Monday, 16 December 2019

ಸುಬ್ರಮಣ್ಯ

ನಾಳೆ ಷಷ್ಠಿ ಪ್ರಯುಕ್ತ ಒಂದು ಚಿಕ್ಕ ಮಾಹಿತಿ ವಿಚಾರ
ನಿಮ್ಮ ಮುಂದೆ.

ಪ್ರಮುಖವಾಗಿ ವಾಲ್ಮೀಕಿ ರಾಮಾಯಣದಲ್ಲಿನ ಬಾಲಕಾಂಡದ ಮೂವತ್ತೇಳನೇ ಸರ್ಗ, ಮಹಾಭಾರತದ ವನಪರ್ವ ಮತ್ತು ಸ್ಕಾಂದ ಪುರಾಣಗಳಲ್ಲಿ, ದೇವಸೇನಾಧಿಪತಿಯೆಂದೂ ಕರೆಯಲ್ಪಡುವ ಶ್ರೀ ಸುಬ್ರಹ್ಮಣ್ಯನ ಜನ್ಮವೃತ್ತಾಂತಗಳು ಅಲ್ಪ-ಸ್ವಲ್ಪ ವೈವಿಧ್ಯತೆಯೊಂದಿಗೆ, ಮೂಲ ಕಥೆಗೆ ಯಾವುದೇ ವ್ಯತ್ಯಯವಿಲ್ಲದಂತೆ ನಿರೂಪಿಸಲ್ಪಟ್ಟಿವೆ.

ತಾರಕಾಸುರನ ಉಪಟಳವನ್ನು ತಾಳಲಾರದೆ ದೇವ-ದೇವತೆಗಳು ಪರಶಿವನಲ್ಲಿ ಮೊರೆಯಿಡುತ್ತಾರೆ. ಇದಕ್ಕೆ ಕಾರಣ, ತಾರಕಾಸುರನು ಪರಶಿವನಿಂದ ಪಡೆದಿದ್ದ ಒಂದು ಕುತ್ಸಿತವಾದ ವರ. ಅದೇನೆಂದರೆ, ಪರಶಿವನ ಪುತ್ರನನ್ನು ಬಿಟ್ಟು ಬೇರಾರಿಂದಲೂ ಆತನಿಗೆ ಮರಣವಿಲ್ಲವೆಂಬುದು. ತಾರಕಾಸುರನು ಈ ವರವನ್ನು ಪಡೆಯುವ ವೇಳೆಗಾಗಲೆ ಪರಶಿವನ ಪತ್ನಿ ಸತಿಯು ತನ್ನ ಪತಿ ಹಾಗೂ ತನಗೇ ತನ್ನ ತಂದೆ ದಕ್ಷಪ್ರಜಾಪತಿಯು ಅವಮಾನಿಸಿದನೆಂದು ಅಗ್ನಿಯಲ್ಲಿ ಹಾರಿ ಪ್ರಾಣ ತೊರೆದಿದ್ದಳು. 

ಇದನ್ನು ಅರಿತಿದ್ದ ತಾರಕಾಸುರನು, ಆ ವೇಳೆಯಲ್ಲಿ ತಪೋನಿರತನಾಗಿದ್ದ ಪರಶಿವನಿಗೆ ಸಂತಾನ ಪ್ರಾಪ್ತವಾಗದೆಂಬ ದೃಢ ಅಭಿಪ್ರಾಯದಿಂದ ತನ್ನ ವರವನ್ನು ಉಪಾಯವಾಗಿ ಪಡೆದಿದ್ದ. 

ಇದರ ಮರ್ಮ ಪರಶಿವ ಹಾಗೂ ಇತರ ದೇವತೆಗಳಿಗೆ ತಿಳಿದಿತ್ತು. ತಾರಕಾಸುರ, ತನ್ನ ಹಿರಿಯ ಸಹೋದರರಾದ ಶೂರಪದ್ಮ ಮತ್ತು ಸಿಂಹಮುಖರಿಂದೊಡಗೂಡಿಕೊಂಡು, ಇತರ ಅಸುರರ ಸಹಾಯದೊಂದಿಗೆ ಇಂದ್ರನಾದಿಯಾಗಿ ಎಲ್ಲ ದೇವತೆಗಳನ್ನು ಸೋಲಿಸಿ ಸಜ್ಜನರೆಲ್ಲರನ್ನೂ ಪೀಡಿಸತೊಡಗಿದ್ದ. 

ಆತನ ಭೀಭತ್ಸ ಚಟುವಟಿಕೆಗಳನ್ನು ತಡೆಯುವವರಿಲ್ಲದಂತಾಯಿತು. ಸತೀ ದೇವಿಯು ಹಿಮವಂತನ ಪುತ್ರಿಯಾಗಿ ಪುನಃ ಜನ್ಮತಳೆದು ತನ್ನ ಪೂರ್ವಜನ್ಮದ ಪರಶಿವನ ಪತ್ನಿಯಾಗಬೇಕೆಂಬ ಹಂಬಲವನ್ನು ಹಸಿಯಾಗಿಯೇ ಉಳಿಸಿಕೊಂಡು ಪುನಃ ತಪೋನಿರತಳಾಗುತ್ತಾಳೆ. 

ಪರಶಿವನಿಂದ ಒಮ್ಮೆ ತಿರಸ್ಕೃತಳಾದಾಗ ಆಕೆ ಮತ್ತೆ ಅಗ್ನಿಪ್ರವೇಶಮಾಡಲು ಉದ್ಯುಕ್ತಳಾಗುತ್ತಾಳೆ. ಆ ಸಂದರ್ಭದಲ್ಲಿ ತನ್ನ ಮನಸ್ಸನ್ನು ಬದಲಾಯಿಸಿಕೊಂಡ ಶಿವನು ಆಕೆಯನ್ನು ಮದುವೆಯಾಗುತ್ತಾನೆ. 

ಶಿವ-ಪಾರ್ವತಿಯರು ಏಕಾಂತದಲ್ಲಿ ಹಲವಾರು ವರ್ಷಗಳನ್ನು ಕಳೆದರು ಸಹ ಅವರಿಗೆ ಸಂತಾನ ಪ್ರಾಪ್ತಿಯಾಗಲಿಲ್ಲ. ಮೇಲಾಗಿ ಅವರೀರ್ವರೂ ತಪಸ್ಸಿನಲ್ಲೇ ಹೆಚ್ಚು ಆಸಕ್ತರಾಗಿರುವಂತೆ ಕಾಣಿಸುತ್ತದೆ. 

ಆಗ ದೇವತೆಗಳು ಪರಶಿವನ ಮನಸ್ಸನ್ನು ವಿಚಲಿತಗೊಳಿಸುವ ಉದ್ದೇಶದಿಂದ ಮನ್ಮಥನನ್ನು ಆ ಕಾರ್ಯಕ್ಕೆ ನೇಮಿಸುತ್ತಾರೆ. ಮನ್ಮಥನು ತನ್ನ ಬಾಣವನ್ನು ಪುಷ್ಪಹಾರವಾಗಿ ಪ್ರಯೋಗಿಸಿದಾಗ ಕೋಪಗೊಂಡ ಶಿವನು ತನ್ನ ಮೂರನೆ ಕಣ್ಣನ್ನು ತೆರೆದು ಮನ್ಮಥನನ್ನು ಧಗಿಸಿಬಿಡುತ್ತಾನೆ. 

ಕೊನೆಗೊಮ್ಮೆ ಶಿವನ ವೀರ್ಯವು ಸ್ಖಲನಗೊಳ್ಳುವಾಗ ಅದರ ಶಾಖವನ್ನು ಪಾರ್ವತೀ ದೇವಿಯು ಭರಿಸದಾದಳು. ಆದ್ದರಿಂದ ಶಿವನ ವೀರ್ಯವನ್ನು ಧರಿಸುವಂತೆ ಅಗ್ನಿಯನ್ನು ದೇವತೆಗಳು ಕೇಳಿಕೊಳ್ಳುತ್ತಾರೆ.

 ಆದರೆ ಅಗ್ನಿಗೂ ಆ ವೀರ್ಯದ ಶಾಖವನ್ನು ತಡೆಯದಾದಾಗ ಅದನ್ನು ಅವನು ಗಂಗೆಯಲ್ಲಿ ವಿಸರ್ಹಿಸುತ್ತಾನೆ. ಒಂದು ಮೂಲದ ಪ್ರಕಾರ ಗಂಗೆಯೂ ಅದನ್ನು ಭರಿಸದಾದಳು. ಆಕೆಯು ಅದನ್ನು ಶ್ವೇತಪರ್ವತದ ಮೇಲೆ ವಿಸರ್ಜಿಸಿದಳು. 

ಅದರಿಂದ ಉತ್ಪನ್ನನಾದ ಶಿಶುವೇ ಶ್ರೀ ಸುಬ್ರಹ್ಮಣ್ಯ. ವೀರ್ಯಸ್ಖಲನದಿಂದ ಉತ್ಪನ್ನನಾದ ಕಾರಣ ಈತನು ಸ್ಕಂದನಾಮಧೇಯನಾದ. ಈತನು ಕೃತ್ತಿಕಾ ನಕ್ಷತ್ರದಲ್ಲಿ ಜನಿಸಿದನು. ಕೃತ್ತಿಕಾನಕ್ಷತ್ರವು ಆರು ನಕ್ಷತ್ರಗಳ ತೇಜಃಪುಂಜ. 

ಇವರೆಲ್ಲರು ಮಗುವಿಗೆ ಹಾಲುಣಿಸಲು ಬಯಸಿದರಾದ್ದರಿಂದ ಈ ಮಗುವು ತನ್ನ ದೈವೀಕ ಶಕ್ತಿಯಿಂದ ಆರು ಮುಖಗಳನ್ನು ಪ್ರಕಟಪಡಿಸಿ ಆರು ತಾಯಂದಿರ ಹಾಲನ್ನು ಸೇವಿಸುತ್ತಾನೆ. ಆದ್ದರಿಂದಲೇ ಈತನು ಷಣ್ಮುಖ. 

ಕೃತ್ತಿಕಾ ನಕ್ಷತ್ರದಲ್ಲಿ ಜನಿಸಿದ ಕಾರಣ ಈತ ಕಾರ್ತಿಕೇಯನೆಂಬ ಹೆಸರನ್ನು ಪಡೆದನು. ಅಗ್ನಿದೇವನು ಈತನಿಗೆ ಈಟಿಯಂತಿರುವ ’ವೇಲ್’ ಎಂಬ ಆಯುಧವನ್ನು ನೀಡುತ್ತಾನೆ. ಆದ್ದರಿಂದ ಈತನು ವೇಲಾಯುಧನೆನ್ನಿಸಿಕೊಂಡನು. 

ಜನ್ಮತಃ ಅತ್ಯಂತ ಸುಂದರವಾದ ಮುಖದಿಂದ ಅವತರಿಸಿದ್ದ ಈ ಕಂದನನ್ನು ಮುರುಗನೆಂದೂ ಸಂಬೋಧಿಸಲಾಗುತ್ತದೆ. ದೇವತೆಗಳ ಅಪೇಕ್ಷೆಯಂತೆ ಈತನು ದೇವತೆಗಳ ಸೇನೆಗೆ ಅಧಿಪತಿಯಾಗಿ ತನ್ನ ವೇಲಾಯುಧದಿಂದ ತಾರಕಾಸುರನನ್ನು ಇತರ ಅಸುರರೂಂದಿಗೆ ಧ್ವಂಸಮಾಡುತ್ತಾನೆ.  

ಎಲ್ಲಾರಿಗು ಸುಬ್ರಹ್ಮಣ್ಯ ಷಷ್ಟಿಯ ಶುಭಾಶಯಗಳು

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು

No comments:

Post a Comment