Thursday, 18 June 2020

ಪರಶಿವನ ಭಯಂಕರ ರೂಪ

ಪರಶಿವನ ಭಯಂಕರ ರೂಪಗಳಾದ ಭೈರವ, ವೀರಭದ್ರ, ಗಜಾಸುರಸಂಹಾರಿ ಮತ್ತು ಅಘೋರಮೂರ್ತಿಗಳ ಸ್ಥಿರಚಿತ್ರ, ವಿಗ್ರಹಗಳಲ್ಲಿ ಮುಂಡಮಾಲೆಯನ್ನು ಧರಿಸಿರುವುದು ಸಾಮಾನ್ಯ ಸಂಗತಿಯಾಗಿದೆ. ಶಿವನ ಮುಂಡಮಾಲೆಯ ಬಗ್ಗೆ ವಿವಿಧ ವಿವರಣೆಗಳು ಪುರಾಣ ಪುಣ್ಯಕಥೆಗಳಲ್ಲಿ ನಮಗೆ ದೊರಕುತ್ತವೆ.

ಒಂದು ಮೂಲದ ಪ್ರಕಾರ ಶಿವನ ರುಂಡಮಾಲೆ, ಕಪಾಲಮಾಲೆ ಅಥವಾ ಮುಂಡಮಾಲೆಯಲ್ಲಿರುವ ರುಂಡಗಳ ಸಂಖ್ಯೆ 50-52. ಇದು ಸಂಸ್ಕೃತ ವರ್ಣಮಾಲೆಯಲ್ಲಿರುವ ಅಕ್ಷರಗಳ ಸಂಖ್ಯೆಯಾಗಿದ್ದು ಸರ್ವಮಂತ್ರಗಳಿಗೂ, ಸರ್ವಶಬ್ದಗಳಿಗೂ ಮೂಲವಾಗಿರುವ, ಅತ್ಯಂತ ಪವಿತ್ರವಾದ “ಓಂಕಾರ”ದ ಸಾಂಕೇತಿಕ ಸಂಖ್ಯೆಯಾಗಿದೆ. ಈ ರುಂಡಮಾಲೆಯನ್ನು ದರ್ಶಿಸುವವರಿಗೆ “ಓಂಕಾರ”ದ ನೆನಪಾಗಿ ಪರಮಾತ್ಮನ ಸ್ಮರಣೆಯನ್ನು ಮನಸ್ಸಿಗೆ ತರುವುದು ಮೂಲ ಉದ್ದೇಶವಾಗಿದೆ.

ಮತ್ತೊಂದು ವಿವರಣೆಯ ಪ್ರಕಾರ ಶಿವನ ರುಂಡಮಾಲೆಯಲ್ಲಿರುವ ರುಂಡಗಳ ಸಂಖ್ಯೆಯು 107 ಆಗಿತ್ತು. ಒಮ್ಮೆ ಶಿವನ ಅರ್ಧಾಂಗಿಯಾಗಿದ್ದ ಸತೀದೇವಿಯು ಶಿವನನ್ನು ಆತನ ರುಂಡಮಾಲೆಯ ಗೂಢಾರ್ಥವೇನೆಂದು ಪ್ರಶ್ನಿಸಿ ಉತ್ತರಕ್ಕೆ ಶಿವನನ್ನು ಬಹುವಾಗಿ ಒತ್ತಾಯಿಸುತ್ತಾಳೆ. ಆಕೆಯ ಒತ್ತಾಯಕ್ಕೆ ಮಣಿದು ಶಿವನು ಹೇಳುತ್ತಾನೆ “ಈ ರುಂಡಮಾಲೆಯಲ್ಲಿರುವ ಒಂದುನೂರ ಏಳು ರುಂಡಗಳೂ ನಿನ್ನ ಹಿಂದಿನ ಜನ್ಮಗಳಲ್ಲಿದ್ದ ರುಂಡಗಳು. 

ಈ ರುಂಡಮಾಲೆಗೆ ಮತ್ತೊಂದು ರುಂಡವೂ ಸೇರುವುದಿದೆ.” ಭಯಗೊಂಡ ಸತೀ ದೇವಿಯು “ನಾನು ಎಂದೆಂದಿಗೂ ನಿನ್ನನ್ನು ಬಿಟ್ಟಿರಲಾರೆ. ಸದಾ ನಿನ್ನೊಡನೆಯ ಇರುವಂತಹ ದೇಹವನ್ನು ನನಗೆ ಕರುಣಿಸು,” ಎಂದು ಶಿವನನ್ನು ಪ್ರಾರ್ಥಿಸುತ್ತಾಳೆ. ಆಗ ಶಿವನು, “ನಿನ್ನ ಮುಂದಿನ ರೂಪವು ಅನಂತವಾಗಿರುತ್ತದೆ,” ಎಂದು ಆಕೆಯನ್ನು ಸಮಾಧಾನಗೊಳಿಸುತ್ತಾನೆ. ಇದಾದ ಕೆಲವೇ ದಿನಗಳಲ್ಲಿ ದಕ್ಷಪ್ರಜಾಪತಿಯು ಯಜ್ಞ ಮಾಡುವಾಗ ಶಿವನನ್ನು ಮತ್ತು ತನ್ನ ಪುತ್ರಿ ಶಿವನ ಅರ್ಧಾಂಗಿಯೂ ಆಗಿದ್ದ ಸತೀದೇವಿಯನ್ನು ಆಹ್ವಾನಿಸದೇ ಅಪಮಾನಗೊಳಿಸುತ್ತಾನೆ. ಶಿವನ ಎಚ್ಚರಿಕೆಯ ಮಾತನ್ನು ಲೆಕ್ಕಿಸದೆ ಯಜ್ಞವನ್ನು ನೋಡಲು ಸತೀ ದೇವಿಯು ಹೋಗುತ್ತಾಳೆ. 

ಅಲ್ಲಿಯೂ ದಕ್ಷನು ಆಕೆಯನ್ನು ಅವಮಾನಗೊಳಿಸಿದುದೇ ಅಲ್ಲದೆ ಆಕೆಯ ಪತಿ, ಲೋಕನಾಥನಾದ ಶಿವನ ಅವಹೇಳನವನ್ನು ಮಾಡುತ್ತಾನೆ. ಇದರಿಂದ ಕುಪಿತಳಾದ ಸತೀ ದೇವಿಯು ಬೆಂಕಿಯಲ್ಲಿ ಹಾರಿ ಪ್ರಾಣ ತೊರೆಯುತ್ತಾಳೆ.

ಈಕೆಯೇ ಪುನಃ ಹಿಮವಂತನ ಮಗಳಾದ ಪಾರ್ವತಿಯಾಗಿ ಜನಿಸಿ, ಶಿವನ ಪತ್ನಿಯಾಗಬೇಕೆಂಬ ಆಕಾಂಕ್ಷೆಯಿಂದ ತಪಸ್ಸನ್ನಾಚರಿಸಿ ಶಿವನನ್ನು ಪಡೆಯುತ್ತಾಳೆ. ಆಗ ಪುನಃ ಶಿವನು ಇದೇ ವಿಚಾರವನ್ನು ಪ್ರಸ್ತಾಪಿಸಿ, ಪಾರ್ವತಿ ದೇವಿಯು ಅಮರಳೆಂದೂ, ಪರಶಿವನೊಂದಿಗೇ ಸದಾ ಜೀವಿಸಿರುತ್ತಾಳೆಂದೂ ನುಡಿಯುತ್ತಾನೆ. ಏತನ್ಮಧ್ಯೆ, ಬೆಂಕಿಯಲ್ಲಿ ಪ್ರಾಣಾರ್ಪಣೆ ಮಾಡಿಕೊಂಡಿದ್ದ ಸತೀ ದೇವಿಯ ರುಂಡವನ್ನು ಶಿವನು ತನ್ನ ಮುಂಡಮಾಲೆಯಲ್ಲಿ ಧರಿಸುತ್ತಾನೆ.

ಸರ್ವ ಜನ ಸುಖಿನೋಭವಂತು

No comments:

Post a Comment