Monday, 16 December 2019

"ನರಕ ಚತುರ್ದಶಿ"

ತ್ರೇತಾಯುಗದ ಮಧ್ಯದಲ್ಲಿ ನರಕಾಸುರನೆಂಬ ಅಸುರನಿಗೆ ಭೂದೇವಿಯು ಜನ್ಮ ನೀಡುತ್ತಾಳೆ. ಅಸುರೀ ಪ್ರವೃತ್ತಿಯವನಾದ ಈತ ಒಮ್ಮೆ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ ತನಗೆ ತನ್ನ ತಾಯಿಯಿಂದ ಮಾತ್ರವೇ ಮರಣ ಬರಬೇಕು, ಮತ್ತಾರಿಂದಲೂ ಅಲ್ಲ ಎಂಬ ವರವನ್ನು  ಪಡೆಯುತ್ತಾನೆ. ಈ ವರದಿಂದ ಆತ ಅಸುರೀ ರಾಜ್ಯದ ಅಧಿಪತಿಯಾಗುತ್ತಾನೆ ಹಾಗೂ ದೇವಾನುದೇವತೆಗಳ ಮೇಲೆ ಧಾಳಿ ಮಾಡುತ್ತಾನೆ. 
ಮುಂದೆ ದ್ವಾಪರಯುಗದಲ್ಲಿ ಶ್ರೀಹರಿಯು ಕೃಷ್ಣನ ಅವತಾರವಾಗಿ ಭೂಲೋಕದಲ್ಲಿ ಜನ್ಮ ತಾಳುತ್ತಾನೆ. ಹೀಗಿರುವಾಗ ಒಮ್ಮೆ ಕೃಷ್ಣ ತನ್ನ ಪ್ರಿಯ ಮಡದಿಯಾದ ಸತ್ಯಭಾಮೆಯ ಜೊತೆ ಆಕಾಶದಲ್ಲಿ ಗರುಡನ ಬೆನ್ನ ಮೇಲೇರಿ ವಿಹರಿಸುತ್ತಿದ್ದಾಗ ನರಕಾಸುರ ಅವರ ದಾರಿಗೆ ತಡೆ ಒಡ್ಡುತ್ತಾನೆ ಮತ್ತು ಕೃಷ್ಣನ ಜೊತೆ ಯುದ್ಧ ಮಾಡಲು ಆರಂಭಿಸುತ್ತಾನೆ.

ಕೃಷ್ಣ ಆತನ ಮೇಲೆ ಬಾಣಗಳ ಮಳೆಯನ್ನೇ ಸುರಿಸುತ್ತಾನೆ. ಆದರೆ ನರಕಾಸುರ ತಾನು ಪಡೆದ ವರದ ಪ್ರಭಾವದಿಂದ ಅದೆಲ್ಲವನ್ನು ನಿವಾರಿಸಿಕೊಂಡು ಸತ್ಯಭಾಮೆಯ ಮೇಲೆ ಆಕ್ರಮಣ ಮಾಡುತ್ತಾನೆ. ಆಗ ಕೃಷ್ಣ ನರಕಾಸುರ ಪಡೆದ ವರವನ್ನು ನೆನಪಿಸಿಕೊಂಡು ಮತ್ತು ತನ್ನ ಪ್ರಿಯ ಪತ್ನಿಯಾದ ಸತ್ಯಭಾಮೆಯ ಮೇಲೆ ಆಕ್ರಮಣವಾಗುತ್ತಿರುವುದನ್ನು ಕಂಡು ಸತ್ಯಭಾಮೆಗೆ ತನ್ನ ಸುದರ್ಶನ ಚಕ್ರವನ್ನು ನೀಡಿ ಅದನ್ನು ನರಕಾಸುರನ ಮೇಲೆ ಪ್ರಯೋಗಿಸುವಂತೆ ತಿಳಿಸುತ್ತಾನೆ. ಅಂತೆಯೇ ಮಾಡಿದ ಸತ್ಯಭಾಮೆ ಸುದರ್ಶನ ಚಕ್ರದಿಂದ ನರಕಾಸುರನನ್ನು ಸಂಹರಿಸುತ್ತಾಳೆ. ಸತ್ಯಭಾಮೆಯು ಭೂದೇವಿಯ ಅಂಶದಿಂದ ಹುಟ್ಟಿದವಳೇ..ಹೀಗಾಗಿ ನರಕಾಸುರ ಪಡೆದ ವರದಂತೆ ತನ್ನ ತಾಯಿಯಿಂದಲೇ ಆತನ ಸಂಹಾರವಾಗುತ್ತದೆ.

ಪೀಡಕನಾದ ನರಕಾಸುರನ ಸಂಹಾರವಾದ ದಿನದಂದು ಲೋಕವು ಅಸುರನ ಉಪಟಳದಿಂದ ಮುಕ್ತಿ ಹೊಂದಿತು. ಹೀಗಾಗಿ ಪ್ರತಿ ವರ್ಷ ಆಶ್ವಯುಜ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು "ನರಕ ಚತುರ್ದಶಿ"  ಎಂದು ವಿಶ್ವದೆಲ್ಲೆಡೆ ಜನರು ಸಿಡಿಮದ್ದುಗಳನ್ನು ಸಿಡಿಸಿ ದೀಪಗಳನ್ನು ಬೆಳಗುವ ಮೂಲಕ ವಿಜಯೋತ್ಸವವನ್ನು ಆಚರಿಸುತ್ತಾರೆ.

ನಮ್ಮ ನಾಡು, ನಮ್ಮ ನುಡಿ, ನಮ್ಮ Someಸ್ಕೃತಿ

No comments:

Post a Comment