ಜಗದ್ಗುರು ಶ್ರೀ ಆದಿ ಶಂಕರಾಚಾರ್ಯ ವಿರಚಿತ ಶ್ರೀ ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ - ಪೂರ್ವ ಪೀಠಿಕೆ - ೧
ಈ ಸ್ತೋತ್ರವನ್ನು ಮತ್ತು ಅದರ ಅರ್ಥವನ್ನು ಅರಿಯುವ ಮುನ್ನ ನಾವು ಈ ಸ್ತೋತ್ರದಲ್ಲಿ ಉಲ್ಲೇಖಗೊಂಡಿರುವ ' ಶ್ರೀ ನರಸಿಂಹ ' ಅವತಾರದ ವೃತ್ತಾಂತವನ್ನು ಕ್ಲುಪ್ತವಾಗಿ ಅರಿಯುವ ಕಿಂಚಿತ್ ಅವಶ್ಯಕತೆಯಿದೆ. ಹಾಗಾಗಿ ಈ ಪೂರ್ವ ಪೀಠಿಕೆ.
ಶ್ರೀ ವೈಕುಂಠ 'ಶ್ರೀಮನ್ನಾರಾಯಣ' ನ ಆವಾಸ ಸ್ಥಾನ. ಹಾಗೆ ನೋಡಿದರೆ ಇಡೀ ಬ್ರಹ್ಮಾಂಡವೇ ಶ್ರೀ ಹರಿಯ ಆವಾಸಸ್ಥಾನವಾದರೂ ಪುರಾಣಗಳು ವೈಕುಂಠವನ್ನು ಶ್ರೀ ಹರಿಯ ಆವಾಸ ಸ್ಥಾನವೆಂದೂ, ಕೈಲಾಸವನ್ನು ಭಗವಾನ್ ಶಂಕರನ ಆವಾಸ ಸ್ಥಾನವೆಂದೂ ಮತ್ತು ಬ್ರಹ್ಮ ಲೋಕವು ಬ್ರಹ್ಮನ ಸ್ಥಾನವೆಂದೂ ಹೇಳಲ್ಪಟ್ಟಿದೆ. ಅಂತಹ ವೈಕುಂಠಕ್ಕೆ ಏಳು ದ್ವಾರಗಳೆಂದೂ ಮತ್ತು ಅದರ ಪ್ರಧಾನ ದ್ವಾರಗಳಲ್ಲಿ ' ಜಯ ಮತ್ತು ವಿಜಯ' ಎಂಬ ಇಬ್ಬರು ದ್ವಾರಪಾಲಕರು ಎಂದೂ ಪುರಾಣಗಳಲ್ಲಿ ಹೇಳಲ್ಪಟ್ಟಿದೆ. ಅವರಿಗೆ ಶ್ರೀ ಹರಿಯ ಹೊರತು ಬೇರೇನೂ ಗೊತ್ತೇ ಇರುವುದಿಲ್ಲ. ತಾವು ಶ್ರೀ ಹರಿಯ ವೈಕುಂಠದ ದ್ವಾರಪಾಲಕರೆಂದು ಮತ್ತು ತಾವು ಶ್ರೀ ಹರಿಯ ಬಹು ಆಪ್ತರೆಂದು ಬಹಳ ಸ್ವಾಭಿಮಾನ. ಕಾಲಾನುಕಾಲಕ್ಕೆ ಅದು ದುರಭಿಮಾನವಾಗಿ ಅವರಲ್ಲಿ ಅಹಂಕಾರದ ರೂಪವನ್ನು ತಳೆಯಿತು.
ಅಂತಹ ಸಂದರ್ಭದಲ್ಲಿ ಸನಕ ಮತ್ತು ಸನಂದ ಎಂಬ ಋಷಿಗಳ ನೇತೃತ್ವದಲ್ಲಿ ಹಲವಾರು ಋಷಿಮುನಿಗಳು ಶ್ರೀ ಹರಿಯ ದರ್ಶನಕ್ಕೆ ವೈಕುಂಠಕ್ಕೆ ಬರುತ್ತಾರೆ. ಮೊದಲೇ ಅಹಂಕಾರದಿಂದ ತುಂಬಿರುವ ಜಯ ವಿಜಯರು ' ಶ್ರೀ ಹರಿ ' ವಿಶ್ರಾಂತಿಯಲ್ಲಿದ್ದಾರೆ ಎಂದು ಹೇಳಿ, ಅವರನ್ನು ಶ್ರೀ ಹರಿಯ ದರ್ಶನಕ್ಕೆ ಒಳಬಿಡಲು ನಿರಾಕರಿಸುತ್ತಾರೆ. ಅಂಗಲಾಚಿ ಬೇಡಿದರೂ ಕನಿಕರಿಸದೆ ಆ ಋಷಿಮುನಿಗಳಿಗೆ ಹರಿದರ್ಶನವನ್ನು ನಿರಾಕರಿಸುತ್ತಾರೆ. ಇದರಿಂದ ಕುಪಿತಗೊಂಡು ಅವರು ಜಯವಿಜಯರಿಗೆ " ನೀವು ಹರಿಯ ಸನಿಹದಲ್ಲಿದ್ದೀರಿ ಮತ್ತು ಹರಿಗೆ ಬಹಳ ಆಪ್ತರೆಂದು ಗರ್ವಿತರಾಗಿ ಅಹಂಕಾರದಿಂದ ಹೀಗೆ ವರ್ತಿಸುತ್ತಿದ್ದೀರಿ. ನೀವು ಹರಿಯಿಂದ ದೂರವಾಗಿಹೋಗಿ ಎಂದು ಶಪಿಸುತ್ತಾರೆ. ಆ ಶಾಪವನ್ನು ಕೇಳಿ, ಹರಿ ಮತ್ತು ವೈಕುಂಠವನ್ನು ಬಿಟ್ಟು ಬೇರೇನನ್ನೂ ಅರಿಯದ ಜಯವಿಜಯರು ತತ್ತರಿಸಿಹೋಗುತ್ತಾರೆ. ಆ ಸಮಯಕ್ಕೆ ದರ್ಶನವಿತ್ತ ಶ್ರೀ ಲಕ್ಷ್ಮೀ ನಾರಾಯಣರ ಬಳಿ ಸಾರಿ ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಪಮೆ ಬೇಡಿ ಶಾಪವಿಮೋಚನೆಯ ಮಾರ್ಗವನ್ನು ಬೇಡುತ್ತಾರೆ. ಆಗ ಶ್ರೀಮನ್ನಾರಾಯಣನು ಅವರಿಗೆ " ಮುನಿಶಾಪದಿಂದ ಬಿಡುಗಡೆಯಿಲ್ಲ. ನೀವು ನನ್ನಿಂದ ದೂರವಾಗಲೇ ಬೇಕು. ಆದರೆ ಇಲ್ಲಿ ನಿಮಗೆರಡು ಪರ್ಯಾಯಗಳನ್ನು ನೀಡುವೆ. ಒಂದು ನೀವು ನನ್ನ ಶತ್ರುಗಳಾಗಿ ಮೂರು ಜನ್ಮವೆತ್ತಿ, ನನ್ನಿಂದಲೇ ಹತರಾಗಿ ವೈಕುಂಠ ಸೇರುವಿರೋ ಅಥವಾ ನನ್ನ ಭಕ್ತ ಮತ್ತು ಮಿತ್ರರಾಗಿ ಏಳು ಜನ್ಮಗಳನ್ನು ಮುಗಿಸಿ ವೈಕುಂಠ ಸೇರುವಿರೋ" ಎಂದು ಕೇಳಲು ಅವರು " ಸ್ವಾಮೀ ನಿನ್ನಿಂದ ಆಗಲಿ ಬಹಳ ದಿನ ಇರಲಾರೆವು ಹಾಗಾಗಿ ನಿನ್ನ ಶತ್ರುಗಳಾದರೂ ಚಿಂತೆಯಿಲ್ಲ, ನಿನ್ನಿಂದಲೇ ಹತರಾಗಿ ಮೂರೇ ಜನ್ಮದಲ್ಲಿ ನಿನ್ನ ಸೇವೆಗೆ ಹಿಂತಿರುಗುವ ಕೃಪೆ ತೋರು" ಎಂದು ಬೇಡಲು ಆಗ ದಯಾಮಯನಾದ ಆ ಸ್ವಾಮಿ ' ತಥಾಸ್ತು ' ಎನ್ನಲು, ಅವರುಗಳು ಶ್ರೀ ವೈಕುಂಠದಿಂದ ಪತಿತರಾಗಿ ಈ ಭೂಮಿಯಲ್ಲಿ ಜನ್ಮವೆತ್ತುತ್ತಾರೆ . ಮೊದಲ ಜನ್ಮದಲ್ಲಿ ಸತ್ಯ ಯುಗದಲ್ಲಿ ಕಶ್ಯಪ ಮುನಿಯ ಮಕ್ಕಳಾದ 'ಹಿರಣ್ಯಾಕ್ಷ ಮತ್ತು ಹಿರಣ್ಯಕಶಿಪು' ಎಂದೂ ತ್ರೇತಾ ಯುಗದಲ್ಲಿ ' ರಾವಣ ಮತ್ತು ಕುಂಭಕರ್ಣ' ಎಂದೂ ಮತ್ತು ದ್ವಾಪರ ಯುಗದಲ್ಲಿ ' ಶಿಶುಪಾಲ ಮತ್ತು ದಂತವಕ್ತ್ರ ' ಎಂದೂ ಶ್ರೀ ಹರಿಯ ವೈರಿಗಳಾಗಿ ಜನಿಸಿ ಶ್ರೀ ಹರಿಯಿಂದಲೇ ಹತರಾಗಿ ವೈಕುಂಠವನ್ನು ಸೇರುತ್ತಾರೆ.
ಮೊದಲ ಜನ್ಮದಲ್ಲಿ ಹಿರಣ್ಯಾಕ್ಷನನ್ನು ಶ್ರೀ ಹರಿ ' ವರಾಹ ಅವತಾರ' ದಿಂದ ಸಂಹರಿಸಿದರೆ ಹಿರಣ್ಯಕಶಿಪನನ್ನು ' ನರಸಿಂಹ ' ಅವತಾರದಲ್ಲಿ ಸಂಹರಿಸುತ್ತಾನೆ. ಇಲ್ಲಿ ನಾವು ಶ್ರೀ ಹರಿಯ ಈ ' ನರಸಿಂಹ ' ಅವತಾರದ ಪೂರ್ವ ವೃತ್ತಾಂತವನ್ನು ನೋಡುವ.
ಜಗದ್ಗುರು ಶ್ರೀ ಆದಿ ಶಂಕರಾಚಾರ್ಯ ವಿರಚಿತ ಶ್ರೀ ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ - ಪೂರ್ವ ಪೀಠಿಕೆ - ೨
ಕಶ್ಯಪ ಮುನಿ ಚತುರ್ಮುಖ ಬ್ರಹ್ಮನ ಮಾನಸ ಪುತ್ರ. ಸೃಷ್ಟಿಕಾರ್ಯದಲ್ಲಿ ತನ್ನ ತಂದೆಯಾದ ಬ್ರಹ್ಮನಿಗೆ ಒದಗಲು ನಿಯಮಿಸಲ್ಪಟ್ಟವನು, ಮಹಾಜ್ಞಾನಿ. ಸದಾ ಪರಮೇಶ್ವರಾಭಿಮುಖವಾದ ಮಾನಸಿಕ ಸ್ಥಿತಿಯಲ್ಲಿರುವವನು. ಅವನಿಗೆ ಇಬ್ಬರು ಪತ್ನಿಯರು. ಒಬ್ಬಾಕೆ ಅದಿತಿ ಮತ್ತು ಮತ್ತೊಬ್ಬಾಕೆ ದಿತಿ. ಒಂದು ದಿನ ಮುಸ್ಸಂಜೆಯ ಸಮಯ. ಕಶ್ಯಪ ಮುನಿ ಸಂಧ್ಯಾವಂದನೆಯನ್ನು ಮುಗಿಸಿ ತನ್ನ ಕುಟೀರದ ಮುಂದೆ ಒಂದು ಮರದ ಕೆಳಗೆ ಧ್ಯಾನದಲ್ಲಿ ಜಪಕ್ಕೆ ಕುಳಿತಿರುವಾಗ, ಅವನ ಪತ್ನಿಯಾದ ದಿತಿಯು ಅವನ ಬಳಿ ಸಾರಿ ತನ್ನ ಕಾಮಾಸಕ್ತಿಯನ್ನು ವ್ಯಕ್ತಪಡಿಸಿದಾಗ, ಆ ಸಾತ್ವಿಕ ಮುನಿಯು " ಇಂತಹ ಆಸೆ ಈ ಅವೇಳೆಯಲ್ಲಿ ಸಲ್ಲ. ಅದು ಮಹಾಪಾಪ ಮತ್ತು ಅಪರಾಧ" ಎಂದು ಪರಿಪರಿಯಾಗಿ ಹೇಳಲು, ಅವನ ಮಾತನ್ನು ಕೇಳದೆ ಮತ್ತೆ ಮತ್ತೆ ತನ್ನ ವಾಂಛೆಯನ್ನು ತೀರಿಸಲು ಒತ್ತಾಯಿಸಲು, ಒಂದು ಘಳಿಗೆ ಕಣ್ಮುಚ್ಚಿ ಕುಳಿತ ಆ ಮುನಿ ತನ್ನ ತಪಃಶಕ್ತಿಯಿಂದ ವಿಧಿಲಿಖಿತದ ದೃಶ್ಯ ಕಂಡು ಅವಳ ಹಿಂದೆ ನಡೆಯುತ್ತಾನೆ.
ಅವೇಳೆಯಲ್ಲಿ ಕಾಮಾಸಕ್ತಿಯಿಂದ ಒಂದಾದ ಆ ದಿತಿಯ ಗರ್ಭದಲ್ಲಿ ಜನಿಸಿದವರೇ 'ಹಿರಣ್ಯಾಕ್ಷ ಮತ್ತು ಹಿರಣ್ಯಕಶಿಪ' ರೆಂಬ ದೈತ್ಯರು. ಅವೇಳೆಯ ಸಮಾಗಮದಿಂದ ಅವರಿಬ್ಬರೂ ರಾಕ್ಷಸ ಪ್ರವೃತ್ತಿಯುಳ್ಳವರಾಗಿ, ಕ್ಷುದ್ರ ಶಕ್ತಿಗಳನ್ನು ಕುರಿತು ತಪಸ್ಸನ್ನು ಮಾಡಿ ತಮ್ಮ ತಪಃಶಕ್ತಿಯಿಂದ ಉನ್ಮತ್ತರಾಗಿ ಲೋಕಕಂಟರಾದರು. ಹಾಗೆ ದುಷ್ಟನಾದ ಹಿರಣ್ಯಾಕ್ಷನನ್ನು ಸಂಹರಿಸಲು ಶ್ರೀ ಹರಿ ಎತ್ತಿದ ಅವತಾರವೇ ' ವರಾಹಾವತಾರ ' ತನ್ನ ಸಹೋದರನ ವಧೆಯಿಂದ ಕುಪಿತನಾದ ತೀವ್ರವಾಗಿ ವಿಷ್ಣುದ್ವೇಷವನ್ನು ಬೆಳೆಸಿಕೊಂಡು, ಶ್ರೀಹರಿಯನ್ನು ಸಂಹರಿಸಲು ಬೇಕಾದ ಶಕ್ತಿಯನ್ನು ಪಡೆಯಲು ಘೋರತಮ ತಪಸ್ಸನ್ನು ಮಾಡಿ ಚತುರ್ಮುಖ ಬ್ರಹ್ಮನಿಂದ ತನಗೆ ಸಾವೇ ಬಾರದಂತೆ ವರ ಬೇಡುತ್ತಾನೆ. ಹುಟ್ಟಿದ ಪ್ರತಿಪ್ರಾಣಿಯೂ ಸಾಯಲೇಬೇಕಾಗಿರುವಾಗ ಅಂತಹ ವರವನ್ನು ನೀಡಲು ಸಾಧ್ಯವಿಲ್ಲವೆಂದು ಬ್ರಹ್ಮ ಅರುಹಲು, ಹಾಗಾದರೆ ತನಗೆ, ನರರಿಂದಾಗಲೀ, ಪ್ರಾಣಿಗಳಿಂದಾಗಲೀ, ಹಗಲಿನಲ್ಲಾಗಲೀ ರಾತ್ರಿಯಲ್ಲಾಗಲೀ, ಭೂಮಿಯ ಮೇಲಾಗಲೀ, ಅಂತರಿಕ್ಷದಲ್ಲಾಗಲೀ, ಮನೆಯ ಒಳಗಾಗಲೀ, ಹೊರಗಾಗಲೀ ಸಾವು ಬರಬಾರದೆಂದು ಕೇಳಿ ವರ ಪಡೆಯುತ್ತಾನೆ.
ನಂತರದ ದಿನಗಳಲ್ಲಿ ಪರಮ ಭಕ್ತನಾದ ' ಪ್ರಹ್ಲಾದ ' ಅವನ ಮಗನಾಗಿ ಜನಿಸಿ, ಹರಿಭಕ್ತಿಯಲ್ಲಿ ಮುಳುಗಿ ತಂದೆಯ ಹರಿದ್ವೇಷವನ್ನು ವಿರೋಧಿಸುತ್ತಾನೆ. ಮಗನ ಅಂತಹ ವಿರೋಧ ಹಿರಣ್ಯಕಶಿಪುವಿನಲ್ಲಿ ಹರಿದ್ವೇಷ ಉತ್ತುಂಗಕ್ಕೇರಿ ಚರಮ ಘಟ್ಟವನ್ನು ತಲುಪಿದಾಗ ' ನರಸಿಂಹ ' ಅವತಾರವಾಗಿ ಹಿರಣ್ಯಕಶಿಪುವಿನ ವಧೆಯಾಗುವುದು 'ಪ್ರಹ್ಲಾದ ಚರಿತ್ರೆಯಲ್ಲಿ ಮತ್ತು ಭಾಗವತ ಪುರಾಣ' ದಲ್ಲಿ ವಿಸ್ತಾರವಾಗಿ ಉಲ್ಲೇಖವಾಗಿದೆ. ಅವನನ್ನು ಸಂಹಾರಮಾಡಲು ಅತಿಘೋರವಾದ ನರಸಿಂಹ ಅವತಾರವನ್ನು ಎತ್ತಿದ ಆ ಶ್ರೀಹರಿಯನ್ನು ಶಾಂತಗೊಳಿಸಲು ದೇವತೆಗಳೆಲ್ಲಾ ಸೇರಿ ಶ್ರೀ ಲಕ್ಷ್ಮಿಯನ್ನು ಕರೆತಂದು ಅವನ ಮಡಿಲಲ್ಲಿ ಕೂರಿಸಿದಾಗ ಶಾಂತನಾದ ಶ್ರೀ ಹರಿ, ಶ್ರೀ ಲಕ್ಷ್ಮೀ ನರಸಿಂಹನಾಗಿ ಪ್ರಹ್ಲಾದನ ಭಕ್ತಿಗೆ ಮೆಚ್ಚಿ ಅವನನ್ನು ಅನುಗ್ರಹಿಸಿ, ಅಲ್ಲಿ ನೆರೆದಿದ್ದ ಸಕಲ ದೇವತಾ ಸಮೂಹವನ್ನೂ ಅನುಗ್ರಹಿಸಿದ ಎಂದು ಪುರಾಣಗಳು ಸಾರುತ್ತವೆ. ಪರಮ ಸಾತ್ವಿಕರಿಗೆ ಅನ್ಯಾಯದ ವಿರುದ್ಧ ಕೋಪಬಂದಾಗ ಏನಾಗುತ್ತದೆ ಎನ್ನುವುದಕ್ಕೆ ಈ ಪ್ರಸಂಗ ಒಂದು ನಿದರ್ಶನವೂ ಹೌದು.
ನರಸಿಂಹ ಅವತಾರದ ಈ ಘಟನೆಗಳು ನಡೆದದ್ದು ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ' ಅಹೋಬಲ' ವೆಂಬ ಪುಣ್ಯ ಕ್ಷೇತ್ರದಲ್ಲಿ. ಇಂದಿಗೂ ನರಸಿಂಹ ಅವತರಿಸಿದ ಉಗ್ರಸ್ತಂಭವು ಅಹೋಬಲದ ' ಜ್ಹ್ವಾಲಾ ನರಸಿಂಹ ' ದೇವಾಲಯದ ಬಳಿಯೇ ಇದೆ. ಅಂತಹ ಶ್ರೀ ಲಕ್ಷ್ಮೀ ನರಸಿಂಹನ ಕರಾವಲಂಬನದ ಕೃಪೆಗೆ ಪಾತ್ರರಾಗಿ ಈ ಸಂಸಾರದ ದುಃಖದಿಂದ ಮುಕ್ತರಾಗುವ ಒಂದು ಸೂಕ್ತ ಮಾರ್ಗವನ್ನು ಶ್ರೀ ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರದ ಮೂಲಕ ನಮಗೆ ನೀಡಿದ್ದಾರೆ ಜಗದ್ಗುರು ಶ್ರೀ ಆದಿಶಂಕರಾಚಾರ್ಯರು. ಈ ಸ್ತೋತ್ರ ರತ್ನವನ್ನು ಶ್ರೀ ಶಂಕರಾಚಾರ್ಯರು ಈ ಅಹೋಬಲಕ್ಷೇತ್ರದ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯದಲ್ಲಿ ರಚನೆ ಮಾಡಿದರೆಂದು ಪ್ರತೀತಿ ಇದೆ. ಈ ಸ್ತೋತ್ರದ ಪ್ರತಿ ನಾಲ್ಕನೆಯ ಸಾಲಿನ ಅಂತ್ಯಕ್ಕೆ ' ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ' ಎಂದು ಬೇಡಿದ್ದಾರಾದ್ದರಿಂದ ಇದಕ್ಕೆ 'ಶ್ರೀ ಲಕ್ಷ್ಮೀನರಸಿಂಹ ಕರಾವಲಂಬನ' ಸ್ತೋತ್ರವೆಂದೂ ಉಲ್ಲೇಖವಿದೆ. ನಾಳೆಯಿಂದ ಈ ಶ್ರೀ ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ ಮತ್ತು ಅದರ ಅರ್ಥವನ್ನು ಅರಿತು ಆನಂದಿಸೋಣ ಮತ್ತು ಪುನೀತರಾಗೋಣ.
ರವಿ ತಿರುಮಲೈ ಅವರ ಲೇಖನ
ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು
No comments:
Post a Comment