ಜ್ಞಾನ ಉಪದೇಶಕ್ಕೆ ಸೀಮಿತವಲ್ಲ
ಕರ್ಮದಲ್ಲಿ ಅಕರ್ಮ, ಅಕರ್ಮದಲ್ಲಿ ಕರ್ಮವನ್ನು ಕಾಣಬೇಕು ಎಂದು ಕೃಷ್ಣ ಹೇಳಿದ.
ಕರ್ಮದಲ್ಲಿ ಅಕರ್ಮ ಹೇಗೆ ಕಾಣಬೇಕು ಎಂದು ಅರ್ಜುನ ಪ್ರಶ್ನಿಸಿದ. ಜಗತ್ತಿನ ಸೃಷ್ಟಿ, ಸ್ಥಿತಿ, ಲಯಕ್ಕೆ ಕಾರಣವಾಗಿದ್ದೇ ಭಗವಂತನ ಕ್ರಿಯೆ. ಕರ್ಮ ಮಾಡುತ್ತಿರುವಾಗ ಜೀವಗಳಲ್ಲಿ ಅಕರ್ಮದ ಅನುಸಂಧಾನ ಇರಬೇಕು.
ನಾವು ಕರ್ಮ ಮಾಡಿದರೂ ಅಕರ್ಮ ಎಂದು ಹೇಗೆ ತಿಳಿಯಬೇಕು?.
ಅಕರ್ಮ ಎಂದರೆ ಭಗವಂತ. ಅ- ವರ್ಣಾಕ್ಷರ ಭಗವಂತನ ಹೆಸರು. ಅಂದರೆ ಜೀವವು ಅಲ್ಲ ಜಡವೂ ಅಲ್ಲ. ಜೀವ, ಜಡ ಪ್ರಪಂಚ ದೋಷದಿಂದ ಕೂಡಿದೆ. ಪರಮಾತ್ಮನಲ್ಲಿ ಯಾವುದೇ ದೋಷವಿಲ್ಲ.
ಸರ್ವ ದೋಷಗಳಿಗೆ ವಿರುದ್ಧನಾದ ಭಗವಂತ ಅ ಎಂದು ಕರೆಸಿಕೊಂಡಿದ್ದಾನೆ. ದೇವರು ದೋಷಗಳ ವಿರುದ್ಧವಾದ ಗುಣರೂಪನಾಗಿರುವುದರಿಂದ ಜೀವವು ಅಲ್ಲ, ಜಡವೂ ಅಲ್ಲ. ಭಗವಂತ ಬಿಂಬ, ಜೀವಗಳು ಪ್ರತಿಬಿಂಬ ಹೀಗಾಗಿ ನಾವು ಮಾಡುವ ಕರ್ಮ ಪರಮಾತ್ಮನದ್ದು ಎಂದು ತಿಳಿಯಬೇಕು.
ಬಿಂಬ ಚಲನವಾದಾಗ ಮಾತ್ರ ಪ್ರತಿಬಿಂಬ ಕ್ರಿಯೆ ನಡೆಯುತ್ತದೆ. ನಿದ್ರಾವಸ್ಥೆಯಲ್ಲಿ ಜೀವರು ಕರ್ಮವನ್ನು ಬಿಟ್ಟಿರುತ್ತಾರೆ. ಆದರೂ ಭಗವಂತ ಶ್ವಾಸೋಚ್ಛಾಸ ಕ್ರಿಯೆ ಮಾಡುತ್ತಿರುತ್ತಾನೆ. ಜೀವರು ಮಾಡುವ ಕ್ರಿಯೆಗೆ ಭಗವಂತನ ಕ್ರಿಯೆ ಅಗತ್ಯ ಆದರೆ ಭಗವಂತನ ಕ್ರಿಯೆಗೆ ಜೀವರ ಕ್ರಿಯೆ ಅಗತ್ಯವಿಲ್ಲ..
ಕರ್ಮ ಎಂದರೆ ಜೀವ, ಅಕರ್ಮ ಎಂದರೆ ಕ್ರಿಯೆ ಮಾಡದ ಸ್ಥಿತಿಯಲ್ಲೂ ಕ್ರಿಯೆ ಮಾಡಿಸುವಾತ ಭಗವಂತ.
ಕರಸ್ ಎಂದರೆ ಕರ್ಮದ ವಿಧಿ. ಕರ್ಮದ ವಿಧಾನಕ್ಕೆ ಬದ್ಧವಾಗುವುದೇ ಕರ್ಮ, ವಿಧಿಗೆ ಬದ್ಧನಾಗದಿರುವುದು ಅಕರ್ಮ. ಒಬ್ಬರ ಆಜ್ಞಾ ವಚನಕ್ಕೆ ಬದ್ಧನಾಗಿದ್ದಾನೆ ಎಂದರೆ ಅವನು ಅಸ್ವತಂತ್ರ. ಪರಮಾತ್ಮ ಯಾರ ಆಜ್ಞಾ ವಚನಕ್ಕೂ ಬದ್ಧನಾಗಿಲ್ಲ ಅದಕ್ಕಾಗಿ ಆತ ಸ್ವತಂತ್ರ. ಜೀವಕ್ಕೆ ಸ್ವತಂತ್ರವಿಲ್ಲದ ಕಾರಣ ಕರ್ಮವೂ ಅಸ್ವತಂತ್ರ.
ಕತೃರ್ತ್ವ ಅಭಿಮಾನ ಯಾರೂ ತ್ಯಾಗ ಮಾಡುತ್ತಾರೋ ಅವರು ಎಲ್ಲ ಕರ್ಮ ಮಾಡಿದಂತಾಗುತ್ತದೆ. ಕೇವಲ ಕತೃರ್ತ್ವ ಅಭಿಮಾನ ತೊರೆದರೂ ಸಾಲದು ಅದರ ಜತೆ ಫಲ ಕಾಮನೆ, ಸಂಕಲ್ಪ ಮತ್ತು ಸ್ನೇಹ ಇವುಗಳನ್ನೂ ತೊರೆಯಬೇಕು ಎಂದು ಕೃಷ್ಣ ಹೇಳಿದ.
ಸಂಕಲ್ಪ ವಿಲ್ಲದೆ ಮಾಡಿದ ಕರ್ಮ ಫಲ ನೀಡುವುದೇ ?.
ಸಂಕಲ್ಪ ಎಂದರೆ ಭೌತಿಕ ಸುಖ ಬಯಸುವ ಕಾಮ ಸಂಕಲ್ಪ ಬಿಡಬೇಕು, ಭಗವಂತನಲ್ಲಿ ಜ್ಞಾನ, ಭೌತಿಕ ಪ್ರಪಂಚದಲ್ಲಿ ವೈರಾಗ್ಯ, ಧರ್ಮದಲ್ಲಿ ಶುದ್ಧ ಬುದ್ಧಿಗಾಗಿ ಸಂಕಲ್ಪ ಮಾಡಬೇಕು. ನಾನು ಮಾಡಿದ ಕರ್ಮವೇ ಶ್ರೇಷ್ಠ ಎಂಬುದು ಕರ್ಮದ ಸ್ನೇಹ.ಇದನ್ನೂ ತ್ಯಾಗ ಮಾಡಿ ಕರ್ಮ ಅನುಷ್ಠಾನಗೊಳಿಸಬೇಕು. ಜ್ಞಾನದ ಬೆಂಕಿಯಿಂದ ಬಂಧಕವಾದ ಕರ್ಮ ಎಂಬ ಹಸಿ ಕಟ್ಟಿಗೆಯನ್ನು ಯಾರೂ ಸುಟ್ಟುಕೊಂಡಿರುತ್ತಾರೊ ಅವರೇ ನಿಜವಾದ ಜ್ಞಾನಿ.
ಜ್ಞಾನವನ್ನು ಕೇವಲ ಉಪದೇಶಕ್ಕೆ ಸೀಮಿತಗೊಳಿಸಿದರೆ ಪಂಡಿತನಾಗುವುದಿಲ್ಲ.
ಸೈನಿಕರು ಹೋರಾಡಿ ಎದುರಾಳಿಗಳನ್ನು ಗೆದ್ದರೂ ರಾಜ ಗೆದ್ದ ಎಂದು ಹೇಳುವಂತೆ ಜೀವರು ಕರ್ಮ ಮಾಡಿದರೂ ಅದು ಭಗವಂತನೆ ಮಾಡಿಸಿದ್ದು ಎಂಬ ಅನುಸಂಧಾನ ಮಾಡಿಕೊಳ್ಳಬೇಕು ಎಂದು ಕೃಷ್ಣ ಉಪದೇಶಿಸಿದ.
No comments:
Post a Comment