*ಮಾತಿಗೆ ಬಡತನ ಸಲ್ಲದು*
***********************
*ವಚನೇ ಕಾ ದರಿದ್ರತಾ* _ ಮಾತಿಗೇಕೆ ದಾರಿದ್ರ್ಯ? ಎಂದು ಒಂದು ಸುಭಾಷಿತ. ಮನೆಗೆ ಬಂದ ಅತಿಥಿಗೆ ಕೊಡಬೇಕಾದ ಮೊದಲ ಸ್ವಾಗತ ಒಳ್ಳೆಯ ಮಾತು. ಸುದಾಮ ಶ್ರೀ ಕೃಷ್ಣನ ಮನೆಗೆ ಹೋದಾಗ ಹೊಟ್ಟೆ ತುಂಬಿಸಿಕೊಂಡಿದ್ದೇ ಶ್ರೀ ಕೃಷ್ಣನ ಆತ್ಮೀಯ ಮಾತುಗಳಿಂದ. ಅವರಿಬ್ಬರೂ ನಡುರಾತ್ರಿಯ ವರೆಗೆ ಗುರುಕುಲದ ಘಟನೆಗಳನ್ನು ನೆನಪಿಸಿಕೊಂಡು ಕಾಲ ಕಳೆದರು.
*ಅನುದ್ವೇಕರಂ ವಾಕ್ಯಂ ಸತ್ಯಂ ಪ್ರಿಯಹಿತಂ ಯತ್*
ಭಗವದ್ಗೀತೆಯ ಈ ವಾಕ್ಯ, ಮಾತೇ ಒಂದು ವಾಙ್ಮಯ ತಪಸ್ಸು ಎನ್ನುತ್ತದೆ. ಮತ್ತೊಬ್ಬರನ್ನು ಕೆರಳಿಸದ, ಸತ್ಯವಾದ, ಪ್ರಿಯ ಮಾತು ಹಿತ_ ಮಿತವಾಗಿರಬೇಕು. ಇಂತಹ ಮಾತೂ ದೇವರ ಪೂಜೆ ಆರಾಧನೆ.
ಒಬ್ಬ ಬಡವನ ಮನೆಯಲ್ಲಿ ಒಂದು ಹಸು ಇತ್ತು. ಅದಕ್ಕೇನೂ ಹೊಟ್ಟು ಬೂಸಾ ಹಾಕುತ್ತಿರಲಿಲ್ಲ. ತನ್ನದೇ ಅರೆಹೊಟ್ಟೆಯಾದಾಗ ಹಸುವಿನ ಹೊಟ್ಟೆಯನ್ನು ಆ ಬಡವ ಹೇಗೆ ತುಂಬಿಸಬಲ್ಲ? ಆದರೆ ಪ್ರತಿದಿನ ಬೆಳಿಗ್ಗೆ ಹಾಲು ಕರೆದು, ಅದರ ಕಾಲು ತೊಳೆದು, *ನೀನೇ ನನ್ನ ಸರ್ವಸ್ವ ಭಾಗ್ಯ. ನೀನಿಲ್ಲದೆ ನಾನು ಬದುಕಲಾರೆ* ಎಂದು ಹೇಳಿ ಕೊಟ್ಟಿಗೆಯಿಂದ ಹೊರಗೆ ಬಿಡುತ್ತಿದ್ದ.
ಹಸು ಯಾರದೋ ಹೊಲಕ್ಕೆ ಹೋಗುತ್ತಿತ್ತು. ಪೈರು ಮೇಯುತ್ತತ್ತು. ಹೊಲದೊಡೆಯ ನೋಡಿದರೆ ಹೊಡೆದು ಬಡಿದು ಹಾಕುತ್ತಿದ್ದ. ಏಟು ತಿಂದರೂ ಸಹಿಸಿಕೊಳ್ಳುತ್ತಿತ್ತು. ಮನೆಗೆ ಬಂದರೆ ಏನೂ ಇಲ್ಲವಲ್ಲ? ಹೀಗಾಗಿ ಅದು ಅನಿವಾರ್ಯವಾಗಿತ್ತು. ಪ್ರತಿನಿತ್ಯ ವೆಂಬಂತೆ ಹಾಲು ಕರೆದು, ಪಾದಪೂಜೆ ಮಾಡಿ ಬಡವ ಹಸುವನ್ನು ಮಾತಿನಲ್ಲಿ ಹೊಗಳುತ್ತಿದ್ದ.
ಒಂದು ದಿನ ಹಸು ದೂರದ ಕಾಡನ್ನು ಹೊಕ್ಕಿತು. ಸಮೃದ್ಧ ಹುಲ್ಲುಗಾವಲು. ಹೊಟ್ಟೆ ತುಂಬಾ ಮೇವು. ಯಾರ ತಂಟೆಯೂ ಇಲ್ಲ, ಯಾರೂ ಹೊಡೆದಿಲ್ಲ, ಬಡೆದಿಲ್ಲ. ನಿಶ್ಚಿಂತೆಯಿಂದ ಮೇಯಿತು. ಸಾಯಂಕಾಲ ಮನೆಯ ಹಾದಿ ಹಿಡಿಯಿತು. ಯಥಾ ಪ್ರಕಾರ ಬಡವ ಹಾಲು ಹಿಂಡಿದ, ಹೊಗಳಿದ.
ಮರುದಿನ ಹಸು ಮತ್ತೆ ಅದೇ ಕಾಡಿಗೆ ಹೋಯಿತು. ಅಲ್ಲಿ ಮತ್ತೊಂದು ಹಸು ಸಿಕ್ಕಿತು. ಅದು ಕಾಡಿನ ಹಸು. ಅಲ್ಲೇ ತಿಂದು ಅಲ್ಲೇ ಮಲಗುತ್ತದೆ. ಸಾಯಂಕಾಲದವರೆಗೆ ಎರಡೂ ಜೊತೆ ಜೊತೆಯಾಗಿ ಮೇದವು. ಸಂಜೆಯಾದೊಡನೆ ನಾಡಿನ ಹಸು ಹೊರಟಿತು. ಕಾಡಿನ ಹಸು ಕೇಳಿತು _*ಮನೆಗೆ ಯಾಕೆ ಹೋಗಬೇಕು? ಇಲ್ಲೇ ಇದ್ದು ಬಿಡು. ಮನೆಯಲ್ಲೇನೂ ಹಿಂಡಿ _ ಹೊಟ್ಟು _ ಬೂಸಾ ಇಲ್ಲ. ಅಷ್ಟು ದೂರ ನಡೆಯಬೇಕು. ಯಾಕೆ ಈ ಶ್ರಮ? ಹಾಯಾಗಿ ಇದ್ದು ಬಿಡೋಣ.*
ನಾಡಿನ ಹಸು ಹೇಳಿತು _ *ಹೌದು...ನನ್ನ ಯಜಮಾನ ಬಡವ. ಅವನಿಂದ ನನಗೇನೂ ಹೊಟ್ಟೆಗೆ ಸಿಗುವುದಿಲ್ಲ. ಆದರೂ ಪ್ರತಿದಿನ ನನ್ನ ಕಾಲು ತೊಳೆದು, ಕುಂಕುಮ ಹಚ್ಚಿ *ನೀನೇ ನನ್ನ ಸರ್ವಸ್ವ* ಎನ್ನುತ್ತಾನೆ. ಆ ಮಾತು ನನಗೆ ಖುಷಿ ಕೊಡುತ್ತದೆ.
ನಾಡಿನ ಹಸುವಿನ ಮಾತು ಕೇಳಿ ಹಸುವಿಗೆ ನಗು ಬಂದಿರಬೇಕು. ಮಾತಿನಿಂದೇನು ಹೊಟ್ಟೆ ತುಂಬುವುದೇ? ಎನಿಸಿರಬೇಕು. ಆದರೆ ಸಿಹಿ ಮಾತಿನ ಅನುಭವವೇ ಇಲ್ಲದ ಆ ಕಾಡುಪಶುವಿಗೆ ಮಾತಿನ ಸವಿ ಏನು ಗೊತ್ತು?
*ಇಂದಿನ ಬದುಕು ಯಾಂತ್ರಿಕವಾಗಿದೆ. ದಿನವೆಲ್ಲ ದುಡಿತ. ಸಂಜೆ, ಸಂಡೆ ಒಂದಷ್ಟು ಹೊತ್ತು ಟಿವಿ ಯ ಸಹವಾಸ. ಮನೆಗೆ ನೆಂಟರು ಬಂದರೆ ಎಷ್ಟು ಬೇಗ ಹೊರಡುತ್ತಾರೋ ಅಷ್ಟು ಕ್ಷೇಮ. ಬಾಯಿತುಂಬ ಮಾತನಾಡಿ, ಹೊಟ್ಟೆ ತುಂಬಾ ನಗುವವರೇ ಆರೋಗ್ಯವಂತರು. "ಅದರಲ್ಲಿ ಪರೋಪಕಾರ ಭಾವನೆಯು ತುಂಬಿಕೊಂಡರೆ ಅದೂ ಒಂದು ಧಾರ್ಮಿಕ ತಪಸ್ಸು."*
🍁🙏🙏🙏🍁
No comments:
Post a Comment