#ದೇವರು___ನೈವೇದ್ಯವನ್ನು___ತಿನ್ನುತ್ತಾನೆಯೇ___?
ಸಂಸ್ಕೃತ ಶಬ್ದವಾದ ನೈವೇದ್ಯವು ಪೂಜಾಚರಣೆಯ ಭಾಗವಾಗಿ ತಿನ್ನುವ ಮೊದಲು ಒಬ್ಬ ಹಿಂದೂ ದೇವತೆಗೆ, ಅರ್ಪಿಸಲಾದ ಆಹಾರ. ತಯಾರಿಕೆಯ ಅವಧಿಯಲ್ಲಿ ರುಚಿ ನೋಡುವುದು ಅಥವಾ ದೇವರಿಗೆ ಅರ್ಪಿಸುವ ಮೊದಲು ಆಹಾರವನ್ನು ತಿನ್ನುವುದು ನಿಷೇಧಿಸಲ್ಪಟ್ಟಿರುತ್ತದೆ. ಆಹಾರವನ್ನು ದೇವರ ಮುಂದೆ ಇಟ್ಟು ಪ್ರಾರ್ಥಿಸಲಾಗುತ್ತದೆ.ದೇವರು ನಿಜವಾಗಿಯೂ ನಾವಿಟ್ಟ ನೈವೇದ್ಯವನ್ನು ಸ್ವೀಕರಿಸುತ್ತಾನೆಯೇ?
ಈ ಗೊಂದಲದ ಪ್ರಶ್ನೆಗೆ, ಉತ್ತರ ನೀಡುವ ಪ್ರಸಂಗವೊಂದಿದೆ.
ಒಬ್ಬ ಗುರುವಿನ ಬಳಿ ಅನೇಕ ಶಿಷ್ಯರು ಪಾಠ ಕಲಿಯುತ್ತಿದ್ದರು. ಒಂದು ದಿನ ಶಿಷ್ಯನೊಬ್ಬ, ‘ಗುರುಗಳೇ, ಪೂಜೆಯ ವೇಳೆ ನಾವು ದೇವರ ಮುಂದೆ ತಿಂಡಿ-ತಿನಿಸುಗಳನ್ನಿಟ್ಟು ನೈವೇದ್ಯ ಮಾಡುತ್ತೇವಲ್ಲ, ಅವನ್ನು ದೇವರು ನಿಜವಾಗಿಯೂ ತಿನ್ನುತ್ತಾನೆಯೇ, ರುಚಿ ನೋಡುತ್ತಾನೆಯೇ?’ ಎಂದು ಪ್ರಶ್ನಿಸಿದ. ಅದಕ್ಕೆ ಗುರುಗಳು ನಗುತ್ತಾ, ‘ನಿಸ್ಸಂದೇಹವಾಗಿ.
ಅದಕ್ಕೇ ನಾವು ನೈವೇದ್ಯ ಎನ್ನುವುದು’ ಎಂದರು. ಶಿಷ್ಯನ ಗೊಂದಲ ಪರಿಹಾರವಾಗದೆ ‘ಅದು ಹೇಗೆ ಗುರುಗಳೇ? ನಾವಿಟ್ಟ ತಿನಿಸೆಲ್ಲ ಹಾಗೇ ಇರುತ್ತದಲ್ಲಾ..! ಎಂದ.
ದೇವರು ಒಂದೊಮ್ಮೆ ತಿಂದಿದ್ದರೆ, ಸ್ವಲ್ಪವಾದರೂ ಕಡಿಮೆ ಆಗಿರಬೇಕಲ್ಲಾ?’ ಎಂದು ಮರುಪ್ರಶ್ನಿಸಿದ. ಅದಕ್ಕೆ ಗುರುಗಳು, ‘‘ದೇವರು ನಮ್ಮಂತೆ ‘ಸ್ಥೂಲಶರೀರಿ’ ಅಲ್ಲ, ‘ಸೂಕ್ಷ್ಮಶರೀರಿ’. ಅದೂ ಅಲ್ಲದೆ, ನೈವೇದ್ಯವನ್ನು ದೇವರು ತನಗೆಷ್ಟು ಬೇಕೋ ಅಷ್ಟು ತೆಗೆದುಕೊಂಡರೂ ಮತ್ತೆ ಅಲ್ಲಿ ಅಷ್ಟೇ ಉಳಿದಿರುತ್ತದೆ’’ ಎಂದರು. ಅದಕ್ಕೆ ಶಿಷ್ಯ, ‘ನನಗೆ ನಂಬಿಕೆ ಬರುತ್ತಿಲ್ಲ ಗುರುಗಳೇ… ಅದ್ಹೇಗೆ ಸಾಧ್ಯ?’ ಎಂದ. ಅದಕ್ಕೆ ಗುರುಗಳು, ‘ನಿನ್ನ ಪ್ರಶ್ನೆಗೆ ನಾಳೆ ಉತ್ತರಿಸುತ್ತೇನೆ. ನಾಳೆ ತರಗತಿಗೆ ಬರುವಾಗ ಪಠ್ಯಪುಸ್ತಕದಲ್ಲಿರುವ ಮೂರನೇ ಅಧ್ಯಾಯವನ್ನು ಕಂಠಪಾಠ ಮಾಡಿಕೊಂಡು ಬಾ’ ಎಂದರು.
ದಿನ ಕಳೆಯಿತು ತರಗತಿ ಶುರುವಾಯಿತು. ಶಿಷ್ಯ ಪುಸ್ತಕವನ್ನು ಒಂದುಚೂರು ನೋಡದೆ, ಸ್ವಲ್ಪವೂ ತಪ್ಪಿಲ್ಲದಂತೆ ಮೂರನೇ ಅಧ್ಯಾಯವನ್ನು ಒಪ್ಪಿಸಿದ. ‘ಭೇಷ್’ ಎಂದು ಆತನ ಬೆನ್ನು ತಟ್ಟಿದ ಗುರುಗಳು, ‘ಎಲ್ಲಿ, ಈಗ ನಿನ್ನ ಪುಸ್ತಕ ತೆರೆದು ಆ ಮೂರನೇ ಅಧ್ಯಾಯ ತೋರಿಸು?’ ಎಂದರು.
ಶಿಷ್ಯ ತೋರಿಸಿದ. ಗುರುಗಳು ಅಚ್ಚರಿಯಿಂದ, ‘ಅರೆ, ಇದೇನಿದು? ಮೂರನೇ ಅಧ್ಯಾಯ ಇಲ್ಲೇ ಇದೆಯಲ್ಲಾ? ಮತ್ತೆ ನೀನು ಯಾವುದರಿಂದ ಕಂಠಪಾಠ ಮಾಡಿಕೊಂಡೆ’ ಎಂದು ಕೇಳಿದರು. ‘ಈ ಪುಸ್ತಕದಿಂದಲೇ ಗುರುಗಳೇ’ ಎಂದ ಶಿಷ್ಯ. ಅದಕ್ಕೆ ಗುರುಗಳು, ‘ಅಲ್ಲಾ, ಪುಸ್ತಕದಿಂದ ಮೂರನೇ ಅಧ್ಯಾಯವನ್ನು ತೆಗೆದು ನಿನ್ನ ಮಿದುಳಿಗೆ ಹಾಕಿಕೊಂಡ ಮೇಲೂ, ಅದು ಇಲ್ಲೇ ಇದೆಯಲ್ಲಾ?! ಮತ್ತೆ ನೀನು ತೆಗೆದದ್ದು ಯಾವುದರಿಂದ?’ ಎಂದು ಪ್ರಶ್ನಿಸಿದರು. ಶಿಷ್ಯ ಗಲಿಬಿಲಿಗೊಂಡ.
ಆಗ ಗುರುಗಳು ಶಿಷ್ಯನ ತಲೆ ಸವರುತ್ತಾ , ‘ನೈವೇದ್ಯದ ವಿಷಯವೂ ಹೀಗೆಯೇ ಮಗೂ ಒಬ್ಬ ಸಾಮಾನ್ಯ ಮಾನವನಾಗಿ ನೀನು ಪುಸ್ತಕದಲ್ಲಿರುವುದನ್ನು ಸ್ವೀಕರಿಸಿ ಕಂಠಪಾಠ ಮಾಡಿದ ಮೇಲೂ, ಅದಿನ್ನೂ ಪುಸ್ತಕದಲ್ಲೇ ಉಳಿದಿರುವಂತೆಯೇ, ಭಗವಂತ ತನಗೆ ಬೇಕಾದಷ್ಟು ಅಥವಾ ಅಷ್ಟೂ ನೈವೇದ್ಯವನ್ನು ತೆಗೆದುಕೊಂಡರೂ, ಅದು ಅಷ್ಟೇ ಪ್ರಮಾಣದಲ್ಲಿ ಹಾಗೇ ಉಳಿದಿರುತ್ತದೆ. ಇದು ನಮ್ಮ ನಂಬಿಕೆ’ ಎಂದರು. ಗುರುಗಳ ಉತ್ತರದಿಂದ ಶಿಷ್ಯನಿಗೆ ಸಂತಸವಾಯಿತು.
No comments:
Post a Comment