Wednesday, 24 June 2020

"ಅತಿಥಿ ಬರದೇ ಭೋಜನ ಮಾಡಲಾರೆ

"ಅತಿಥಿ ಬರದೇ ಭೋಜನ ಮಾಡಲಾರೆ"
************************

ಮಹಾಭಾರತ ಯುದ್ಧದ ನಂತರ ಶ್ರೀಕೃಷ್ಣ ಮತ್ತು ಅರ್ಜುನ ದ್ವಾರಕಾ ನಗರಿಗೆ ಹೋದರು. ಈ ಬಾರಿ ಅರ್ಜುನನೇ ರಥವನ್ನು ನಡೆಸಿದನು. ದ್ವಾರಕೆ ತಲುಪಿದಾಗ ಅರ್ಜುನನು ತುಂಬಾ ಬಳಲಿದ್ದನು. ಆದುದರಿಂದ ವಿಶ್ರಾಂತಿ ಪಡೆಯಲು ಅತಿಥಿ ಭವನಕ್ಕೆ ತೆರಳಿದನು.

ಸಂಜೆಯ ವೇಳೆ ರುಕ್ಮಿಣಿಯು ಶ್ರೀಕೃಷ್ಣನಿಗೆ ಊಟವನ್ನು ಬಡಿಸಿದಳು. ಆಗ ಶ್ರೀಕೃಷ್ಣನು, "ಮನೆಗೆ ಅತಿಥಿ ಬಂದಿದ್ದಾರೆ, ಅವರನ್ನು ಬಿಟ್ಟು ಹೇಗೆ ಊಟ ಮಾಡಲಿ?". 

ರುಕ್ಮಿಣೀ,"ಭಗವಾನ್ ನೀವು ಊಟವನ್ನು ಆರಂಭಿಸಿರಿ, ನಾನು ಹೋಗಿ ಅರ್ಜುನನ್ನು ಕರೆತರುತ್ತೇನೆ" ಎಂದು ಹೇಳಿ, ಅತಿಥಿ ಭವನಕ್ಕೆ ಹೋದಾಗ ಅರ್ಜುನನು ನಿದ್ರಿಸುತ್ತಿದ್ದನು ಹಾಗೂ ಅವನ ರೋಮ-
ರೋಮದಲ್ಲಿ ಕೃಷ್ಣನಾಮದ ಕೀರ್ತನೆ ಹೊರಹೊಮ್ಮುತ್ತಿತ್ತು. ಹೀಗಾಗಿ ರುಕ್ಮೀಣಿಯು ಕೃಷ್ಣನನ್ನು ಮರೆತು, ಮೆಲ್ಲನೆ ಚಪ್ಪಾಳೆ ತಟ್ಟುತ್ತಾ ಕೃಷ್ಣನಾಮದಲ್ಲಿ ತಲ್ಲೀನಲಾದಳು. 

ಇತ್ತ ನಾರದರು ಶ್ರೀಕೃಷ್ಣನ ಬಳಿ ಬಂದು, "ಭಗವಾನ್ ಭೋಜನ ತಣ್ಣಗಾಗುತ್ತಿದೆ" ಎಂದಾಗ, ಕೃಷ್ಣನು,"ಅತಿಥಿ ಬರದೇ ಭೋಜನ ಮಾಡಲಾರೆ" ಎಂದನು.

ನಾರದರು, "ನಾನು ಹೋಗಿ ಅರ್ಜುನನ್ನು ಕರೆತರುತ್ತೇನೆ" ಎಂದು ಹೇಳಿ ಅತ್ತ ಹೋದಾಗ ಅಲ್ಲಿನ ದೃಶ್ಯ ನೋಡಿ, ಅರ್ಜುನನ್ನು ಎಬ್ಬಿಸುವ ಬದಲು ತಮ್ಮ ವೀಣೆಯನ್ನು ನುಡಿಸಲು ಪ್ರಾರಂಭಿಸಿದರು.

ಸತ್ಯಭಾಮೆಯು ಕೃಷ್ಣನಿಗೆ, 'ಭಗವಾನ್, ಭೋಜನ ತಣ್ಣಗಾಗುತ್ತಿದೆ, ನೀವು ಆರಂಭವಾದರೂ ಮಾಡಿ. ಕೃಷ್ಣನು, "ಅತಿಥಿ ಬರದೇ ಭೋಜನ ಮಾಡಲಾರೆ" ಎಂದನು.

ಸತ್ಯಭಾಮೆಯು, "ನಾನು ಹೋಗಿ ಕರೆತರುತ್ತೇನೆ" ಎಂದು ಹೇಳಿ ಅರ್ಜುನನಿರುವ ಕಡೆಗೆ ಹೋದಾಗ, ನಿದ್ರಿಸುತ್ತಲೇ ಇದ್ದ ಅರ್ಜುನನ ರೋಮ-ರೋಮದಿಂದ ಹೊರಹೊಮ್ಮುತ್ತಿದ್ದ 'ಕೃಷ್ಣನಾಮ ಕೀರ್ತನೆಯಿಂದಾಗಿ' ರುಕ್ಮಿಣಿಯು ಚಪ್ಪಾಳೆ ತಟ್ಟುತ್ತಿದ್ದಳು, ನಾರದರು ವೀಣೆಯನ್ನು ನುಡಿಸುತ್ತಿದ್ದರು. ಸತ್ಯಭಾಮೆಯೂ ನರ್ತಿಸಲು ಪ್ರಾರಂಭಿಸಿದಳು.

ಇಲ್ಲಿ ಕೃಷ್ಣ, "ಎಲ್ಲರೂ ನನ್ನ ಭೋಜನ ತಣ್ಣಗಾಗುತ್ತಿದೆಯೆಂದೂ, ಅರ್ಜುನನ್ನು ಕರೆತರುವುದಾಗಿ ಹೇಳಿ ಹೊರಟವರು ಎಲ್ಲಿ? ನನ್ನ ಚಿಂತೆ ಯಾರಿಗೂ ಇಲ್ಲ. ನಾನೇ ಹೋಗಿ ಅಲ್ಲೇನಾಗುತ್ತಿದೆ ಎಂದು ನೋಡುವೆ" ಎಂದು ಅರ್ಜುನ ನಿದ್ರಿಸುತ್ತಿದ್ದ ಅತಿಥಿ ಭವನಕ್ಕೆ  ಹೋಗಿ ನೋಡಿದಾಗ, ಅಲ್ಲಿ ಸ್ವರ ಲಹರಿ ನಡೆಯುತ್ತಿತ್ತು.
ಅರ್ಜುನ ಮಲಗಿಕೊಂಡೇ ಕೀರ್ತನೆ ಮಾಡುತ್ತಿದ್ದಾನೆ.
ರುಕ್ಮೀಣಿಯು ಚಪ್ಪಾಳೆ ತಟ್ತುತ್ತಿದ್ದಾಳೆ.ನಾರದರು ವೀಣೆಯನ್ನು ನುಡಿಸುತ್ತಿದ್ದಾರೆ.ಮತ್ತು ಸತ್ಯಭಾಮೆಯು ನೃತ್ಯ ಮಾಡುತ್ತಿದ್ದಾಳೆ.

ಈ ದೃಶ್ಯವನ್ನು ನೋಡಿ ಕೃಷ್ಣನ ಕಣ್ಣುಗಳಲ್ಲಿ ಆನಂದ ಭಾಷ್ಪ ಸುರಿಯತೊಡಗಿತು ಹಾಗೂ ಸ್ವಯಂ ಅರ್ಜುನನ ಕಾಲುಗಳನ್ನು ಒತ್ತತೊಡಗಿದನು. ಕೃಷ್ಣನ ಕಣ್ಣೀರು ಅರ್ಜುನನ ಕಾಲುಗಳ ಮೇಲೆ ಬಿದ್ದಾಗ ಎಚ್ಚರಗೊಂಡು ಗಲಿಬಿಲಿಯಾದ ಅರ್ಜುನನು, "ಪ್ರಭು ಇದೇನಾಗುತ್ತಿದೆ...? ಎಂದಾಗ, ಕೃಷ್ಣನೆಂದನು, "ಅರ್ಜುನಾ, ನಿನ್ನ ರೋಮ-ರೋಮದಲ್ಲಿ ನನ್ನನ್ನು ಆವರಿಸಿಕೊಂಡಿದ್ದೀಯಾ. ಆದುದರಿಂದ ನೀನು ನನಗೆ ತುಂಬಾ ಪ್ರಿಯನಾಗಿದ್ದೀಯಾ ಎಂದು ಹೇಳಿ ಅರ್ಜುನನ್ನು ಪ್ರೇಮದಿಂದ ಆಲಂಗಿಸಿಕೊಂಡನು.

ಲೀಲಾಧಾರಿಯಾದ ಕೃಷ್ಣನೇ, ಭಕ್ತನೂ ನೀನೇ..ದೇವನೂ ನೀನೇ...ಮಾಡುವವನೂ ನೀನೇ....ಮಾಡಿಸುವವನೂ ನೀನೇ.....ಭಕ್ತ ಮತ್ತು ದೇವರಿಗೆ ಜಯವಾಗಲಿ......
ಯಾರ ಆಚರಣೆಗಳು ಪೂಜಿಸಲು ಯೋಗ್ಯವಾಗಿದೆಯೋ ಅಂತಹವರ ಚರಣಗಳನ್ನೇ ಪೂಜಿಸಲಾಗುತ್ತದೆ.
 
 ಕೃಷ್ಣಾರ್ಪಣಮಸ್ತು
(ಸತ್ಸಂಗ ಸಂಗ್ರಹ)

No comments:

Post a Comment