🕉 ಶ್ರೀ ಗುರುಭ್ಯೋ ನಮಃ 🕉
*ಪರಶುರಾಮ ಶ್ರೀ ಮಹಾವಿಷ್ಣುವಿನ ಆರನೆಯ ಅವತಾರ*
ಪರಶುರಾಮ ಶ್ರೀವಿಷ್ಣುವಿನ ಆರನೆಯ ಅವತಾರ. ಅವರ ಕಥೆಗಳು ರಾಮಾಯಣ, ಮಹಾಭಾರತ ಹಾಗೂ ಕೆಲವು ಪುರಾಣಗಳಲ್ಲಿ ಕಂಡು ಬರುತ್ತವೆ. ಅವರ ಮೊದಲಿನ ಅವತಾರಗಳಂತೆ ಅವರ ಹೆಸರಿನ ಸ್ವತಂತ್ರ ಪುರಾಣಗಳಿಲ್ಲ.
*ಪರಶುರಾಮರ ತಂದೆ ತಾಯಿ*
ಪರಶುರಾಮರ ತಾಯಿ ರೇಣುಕಾ ಮತ್ತು ತಂದೆ ಭೃಗುಕುಲೋತ್ಪನ್ನ ಋಷಿಗಳಾದ ಜಮದಗ್ನಿ. ಹತ್ತೊಂಭತ್ತನೆಯ ತ್ರೇತಾಯುಗದಲ್ಲಿ (ಮಹಾಭಾರತಕ್ಕನುಸಾರ ತ್ರೇತಾ ಹಾಗೂ ದ್ವಾಪರಯುಗಗಳ ಸಂಧಿಕಾಲದಲ್ಲಿ) ಪರಶುರಾಮರ ಜನನವಾಯಿತು.
*ಪರಶುರಾಮರ ಕಾರ್ಯ*
ಅಧಮ ಕ್ಷತ್ರಿಯರ ವಧೆ
ವಾಲ್ಮೀಕಿಯು ಪರಶುರಾಮರನ್ನು ‘ರಾಜವಿಮರ್ದನ’ ಎಂದು ಸಂಬೋಧಿಸಿದ್ದಾರೆ. ಇದರಿಂದ ’ಪರಶುರಾಮ ಸಾರಾಸಗಟಾಗಿ ಎಲ್ಲಾ ಕ್ಷತ್ರಿಯರನ್ನು ಸಂಹರಿಸದೆ ದುಷ್ಟ-ದುರ್ಜನ ಕ್ಷತ್ರಿಯ ರಾಜರನ್ನು ಸಂಹರಿಸಿದರು.’ ಎಂದು ಹೇಳಬಹುದು.
ಕಾರ್ತವೀರ್ಯನು ಜಮದಗ್ನಿ ಋಷಿಗಳ ಆಶ್ರಮದಿಂದ ಕಾಮಧೇನು ಹಾಗೂ ಅದರ ಕರುವನ್ನು ಅಪಹರಿಸಿದನು. ಆಗ ಪರಶುರಾಮ ಅಲ್ಲಿ ಇರಲಿಲ್ಲ. ಮರಳಿ ಬಂದ ನಂತರ ಅವರಿಗೆ ಈ ಸಂಗತಿ ತಿಳಿಯುತ್ತಲೇ ಅವರು ಕಾರ್ತವೀರ್ಯನನ್ನು ವಧಿಸುವುದಾಗಿ ಪ್ರತಿಜ್ಞೆಗೈದರು. ನರ್ಮದಾ ನದಿಯ ತೀರದಲ್ಲಿ ಅವರಿಬ್ಬರ ನಡುವೆ ದ್ವಂದ್ವಯುದ್ಧ ನಡೆಯಿತು. ಈ ಯುದ್ಧದಲ್ಲಿ ಪರಶುರಾಮ ಕಾರ್ತವೀರ್ಯನನ್ನು ವಧಿಸಿದರು. ಅನಂತರ ತಂದೆ ಜಮದಗ್ನಿಯ ಆಜ್ಞೆಯಂತೆ ಅವರು ತೀರ್ಥಯಾತ್ರೆ ಹಾಗೂ ತಪಸ್ಸು ಮಾಡಲು ಹೋದರು.
ಪರಶುರಾಮ ಹೋದನಂತರ ಕಾರ್ತವೀರ್ಯನ ವಧೆಯ ಸೇಡು ತೀರಿಸಿಕೊಳ್ಳಲು ಹೈಹಯ ಜಮದಗ್ನಿ ಋಷಿಗಳ ಶಿರಚ್ಛೇದನಗೊಳಿಸಿ ಅವರ ಹತ್ಯೆಗೈದನು. ಇದು ತಿಳಿಯುತ್ತಲೇ ಪರಶುರಾಮ ತಕ್ಷಣ ಆಶ್ರಮಕ್ಕೆ ಧಾವಿಸಿದರು. ಜಮದಗ್ನಿಯ ಶರೀರದ ಮೇಲಿನ ಇಪ್ಪತ್ತೊಂದು ಗಾಯಗಳನ್ನು ಕಂಡು ಅವರು ತಕ್ಷಣ ’ಹೈಹಯ ಹಾಗೂ ಇತರ ಕ್ಷತ್ರೀಯ ಅಧಮರು ಮಾಡಿದ ಈ ಬ್ರಹ್ಮಹತ್ಯೆಯ ಶಿಕ್ಷೆ ಎಂದು ’ಇಪ್ಪತ್ತೊಂದು ಬಾರಿ ಪೃಥ್ವಿಯನ್ನು ನಿಃಕ್ಷತ್ರಿಯಗೊಳಿಸುವೆನು’ ಎಂದು ಪ್ರತಿಜ್ಞೆ ಮಾಡಿದರು. ಈ ಪ್ರತಿಜ್ಞೆಗನುಸಾರ ಅವರು ಮದೋನ್ಮತ್ತರಾದ ಕ್ಷತ್ರಿಯರನ್ನು ನಾಶಗೊಳಿಸುವುದು, ಯುದ್ಧದ ನಂತರ ಮಹೇಂದ್ರ ಪರ್ವತದ ಮೇಲೆ ಹೋಗುವುದು, ಕ್ಷತ್ರಿಯರು ಸೊಕ್ಕಿನಿಂದ ವರ್ತಿಸಿದರೆ ಪುನಃ ಅವರನ್ನು ನಾಶಗೊಳಿಸುವುದು, ಹೀಗೆ ಇಪ್ಪತ್ತೊಂದು ಬಾರಿ ದಂಡೆತ್ತಿ ಹೋದರು. ಸಮಂತಪಂಚಕದಲ್ಲಿ ಕೊನೆಯ ಯುದ್ಧ ಮಾಡಿ ರಕ್ತದಿಂದ ಕೊಳೆಯಾದ ತನ್ನ ಪರಶುವನ್ನು ತೊಳೆದು ಶಸ್ತ್ರಗಳನ್ನು ಕೆಳಗಿಟ್ಟರು.
*ಕ್ಷೇತ್ರಪಾಲ ದೇವತೆಗಳ ಸ್ಥಾನಗಳನ್ನು ಪ್ರತಿಷ್ಠಾಪಿಸುವುದು*
ಪರಶುರಾಮ ೨೧ ಬಾರಿ ಪೃಥ್ವಿಯ ಪ್ರದಕ್ಷಿಣೆ ಮಾಡುವಾಗ ೧೦೮ ಶಕ್ತಿಪೀಠಗಳನ್ನು, ತೀರ್ಥಕ್ಷೇತ್ರಗಳನ್ನು, ಅಂದರೆ ಕ್ಷೇತ್ರಪಾಲ ದೇವತೆಗಳ ಸ್ಥಾನಗಳನ್ನು ಪ್ರತಿಷ್ಠಾಪಿಸಿದರು.
*ಪರಶುರಾಮರ ವೈಶಿಷ್ಟ್ಯಗಳು*
ಅಗ್ರತಃ ಚತುರೋ ವೇದಾಃ ಪೃಷ್ಠತಃ ಸಶರಂ ಧನುಃ |
ಇದಂ ಬ್ರಾಹ್ಮಂ ಇದಂ ಕ್ಷಾತ್ರಂ ಶಾಪಾದಪಿ ಶರಾದಪಿ ||
ಅರ್ಥ : ನಾಲ್ಕು ವೇದಗಳು ಮುಖೋದ್ಗತವಾಗಿವೆ, ಅಂದರೆ ಪೂರ್ಣ ಜ್ಞಾನವಿದೆ ಹಾಗೂ ಬೆನ್ನ ಮೇಲೆ ಬಾಣದೊಂದಿಗೆ ಧನುಷ್ಯವಿದೆ, ಅಂದರೆ ಶೌರ್ಯವಿದೆ; ಅಂದರೆ ಇಲ್ಲಿ ಬ್ರಾಹ್ಮತೇಜ ಹಾಗೂ ಕ್ಷಾತ್ರತೇಜ ಹೀಗೆ ಎರಡು ತೇಜಗಳಿವೆ. ಯಾರು ವಿರೋಧಿಸುವರೋ, ಅವರನ್ನು ಪರಶುರಾಮ ಶಾಪದಿಂದ ಅಥವಾ ಬಾಣದಿಂದ ಸೋಲಿಸಬಲ್ಲರು.
*ರಾಮನೊಳಗೆ ತೇಜವನ್ನು ಸಂಕ್ರಮಿತ ಗೊಳಿಸುವುದು*
ಒಮ್ಮೆ ಶ್ರೀರಾಮನ ಕೀರ್ತಿಯನ್ನು ಕೇಳಿ ಪರಶುರಾಮ ಅವರ ಪರಾಕ್ರಮವನ್ನು ಪರೀಕ್ಷಿಸಲು ಅವರ ದಾರಿಯಲ್ಲಿ ಅಡ್ಡ ಬಂದು ತನ್ನ ಧನಸ್ಸನ್ನು ರಾಮನ ಕೈಯಲ್ಲಿ ಕೊಟ್ಟು ಅದನ್ನು ಬಗ್ಗಿಸಿ ಅದಕ್ಕೆ ಬಾಣವನ್ನು ಹಚ್ಚಿ ತೋರಿಸಲು ಹೇಳಿದರು. ಶ್ರೀರಾಮ ಹಾಗೆ ಮಾಡಿ ತೋರಿಸಿ ’ಈ ಬಾಣವನ್ನು ನಾನು ಎಲ್ಲಿ ಬಿಡಲಿ’ ಎಂದು ಕೇಳಿದರು. ಪರಶುರಾಮರು ‘ನನ್ನ ಈ (ಕಾಶ್ಯಪಿ) ಭೂಮಿಯ ಮೇಲಿನ ಗತಿಯನ್ನು ನಿಲ್ಲಿಸು’ ಎಂದು ಹೇಳಿದಾಗ ಶ್ರೀರಾಮ ಹಾಗೆ ಮಾಡಿದರು. ಈ ಪ್ರಸಂಗದಲ್ಲಿ ಪರಶುರಾಮ ತನ್ನ ಧನಸ್ಸನ್ನು ಶ್ರೀರಾಮನಿಗೆ ನೀಡಿ, ತನ್ನ ಕ್ಷಾತ್ರತೇಜವನ್ನು ರಾಮನೊಳಗೆ ಸಂಕ್ರಮಿತಗೊಳಿಸಿದರು.
*ಸರ್ವೋತ್ತಮ ಧನುರ್ವಿದ್ಯಾ ಶಿಕ್ಷಕ*
ಒಮ್ಮೆ ಶಸ್ತ್ರವನ್ನು ಕೆಳಗಿಟ್ಟ ನಂತರ ಪರಶುರಾಮರು ಕ್ಷತ್ರಿಯರ ಮೇಲಿನ ವೈರಿಭಾವವನ್ನು ತ್ಯಜಿಸಿದರು ಹಾಗೂ ಬ್ರಾಹ್ಮಣ, ಕ್ಷತ್ರಿಯರೆಲ್ಲರಿಗೂ ಸಮಭಾವದಿಂದ ಶಸ್ತ್ರವಿದ್ಯೆಯನ್ನು ಕಲಿಸಲಾರಂಭಿಸಿದರು. ಮಹಾಭಾರತದಲ್ಲಿ ಭೀಷ್ಮಾಚಾರ್ಯರು, ದ್ರೋಣಾಚಾರ್ಯರು ಮುಂತಾದ ಹಿರಿಯ ಯೋಧರು ಪರಶುರಾಮರ ಶಿಷ್ಯರೇ ಆಗಿದ್ದರು.
*ದಾನಶೂರ*
ಪರಶುರಾಮರು ಕ್ಷತ್ರಿಯರನ್ನು ವಧಿಸಲು ದಂಡೆತ್ತಿ ಹೋದುದರಿಂದ ಸಂಪೂರ್ಣ ಪೃಥ್ವಿಯು ಅವರ ಸ್ವಾಮಿತ್ತ್ವದಲ್ಲಿ ಬಂದಿತು. ಆದುದರಿಂದ ಅವರಿಗೆ ಅಶ್ವಮೇಧಯಜ್ಞ ಮಾಡುವ ಅಧಿಕಾರ ಪ್ರಾಪ್ತಿಯಾಗಿ ಅವರು ಅಶ್ವಮೇಧ ಯಜ್ಞ ಮಾಡಿದರು. ಯಜ್ಞದ ಕೊನೆಯಲ್ಲಿ ಪರಶುರಾಮರು ಆ ಯಜ್ಞದ ಪೌರೋಹಿತ್ಯ ವಹಿಸಿದ (ಅಧ್ವರ್ಯು) ಕಶ್ಯಪನಿಗೆ ಭೂಮಿಯನ್ನು ದಾನವಾಗಿ ನೀಡಿದರು.
*ಹೊಸಭೂಮಿಯ ನಿರ್ಮಿತಿ*
ಎಲ್ಲಿಯವರೆಗೆ ಪರಶುರಾಮನು ಈ ಭೂಮಿಯಲ್ಲಿ ಇರುವನೋ ಅಲ್ಲಿಯವರೆಗೆ ಕ್ಷತ್ರಿಯರ ಕುಲದ ಉನ್ನತಿಯಾಗುವಂತಿಲ್ಲ, ಎಂದು ತಿಳಿದು ಕಶ್ಯಪನು ಪರಶುರಾಮನಿಗೆ ‘ಈಗ ಈ ಭೂಮಿಯ ಮೇಲೆ ನನ್ನ ಅಧಿಕಾರವಿದೆ. ನಿನಗೆ ಇಲ್ಲಿ ಉಳಿಯುವ ಅಧಿಕಾರವಿಲ್ಲ.’ ಎಂದು ಹೇಳಿದರು. ಅನಂತರ ಪರಶುರಾಮರು ಸಮುದ್ರವನ್ನು ಸರಿಸಿ ಸ್ವಂತದ ಕ್ಷೇತ್ರವನ್ನು ನಿರ್ಮಿಸಿದರು. ವೈತರಣಾದಿಂದ ಕನ್ಯಾಕುಮಾರಿಯವರೆಗೆ ಇರುವ ಈ ಭೂಭಾಗಕ್ಕೆ ‘ಪರಶುರಾಮ ಕ್ಷೇತ್ರ’ ಎಂದು ಕರೆಯಲಾಗುತ್ತದೆ.
ಪರಶುರಾಮರು ಸಪ್ತ ಚಿರಂಜೀವಿಗಳಲ್ಲಿ ಒಬ್ಬರಾಗಿದ್ದಾರೆ.
*ಪರಶುರಾಮಕ್ಷೇತ್ರಗಳು*
ಸಹ್ಯಾದ್ರಿ ಪರ್ವತಗಳ ಉತ್ತರ ತುದಿಯಲ್ಲಿ ಸಾಲ್ಹೇರದ ಬೆಟ್ಟದ ಮಧ್ಯಯುಗದ ಕೋಟೆಯಲ್ಲಿ, ಪಂಜಾಬಿನ ಕಾಂಗಡಾ ಜಿಲ್ಲೆಯಲ್ಲಿ, ಕೊಂಕಣದಲ್ಲಿ ಚಿಪಳುಣನಿಂದ ಐದು ಮೈಲು ದೂರದಲ್ಲಿರುವ ಒಂದು ಬೆಟ್ಟದಲ್ಲಿ, ಹಾಗೆಯೇ ಗೋಮಂತಕದ ಕಾಣಕೋಣದಲ್ಲಿ ಕರ್ನಾಟಕದ ಸೌಂದತ್ತಿಯ ಶ್ರೀ ರೇಣುಕಾದೇವಿಯ ಮಡಿಲಲ್ಲಿ ಪರಶುರಾಮನ ಒಂದು ಪ್ರಾಚೀನ ಮಂದಿರವಿದೆ.
*ಮೂರ್ತಿ*
ನೋಡಲು ಭೀಮಕಾಯ ದೇಹವುಳ್ಳ, ಜಟಾಧಾರಿ, ಹೆಗಲಿಗೆ ಧನುಷ್ಯ ಹಾಗೂ ಕೈಯಲ್ಲಿ ಪರಶು – ಪರಶುರಾಮ ಮೂರ್ತಿ ಹೀಗೆ ಇರುತ್ತದೆ. *ಕ್ಷಾತ್ರ ತೇಜದ ಋಷಿಪುತ್ರನ ರೋಚಕ ಕಥೆ*
ಋಷಿ ಕುಲದಲ್ಲಿ ಹುಟ್ಟಿಯೂ ಪರಶುರಾಮನಲ್ಲಿ ಕ್ಷಾತ್ರ ಗುಣವಿತ್ತು. ಇದರ ಹಿನ್ನೆಲೆಯೊಂದು ರೋಚಕ ಅಧ್ಯಾಯ. ಇಂಥಾ ಪರಶುರಾಮನ ಹುಟ್ಟು ಮತ್ತು ಸಾಹಸ ಕಥನ ಇಲ್ಲಿದೆ ಓದಿ…
ಋಷಿ ಪರಶುರಾಮರು ಸಮುದ್ರವನ್ನು ಹಿಂದೆ ಸರಿಯವಂತೆ ಮಾಡಿ ಪಶ್ಚಿಮ ಕರಾವಳಿಯ ಸೃಷ್ಟಿಗೆ ಕಾರಣರಾದರು ಎನ್ನುತ್ತವೆ ಪುರಾಣಗಳು. ಪರಶುರಾಮ ಶೌರ್ಯವೇ ಮೊದಲಾದ ಕ್ಷಾತ್ರ ಗುಣಗಳನ್ನು ಪಡೆದಿದ್ದು, ಯುದ್ಧ ಮಾಡಿದ್ದು, ಸಮುದ್ರ ಸರಿಯುವಂತೆ ಮಾಡಿದ್ದು… ಇವೆಲ್ಲ ಕಥೆ ಒಂದಕ್ಕಿಂದ ಒಂದು ರೋಚಕ!!
ವಿಷ್ಣುವಿನ ಅವತಾರ ಎಂದೇ ಪರಿಗಣಿಸಲಾಗುವ ಪರಶುರಾಮ, ಭೃಗು ವಂಶದ ಜಮದಗ್ನಿ ಋಷಿಯ ಪುತ್ರ. ಈ ಕಾರಣದಿಂದ ಪರಶುರಾಮನಿಗೆ ‘ಭಾರ್ಗವ’ ಎಂಬ ಹೆಸರೂ ಇದೆ.
ವಯೋವೃದ್ಧನಾಗಿದ್ದ ಋಚೀಕ, ಗಾಧಿ ರಾಜನ ಮಗಳು ಸತ್ಯವತಿಯನ್ನು ವಿವಾಹವಾಗಿದ್ದ. ಗಾಧಿ ರಾಜನಿಗೆ ಸತ್ಯವತಿಯನ್ನು ಬಿಟ್ಟು ಬೇರೆ ಮಕ್ಕಳಿರುವುದಿಲ್ಲ. ಆದ್ದರಿಂದ ಸತ್ಯವತಿ ತನ್ನ ಪತಿ ಋಚೀಕನ ಬಳಿ ತವರು ಮನೆಗೊಂದು ಸಂತಾನ ಕರುಣಿಸೆಂದು ಕೇಳಿಕೊಳ್ಳುತ್ತಾಳೆ. ಪತ್ನಿಯ ಮಾತಿಗೆ ಇಲ್ಲವೆನ್ನದ ಋಚೀಕ ವ್ರತಾಚರಣೆ ಮಾಡುವಂತೆ ಹೇಳಿ, ನಿಯಮಗಳನ್ನು ಸೂಚಿಸುತ್ತಾನೆ. ಅದೇ ವೇಳೆ ಆತನ ಪತ್ನಿ ಸತ್ಯವತಿಯೂ ಉತ್ಕೃಷ್ಟ ಸಂತಾನದ ಬೇಡಿಕೆ ಇಟ್ಟಿದ್ದರಿಂದ ನೀನೂ ನಿನ್ನ ತಾಯಿಯೊಡನೆ ವ್ರತ ನಡೆಸು ಎಂದು ಹೇಳುತ್ತಾನೆ. ಮತ್ತು ಅವಳಿಗೆ ಬೇರೊಂದು ವಿಧಾನ ಸೂಚಿಸಿ ಪ್ರತ್ಯೇಕ ಮಂತ್ರ ನೀಡುತ್ತಾನೆ. ಮತ್ತು ಇಬ್ಬರಿಗೂ ಪ್ರತ್ಯೇಕ ಚರುಗಳನ್ನು ಸಿದ್ಧಪಡಿಸಿ ಕೊಡುತ್ತಾನೆ.
ಆದರೆ ಸತ್ಯವತಿಯ ತಾಯಿಗೆ ಈತ ತನ್ನ ಹೆಂಡತಿಗೆ ನನಗಿಂತ ಉತ್ಕೃಷ್ಟವಾದ ಚರು ನೀಡಿರಬಹುದು ಎಂಬ ಅನುಮಾನ ಶುರುವಾಗುತ್ತದೆ. ಮಗಳ ಬಳಿ ಬಂದು, “ದಯವಿಟ್ಟು ನಿನ್ನ ಚರುವನ್ನು ನನಗೆ ಕೊಡು, ನನ್ನದನ್ನು ನೀನು ತೆಗೆದುಕೋ. ನಿನ್ನ ತವರಿನ ಕೀರ್ತಿ ದಶದಿಕ್ಕುಗಳಿಗೂ ಹರಡುವಂತೆ ಮಾಡು. ನೀನು ಬೇಕಿದ್ದರೆ ನಿನ್ನ ಗಂಡನಿಂದ ಪುನಃ ಸಂತಾನ ಪಡೆಯಬಹುದು” ಎಂದು ಕೇಳುತ್ತಾಳೆ. ಸತ್ಯವತಿ ಅದಕ್ಕೊಪ್ಪಿ ತನ್ನ ಚರುವನ್ನು ಅವಳಿಗೆ ಕೊಟ್ಟುಬಿಡುತ್ತಾಳೆ. ವಾಸ್ತವದಲ್ಲಿ ಋಚೀಕ ರಾಜನ ಪತ್ನಿಯಾದ ಸತ್ಯವತಿಯ ತಾಯಿಗೆ ಕ್ಷಾತ್ರಗುಣವುಳ್ಳ ಸಂತಾನ ಪಡೆಯಲು ಸೂಕ್ತವಾದ ಮಂತ್ರ ನೀಡಿರುತ್ತಾನೆ. ಹಾಗೂ ಋಷಿಪತ್ನಿಯಾದ ಸತ್ಯವತಿಗೆ ಸತ್ವಗುಣದ ಮಂತ್ರ ನೀಡಿರುತ್ತಾನೆ. ಆದರೀಗ ಅದು ಅದಲುಬದಲಾಗಿ ಋಚೀಕ – ಸತ್ಯವತಿಯರಿಗೆ ಕ್ಷಾತ್ರಗುಣದ ಜಮದಗ್ನಿಯೂ ಗಾದಿರಾಜ ಮತ್ತವನ ಪತ್ನಿಗೆ ಆರ್ಷ ಗುಣವುಳ್ಳ ವಿಶ್ವಾಮಿತ್ರನೂ ಜನಿಸುತ್ತಾರೆ.
ಮುಂದೆ ಜಮದಗ್ನಿ ರೇಣುಕೆಯನ್ನು ಮದುವೆಯಾಗುತ್ತಾನೆ. ಆತನ ಮೂರು ಮಕ್ಕಳಲ್ಲಿ ಕಿರಿಯವನು ರಾಮ. ಸದಾ ಪರಶುಧಾರಿಯಾದುದರಿಂದ ಪರಶುರಾಮನೆಂದೂ ಖ್ಯಾತ. ಈತನಿಗೆ ತಂದೆಯ ಗುಣಗಳು ಬಳುವಳಿಯಾಗಿ ಬಂದಿರುತ್ತದೆ. ಕ್ಷಾತ್ರತೇಜದ ಕಾರಣದಿಂದಾಗಿ ಪರಶುರಾಮ ಮಹಾ ಶೂರನೂ ಕೋಪಿಷ್ಠನೂ ಹಿರಿಯರಲ್ಲಿ ವಿನಮ್ರನೂ ಆಗಿರುತ್ತಾನೆ.
ಒಮ್ಮೆ ಜಮದಗ್ನಿಯ ಆಶ್ರಮದಲ್ಲಿ ಪುತ್ರರು ಯಾರೂ ಇಲ್ಲದೆ ಇದ್ದಾಗ ಕಾರ್ತವೀರ್ಯಾರ್ಜುನನೆಂಬ ರಾಜ ತನ್ನ ಅಗಾಧ ಸೈನ್ಯದೊಡನೆ ಅಲ್ಲಿಗೆ ಬರುತ್ತಾನೆ. ಜಮದಗ್ನಿ ಅವನನ್ನು ಸತ್ಕರಿಸಿ ಇಡೀ ಸೈನ್ಯಕ್ಕೆ ಮೃಷ್ಟಾನ್ನ ಭೋಜನ ಮಾಡಿಸುತ್ತಾನೆ. ಎಲೆಮನೆಯ ಒಬ್ಬ ಋಷಿ ಇಷ್ಟು ದೊಡ್ಡ ಸೈನ್ಯಕ್ಕೆ ಹೇಗೆ ವೈಭವದ ಉಪಚಾರ ಮಾಡಿದ ಎಂದು ಕಾರ್ತವೀರ್ಯಾರ್ಜುನ ಅಚ್ಚರಿಪಡುತ್ತಾನೆ. ಜಮದಗ್ನಿಯನ್ನೇ ವಿಚಾರಿಸಿದಾಗ ಆಶ್ರಮದಲ್ಲಿರುವ ಕಾಮಧೇನುವಿನ ವಿಷಯ ತಿಳಿಯುತ್ತದೆ. ಕಾಮಧೇನು ಕೇಳಿದ್ದೆಲ್ಲವನ್ನೂ ಕೊಡುವ ದೇವಲೋಕದ ಗೋವು.
ಕಡುಲೋಭಿಯಾದ ಕಾರ್ತವೀರ್ಯಾರ್ಜುನ, “ಅಮೂಲ್ಯ ವಸ್ತುಗಳೇನಿದ್ದರೂ ರಾಜನಿಗೇ ಸೇರಬೇಕು. ಈ ಕಾಮಧೇನುವನ್ನು ನನ್ನೊಡನೆ ಕರೆದೊಯ್ಯುತ್ತೇನೆ” ಎಂದು ದುಂಬಾಲು ಬೀಳುತ್ತಾನೆ. ಅದಕ್ಕೆ ಜಮದಗ್ನಿ ಒಪ್ಪುವುದಿಲ್ಲ. ಅವನ ವಿರೋಧದ ನಡುವೆಯೂ ಹಲ್ಲೆ ನಡೆಸಿ ಕಾಮಧೇನುವನ್ನು ಕೊಂಡೊಯ್ಯಲು ಪ್ರಯತ್ನಿಸುತ್ತಾನೆ. ಅದು ನಿಂತಲ್ಲಿಂದ ಕದಲುವುದಿಲ್ಲ. ಜಮದಗ್ನಿ ಇರುವಲ್ಲಿ ಮಾತ್ರ ಕಾಮಧೇನು ಇರುತ್ತದೆ ಎಂಬ ರಹಸ್ಯ ತಿಳಿದ ಕಾರ್ತವೀರ್ಯಾರ್ಜುನ ಜಗದಗ್ನಿಯನ್ನು ಕೊಂದು, ಅವನ ತಲೆ ಕತ್ತರಿಸಿ ತೆಗೆದುಕೊಂಡು ಹೊರಡುತ್ತಾನೆ. ಕಾಮಧೇನು ಕಾರ್ತವೀರ್ಯಾರ್ಜುನನನ್ನು ಹಿಂಬಾಲಿಸುತ್ತದೆ.
ಈ ವಿಷಯ ತಿಳಿದ ಪರಶುರಾಮ ರೌದ್ರಾವತಾರ ತಾಳುತ್ತಾನೆ. ತನ್ನ ಗಂಡುಗೊಡಲಿಯನ್ನೆತ್ತಿಕೊಂಡೇ ಕಾರ್ತವೀರ್ಯಾರ್ಜುನನ ಬಳಿ ಹೋಗಿ ಒಂದೇ ಏಟಿಗೆ ಅವನ ತಲೆ ಕತ್ತರಿಸುತ್ತಾನೆ. ಅಷ್ಟಾದರೂ ಕೋಪ ತೀರದೆ, ಇಡೀ ಭೂಮಂಡಲವನ್ನು 24 ಬಾರಿ ಪ್ರದಕ್ಷಿಣೆ ಹಾಕಿ ಸಿಕ್ಕ ಸಿಕ್ಕ ಕ್ಷತ್ರಿಯರ ವಧೆ ಮಾಡುತ್ತಾನೆ. ಈ ಎಲ್ಲ ಅರಸರ ಸೊತ್ತು ಪರಶುರಾಮನಿಗೆ ಸೇರುತ್ತದೆ.
ಆದರೆ ಪರಶುರಾಮ “ನಾನೊಬ್ಬ ಬ್ರಾಹ್ಮಣ. ನನಗೇಕೆ ಭೂಮಿಯ ಗೊಡವೆ..?” ಎಂದು ಆಲೋಚಿಸಿ ತನ್ನೆಲ್ಲ ಭೂಮಿಯನ್ನು ದಾನ ಮಾಡುತ್ತಾನೆ. ಅನಂತರ ತಪಶ್ಚರಣೆಗೆ ಹೊರಡುತ್ತಾನೆ. ಆಗ ತನ್ನೆಲ್ಲ ಭೂಮಿಯನ್ನು ತಾನು ದಾನ ಮಾಡಿಬಿಟ್ಟಿರುವುದು ನೆನಪಾಗುತ್ತದೆ. ಒಮ್ಮೆ ದಾನ ಮಾಡಿದ ಭೂಮಿಯನ್ನು ಮತ್ತೆ ಕೇಳುವುದು ಸರಿಯಲ್ಲ. ಈಗೇನು ಮಾಡುವುದು… ಎಲ್ಲಿ ಕುಳಿತು ತಪಸ್ಸು ಮಾಡುವುದು? ಯೋಚನೆಯಾಗುತ್ತದೆ.
ಕೊನೆಗೊಂದು ಉಪಾಯ ಹೊಳೆದು, ಪಶ್ಚಿಮ ಘಟ್ಟದ ಬೆಟ್ಟದ ಮೇಲೆ ನಿಂತು ತನ್ನ ಪರಶುವನ್ನು ಸಮುದ್ರದೆಡೆಗೆ ಎಸೆಯುತ್ತಾನೆ. ಸಮುದ್ರ ಹಿಂದೆ ಸರಿದು ಒಂದಷ್ಟು ಜಾಗ ಬಿಟ್ಟುಕೊಡುತ್ತದೆ. ಹೀಗೆ ಸೃಷ್ಟಿಯಾಗುವ ಕರಾವಳಿಯಲ್ಲಿ ಪರಶುರಾಮ ತಪಶ್ಚರಣೆಗೆ ನಿಲ್ಲುತ್ತಾನೆ. ಹೀಗೆ ರಾಮ ಎಸೆದ ಪರಶುವಿನ ಕಾರಣದಿಂದ ಸಮುದ್ರ ಸರಿದು ಉಂಟಾದ ನೆಲವನ್ನೇ ‘ಪರಶುರಾಮ ಸೃಷ್ಟಿ’ ಎಂದು ಕರೆಯುವುದು. ದಕ್ಷಿಣ ಕನ್ನಡ, ಗೋವಾ, ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ಪಶ್ಚಿಮ ಕರಾವಳಿ ಪ್ರದೇಶಕ್ಕೆ ಪರಶುರಾಮ ಸೃಷ್ಟಿ ಎಂಬ ಹೆಸರಿದೆ. *ಪರಶುರಾಮ ಜಯಂತಿ* ಪರಶುರಾಮ ಜಯಂತಿಯನ್ನು ಶುಕ್ಲ ಪಕ್ಷದ ತೃತೀಯ ದಿನದಂದು ಅಂದರೆ ಶುಕ್ಲ ಪಕ್ಷದ ಮೂರನೇ ದಿನದಂದು ಆಚರಿಸಲಾಗುತ್ತದೆ. ಭಗವಾನ್ ಪರಶುರಾಮ ವೈಶಾಖ ಶುಕ್ಲ ತೃತೀಯ ದಿನದಂದು ಜನಿಸಿದನು. ಆದ್ದರಿಂದ ಈ ದಿನವನ್ನು ಪರಶುರಾಮ ಜಯಂತಿ ಎಂದೇ ಆಚರಿಸಲಾಗುತ್ತದೆ. ಪರಶುರಾಮ ವಿಷ್ಣುವಿನ ಆರನೇ ಅವತಾರ. ಭೃಗು ರಾಜವಂಶದ ರಾಜ ಪ್ರಸೇನ್ಜಿತ ಅವರ ಮಗಳು ರೇಣುಕಾ ಮತ್ತು ಮಹರ್ಷಿ ಜಮದಗ್ನಿ ದಂಪತಿಗೆ ಮಗನಾಗಿ ಜನಿಸಿದವ ಪರಶುರಾಮ. ಜಮದಗ್ನಿ ಮತ್ತು ರೇಣುಕಾ ಅವರ ಐದನೇ ಮಗನಾದ ಪರಶುರಾಮನಿಗೆ ರುಮನ್ವಂತ, ಸುಶೇನ, ವಿಶ್ವ ಮತ್ತು ವಿಶ್ವವಾಸು ಎಂಬ ನಾಲ್ಕು ಹಿರಿಯ ಸಹೋದರರು ಇದ್ದರು.
ಪರಶುರಾಮ ಶಿವನಿಗೆ ಪ್ರಿಯವಾದವನು. ಶಿವನಿಗೆ ತನ್ನನ್ನು ತಾನು ಭಕ್ತಿಯಿಂದ ಅರ್ಪಿಸಿಕೊಂಡವನು. ಹಾಗಾಗಿಯೇ ಶಿವನಂಥ ಶಕ್ತಿ ಅವನಿಗೆ! ಪರಶುರಾಮ ಅಪಾರ ಜ್ಞಾನಿ. ಆತ ಒಬ್ಬ ಮಹಾನ್ ಯೋಧನೂ ಕೂಡ ಹೌದು. ಪರಶುರಾಮ ಜಯಂತಿಯನ್ನು ಭಾರತದಾದ್ಯಂತ ಬಹಳ ಉತ್ಸಾಹ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನದಂದು ಹವನ, ಪೂಜಾ ವಿಧಿವಿಧಾನಗಳ ಜೊತೆಗೆ ಪರಶುರಾಮ ಶೋಭಯಯಾತ್ರೆ ಯನ್ನು ಅದ್ಧೂರಿಯಾಗಿ ಆಯೋಜಿಸಲಾಗುತ್ತದೆ.
ಮೂಲತಃ, ಪರಶುರಾಮನನ್ನು ರಾಮ ಎಂಬ ಹೆಸರಿನಿಂದಲೇ ಗುರುತಿಸಲಾಗುತ್ತದೆ. ಶಿವನು ಪರಶುರಾಮನಿಗೆ 'ಪರಶು' ಎಂಬ ಅತೀಂದ್ರಿಯ ಆಯುಧವನ್ನು ಕೊಡುತ್ತಾನೆ. ಇದರಿಂದಾಗಿ ಪರಶುರಾಮ ಎಂದು ಕರೆಯಲಾಗುತ್ತದೆ. ಪುರಾಣಗಳ ನಂಬಿಕೆಗಳ ಪ್ರಕಾರ, ಪರಶುರಾಮ ಕ್ಷತ್ರಿಯರನೇ ಸೋಲಿಸಿದವನು. ಕ್ಷತ್ರಿಯರ ಹೆಮ್ಮೆಯ ಜಗತ್ತನ್ನು ಮುಕ್ತಗೊಳಿಸುವ ಸಲುವಾಗಿಯೇ ಪರಶುರಾಮ ಜನಿಸಿದನು ಎಂದು ಹೇಳಲಾಗುತ್ತದೆ.
ವೈಶಾಖ ಶುಕ್ಲ ಪಕ್ಷ ತೃತೀಯ ದಿನದಂದು ತ್ರೇತಾಯುಗ ಪ್ರಾರಂಭವಾಯಿತು ಎಂದು ನಂಬಲಾಗಿದೆ. ಪುರಾಣಗಳ ಪ್ರಕಾರ (ಭಗವದ್ಗೀತೆ), ಹೈದೇಯ ರಾಜವಂಶದ ರಾಜರನ್ನು ನಾಶಮಾಡಲು ಪರಶುರಾಮ ಜನ್ಮ ತಾಳಿದನು. ಮಾನವಕುಲದ ಹಿತಕ್ಕಾಗಿಯೇ ಬದುಕಲು ನಿರ್ಧಸಿದ್ದವನು ಪರಶುರಾಮ! ಅಗತ್ಯವಿರುವ ಜನರಿಗೆ, ಪರಶುರಾಮ ಸದಾ ಸಹಾಯಹಸ್ತ ಚಾಚುತ್ತಿದ್ದನು.
ಪರಶುರಾಮ ಜಯಂತಿಯ ಮಹತ್ವ
ದ್ವಾಪರ ಯುಗದಲ್ಲಿ, ಪರಶುರಾಮ ಒಬ್ಬ ಬ್ರಾಹ್ಮಣ ಯೋಧನಾಗಿದ್ದನು. ಅವನು ಶಿವನ ಮಹಾನ್ ಶಿಷ್ಯ ಎಂದೇ ಗುರುತಿಸಿಕೊಂಡಿದ್ದಾನೆ. ಪರಶುರಾಮ, ಶಿವನಿಂದ ಪಡೆದ ಪೌರಾಣಿಕ ಕೊಡಲಿಯಾದ 'ಪರಶು' ವನ್ನು ಹೊಂದಿದ್ದು, ಮಹಾಭಾರತ ಪಾತ್ರಗಳಾದ ದ್ರೋಣಾಚಾರ್ಯ, ಭೀಷ್ಮ ಮತ್ತು ಕರ್ಣರಿಗೆ ಮಾರ್ಗದರ್ಶಕನಾಗಿದ್ದನು.
ಒಂದು ದಂತಕಥೆಯ ಪ್ರಕಾರ, ವಿಷ್ಣು ತನ್ನ ಪರಶುರಾಮನ ಅವತಾರದಲ್ಲಿ ಕ್ಷತ್ರಿಯ ಜನಾಂಗದ ವಿಶ್ವಾಸಘಾತುಕತನವನ್ನು ಕೊನೆಗೊಳಿಸಿದನು ಮತ್ತು ರಾಕ್ಷಸ ರಾಜ ಕಿರತಾರ್ಜುನನನ್ನು ಸೋಲಿಸಿದನು. ಈ ಮೂಲಕ ಮಹಾ ವಿಷ್ಣುವು ಭೂಮಿಯ ಮೇಲೆ ಶಾಂತಿ ಮತ್ತು ಧರ್ಮವನ್ನು ಪುನಃಸ್ಥಾಪಿಸಿದನು ಎನ್ನಲಾಗುತ್ತದೆ. ಹೀಗಾಗಿ ಪರಶುರಾಮ ಜಯಂತಿಯ ದಿನವು ವಿಶೇಷ ಧಾರ್ಮಿಕ ಮಹತ್ವವನ್ನು ಹೊಂದಿದೆ. ಈ ದಿನದಂದು ಭಕ್ತರು ದಿನವಿಡೀ ಉಪವಾಸ ಮಾಡುತ್ತಾರೆ ಮತ್ತು ವಿಷ್ಣುವಿನ ಆಶೀರ್ವಾದವನ್ನು ಪಡೆಯಲು ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ.
*ಆಚರಣೆಗಳು ಮತ್ತು ಕ್ರಿಯಾವಿಧಾನಗಳು*
ಭಕ್ತರು, ಪರಶುರಾಮ ಜಯಂತಿಯ ಹಿಂದಿನ ರಾತ್ರಿಯಿಂದ ಜಯಂತಿಯ ದಿನದವರೆಗೆ ಉಪವಾಸವನ್ನು ಮಾಡುತ್ತಾರೆ. ದೇವಾಲಯಗಳಿಗೆ ಭೇಟಿ ನೀಡಿ, ವಿಷ್ಣುವಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಮಹಾವಿಷ್ಣುವಿನ ಭಕ್ತರು ರಾತ್ರಿಯಿಡೀ ಎಚ್ಚರವಾಗಿದ್ದು, ವಿಷ್ಣು ಸಹಸ್ರನಾಮ ಸ್ತೋತ್ರವನ್ನು ಭಕ್ತಿಯಿಂದ ಪಠಿಸುತ್ತಾರೆ. ಈ ದಿನದಂದು ಬ್ರಾಹ್ಮಣರಿಗೆ ಫಲಾಹಾರವನ್ನು ದಾನ ಮಾಡುವುದು ಬಹಳ ಶುಭವೆಂದು ಪರಿಗಣಿಸಲಾಗಿದೆ.
ಪರಶುರಾಮ ಜಯಂತಿಯಂದು ಉಪವಾಸ ಮತ್ತು ಇತರ ಧಾರ್ಮಿಕ ಕಾರ್ಯಗಳನ್ನು ಮಾಡುವುದು ಶತಮಾನಗಳಿಂದ ಈ ದಿನದ ಗುರುತಾಗಿವೆ. ಈ ದಿನ ಮಾಡಿದ ಯಾವುದೇ ಶುಭ ಕಾರ್ಯವು ಫಲಪ್ರದ ಫಲಿತಾಂಶವನ್ನು ನೀಡುತ್ತದೆ. ಜೊತೆಗೆ ಈ ದಿನವನ್ನು ಬಹಳ ಶುಭವೆಂದು ಹೇಳಲಾಗುತ್ತದೆ.
*ಪರಶುರಾಮನ ಬಗ್ಗೆ ಇನ್ನಷ್ಟು ಮಾಹಿತಿ*
ಪರಶುರಾಮನ ಇತರ ಹೆಸರುಗಳು: ಭಾರ್ಗವ ರಾಮ, ರಾಮಭದ್ರ
ಸಂಬಂಧ (ಅಫಿಲಿಯೇಶನ್): ವಿಷ್ಣುವಿನ ಆರನೇ ಅವತಾರ, ಪರಶುರಾಮನನ್ನು ದೇವರಲ್ಲಿ ಒಬ್ಬನೆಂದು ಪರಿಗಣಿಸಲಾಗಿದೆ
ವಾಸಸ್ಥಾನ: ಮಹೇಂದ್ರಗಿರಿ, ಒರಿಸ್ಸಾ
ಶಸ್ತ್ರಾಸ್ತ್ರ: ಕೊಡಲಿ
ಪತ್ನಿ: ಧಾರಿಣಿ, ಅನಾಮಿಕಾ ಎಂದೂ ಕರೆಯುತ್ತಾರೆ.
No comments:
Post a Comment