Monday, 15 June 2020

ಸುಧಾಮನು__ಹೇಳಿದ___ಕೃಷ್ಣನ___ಕಥೆ___

#ಸುಧಾಮನು__ಹೇಳಿದ___ಕೃಷ್ಣನ___ಕಥೆ___
ಅಂದು ನಮಗೆ ಆಶ್ರಮದಲ್ಲಿ ಕಲಿಯುವ ಮಕ್ಕಳಿಗೆ ಹೊಸತೊಂದು ಸುದ್ದಿ ಬಂತು. ಇನ್ನೂ ಇಬ್ಬರು ಹೊಸ ಹುಡುಗರ ಸೇರ್ಪಡೆಯಾಗಲಿದೆಯಂತೆ. ಗೋಕುಲದಿಂದ ಬರುತ್ತಿದ್ದಾರಂತೆ, ಹೆಸರು ಕೃಷ್ಣ ಬಲರಾಮರಂತೆ. ಆ ಕೃಷ್ಣನೆನ್ನುವವನು ಕೋಳಲೂದಿದರೆ, ಹಸುಗಳೆಲ್ಲ ಅವನ ಬಳಿ ಓಡೋಡಿ ಬರುತ್ತವಂತೆ. ನನ್ನ ಗೆಳೆಯನೊಬ್ಬ ನನ್ನ ಕಿವಿಯಲ್ಲಿ ಉಸುರಿದ್ದ. 

'ಏಯ್ ಮಂಕೆ! ಹಸುಗಳು ಮಾತ್ರ ಅಲ್ಲ ನಂದ ಗೋಕುಲದ ಗೋಪಿಕೆಯರೆಲ್ಲ ಅವನ ಕೊಳಲ ಗಾನಕ್ಕೆ ಮರೆತು ತಮ್ಮೆಲ್ಲ ಕೆಲಸಗಳನ್ನು ಬಿಟ್ಟು ಅವನ ಬಳಿ ಬರುತ್ತಾರಂತೆ. ಅವನ ಸುತ್ತ ಹಾಡಿ ಮೈ ಮರೆಯುತ್ತಾರಂತೆ. ಅವನ ಗಲ್ಲಗಳಿಗೆ, ಮುತ್ತು ಕೊಡುತ್ತಾರಂತೆ. ಅವನಿದ್ದಾನಲ್ಲ ಕೃಷ್ಣ ಪೂತನಿ, ಶಕಟ, ಧೇನುಕರನ್ನೆಲ್ಲ ಬಕಾಸೂರ ಆಘಾಸೂರ ಕೊಂದವನಂತೆ. ಅಷ್ಟೇ ಅಲ್ಲ ಕಾಳಿ ನದಿಯ ಮಡುವಿನಲ್ಲಿದ್ದ ಕಾಳಿಂಗನ ಹೆಡೆಯ ಮೇಲೆ ನರ್ತನಗೈದು ಕಾಳಿಂಗನ ಮದವಿಳಿಸಿದವನಂತೆ.ಹೀಗೆ ಅವನ ಬಗೆಗಿನ ಕಥೆಗಳು 

ಮರುದಿನವೇ ಆ ಇಬ್ಬರು ಹೊಸ ಹುಡುಗರು ನಮ್ಮ ಆಶ್ರಮಕ್ಕೆ ಬಂದರು. ಗುರುಗಳು ಅವರನ್ನು ನಮಗೆ ಪರಿಚಯಿಸಿದರು. ಆತ ಕೃಷ್ಣ ಅಂದರೆ ಕಪ್ಪು. ಇನ್ನೊಬ್ಬ ಬಲರಾಮ ಬಿಳಿಯ ಬಣ್ಣದವನು. ಹುಡುಗರಂತೆ ನಮ್ಮೊಡನೆ ಕಲೆತು, ಕೂಡಿ ಆಡಿ ವಿದ್ಯೆ ಕಲಿತರು.

ಅಯ್ಯೋ ನನ್ನ ಪರಿಚಯ ಮಾಡೊಕ್ಕೆ ಮರೆತೆ ನೋಡಿ ನಾನು ಸುಧಾಮ. ಬಡ ಬ್ರಾಹ್ಮಣರ ಮನೆಯ ಹುಡುಗ. ಅಪ್ಪ ಕಲಿಯುವುದಕ್ಕೆಂದು ಈ ಆಶ್ರಮಕ್ಕೆ ತಂದು ಬಿಟ್ಟರು. ಈ ಪೋಲಿ ಹುಡುಗರ ಸಹವಾಸ ನನಗೆ ಸಾಕಾಗಿತ್ತು. ಸಣಕಲಾಗಿರುವ ನನ್ನನ್ನು ಗೇಲಿ ಮಾಡುವುದು, ನನ್ನಿಂದ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುವುದು, ನನ್ನ ಜುಟ್ಟೆಳೆಯುವುದು. ನಿನ್ನ ಹೆಂಡತಿಯ ಹೆಸರೇನೆಂದು ಕೇಳುವುದು ಹೀಗೆಲ್ಲ. ನಿಜ ಹೇಳುತ್ತೇನೆ.. ಈ ಹುಡುಗರು ಬಂದ ಮೇಲೆ ಆಶ್ರಮದ ಪೋಲಿ ಹುಡುಗರ ಆಟ ಕಮ್ಮಿಯಾಯ್ತು. ಕೃಷ್ಣನಂತೂ ಅಧ್ಯಯನಕ್ಕೆ ನನ್ನ ಪಕ್ಕದಲ್ಲಿಯೇ, ಕೂರುತ್ತಿದ್ದ. 

ಕೃಷ್ಣನೆಲ್ಲಿ ಹೋದರು ನಾನು ಅವನ ಜತೆಗಿರಲೇಬೇಕು ಅನ್ನುವ ಹಾಗೆ. ಆಶ್ರಮದ ಪಕ್ಕದಲ್ಲೇ ಗೋಮತಿ ಕುಂಡ ಅನ್ನುವ ಸ್ನಾನ ಘಟ್ಟ. ಈ ಕೃಷ್ಣ ಆಶ್ರಮಕ್ಕೆ ಬಂದ ಮೇಲೆ ನಮ್ಮ ಗುರುಗಳಾದ ಸಾಂದೀಪ ಮಹರ್ಷಿಗಳ ಪವಿತ್ರ ಸ್ನಾನಕ್ಕೆ ಎಲ್ಲ ತೀರ್ಥಗಳು ಈ ಗೋಮತಿ ಕುಂಡವನ್ನು ಸೇರುವಂತೆ ಮಾಡಿದವ ನನ್ನ ಗೆಳೆಯ ಕೃಷ್ಣ. ನಮ್ಮ ಗುರುಪುತ್ರ ಪ್ರಭಾಸನನ್ನು ಶಂಖಾಸುರ ಕದ್ದೊಯ್ದು ಅಡಗಿಸಿಟ್ಟಾಗ ಈ ಕೃಷ್ಣ ಬಲರಾಮರೇ ಸಮುದ್ರದಲ್ಲಿ ಅವಿತ ಶಂಖಾಸುರನನ್ನು ಎಳೆತಂದು ಅವನು ಅಡಗಿಸಿಟ್ಟ ಗುರುಪುತ್ರನನ್ನು ಗುರುದಕ್ಷಿಣೆಯಾಗಿ ಗುರುಗಳಿಗೆ ಕೊಟ್ಟರು ಇದೆಲ್ಲವನ್ನು
ನೋಡಿ ನಮಗೆ ಅಶ್ಚರ್ಯವಾದದಂತೂ ಸುಳ್ಳಲ್ಲ! 

ನಮ್ಮ ಅಧ್ಯಯನ ಮುಗಿದು ನಾವು ನಮ್ಮ ಮನೆಗಳನ್ನು ಸೇರಿದೆವು. ನನಗೂ ಬಡವನಾದರೂ ಮದುವೆ ಆಯ್ತು. ವಸುಂಧರೆ ನನ್ನ ಧರ್ಮಪತ್ನಿಯಾದಳು. ಅವನದ್ದು ಅಂದರೆ ನನ್ನ ಗೆಳೆಯ ಶ್ರೀಕೃಷ್ಣನದ್ದು ಬೇರೆಯೇ ಕಥೆ. ಎಂಟು ಮಂದಿಯನ್ನು ಮದುವೆಯಾದನಂತೆ, ಅದು ಹೇಗೆ ಸುಧಾರಿಸಿಕೊಳ್ಳುತ್ತಾನೊ.! ನನಗೋ ಮಾಡಿಕೊಂಡ ಈ ಒಂದೇ ಮದುವೆ ಸಾಕೋ ಸಾಕೆನಿಸಿದೆ. ಮದುವೆ.ಮಕ್ಕಳು-ಸಂಸಾರ-ಬಡತನ.ತಲೆಗೆಳೆದರೆ ಕಾಲಿಗಿಲ್ಲ, ಕಾಲಿಗೆಳೆದರೆ ತಲೆಗಿಲ್ಲ ಅನ್ನೋ ಸ್ಥಿತಿ.

ನನ್ನವಳದ್ದು ಒಂದೇ ರಗಳೆ. ಬಾಲ್ಯ ಸ್ನೇಹಿತ ಅನ್ನುತ್ತೀರಿ, ಶ್ರೀಮಂತ ನೆನ್ನುತ್ತಿರಿ? , ದ್ವಾರಕೆಯ ಯುವರಾಜನೆನ್ನುತ್ತೀರಿ. ಹೋಗಿ ನಮ್ಮ ಕಷ್ಟ ಹೇಳಬಾರದೆ? ಏನಾದರು ಮಾಡಿಯಾನು. ಈ ಹೆಂಗಸರಿಗೆ ಕೆಲ ವಿಷಯಗಳು ಅರ್ಥವಾಗುವುದಿಲ್ಲ! ಹೋಗಿ ಕೇಳುವುದೆಂದರೆ ನಾನೇನು ಕೊಟ್ಟು ಇಟ್ಟದ್ದಿದೆಯೇ? ಅವನಿಗೆ ಎಲ್ಲರಂತೆ ನಾನು ಒಬ್ಬ ಪ್ರಜೆ. ಅವನೆದುರು ಹೋಗಿ ಈ ದೇಹವನ್ನು ಹಿಡಿಮಾಡಿ ಕೇಳಲೇನು..? ನನ್ನಿಂದ ಸಾಧ್ಯವಿಲ್ಲ.

ನನ್ನವಳು ವಸುಂಧರೆಯಲ್ಲಿ ಉತ್ತರ ಸಿದ್ಧವಿತ್ತು..ಏನನ್ನಾದರು ಪಡೆಯಬೇಕಾದರೆ ಬಾಗಬೇಕು. ಆರಾಗಬೇಕಾದರೆ ಮೊದಲು ಮೂರಾಗಬೇಕು. ಅವನನ್ನು ದೇವನೆನ್ನುತ್ತೀರಿ, ಅವನೇ ಬಲಿಯಲ್ಲಿ ಮೂರಡಿ ನೆಲವನ್ನು ಕೇಳಿದನಂತೆ? ನೀವು ಯಾಕೆ ಕೇಳಬಾರದು?

ಯಾಕಾದರು ಈ ಹೆಂಗಸರು ಪುರಾಣ ಕಥೆಗಳನ್ನು ಕೇಳುತ್ತಾರೊ.! ನನ್ನವಳ ಕಾಟ ತಾಳಲಾರದೆ ನಾನು ದ್ವಾರಕೆಗೆ ಹೊರಟೆ. ರೀ ಸ್ವಾಮಿ ದ್ವಾರಕೆ ಇನ್ನೆಷ್ಟು ದೂರ ಇದೆ..?ಇನ್ನೂ ಐವತ್ತು ಗಾವುದ ದೂರವೇ ಇರಲಿ ಬಿಡಿ ಇನ್ನೇನು ಹಾಗೂ ಹೀಗೂ ತಲುಪಿದ ಹಾಗೆ ಹೋ ಬಂತಲ್ಲ.. ದ್ವಾರಕೆ.ಇನ್ನೇನು ಒಳಗೆ ಹೋಗೋದೆ ಅಷ್ಟರಲ್ಲಿ..... 

ಏಯ್ ನಿಲ್ಲು  ನಿಲ್ಲು ಯಾರು ನೀನು? ಯಾರನ್ನು ನೋಡಬೇಕಾಗಿತ್ತು? ದ್ವಾರಪಾಲಕರು ನನ್ನನ್ನು ತಡೆದರು.ನಾನು ಸುಧಾಮ, ನಿಮ್ಮ ಒಡೆಯ ಕೃಷ್ಣನ ಗೆಳೆಯ. ಅವನನ್ನು ನೋಡಬೇಕಿತ್ತು.ಕಿಸಿ ಕಿಸಿ ನಕ್ಕರು ದ್ವಾರಪಾಲಕರು..ನೀನು ಹೇಳಬೇಕು, ನಾವು ನಂಬಬೇಕು..ಏನು ಕೃಷ್ಣನನ್ನು ನೋಡಬೇಕು ಅಂದ್ಯಾ..? ರಾಜ ಬೀದಿಗಳಲ್ಲಿ ಅವನ ಚಿತ್ರಗಳನ್ನು ಮಾರಲು ಇಟ್ಟಿದ್ದಾರೆ. ಒಂದನ್ನು ತೆಗೆದುಕೊಂಡು ಮನೆಗೆ ಹೋಗು. ಎಷ್ಟಾದರೂ ನೋಡುವಿಯಂತೆ. ಗಹಗಹಿಸಿ ನಕ್ಕರು ದ್ವಾರಪಾಲಕರು ಬಂದ ದಾರಿಗೆ ಸುಖವಿಲ್ಲವೆಂದು ರಾಜಬೀದಿಯಲ್ಲಿ ನಡೆದು ವಾಪಸ್ಸು ಹೊರಟೆ..

ಏ ಏ ಸುಧಾಮಾ. ನಿಲ್ಲೋ. ಯಾಕೊ ವಾಪಸ್ಸು ಹೋಗುತ್ತಿದ್ದಿ.ಇರೋ ನಾನು ಬಂದೆ..ಹಿಂತಿರುಗಿ ನೋಡಿದೆ.. ಮೇಲೆ ಉಪ್ಪರಿಗೆಯಿಂದ ನನ್ನ ಕೃಷ್ಣ, ನನ್ನ ಜೀವದ ಗೆಳೆಯ ಕೂಗುತ್ತಿದ್ದಾನೆ. ನನ್ನ ಭ್ರಮೆಯಿರಬಹುದು ಅಂದುಕೊಂಡು ಮತ್ತೆ ಮುಂದೆ ಹೆಜ್ಜೆ ಹಾಕಿದೆ..

ಆತ ಬಂದ, ನನ್ನ ಕೃಷ್ಣ ಬಂದ, ಬರಿಗಾಲಲ್ಲಿ ಓಡೋಡಿ ಬಂದ. ಒಂದು ಕ್ಷಣ ಅವನು ಮತ್ತು ನಾನು ಪರಸ್ಪರ ನೋಡುತ್ತ ನಿಂತೆವು. ರಾಜಬೀದಿ ಎಂಬುದನ್ನು ಮರೆತ..ಬೆವರು, ಧೂಳಿನಿಂದ ತೊಯ್ದು ತೊಪ್ಪೆಯಾಗಿದ್ದ ನನ್ನನ್ನು ಗಾಢವಾಗಿ ಅಪ್ಪಿಕೊಂಡ. ಸುಧಾಮ.. ಎಷ್ಟು ದಿನಗಳಾಯ್ತೋ ನಿನ್ನನ್ನು ನೋಡಿ. ಬೀದಿಯ ಜನರೆಲ್ಲ ಮೂಕ ವಿಸ್ಮಿತರಾಗಿ ನಮ್ಮನ್ನೇ ನೋಡುತ್ತಿದ್ದರು! ಆತ ರಥದಲ್ಲಿ ಕೂರಿಸಿ ನನ್ನನ್ನು ಅರಮನೆಗೆ ಕರೆದೊಯ್ದ.

 ಕೃಷ್ಣನು ನನ್ನ ಕಾಲು ತೊಳೆದ. ಲಕ್ಷ್ಮಿಯಂತಿರುವ ರುಕ್ಮಿಣಿ ನನ್ನ ಪಾದವೊತ್ತಿದಳು. ಉಳಿದ ಅವನ ಹೆಂಡಂದಿರು ಚಾಮರ ಬೀಸಿದರು. ನನಗೆ ಮಂಗಲ ಸ್ನಾನ ಮಾಡಿಸಿದರು. ಉಡಲು ಹೊಸ ಬಟ್ಟೆ ಯಿತ್ತರು.‍ಷಡ್ರಸೋಪೇತ ಭೋಜನವನ್ನಿತ್ತರು ನನಗೆ ಗಂಟಲಲ್ಲಿ ತುತ್ತಿಳಿಯಲಿಲ್ಲ..ಯಾಕೊ ಕೆಮ್ಮು ಬಂತು.ಅತ್ತಿಗೆ ನೆನಪು ಮಾಡಿರಬೇಕು. ಸುಧಾಮ ಈ ಊಟ ಅತ್ತಿಗೆಯ ಅಡುಗೆಯಂತೆ ಇರಲಿಕ್ಕಿಲ್ಲ. ಆದರೂ ಹಾಗೇ ಅಂತ ತಿಳಿದುಕೊಂಡು ಸ್ವೀಕರಿಸಬೇಕು, ಅವನದು ಅದೇ ಕೀಟಲೆಯ ಮಾತು. ಆಗ ನನ್ನ ಕಣ್ಣ ಮುಂದೆ ನನ್ನ ಹೆಂಡತಿ ಮಕ್ಕಳ ದಯನೀಯ ಚಿತ್ರ ಹಾದು ಹೋಯ್ತು.

ಮತ್ತೆ ಹಂಸತೂಲಿಕಾ ತಲ್ಪದ ಮೇಲೆ ಕುಳಿತು ಕೃಷ್ಣ ನನ್ನೊಂದಿಗೆ ಹರಟೆ ಹೊಡೆದ. ಎಲ್ಲಿಯೂ ಅಪ್ಪಿ ತಪ್ಪಿಯೂ ನೀನು ಹೇಗಿದ್ದಿ, ನಿನ್ನ ಸ್ಥಿತಿ ಗತಿ ಏನು ಎಂಬ ಮಾತೇ ಇಲ್ಲ. ಎಲ್ಲ ತನ್ನ ವೈಭವ, ತನ್ನ ವ್ಯವಹಾರದಬಗ್ಗೆ ಮಾತ್ರ ಹೇಳಿಕೊಳ್ಳುತ್ತಿದ್ದಾನೆ. ದೊಡ್ಡವರೆಲ್ಲ ಹೀಗೆಯೇ ಏನೋ?

ಕೃಷ್ಣ ಥಟಕ್ಕನೆ ಕೇಳಿಯೇ ಬಿಟ್ಟ.. ಹೇಳೊ ಸುಧಾಮ ಅತ್ತಿಗೆ ನನಗಾಗಿ ಏನು ಕಳುಹಿಸಿದ್ದಾಳೆ ಏನಾದರು ಕಳುಹಿಸಿರಲೇ ಬೇಕು.ಈಗ ಕೃಷ್ಣನ ಮುಂದೆ ನನ್ನ ದಾರಿದ್ರ್ಯ ಬತ್ತಲಾಗುವ ಸಮಯ ಬಂದೇ ಬಂತು. ನಾನು ಸಂಕೋಚ ಪಟ್ಟೆ. ಆತ ಬಿಡಲಿಲ್ಲ. ನನ್ನ ಹರಕು ಉತ್ತರೀಯದಲ್ಲಿ ನಾನು ಕಟ್ಟಿಕೊಂಡು ಬಂದ ಹಿಡಿ ಅವಲಕ್ಕಿಯನ್ನು ಕಂಡು ಹಿಡಿದ..

ಅಬ್ಬಬ್ಬಾ.. ಅದೆಷ್ಟು ಗಂಟು ಹಾಕಿದ್ದೀಯೋ ಮಾರಾಯ..ಕೊನೆಗೂ ಹಿಡಿಯವಲಕ್ಕಿ ಅವನಿಗೆ ಸಿಕ್ಕಿತು, ಬಾಯಿಗೆ ಹಾಕಿಕೊಂಡ, ತನ್ನ ಅಷ್ಟಪತ್ನಿಯರಿಗೆ ಹಂಚಿದ, ಅರಮನೆಯ ಎಲ್ಲರಿಗೂ , ಬಂದವರೆಲ್ಲರಿಗೂ ಹಂಚುತ್ತಲೇ ಇದ್ದಾನೆ. ನಮ್ಮ ಸುಧಾಮ ತಂದ ಅವಲಕ್ಕಿ.. ಏನು ರುಚಿ ಏನು ಸ್ವಾದ..!

ರಾತ್ರಿಯಾಯಿತು . ನಾನು ಅವನು ಒಂದೇ ಪಲ್ಲಂಗದ ಮೇಲೆ ಪವಡಿಸಿದ್ದೇವೆ. ಕೃಷ್ಣ ಕೇಳಿದ ಗೆಳೆಯ ನಿನಗೆ ನಮ್ಮ ಬಾಲ್ಯದ ನೆನಪು ಬರುವುದಿಲ್ಲವೇ? ನಾನು ಹೇಳಿದೆ ಬರದೆ ಏನು ಗೆಳೆಯ ಆ ಸುಂದರ 
ನೆನಪುಗಳ ಮರೆಯುವುದುಂಟೆ! ಗೆಳೆಯ ನಿನಗೆ ನೆನಪಿದೆಯೇ ನನಗೆ 
ಅಂದು ತುಂಬಾ ಹಸಿವಾಗಿತ್ತು. ನಿನ್ನ ಬಳಿ ತಿನ್ನಲು ಏನಾದರೂ ಇದ್ದರೆ 
ಕೊಡು ಎಂದು ಕೇಳಿದೆ. ಆಗ ನಿನ್ನ ಬಳಿಯೂ ಏನು ಇರಲಿಲ್ಲ. ಆಗ 
ನಮ್ಮಿಬ್ಬರಿಗೂ ಅಲ್ಲ ಅಲ್ಲ ನನ್ನೊಬ್ಬನಿಗೆ ಮಾತ್ರ ಹಸಿವಿನ ಬೆಲೆ 
ಗೊತ್ತಾಯಿತು. ಎಂದು ಕೃಷ್ಣನು ಹೇಳುತ್ತಾ ಮುಗುಳ್ನಕ್ಕು ಮಲಗು ಮಲಗು ಎಂದು ಹೇಳಿಬಿಟ್ಟ. 

ನನಗೆ ಬಡತನವೇ ಭೂತವಾಗಿ ಕಾಡುವಾಗ ನಿದ್ದೆ ಎಲ್ಲಿಂದಾದರೂ  ಬರಬೇಕು ಆದರೂ ನನ್ನ ಬಡತನದ ಬಗ್ಗೆ ಪ್ರೀಯ ಮಿತ್ರನ ಬಳಿ ಹೇಗೆ ಹೇಳುವುದೆಂದು ನಾ ನಿದ್ದೆ ಇಲ್ಲದೆ ಆ ರಾತ್ರಿಯನು ಕಳೆದೆ ಬೆಳಗಾಯಿತು. ನಿತ್ಯಾಹ್ನಿಕಗಳನ್ನು ಪೂರೈಸಿ ನಾನು ಹೊರಟೆ.. ಕೃಷ್ಣನಲ್ಲಿ.., ನನ್ನ ಗೆಳೆಯನಲ್ಲಿ ಏನನ್ನೂ ಕೇಳದೆಯೆ.ಇನ್ನೊಮ್ಮೆ ಬಂದಾಗ ಅತ್ತಿಗೆ ಮಕ್ಕಳನನ್ನು ಕರೆದುಕೊಂಡು ಬರಬೇಕು. ಅತ್ತಿಗೆಗೆ ನಾವೆಲ್ಲ ಕೇಳಿದ್ದೇವೆ ಅಂತ ಹೇಳು ಸುಧಾಮ ವಾಪಸ್ಸು ಊರಿಗೆ ಹೊರಟ. 

ಊರು ತಲುಪಿದ. ಅರೇ ಇದೇನಿದು.ನನ್ನ ಮನೆ ನಾ ಪತ್ತೆಯಾಗಿದೆ? ಅಯ್ಯೋ ಉಪವಾಸ ಬೀಳುವುದಕ್ಕಾದರೂ ಒಂದು ಮನೆಯಂತ ಇತ್ತು! ಅದನ್ನು ಕಸಿದುಕೊಂಡು ಬಿಟ್ಟನೇ ಪರಮಾತ್ಮ ಎನ್ನುವಷ್ಟರಲ್ಲಿ ರೀ..ಏನು ಹುಡುಕುತ್ತಿದ್ದೀರಿ.. ಇಲ್ಲಿ..ಇಲ್ಲಿ..ಮೇಲೆ ಉಪ್ಪರಿಗೆಯಿಂದ ವಸುಂಧರೆ ತನ್ನನ್ನು ಕೂಗಿ ಕರೆಯುತ್ತಿದ್ದಾಳೆ.ಅಲ್ಲ ಖಂಡಿತ ಅಲ್ಲ.ಇವಳು ಪಕ್ಕದ ಮನೆ ಸೆಟ್ರ ಹೆಂಡ್ತಿ ಹಾಗಿದ್ದಾಳೆ. ಮೈ ತುಂಬ ಒಡವೆ..ರೇಷ್ಮೆ ಪೀತಾಂಬರ ಉಟ್ಟುಕೊಂಡಿದ್ದಾಳೆ.ಅಷ್ಟರಲ್ಲಿ ಹೊಸ ಬಟ್ಟೆ ಚಿನ್ನದೊಡವೆಗಳನ್ನು ತೊಟ್ಟ ಮಕ್ಕಳು ಅಪ್ಪಾ. ಬಾ.ಇದೇ ನಮ್ಮ ಮನೆ ಎಂದು ನನ್ನನ್ನು ಮನೆಯೊಳಗೆ ಕರೆದೊಯ್ದರು.

ವಸುಂಧರೆ ಕೆಳಗಿಳಿದು ಬಂದವಳು 'ರೀ ನಾನು ನಿಮ್ಗೆ ಯಾವತ್ತೋ ಹೇಳಿರಲಿಲ್ಲವೇ.. ಒಮ್ಮೆ ದ್ವಾರಕೆಗೆ ಹೋಗಿ ಬನ್ನಿ ಅಂತ. ಸ್ವಲ್ಪ ಆದ್ರು ಹೆಂಡತಿ ಮಾತು ಕೇಳ್ಬೇಕ್ರಿ.. ಆಗಲೇ ಸಂಸಾರ ಉದ್ಧಾರ ಆಗೋದು
ಎಂದಳು. ನಾನು ಗರಬಡಿದವನಂತೆ ನಿಂತೆ. 

ಅಂದು ರಾತ್ರಿ ಕೃಷ್ಣ ಅರಮಾನೆಯಲ್ಲಿ, ಗೆಳೆಯ ನಿನಗೆ ನೆನಪಿದೆಯೇ? ನನಗೆ ಅಂದು ತುಂಬಾ ಹಸಿವಾಗಿತ್ತು. ನಿನ್ನ ಬಳಿ ತಿನ್ನಲು ಏನಾದರೂ ಇದ್ದರೆ ಕೊಡು ಎಂದು ಕೇಳಿದೆ. ಆಗ ನಿನ್ನ ಬಳಿಯೂ ಏನು ಇರಲಿಲ್ಲ.! ಆಗ ನಮ್ಮಿಬ್ಬರಿಗೂ ಅಲ್ಲ ಅಲ್ಲ ನನ್ನೊಬ್ಬನಿಗೆ ಮಾತ್ರ ಹಸಿವಿನ ಬೆಲೆ 
ಗೊತ್ತಾಯಿತು. ಎಂದ ಮಾತು ತತ್ತಕ್ಷಣ ನೆನಪಿಗೆ ಬಂದು ಗೆಳೆಯ ತಪ್ಪು ಮಾಡಿಬಿಟ್ಟೆ ಅಂದು ನನ್ನ ಬಳಿ ಕಾಯಿ ಬೆಲ್ಲವಿದ್ದರೂ ನನ್ನ ಬಳಿ 
ಏನು ಇಲ್ಲವೆಂದು ಹೇಳಿ ನಿನಗೆ ತಿಳಿಯದಂತೆ ನಾನದನು ತಿಂದುಬಿಟ್ಟೆ 
ಅಂದು ಮಾಡಿದ ತಪ್ಪಿಗೆ ನಾನು ಇಲ್ಲಿಯವರೆಗೂ ಗತಿಗೆಟ್ಟೆ! 

ಅಷ್ಟರಲ್ಲಿ ವಸುಂಧರೆ ಕೆಳಗಿಳಿದು ಬಂದವಳು 'ರೀ ನಾನು ನಿಮ್ಗೆ ಯಾವತ್ತೋ ಹೇಳಿರಲಿಲ್ಲವೇ.?ಒಮ್ಮೆ ದ್ವಾರಕೆಗೆ ಹೋಗಿ ಬನ್ನಿ ಅಂತ. ಸ್ವಲ್ಪ ಆದ್ರು ಹೆಂಡತಿ ಮಾತು ಕೇಳ್ಬೇಕ್ರಿ. ಆಗಲೇ ಸಂಸಾರ ಉದ್ಧಾರ ಆಗೋದು ಎಂದಳು. ಅಯ್ಯೋ ಗೆಳೆಯ ಎಲ್ಲವೂ ನಿನ್ನ ಮಾಯೇ! ಇವಳಿಂದ ಈ ಥರ ಹೇಳಿಸುತ್ತಿದ್ದೀಯಲ್ಲ..ಅದು ಕೂಡ ಎಂಬುದು 
ನನಗೆ ಆಗ ಅರ್ಥವಾಗಿತ್ತು!

No comments:

Post a Comment