಾಗುತ್ತಿದ್ದಂತೆ ಸಾತ್ಯಕಿ ಮೇಲುಗೈ ಸಾಧಿಸುತ್ತಿದ್ದಂತೆ ದುರ್ಯೋದನನು ವೃದ್ಧನಿಗೆ ನೆರವಾಗಬೇಕಾಯಿತು.
ಇತ್ತ ದೃಷ್ಟದ್ಯುಮ್ನನು ಸಾತ್ಯಕಿಯ ಸಹಾಯಕ್ಕೆ ನಿಂತನು. ಮೂರ್ಛಿತನಾದ ಸೋಮದತ್ತನನ್ನು ರಣರಂಗದಿಂದ ದೂರ ಸಾಗಿಸಲಾಗಿತ್ತು. ಅಶ್ವತ್ಥಾಮನು ಈಗ ಸಾತ್ಯಕಿಯನ್ನು ಎದುರಿಸಿದನು. ಘಟೋತ್ಕಚನು ಅಶ್ವತ್ಥಾಮನ ಎದುರಿಗೆ ಬಂದು ನಿಂತನು. ಆ ಕತ್ತಲಿನ ಅವನ ಭೀಕರ ರೂಪ, ವಿಕಾರವಾದ ಚೀತ್ಕಾರ, ಇಡೀ ಸೈನ್ಯವನ್ನೇ ನಡುಗಿಸುವಂತಿತ್ತು. ಅವನ ಜೊತೆಯಲ್ಲಿ ರಾಕ್ಷಸರ ಹಿಂಡೆ ಬಂದಿತ್ತು. ರಾತ್ರಿಯಾದ್ದರಿಂದ ರಾಕ್ಷಸರಿಗೆ ಸಹಜವಾಗಿಯೇ ಶಕ್ತಿ ಇತ್ತು. ಘಟೋತ್ಕಚನು ಮಾಯಾಯುದ್ಧವನ್ನು ಪ್ರಾರಂಭಿಸಿದನು. ಅಶ್ವತ್ಥಾಮನು ಇದಕ್ಕೆಲ್ಲ ಅಂಜುವ ಕುಳಿಯೇನಲ್ಲ. ಅವನು ಮಾಯೇಯನ್ನು ಅಸ್ತ್ರಗಳಿಂದ ನಿವಾರಿಸಿತೊಡಗಿದನು. ಇದರಿಂದ ಕೆರಳಿದ ಘಟೋತ್ಕಚನು ಇನ್ನೂ ಭೀಕರನಾದನು. ಅವರಿಬ್ಬರ ದ್ವಂದ್ವಯುದ್ದವು ನೋಡುವಂತಿತ್ತು. ಘಟೋತ್ಕಚನ ಧನುರ್ವಿದ್ಯಾ ನೈಪುಣ್ಯವನ್ನು ಅದುವರೆಗೆ ಯಾರೂ ನೋಡಿರಲಿಲ್ಲ. ಅಶ್ವತ್ಥಾಮನೆಸೆದ ಚಕ್ರಾಯುಧವನ್ನು ಅಣುವಾಗಿ ತಪ್ಪಿಸಿಕೊಂಡ ಘಟೋತ್ಕಚನು, ಒಮ್ಮೆಲೆ ಮುಗಿಲೆತ್ತರಕ್ಕೆ ಬೆಳೆದು, ಪುನಃ ಮಾಯಾಯುದ್ಧವನ್ನು ಆರಂಭಿಸಿದನು. ಅಶ್ವತ್ಥಾಮನೆದುರಿಗೆ ಅದು ನಡೆಯದೇ, ಪುನಃ ಸಾಮಾನ್ಯನಂತೆ ಯುದ್ಧ ಮಾಡಬೇಕಾಗಿ ಬಂದಿತು. ರಾಕ್ಷಸ ಸಮೂಹವನ್ನು ಕಂಡು ಹೆದರಿದ ರಾಜನನ್ನು, ಅಶ್ವತ್ಥಾಮನು ಸಮಾದಾನ ಮಾಡಿ, "ಅದರ ವಿಚಾರವನ್ನು ತನಗೆ ಬಿಡುವಂತೆ" ಹೇಳಿದನು.
ದುರ್ಯೋದನನು ಶಕುನಿಯಿದ್ದಲ್ಲಿಗೆ ಹೋಗಿ, ಅವನನ್ನು ಪಾಂಡವರೊಡನೆ ಹೋರಾಡಲು ಕಳುಹಿಸಿದನು. ಅಶ್ವತ್ಥಾಮನು ಭಯಂಕರವಾಗಿದ್ದುದನ್ನು ಪಾಂಡವರು ನೋಡಿದ್ದು ಇದೇ ಮೊದಲು. ಶಂಕರನಂತೆ ನಿಂತ ಅವನ ಬಾಣಗಳನ್ನು, ಘಟೋತ್ಕಚನ ಹೊರತು ಇನ್ನಾರೂ ತಾಳಲಾರದೇ ಹೋದರು. ಘಟೋತ್ಕಚನು ಪಾಂಚಾಲ ರಾಜಕುಮಾರನೂ ಚೆನ್ನಾಗಿಯೇ ಯುದ್ಧ ಮಾಡಿದರೂ, ಅಶ್ವತ್ಥಾಮನು ಪಾಂಚಾಲ ರಾಜನನ್ನು ಕೊಂದದ್ದಲ್ಲದೇ, ಘಟೋತ್ಕಚನನ್ನೂ ಗಾಯಗೊಳಿಸಿ ನೋಯಿಸಿದನು. ಮೂರ್ಛೆ ಹೋದ ಅವನನ್ನು ರಣರಂಗದಿಂದ ಕೆಲ ಕಾಲ ಹೊರಗೊಯ್ಯಲಾಯಿತು. ರಾಕ್ಷಸಸೇನೆ ಅಶ್ವತ್ಥಾಮನಿಂದ ಬಹುವಾಗಿ ಘಾಸಿಗೊಳಾಯಿತು. ಮಕ್ಕಳನ್ನು ಕಳೆದುಕೊಂಡ ದ್ರುಪದ, ಘೋರ ಯುದ್ಧ ಮಾಡಿದನು.
ಸೋಮದತ್ತನ ತಂದೆ ಬಾಹ್ಲೀಕ ಮತ್ತು ಭೀಮನ ನಡುವೆ ಘೋರ ದ್ವಂದ್ವ ಯುದ್ಧವು ನಡೆಯಿತು. ರಣರಂಗದಲ್ಲಿ ಯಾವ ಯುವಕನಿಗೂ ಕಡಿಮೆಯಿಲ್ಲದಂತೆ ಬಾಹ್ಲೀಕ ಹೋರಾಡುತ್ತಿದ್ದನು. ಭೀಮನು ಅವನನ್ನು ಬಲವಾದ ಒಂದು ಗದಾಪ್ರಹಾರದಿಂದ ಕೊಂದು ಹಾಕಿದನು. ಕುರುವಂಶದ ಹಿರಿಯನೊಬ್ಬನು ಬಿದ್ದನು ಎಂದು ಹಾಹಾಕಾರವಾಯಿತು. "#ಭೀಷ್ಮರೂ_ಸಹ_ಬಾಹ್ಲೀಕನಿಗಿಂತ_ಚಿಕ್ಕವನು. ಇದನ್ನು ನೋಡಿದ ಧಾರ್ತರಾಷ್ಟ್ರರು ಅವನ ಮೇಲೇರಿ ಬಂದರು. ಅವರಲ್ಲಿ ಹತ್ತು ಜನರನ್ನು ಕೊಂದದ್ದಲ್ಲದೇ, ತನ್ನ ಸೈನ್ಯದೊಂದಿಗೆ ಬಂದಿದ್ದ ಶಕುನಿಯ ಸೋದರರನ್ನೂ ಸಹ ಭೀಮನುಅವರನ್ನು ಕೊಂದು ಹಾಕಿದನು.
ದ್ರೋಣನು ಯುಧಿಷ್ಠಿರನ ಮೇಲೆ ತನ್ನಲ್ಲಿದ್ದ ಎಲ್ಲ ಅಸ್ತ್ರಗಳನ್ನೆಲ್ಲ ಪ್ರಯೋಗಿಸಿದನು. ಅವೆಲ್ಲವೂ ನಿಷ್ಫಲವಾಗಲೂ, ಬ್ರಹ್ಮಾಸ್ತ್ರವೇ ಅಭಿಮಂತ್ರಿಸಿದನು. ಯುಧಿಷ್ಠಿರನು ಅದನ್ನು ಬ್ರಹ್ಮಾಸ್ತ್ರದಿಂದಲೇ ನಿವಾರಿಸಿದನು. ದ್ರೋಣನು ಕೊನೆಗೆ ಹಿಂತೆಗೆದು ತನ್ನ ಗಮನವನ್ನು ಬೇರೆಡೆಕಡೆಗೆ ಹರಿಸಿದನು.
ಭೀಮಾರ್ಜುನರಿಬ್ಬರೂ ಮುಂದೆ ಬಂದು ದ್ರೋಣನನ್ನೆದುರಿಸಿದರು. ಕೌರವ ಸೇನೆಯು ಕರಗತೊಡಗಿತು. ಸಹೋದರರಿಬ್ಬರೂ ಕೌರವರ ಮೇಲೆ ಬಾಣಗಳ ಮಳೆಯನ್ನೇ ಸುರಿಸಿದರು.
ಮೃತ್ಯುವಿನ ಈ ರುದ್ರತಾಂಡವದಿಂದ ದುಃಖಿತನಾದ ರಾಜನನ್ನು ರಾಧೇಯನು ಸಮಾದಾನ ಪಡಿಸಿ, ತನ್ನ ಪ್ರತಾಪವನ್ನು ಹೇಳಿಕೊಂಡು, ತಾನೆ ಅರ್ಜುನನ್ನು ಎದುರಿಸಿ ಶಕ್ತ್ಯಾಯುಧದಿಂದ ಅವನನ್ನು ಕೊಲ್ಲುತ್ತೇನೆಂದು ಹೊರಟನು.
ಈ ಮಾತನ್ನು ಕೇಳುತ್ತಿದ್ದ
ಕೃಪನು:- "ಆಹಾ, ಏನು ಶೌರ್ಯ ರಾಧೇಯನದು! ಎಲ್ಲವೂ ಮಾತಿನಲ್ಲೇ! ಕೇಲವೇ ತಿಂಗಳ ಹಿಂದೆ ವಿರಾಟನ ಗೋವುಗಳನ್ನು ಹಿಡಿಯುವಾಗ ನೋಡಲಿಲ್ಲವೇ! ಇವನ ಶೌರ್ಯವನ್ನು! ಮಾತು ಶೋಭಿಸಿವುದು ಬ್ರಾಹ್ಮಣನಿಗೆ ಮಾತ್ರ. ಕ್ಷತ್ರಿಯನಾದವನು ಕಾರ್ಯಮಾಡಿ ತೋರಿಸಬೇಕು. ಸುಮ್ಮನೆ ಮಾಗಿಯ ಮೇಘದಂತೆ ವ್ಯರ್ಥವಾಗಿ ಬಡಬಡಿಸಿದರೇ ಏನು ಪ್ರಯೋಜನ ?" ಎಂದು ಛೇಡಿಸಿದನು.
ರಾಧೇಯನು:- "ಯುಧಿಷ್ಠಿರನು ಧರ್ಮವನ್ನು ಬಿಟ್ಟುಹೋಗುವವನಲ್ಲ; ಅರ್ಜುನ ವೀರರಲ್ಲಿ ವೀರ; ಅವರಿಗೆ ಕೃಷ್ಣನ ಸಹಾಯವಿದೆ; ಇದೆಲ್ಲವೂ ಸರಿಯೇ. ಆದರೇ ಅರ್ಜುನನ್ನು ನಾನು ಅವರಪ್ಪನೇ ಕೊಟ್ಟಿರುವ ಶಕ್ತ್ಯಾಯುಧದಿಂದ ಗೆದ್ದು, ನನ್ನ ಏಕೈಕ ಮಿತ್ರನಾದ ದುರ್ಯೋಧನನನ್ನು ಸಂತೋಷಪಡಿಸುತ್ತೇನೆ. ವಿಜಯಶ್ರೀ ಕೊನೆಗೆ ಯಾರಿಗೆ ಮಾಲೆ ಹಾಕುವಳೋ ಯಾರಿಗೆ ಗೊತ್ತು? ಈವರೆಗೆನೋ ಅವಳು ಪಾಂಡವರ ಪರವಾಗಿದ್ದಾಳೆ. ಪಾಂಡವರು ಹೆಚ್ಚು ಬಲಶಾಲಿಗಳೆಂದು ನಾನೊಪ್ಪುವುದಿಲ್ಲ. ನನ್ನಿಂದ ಸಾಧ್ಯವದಷ್ಟು ಹೋರಾಡುವೆನು; ಫಲವು ವಿಧಿಯ ಕೈಯಲ್ಲಿರುವಂಥಾದ್ದು. ವಿಧಿಯೇ ಹೆಚ್ಚಿನದು. ಅರ್ಜುನನಲ್ಲ. ಕೃಪ, ನೀನು ಪಾಂಡವರ ಪಕ್ಷಪಾತಿ. ನಿನ್ನ ಮಾತು ಯಾವಾಗಲೂ ಅವರ ಕಡೆಗೆ" ಎಂದೇ ಈಗ ನಿನ್ನ ನಾಲಿಗೆಯನ್ನು ಸೀಳುವೆನು" ಎನ್ನುತ್ತಾ ಕತ್ತಿಯನ್ನು ಎತ್ತಿದನು.
ಸಮಯಕ್ಕೆ ಸರಿಯಾಗಿ ಬಂದು ಅವನನ್ನು ತಡೆದ
ಅಶ್ವತ್ಥಾಮನು:- "ನನ್ನ ಸೋದರ ಮಾವನ ಮೇಲೆ ಏರಿ ಹೋಗುವೆಯಾ ನಿನ್ನನ್ನು ಕೊಲ್ಲುತ್ತೇನೆ" ಎಂದು ನುಗ್ಗಿದನು.
ಅದೇ ಸಮಯಕ್ಕೆ ಬಂದು ಅವನನ್ನು ತಡೆದ
ದುರ್ಯೋಧನನು:- "ಅಶ್ವತ್ಥಾಮ, ಸಾಕು ನಿಲ್ಲಿಸು. ವ್ಯಕ್ತಿಗಳ ಜಗಳಗಳಿಗೆ ಇದು ಸಮಯವಲ್ಲ. ಯುದ್ಧವನ್ನು ಗೆಲ್ಲಲು ನಾನು ನಿಮ್ಮೆಲ್ಲರನ್ನೂ ಅವಲಂಬೀಸಿರುವೆನು. ಪಾಂಡವ ಸೇನೆಯು ಈಗಲೂ ನಮ್ಮಮೇಲೆ ನುಗ್ಗಿ ಬರುತ್ತಿರುವುದು. ನೀನೀಗ ರಾಧೇಯನ ಮೇಲಿನ ಕೋಪವನ್ನು ಬಿಡು" ಎಂದನು.
ಅಶ್ವತ್ಥಾಮನು ದುರ್ಯೋಧನನ ಮಾತನ್ನು ತೆಗೆದು ಹಾಕಲಾರದೇ ಮನಸ್ಸನ್ನು ತಾನೇ ಸಮಾದಾನ ಮಾಡಿಕೊಂಡನು. ರಾಧೇಯನು ಬಿಲ್ಲನ್ನು ತೆಗೆದುಕೊಂಡು ಪಾಂಡವರ ಸೈನ್ಯದ ಕಡೆಗೆ ಹೊರಟನು ಹೋದನು.
-:ಶ್ರೀಕೃಷ್ಣಾರ್ಪಣಮಸ್ತು:-
ಬರಹ:- ಗಣೇಶ್ ಗೋಸಾವಿ
No comments:
Post a Comment