ಬಾಲಾಪರಾಧಕ್ಕೆ ಕ್ಷಮೆ ಸಿಕ್ಕಿದ್ದು ಅಣಿಮಾಂಡವ್ಯನೆಂಬ ಋಷಿಯಿಂದ.
ಅಣಿಮಾಂಡವ್ಯ ಎಂಬ ಋಷಿಯು ಬಾಲ್ಯದಲ್ಲಿ ಪರಿಸರಕ್ಕೆ ಅಗತ್ಯ ಇರುವ ಅನೇಕ ಕೀಟ ಜಂತುಗಳನ್ನು ಕಲ್ಲಿನಿಂದ ಜಜ್ಜಿ ಕೊಲ್ಲುತ್ತಾ ಖುಷಿ ಪಡುತ್ತಿದ್ದ. ಮುಂದೆ ಸಂಸ್ಕಾರ ಪಡೆಯುತ್ತಾ ದೊಡ್ಡ ಮಹಾಮಹಿಮ ವಿದ್ವಾಂಸನಾಗಿ ಅನೇಕ ಲೋಕೋಪಯೋಗಿ ಪ್ರಜಾಹಿತದ ಕಾರ್ಯ ಮಾಡುತ್ತಾ ಇರುತ್ತಾನೆ. ವಯೋ ಸಹಜವೆಂಬಂತೆ ಮುಪ್ಪು ಸಮೀಪಿಸುತ್ತಲೇ ಗತಿಸಿಯೂ ಬಿಟ್ಟ. ನಂತರದ ಪ್ರಕ್ರಿಯೆ ಊರ್ಧ್ವ ಲೋಕದವರದ್ದು. ಯಮ ಕಿಂಕರರು ಯಮಲೋಕಕ್ಕೆ ಎಳೆದರು.ನಂತರ ಚಿತ್ರಗುಪ್ತರು ಇವನ ಭೂಲೋಕದ ಮನುಷ್ಯ ಜೀವನದ ಚರಿತ್ರೆಯನ್ನು ಓದುತ್ತಾ,ಬಾಲ್ಯದ ಕೃತ್ಯಗಳನ್ನೂ ತಿಳಿಸಿದರು. ಯಮಾಲಯದ ನಿಯಮದಂತೆ ಅಣಿಮಾಂಡವ್ಯನನ್ನು ಶೂಲಕ್ಕೇರಿಸಲು ಯಮನ ಆದೇಶವಾಗುತ್ತದೆ.
ಆಗ ಕುಪಿತನಾದ ಋಷಿಯು ಎಲೈ ಯಮಧರ್ಮರಾಜನೇ, ನೀನು ಕೇವಲ ಧರ್ಮ ಪಾಲಕ.ಧರ್ಮ ಶಾಸನ ಮಾಡಿದವನೇನಲ್ಲ.ಹಾಗಾಗಿ ಧರ್ಮಶಾಸನ ಮಾಡಿದಂತಹ ಮಹಾವಿಷ್ಣುವನ್ನೇ ನಾನು ವಿಚಾರಿಸಬೇಕಾಗುತ್ತದೆ.ಕರೆಸು ಅವನನ್ನು ಎಂದ.ಅಷ್ಟರಲ್ಲಿ ಯಮಧರ್ಮರಾಜನಿಗೆ ಕೋಪ ಬಂದು,' ಎಲಾ ಋಷಿಯೇ,ಮಾಡಬಾರದ್ದನ್ನು ಮಾಡಿಕೊಂಡು,ಈಗ ವಿಷ್ಣು ಜಪಕ್ಕೆ ಶುರುಮಾಡಿದ್ದಿಯೋ' ಎಂದ.ಋಷಿಯ ಕೋಪ ನೆತ್ತಿಗೇರಿತು.' ಎಲಾ ಯಮಧರ್ಮಾ, ಶಾಸನದ ವಿಚಾರ ನಿನಗೇನು ಗೊತ್ತು.ಶಾಸನ ಪಾಲನೆ ಮಾಡುವುದು ನಿನ್ನ ಧರ್ಮವಾದರೆ,ಶಾಸನ ರಚಿಸುವುದು ನಮ್ಮ ಧರ್ಮ.ಅದನ್ನು ಮಹಾಚೈತನ್ಯ ರೂಪಿ ಮಹಾವಿಷ್ಣುವು ಅಂಗೀಕರಿಸುತ್ತಾನೆ ಅಥವಾ ಹಿಂದಕ್ಕೆ ಕಳುಹಿಸಲೂ ಬಹುದು.ನಿನ್ನ ಉದ್ಧಟ ತನಕ್ಕೆ ಶಿಕ್ಷೆ ಆಗಲೇ ಬೇಕು.ನೀನು ಭೂಲೋಕದಲ್ಲಿ ಮಾನವನಾಗಿ ಹುಟ್ಟಿ ಒಂದು ಸುಳ್ಳನ್ನಾದರೂ ಹೇಳಿ ಪಶ್ಚಾತ್ತಾಪ ಪಡುವಂತಾಗಲಿ'ಎಂದು ಅಣಿಮಾಂಡವ್ಯನು ಶಾಪವನ್ನಿತ್ತನು.ಅಷ್ಟರಲ್ಲಿ ಮಹಾವಿಷ್ಣುವೇ ಅಣಿಮಾಂಡವ್ಯನಿಗೆ ಪ್ರತ್ಯಕ್ಷನಾಗಿ,' ಹೇ ಮುನಿಯೇ ನೀವೇ ಎಲ್ಲ ಸೇರಿ ಶಾಸನ ರಚಿಸಿ ನನಗೆ ಸಮರ್ಪಿಸಿದಿರಿ. ಅದನ್ನೇ ಪ್ರಸಾದ ರೂಪದಲ್ಲಿ ನಿಮಗೆ ನೀಡಿದ್ದೇನೆ.ಆದರೆ ಬಾಲಾಪರಾಧ ವಿಚಾರ ಪ್ರಸ್ತಾಪ ಮಾಡದೆ ಇದ್ದದ್ದು ನಿಮ್ಮ ತಪ್ಪಲ್ಲವೇ? ನಾನು, ನೀವೇನು ಕೇಳುತ್ತೀರೋ ಅದನ್ನೇ ಅನುಗ್ರಹ ಮಾಡುವವನು. ಶಾಸನ ಮಾಡುವವರೂ ನೀವೆ,ಶಾಪ ನೀಡುವವರೂ ನೀವೆ,ಅದರ ಫಲ ಅನುಭವಿಸುವವರೂ ನೀವೆ. ನಾನು ಕೇವಲ ನಿಮ್ಮ ನಿಮ್ಮ ಕರ್ಮಕ್ಕೆ ತಥಾಸ್ತು ಎಂದಷ್ಟೇ ಅನುಗ್ರಹಿಸುವವನಷ್ಟೆ. ಯದ್ಭಾವಂ ತದ್ಭವತಿ ರಂಬಂತೆ ನಿಮ್ಮ ವಿವೇಚನೆ ಹೇಗಿರುತ್ತೋ ಅದೇ ಫಲವನ್ನು ನೀವೇ ಅನುಭವಿಸುವುದು. ನೀವು ತಪ್ಪು ಶಾಸನ ಮಾಡಿಕೊಂಡರೆ ಅದಕ್ಕೇ ನೀವೇ ಹೊಣೆ.ನಾವು ಪ್ರತಿಫಲಿಸುವ ದರ್ಪಣದಂತೆ ಇರುವವರು. ಹಾಗಾಗಿ ಪ್ರಕೃತಿ ಧರ್ಮಕ್ಕೆ ಸರಿಹೊಂದುವ ಶಾಸನ ಮಾಡಿರಿ.ಅದನ್ನೇ ಅನುಗ್ರಹಿಸುತ್ತೇನೆ.ನಿಮ್ಮ ವಿವೇಚನೆಯು ತಪ್ಪಿದ್ದಕ್ಕೂ ಶಿಕ್ಷೆ ಆಗಲೇಬೇಕು,ಯಮಧರ್ಮರಾಜನ ವಿವೇಚನಾ ರಹಿತ ಅಧಿಕಾರಕ್ಕೂ ಶಿಕ್ಷೆ ಆಗಲೇಬೇಕು. ಹಾಗಾಗಿ ನೀನು ನೀಡಿದ ಶಾಪದ ಫಲ ತಪ್ಪಿ ಹೋಗದು.ಆದರೆ ಜಗತ್ತಿಗೇ ಮಾನವನೆಂದರೆ ಹೀಗಿರಬೇಕು ಎಂಬ ಪಾಠವನ್ನು ಮಾನವ ಜನ್ಮದಲ್ಲಿ ನೀಡುವಂತಾಗಲಿ. ದ್ವಾಪರ ಯುಗಾಂತ್ಯದಲ್ಲಿ ಭರತ ವಂಶದಲ್ಲಿ ಯುಧಿಷ್ಟಿರನಾಗಿ ಜನಿಸಿ,ಲೋಕ ಪ್ರಸಿದ್ಧನಾಗಲಿ ಎಂದು ಅನುಗ್ರಹಿಸಿ.ಇದು ನಿಮ್ಮ ವಿವೇಚನಾಲೋಪಕ್ಕೆ ಕೊಟ್ಟ ಶಾಪವನ್ನು ತಿದ್ದುವ ಶಿಕ್ಷೆ' ಎಂದು ಭಗವಂತನು ಅನುಗ್ರಹಿಸಿದ. ಮುಂದೆ ಬಾಲಾಪರಾಧಕ್ಕೆ ಕ್ಷಮೆಯನ್ನೂ ನೀಡುವ ಶಾಸನವೂ ಅಣಿಮಾಂಡವ್ಯ ಋಷಿಯಿಂದ ಸೃಷ್ಟಿಯಾಗುತ್ತದೆ.ನಂತರ ಋಷಿಗಳ ಜನಾಲೋಕಕ್ಕೆ ಅಣಿಮಾಂಡವ್ಯನನ್ನು ಕಳುಹಿಸಲಾಯಿತು.
ಸಂದೇಶ: ನಾವೇ ಮಾಡಿಕೊಂಡ ಶಾಸನ ನಮಗೇ ಮುಳುವಾಗುತ್ತದೆ.ಪ್ರಜಾಹಿತ,ದೇಶ ಹಿತ,ಪ್ರಕೃತಿಗೆ ಪೂರ್ವಕವಾದ ಧರ್ಮ ರಚಿಸಿಕೊಂಡು ಅದನ್ನು ಅನುಷ್ಟಾನಿಸಿಕೊಂಡಾಗ ಕ್ಷೇಮವಲ್ಲವೇ? ಇಂತಹ ಶಾಸನವನ್ನೇ ನಾನು (ಭಗವಂತ)ಅಂದರೆ ಎತ್ತಿ ಹಿಡಿಯುವವರು ನ್ಯಾಯಾಧೀಶರು.ತಪ್ಪು ಶಾಸನ ಮಾಡಿಕೊಂಡರೆ ನ್ಯಾಯಾಧೀಶರು ಅದರ ಚೌಕಟ್ಟಿನಲ್ಲೇ ಉತ್ತರ ನೀಡಬೇಕಾಗುತ್ತದೆ. ಆಗ ಅಲ್ಲಿ ನೀಡುವ ಶಿಕ್ಷೆಗೆ ತಲೆಬಾಗಲೇ ಬೇಕಾಗುತ್ತದೆ. ಭಗವಂತನ ಮೇಲಿರುವ ಅಚಲ ನಂಬಿಕೆ, ಭಕ್ತಿಗಳು ನಮ್ಮೊಳಗಿನ ಸಂದೇಹ,ಸಂಶಯಗಳನ್ನು ನಿವಾರಿಸುತ್ತದೆ. ಶಾಸನಬದ್ಧವಾಗಿ ನಡೆಯಲು ಪ್ರೇರಣೆ ನೀಡುತ್ತದೆ.
( ಈ ಲೇಖನದ ಬಗ್ಗೆ ಇನ್ನೂ ಅರ್ಥ ಆಗಬೇಕಿದ್ದರೆ CAA,NRC ಇತ್ಯಾದಿ ವಿಚಾರದೊಂದಿಗೆ ಹೋಲಿಸಿಕೊಳ್ಳಿ)
ಲೇಖನ: ಪ್ರಕಾಶ್ ಅಮ್ಮಣ್ಣಾಯ. ಜ್ಯೋತಿರ್ವಿಜ್ಞಾನಂ.
No comments:
Post a Comment