Thursday, 18 June 2020

ಶ್ರುತ_ಪಂಚಮಿ

#ಶ್ರುತ_ಪಂಚಮಿ 

ಇದರ ಪ್ರಯುಕ್ತ ವಿಶೇಷ ಲೇಖನ 

ಶ್ರುತ ಪಂಚಮಿಯು ಜೈನರಿಗೆ  ಅತ್ಯಂತ ಮಹತ್ವದ ಹಬ್ಬವಾಗಿದ್ದು ಇದನ್ನು ಜ್ಯೇಷ್ಠಶುದ್ಧ ಪಂಚಮಿಯಂದು ಆಚರಿಸುತ್ತಾರೆ. ಈ ದಿನ ಜೈನ್ಯ ಮಂದಿರಗಳಲ್ಲಿರುವ ಸರಸ್ವತಿಯ ಪೂಜೆಯನ್ನೂ, ಶ್ರುತಸ್ಕಂದ, ಶಾಸ್ತ್ರಗ್ರಂಥಗಳ ಪೂಜೆಯನ್ನು ನಡಸುತ್ತಾರೆ. ತೀರ್ಥಂಕರ ವಾಣಿಯೇ ‘ಸರಸ್ವತಿ’ಯೆಂಬುದು ಜೈನರ ಸಿದ್ಧಾಂತ. ಇಂದ್ರನಂದಿಯ ಶ್ರುತವಾರ ಗ್ರಂಥದಲ್ಲಿ ಜಿನವಾಣಿ ಸರಸ್ವತಿ, ಸಮ್ಯಗ್‍ಜ್ಞಾನದ ಸಂಗ್ರಹವೇ ಶಾಸ್ತ್ರವೆಂದು ಹೇಳುತ್ತಾನೆ. ಈ ದೃಷ್ಟಿಯಿಂದ ಶ್ರುತಪಂಚಮಿಯ ಆರಾಧನೆಯೆಂದರೆ ಜೈನರಿಗೆ ಜ್ಞಾನದ ಆರಾಧನೆಯೇ ಆಗಿದೆಯೆನ್ನಬುದು.
ಶ್ರುತಪಂಚಮಿಯ ಹಿನ್ನಲೆಯನ್ನು ಜೈನ ಪುರಾಣಗಳು ಹೀಗೆ ವಿವರಿಸುತ್ತವೆ : ವೃಷಭದೇವನಿಂದ ಮೊದಲ್ಗೊಂಡು ವರ್ಧಮಾನರವರೆಗಿನ ತೀರ್ಥಂಕರರು ಜನತೆಗೆ ಉಪದೇಶಿಸಿದ ಆಗಮವು ಹನ್ನೆರಡು ಅಂಗಗಳಲ್ಲಿ ಸಂಗ್ರಹವಾಗಿದ್ದವು. ಮಹಾವೀರನ ತರುವಾಯ ಈ ಜ್ಞಾನವನ್ನು ಮೂವರು ಕೇವಲಿಗಳು, ಐವರು ಶ್ರುತ ಕೇವಲಿಗಳು, ಹನ್ನೊಂದು ಜನ ದಶಪೂರ್ವಧಾರಿಗಳು, ಐವರು ಏಕಾದಶಾಂಗಧಾರಿಗಳು, ನಾಲ್ವರು ಆಚರಾಂಗಧಾರಿಗಳು ತಮ್ಮ ಶಿಷ್ಯರಿಗೆ ಬೋಧಿಸುತ್ತಾ ಬಂದರು. ಕಾಲಕ್ರಮೇಣ ನೆನಪಿನ ಶಕ್ತಿಯು ಕ್ಷೀಣವಾಗುತ್ತಾ ಬಂದು, ದ್ವಾದಶಾಂಗಳಲ್ಲಿ ಹೆಚ್ಚಿನ ಅಂಗಗಳು ನಷ್ಟವಾದವು. ಈ ಪವಿತ್ರವಾದ ಜ್ಞಾನಭಂಡಾರವು ಅಳಿಯುತ್ತ ಬಂದಿರುವುದನ್ನು ಗಮನಿಸಿದ ಪುಷ್ಪದಂತ ಮತ್ತು ಭೂತಬಲಿ ಆಚಾರ್ಯರು ತಮ್ಮ ಗುರುಗಳಾದ ಧರಸೇನಾಚರ್ಯರ ಆದೇಶದಂತೆ ಲಿಪಿಬದ್ಧಗೊಳಿಸಲು ನಿರ್ಧರಿಸಿದರು. ಈ ಕಾರ್ಯವು ಜ್ಯೇಷ್ಠಶುದ್ಧಪಂಚಮಿಯಂದು ಮುಗಿದಾಗ ಮುನಿ, ಆರ್ಯಿಕಾ, ಶ್ರಾವಕ, ಶಾವಿಕೆಯರೆಂಬ ಚತುಃಸಂಘಗಳು ಒಟ್ಟು ಸೇರಿ ಭಕ್ತಿ ಭಾವದಿಂದ ಪೂಜಿಸಿದರು. ಅಂದಿನಿಂದ ಮೊದಲ್ಗೊಂಡು ಆ ಪುಣ್ಯ ದಿನದ ಸ್ಮರಣೆಗಾಗಿ ಜೈನರು ಶ್ರುತಪಂಚಮಿಯನ್ನು ಪರ್ವರೂಪದಿಂದ ಆಚರಿಸುತ್ತ ಬಂದಿದ್ದಾರೆ.

#ಶ್ರೀ_ಕೃಷ್ಣಾರ್ಪಣ_ಮಸ್ತು

No comments:

Post a Comment