Thursday, 11 June 2020

ಶೂದ್ರ ಶಂಬೂಕ ತಪಸ್ವಿ

ಶೂದ್ರ ಶಂಬೂಕ ತಪಸ್ವಿ

ಶೂದ್ರನಿಗೆ ತಪಸ್ಸಿನ ಅಧಿಕಾರ ಇಲ್ಲವೇ?
ತಪಸ್ಸು ಮಾಡಿ ದೇವರನ್ನು ಒಲಿಸಿಕೊಳ್ಳಬಾರದೇ?
ಅಂತಹ ಅಯೋಧ್ಯಾಧೀಶನೇ ಈ ಶೂದ್ರ ತಪಸ್ವಿಯ ತಪೋಭಂಗ ಯಾಕಾಗಿ ಮಾಡಿದ? 
ಹೀಗೆಲ್ಲ ಶೂದ್ರ ಸಮುದಾಯದಲ್ಲಿ ಹುಟ್ಟಿಕೊಳ್ಳುವ ಪ್ರಶ್ನೆ ಇದು.ಇದನ್ನು ಬಲಿಷ್ಟಗೊಳಿಸಲು ಅನೇಕ ಶೂದ್ರ,ಕ್ಷತ್ರಿಯ,ವೈಶ್ಯ,ಬ್ರಾಹ್ಮಣಾದಿ ವಿಚಾರವಾದಿ ಬುದ್ಧಿವಂತರು ತಮಗೆ ತೋಚಿದ ರೀತಿಯಲ್ಲಿ ಬರೆದರು.ಆದರೆ ಮೂಲ ತತ್ವ ಅವರಿಗೆ ಅರ್ಥ ಆಗದಿರುವುದು ಅವರ ವಿದ್ವತ್ತಿಗೇ ಒಂದು ಕಪ್ಪು ಚುಕ್ಕೆ ಎಂದರೆ ತಪ್ಪಾಗದು. ಅದೇನೇ ಇರಲಿ,ಅಲ್ಲಿ ನಡೆದದ್ದಾದರೂ ಏನು? ಈ ಬಗ್ಗೆ ವಿಮರ್ಷೆ ಮಾಡೋಣ.

ರಾಜಾ ಪ್ರತ್ಯಕ್ಷ ದೇವತಾ ಎಂದರು ಋಷಿಮುನಿಗಳು.ಅಂದರೆ  ತಪ್ಪು ಮಾಡುವವರನ್ನು ದೇವರೆನ್ನಲ್ಲಾಗುವುದಿಲ್ಲ.ಅಂತಹ ಪ್ರತ್ಯಕ್ಷ ದೇವರೆಂಬ ಸಾಮ್ರಾಟ ಚಕ್ರವರ್ತಿಯು ತಪ್ಪು ಮಾಡಿದರೆ ಇತಿಹಾಸ ಆಗುವುದಿಲ್ಲವೇ ಎಂಬುದು ಮೊದಲ ಪ್ರಶ್ನೆ. ಹಾಗಾದರೆ ಈ ರಾಮಚಂದ್ರನ ನಿರ್ಧಾರ ಹೇಗಿತ್ತು?

ಸ್ತ್ರೀಯೋ ನಚಾಸನ್ ವಿಧವಾಃ ಕಥಞ್ಚನ್ನವೈ
ಪುಮಾಂಸೋ ವಿಧುರಾ ಬಭೂವುಃ|
ನಾ ನಿಷ್ಟಯೋಗಶ್ಚ ಬಭೂವ
ಕಸ್ಯಚಿನ್ನ ಚೇಷ್ಟಹಾನಿರ್ನಚ ಪೂರ್ವಮೃತ್ಯುಃ||
ಅಂದರೆ ರಾಜಧರ್ಮ ಪರಿಪಾಲನೆ ಆಗದಿದ್ದಾಗ , ಧರ್ಮ ಲೋಪಗಳಾದಾಗ ಆ ದೇಶದಲ್ಲಿ ಅಕಾಲ ಮರಣಗಳು,ವಾರ್ಧಕ್ಯಕ್ಕೆ ಮೊದಲೇ ದಂಪತಿಗಳ ವಿಚ್ಚೇಧನ ಅಂದರೆ ವಿಧವೆಗಳಾಗುವುದು, ವಿಧುರರಾಗುವುದು, ಹಿರಿಯರೆದುರು ಕಿರಿಯರ ಮರಣ,ಅಕಾಲ ಮರಣಗಳು ಇತ್ಯಾದಿಗಳು ದೇಶದಲ್ಲಿ  ಮಾಡಬಾರದ್ದನ್ನು ಮಾಡಿದಾಗ ಘಟಿಸುತ್ತದೆ ಎಂದರ್ಥ.ಇದಕ್ಕೆಲ್ಲ ಉತ್ತರದಾಯಿತ್ವ ಸ್ವಯಂ ರಾಜನೇ ಆಗುತ್ತಾನೆ.ಆಗ ರಾಜನನ್ನು ಎಚ್ಚರಿಸುವ ಸತ್ಪ್ರಜೆಗಳಿದ್ದಾಗ, ರಾಜನು ಈ ಪ್ರಜೆಗಳ ಮನವಿಗೆ ಸ್ಪಂದನೆ ನೀಡಿದಾಗ ಪ್ರಜಾಕ್ಷೇಮವಾಗುತ್ತದೆ.
ಈ ವಿಚಾರವನ್ನು ಶ್ರೀರಾಮನ ದರ್ಭಾರದಲ್ಲಿ ಬ್ರಾಹ್ಮಣನೋರ್ವ ಗಮನಕ್ಕೆ ತರುತ್ತಾನೆ.
' ಹೇ ವಿಪ್ರೋತ್ತಮ ಅಂತಹದ್ದೇನಾಗಿದೆ ನನ್ನ ದೇಶದಲ್ಲಿ?' ಎಂದು ಶ್ರೀರಾಮಚಂದ್ರ ಪ್ರಭುಗಳು ಕೇಳುತ್ತಾರೆ.
ಆಗ ಆ ಬ್ರಾಹ್ಮಣನೆದ್ದು ನಿಂತು, ಕರ ಮುಗಿದು,' ರಾಜನ್, ನನ್ನ ಕಣ್ಣೆದುರೇ ನನ್ನ ಮೊಮ್ಮಗನು ಹಾವಿನಿಂದ ಕಡಿಯಲ್ಪಟ್ಟು ಮೃತಿ ಹೊಂದಿದ.ಇದಕ್ಕೆ ಕಾರಣ ನನ್ನ ಧರ್ಮ ಸೂಕ್ಷ್ಮತೆಯ ಲೋಪವೋ,ಅಥವಾ ನಿಮ್ಮ ರಾಜ್ಯಭಾರದ ಲೋಪವೋ ಅರಿಯೆನು.ಅಂತೂ ಹಿರಿಯರೆದುರು ಕಿರಿಯರು ಸಾಯುವುದಂತೂ ಧರ್ಮ ಲೋಪವೇ ಕಾರಣ' ಎಂದನು.
ಆಗ ಆ ಕರುಣಾಳು ಭಕ್ತವತ್ಸಲ ಶ್ರೀರಾಮಚಂದ್ರನು,' ಹೇ ವಿಪ್ರೋತ್ತಮಾ,ನನಗೆ ನೀವು ಈ ವಿಚಾರವನ್ನು ಗಮನಕ್ಕೆ ತಂದುದು ಒಂದು ಧರ್ಮಪರಿಪಾಲನೆಗೆ ಸಹಕಾರಿಯಾಗಿದೆ.ನಿಮ್ಮ ಮೊಮ್ಮಗನ ಅಂತ್ಯ ಸಂಸ್ಕಾರ ಮಾಡದೆ ,ನಮ್ಮ ರಾಜ ವೈದ್ಯರ ಸಲಹೆಯಲ್ಲಿ ಎಣ್ಣೆಯ ಕೊಪ್ಪರಿಗೆಯಲ್ಲಿ( ಯಾವುದೋ ವೈದ್ಯಕೀಯ ಚಿಕಿತ್ಸೆಯ ದ್ರಾವಣ ಇರಬಹುದು) ಹಾಕಿ ಇಡಿ.ನಾನು ದಿನದೊಳಗೆ ಪತ್ತೆ ಹಚ್ಚುವ ಕಾರ್ಯ ಮಾಡುತ್ತೇನೆ.ನಿಶ್ಚಿಂತೆಯಲ್ಲಿರಿ' ಎಂದು ಭರವಸೆ ನೀಡುತ್ತಾನೆ.

ಶ್ರೀರಾಮನು ತನ್ನ ಗೂಢಾಚಾರರನ್ನು ಧರ್ಮಲೋಪದ ಕಾರಣ ತಿಳಿಯಲು ಕಳುಹಿಸುತ್ತಾನೆ. ಕೆಲ ಸಮಯದ ಬಳಿಕ ಗೂಢಚಾರರು ಒಂದು ಸುದ್ಧಿ ತರುತ್ತಾರೆ. ಶಂಭೂಕ ನೆಂಬ ಶೂದ್ರನು ತನ್ನ ಸಂಸಾರವನ್ನು ತ್ಯಜಿಸಿ ತಪಸ್ಸು ಮಾಡುತ್ತಿದ್ದಾನೆ.ಅವನ ಸಂಸಾರವು  ಅನಾಥವಾಗಿ ದುಃಖದಿಂದ ಆತ್ಮಹತ್ಯೆ ಮಾಡಿಕೊಂಡಿದೆ' ಎಂಬ ವಿಚಾರ ಸಿಗುತ್ತದೆ.
ಒಡನೆಯೇ ರಾಮ ಲಕ್ಷ್ಮಣರು ಶಂಭೂಕನ ಬಳಿಗೆ ಬಂದು ಮೊದಲು ಆತನ ತಪೋ ಭಂಗ ಮಾಡುತ್ತಾರೆ.ಕುಪಿತನಾದ ಶಂಭೂಕನು,' ಎಲೈ ರಾಜನೇ,ನೀನು ನನ್ನ ತಪೋ ಭಂಗ ಮಾಡಿದೆ.ಶೂದ್ರನೆಂಬ ಕಾರಣಕ್ಕೆ ನೀವುಗಳು ಕ್ಷತ್ರಿಯರು ನನಗೆ ಹಿಂಸೆ ನೀಡುತ್ತಿದ್ದೀರಿ. ಇದಕ್ಕೆ ನೀನು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು' ಎಂದು ಸಿಡಿದೆದ್ದ.
ಆಗ ರಾಮನು,' ' ಹೇ ತಪಸ್ವಿಯೇ, ಹಾಗೆಂದು ತಿಳಿಯಬೇಡ. ತಪಸ್ಸಿಗೆ,ದೇವರ ಸಾಕ್ಷಾತ್ಕಾರ ಮಾಡಿಕೊಳ್ಳಲು ಪ್ರತಿಯೊಬ್ಬ ಮನುಷ್ಯನಿಗೂ ಹಕ್ಕಿದೆ.ನಾನು ಹಕ್ಕನ್ನು ಕಸಿದುಕೊಳ್ಳುವವನಲ್ಲ. ನಿನ್ನ ಧರ್ಮಭ್ರಷ್ಟತನವನ್ನು ನಿಗ್ರಹಿಸಲು ಬಂದಿದ್ದೇನೆ.ನಿನ್ನ ತಪಸ್ಸಿನ ಫಲದಲ್ಲಿ ಬ್ರಾಹ್ಮಣನೊಬ್ಬನ ಮೊಮ್ಮಗನ ಮರಣವಾಯ್ತು' ಎಂದ.
 'ಪಿಳ್ಳೆ ಕಾರಣ ಕೊಡಬೇಡ ರಾಜನ್.ನೀವು ಬುಜಬಲ ಇರುವ ಕ್ಷತ್ರಿಯರು.ನನಗೆ ಮರಣ ಭಯವಿಲ್ಲ. ನೀವುಗಳು ನಾನೊಬ್ಬ ಶೂದ್ರನೆಂಬ ಕಾರಣಕ್ಕೆ ಹಿಂಸೆ ನೀಡುತ್ತಿದ್ದೀರಿ.' ಎಂದ.
ಇಲ್ಲ ಶಂಭೂಕನೇ.ನೀನು ತಪಸ್ಸು ಮಾಡುವ ಕಾರಣ ಹೇಳು ' ಎಂದ ರಾಜ.
ಮೋಕ್ಷಕ್ಕಾಗಿ ಭಗವಂತನನ್ನು ಒಲಿಸಿಕೊಳ್ಳುವ ಉದ್ದೇಶದಿಂದ ತಪೋ ನಿರತನಾದೆ' ಎಂದ ಶಂಭೂಕ.
'ಹೇ ತಪಸ್ವಿಯೇ, ತಪಸ್ಸು ಭಗವಂತನನ್ನು ಒಲಿಸುವುದು ಸ್ವಾರ್ಥವಾಗಬಾರದು.ನೀನು ತಪಸ್ಸಿಗಾಗಿ ಸಂಸಾರ ತ್ಯಜಿಸಿ ಬಂದುದರಿಂದಲೇ ನಿನ್ನ ಮಡದಿ ಮಕ್ಕಳು ಅನಾಥರಾಗಿ ಅಸುನೀಗಿದರು.ಇದಕ್ಕೆ ನಿನ್ನ ಸ್ವಾರ್ಥವೇ ಕಾರಣ.ಇದರ ಪರಿಣಾಮದಿಂದ ಭಗವಂತನ ಸಾಕ್ಷಾತ್ಕಾರ ಹೇಗೆ ಸಾಧ್ಯ?. ದಶರಥ ಮಹಾರಾಜರು ನನ್ನ ವಿಯೋಗದಿಂದ ಖಿನ್ನರಾಗಿ ಸಾವನ್ನಪ್ಪಿದರೇ ವಿನಃ ನಾನು ಅವರನ್ನು ಬಿಟ್ಟು ತಪಸ್ಸಿಗೆ ತೆರಳಿದುದರಿಂದ ಅಲ್ಲ. ಸೀತೆಯನ್ನು ಕಳೆದುಕೊಂಡ ದುಃಖದಲ್ಲಿ ನಾನು ನಿನ್ನ ತರಹವೇ ತಪಸ್ಸಿಗೆ ಕುಳಿತು ದೇವಸಾಕ್ಷಾತ್ಕಾರಕ್ಕೆ ಹೋಗುತ್ತಿದ್ದರೆ ದುಷ್ಟ ಸಂಹಾರ ಆಗುತ್ತಿತ್ತೇ.? ದೇಶದ ಪ್ರಜೆಗಳ ಪಾಲನೆ ಆಗುತ್ತಿತ್ತೇ? ಯೋಚಿಸಿನೋಡು? ಅಥವಾ ರಾಜ್ಯ ಸಿಗಲಿಲ್ಲ ಎಂದು ವನವಾಸದಲ್ಲಿ ದೇವ ಸಾಕ್ಷಾತ್ಕಾರಕ್ಕಾಗಿ ತಪಸ್ಸಿಗೆ ಹೋಗುತ್ತಿದ್ದರೆ ಇಂದು ಪ್ರಜಾ ಪಾಲನೆ ಆಗುತ್ತಿತ್ತೇ? ಭಗವಂತ ನನಗೆ ಎಷ್ಟು ಹತ್ತಿರವೋ ಅಷ್ಟೇ ಹತ್ತಿರ ನಿನಗೂ ಇರುವನು.ಆದರೆ ಅವನ ಸಾಕ್ಷಾತ್ಕಾರವು ಅವನೇ ವಿಧಿಸಿದ ಕರ್ಮದ ಧರ್ಮ ಪಾಲನೆಯನ್ನು ಭಕ್ತಿಶ್ರದ್ಧೆಯ ಮೂಲಕ ಪಾಲಿಸಿದಾಗ ಮಾತ್ರ ಲಭ್ಯವಾಗುತ್ತದೆ. ನಿನ್ನದು ಕೃಷಿ ಕಾರ್ಮಿಕ ವೃತ್ತಿ.ಅದನ್ನೇ ಮಾಡುತ್ತಾ,ಇದುವೇ ದೇವಕಾರ್ಯ ಎಂದು ಅವನ ನಾಮೋಚ್ಚರಣೆಯ ಮೂಲಕ ನೀನು ನಿರ್ವಹಿಸುವುದೇ ನಿನ್ನ ತಪಸ್ಸಾಗುತ್ತದೆ.
ಇಂದ್ರಜಿತು ನನ್ನ ನಾಶಕ್ಕಾಗಿ ನಿಕುಂಬಿಳಾದೇವಿಯ ಅನುಗ್ರಹಕ್ಕಾಗಿ ಯಾಗ ಮಾಡಿದ.ಒಂದು ವೇಳೆ ಲೋಕೋದ್ಧಾರಕ್ಕಾಗಿ ಈ ಯಾಗ ಮಾಡುತ್ತಿದ್ದರೆ ನಾನು ಆ ಯಾಗಕ್ಕೆ ಭಂಗ ತರುತ್ತಿದ್ದರೆ ಅದು ಪಾಪವಾಗುತ್ತಿತ್ತು. ಆದರೆ ಅದು ಸ್ವಾರ್ಥ ಯಾಗ ಆದುದರಿಂದ ಅದನ್ನು ಭಂಗ ಮಾಡಿದೆ.ಗೆಲುವು ಧರ್ಮದ್ದಾಯಿತು. ತನ್ನ ಸ್ವಾರ್ಥಕ್ಕಾಗಿ ಸೀತಾ ಸಹಿತ ಅಬಲೆಯರನ್ನು ಅಪಹರಣ ಮಾಡಿದ ರಾವಣನು ನೈತಿಕ ಬಲ ಕಳೆದುಕೊಂಡ‌.ರಣದಲ್ಲಿ ಮಡಿದ.ನಾನು ನನ್ನ ಪತ್ನಿಗಾಗಿ ರಾವಣ ವಧೆ ಮಾಡುತ್ತಿದ್ದರೆ ಅದು ಸ್ವಾರ್ಥವಾಗುತ್ತಿತ್ತು‌ ನಾನು ಗೌರವಾನ್ವಿತನೂ ಆಗುತ್ತಿರಲಿಲ್ಲ. ಅಬಲೆಯರ ಅಪಹರಣವನ್ನು ಪ್ರಶ್ನಿಸುವವರು ರಘು ವಂಶದವರು ಎಂಬುದನ್ನು ತೋರಿಸಿಕೊಟ್ಟದ್ದರಿಂದ, ಪ್ರಜೆಗಳು ನನ್ನನ್ನು ಅಯೋಧ್ಯಾಧಿಪನಾಗಿ ಸ್ವೀಕರಿಸಿದರು.ಆದರೂ ಇಂದು ಆ ಬ್ರಾಹ್ಮಣನು ನೈತಿಕ ಧೈರ್ಯದಿಂದಲೇ ಮೊಮ್ಮಗನ ಮರಣದಿಂದ ರಾಜಧರ್ಮದ ಲೋಪ ಎತ್ತಿ ಹಿಡಿದ.ಇಂತಹ ಪ್ರಜ್ಞಾವಂತ ಪ್ರಜಾ ರಾಜ್ಯವನ್ನು ರಾಜ್ಯಭಾರ ಮಾಡುವ ನಾನು ಪ್ರಜಾಹಿತಕ್ಕಾಗಿ ಏನು ಮಾಡಲೂ ಸಿದ್ಧನು.ಇದು ಇಲ್ಲಿಗೇ ನಿಲ್ಲುವುದೂ ಇಲ್ಲ.ಮುಂದೆ ನನ್ನಲ್ಲಿ ಲೋಪ ಬಂದರೂ ನಾನೇ ಸ್ವಯಂ ಯಾವ ತ್ಯಾಗಕ್ಕೂ ಸಿದ್ದನೂ ಆಗಿದ್ದೇನೆ. ಹಾಗಾಗಿ ನಿನ್ನ ಸಂಸಾರದ ಸಾವಿನ ಕಾರಣಕ್ಕಾಗಿ,ಆ ಬಾಲಕನ ಸಾವಿನ ಕಾರಣಕ್ಕಾಗಿ,ನಿನ್ನ ಧರ್ಮ ಲೋಪದ ಕಾರಣಕ್ಕಾಗಿ ನಿನಗೆ ಮರಣದಂಡನೆಯೇ ಶಿಕ್ಷೆ' ಎಂದು ತನ್ನ ಕಠೋರ ನಿರ್ಧಾರವನ್ನು ಹೇಳಿದ. ನಂತರ ಲಕ್ಷ್ನಣನಿಗೆ,' ಲಕ್ಷ್ನಣಾ,ಈ ಪಾಪಿಯ ಶಿರಚ್ಛೇಧನ ಮಾಡು' ಎಂದು ಆಜ್ಞೆ ಮಾಡಿದ.
ತಪಸ್ಸಿಗೆ ಕುಳಿತ ಪಾಪಿ ಶೂದ್ರ ಶಂಭೂಕನ ವಧೆಯೂ ಆಯ್ತು. ಶಂಭೂಕನ ದಿವ್ಯಾತ್ಮವು ಶ್ರೀರಾಮಚಂದಿರನ ಚರಣಗಳಿಗೆ ಅರ್ಪಿತವೂ ಆಯ್ತು,ಎಣ್ಣೆ ಕೊಪ್ಪರಿಗೆಯಲ್ಲಿಟ್ಟ ಬಾಲಕನೂ ಬದುಕಿದ. ಇದುವೇ ರಾಮರಾಜ್ಯದ ನಿಯಮ.

ಮಹಾ ಮಹಿಮರಾದ ಶಂಕರ ಭಗವತ್ಪಾದರು ತಾಯಿಯನ್ನು ಮನವೊಲಿಸಿ ಯತಿಗಳಾದರು.ಆಚಾರ್ಯ ಮಧ್ವರೂ ಮಾತಾಪಿತೃಗಳ ಅನುಗ್ರಹ ಪಡೆದೇ ಯತಿಗಳಾದರು.ಹಾಗಾಗಿ ಇಂದಿಗೂ ಅವರು ಸರ್ವಶ್ರೇಷ್ಟ ಯತಿಗಳು.
.
ಅಂತಹ ಶ್ರೀ ರಾಮ ಚಂದಿರನ ಭವ್ಯ ಮಂದಿರದ ನಿರ್ನಾಮವೂ ಧರ್ಮ ಲೋಪದಿಂದಲೇ ಆಯ್ತು.ಮತ್ತೆ ಧರ್ಮವು ಸರಿದಾರಿಯತ್ತ ಬರುತ್ತಿದ್ದಂತೆಯೇ ಮತ್ತೆ ಶ್ರೀರಾಮ ಮಂದಿರದ ಶಿಲಾನ್ಯಾಸವೂ ಆಯ್ತು. ಎಲ್ಲವೂ ದೈವ ಪ್ರೇರಣೆ.ಕಾಲಾಯ ತಸ್ನೈನಮಃ. ಧರ್ಮಪರಿಪಾಲನೆ ಮಾಡೋಣ.ಈ ದೇಶವು ಸುಭೀಕ್ಷವಾಗಲಿ.
ಕಾಲೇ ವರ್ಷತು ಪರ್ಜನ್ಯಾ
ಪೃಥಿವೀ ಸಸ್ಯಶಾಲಿನೀ
ದೇಶೋಯಂ ಕ್ಷೋಭರಹಿತಾಂ
ಸಜ್ಜನಾ ಸಂತು ನಿರ್ಭಯಾ
ಅಪುತ್ರಣಾ ಸಂತು ಪುತ್ರಣಃ
ಜೈ ಭಾರತ್ ಮಾತಾ|

No comments:

Post a Comment