Monday, 16 December 2019

ರಂಗವಲ್ಲಿ ಮತ್ತು ಹೊಸಿಲಿನ ಪೂಜಾ ಬಗ್ಗೆ ವಿಚಾರಧಾರೆ

ರಂಗವಲ್ಲಿ ಮತ್ತು ಹೊಸಿಲಿನ ಪೂಜಾ ಬಗ್ಗೆ ವಿಚಾರಧಾರೆ

1.     #ನಿಮ್ಮ_ಮನೆಯಲ್ಲಿ_ಹೊಸಿಲ ಪೂಜೆ.

         ಪ್ರತಿಯೊಬ್ಬ ಹಿಂದೂವಿನ ಮನೆಯಲ್ಲಿಯೂ ಹೊಸಿಲು ಅಥವಾ ಹೊಸ್ತಿಲು ಕಡ್ಡಾಯವಾಗಿ ಇರುತ್ತದೆ.

 ಹಿಂದಿನ ಕಾಲದ ಮನೆಯಲ್ಲಿ ಎಲ್ಲ ಬಾಗಿಲುಗಳಿಗೂ ಹೊಸಿಲು ಇರುತ್ತಿತ್ತು. ಇದು ಗೋಡೆಗಳಿಗೂ ಮನೆಯ ಭದ್ರತೆಗೂ ಅನಿವಾರ್ಯವಾಗಿತ್ತು. 

ಅಲ್ಲದೆ ಹೊಸಿಲು ಮನೆಯ ಲಕ್ಷ್ಮೀ ಸ್ವರೂಪ ಎಂಬ ಭಾವನೆಯೂ ಇದ್ದಿತು. ಆದ್ದರಿಂದ ಈಗಲೂ ಎಷ್ಟೇ ಆಧುನಿಕವಾಗಿ ಮನೆಯನ್ನು ಕಟ್ಟಿಸಿದ್ದರೂ ಮನೆಯ ಮುಂಭಾಗದ ಬಾಗಿಲು ಮತ್ತು ಹಿಂಬಾಗಿಲು ಎರಡಕ್ಕೂ ಸಹ ಹೊಸಿಲು ಇದ್ದೇ ಇರುತ್ತದೆ.

 (ಹೊಸಿಲು ಹೊಸ ವಧುವಿನ ಸ್ವಾಗತಕ್ಕಾಗಿಯೂ ಸಿಂಗಾರವಾಗುತ್ತದೆ.) ಎಲ್ಲ ಶುಭ ಸಮಾರಂಭದಲ್ಲಿಯೂ ಹೊಸಿಲನ್ನು ಸಿಂಗರಿಸುವುದು ಒಂದು ವಾಡಿಕೆ.

2.     #ಹೊಸಿಲನ್ನು_ನಿತ್ಯವೂ_ತೊಳೆದು_ಅಲಂಕರಿಸುವಿರಾ?
          ಮನೆಯಿಂದ ಹೊರಗೆ ಹೊರಡುವಾಗ ಮತ್ತು ಮನೆಗೆ ಬರುವಾಗ ಹೊಸಿಲನ್ನು ದಾಟಿ ಬರುತ್ತೇವೆ.

 ಮನೆಯಿಂದ ಹೊರಗೆ ಹೋಗುವಾಗ ದೈವರಕ್ಷೆ ನಮ್ಮ ಬೆನ್ನ ಹಿಂದಿರುತ್ತದೆ ಎಂದೂ ಮನೆಯ ಒಳಗೆ ಬರುವಾಗ ಯಾವುದಾದರೂ ದುಷ್ಟ ಶಕ್ತಿ ಅಕಸ್ಮಾತ್ ಬಂದಿದ್ದರೆ ಅದು ಹೊಸಿಲಿನಲ್ಲಿರುವ ವಾಸ್ತುದೇವತೆಗಳ ಕಾರಣದಿಂದ ನಿವಾರಣೆಗಳ್ಳುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ. 

ಆದ್ದರಿಂದ ಈ ರೀತಿ ನಮಗೆ ಶ್ರೇಯಸ್ಕರವಾದ ಹೊಸಿಲನ್ನು ನಿತ್ಯವೂ ಶುಭ್ರವಾಗಿ ತೊಳೆದು ಅರಿಶಿನ, ಕುಂಕುಮ, ಹೂವು ಇತ್ಯಾದಿಗಳಿಂದ ಅಲಂಕರಿಸಿ ಪೂಜಿಸಬೇಕು. ಇದರಿಂದ ಮನೆಯ ಶೋಭೆಯೂ ಹೆಚ್ಚುತ್ತದೆ.

3.     #ಹೊಸಿಲನ್ನು_ಪೂಜೆ_ಮಾಡುವ_ದಿನಗಳಿವೆಯೇ?
          ಹೊಸಿಲನ್ನು ದಿನವೂ ಪೂಜಿಸಿ ನಂತರವೇ ಮನೆಯಿಂದ ಹೊರಗೆ ಕಾಲಿಡಬೇಕು. ಹಾಗೆ ಪೂಜಿಸುವಾಗ ಸ್ತ್ರೀಯರು ಮನೆಗೆ ಸಮೃದ್ಧಿ ಬರಲೆಂದು ಪ್ರಾರ್ಥಿಸಿ
     #ವಾಸ್ತುದೇವ_ನಮಸ್ತುಭ್ಯಂ_ಭೂಶಯ್ಯಾನಿರತಪ್ರಭೋ |
     #ಮದ್ಗೃಹೇ_ಧನಧಾನ್ಯಾದಿಸಮೃದ್ಧಿಂ_ಕುರು_ಸರ್ವದಾ ||
          (ಭೂಮಿಯಲ್ಲಿ ಮಲಗಿರುವ ವಾಸ್ತು ಪುರುಷನೇ, ನಿನಗೆ ನಮಸ್ಕಾರ ಗಳು. ನನ್ನ ಮನೆಯಲ್ಲಿ ಧನಧಾನ್ಯಾದಿ ಸಮೃದ್ಧಿಯು ಸದಾ ಇರುವಂತೆ ಅನುಗ್ರಹಿಸು.)
ಎಂಬ ಈ ಶ್ಲೋಕವನ್ನು ಹೇಳುತ್ತಾರೆ.

 ಅನಿವಾರ್ಯ ಸಂದರ್ಭಗಳಲ್ಲಿ ಅಥವಾ ಅಶೌಚದ ದಿನಗಳಲ್ಲಿ ಮಾತ್ರ ಪೂಜೆ ಮಾಡಲಾಗುವುದಿಲ್ಲ. 

ಹಬ್ಬ ಹರಿದಿನಗಳಲ್ಲಿ, ಮನೆಗಳಲ್ಲಿ ಮಂಗಳ ಕಾರ್ಯ ಮುಂತಾದ ವಿಶೇಷ ದಿನಗಳಲ್ಲಿ ಹೊಸಿಲನ್ನು ವಿಶೇಷವಾಗಿ ಮಾವಿನ ಎಲೆಯ ತೋರಣ, ಹೂವಿನ ಮಾಲೆ, ಇತ್ಯಾದಿಗಳಿಂದ ಅಲಂಕರಿಸಿ ಪೂಜಿಸಬೇಕು.

4.     #ಹುಟ್ಟಿದ_ಮಕ್ಕಳು_ಮೊದಲ_ಬಾರಿ_ಹೊಸಿಲು_ದಾಟಿದಾಗ_ಹಬ್ಬ_ಮಾಡುವಿರಾ?
          ಸಾಮಾನ್ಯವಾಗಿ ಹೊಸಿಲು ನೆಲದಿಂದ ಸ್ವಲ್ಪ ಎತ್ತರದಲ್ಲಿರುತ್ತದೆ. ಈ ಹೊಸಿಲನ್ನು ದಾಟುವುದು ಒಂದು ಸಾಹಸವೇ ಸರಿ. ಇದನ್ನು ನೋಡುವುದು ಹಿರಿಯರಿಗೆ ಒಂದು ಅದ್ಭುತ ಪ್ರಸಂಗ.

 ಇದನ್ನು ಷೋಡಶ ಸಂಸ್ಕಾರಗಳಲ್ಲಿ ಒಂದಾಗಿ ಪರಿಗಣಿಸಿ ನಿಷ್ಕ್ರಮಣ ಎನ್ನುತ್ತಾರೆ. ಮಕ್ಕಳು ಹೀಗೆ ಹೊಸಿಲು ದಾಟಿದಾಗ ಆ ಮಕ್ಕಳನ್ನು ಹೊಸಿಲ ಮುಂದೆ ಕೂರಿಸಿ ದೀಪ ಹಚ್ಚಿಟ್ಟು ಹೊಸಿಲಿಗೆ ಪೂಜೆ ಮಾಡಿ ತಂಬಿಟ್ಟು  ಮಾಡಿ ಮಕ್ಕಳಿಗೆ ಆರತಿ ಮಾಡಬೇಕು.

 ಇದರಿಂದ ಮಕ್ಕಳಿಗೆ ತಮ್ಮ ಸಾಹಸದಿಂದ ಸಂತೋಷವಾಗುತ್ತದೆ. ಮುತ್ತೈದೆಯರಿಗೆ ಕುಂಕುಮ, ವೀಳ್ಯಗಳನ್ನು ಕೊಟ್ಟು ವಿಶೇಷ ಅಡಿಗೆ ಮಾಡಿ ಹಬ್ಬವನ್ನು ಆಚರಿಸಬೇಕು.

5.     #ಹೊಸಿಲನ್ನು_ಕಾಲಿನಿಂದ_ತುಳಿಯಬಾರದು_ಎಂದು_ಎಲ್ಲರಿಗೂ_ಗೊತ್ತಿದೆಯೇ?
          ಹೊಸ್ತಿಲಿನಲ್ಲಿ ಮನೆಯ ವಾಸ್ತು ಪುರುಷನು ನೆಲೆಸಿರುತ್ತಾನೆ ಎಂಬುದು ನಮ್ಮ ಧರ್ಮದ ನಂಬಿಕೆ. ಅಲ್ಲದೆ ಹೊಸ್ತಿಲು ಲಕ್ಷ್ಮೀ ಸ್ವರೂಪ. 

ಮನೆಯ ಎಲ್ಲ ಸೌಭಾಗ್ಯಗಳ ಮೂಲವೂ ಮನೆಯ ಹೊಸ್ತಿಲೇ. ಆದ್ದರಿಂದ ನಾವು ದೈವ ಸ್ವರೂಪವಾಗಿ ಭಾವಿಸುವ ಹೊಸ್ತಿಲನ್ನು ತುಳಿಯುವುದು, ಹೊಸ್ತಿಲ ಮೇಲೆ ಕೂರುವುದು, ಅದರ ಮೇಲೆ ಕುಳಿತು ಆಹಾರ ಸ್ವೀಕರಿಸುವುದು ಸರ್ವಥಾ ನಿಷಿದ್ಧ. 

ಮಕ್ಕಳಿಗೂ ಸಹ ಈ ವಿಷಯಗಳನ್ನು ವಿವರಿಸಿ ಅವರೂ ಕೂಡಾ ಹೊಸ್ತಿಲನ್ನು ತುಳಿಯದೆ ಗೌರವಿಸುವಂತೆ ತಿಳಿಸಿಕೊಡಬೇಕು...

ರಂಗೋಲಿ ಯಾಕೆ ಹಾಕಬೇಕು?

ನಾವು ದಿನ ನಿತ್ಯವೂ ಬಾಗಿಲಿಗೆ ನೀರು ಚುಮುಕಿಸಿ ಥಳಿ ಹಾಕಿ ರಂಗೋಲಿ ಇಡೋದು ನಮ್ಮ ಸಂಪ್ರದಾಯ...

ಯಾಕೇ ಹಾಕೋದು ?

ದಿನಾಲೂ ನಸುಕಿನ ಜಾವದಲ್ಲೇ ಎದ್ದು ಬಾಗಿಲ ಮುಂದೆ ನೀರು ಹಾಕಿ ಹೊಸಿಲು ತೊಳೆದು ರಂಗೋಲಿ ಹಾಕಿದ ಮೇಲೆ ಉಳಿದ ಕೆಲಸ ಮಾಡ್ತಿದ್ರು ನಮ್ಮ ಹಿರಿಯರು..

ಬೆಳಗಿನ ಪ್ರಹರದಲ್ಲಿ ಶ್ರೀ ನಾರಾಯಣನು ಲಕ್ಷ್ಮಿಯೊಡನೆ ವಾಯುವಾಹನನಾಗಿ ಜಗವನ್ನೇ ಪ್ರದಕ್ಷಿಣೆ ಮಾಡ್ತಾನೆ..ಯಾರ ಮನೆ ಮುಂದೆ ರಂಗೋಲಿ ಇಟ್ಟು ದೇವರ ಮುಂದೆ ದೀಪ ಹಚ್ಚಿ ನಾರಾಯಣನನ್ನು ಸಂಪ್ರೀತಿಗೊಳಿಸ್ತಾರೋ ಅವರ ಮನೆಗೆ ಭೇಟಿ ನೀಡಿ ಅವರಿಗೆ ಶುಭವಾಗಲೆಂದು ಹಾರೈಸಿ ಮುಂದೆ ಹೋಗ್ತಾನೆ...

ವೈಜ್ಞಾನಿಕ ಕಾರಣ..

ಮನೆ ಮುಂದೆ ಇರುವ ಕಸಕಡ್ಡಿಯೆಲ್ಲಾ ಸಚ್ಛಮಾಡಿ ಥಳಿ ಹಾಕಿದರೆ, ಕ್ರಿಮಿ ಕೀಟಗಳು ದೂರವಾಗಿ ನಮ್ಮ ಆರೋಗ್ಯವೂ ಚೆನ್ನಾಗಿರುತ್ತೆ..ಬಾಗಿಲ ಮುಂದಿನ ರಂಗೋಲಿ ನೋಡಿದಾಗ ಮನ ಪ್ರಫುಲ್ಲವಾಗುತ್ತದೆ..ಮನೆ ಸುಂದರವಾಗಿ ಕಂಗೊಳಿಸುತ್ತದೆ...ಶುಭಶಕುನಗಳು ಒಳ ಬರುತ್ತೆ..

#ಹೊಸ್ತಿಲು_ಪೂಜೆ

# ಹೊಸಿಲ-ಪೂಜೆ

ನಿತ್ಯದ ಹೊಸ್ತಿಲ ನಮಸ್ಕಾರಕ್ಕಿಂತ ಸ್ವಲ್ಪ ಹೆಚ್ಚಿನ ಕ್ರಮ ಹಾಗೂ ಮಹತ್ವ ಸಿಂಹ ಮಾಸದ ಆರಂಭದ ದಿನದ ಹಾಗೂ ಶ್ರಾವಣ ಶನಿವಾರ ಅಥವಾ ಸೋಣೆ ಶುಕ್ರವಾರದ ಹೊಸ್ತಿಲ ಪೂಜೆಗೆ. ಯಥಾಶಕ್ತ್ಯನುಸಾರ ಮಾಡುವ ಕ್ರಮಗಳಲ್ಲಿ ಪ್ರಾಂತೀಯ ವ್ಯತ್ಯಾಸವಿದ್ದರೂ ಉದ್ದೇಶ ಒಂದೇ. 

 ಬೆಳಗ್ಗೆ ಅಲಂಕಾರಾದಿ ನೈವೇದ್ಯ ಮಾಡಿ ನಮಸ್ಕಾರ ಮಾಡಿದರೆ, ಮುಸ್ಸಂಜೆ ಆರತಿಯ ಬೆಳಗಿ , ಹೊಸ್ತಿಲ ಮಹಾಲಕ್ಷ್ಮಿಗೆ ಹೆಂಗಳೆಯರು ಬೇಡುವ ವರವೇನೆಂದರೆ,

 “ಪ್ರಹ್ಲಾದನಿಗೆ ನರಸಿಂಹ ದೇವರು ಕೊಟ್ಟ ವರವ ನೀಡೆಮಗೆ” ಎಂದು. ಅದೇನೆಂದರೆ

 ಮುಸ್ಸಂಜೆ ಹೊಸಿಲಲಿ ಹಿರಣ್ಯಕಶಿಪುವ ಸಂಹರಿಸಿದ ನರಸಿಂಹ ದೇವರು ಪ್ರಹ್ಲಾದನಿಗೆ “ನಿನ್ನ ವಂಶದವರು ಅರಿಯದೇ ಯಾವುದೇ ತಪ್ಪು ಮಾಡಿದರೂ ನಾನು ಕ್ಷಮಿಸುವೆ” ಎಂದು. 

ಮನೆತನ, ಕುಲ ವೃದ್ಧಿಯ ಬಗ್ಗೆ ಸದಾ ಯೋಚಿಸುವ ಗೃಹಿಣಿ ಬೇಡುವ ವರ ಇದೇ ತಾನೇ. 

ಹಾಗೆಯೇ ವಧೂ ಗೃಹ ಪ್ರವೇಶದ ಸಮಯದಲ್ಲಿ ಹೊಸ್ತಿಲ ಪೂಜೆಯ ಮಹತ್ವವೂ ಮನೆತನದ ಸಮೃದ್ಧಿಯೇ ಆಗಿದೆ. 

ಹವ್ಯಕರ ಹೊಸ್ತಿಲ ಪೂಜೆಯ ಹಾಡೊಂದು ಹೀಗಿದೆ.  

ಹೊಸ್ತಿಲೇ! ಹೊಸ್ತಿಲೇ! ಹೊನ್ ಹೊಸ್ತಿಲೇ!
ಮುತ್ತಿನ ಗಿಂಡಿಲೆ ನೀರ್ತಪ್ಪೆ ||
ಬಂಗಾರದ ತಟ್ಟೆಲಿ ಹೂ ಕೊಯಿವೆ |
ಗಂಗಾ ದೇವಿಗೆ ಮಗಳಪ್ಪೆ ||
ಗೌರೀ ದೇವಿಯ ಸೊಸೆ ಅಪ್ಪೆ |
ಒಲೆ ಹೊತ್ತುಸುವ ಸೌಭಾಗ್ಯ ಕೊಡು ಹೊಸ್ತಿಲೆ ||

ಅರ್ಥಾತ್ 
ಮನೆಯಲ್ಲಿ ಸುಖ-ಸಮೃದ್ಧಿಯು ತುಂಬಿ ,ಗಂಗೆಯಂತಹ ಪವಿತ್ರವಾದ ಜೀವನವ ಮಾಡಿ, ಸದಾ ಮುತ್ತೈದೆಯಾಗಿ , ಜವಾಬ್ದಾರಿಗೆ ಹೆಗಲು ಕೊಡುವ ಶಕ್ತಿಯ ನೀಡೆಂದು ಹೊಸ್ತಿಲ ಮಹಾಲಕ್ಷ್ಮಿಯಲ್ಲಿ ಪ್ರಾರ್ಥನೆ. 
ನಿತ್ಯ ಹರಿದ್ವರ್ಣದ ಪೂಜಾ ಪುರಸ್ಕಾರ ನಿರ್ಮಲ ಮನಸಿಂದ ಮಾಡಿದಾಗ ಶುಭಫಲಗಳು
ನಮ್ಮದಾಗುವುದು.

ಸರ್ವಜನ ಸುಖಿನೋಭವಂತು
ಕೃಷ್ಣಾರ್ಪಣಮಸ್ತು

No comments:

Post a Comment