Wednesday, 24 June 2020

ನಿಜವಾದ ಪುಷ್ಪಾರ್ಚನೆ

🚩 *🍁 ಸಚ್ಚಿಂತನೆ.🍁*

🌸 *ನಿಜವಾದ ಪುಷ್ಪಾರ್ಚನೆ.*🌸

🌼 ಭಗವಂತನನ್ನು ದೇವಾಲಯಗಳಲ್ಲಿ ಮತ್ತು ಮನೆಗಳಲ್ಲೂ ಸಹ ಸಾಮಾನ್ಯವಾಗಿ ಹೂವಿನಿಂದ ಪೂಜಿಸುತ್ತೇವೆ. ಎಷ್ಟು ತುಟ್ಟಿಯಾದ (ಹೆಚ್ಚು ಬೆಲೆಯುಳ್ಳ) ಹೂವಿನಿಂದ ಪೂಜಿಸುತ್ತೇವೆಯೋ ಅಷ್ಟು ಪುಣ್ಯ ಬರುತ್ತದೆ ಎಂದು ನಮ್ಮಲ್ಲನೇಕರು ಭಾವಿಸುತ್ತೇವೆ.

🌸 ಎಷ್ಟು ದುಡ್ಡು ಖರ್ಚು ಮಾಡಿ ಪೂಜೆ ಮಾಡಿದೆವು ಎಂದು ಹಲವರು ಸಂಭ್ರಮದಿಂದ ಹೇಳಿಕೊಳ್ಳುವುದನ್ನೂ ಸಹ ಸಾಮಾನ್ಯವಾಗಿ ನೋಡುತ್ತಿರುತ್ತೇವೆ.

🌼 ಗಿಡಗಳಲ್ಲಿ ಬಿಡುವ ಹೂವು ಸಾಲದೆಂದು ಕೆಲವು ಧನವಂತರು ಬಂಗಾರದ ಹೂವುಗಳನ್ನು ಮಾಡಿಸುತ್ತಾರೆ. 

🌸 ಶಿವನಿಗೆ ಬಂಗಾರದ ಬಿಲ್ವಪತ್ರೆಗಳನ್ನೂ, ವಿಷ್ಣುವಿಗೆ ಬಂಗಾರದ ತುಳಸೀ ದಳಗಳನ್ನೂ, ಅಮ್ಮನವರಿಗೆ ಬಂಗಾರದ ಹೂವುಗಳಿಂದ ಅರ್ಚಿಸಿ ಅದು ತಮ್ಮ ಉನ್ನತವಾದ ಭಕ್ತಿಗೆ ನಿದರ್ಶನವೆಂದು ಭಾವಿಸುತ್ತಾರೆ. 

🌼 ಭೋಗಗಳಿಗೆ ನಿಲಯವಾಗಿರುವ ಪಾಶ್ಚಾತ್ಯ ದೇಶಗಳಲ್ಲಿ ನಿವಾಸವಿರುವ ಭಾರತೀಯರಲ್ಲಿ ಈ ಲಕ್ಷಣಗಳು ಸ್ವಲ್ಪ ಹೆಚ್ಚಾಗಿಯೇ ಕಂಡುಬರುತ್ತವೆ. 

🌸 ಆದರೆ, 
ಭಗವಂತನು, ಹೂವುಗಳ ಬೆಲೆಯನ್ನಾಧರಿಸಿ ವರ್ತಕನಂತೆ ಪುಣ್ಯವನ್ನು ಕರುಣಿಸುವುದಿಲ್ಲ. 

🌼 ಪುಷ್ಪಾರ್ಚನೆಯ ಸಮಯದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಮುಖ್ಯವಾದುದು ಭಕ್ತಿಯಾಗಿದೆ. 

🌸 ಇದೇ ವಿಷಯವನ್ನು ಗೀತೆಯಲ್ಲಿ *ಪತ್ರಂ, ಪುಷ್ಪಂ, ಫಲಂ, ತೋಯಂ* (ಎಲೆ, ಹೂವು, ಹಣ್ಣು, ನೀರು) ಇವುಗಳಲ್ಲಿ ಯಾವುದನ್ನಾದರೂ ನನಗೆ ಭಕ್ತಿಯಿಂದ ಅರ್ಪಿಸಿದರೆ ಸಾಕು ಎಂದು ಸ್ವಯಂ ಕೃಷ್ಣನೇ ಅಪ್ಪಣೆ ಕೊಡಿಸಿದ್ದಾನೆ. 

🌼 ದೇವರಿಗೆ ಸಮರ್ಪಿಸ ಬೇಕಾಗಿರುವುದು ಮನಸ್ಸು ಎನ್ನುವ ಪುಷ್ಪ ಎಂದು ಆದಿ ಶಂಕರರು ತಮ್ಮ ಶಿವಾನಂದ ಲಹರಿಯಲ್ಲಿ ವಿವರಿಸಿದ್ದಾರೆ.

🌸 ಹಾಗಾದರೆ, 
ಭಗವಂತನಿಗೆ ಇಷ್ಟವಾದ ಪುಷ್ಪವಾವುದು.? 
ತಾವರೆ, ನೈದಿಲೆ, ಸೇವಂತಿಗೆ, ಮಲ್ಲಿಗೆ, ಸಂಪಿಗೆ, ಕಣಗಿಲೆ, ಇವೆಲ್ಲಾ ಹೂವುಗಳನ್ನೂ ಸಹ ದೇವರ ಪೂಜೆಗೆ ಬಳಸಬಹುದು ನಿಜ. ಆದರೆ, ನಿಜವಾಗಿ ಅರ್ಪಿಸ ಬೇಕಾಗಿರುವುದು ಅವನಿಗೆ ಇಷ್ಟವಾದ ಎಂಟು ಪುಷ್ಪಗಳನ್ನು.

*ಅಹಿಂಸಾ ಪ್ರಥಮಂ ಪುಷ್ಪಂ ಪುಷ್ಪಮಿಂದ್ರಿಯ ನಿಗ್ರಹಾಃ*
*ಸರ್ವಭೂತ ದಯಾಪುಷ್ಪಂ ಕ್ಷಮಾಪುಷ್ಪಂ ವಿಶೇಷತಃ l*
*ಶಾಂತಿಪುಷ್ಪಂ ತಪಃsಪುಷ್ಪಂ ಧ್ಯಾನಪುಷ್ಪಂ ತಥೈವ ಚ*
*ಸತ್ಯಮಷ್ಟವಿಧಂ ಪುಷ್ಪಂ ವಿಷ್ಣೋಃ ಪ್ರೀತಿಕರಂ ಭವೇತ್ ll*

🌼 ಭಗವಂತನಿಗೆ ಪ್ರಿಯವಾದ ಪುಷ್ಪಗಳಲ್ಲಿ ಮೊದಲನೆಯದೆ *ಅಹಿಂಸೆ.*

🌸 ಯಾವುದೇ ಜೀವಿಯನ್ನಾಗಲಿ ಯಾವುದೇ ವಿಧವಾಗಿ ಕಷ್ಟಕ್ಕೆ ಗುರಿ ಮಾಡಬಾರದು. 

🌼 ಒಬ್ಬರ ಮನಸ್ಸನ್ನು ಮಾತುಗಳ ಮೂಲಕವೂ ನೋಯಿಸಬಾರದು. 

🌸 ಮನಸ್ಸಿನಲ್ಲಿಯೂ ಸಹ ಯಾರಿಗೂ ಕೇಡೆಣಿಸ ಬಾರದು.

🌼 ಎರಡನೆಯ ಪುಷ್ಟವೆ *ಇಂದ್ರಿಯ ನಿಗ್ರಹ.*

🌸 ಮನಸ್ಸಿನಲ್ಲಿ ಬಯಕೆ ಹುಟ್ಟುವುದೇ ತಡ ನ್ಯಾಯಾ ನ್ಯಾಯಗಳನ್ನು, ಧರ್ಮಾ ಧರ್ಮಾಗಳನ್ನು ನೋಡದೆ. 

🌼 ಇತರರಿಗೆ ಅದರಿಂದ ಯಾವ ವಿಧವಾದ ಕೆಡುಕಾಗ ಬಹುದೆನ್ನುವ ವಿವೇಚನೆಯಿಲ್ಲದೆ ತಮ್ಮ ಆಸೆಗಳನ್ನು ಪೂರೈಸಿಕೊಳ್ಳುವುದು.

🌸 ಇಂದ್ರಿಯಗಳ ಮೇಲೆ ಯಾವುದೇ ವಿಧವಾದ ಹಿಡಿತವಿಲ್ಲವೆನ್ನುವುದರ ಲಕ್ಷಣಗಳು. 

🌼 *ಇಂದ್ರಿಯ ನಿಗ್ರಹವು* ದೇವರಿಗೆ ಇಷ್ಟವಾದ ಮತ್ತೊಂದು ಪುಷ್ಪ.

🌸 *ಸರ್ವಭೂತ ದಯೆ* ಮೂರನೆಯ ಪುಷ್ಪ. 

🌼 ಸಹ ಮಾನವರ ಮೇಲೆ ಅಷ್ಟೇ ಅಲ್ಲ ಸಕಲ ಜೀವರಾಶಿಗಳಲ್ಲಿ - ಪ್ರಾಣಿ, ಪಕ್ಷಿ, ಕ್ರಿಮಿ, ಕೀಟಾದಿಗಳು, ಸಸ್ಯಗಳ ಮೇಲೆಯೂ ದಯೆ ತೋರ ಬೇಕೆನ್ನುವುದು ಸನಾತನ ಭಾರತೀಯ ತತ್ತ್ವ.

🌸 ನಾಲ್ಕನೇ ಪುಷ್ಪವೇ *ಕ್ಷಮಾಗುಣ.* ನಮಗೆ ಅಪಕಾರ ಮಾಡಿದವರಿಗೂ ಸಹ ಉಪಕಾರ ಮಾಡಬೇಕು ಅವರ ಮೇಲೆ ಪ್ರತೀಕಾರ ಸಲ್ಲದು ಎನ್ನುವುದೇ ಕ್ಷಮಾಗುಣ.

🌼 *ಶಾಂತಿ* ಐದನೆಯ ಪುಷ್ಪ. ಮನಸ್ಸು ಉದ್ವೇಗಕ್ಕೆ ಒಳಗಾಗ ಬಾರದು. 

🌸 ಸುಖ ಬಂದಾಗ ಹಿಗ್ಗುವುದು, ದುಃಖ ಬಂದಾಗ ಕುಗ್ಗುವುದು, ಹೊಗಳಿದರೆ ಉಬ್ಬಿ ಹೋಗುವುದು, ತೆಗಳಿದರೆ ಕುಗ್ಗಿ ಹೋಗುವುದು ಒಳ್ಳೆಯದಲ್ಲ, ಮನಸ್ಸನ್ನು ಪ್ರಶಾಂತವಾಗಿರಿಸಿ ಕೊಳ್ಳಬೇಕು.

🌼 ಆರನೆಯ ಪುಷ್ಪವೆ *ತಪಸ್ಸು.* ತಪಸ್ಸೆಂದರೆ ಸುತ್ತಲೂ ಹುತ್ತ ಬೆಳೆಯುವವರೆಗೆ ಒಂಟಿಕಾಲಿನ ಮೇಲೆ ನಿಲ್ಲುವುದೆಂದಲ್ಲ. 
ಆ ಮಾತಿಗೆ ಅರ್ಥ ಕೆಟ್ಟ ವಿಷಯಗಳನ್ನು ದೂರವಿರಿಸಿ ಒಳ್ಳೆಯ ಕಾರ್ಯಗಳನ್ನು ಸಾಧಿಸುವ ಚಲವನ್ನು ಹೊಂದಿರುವುದು.

🌸 ಏಳನೆಯ ಪುಷ್ಪವೆ *ಧ್ಯಾನ.* ಶಂಖದಿಂದ ಬಿದ್ದರೇನೆ ತೀರ್ಥ ಎನ್ನುವಂತೆ ಆಧುನಿಕ ವೈದ್ಯರೂ ಸಹ ಧ್ಯಾನವು ಮಾನಸಿಕ ಹಾಗು ಶಾರೀರಿಕ ಆರೋಗ್ಯಕ್ಕೆ ಒಳ್ಳೆಯದೆಂದು ಹೇಳುತ್ತಿದ್ದಾರೆ.

🌼 ಕಡೆಯದಾಗಿ ಹೇಳಿದ್ದರೂ ಸಹ ಮೊದಲನೆಯ ಸ್ಥಾನದಲ್ಲಿರ ಬೇಕಾಗಿರುವುದು ಎಂಟನೆಯ ಪುಷ್ಪವಾದ *ಸತ್ಯ.*

🌸 ಯಾವಾಗಲೂ ಸುಳ್ಳನ್ನು ಆಡದೇ ಇರುವುದು, ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು, ಮೋಸ ಮಾಡದೇ ಇರುವುದು, ಮೊದಲಾದವು ಸತ್ಯಪರಿಪಾಲನೆಯ ಕೆಳಗೆ ಬರುತ್ತವೆ.

🌼 ಭಗವಂತನನ್ನು ಸಾಮಾನ್ಯವಾದ ಹೂವುಗಳಿಂದಾಗಲಿ, ಬಂಗಾರದ ಹೂವುಗಳಿಂದಾಗಲಿ ಪೂಜಿಸಬಹುದು. 
ಆದರೆ, 
ಪೂಜಾ ಸಮಯದಲ್ಲಿ ತಪ್ಪದೇ ಅರ್ಪಿಸಬೇಕಾದದ್ದು ಮೇಲೆ ಹೇಳಿದ ಎಂಟು ಪುಷ್ಟಗಳನ್ನೆ. 

*ಭಗವಂತನಿಗೆ ಪ್ರಿಯವಾದ ಎಂಟು ಪುಷ್ಪಗಳು.*
*- ಅಹಿಂಸೆ, ಇಂದ್ರಿಯನಿಗ್ರಹ, ಭೂತದಯೆ, ಕ್ಷಮೆ, ಶಾಂತಿ, ತಪಸ್ಸು, ಧ್ಯಾನ ಮತ್ತು ಅತ್ಯಂತ ಪ್ರಮುಖವಾಗಿರುವುದು ಸತ್ಯ ಎನ್ನುವುದನ್ನು ಮರೆಯಬಾರದು.*.

*ಶ್ರೀ ಕೃಷ್ಣಾರ್ಪಣಮಸ್ತು. 🙏

No comments:

Post a Comment