Thursday, 18 June 2020

ಆಧ್ಯಾತ್ಮಿಕ ಬಂಧುಗಳಿಗೆ ದಿವ್ಯತ್ರಯರ ಸ್ಮರಣೆಗಳು

*ಶ್ರೀ ರಾಮಕೃಷ್ಣ ಪ್ರಸನ್ನ*
ಆಧ್ಯಾತ್ಮಿಕ ಬಂಧುಗಳಿಗೆ ದಿವ್ಯತ್ರಯರ ಸ್ಮರಣೆಗಳು.

*'ಸುಖವನ್ನು ಸೇವಿಸು,  ದುಃಖವನ್ನು ಸಹಿಸು; ಇದುವೇ ಜೀವನದ ಯಶಸ್ಸು'* ಎಂದಿದ್ದಾರೆ ಅನುಭಾವಿಗಳು. ಬದುಕಿನ ಪಯಣದಲ್ಲಿ *ವಿವೇಕಪ್ರಜ್ಞೆ* ಅತ್ಯಗತ್ಯ. ಈ ದಿಕ್ಕಿನಲ್ಲಿ ಬೆಳಕು ಚೆಲ್ಲಬಲ್ಲ ಸುಭಾಷಿತಗಳ ಪರಿಚಯ ಮಾಡಿಕೊಳ್ಳೋಣ.

🌻  *ಬಾಲಕನಾಗಿದ್ದಾಗಲೇ ಪುತ್ರನಿಗೆ ನೀತಿಪಾಠವನ್ನು ಹೇಳುತ್ತಾ ಪ್ರತಿಯೊಂದು ಕಾರ್ಯದಲ್ಲೂ ಶಿಕ್ಷಣ ನೀಡಬೇಕು.* ಕಾಲ ಮೀರಿದ ಮೇಲೆ ಗದ್ದೆ ಉತ್ತರೆ ಪ್ರಯೋಜನವಿಲ್ಲ.

ಹಾಗೆಯೇ, ಹಸಿಯ ಗಡಿಗೆಯಲ್ಲಿ ರಚಿಸಿದ ಚಿತ್ತಾರದ ರೇಖೆಗಳು ಗಡಿಗೆಯನ್ನು ಸುಟ್ಟರೂ ಅಳಿಸಿಹೋಗುವುದಿಲ್ಲ .

🌻  *ಸಜ್ಜನರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡುವುದಷ್ಟೇ ಕರ್ತವ್ಯ, ಸದ್ಗುಣಗಳನ್ನು ಸ್ವತಃ ಮಕ್ಕಳೇ ಸಂಪಾದಿಸಿಕೊಳ್ಳಬೇಕು.* ಇದು ಹೇಗೆಂದರೆ ರೈತರು ಕೃಷಿ ಕುರಿತಾದ ಎಲ್ಲಾ ಕೆಲಸಗಳನ್ನೂ ಮಾಡುತ್ತಾರೆ, ಆದರೆ ಮೊಳೆಯುವುದು ಬೀಜಕ್ಕೆ ಸೇರಿದ ಕೆಲಸ !

🌻  ತಂದೆಯ ಮನಸ್ಸಿನಲ್ಲಿ ಇರುವುದನ್ನರಿತು ಕಾರ್ಯ ಮಾಡತಕ್ಕ ಮಗನು *ಉತ್ತಮ,*
ಹೇಳಿದ್ದನ್ನಷ್ಟೇ ಶ್ರದ್ಧೆಯಿಂದ  ಮಾಡತಕ್ಕವನು *ಮಧ್ಯಮ,*
ಅಶ್ರದ್ಧೆಯಿಂದ ಮಾಡತಕ್ಕವನು *ಅಧಮ,*
ಮಾತನ್ನು ಸರ್ವದಾ ನಡೆಸದೇ ಇರುವವನು *ತಂದೆಯ 'ಮಗ' ಅಲ್ಲ, 'ಮಲ'.*

🌻  ಹಣವೇ ಅರ್ಥ, ಸುಖವೇ ಕಾಮ. *ಹಣ ಮತ್ತು ಸುಖವು ಹಿಂಸೆ, ಸುಳ್ಳು ಮತ್ತು ಕಳ್ಳತನ ಎಂಬ ದೋಷಗಳಿಗೆ ಮೂಲ.* ಇವೆರಡನ್ನು ಅತಿಯಾಗಿ ವೃದ್ಧಿಸಲೂ ಬಾರದು. ಅಷ್ಟೇ ಅಲ್ಲ, *ಅರ್ಥಕಾಮಗಳೇ ತತ್ತ್ವಚಿಂತನೆಗಳನ್ನು ಅರಿಯಲು ಇರುವ ವಿಘ್ನಗಳು.*

🌻  *ನೀವು ಕಷ್ಟಕ್ಕೆ ಸಿಕ್ಕಿ ಹಾಕಿಕೊಳ್ಳಬಾರದೇ ?*

1. ಗುಣಶಾಲಿಗಳಿಂದ *ಸಂತೋಷವನ್ನಷ್ಟೇ* ನಿರೀಕ್ಷಿಸಿ.
2. ಗುಣಹೀನರಿಂದ *ಕನಿಕರವನ್ನಷ್ಟೇ* ನಿರೀಕ್ಷಿಸಿ.
3. ಸಮಾನರಿಂದ *ಸ್ನೇಹವನ್ನಷ್ಟೇ* ನಿರೀಕ್ಷಿಸಿ.

🌻  ಪ್ರಶ್ನೆ: *ಸಂಪತ್ತನ್ನು ಸ್ಥಿರವಾಗಿ ಇರಿಸಲು ಏನು ಮಾಡಬೇಕು ?*

1. ಬದುಕಿನಲ್ಲಿ *ಉತ್ಸಾಹದ ಪ್ರಯತ್ನವಿರಲಿ.*
2. *ಸೋಮಾರಿತನಕ್ಕೆ* ಎಂದೂ ಆಸ್ಪದ ನೀಡಬೇಡಿ.
3. ಜೀವನದಲ್ಲಿ *ನೀತಿ ಮತ್ತು ಪರಾಕ್ರಮಗಳು* ಒಟ್ಟೊಟ್ಟಿಗೆ ಸಾಗಲಿ.

🌻  ಪ್ರಶ್ನೆ: *ಬಂಧನ ಮತ್ತು ಮುಕ್ತಿಗೆ ವ್ಯತ್ಯಾಸವೇನು ?*

*ಧರ್ಮವನ್ನು ನಿರ್ಲಕ್ಷಿಸಿ ಅರ್ಥಕಾಮಗಳನ್ನು ಅನುಭವಿಸಹೊರಟಾಗ* ಅತೃಪ್ತಿಯುಂಟಾಗಿ ಅವು ಬಂಧನಕ್ಕೆ ಕಾರಣವಾಗುತ್ತವೆ.

*ಧರ್ಮಸಮ್ಮತ ಜೀವನವು* ಅರ್ಥ - ಕಾಮಗಳಿಂದ ಮಾನವನಿಗೆ ತೃಪ್ತಿನೀಡಿ ಮುಕ್ತಿಗೆ ದಾರಿ ಮಾಡಿ ಕೊಡುತ್ತವೆ.

🌻  ಪ್ರಶ್ನೆ: *ದುಃಖವೆಂಬುದು ಸಾಮಾನ್ಯರಿಗೂ ಮತ್ತು ಧೀರರಿಗೂ ಬಂದೇ ಬರುತ್ತದೆ. ಆದರೆ ವ್ಯತ್ಯಾಸವೇನು ?* 

ದುಃಖದಿಂದ ಸಾಮಾನ್ಯನು ಬಿರುಗಾಳಿಗೆ ಸಿಕ್ಕಿದ ಮರಗಳಂತೆ ಅಲ್ಲಾಡಿದರೆ 
ಧೀರರು ಬೆಟ್ಟಗಳಂತೆ ಅಲುಗಾಡದೇ ಸ್ಥಿರತೆ ಕಾಪಾಡಿಕೊಳ್ಳುತ್ತಾರೆ.

🌻  ಮನುಷ್ಯ ದೇಹವನ್ನು ಪಡೆಯುವುದೇ ದುರ್ಲಭ. *ಮನುಷ್ಯನ ದೇಹವೇ ಒಂದು ಉತ್ತಮ ದೋಣಿ. ಈ ದೋಣಿಗೆ ಗುರುವೇ ಅಂಬಿಗ. ಪರಮಾತ್ಮನೆಂಬ ಅನುಕೂಲವಾದ ಗಾಳಿಯಿಂದ* ದೋಣಿಯನ್ನು ನಡೆಸುತ್ತ ಇರುವಾಗ ಮನುಷ್ಯನು ಸಂಸಾರಸಾಗರವನ್ನು ದಾಟದೆ ಇರುವುದು ಆತ್ಮಹತ್ಯೆಗೆ ಆಹ್ವಾನ ಇತ್ತಂತೆ , ಅಲ್ಲವೇ?
--------------------------------
ವಂದನೆಗಳೊಂದಿಗೆ,

ಮುಖಪುಟ ಸಂಗ್ರಹ ಲೇಖನ

No comments:

Post a Comment