Thursday, 18 June 2020

ರಾಮಾಯಣ

#ಹಿಂದೂ_ಧರ್ಮದ_ಇತಿಹಾಸ 

ರಾಮಾಯಣ---1

ರಾಮಾಯಣ ಹಿಂದೂಗಳ ಪವಿತ್ರಗ್ರಂಥಗಳಲ್ಲಿ ಮುಖ್ಯವಾದುದು. ಈ ಬೃಹತ್ಕಾವ್ಯವು ವಾಲ್ಮೀಕಿ ಋಷಿಯಿಂದ ರಚಿಸಲ್ಪಟ್ಟಿದೆ. ರಾಮಾಯಣವನ್ನು ತತ್ಪುರುಷ ಸಮಾಸವಾಗಿ ವಿಭಜಿಸಿದರೆ (ರಾಮನ+ಆಯಣ=ರಾಮಾಯಣ) "ರಾಮನ ಕಥೆ" ಎಂಬ ಅರ್ಥ ಬರುತ್ತದೆ. ರಾಮಾಯಣವು ೨೪೦೦೦ ಶ್ಲೋಕಗಳಿಂದುಂಟಾದ ೭ ಕಾಂಡಗಳಿಂದ ಕೂಡಿದೆ. ರಾಮಾಯಣದ ಕಥೆಯ ಮುಖ್ಯವಾಗಿ ಅಯೋಧ್ಯೆಯ ರಾಜಪುತ್ರ ರಾಮ, ಆತನ ಮಡದಿ ಸೀತೆ ಹಾಗೂ ಸೀತೆಯ ಅಪಹರಣ ಮಾಡಿದ ರಾವಣನ ಸಂಹಾರ ಕುರಿತಾಗಿದೆ. ವಾಲ್ಮೀಕಿಯಿಂದ ರಚಿತವಾದ ಈ ಕಾವ್ಯ ರಾಮನ ಮಕ್ಕಳಾದ ಲವ-ಕುಶರಿಂದ ಪ್ರಚಲಿತವಾಯಿತು.
ಇತ್ತೀಚಿನ ಸಂಶೋಧನೆಗಳಂತೆ ರಾಮಾಯಣದ ರಚನಾ ಕಾಲ ಕ್ರಿ.ಪೂ ೫ನೇ ಶತಮಾನದಿಂದ ಕ್ರಿ.ಪೂ ೧ನೇ ಶತಮಾನವೆಂದು ನಿರ್ಧರಿಸಲಾಗಿದೆ. ಈ ಕಾಲವು ಮಹಾಭಾರತದ ಮೊದಲ ಆವೃತ್ತಿಗಳಿಗೆ ಹತ್ತಿರವಾದ ಕಾಲ ಎಂದು ಹೇಳಲಾಗುತ್ತದೆ. ಆದರೆ ಬೇರೆ ಪೌರಾಣಿಕಗಳಂತೆ ಈ ಕಾವ್ಯವೂ ಅನೇಕ ಮಾರ್ಪಾಡುಗಳಿಗೆ ಒಳಗಾಗಿರುವುದರಿಂದ ಇದರ ನಿಖರವಾದ ಕಾಲ ಊಹಿಸುವುದು ಕಷ್ಟವಾಗಿದೆ.
ರಾಮಾಯಣವು ನಂತರದ ಸಂಸ್ಕೃತ ಕಾವ್ಯದ ಮೇಲೆ ಶ್ಲೋಕದ ಹೊಸ ಛಂದಸ್ಸಿನಿಂದಾಗಿ ಬಹುಮುಖ್ಯ ಪ್ರಭಾವ ಬೀರಿದೆ. ಇದು ಪುರಾತನ ಹಿಂದೂ ಋಷಿಗಳ ಬೋಧನೆಗಳನ್ನು ಕಥಾಮಾಧ್ಯಮದ ಮೂಲಕ, ಹಾಗೂ ತಾತ್ವಿಕ ಮತ್ತು ಭಕ್ತಿಸಂಬಂಧಿತ ಚರ್ಚಾಭಾಗಗಳ ಮೂಲಕ ಒಳಗೊಂಡಿದೆ. ರಾಮ, ಸೀತೆ, ಲಕ್ಷ್ಮಣ, ಭರತ, ಹನುಮಂತ ಮತ್ತು ಕಥೆಯ ಖಳನಾಯಕನಾದ ರಾವಣ ಈ ಎಲ್ಲ ಪಾತ್ರಗಳು ಭಾರತದ ಸಾಂಸ್ಕೃತಿಕ ಪ್ರಜ್ಞೆಯ ಭಾಗವಾಗಿವೆ.
ಪ್ರಾಚೀನ ಭಾರತದ ಪ್ರಮುಖ ಸಾಹಿತ್ಯಕ ಕೃತಿಗಳಲ್ಲೊಂದಾದ ರಾಮಾಯಣವು ಭಾರತ ಉಪಖಂಡದ ಕಲೆ ಮತ್ತು ಸಂಸ್ಕೃತಿಯ ಮೇಲೆ ಆಳವಾದ ಪ್ರಭಾವ ಬೀರಿದೆ. ರಾಮನ ಕಥೆಯು ಅನೇಕ ಭಾಷೆಗಳಲ್ಲಿ ನಂತರದ ಬಹಳಷ್ಟು ಸಾಹಿತ್ಯಕ್ಕೆ ಸ್ಫೂರ್ತಿಯಾಯಿತು. ಪ್ರಭಾವಗೊಂಡ ಪ್ರಮುಖರೆಂದರೆ, ೧೬ನೇ ಶತಮಾನದ ಹಿಂದಿ ಕವಿ ತುಳಸೀದಾಸರು, ೧೩ನೇ ಶತಮಾನದ ತಮಿಳು ಕವಿ ಕಂಬ, ೨೦ನೇ ಶತಮಾನದ ಕನ್ನಡದ ರಾಷ್ಟ್ರಕವಿ ಕುವೆಂಪು(ರಾಮಾಯಣ ದರ್ಶನಂ).
ರಾಮಾಯಣ ಕೇವಲ ಹಿಂದೂ ಧಾರ್ಮಿಕ ಕೃತಿಯಾಗಿ ಉಳಿದಿಲ್ಲ. ಎಂಟನೆ ಶತಮಾನದಿಂದ ಅನೇಕ ಭಾರತೀಯ ವಸಾಹತುಗಳು ದಕ್ಷಿಣಪೂರ್ವ ಏಷ್ಯಾದಲ್ಲಿ ಏರ್ಪಟ್ಟಾಗ ರಾಮಾಯಣದ ಕಥೆ ವಿವಿಧ ರೂಪಾಂತರಗಳ ಮೂಲಕ ಆ ದೇಶಗಳಿಗೂ ಹರಡಿತು. ಈ ಪ್ರದೇಶದಲ್ಲಿ ಖ್ಮೇರ್, ಮಜಪಾಹಿತ್, ಶೈಲೇಂದ್ರ, ಚಂಪಾ, ಶ್ರೀವಿಜಯ ಮೊದಲಾದ ಕೆಲವು ಮುಖ್ಯ ಭಾರತೀಯ ಸಾಮ್ರಾಜ್ಯಗಳು ಸ್ಥಾಪಿಸಲ್ಪಟ್ಟವು. ಇವುಗಳ ಮೂಲಕ ರಾಮಾಯಣ ಇಂಡೊನೇಷ್ಯಾ (ಜಾವಾ, ಸುಮಾತ್ರಾ ಮತ್ತು ಬೋರ್ನಿಯೊ), ಥೈಲೆಂಡ್, ಕಾಂಬೋಡಿಯ, ಮಲೇಷಿಯ, ವಿಯೆಟ್ನಾಮ್ ಮತ್ತು ಲಾಓಸ್ ಗಳಲ್ಲಿ ಸಾಹಿತ್ಯ, ಶಿಲ್ಪಕಲೆ ಮತ್ತು ನಾಟಕ ಮಾಧ್ಯಮಗಳಲ್ಲಿ ವ್ಯಕ್ತವಾಯಿತು.

ರಾಮಾಯಣದ ರಚನೆ

ರಾಮಾಯಣಗಳಲ್ಲೆಲ್ಲ ಹಳೆಯದೂ ಹೆಚ್ಚು ಜನರು ಓದುವಂಥದೂ ಆದ ವಾಲ್ಮೀಕಿಯ 'ರಾಮಾಯಣ'ವು ಅನೇಕ ಸಂಸ್ಕೃತಿಗಳಲ್ಲಿ ಬಳಕೆಯಲ್ಲಿರುವ ಅನೇಕ ರಾಮಾಯಣದ ಆವೃತ್ತಿಗಳಿಗೆ ಆಧಾರವಾಗಿದೆ. ಈ ಕೃತಿಯು ಅನೇಕ ಪೂರ್ಣ ಮತ್ತು ಅಪೂರ್ಣ ಹಸ್ತಪ್ರತಿಗಳಲ್ಲಿ ಉಳಿದುಕೊಂಡು ಬಂದಿದೆ. ಅವುಗಳಲ್ಲಿ ಅತ್ಯಂತ ಹಳೆಯದು ೧೧ನೆಯ ಶತಮಾನದ್ದು. ವಾಲ್ಮೀಕಿ ರಾಮಾಯಣದ ಪ್ರಸ್ತುತ ಪ್ರತಿಯು ಉತ್ತರ ಭಾರತದ ಹಾಗೂ ದಕ್ಷಿಣ ಭಾರತದ ಎರಡು ಪ್ರಾದೇಶಿಕ ಆವೃತ್ತಿಗಳ ರೂಪದಲ್ಲಿ ನಮಗೆ ಲಭ್ಯವಾಗಿದೆ . ವಾಲ್ಮೀಕಿ ರಾಮಾಯಣವನ್ನು ರಾಮನ ಜನ್ಮದಿಂದ ಹಿಡಿದು ಅವನ ಅವತಾರ ಸಮಾಪ್ತಿಯವರೆಗಿನ ಜೀವನವನ್ನು ಸಾಮಾನ್ಯವಾಗಿ ಏಳು ಕಾಂಡಗಳಾಗಿ ವಿಭಜಿಸಲಾಗುತ್ತದೆ .

ಬಾಲ ಕಾಂಡ – ರಾಮನ ಜನನ, ಬಾಲ್ಯ, ವನವಾಸಕ್ಕೆ ಹೋಗುವ ಮುನ್ನ ಅಯೋಧ್ಯೆಯಲ್ಲಿ ರಾಮ ಕಳೆದ ದಿನಗಳು, ವಿಶ್ವಾಮಿತ್ರನ ಕೋರಿಕೆಯಂತೆ ರಾಕ್ಷಸರನ್ನು ಸಂಹರಿಸಲು ಅವನೊಡನೆ ಅರಣ್ಯಕ್ಕೆ ತೆರಳುವುದು, ಸೀತಾ ಸ್ವಯಂವರ- ಈ ಘಟನೆಗಳನ್ನು ಬಾಲಕಾಂಡ ಒಳಗೊಂಡಿದೆ.

ಅಯೋಧ್ಯಾ ಕಾಂಡ – ಈ ಭಾಗದಲ್ಲಿ ಕೈಕೇಯಿಯು ದಶರಥನಲ್ಲಿ ಕೇಳಿಕೊಂಡಿದ್ದ ಮೂರು ವರಗಳಿಂದ ರಾಮನಿಗೆ ವನವಾಸವಾಗುತ್ತದೆ. ದಶರಥನು ಪುತ್ರಶೋಕವನ್ನು ತಾಳಲಾರದೆ ಮರಣಹೊಂದುತ್ತಾನೆ.

ಅರಣ್ಯ ಕಾಂಡ – ವನವಾಸದಲ್ಲಿ ರಾಮನ ಜೀವನ, ಸೀತೆಯ ಅಪಹರಣ ಈ ಭಾಗದಲ್ಲಿ ಚಿತ್ರಿತವಾಗಿದೆ.

ಕಿಷ್ಕಿಂಧಾ ಕಾಂಡ – ಸೀತೆಯನ್ನು ಅರಸುತ್ತಾ ರಾಮ ಕಿಷ್ಕಿಂಧೆಯಲ್ಲಿ ಎಂಬ ವಾನರ ಸಾಮ್ರಾಜ್ಯಕ್ಕೆ ಬರುತ್ತಾನೆ. ಅಲ್ಲಿ ಅವನಿಗೆ ಸುಗ್ರೀವ, ಹನುಮಂತ ಮುಂತಾದ ಕಪಿವೀರರ ಗೆಳೆತನವಾಗುತ್ತದೆ. ವಾನರಸೈನ್ಯವು ಸೀತೆಯನ್ನು ಹುಡುಕಲು ಪ್ರಾರಂಭಿಸುತ್ತದೆ.

ಸುಂದರ ಕಾಂಡ – ಹನುಮಂತನ ಬಗೆಗಿನ ವಿವರಗಳಿವೆ. ಹನುಮಂತನ ಇನ್ನೊಂದು ಹೆಸರು ಸುಂದರೆ ಎಂದಿರುವುದರಿಂದ ಈ ಭಾಗಕ್ಕೆ ಸುಂದರ ಕಾಂಡ ಎಂಬ ಹೆಸರು ಬಂದಿದೆ. ಹನುಮಂತ ಸಮುದ್ರ ಲಂಘನ ಮಾಡಿ ಲಂಕೆಯನ್ನು ಪ್ರವೇಶಿಸುತ್ತಾನೆ. ಸೀತೆಯು ರಾವಣನ ರಾಜ್ಯದಲ್ಲಿರುವ ಅಶೋಕವನದಲ್ಲಿ ಇರುವ ವಿಷಯವನ್ನುರಾಮನಿಗೆ ತಿಳಿಸುತ್ತಾನೆ.

ಯುದ್ಧ ಕಾಂಡ - ಈ ಭಾಗದಲ್ಲಿ ರಾಮ - ರಾವಣರ ಯುದ್ಧದಲ್ಲಿ, ರಾವಣ ಸಂಹಾರದ ನಂತರ ರಾಮ ತನ್ನ ಪರಿವಾರದೊಡನೆ ಅಯೋಧ್ಯೆಗೆ ಹಿಂತಿರುಗುತ್ತಾನೆ. ಅಲ್ಲಿ ಶ್ರೀರಾಮ ಪಟ್ಟಾಭಿಷೇಕ ನಡೆಯುವುದರ ಕುರಿತಾದ ವರ್ಣನೆಗಳಿವೆ.

ಉತ್ತರ ಕಾಂಡ – ರಾಮ,ಸೀತೆಯರು ವನವಾಸದ ನಂತರ ಅಯೋಧ್ಯೆಯಲ್ಲಿ ಕಳೆದ ದಿನಗಳು. ಅಗಸನ ಮಾತಿನ ಕಾರಣದಿಂದಾಗಿ ಸೀತೆಯನ್ನು ರಾಮ ಕಾಡಿಗಟ್ಟುವುದು, ಕಾಲಾಂತರದಲ್ಲಿ ರಾಮಾವತಾರ ಸಮಾಪ್ತಿಗೊಂಡ ವಿವರಗಳಿವೆ.

ವಾಲ್ಮೀಕಿ ರಾಮಾಯಣದ ಮೊದಲ ಮತ್ತು ಕಡೆಯ ಕಾಂಡಗಳನ್ನು ವಾಲ್ಮೀಕಿಯೇ ಬರೆದಿರುವದರ ಬಗ್ಗೆ ಸಂದೇಹಗಳಿವೆ . ಈ ಎರಡು ಅಧ್ಯಾಯಗಳು ಮತ್ತು ಉಳಿದ ಭಾಗದ ನಡುವೆ ಶೈಲಿಯಲ್ಲಿ ವ್ಯತ್ಯಾಸ ಮತ್ತು ಕಥೆಯಲ್ಲಿ ಅನೇಕ ವಿರೋಧಾಭಾಸಗಳಿದ್ದರೂ ಈ ಎರಡು ಅಧ್ಯಾಯಗಳು ಕೃತಿಯ ಬೇರ್ಪಡಿಸಲಾಗದ ಅಂಗ ಎಂದು ಅನೇಕ ತಜ್ಞರ ಅಭಿಪ್ರಾಯವಾಗಿದೆ. ರಾಮಾಯಣದಲ್ಲಿ ಕಂಡುಬರುವ ರಾಮನ ಜನ್ಮ, ಅವನ ದೈವೀ ಅಂಶ ಮತ್ತು ರಾವಣನನ್ನು ಕುರಿತಾದ ದಂತಕಥೆಗಳಂಥ ಅನೇಕ ಪೌರಾಣಿಕ ಅಂಶಗಳ ಬಹುಭಾಗ ಈ ಎರಡು ಅಧ್ಯಾಯಗಳಲ್ಲೇ ಕಂಡುಬರುತ್ತದೆ .

#ಮುಂದುವರೆಯುವುದು 

#ಶ್ರೀ_ಕೃಷ್ಣಾರ್ಪಣ_ಮಸ್ತು

No comments:

Post a Comment