Sunday, 7 June 2020

ವೇದವ್ಯಾಸರ_ಮಹಾಭಾರತ_ಪರ್ವ

#ವೇದವ್ಯಾಸರ_ಮಹಾಭಾರತ_ಪರ್ವ
ಮಹಾಭಾರತವನ್ನು ರಚಿಸಿದವ ಮಹಾಋಷಿ ಕೃಷ್ಣದೇವಪಾಯನ ವ್ಯಾಸ. ಈತ ಬ್ರಹ್ಮ ಋಷಿ ವಸಿಷ್ಠರ ಮರಿಮಗ  ಸತ್ಯವತಿ-ಪರಾಶರ ಪುತ್ರ. ಸುಖಮಹಋಷಿಯ ತಂದೆ ಈತ ಬ್ರಹ್ಮ ಸೂತ್ರ ರಚಿಸಿದವ. ಪುರಾಣಕಾರ ಮತ್ತು ವೇದಗಳನ್ನು ವಿಭಾಗಮಾಡಿದವ. ಶ್ಯಾಮಲ ದೇಹಕಾಂತಿಯಿಂದ ಕೂಡಿದ್ದರಿಂದ ಕೃಷ್ಣ ಎಂದು ದ್ವಿಪದದಲ್ಲಿ ಹುಟ್ಟಿದ್ದರಿಂದ ದ್ವೈಪಾಯನನೆಂದೂ ಬದರಿಯಲ್ಲಿ ನೆಲೆಸಿದ್ದರಿಂದ ಬಾದಾರಾಯಣನೆಂದೂ ವೇದಗಳನ್ನು ವಿಭಾಗಮಾಡಿದ್ದರಿಂದ ವೇದವ್ಯಾಸನೆಂದು ಈತನಿಗೆ ಅಭಿದಾನಗಳಿವೆ.  ವಿಚಿತ್ರ ವೀರ್ಯನ ಕ್ಷೇತ್ರದಲ್ಲಿ ಧೃತರಾಷ್ಟ್ರ ಪಾಂಡು ಮತ್ತು ವಿದುರರನ್ನು ಪಡೆದು ಆ ವಂಶದವರಿಗೆ ಅನೇಕ ಸಮಯಗಳಲ್ಲಿ ಸಲಹೆ ಸಹಾಯಗಳನ್ನು ನೀಡಿದಾತ ಮಹಾಭಾರತವನ್ನು ಗಣಪತಿಯಿಂದ ಬರೆಯಿಸಿ ಅದನ್ನು ಸುಖ ವೈಷ್ಣಪಾಯಣ ಮುಂತಾದವರಿಗೆ ಉಪದೇಶಿಸಿದವ...

ಮಹಾಭಾರತದ ಹದಿನೆಂಟು ಪರ್ವಗಳ ವಿಷಯವನ್ನು ಹೀಗೆ ವಿಂಗಡಿಸಲಾಗಿದೆ

1. ಆದಿಪರ್ವ : ಪಾಂಡವ ಕೌರವರ ಮತ್ತು ಅವರ ಪೂರ್ವಜರ ಜನನ, ಬಾಲ್ಯ, ವಿದ್ಯಾಭ್ಯಾಸ, ದುರ್ಯೋಧನನ ದ್ವೇಷ, ಪಾಂಡವರು ಅರಗಿನ ಮನೆಯಿಂದ ಬಿಡುಗಡೆ, ಹೊಂದಿದುದು, ದ್ರೌಪದೀಪರಿಣರು, ರಾಜ್ಯಲಾಭ, ಅರ್ಜುನನ ತೀರ್ಥಯಾತ್ರೆ, ಸುಭದ್ರಾವಿವಾಹ, ಖಾಂಡವ ದಹನ.

2. ಸಭಾಪರ್ವ : ಮಯನಿರ್ಮಿತ ಸಭೆಯಲ್ಲಿ ಧರ್ಮರಾಜನಿಂದ ರಾಜಸೂಯ ಯಜ್ಞ, ಪಾಂಡವರ ದಿಗ್ವಿಜಯ, ಜರಾಸಂಧವಧೆ, ಯಜ್ಞದಲ್ಲಿ ದಂಗೆಯೆದ್ದ ಶಿಶುಪಾಲನ ವಧೆ. ಜೂಜಿಗಾಗಿ ಯುಧಿಷ್ಠರನಿಗೆ ಕೌರವರಿಂದ ಆಹ್ವಾನ, ಧರ್ಮರಾಜನ ಪರಾಜಯ, ಸಭೆಯಲ್ಲಿ ದ್ರೌಪದಿಗೆ ಅಪಮಾನ, ಕೃಷ್ಣನಿಂದ ಅವಳ ಮಾನಸಂರಕ್ಷಣೆ, ರಾಜ್ಯವನ್ನು ಹಿಂದಕ್ಕೆ ಪಡೆದು ಮತ್ತೆ ಜೂಜಿನ ಆಹ್ವಾನವನ್ನು ಸ್ವೀಕರಿಸಿ ಧರ್ಮರಾಜ ಎಲ್ಲವನ್ನೂ ಸೋತದ್ದು, ಪಾಂಡವ ವನವಾಸ.

3. ವನಪರ್ವ : ಕಿರಾತವೇಷಧಾರಿ ಶಿವನನ್ನು ಮೆಚ್ಚಿಸಿ ಅರ್ಜುನ ಪಾಶುಪತಾಸ್ತ್ರ ಪಡೆದದ್ದು, ಸ್ವರ್ಗಕ್ಕೆ ಹೋಗಿ ಇಂದ್ರನಿಂದ ಸತ್ಕಾರ ಪಡೆದದ್ದು, ಯುಧಿಷ್ಠರನ ತೀರ್ಥಯಾತ್ರೆ, ಅರ್ಜುನ ಹಿಂತಿರುಗಿದ್ದು, ಅಜಗರರೂಪಿ ನಹುಷನಿಂದ ಭೀಮನನ್ನು ಧರ್ಮರಾಜ ಬಿಡಿಸಿದ್ದು, ಗಂಧರ್ವರ ದೆಸೆಯಿಂದ ದುರ್ಯೋಧನನ್ನು ಬಿಡಿಸಿದ್ದು, ಯಕ್ಷಪ್ರಶ್ನೆಗಳಿಗೆ ಧರ್ಮರಾಜ ಸಮಾಧಾನಕರ ಉತ್ತರಕೊಟ್ಟು ತಮ್ಮಂದಿರನ್ನು ಬದುಕಿಸಿದ್ದು.

4. ವಿರಾಟಪರ್ವ : ವಿರಾಟರಾಜನ ಆಶ್ರಯದಲ್ಲಿ ದ್ರೌಪದೀಸಹಿತ ಪಾಂಡವರ ಅಜ್ಞಾತವಾಸ, ದ್ರೌಪದಿಯನ್ನು ಕೆಣಕಿದ ಕೀಚನಕ ಸಂಹಾರ, ಕೌರವರಿಂದ ವಿರಾಟನ ಗೋಗ್ರಹಣ, ಪಾಂಡವರಿಂದ ಕೌರವಸೇನೆಯ ಪರಾಭವ, ವಿರಾಟನಿಗೆ ಪಾಂಡವರ ನಿಜರೂಪದ ಪರಿಚತ, ಕೃತಜ್ಞತೆ, ಉತ್ತರಾಭಿಮನ್ಯು ವಿವಾಹ.

5. ಉದ್ಯೋಗಪರ್ವ : ಉಭಯ ಪಕ್ಷಗಳಿಂದ ಸೇನಾಸಂಗ್ರಹ, ಪಾಂಡವದೂತನಾಗಿ ಹಸ್ತಿನಾವತಿಯಲ್ಲಿ ಕೃಷ್ಣ, ಸಭೆಯಲ್ಲಿ ಸಂಧಿಪ್ರಸ್ತಾಪ, ದುರ್ಯೋಧನನ ಹಠ ಮತ್ತು ಕೃಷ್ಣನನ್ನು ಸೆರೆಹಿಡಿಯಲು ವಿಫಲ ಪ್ರಯತ್ನ, ಪಾಂಡವ ಪಕ್ಷಕ್ಕೆ ಸೇರಲು ಕೃಷ್ಣ-ಕುಂತಿ ಇವರಿಂದ ಕರ್ಣನಿಗೆ ಸಲಹೆ, ಕರ್ಣನ ಅಚಲ ಸ್ವಾಮಿನಿಷ್ಠೆ.

6. ಭೀಷ್ಮಪರ್ವ : ಸೇನಾ ಸನ್ನಾಹ, ಧೃಷ್ಟದ್ಯುಮ್ನ ಮತ್ತು ಭೀಷ್ಮರ ಸೇನಾಪತ್ಯ, ಸ್ನೇಹವೈರಾಗ್ಯ ತೋರಿದ ಅರ್ಜುನನಿಗೆ ಕೃಷ್ಣನ ಗೀತೋಪದೇಶ, ಯುದ್ಧದಲ್ಲಿ ಭೀಷ್ಮನ ಭೀಷ್ಮಪರಾಕ್ರಮ, ಭೀಷ್ಮ ತನ್ನ ವಧೋಪಾಯವನ್ನು ತಾನೇ ತಿಳಿಸಿದ್ದು, ಶಿಖಂಡಿಯನ್ನು ಮುಂದಿಟ್ಟುಕೊಂಡು ಭೀಷ್ಮನ ಮೇಲೆ ಅರ್ಜುನ ಬಾಣದ ಮಳೆ ಕರೆದದ್ದು, ಭೀಷ್ಮರ ಶರಶಯ್ಯೆ.

7. ದ್ರೋಣಪರ್ವ : ಕೌರವ ಸೇನಾಪತಿಯಾಗಿ ದ್ರೋಣರ ರುದ್ರಪರಾಕ್ರಮ, ಅರ್ಜುನನ ಅನುಪಸ್ಥತಿಯಲ್ಲಿ ಅಭಿಮನ್ಯುವಿನ ವಧೆ, ಅರ್ಜುನನಿಂದ ಸೈಂಧವ ಸಂಹಾರ ಪ್ರತಿಜ್ಞೆ, ಕೃಷ್ಣನ ಯೋಗಬಲದಿಂದ ಪ್ರತಿಜ್ಞೆ ನೆರವೇರಿದ್ದು ಇಂದ್ರದತ್ತ ಶಕ್ತಿಯಿಂದ ಘಟೋತ್ಕಚನನ್ನು ಕರ್ಣ ಸಂಹರಿಸಿದ್ದು, ದ್ರೋಣರ ಘೋರಸಂಕಲ್ಪ ಮತ್ತು ಶಸ್ತ್ರಸನ್ಯಾಸ, ಯೋಗಸಮಾಧಿಯಲ್ಲಿದ್ದ ಅವರನ್ನು ಧೃಷ್ಟದ್ಯುಮ್ನ ಸಂಹರಿಸಿದ್ದು, ಅಶ್ವತ್ಥಾಮನ ನಾರಾಯಣಾಸ್ತ್ರದಿಂದ ಪಾಂಡವ ಸೇನೆಯನ್ನು ಕೃಷ್ಣ ಸಂರಕ್ಷಿಸಿದ್ದು.

8. ಕರ್ಣಪರ್ವ: ಭೀಮನಿಂದ ದುಶ್ಯಾಸನನ ವಧೆ. ಸೇನಾಪತಿ ಕರ್ಣನಿಗೆ ಶಲ್ಯನ ಸಾರಥ್ಯ, ಅರ್ಜುನನ ಕರ್ಣರ ಮುಖಾಮುಖಿ, ಆರ್ಜುನನನ್ನು ಸರ್ಪಾಸ್ತ್ರದಿಂದ ಕೃಷ್ಣ ಸಂರಕ್ಷಿಸಿದ್ದು, ಶಾಪಹತನಾಗಿದ್ದ ಕರ್ಣನನ್ನು ಅರ್ಜುನ ಸಂಹರಿಸಿದ್ದು

9. ಶಲ್ಯಪರ್ವ : ಧರ್ಮರಾಜನಿಂದ ಶಲ್ಯವಧೆ, ಮಡುವಿನಲ್ಲಿ ಅಡಗಿಕೊಂಡಿದ್ದ ದುರ್ಯೋಧನನನ್ನು ಹೊರಕ್ಕೆ ಬರಮಾಡಿದ್ದು, ಬಲರಾಮನ ಸಾನಿಧ್ಯದಲ್ಲಿ ಭೀಮದುರ್ಯೋಧನರ ಗದಾಯುದ್ಧ, ಭೀಮಸೇನ ದುರ್ಯೋಧನನ ತೊಡೆಗೆ ಬಡಿದು ಬೀಳಿಸಿದ್ದು. ಕುಪಿತನಾದ ಬಲರಾಮನಿಗೆ ಕೃಷ್ಣನ ಸಮಾಧಾನ. ದುರ್ಯೋಧನನ ದುರವಸ್ಥೆ ಕಂಡು ಅಶ್ವತ್ಥಾಮನ ವಿಷಾದ.

10. ಸೌಪ್ತಿಕ ಪರ್ವ : ಅಶ್ವತ್ಥಾಮನ ಭೀಕರ ಪ್ರತಿಜ್ಞೆ, ಅಶ್ಥತ್ಥಾಮ ನಿಶಿಯಲ್ಲಿ ನಿದ್ರಿಸುತ್ತಿದ್ದ ಧೃಷ್ಟದ್ಯುಮ್ನ ಮತ್ತು ಪಾಂಡವಪುತ್ರರನ್ನು ಕೊಲೆಮಾಡಿದ್ದು, ಅದನ್ನು ಕೇಳಿ ಸಂತೋಷದಿಂದ ದುರ್ಯೋಧನನ ಪ್ರಾಣತ್ಯಾಗ, ದ್ರೌಪದಿಯ ಮತ್ತು ಪಾಂಡವರ ಶೋಕಕ್ರೋದಗಳು, ಅಶ್ವತ್ಥಾಮನ ತೇಜೋಭಂಗ.

11. ಸ್ತ್ರೀಪರ್ವ : ಸ್ತ್ರೀಯರ ವಿಲಾಪ. ಹತರಾದ ಬಂಧುಗಳಿಗೆ ತರ್ಪಣ ಶ್ರಾದ್ಧಾದಿಗಳು.

12. ಶಾಂತಿಪರ್ವ : ಶೋಕದಲ್ಲಿ ಮುಳುಗಿದ ಧರ್ಮರಾಜನಿಗೆ ಕರ್ತವ್ಯದ ಉಪದೇಶ, ಧರ್ಮರಾಜನ ಪಟ್ಟಾಭಿಷೇಕ, ಭೀಷ್ಮನಿಂದ ಧರ್ಮೊಪದೇಶ ಪಡೆಯುವಂತೆ ಧರ್ಮರಾಜನಿಗೆ ಕೃಷ್ಣನ ಆದೇಶ, ಭೀಷ್ಮನಿಂದ ರಾಜಧರ್ಮಾದಿ ಸಕಲಧರ್ಮಗಳ ಉಪದೇಶ.

13. ಅನುಶಾಸನಿಕಪರ್ವ: ದಾನಧರ್ಮದ ವಿಸ್ತಾರ ಉಪದೇಶ, ಕೃಷ್ಣನ ಅನುಮತಿ ಪಡೆದು ಭೀಷ್ಮ ಸ್ವರ್ಗಸ್ಥನಾಗುವುದು, ಭೀಷ್ಮನ ಅಂತಿಮ ಸಂಸ್ಕಾರ.

14. ಅಶ್ವಮೇಧಿಕಪರ್ವ : ಯಜ್ಞ ಮಾಡಲು ಧರ್ಮರಾಜನಿಗೆ ಪ್ರೇರಣೆ. ಅರ್ಜುನನಿಗೆ ಅನುಗೀತೆಯ ಉಪದೇಶ, ಉತ್ತರೆಯ ಮೃತಶಿಶುವನ್ನು ಕೃಷ್ಣ ರಕ್ಷಿಸಿದ್ದು, ಅರ್ಜುನ ದಿಗ್ವಿಜಯ. ಧರ್ಮರಾಜನಿಂದ ವೈಭವದ ಯಜ್ಞ.

15. ಮೌಸಲಪರ್ವ : ಪಾಂಡವರು ಕಂಡ ಅಪಶಕುನಗಳು, ಯಾದವರ ಯಾದವೀ ಕಲಹ ಮತ್ತು ಶಾಪದ ಒನಕೆಯಿಂದ ಅವರ ಸರ್ವನಾಶ. ಬಲರಾಮ ಕೃಷ್ಣರ ಪರಂಧಾಮ, ಅರ್ಜುನನಿಂದ ಅವರ ಸಂಸ್ಕಾರ. ಮಧ್ಯಮಾರ್ಗದಲ್ಲಿ ದಸ್ಯುಗಳಿಂದ ಅವನ ಪರಾಭವ.

17. ಮಹಾಪ್ರಸ್ಥಾನಪರ್ವ; ಪರೀಕ್ಷಿತನಿಗೆ ಪಟ್ಟಕಟ್ಟಿ ದ್ರೌಪದೀಸಹಿತ ಪಾಂಡವರು ಮಹಾಪ್ರಸ್ಥಾನ ಮಾಡಿದ್ದು, ಧರ್ಮರಾಜನನ್ನು ಬಿಟ್ಟು ಉಳಿದವರು ಮಧ್ಯದಲ್ಲೇ ಸ್ವರ್ಗಸ್ಥರಾದದು, ಧರ್ಮರಾಜನ ಸಶರೀರ ಸ್ವರ್ಗ.

18. ಸ್ವರ್ಗಾರೋಹಣಪರ್ವ: ಧರ್ಮರಾಜನಿಗೆ ನರಕದರ್ಶನ, ಅಲ್ಲಿ ತಮ್ಮಂದಿರ ಕರುಣದ ಕೂಗನ್ನು ಕೇಳಿ ಅಲ್ಲಿಯೇ ಇರಲು ನಿಶ್ಚಯ. ಇಂದ್ರನಿಂದ ಸಮಾಧಾನ, ಧರ್ಮರಾಜ ಮಾನುಷ ದೇಹಬಿಟ್ಟು ದಿವ್ಯದೇಹ ಪಡೆದುದು. ಸ್ವರ್ಗದಲ್ಲಿ ಭೀಮಾದಿಗಳನ್ನು ದೇವರೂಪದಲ್ಲಿ ನೋಡಿದ್ದು, ಎಲ್ಲರೂ ತಮ್ಮ ತಮ್ಮ ಮೂಲ ಸ್ವರೂಪದಲ್ಲಿ ಸೇರಿಕೊಂಡುದು.

No comments:

Post a Comment