|ಯ ಯಾ ತಿ|
ಮೊದಲಿಗೆ ಹಿನ್ನೆಲೆ....
'ಬೃಹಸ್ಪತಿ' ದೇವತೆಗಳಿಗೆ ಗುರುವಾದರೆ, ಇನ್ನು 'ಶುಕ್ಲಾಚಾರ್ಯರು' ರಾಜ ವೃಷಪರ್ವನ ರಾಕ್ಷಸರ ರಾಜ್ಯದ ಕುಲ ಪುರೋಹಿತರು, ಹಾಗು ರಾಜಗುರು.
ಶುಕ್ಲಾಚಾರ್ಯರು ತಪಸ್ಸು ಮಾಡಿ ಪರಮೇಶ್ವರನಿಂದ 'ಮೃತಸಂಜೀವಿನಿ' ವಿದ್ಯೆಯನ್ನು ವರವಾಗಿ ಪಡೆದರು.
ರಾಕ್ಷಸರು ಮತ್ತು ದೇವತೆಗಳ ನಡುವೆ ಕಿತ್ತಾಟ, ಸಮರಗಳು ಸಾಮಾನ್ಯವಾಗಿತ್ತು.
ದೇವತೆಗಳು ರಾಕ್ಷಸರನ್ನು ಕೊಂದರೆ, ಶುಕ್ಲಾಚಾರ್ಯರು ತಮ್ಮಲ್ಲಿನ ಮೃತಸಂಜೀವಿನಿ ವಿದ್ಯೆಯಿಂದ ಮತ್ತೆ ರಾಕ್ಷಸರನ್ನು ಬದುಕಿಸುತ್ತಿದ್ದರು. ಇದರಿಂದ ದೇವತೆಗಳಿಗೆ ದೊಡ್ಡ ತಲೆನೋವು ಉಂಟಾಯಿತು. ಎಷ್ಟೇ ರಾಕ್ಷಸರನ್ನು ಕೊಂದರೂ, ಮರುಕ್ಷಣವೇ ಗುರುಗಳಾದ ಶುಕ್ಲಾಚಾರ್ಯರು ಮತ್ತೆ ರಾಕ್ಷಸರನ್ನು ಬದುಕಿಸುತ್ತಿದ್ದರು.
ಇದಕ್ಕೆ ಪರಿಹಾರ ಹುಡುಕಲು ಯತ್ನಿಸಿದ, ದೇವತೆಗಳ ಗುರುವಾದ ಬೃಹಸ್ಪತಿಯು ತನ್ನ ಮಗನಾದ 'ಕಚ'ನನ್ನು ಶುಕ್ಲಾಚಾರ್ಯರರ ಬಳಿಗೆ ವೇದಾಧ್ಯಯನ ಮಾಡುವ ನೆಪದಲ್ಲಿ ಕಳುಹಿಸಿ, ಶುಕ್ಲಾಚಾರ್ಯರ ಮನಗೆದ್ದು ಹೇಗಾದರೂ ಮೃತಸಂಜೀವಿ ಮಂತ್ರವಿದ್ಯೆಯನ್ನು ಕಲಿತುಕೊಳ್ಳುವಂತೆ ತಿಳಿಸುತ್ತಾನೆ.
ಶುಕ್ಲಾಚಾರ್ಯರು, 'ಕಚ'ನನ್ನು ಶಿಷ್ಯನಾಗಿ ಸ್ವೀಕರಿಸಿದರು. ಕಚನು ಶ್ರದ್ಧೆ ಭಕ್ತಿಗಳಿಂದ ಗುರುಗಳ ಪ್ರೀತಿ, ವಿಶ್ವಾಸ ಗಳಿಸಿದ.
ಯೌವ್ವನದಲ್ಲಿದ್ದ ಕಚನ ರೂಪ, ವಿದ್ಯೆ, ವಿನಯಗಳಿಂದ ಶುಕ್ಲಾಚಾರ್ಯರ ಮಗಳು 'ದೇವಯಾನಿ' ಆಕರ್ಷಣೆಗೆ ಒಳಗಾಗುತ್ತಾಳೆ. ಇದನ್ನು ತಿಳಿದ ರಾಕ್ಷಸ ಕುಲದ ಶುಕ್ಲಾಚಾರ್ಯರ ಶಿಷ್ಯರು, ಕಚನನ್ನು ದ್ವೇಷಿಸಿ ನಂತರ ತುಂಡು ತುಂಡಾಗಿ ಕತ್ತರಿಸಿ ಕೊಲ್ಲುತ್ತಾರೆ.
ತನ್ನ ಪ್ರೀತಿಯ ಕಚನನ್ನು ಕಾಣದ ದೇವಯಾನಿ ತಂದೆಯ ಬಳಿ ವಿಷಯ ತಿಳಿಸುತ್ತಾಳೆ.
ಶುಕ್ಲಾಚಾರ್ಯರು ತಮ್ಮ ದಿವ್ಯ ದೃಷ್ಟಿಯಿಂದ, ಕಚನ್ನು ತನ್ನ ರಾಕ್ಷಸ ಶಿಷ್ಯರು ಕೊಂದಿರುವುದಾಗಿ ಮಗಳಾದ ದೇವಯಾನಿಗೆ ತಿಳಿಸುತ್ತಾರೆ. ಕುಪಿತಳಾದ ದೇವಯಾನಿ, ತಂದೆಯಲ್ಲಿ ಮೃತಸಂಜೀವಿನಿ ವಿದ್ಯೆಯಿಂದ ಕಚನನ್ನು ಮತ್ತೆ ಬದುಕಿಸುವಂತೆ ವಿನಂತಿಸಿಕೊಳ್ಳುತ್ತಾಳೆ. ಕಚನು ಮತ್ತೆ ಬದುಕಿ ಬರುತ್ತಾನೆ.
ಕಚನು ಮತ್ತೆ ಬದುಕಿಬಂದ ವಿಷಯ ತಿಳಿದ ಶುಕ್ಲಾಚಾರ್ಯರ ಶಿಷ್ಯರು ಕಸಿವಿಸಿಗೊಂಡು, ಏನಾದರೂ ಉಪಾಯ ಮಾಡಿ ಕಚನನ್ನು ಕೊಂದು ಮತ್ತೆ ಹುಟ್ಟಿಬರದಂತೆ ಮಾಡಲೇ ಬೇಕೆಂಬ ನಿರ್ಧಾರ ಮಾಡಿ, ಮತ್ತೊಮ್ಮ ಕಚನನ್ನು ಕೊಂದು ದೇಹವನ್ನು ಸುಟ್ಟುಹಾಕಿ, ಆ ಬೂದಿಯನ್ನು ಶುಕ್ಲಾಚಾರ್ಯರಿಗೆ ಮದ್ಯಪಾನದಲ್ಲಿ ಬೆರಸಿ ಕುಡಿಸುತ್ತಾರೆ.
ಕಚನು ಮತ್ತೆ ಕಾಣೆಯಾಗಿರುವುದನ್ನು ತಿಳಿದ ದೇವಯಾನಿ ವಿಷಯವನ್ನು ತಂದೆಗೆ ತಿಳಿಸಿದಳು. ಶುಕ್ಲಾಚಾರ್ಯರು ದಿವ್ಯ ದೃಷ್ಟಿಯಿಂದ ಹುಡುಕಿದಾಗ, ಕಚನು ಸುಟ್ಟು ಬೂದಿಯಾಗಿ ನನ್ನ ಹೊಟ್ಟೆಯ ಒಳಗೇ ಇದ್ದಾನೆ ಎಂದು ತಿಳಿಸಿ, ಆ ಬೂದಿಯಿಂದ ಮತ್ತೆ ಕಚನನ್ನು ಬದುಕಿಸಬೇಕಿದ್ದಲ್ಲಿ, ನನ್ನ ಹೊಟ್ಟೆಯನ್ನೇ ಸೀಳಬೇಕು. ಹಾಗೆ ನನ್ನ ಹೊಟ್ಟೆಯನ್ನು ಸೀಳಿದರೆ ನನಗೆ ಮರಣ ಬರುವುದು ಖಚಿತ, ಏನು ಮಾಡಲಿ? ಹೇಳು ಎಂದು ದೇವಯಾನಿಗೆ ತಿಳಿಸಿದರು.
ಆಗ ದೇವಯಾನಿಗೆ ಹೊಳೆದ ಉಪಾಯ ತಿಳಿಸುತ್ತಾಳೆ.
ತಂದೆಯೇ.., ನಿನ್ನ ದೇಹದ ಒಳಗೆ ಬೂದಿಯಾಗಿ ಇರುವ ಕಚನಿಗೆ ಮೃತಸಂಜೀವಿನಿ ವಿದ್ಯೆಯ ಮಂತ್ರವನ್ನು ಉಪದೇಶ ಮಾಡು, ಆಗ ಕಚನು ಬದುಕಿ ನಿನ್ನ ಹೊಟ್ಟೆಯನ್ನು ಸೀಳಿ ಹೊರಬರುತ್ತಾನೆ. ನಂತರ ನೀನು ಉಪದೇಶಿದ ಮಂತ್ರ ವಿದ್ಯೆಯಿಂದ ನಿನ್ನ ಮೃತ ದೇಹಕ್ಕೆ ಕಚನು ಪ್ರಾಣ ನೀಡಿದಾಗ ನೀನು ಬದಕುಳಿಯಬಹುದಲ್ಲವೇ.? ಎಂಬ ಸಲಹೆ ನೀಡಿದಳು. ಅದರಂತೆ ಕಚನು ಮತ್ತೊಮ್ಮೆ ಬದುಕಿ ಶುಕ್ಲಾಚಾರ್ಯರ ಉದರದಿಂದ ಹೊರಬಂದು, ಮರಣ ಹೊಂದಿದ್ದ ಗುರು ಶುಕ್ಲಾಚಾರ್ಯರನ್ನು ಬದುಕಿಸುತ್ತಾನೆ.
ಯ ಯಾ ತಿ - ೨
ಶುಕ್ಲಾಚಾರ್ಯರ ಉದರದಲ್ಲಿ ಸುರಾಪಾನದ ಜೊತೆಯಲ್ಲಿ ಬೂದಿಯಾಗಿ ಒಳಸೇರಿದ್ದ ಕಚನಿಗೆ ಮೃತ್ಯುಸಂಜೀವಿನಿ ಮಂತ್ರದ ಉಪದೇಶ ಮಾಡಿದ ನಂತರ, ಮತ್ತೆ ಬದುಕಿ ಬಂದ ಕಚನನ್ನು ನೋಡಿದ ದೇವಯಾನಿಗೆ ಆದ ಸಂತೋಷ ಅಷ್ಟಿಷ್ಟಲ್ಲ.
ದೇವಯಾನಿ ತನ್ನನ್ನು ವಿವಾಹ ಮಾಡೊಕೊಳ್ಳುವಂತೆ, ಕಚನಿಗೆ ತಿಳಿಸುತ್ತಾಳೆ. ಆದರೆ ಕಚನು, ತಾನು ನಿನ್ನ ತಂದೆಯಾದ ಶುಕ್ಲಾಚಾರ್ಯರ ಉದರದಿಂದ ಹೊರಬಂದು ಮರು ಜೀವ ಪಡೆದಿದ್ದೇನೆ, ಹಾಗಾಗಿ ನೀನು ನನ್ನ ಸೋದರಿಯ ಸಮಾನ, ವಿವಾಹ ಮಾಡಿಕೊಳ್ಳು ಸಾಧ್ಯವಿಲ್ಲ, ಎಂದು ನಯವಾಗಿ ತಿಳಿಸಿ ಅಲ್ಲಿಂದ ಹೊರಟು ಹೋಗುತ್ತಾನೆ.
|ಯಯಾತಿ, ದೇವಯಾನಿ,ಶರ್ಮಿಷ್ಠೆ|
ರಾಕ್ಷಸರ ರಾಜ್ಯದ ರಾಜನಾದ ವೃಷಪರ್ವನ ಮಗಳು 'ಶರ್ಮಿಷ್ಠೆ' ಮತ್ತು ಗುರು ಶುಕ್ಲಾಚಾರ್ಯರ ಮಗಳಾದ 'ದೇವಯಾನಿ' ಇಬ್ಬರೂ ಬಾಲ್ಯದ ಗೆಳತಿಯರು. ಮುಂದೊಂದು ದಿನ ಇವರಿಬ್ಬರ ನಡುವೆ ಒಂದು ಸಣ್ಣ ವಿಚಾರದಲ್ಲಿ ಜಗಳವಾಗಿ, ಶರ್ಮಿಷ್ಠೆಯು ದೇವಯಾನಿಯನ್ನು ಅರೆ ನಗ್ನ ಸ್ಥಿತಿಯಲ್ಲಿ ನಿರ್ಜನ ಪ್ರದೇಶದ ಬಾವಿಗೆ ದೂಡುತ್ತಾಳೆ. ಬಹಳ ಸಮಯದವರೆಗೂ ದೇವಯಾನಿಯನ್ನು ಕಾಪಾಡಲು ಯಾರೂ ಬರಲಿಲ್ಲ.
['ನಹುಷ' ಚಂದ್ರ ವಂಶದ ಚಕ್ರವರ್ತಿ. ಪಾಂಡವರ,ಕೌರವರ, ಕುರು ವಂಶದ ಪೂರ್ವಜರಲ್ಲಿ ಪ್ರಮುಖನು. ಇವನ ಮಗನೇ ಯುವರಾಜನಾದ ''ಯಯಾತಿ'']
ಅದೇ ಸಮಯದಲ್ಲಿ ಕಾಡಿನಲ್ಲಿ ಬೇಟೆಯಾಡಲು ಬಂದ ಯುವರಾಜ ಯಯಾತಿಗೆ, "ಕಾಪಾಡೀ, ಕಾಪಾಡೀ" ಎಂಬ ಹೆಣ್ಣಿನ ಧ್ವನಿ ಕೇಳಿಸಿದಾಗ, ಆ ಬಾವಿಯಿಲ್ಲಿ ಅರೆ ನಗ್ನ ಸ್ಥಿತಿಯಲ್ಲಿದ್ದ ದೇವಯಾನಿಯನ್ನು ನೋಡಿ ಕೈಹಿಡಿದು ಮೇಲೆತ್ತುತ್ತಾನೆ.
ಬಾವಿಯಿಂದ ಹೊರಬಂದ ದೇವಯಾನಿ ಮತ್ತು ಯಯಾತಿಯ ನಡುವೆ ಅನುರಾಗ ಉಂಟಾಗಿ, ಅವರಿಬ್ಬರ ವಿವಾಹವೂ ನಡೆಯಿತು.
ಆದರೆ, ತನ್ನನ್ನು ಬಾವಿಗೆ ತಳ್ಳಿದ ಶರ್ಮಿಷ್ಠೆಯ ಮೇಲಿನ ಕೊಪ ಮಾತ್ರ ಕಡಿಮೆ ಆಗಲಿಲ್ಲ. ತನ್ನ ತಂದೆಯ ಬಳಿ ನಡೆದ ವಿಷಯವನ್ನು ತಿಳಿಸುತ್ತಾಳೆ. ಇದನ್ನು ತಿಳಿದ ಶುಕ್ಲಾಚಾರ್ಯರು, ಶರ್ಮಿಷ್ಠೆಯ ತಂದೆ ವೃಷಪರ್ವನಿಗೆ ವಿಷಯ ತಿಳಿಸಿ, ಇನ್ನು ಮುಂದೆ ನಿನ್ನ ರಾಜ್ಯದಲ್ಲಿ ಇರಲಾರೆ ಎಂದು ತಿಳಿಸಿದರು.
ತನ್ನ ಮಗಳಾದ ಶರ್ಮಿಷ್ಠೆ ಮಾಡಿದ ತಪ್ಪಿಗಾಗಿ, ನಾನು ಕ್ಷಮೆ ಕೇಳುತ್ತೇನೆ, ಆದರೆ ರಾಜ್ಯ ಬಿಟ್ಟು ಹೋಗಬೇಡಿ ಎಂದು ವಿನಂತಿಸಿಕೊಳ್ಳುತ್ತಾನೆ. ಮಹಾ ಹಠಮಾರಿಯಾದ ದೇವಯಾನಿ ಇದಕ್ಕೆ ಒಪ್ಪಲಿಲ್ಲ. ತಂದೆಯಾದ ಶುಕ್ಲಾಚಾರ್ಯರನ್ನು ಈ ರಾಜ್ಯದಲ್ಲಿ ಇರಲು ಬಿಡುವುದಿಲ್ಲ, ಒಂದು ವೇಳೆ ಈ ರಾಜ್ಯದಲ್ಲಿ ಇರಬೇಕೆನ್ನುವುದಾದರೆ, ಬಾವಿಗೆ ತಳ್ಳಿ, ನನಗೆ ಅಪಮಾನ ಮಾಡಿದ ಶರ್ಮಿಷ್ಠೆಯು ನನ್ನ ಅರಮನೆಯ ಸೇವಕಿಯಾಗಿ ಇರಬೇಕು ಎಂಬ ನಿಭಂದನೆ ವಿಧಿಸುತ್ತಾಳೆ. ಅನ್ಯ ಮಾರ್ಗವಿಲ್ಲದೆ, ರಾಜ ವೃಷಪರ್ವನ ಮಗಳಾದ ಶರ್ಮಿಷ್ಠೆಯು ದೇವಯಾನಿಗೆ ಸೇವಕಳಾಗಿ ಕೆಲಸ ಮಾಡಲು ಒಪ್ಪಿಕೊಳ್ಳುತ್ತಾಳೆ.
ತಾನು, ಯುವರಾಜನಾದ ಯಯಾತಿಯ ರಾಣಿ ಮತ್ತು ಶರ್ಮಿಷ್ಠೆಯು ನನ್ನ ಸೇವಕಿ ಎಂಬ ಅಹಂಕಾರವು ದೇವಯಾನಿಯ ತಲೆಗೆಹತ್ತಿ ಎಲ್ಲರನ್ನೂ ಅಸಡ್ಡೆಯಾಗಿ ಕಾಣಲು ಪ್ರಾರಂಭ ಮಾಡುತ್ತಾಳೆ. ಕೆಲವೊಮ್ಮೆ ಇದರ ಅನುಭವ ಗಂಡನಾದ ಯಯಾತಿಗೂ ಆಯಿತು.
ಯಯಾತಿಯು ನಿಧಾನವಾಗಿ ದೇವಯಾನಿಯಲ್ಲಿ ಆಸಕ್ತಿ ಕಳೆದುಕೊಂಡು ಶರ್ಮಿಷ್ಠೆಗೆ ಹೆಚ್ಚು ಹತ್ತಿರವಾಗುತ್ತಾನೆ. ಶರ್ಮಿಷ್ಠೆಗೂ ಇದು ಒಂದು ರೀತಿಯಲ್ಲಿ ದೇವಯಾನಿಯ ಮೇಲೆ ಸೇಡು ತೀರಿಸಿಕೊಳ್ಳುವ ಅವಕಾಶ ದೊರಕಿದಂತಾಯಿತು.
ಯ ಯಾ ತಿ - ೩
ಚಕ್ರವರ್ತಿಯಾದ ಯಯಾತಿ, ದೇವಯಾನಿಗೆ ತಿಳಿಯದಂತೆ ಶರ್ಮಿಷ್ಠೆಯನ್ನು ವಿವಾಹವಾಗುತ್ತಾನೆ.
ದೇವಯಾನಿ ಮತ್ತು ಶರ್ಮಿಷ್ಠೆ ಇಬ್ಬರಿಗೂ ಮಕ್ಕಾಳಾಗುತ್ತದೆ.
ಆದರೂ ಯಯಾತಿಯು ರಾಜ್ಯಭಾರದತ್ತ ಗಮನ ಹರಿಸದೆ, ಅನೇಕ ಸ್ತ್ರೀಯರೊಂದಿಗೆ ತನ್ನ ದೈಹಿಕ ದಾಹಗಳನ್ನು ತೀರಿಸಿಕೊಳ್ಳುದರಲ್ಲೇ ಕಾಲ ಕಳೆಯುತ್ತಾನೆ.
ಯಯಾತಿಯ ಈ ವರ್ತನೆಯಿಂದ ಕೊಪಗೊಂಡ ದೇವಯಾನಿ, ತಂದೆಗೆ ಈ ವಿಚಾರ ತಿಳಿಸಿ, ತನ್ನ ಗಂಡನಿಗೆ ಬುದ್ದಿ ಹೇಳುವಂತೆ ವಿನಂತಿಸುತ್ತಾಳೆ.
ವಿಷಯ ತಿಳಿದ ಶುಕ್ಲಾಚಾರ್ಯರು ಯಯಾತಿಯನ್ನು ಕಂಡು ಕೋಪದಿಂದ, ನಿನಗೆ ಯಾವುದೇ ಸ್ತ್ರೀಯೊಂದಿಗೆ ಸುಖಪಡಲಾಗದ ಮುದಿತನ, ಮುಪ್ಪು ಪ್ರಾಪ್ತಿಯಾಗಲಿ ಎಂಬ ಶಾಪ ನೀಡುತ್ತಾರೆ.
ಮನನೊಂದ ಯಯಾತಿಯು ಈ ರೀತಿಯ ಕಠೋರ ಶಾಪದಿಂದ ಮುಕ್ತಿ ಪಡೆವ ಮಾರ್ಗವನ್ನು ತಿಳಿಸಬೇಕೆಂದು ಕೊರುತ್ತಾನೆ. ಅದಕ್ಕೆ ಶುಕ್ಲಾಚಾರ್ಯರು, ಯಾವುದೇ ಯೌವ್ವನದ ಪುರುಷ ನಿನ್ನ ಮುಪ್ಪನ್ನು ಸ್ವೀಕರಿಸಿದಾಗ, ಅವನ ಯೌವನ ನಿನಗೆ ಪ್ರಾಪ್ತಿ ಆಗುವುದಾಗಿ ತಿಳಿಸುತ್ತಾರೆ.
ಮುಪ್ಪು ಆವರಿಸಿದ ಯಯಾತಿಯು ಹಲ್ಲು ಕಿತ್ತ ಹಾವಿನಂತಾಗಿ, ಹಲವರಲ್ಲಿ ತನ್ನ ಮುಪ್ಪನ್ನು ಸ್ವೀಕರಿಸಿ, ಯೌವನವನ್ನು ನೀಡುವಂತೆ ಬೇಡುತ್ತಾನೆ. ಯಾರೂ ಒಪ್ಪದಿದ್ದಾಗ, ಕೊನೆಗೆ ತನ್ನ ಮಕ್ಕಳನ್ನೇ ಬೇಡುತ್ತಾನೆ.
ತನ್ನಿಂದ ದೇವಯಾನಿಗೆ ಜನಿಸಿದ ಮಕ್ಕಳು ಇದಕ್ಕೆ ಒಪ್ಪುವುದಿಲ್ಲ. ಕೊನೆಗ ಶರ್ಮಿಷ್ಠೆಯ ಕೊನೆಯ ಮಗನಾದ "ಪುರು" ತಂದೆಯ ಮುದಿತನವನ್ನು ಸ್ವೀಕರಿಸಿ ತನ್ನ ಯೌವನವನ್ನು ತಂದೆ, ಯಯಾತಿಗೆ ಧಾರೆ ಎರೆಯುತ್ತಾನೆ.
ಮತ್ತಷ್ಟು ದಿನಗಳ ಕಾಲ ಕಾಮದ ಸುಖ ಅನುಭವಿಸಿದ ಯಯಾತಿ, ಕೊನೆಗೆ ಮಗನಾದ 'ಪುರು' ನನ್ನ ಸುಖಕ್ಕಾಗಿ ತಾನು ಮುಪ್ಪಿನಿಂದ ಬಳಲುತ್ತಿರುವುದನ್ನು ನೋಡಿ ಜೀವನದಲ್ಲಿ ಜಿಗುಪ್ಸೆ ಉಂಟಾಯಿತು. ಕೊನೆಗೆ ಶರ್ಮಿಷ್ಠೆಯ ಮಗ ಪುರು, ತನಗೆ ನೀಡಿದ ಯೌವನವನ್ನು ಹಿಂತಿರುಗಿಸಿ, ತಾನು ಅವನ ಮುಪ್ಪನ್ನು ಸ್ವೀಕರಿಸುತ್ತಾನೆ.
ಜೀವನದಲ್ಲಿ ಮಾಡಿದ ತನ್ನ ತಪ್ಪುಗಳ ಪ್ರಾಯಶ್ಚಿತ್ತಕ್ಕಾಗಿ ಮಗ 'ಪುರು'ವಿಗೆ ರಾಜ್ಯಭಾರ ನೀಡಿ ಶರ್ಮಿಷ್ಠೆಯೊಂದಿಗೆ, ಯಯಾತಿ ವಾನಪ್ರಸ್ತಕ್ಕೆ ತೆರಳುತ್ತಾನೆ.
----------------------------------------------
ಯಯಾತಿಯ ಬದುಕು, ಜೀವನ ಶೈಲಿಯು ಸಮಾಜಕ್ಕೆ ತಿಳಿಹೇಳಿದ ಸಂದೇಶವೇನು?
ಯಯಾತಿಯ ಜೀವನ ಶೈಲಿ, ನಡೆದ ಘಟನೆಗಳಿಂದ ನಾವು ಅರಿತಿದ್ದಾದರೂ, ಗಳಿಸಿದ್ದಾದರೂ ಏನು? ಎಂಬ ಕಾಡುವ ಪ್ರಶ್ನೆ? ಮತ್ತು ಉತ್ತರ ಹುಡುಕುವ ಪ್ರಯತ್ನ.
ಇಲ್ಲಿ 'ಸುಖ' ಮತ್ತು 'ಸಂತೋಷ'ಗಳ ನಡುವೆ ಇರುವ ವ್ಯತ್ಯಾಸಗಳನ್ನು ಸಮಾಜಕ್ಕೆ ತಿಳಿಸುವ ಪ್ರಯತ್ನ.
ಸುಖ:- ಸುಖ ಎಂಬುದು ವೈಯುಕ್ತಿಕವಾದದ್ದು. ಸುಖವಾದ ನಿದ್ರೆ, ಸುಖವಾದ ಪ್ರಯಾಣ, ಮುಂತಾವುಗಳು ಅವರರು ವೈಯುಕ್ತಿಕವಾಗಿ ಅನುಭವಿಸುವಂತಹ ಪ್ರಕ್ರಿಯೆಗಳು. ಯಾರಿಗೋಸ್ಕರವೋ ಮತ್ತೊಬ್ಬರು ನಿದ್ದೆ ಮಾಡುಲು ಬರುವುದಿಲ್ಲ. ಪ್ರಯಾಣವೂ ಹಾಗೆಯೇ.!
ಸಂತೋಷ:- ಇದು ತಾವೂ ಅನುಭವಿಸಿ ಇತರರೊಂದಿಗೆ ಹಂಚಿಕೊಳ್ಳಬಹುದು. ಹಾಗಾಗಿ, ಸುಖಕ್ಕಿಂತಲೂ ಸಂತೋಷ ಎಂಬುದು ಸಮಾಜಕ್ಕೆ ಅತ್ಯವಶ್ಯಕ ಎಂಬ ಸಂದೇಶ ಇರಬಹುದು.
ಇನ್ನು ಯಯಾತಿ ಜೀವನದಲ್ಲಿ 'ಸುಖ' ಮತ್ತು 'ಸಂತೋಷ'ಗಳನ್ನು ತಾಳೇ ಹಾಕಿ ವಿಮರ್ಶಿಸುವುದಾದರೆ, ಯಯಾತಿ ತನ್ನ ಜೀವನವನ್ನು ಸುಖಕ್ಕೆ ಮಾತ್ರ ಮುಡುಪಾಗಿಟ್ಟ. ಸಂತೋಷ ಹಂಚಿಕೊಳ್ಳುವ ಪ್ರಯತ್ನ ಮಾಡಲೇ ಇಲ್ಲ.
ಸ್ವಾರ್ಥದ ಸುಖಕ್ಕಾಗಿ ತನ್ನ ಹೆಂಡತಿ ದೇವಯಾನಿಗೆ ತಿಳಿಯದಂತೆ ಶರ್ಮಿಷ್ಠೆಯನ್ನು ವಿವಾಹವಾದದ್ದು, ತನ್ನ ಮುಪ್ಪನ್ನು ಮಗನಿಗೆ ನೀಡಿ, ಮಾಗನಿಂದ ಯೌವನವನ್ನು ಕಿತ್ತುಕೊಂಡನಲ್ಲವೇ.!
ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು ಧನ್ಯವಾದಗಳು
No comments:
Post a Comment