Monday, 15 June 2020

📙 ಮಹಾಭಾರತದ ಒಂದು ಅಪ್ರಸಿದ್ಧ ಕಥೆ 📙

📙 ಮಹಾಭಾರತದ ಒಂದು ಅಪ್ರಸಿದ್ಧ ಕಥೆ 📙

ಹಿಂದೆ ಯಮುನಾ ತೀರದಲ್ಲಿ ಶಮಾನ್ವಿತರೂ ಸಂಹಿತಾಧ್ಯಯನ ನಿರತರೂ ಕಾಶ್ಯಪ ಗೋತ್ರದವರೂ ಆದ ಯಾಜ ಮತ್ತು ಉಪಯಾಜ ಎಂಬ ಇಬ್ಬರು ಬ್ರಾಹ್ಮಣರಿದ್ದರು. ದ್ರೋಣರಿಂದ ಅಪಮಾನಿತನಾದ ದ್ರುಪದನು ತನ್ನ ಪ್ರತೀಕಾರ ತೀರಿಸಿಕೊಳ್ಳಲು ಅವರನ್ನು ಆಶ್ರಯಿಸಿದನು. ಮೊದಲಿಗೆ ಕಿರಿಯನಾದ ಉಪಯಾಜನನ್ನು ಆಶ್ರಯಿಸಿ ಬಹಳ ಕಾಲ ಶುಶ್ರೂಷೆ ಮಾಡಿ ತನ್ನ ಮನದಿಂಗಿತವನ್ನು ಅವನ ಬಳಿ ನುಡಿಯುತ್ತಾನೆ. ಸಾಕಷ್ಟು ಆಮಿಷಗಳನ್ನೂ ಒಡ್ಡುತ್ತಾನೆ. ಹತ್ತು ಕೋಟಿ ಗೋವುಗಳನ್ನು ನೀಡುವೆನು, ನೀನು ಮನದಲ್ಲಿ ಇಚ್ಛಿಸಿದ ಯಾವುದನ್ನಾದರೂ ಕೊಡುವೆನು ಇತ್ಯಾದಿಯಾಗಿ. ಹೀಗೆ ಏನು ಹೇಳಿದರೂ ಆ ಸಣ್ಣವನಾದ ಉಪಯಾಜ ಮಹರ್ಷಿ ಒಬ್ಬನಿಗೆ ಕೇಡು ಬಯಸುವ ಅಂತಹ ಯಜ್ಞ ತಾನು ಮಾಡಲಾರೆನೆಂದು ನಯವಾಗಿಯೇ ತಿರಸ್ಕರಿಸುತ್ತಾನೆ. ಅನಂತರ ಮತ್ತೆ ಒಂದು ವರ್ಷ ದ್ರುಪದ ಅವನ ಸೇವೆ ಮುಂದುವರೆಸುತ್ತಾನೆ. ಆಗಲೂ ಯಜ್ಞ ಮಾಡಲೊಪ್ಪದ ಉಪಯಾಜನು ತನ್ನ ಅಣ್ಣನಾದ ಯಾಜನ ಬಳಿ ತೆರಳುವಂತೆ ಸೂಚಿಸುತ್ತಾನೆ. ಅದಕ್ಕೆ ಒಂದು ಕಾರಣವನ್ನೂ ನೀಡುತ್ತಾನೆ. ' ಹಿಂದೆ ಒಮ್ಮೆ ನನ್ನ ಹಿರಿಯ ಸಹೋದರ ಕಾಡಿನಲ್ಲಿ ಹೋಗುತ್ತಿದ್ದಾಗ ಹೊಳೆಯ ತೀರದಲ್ಲಿ ಬಿದ್ದಿದ್ದ ಹಣ್ಣನ್ನು ಅದರ ಶುದ್ಧತೆಯ ಬಗೆಗೆ ವಿಚಾರ ಮಾಡದೇ ಸೇವಿಸಿದನು. ನಾನು ಅಣ್ಣನ ಈ ಅನುಚಿತವಾದ ಕೆಲಸ ನೋಡಿದೆ.‌ ದುಷ್ಟಪದಾರ್ಥಗಳನ್ನು ಸ್ವೀಕರಿಸುವ ವಿಷಯದಲ್ಲಿ ಯಾವ ರೀತಿಯಿಂದಲೂ ವಿಮರ್ಶೆ ಮಾಡುವುದಿಲ್ಲ. ಆ ಹಣ್ಣನ್ನು ನೋಡಿ ಅದರ ಜೊತೆಗಿದ್ದ ದೋಷಗಳನ್ನು ಅವನು ಗಮನಿಸಲಿಲ್ಲ. ಹಾಗಾಗಿ ಉಳಿದ ಸಮಯದಲ್ಲಿ ಹೇಗೆ ಶುಚಿಯಾಗಿರುತ್ತಾನೆ? ಗುರುಕುಲದಲ್ಲಿ ವಾಸ ಮಾಡಿ ವೇದ ಕಲಿಯುವ ಕಾಲದಲ್ಲೂ ಎಂಜಲು ಮಾಡಿದ ಭಿಕ್ಷಾನ್ನ ತಿಂದು ಅಸಹ್ಯ ಪಡದೇ ಅದರ ಬಗೆಗೇ ಮತ್ತೆ ಮತ್ತೆ ವರ್ಣಿಸುತ್ತಿದ್ದ. ಈ ನನ್ನ ಅಣ್ಣ ಕೇವಲ ಫಲಾಪೇಕ್ಷಿ ಹೊರತು ಉತ್ತಮವೋ ಅಧಮವೋ ವಿಮರ್ಶಿಸುವನಲ್ಲ. ಹಾಗಾಗಿ ನೀನು ಅವನನ್ನು ಆಶ್ರಯಿಸಿ ಯಾಗ ಮಾಡು ಎಂದನು ಉಪಯಾಜ. ದ್ರುಪದನಿಗೆ ಯಾಜನ ನಡತೆಯನ್ನು ಕೇಳಿ ಜುಗುಪ್ಸೆ ಬಂದರೂ ತನ್ನ ಉದ್ದೇಶ ಈಡೇರಿಸಿಕೊಳ್ಳಲು ಅವನನ್ನು ಚೆನ್ನಾಗಿ ಪೂಜಿಸಿ ದ್ರೋಣನನ್ನು ಕೊಲ್ಲುವ ಮಗನನ್ನು ಪಡೆದರೆ ನಿನಗೆ ಹತ್ತು ಕೋಟಿ ಗೋವುಗಳನ್ನು ನೀಡುವೆನು ಎಂದೆಲ್ಲಾ ಆಮಿಷ ಒಡ್ಡಿದನು. ಹೋಮದ ಕೊನೆಯಲ್ಲಿ ಯಾಜನು ರಾಣಿಯನ್ನು ಕರೆದರೆ ಅವಳಿನ್ನೂ ಸ್ನಾನ ಮಾಡಿರದ ಕಾರಣ ಅದನ್ನು ಸೇವಿಸುವುದಿಲ್ಲ. ಅನಂತರ ಹಾಗೆಯೇ ಹೋಮ ಮುಂದುವರೆದು ಒಬ್ಬ ಕುಮಾರ  ಹಾಗೂ ಒಬ್ಬಳು ಕುಮಾರೀ ಯಜ್ಞ ಕುಂಡದಿಂದ ಜನಿಸುತ್ತಾರೆ. ಅವರೇ ದೃಷ್ಟದ್ಯುಮ್ನ ಮತ್ತು ದ್ರೌಪದಿ. ದ್ರೋಣನಾದರೋ ತನ್ನ ಗುರುತನದ ಕೀರ್ತಿ ಹಾಳಾಗದಿರಲೆಂದು ಆ ಮಗನನ್ನು ಮನೆಗೆ ಬರಮಾಡಿಕೊಂಡು ಅಸ್ತ್ರ ವಿದ್ಯೆಯನ್ನು ಕಲಿಸುತ್ತಾನೆ.

ಈ ಕಥೆ ಮೇಲ್ನೋಟಕ್ಕೆ ಸಾಮಾನ್ಯವಾಗಿದೆ. ದ್ರೋಣರ ಹಗೆಯಿಂದ ಇದು ಪ್ರಾರಂಭವಾದದ್ದು. ದ್ರುಪದನು ತನ್ನ ಮಿತ್ರನಿಗೆ ಅಪಮಾನ ಮಾಡಿದ್ದೇ ಅದಕ್ಕೆ ಕಾರಣ. ಹೀಗೆ ಮಿತ್ರರಿಗೆ ಮಾಡುವ ಅಪಮಾನ ನಮ್ಮ ಅನರ್ಥಕ್ಕೆ ಕಾರಣವಾಗುತ್ತದೆ. ಹಾಗಾಗಿ ಯಾರನ್ನೂ ಅಪಮಾನಿಸದಿರಿ.
ಒಂದು ವೇಳೆ ಹಾಗೆ ಅಪಮಾನವಾದರೂ ದ್ವೇಷ ಸಾಧಿಸುವುದು ಎಷ್ಟಕ್ಕೂ ಒಳ್ಳೆಯದಲ್ಲ. *ನಮೇ ದ್ವೇಷ್ಯ: ನ ಪ್ರಿಯ: ಅಸ್ತಿ* ಎಂಬ ಕೃಷ್ಣನ ಮಾತಿನಂತೆ ಸೇಡು ಯಾರಲ್ಲೂ ಸಲ್ಲದು.

ಇನ್ನು ಯಾಜನ ಪರೀಕ್ಷಿಸದೇ ಸ್ವೀಕರಿಸುವ ಬುದ್ಧಿ ನಮಗೆಲ್ಲ ಸಹಜ. ದೋಷದಿಂದ ಕೂಡಿರುವ ಅನ್ನವಾಗಲಿ, ವಸ್ತುವಾಗಲಿ, ಧನವಾಗಲಿ ಅದು ನಮ್ಮ ವ್ಯಕ್ತಿತ್ವವನ್ನು ಹಾಳು ಮಾಡುವುದೇ ಹೊರತು ಬೆಳೆಸಲಾರದು. ನಿಂದ್ಯವೂ ಆಗುವುದು. ಏನನ್ನೇ ಆಗಲಿ ಪಡೆಯಬೇಕಾದಾಗ ಕೂಲಂಕುಷವಾಗಿ ಪರೀಕ್ಷಿಸಿ ಪಡೆಯುವ ಬುದ್ಧಿ ಉತ್ತಮ.

ಇನ್ನು ಯಾಗದ ಕೊನೆಯೂ ಸರಿಯಾಗಿ ನಡೆಯಲಿಲ್ಲ. ಉದ್ದೇಶ ಕೆಟ್ಟದಿದ್ದರೆ ಕಾರ್ಯದ ಅವಸಾನ ಸರಿಯಾಗಿರುವುದಿಲ್ಲ. ದಶರಥನ ಯಾಗದ ಕೊನೆಗೆ ಪತ್ನಿಯರು ಸಿದ್ಧವಿದ್ದರು ಪಾಯಸ ಪಡೆಯಲು, ಇಲ್ಲಿ ಅವಳು ಸ್ನಾನವನ್ನೇ ಮಾಡಿರುವುದಿಲ್ಲ.
ಯಜ್ಞ ದಲ್ಲಿ ದೇವಸಂಕಲ್ಪದಿಂದ ಜನಿಸಿದರೂ ಜೀವನವಿಡೀ ಕಷ್ಟ ಪಡುವ ಸ್ಥಿತಿ ದ್ರೌಪದಿಯದಾಯಿತು.
ಅದೂ ಈ ಕೆಟ್ಟ ಉದ್ದೇಶದ ಯಜ್ಞ ದ ಫಲ. ಹಾಗಾಗಿ ನಮ್ಮ ಉದ್ದೇಶ ಒಳ್ಳೆಯದಿರಬೇಕೆಂಬುದು ಕಥೆಯ ಸಾರ.
      ,🙏 ,ಶ್ರೀ ಕೃಷ್ಣಾರ್ಪಣಮಸ್ತು ,🙏

No comments:

Post a Comment