Monday, 16 December 2019

ಸ್ವಸ್ತಿಕದ ಮಹತ್ವ

ಸ್ವಸ್ತಿಕದ ಮಹತ್ವ 
  
 “ಸು” ಹಾಗೂ “ಅಸ್” ಶಬ್ದಗಳಿಂದ ಕೂಡಿದ ಶಬ್ದ ಸ್ವಸ್ತಿಕ.”ಸು” ಎಂದರೆ ಶುಭ,ಕಲ್ಯಾಣ ಹಾಗೂ ಮಂಗಳಕರ.”ಅಸ್” ಎಂದರೆ ಅಸ್ತಿತ್ವ.”ಸ್ವಸ್ತಿಕ” ಎಂದರೆ ಮಂಗಳಮಯದಿಂದ ಕೂಡಿದ್ದು.

ನಮ್ಮ ಸಂಸ್ಕೃತಿಯ ಮಂಗಳಕಾರ್ಯಗಳು ಸ್ವಸ್ತಿವಾಚನದ ಮೂಲಕ ಪ್ರಾರಂಭವಾಗುತ್ತವೆ. “ಸ್ವಸ್ತಿ ನ ಇಂದ್ರೋ ವೃದ್ಧಶ್ರವಾಃ ಸ್ವಸ್ತಿ ನ ಪೂಷಾ ವಿಶ್ವದೇವಾಃ | ಸ್ವಸ್ತಿ ನ ಸ್ತಾರ್ಕ್ಷ್ಯೋ ಅರಿಷ್ಟನೇಮಿಃ ಸ್ವಸ್ತಿ ನೋ ಬೃಹಸ್ಪತಿರ್ದದಾತು || 

(ಮಹಾನ್ ಕೀರ್ತಿಶಾಲಿ ಇಂದ್ರ ನಮಗೆ ಒಳಿತನ್ನು ಮಾಡಲಿ,ಜ್ಞಾನಸ್ವರೂಪ ಪೂಷಾದೇವ ನಮಗೆ ಮಂಗಳವನ್ನುಂಟು ಮಾಡಲಿ,ಭಗವಾನ್ ಗರುಡ ನಮಗೆ ಕಲ್ಯಾಣವನ್ನುಂಟುಮಾಡಲಿ,ಬೃಹಸ್ಪತಿ ದೇವ ನಮ್ಮನ್ನು ರಕ್ಷಿಸಲಿ)

 ಹೀಗೆ ಸೃಷ್ಟಿಯಲ್ಲಿರುವ ಸಮಸ್ತ ದೇವಾನುದೇವತೆಗಳು ನಮ್ಮನ್ನು ಪೋಷಿಸಲಿ ಎಂದು ಸಾರುತ್ತದೆ ಸ್ವಸ್ತಿ ಸೂಕ್ತ. 

ಸಹಸ್ರಾರು ವರ್ಷಗಳ ಹಿಂದೆಯೇ ಸ್ವಸ್ತಿಕ ರೂಪವನ್ನು ಕಂಡುಹಿಡಿದವರು ನಮ್ಮ ಋಷಿಮುನಿಗಳು.ಸ್ವಸ್ತಿಕದಲ್ಲಿರುವ ರೇಖೆಗಳು ಏಕಮೇವ ಅದ್ವಿತೀಯ ಬ್ರಹ್ಮನನ್ನು ಪ್ರತಿಪಾದಿಸುತ್ತವೆ.

ನಾಲ್ಕು ಬಿಂದುಗಳು ಭಗವಾನ್ ವಿಷ್ಣುವಿನ ನಾಲ್ಕು ಕೈಗಳನ್ನು ಪ್ರತಿನಿಧಿಸುತ್ತವೆ.

ಭಗವಾನ್ ವಿಷ್ಣು ತನ್ನ ನಾಲ್ಕು ಭುಜಗಳಿಂದ ನಾಲ್ಕು ದಿಕ್ಕುಗಳನ್ನು ಸಂರಕ್ಷಿಸುತ್ತಾನೆ.

ನಮ್ಮ ಸನಾತನಧರ್ಮದ ಪ್ರತೀಕ ಸ್ವಸ್ತಿಕ.ದೇವಾನುದೇವತೆಗಳ ಶಕ್ತಿ ಹಾಗೂ ಮನುಷ್ಯನ ಮಂಗಳಮಯ ಕಾಮನೆಗಳ ಸಂಗಮವೇ ಸ್ವಸ್ತಿಕ.ಸರ್ವಾಂಗಗಳಲ್ಲೂ ಮಂಗಳಮಯ ತೇಜಸ್ಸನ್ನು ಹೊಂದಿರುವ ಶುಭಕರ ಚಿಹ್ನೆ ಸ್ವಸ್ತಿಕ.

ಅನೇಕ ದೇಶಗಳಲ್ಲಿ ಇಂದಿಗೂ ಸ್ವಸ್ತಿಕವನ್ನು ರಾಜಚಿಹ್ನೆಯಾಗಿ ಅಥವಾ ಮಂಗಲಮಯಚಿಹ್ನೆಯನ್ನಾಗಿ ಗೌರವಿಸಲಾಗುತ್ತಿದೆ.

ಭಾರತೀಯ ಸಂಸ್ಕೃತಿಯಲ್ಲಿ ವಿವಾಹ,ದೀಪಾವಳಿ,ಸರಸ್ವತಿ,ಗಣೇಶ ಪೂಜೆಗಳಲ್ಲಿ,ಗೃಹಪ್ರವೇಶ,ಮಂದಿರಗಳ ಪ್ರವೇಶದ್ವಾರದಲ್ಲಿ,ಹಲವು ಮಂಗಳ ಕಾರ್ಯಗಳಲ್ಲಿ ಸ್ವಸ್ತಿಕಚಿಹ್ನೆಯನ್ನು ಬಳಸಲಾಗುತ್ತದೆ.

ಸ್ವಸ್ತಿಕದಿಂದ ಮನೆಯಲ್ಲಿ ಅನ್ನ,ವಸ್ತ್ರ,ವೈಭವಕ್ಕೆಂದೂ ಕೊರತೆ ಬರುವುದಿಲ್ಲವೆಂಬ ನಂಬಿಕೆಯಿದೆ. 

ಹಿಂದೂ ಧರ್ಮದಲ್ಲಿ ಸ್ವಸ್ತಿಕ್ ಚಿಹ್ನೆ ಪವಿತ್ರವಾದ ಶುಭ ಚಿಹ್ನೆಯಾಗಿ ಬೆಳೆದು ಬಂದಿದೆ.

ಇದಕ್ಕೆ ಕಾರಣ ಇದರಲ್ಲಿ ಅಡಗಿರುವ ಗೂಢ ಶಕ್ತಿ. ಈ ಚಿಹ್ನೆ ವಾಸ್ತು ರಚನಾ ಶಾಸ್ತ್ರದಲ್ಲಿಯೂ ಅಪಾರವಾದ ಮಾಹಿತಿ ನೀಡುತ್ತದೆ. 

ನಮ್ಮ ಪುರಾತನರು ಈ ಚಿಹ್ನೆಯನ್ನು ಹೆಚ್ಚಾಗಿ ಬಳಸುತ್ತ  ಅದರ ಶುಭ ಫಲಗಳನ್ನು ನೋಡಿ ಸಂಪ್ರದಾಯವಾಗಿ ಬೆಳೆಸಿಕೊಂಡು ಬಂದರು.

ಜರ್ಮನ್ ಭೂಗೋಳ ಶಾಸ್ತ್ರಜ್ಞ ಅರ್ನೆಸ್ಟ್ ಹರ್ಟಮನ್  ಎಂಬಾತ ತನ್ನ "ಲಂಬಾ ಅಂಟೇನಾ" ಎಂಬ ಉಪಕರಣದ ಸಹಾಯದಿಂದ "ಸ್ವಸ್ತಿಕ್" ಚಿಹ್ನೆಯು 1 ಲಕ್ಷ ಬೋವೀಸ್ ಮಾಪನದಷ್ಟು ಕಂಪನದ ಶುಭ ಶಕ್ತಿಯನ್ನು ಹೊರಸೂಸುತ್ತದೆ ಎಂಬುದನ್ನು ತೋರಿಸಿಕೊಟ್ಟ.

 ನಕಾರಾತ್ಮಕ ಶಕ್ತಿಯನ್ನು ಸಕಾರಾತ್ಮಕವಾಗಿ ಪರಿವರ್ತಿಸುವ  ಅತಿ ಹೆಚ್ಚಿನ ಶಕ್ತಿ ಇರುವ ಚಿಹ್ನೆಯೆಂದರೆ ಅದು ಸ್ವಸ್ತಿಕ್.

ನಮ್ಮ ಹಿಂದಿನವರ ಅನುಭವದ ಪ್ರಕಾರ.. ಮನೆಯಲ್ಲಿ ಒಂದೇ ರೇಖೆಯಲ್ಲಿ ಮೂರು ಬಾಗಿಲು ಬಂದರೆ ಮಧ್ಯದ ಬಾಗಿಲಿಗೆ ಸ್ವಸ್ತಿಕ್ ಚಿಹ್ನೆ ಬಳಸಿದರೆ ಶುಭ ಫಲಗಳುಂಟಾಗುವುದೆಂಬ ನಂಬಿಕೆ ಇದೆ.

 ವ್ಯಾಪಾರ ವ್ಯವಹಾರಗಳಲ್ಲಿ ಅಂಗಡಿಗಳಲ್ಲಿ ಈ ಚಿಹ್ನೆಯ ಬಳಕೆಯಿಂದ   ಅಭಿವೃದ್ಧಿ ಕಾಣಲು ಸಾಧ್ಯವೆಂಬ ನಂಬಿಕೆಯೂ ಚಾಲ್ತಿಯಲ್ಲಿದೆ.

 ಸ್ವಸ್ತಿಕ ಶ್ರೀ ಗಣೇಶ ದೇವರ ಚಿಹ್ನೆಯಾಗಿದೆ. ಈ ಚಿಹ್ನೆಯ ತಪ್ಪು ಬಳಕೆಯಿಂದಲೂ ದುರಂತವಾಗುವುದೆಂಬುದಕ್ಕೆ

 "ಹಿಟ್ಲರ್"ನೇ ನಮ್ಮ ಕಣ್ಣೆದುರಿಗಿರುವ ಐತಿಹಾಸಿಕ ಸಾಕ್ಷಿ. ಜರ್ಮನಿಯ ಅಧ್ಯಕ್ಷನಾಗಿದ್ದ ಪಾಲ್ ವಾನ್ ಹಿಂಡರ್ಬರ್ಗ್ ಮಹಾಶಯನು, ಹಿಟ್ಲರ್ ಅನ್ನು ಜರ್ಮನಿಯ ಛಾನ್ಸಲರ್ ಆಗಿ ನೇಮಕ ಮಾಡಿದನು. 

ಅಲ್ಲಿಂದ ಮುಂದೆ ನಾಜಿ ಜರ್ಮನಿಯಲ್ಲಿ, ಅತಿ ವೇಗವಾಗಿ ಹಿಟ್ಲರ್ ತನ್ನನ್ನು ತಾನು ಸರ್ವಾಧಿಕಾರಿಯನ್ನಾಗಿ ಸ್ಥಾಪಿಸಿಕೊಂಡನು.

ಹಿಂದೂಗಳು ಬಳಸುವ ಸ್ವಸ್ತಿಕ ಲಾಂಛನವನ್ನು ಸ್ವಲ್ಪ ಬಲಗಡೆಗೆ ವಾಲಿಸಿ ಮುಖಮಾಡಿದ ರೀತಿಯಲ್ಲಿ ಸ್ವಸ್ತಿಕ ಚಿಹ್ನೆಯನ್ನು ನಾಜಿ ಪಕ್ಷದ ಲಾಂಚನವನ್ನಾಗಿ ಮಾಡಿದ್ದನು. ನಂತರ ದುರಂತ ಅಂತ್ಯ ಕಂಡನು.

ಲೋಕಾಃ ಸಮಸ್ತಾಃ ಸುಖಿನೋ ಭವಂತು..

ಕೃಷ್ಣಾರ್ಪಣಮಸ್ತು

No comments:

Post a Comment