" ಧನುರ್ಮಾಸ - ಒಂದು ಚಿಂತನೆ - 17.12.19 to 14.01.20 "
ಧನುರ್ಮಾಸದ ವಿಷಯದಲ್ಲಿ " ಆಗ್ನೇಯ ಪುರಾಣ " ದ 52ನೆಯ ಅಧ್ಯಾಯದಲ್ಲಿ ಹೀಗೆ ಹೇಳಿದೆ..
" ಧನುರ್ಮಾಸದ ಉಷಃ ಕಾಲದಲ್ಲಿ ಶ್ರೀ ಹರಿಯನ್ನು ಅರ್ಚಿಸಿದರೆ ಅವನು ಸಂಪ್ರೀತನಾದ ಭಕ್ತರಿಗೆ ಅಕ್ಷಯವಾದ ಅಭೀಷ್ಟಗಳನ್ನು ಕೊಡುತ್ತಾನೆ ಈ ವಿಷಯವು ಸತ್ಯ ".
" ಆಗ್ನೇಯ ಪುರಾಣೇ ದ್ವಿಪಂಚಾಶದಧ್ಯಾಯೇ "...
ತಥಾ ತತ್ರೈವ ಧನುರ್ಮಾಸ ವಿಷಯೇ ದ್ವಿಪಂಚಾಶದಧ್ಯಾಯೇ..
ಧನುರ್ಮಾಸೇ ಹರಿಃ ಪ್ರೀತ
ಉಷಃ ಕಾಲಾರ್ಚನೇ ಧ್ರುವಮ್ ।
ದದಾತ್ಯಾಭೀಷ್ಟಮಕ್ಷಯಂ
ಸತ್ಯಮೇವ ಬ್ರವೀಮಿ ತೇ ।।
ಧನುರ್ಮಾಸದಲ್ಲಿ ಉಷಃ ಕಾಲದಲ್ಲಿ ಸ್ನಾನ ಮಾಡಬೇಕು.
ಶ್ರೀ ಹರಿಯನ್ನು ಚೆನ್ನಾಗಿ ಪೂಜಿಸಬೇಕು.
ಮೊಸರು ಮತ್ತು ಹೆಸರು ಬೇಳೆಯ ಹುಗ್ಗಿಯನ್ನು ಶ್ರೀ ಜನಾರ್ದನನಿಗೆ ಸಮರ್ಪಿಸಬೇಕು.
ಉಷಃ ಕಾಲೇ ಧನುರ್ಮಾಸೇ
ಸ್ನಾತ್ವಾ ಸಮ್ಯಗ್ ಜನಾರ್ದನಮ್ ।
ಸಮಭ್ಯರ್ಚ್ಯ ಚ ಮುದ್ಗಾನ್ನಂ
ದಧ್ನಾ ಸಹ ನಿವೇದಯ ।।
ಯಥಾ ಶಕ್ತಿ ಪ್ರಾತಃ ಕಾಲದಲ್ಲಿ ಬ್ರಾಹ್ಮಣರಿಗೆ ಭೋಜನ ಮಾಡಿಸಬೇಕು. ಇದರಿಂದ ಭಕ್ತನು ಇಹದಲ್ಲಿ ಸಕಲ ಭೋಗಗಳನ್ನು ಅನುಭವಿಸಿ ಅನಂತರ ವಿಷ್ಣುವಿನ ಸ್ಥಾನವಾದ ವೈಕುಂಠವನ್ನು ಹೊಂದುವನು.
ಭೋಜ್ಯ ದ್ವಿಜವರ್ಯಾಂಶ್ಚ
ಪ್ರಾತಃ ಕಾಲೇ ಯಥಾ ಬಲಮ್ ।
ಭುಕ್ತ್ವೇಹ ಸಕಲಾನ್ ಭೋಗಾನ್
ಪ್ರಾಪ್ಸ್ಯೆಸೇ ವೈಷ್ಣವಂ ಪದಮ್ ।।
" ಧನುರ್ಮಾಸದ ವೈಶಿಷ್ಟ್ಯ "
ಧನುರ್ಮಾಸದಲ್ಲಿ ಉಷಃ ಕಾಲದಲ್ಲಿ ಎದ್ದು ಸ್ನಾನಾದಿಗಳನ್ನು ಮಾಡಿ; ಪರಮಾತ್ಮನನ್ನು ಪೂಜಿಸಿ; ಮೊಸರು - ಶು೦ಠಿ ಇವುಗಳಿಂದ ಮನೋಹರವಾದ; ತುಪ್ಪ - ಸಕ್ಕರೆ - ಯಾಲಕ್ಕಿಗಳಿಂದ ಯುಕ್ತವಾದ; ನೆಲ್ಲೀಕಾಯಿ - ಗಡ್ಡೆಗಳಿಂದ ಕೂಡಿದ ಹುಗ್ಗಿಯನ್ನು ದೇವರಿಗೆ ಸಮರ್ಪಿಸಬೇಕು.
ಜ್ಞಾನಿಯಾದವನು ಬ್ರಾಹ್ಮಣರಿಗೆ ಭೋಜನ ಮಾಡಿಸಬೇಕು.
ಹೀಗೆ ಮಾಡಿದವನು ಯಾವ ಇಷ್ಟಾರ್ಥಗಳನ್ನು ಬಯಸುತ್ತಾನೋ ದುರ್ಲಭವಾಗಿದ್ದರೂ ಅವೆಲ್ಲವನ್ನೂ ಪಡೆಯುತ್ತಾನೆ.
ಮುಂದೆ ಅವನು ಯೋಗಿಯಾಗಿ; ಜ್ಞಾನಿಯಾಗಿ; ಐಶ್ವರ್ಯವಂತನಾಗಿ ಜನ್ಮ ಜನ್ಮಾಂತರಗಳಲ್ಲಿಯೂ ವೈಷ್ಣವನಾಗಿ ಹುಟ್ಟುತ್ತಾನೆ.
" ಆಗ್ನೇಯ ಪುರಾಣದಲ್ಲಿ ಧನುರ್ಮಾಸ ಪೂಜೆ ಮಾಡದಿದ್ದರೆ ದೋಷ " ಹೇಳಿದ್ದಾರೆ.
ಆಕರಣೇ ಪ್ರತ್ಯವಾಯ ಉಕ್ತಃ ತತ್ರೈವ -
ಉಷಃ ಪೂಜಾಂ ಧನುರ್ಮಾಸೇ
ಯೋ ನ ಕುರ್ವೀತ ವೈಷ್ಣವೀಮ್ ।
ಸಪ್ತ ಜನ್ಮ ಸು ರಿಕ್ತಃ ಸ್ಯಾತ್
ಕ್ಷಯ ರೋಗೀ ಚ ಮೂಢಧೀಃ ।।
ಯಾವನು ಧನುರ್ಮಾಸದಲ್ಲಿ ಶ್ರೀಮನ್ನಾರಾಯಣನಿಗೆ ಉಷಃ ಕಾಲದ ಪೂಜೆಯನ್ನು ಮಾಡುವುದಿಲ್ಲವೋ ಆ ಮೂರ್ಖನು ಏಳು ಜನ್ಮಗಳಲ್ಲಿ ಬಡವನಾಗುತ್ತನೆ ಮತ್ತು ಕ್ಷಯ ರೋಗಿಯಾಗಿಯೂ ಹುಟ್ಟುತ್ತಾನೆ.
" ಶುಭ ಫಲ "
ಸೂರ್ಯನು ಧನು ರಾಶಿಯಲ್ಲಿರುವಾಗ ಯಾವನು ಪರಮಾತ್ಮನನ್ನು ಪೂಜಿಸಿ ಮುದ್ಗಾನ್ನ ಅಂದರೆ ಹುಗ್ಗಿಯನ್ನು ನಿವೇದಿಸುತ್ತಾನೋ; ಅವನ ಒಂದು ದಿನದ ಪೂಜೆಯಿಂದ 1000 ವರ್ಷಗಳ ಪೂಜೆಯು ಸಿದ್ಧಿಸುತ್ತದೆ.
ಲಕ್ಸ್ಮೀಪತಿಯು ಧನುರ್ಮಾಸದಲ್ಲಿ ಹುಗ್ಗಿಯ ನೈವೇದ್ಯವನ್ನು ಮಾಡಿದರೆ ಸಂತೋಷ ಪಡುವಂತೆ ಇನ್ನಾವುದರಿಂದಲೂ ಸಂತೋಷ ಪಡುವುದಿಲ್ಲ.
ವ್ರತ, ತಪಸ್ಸು, ದಾನ ಇತ್ಯಾದಿ ಯಾವುದರಿಂದಲೂ ಶ್ರೀಹರಿಗೆ ಮುದ್ಗಾನ ನಿವೇದನೆಯಿಂದ ಆಗುವಷ್ಟು ಪ್ರೀತಿಯು ಉಂಟಾಗುವುದಿಲ್ಲ.
ಸೂರ್ಯನು ದನು ರಾಶಿಯಲ್ಲಿದ್ದಾಗ ಶು೦ಠಿ ಸಹಿತವಾದ ಹುಗ್ಗಿಯನ್ನು ಶ್ರೀ ಹರಿಗೆ ಸಮರ್ಪಿಸಬೇಕು.
ಇಂಥಹಾ ಭಕ್ತನು ಶತ್ರುಗಳನ್ನು ಕ್ಷಣದಲ್ಲಿ ಜಯಿಸುತ್ತಾನೆ.
ಮೊಸರು - ಶು೦ಠಿ ಸಹಿತವಾದ ಹುಗ್ಗಿಯನ್ನು ಯಾವನು ಧನುರ್ಮಾಸದಲ್ಲಿ ಶ್ರೀ ಹರಿಗೆ ಸಮರ್ಪಿಸುತ್ತಾನೋ ಅವನು ದೀರ್ಘಾಯುಷ್ಮಂತನೋ, ಧನಾಢ್ಯನೂ, ವೇದ ಪಾರಂಗತನೂ ಆಗುತ್ತಾನೆ.
ಶು೦ಠಿ ಸಹಿತವಾದ ಹುಗ್ಗಿಯನ್ನು ಅಚ್ಯುತನಿಗೆ ಸಮರ್ಪಿಸುವವನಿಗೆ ಗಂಗಾ ಸ್ನಾನಾದಿಗಳಿಂದ, ಇತರ ಜಪಗಳಿಂದ; ಯಾಗಗಳಿಂದ ಏನೂ ಉಪಯೋಗವಿಲ್ಲ.
ಅವನಿಗೆ ಆಯುಸ್ಸು, ಆರೋಗ್ಯ, ಐಶ್ವರ್ಯ ಮುಂತಾದ ಬಯಸಿದ ವಸ್ತುಗಳು ಈ ಧನುರ್ಮಾಸ ಪೂಜೆಯಿಂದ ಕೂಡಲೇ ಸಿದ್ಧಿಸುತ್ತವೆ.
ಹಿಂದೆ ಶ್ರೀ ಇಂದ್ರ ಪತ್ನಿಯಾದ ಪತಿವ್ರತೆಯಾದ ಶಚಿಯು ದುಃಖವನ್ನು ಪಡೆದಳು.
ಅವಳ ಪತಿಯು ರಾಜ್ಯ ಭ್ರಂಶಾದಿಗಳನ್ನು ಹೊಂದಿದ್ದರಿಂದ ಅವಳಿಗೆ ಅತೀವ ದುಃಖ ಉಂಟಾಯಿತು.
ಆಗ ಶಚಿಯು ಧನುರ್ಮಾಸದಲ್ಲಿ ಹಿಂದೆ ಹೇಳಿದಂತೆ ಶ್ರೀ ಹರಿಗೆ ಮುದ್ಗಾನ್ನವನ್ನು ಸಮರ್ಪಿಸಿ ನಿತ್ಯೈಶ್ವರ್ಯವನ್ನು ಪಡೆದಳು.
ಮುಂದೆ ಹೇಳತಕ್ಕಂತಹಾ ಶ್ರೀ ಮಹಾಲಕ್ಷ್ಮೀಯ ದ್ವಾದಶ ನಾಮಾವಳಿಯನ್ನು 12 ಭಾರಿ ಜಪಿಸಿ ದನುರ್ಮಾಸದಲ್ಲಿ ಬೆಲ್ಲ ಮತ್ತು ಮುದ್ಗಾನ್ನವನ್ನು ಶ್ರೀ ಲಕ್ಷ್ಮೀ ನಾರಾಯಣರಿಗೆ ಸಮರ್ಪಿಸಬೇಕು.
ಶ್ರೀ ಮಹಾಲಕ್ಷ್ಮೀಯನ್ನು ಪೂಜಿಸಬೇಕು. ಧನುರ್ಮಾಸದಲ್ಲಿ ಅರ್ಥ ಪ್ರಾಪ್ತಿಗಾಗಿ ಈ ರೀತಿಯ ಪೂಜೆ ಮಾಡಿದರೆ ಕೂಡಲೇ ಶ್ರೀ ಮಹಾಲಕ್ಷ್ಮೀಯ ಕೃಪಾ ಕಟಾಕ್ಷದಿಂದ ಅಕ್ಷಯವಾದ ಧನವನ್ನು ಪಡೆಯುತ್ತಾನೆ.
ಶ್ರೀದೇವಿ - ಅಮೃತೋದ್ಭವ - ಕಮಲಾ - ಲೋಕಸುಂದರೀ - ವಿಷ್ಣುಪತ್ನೀ - ಶ್ರೀ ವೈಷ್ಣವೀ - ವರಾರೋಹ - ಹರಿವಲ್ಲಭೆ - ಶಾಜ್ಞ್ಗಣಿ - ದೇವದೇವಿಕಾ - ಮಹಾಲಕ್ಷ್ಮೀ - ಭಾರ್ಗವೀ. ಇವೇ ಮೊದಲಾದ ಶ್ರೀ ಮಹಾಲಕ್ಷ್ಮೀಯ ದ್ವಾದಶ ನಾಮಗಳು.
ಶ್ರೀ - ಪದ್ಮಾ - ಕಮಲಾ - ಮುಕುಂದ ಮಹಿಷೀ - ಲಕ್ಷ್ಮೀ - ತ್ರಿಲೋಕೇಶ್ವರೀ - ಮಾ - ಕ್ಷೀರಾಬ್ಧಿಸುತೆ - ಅರವಿಂದ ಜನನೀ - ವಿದ್ಯಾ - ಸರೋಜಾತ್ಮಿಕಾ - ಸರ್ವಾಭೀಷ್ಟ ಫಲಪ್ರದಾ ಎಂಬ ಈ ಹನ್ನೆರಡು ಶ್ರೀ ಲಕ್ಷ್ಮೀ ನಾಮಾವಳಿಯನ್ನು ಅತ್ಯಂತ ಶುದ್ಧರಾಗಿ ಯಾರು ಪಠಿಸುತ್ತಾರೋ ಅವರು ಎಲ್ಲಾ ಮಂಗಳವನ್ನು ಪಡೆಯುತ್ತಾರೆ.
ಇದು ಭದ್ರ ಲಕ್ಷ್ಮೀ ಸ್ತೋತ್ರ. ಇದು ಯಾವಗಾಲೂ ಪುಣ್ಯಪ್ರದವಾದುದು ಮತ್ತು ಸಕಲ ಮಂಗಲಪ್ರದವಾದುದು.
ತುಲಾ ಮಾಸದಲ್ಲಿ ಕಾವೇರಿಯಲ್ಲಿ ಸ್ನಾನ ಮಾಡಿ ಅನಂತರ ಶ್ರೀ ವೃಕ್ಷ ( ಬಿಲ್ವ ) ಸನ್ನಿಧಿಯಲ್ಲಿ ಈ ಸ್ತೋತ್ರವನ್ನು ಜಪಿಸಬೇಕೆಂದು ಶ್ರೀ ನಾರದ ಮಹರ್ಷಿಗಳು ಧರ್ಮರಾಜನಿಗೆ ಹೇಳಿದ್ದಾರೆ.
" ಧನುರ್ಮಾಸ ಕುರಿತು ಉಪಯುಕ್ತ ಮಾಹಿತಿ "
ಆಗ್ನೇಯ ಪುರಾಣದಲ್ಲಿ ಧನುರ್ಮಾಸ ವ್ಯತಿಪಾತದ ವಿಷಯದಲ್ಲಿ ಈ ರೀತಿಯಾಗಿ ಹೇಳಿದ್ದಾರೆ.
ಸೂರ್ಯನು ಧನು ರಾಶಿಯಲ್ಲಿದ್ದಾಗ ಭಕ್ತಿಮಂತನಾದ ಮಾನವನು ಉಷಃ ಕಾಲದಲ್ಲೆದ್ದು ಸ್ನಾನ ಮಾಡಿ ಶ್ರೀ ಹರಿಯನ್ನು ಪೂಜಿಸಿ ಹುಗ್ಗಿಯನ್ನು ಸಮರ್ಪಿಸಬೇಕು.
ಹೀಗೆ ಮಾಡುವವನೇ ಭಾಗವತ ಶ್ರೇಷ್ಠನು.
ಯಾವನು ಸೂರ್ಯನು ಧನು ರಾಶಿಯಲ್ಲಿದ್ದಾಗ ಬ್ರಾಹ್ಮಣರಿಗೆ ಹುಗ್ಗಿಯನ್ನು ದಾನ ಕೊಡುತ್ತಾನೋ ಅವನಿಗೆ ಮುಕ್ತಿಯು ಶತಃಸ್ಸಿದ್ಧ.
ಸಾವಿತ ಅಗ್ನಿಷ್ಟೊಮಗಳೂ, ನೂರು ವಾಜಿಪೇಯಗಳೂ ಇವು ಯಾವುದೂ ಧನುರ್ಮಾಸದ ವ್ಯತಿಪಾತದಲ್ಲಿ ಮುದ್ಗಾನ್ನ ದಾನ ಮಾಡಿದರೆ ಉಂಟಾಗುವ ಪುಣ್ಯಕ್ಕೆ ಸಮಾನವಾಗಲಾರವು.
ವೇದ ಭ್ರಷ್ಟನೂ, ಕರ್ಮ ಭ್ರಷ್ಟನೂ, ವ್ರತ ಭ್ರಷ್ಟನೂ ಮತ್ತು ಮಿತ್ರ ದ್ರೋಹಿಯು ಇಂಥಹಾ ಪಾಪಿಗಳು ಯಾರೇ ಆಗಿರಲಿ ಧನುರ್ಮಾಸದ ವ್ಯತಿಪಾತದಲ್ಲಿ ಬ್ರಾಹ್ಮಣನಿಗೆ ಹುಗ್ಗಿ ದಾನ ಮಾಡಿದರೆ ಆಯಾ ಪಾಪದಿಂದ ಮುಕ್ತರಾಗುತ್ತಾರೆ.
ದೇವತೆಗಳೂ - ಋಷಿಗಳೂ - ಪಿತೃಗಳೂ ಇವರೆಲ್ಲರೂ, ಮಹೇಶ್ವರನೇ ಮೊದಲಾದ ಎಲ್ಲಾ ಮಹಾ ದೇವತೆಗಳೂ ಮಾರ್ಗಶಿರ ಮಾಸದ ವ್ಯತಿಪಾತದಲ್ಲಿ ಮುದ್ಗಾನ್ನ ದಾನವನ್ನು ಪ್ರಶಂಸಿಸುತ್ತಾರೆ.
ಧನುರ್ಮಾಸದ ಉಷಃ ಕಾಲದಲ್ಲಿ ವಿಷ್ಣುವಿಗೆ ಮುದ್ಗಾನ ನೈವೇದ್ಯ ಮಾಡಿ; ಪಿತೃಗಳನ್ನು ಉದ್ಧೇಶಿಸಿ ಬ್ರಾಹ್ಮಣ ಭೋಜನ ಮಾಡಿಸಿದರೆ ಬರುವ ಫಲ ಈ ರೀತಿ ಇದೆ..
ಗಯಾ ಕ್ಷೇತ್ರದಲ್ಲೂ, ರಾಮ ಸೇತುವಿನಲ್ಲಿಯೂ ಚೆನ್ನಾಗಿ 10000 ಸಾವಿರ ಶ್ರಾದ್ಧಗಳನ್ನು ಮಾಡಿಸಿದರೆ ಎಷ್ಟು ಪುಣ್ಯ ಬರುತ್ತದೆಯೋ ಅಷ್ಟು ಪುಣ್ಯವು ಮುದ್ಗಾನ ನೈವೇದ್ಯದಿಂದ ಬರುತ್ತದೆ.
ಈ ರೀತಿ ಶ್ರೀ ಹರಿಗೆ ಮುದ್ಗಾನ್ನ ನಿವೇದನೆ ಮಾಡಿ ಬ್ರಾಹ್ಮಣ ಭೋಜನ ಮಾಡಿಸುವವನ ವಂಶದ ಪಿತೃಗಳೆಲ್ಲರೂ ವೈಕುಂಠವನ್ನು ಪಡೆಯುತ್ತಾರೆ.
1000 ಅರ್ಧೋದಯ ಪುಣ್ಯ ಕಾಲಗಳೂ, ವಾಜಪೇಯಾದಿ ಯಾಗಗಳೂ ಇವು ಯಾವುವೂ ಮಾರ್ಗಶೀರ್ಷ ವ್ಯತಿಪಾತದ 16ನೇ ಒಂದು ಭಾಗಕ್ಕೂ ಸಮಾನವಾಗಲಾರದು.
" ಶ್ರೀ ಮಹಾ ವಿಷ್ಣು ಮತ್ತು ಶ್ರೀ ಇಂದ್ರ ಪತ್ನಿ ಶಚೀ ಸಂವಾದ "
ಆಗ್ನೇಯ ಪುರಾಣದಲ್ಲಿ ಶ್ರೀ ಮಹಾ ವಿಷ್ಣು ಮತ್ತು ಶಚೀ ಸಂವಾದದಲ್ಲಿ ವಿಶೇಶತೆಯನ್ನು ಹೇಳಲಾಗಿದೆ. ಆದುದರಿಂದ ಧನಿರ್ಮಾಸದಲ್ಲಿ ಅರುಣೋದಯದಲ್ಲಿ ಎದ್ದು ಬೇರೇ ಎಲ್ಲಾ ಕಾರ್ಯಗಳನ್ನೂ ಬಿಟ್ಟು ಯಾವನು ಮುದ್ಗಾನ್ನದಿಂದ ನಿನ್ನ ಪೂಜೆಯನ್ನು ಮಾಡುತ್ತಾನೋ ಅವನಿಗೆ ಮುಕ್ತಿ ಕೊಡುವವನಾಗು!
ಮಧ್ಯಾಹ್ನದಲ್ಲಿ ಧನುರ್ಮಾಸ ಪೂಜೆಯನ್ನು ಮಾಡಿದರೆ ನಿಷ್ಫಲವಾಗುತ್ತದೆ.
ಅರುಣೋದಯ ಕಾಲದಲ್ಲಿ ಮಾಡುವ ಪೂಜೆಯೇ ಮುಖ್ಯವೂ ಉತ್ತಮ ಕಲ್ಪಕ್ಕೆ ಸೇರಿದುದು.
ನಕ್ಷತ್ರಗಳು ಕಾಣಿಸದೇ ಇದ್ದಾಗ ಮಾಡುವು ಧನುರ್ಮಾಸ ಪೂಜೆಯು ಮಧ್ಯಮವು.
ಸೂರ್ಯನು ಉದಯವಾದ ಮೇಲೆ ಸೂರ್ಯನು ಕಾಣಿಸುವಾಗ ಮಾಡುವ ಧನುರ್ಮಾಸ ಪೂಜೆಯು ಅಧಮವು.
ಮಧ್ಯಾಹ್ನದಲ್ಲಿ ಮಾಡುವ ಧನುರ್ಮಾಸದ ಪೂಜೆಯು ನಿಷ್ಫಲವೆಂದು ತಿಳಿಯತಕ್ಕದ್ದು.
ಇನ್ನು ಮುದ್ಗಾನ್ನವೆಂದರೆ...
ಹೆಸರುಬೇಳೆಯ ಹುಗ್ಗಿಗೆ ಸೇರಿಸಬೇಕಾದ ಹೆಸರುಬೇಳೆಯ ಪರಿಮಾಣವನ್ನು ಹೇಳುತ್ತಾರೆ.
ಅಕ್ಕಿ ಎಷ್ಟು ಇದೆಯೋ ಹೆಸರುಬೇಳೆಯೂ ಅಷ್ಟೇ ಇರಬೇಕು.
ಉದಾಹರಣೆಗೆ..
ಅಕ್ಕಿಯ ಅರ್ಧದಷ್ಟು ಹೆಸರುಬೇಳೆಯ ಸೇರಿಸಿ ಹುಗ್ಗಿ ಮಾಡಿದರೆ ಅದು ಮಧ್ಯಮವು.
ಅಕ್ಕಿಯ ಕಾಲು ಭಾಗದಷ್ಟು ಹೆಸರುಬೇಳೆಯ ಸೇರಿಸಿ ಹುಗ್ಗಿ ಮಾಡಿದರೆ ಅದು ಅಧಮವು.
ಧರ್ಮ ಶಾಸ್ತ್ರ ಪ್ರವರ್ತಕರಾದ ಮುನಿಶ್ರೇಷ್ಠರು ಅಕ್ಕಿಯ ಎರಡು ಪಾಲು ಹೆಸರುಬೇಳೆ ಸೇರಿಸಿ ಮಾಡುವ ಹುಗ್ಗಿಯೇ ಉತ್ತಮೋತ್ತಮ ಎಂದು ಹೇಳುತ್ತಾರೆ. ಅಂದರೆ ಒಂದು ಪಾವು ಅಕ್ಕಿಗೆ ಎರಡು ಪಾವು ಹೆಸರುಬೇಳೆ ಸೇರಿಸಿ ಹುಗ್ಗಿ ಮಾಡಬೇಕೆಂದು ಅಭಿಪ್ರಾಯ.
ಈ ಪಕ್ಷದಲ್ಲಿ ತನ್ನ ಶಕ್ತ್ಯಾನುಸಾರವಾಗಿ ಹೆಸರುಬೇಳೆಯನ್ನು ಸೇರಿಸಿ ಹುಗ್ಗಿಯನ್ನು ಮಾಡಬೇಕು. ಆದರೆ ಅಕ್ಕಿಯ ಅರ್ಧ ಪರಿಮಾಣಕ್ಕಿಂತ ಹೆಸರು ಬೇಳೆ ಕಡಿಮೆ ಮಾಡಬಾರದು.
ನಾನು ಬಡವ, ಧನುರ್ಮಾಸದ ಧರ್ಮ ನಡೆಸಲಾರೆ ಅಥವಾ ಈ ರೀತಿ ಮುದ್ಗಾನ್ನ ನೈವೇದ್ಯ ಮಾಡಿದರೆ ನಾನು ದರಿದ್ರನಾಗುತ್ತೇನೆ ಎಂದೋ ದುರ್ಬುದ್ಧಿಯಿಂದ ಧನುರ್ಮಾಸದಲ್ಲಿ ಶ್ರೀ ಹರಿಗೆ ಯಾರು ಹುಗ್ಗಿಯನ್ನು ಸಮರ್ಪಿಸುವುದಿಲ್ಲವೋ ಅವನು ಮುಂದಿನ ಏಳು ಜನ್ಮಗಳಲ್ಲಿ ಬಡವನಾಗುತ್ತಾನೆ.
ಆದ್ದರಿಂದ ಧನುರ್ಮಾಸದಲ್ಲಿ ಕರ್ಮ ಸಂಕೋಚ ಮಾಡಿ ಮುದ್ಗಾನ್ನ ಸಹಿತವಾಗಿ ಶ್ರೀ ಹರಿಯನ್ನು ಪೂಜಿಸಬೇಕು. ಇದರಿಂದ ಮಹತ್ತರವಾದ ಫಲವಿದೆ.
" ಭಾಸ್ಕರೀಯ ಜ್ಯೋತಿಶ್ಶ್ಯಾಸ್ತ್ರದಲ್ಲಿ "....
ದಕ್ಷಿಣಾಯಣ ರಾತ್ರಿಯೂ, ಉತ್ತರಾಯಣ ದೇವತೆಗಳಿಗೆ ಹಗಲು. ಆದರೆ ಧನುರ್ಮಾಸವು ದೇವತೆಗಳಿಗೆ ಹಗಲೂ - ರಾತ್ರಿಯೂ ಆಗಿದೆ.
ಆದ್ದರಿಂದ ಸರ್ವ ಪ್ರಯತ್ನದಿಂದಲೇ ಧನುರ್ಮಾಸದಲ್ಲಿ ಪ್ರತಿದಿನವೂ ಉಷಃ ಕಾಲದಲ್ಲೆದ್ದು, ಸ್ನಾದಿಗಳನ್ನು ಮಾಡಿ ಷೋಡಶೋಪಚಾರಗಳಿಂದ ಶ್ರೀ ಹರಿ ಪೂಜೆ ಮಾಡಿ ಮುದ್ಗಾನ್ನ ನೈವೇದ್ಯ ಮಾಡಬೇಕು.
" ಆದಿತ್ಯ ಪುರಾಣದಲ್ಲಿ "...
ಸೂರ್ಯನು ಧನು ರಾಶಿಯಲ್ಲಿದ್ದಾಗ ಉಷಃ ಕಾಲದಲ್ಲಿ ಸ್ನಾನ ಮಾಡಬೇಕು. ಸೂರ್ಯೋದಯದ ಮೊದಲು ಜಗನ್ನಾಥನಾದ ಶ್ರೀ ಹರಿಯನ್ನು ಮುದ್ಗಾನ್ನ ನೈವೇದ್ಯದೊಂದಿಗೆ ಪೂಜಿಸಬೇಕು.
ಅನಂತರ ಪ್ರಾತಃ ಕಾಲದಲ್ಲಿ ಸೂರ್ಯಾರ್ಘ್ಯವನ್ನು ಕೊಟ್ಟು ಗಾಯತ್ರೀ ಜಪ ಮಾಡಿ ಸೂರ್ಯೋಪಸ್ಥಾನವನ್ನು ಮಾಡಬೇಕು.
" ಸ್ಮೃತ್ಯರ್ಥ ಸಾರದಲ್ಲಿ.. "
ಧನುರ್ಮಾಸದ ಕೊನೆಯ ಯಾಮದಲ್ಲಿ ( ಬೆಳಗಿನ ಜಾವ 4.30 - 6.00 ಘಂಟೆಯ ಒಳಗೆ ) ಶ್ರೀ ಹರಿಯನ್ನು ಪೂಜಿಸಿ ಮುದ್ಗಾನ್ನ ನೈವೇದ್ಯ ಮಾಡಿ ಅನಂತರ ಸಂಧ್ಯಾವಂದನೆ ಮಾಡಬೇಕು. ಹೀಗೆ ಮಾಡಿದರೂ ಕರ್ಮ ಲೋಪವಾಗುವುದಿಲ್ಲ.
" ಪಂಚರಾತ್ರ ಸಂಹಿತೆಯಲ್ಲಿ.. "
ಸೂರ್ಯನು ಧನು ರಾಶಿಯಲ್ಲಿದ್ದಾಗ ಬೆಳಗಿನ ಜಾವದಲ್ಲಿ ಶ್ರೀ ಹರಿಗೆ ಮುದ್ಗಾನ್ನ ಸಮರ್ಪಿಸಿ ಪೂಜೆ ಮಾಡಿದರೆ ಒಂದು ದಿನದ ಪೂಜೆಯಿಂದ 1000ವರ್ಷದ ಪೂಜೆಯ ಫಲವು ಬರುತ್ತದೆ.
" ಪಾರಮೇಷ್ಟ್ಯ ಸಂಹಿತೆಯಲ್ಲಿ... "
ಸೂರ್ಯನು ಧನು ರಾಶಿಯಲ್ಲಿದ್ದಾಗ ಬೆಳಗಿನ ಜಾವ ಮಹಾಭಿಷೇಕ ವಿಧಾನದಿಂದಲೂ, ವೇದ ಪಾರಾಯಣಾದಿಗಳಿಂದಲೂ ಶ್ರೀ ಹರಿಯನ್ನು ಪೂಜಿಸಬೇಕು.
" ಮತ್ಸ್ಯ ಪುರಾಣದ ದಾನಖಂಡದಲ್ಲಿ.. "
ಎಲೈ ಮಹಾ ಪುರುಷ ಶ್ರೇಷ್ಠನೇ! ಧನುರ್ಮಾಸದ ಉಷಃ ಕಾಲದಲ್ಲಿ ಶ್ರೀ ಹರಿಯ ಪೂಜೆ, ಹುಗ್ಗಿ ಸಮರ್ಪಣೆ, ಬ್ರಾಹ್ಮಣ ಭೋಜನ, ನಾನಾ ದಾನಗಳು ಮಾಡಿದವನು ತನ್ನ ಪಿತೃಗಳೊಂದಿಗೆ ಶಾಶ್ವತವಾಗಿ ವಿಷ್ಣು ಲೋಕವನ್ನು ಹೊಂದುತ್ತಾನೆ ಎಂದು ಹೇಳಿದೆ.
" ಸಂಗ್ರಹವೆಂಬ ಧರ್ಮ ಶಾಸ್ತ್ರದಲ್ಲಿ "
ಸೂರ್ಯನು ಧನು ರಾಶಿಗೆ ಬಂದಾಗ ಯಾವ ದ್ವಿಜನು ಪ್ರಾತಃ ಕಾಲದಲ್ಲಿ ಶ್ರೀ ಹರಿಯ ಪೂಜೆಯನ್ನೂ, ಮುದ್ಗಾನ್ನವನ್ನೂ ಸಮರ್ಪಿಸುತ್ತಾನೋ ಸತ್ಯವಾಗಿಯೂ ಅವನು ವೈಕುಂಠವನ್ನೇ ಹೊಂದುತ್ತಾನೆ.
ಧನುರ್ಮಾಸದ ಉಷಃ ಕಾಲದಲ್ಲಿ ಯಾವನು ಶ್ರೀ ಹರಿಯ ಪ್ರೀತಿಗಾಗಿ ಬೆಲ್ಲ ಸಹಿತವಾದ ಹುಗ್ಗಿಯನ್ನು ನೆವೇದನೆ ಮಾಡುತ್ತಾನೋ ಅವನು ಶ್ರೀ ಮಹಾ ವಿಷ್ಣುವಿನ ಸ್ಥಾನವಾದ ವೈಕುಂಠವನ್ನು ಪಡೆಯುತ್ತಾನೆ.
ಧನುರ್ಮಾಸದ ಪೂಜೆ ಅದಕ್ಕೆ ಸಾಧನವಾದ ದ್ರವ್ಯಗಳೂ ಮತ್ತು ಕಾಲ ವಿಶೇಷಗಳನ್ನೂ ತಿಳಿಸುವ ಪ್ರಮಾಣ ವಾಕ್ಯಗಳು ಸ್ಪಷ್ಟ ಪಡಿಸಿವೆ.
ಆದ್ದರಿಂದ ಎಲ್ಲರೂ ಈ ಧನುರ್ಮಾಸದಲ್ಲಿ ಪ್ರಾತಃ ಕಾಲದಲ್ಲೆದ್ದು ಸ್ನಾನಾದಿಗಳನ್ನು ಮಾಡಿ ಶ್ರೀ ಹರಿಗೆ ಭಕ್ತಿಯಿಂದ ಮುದ್ಗಾನ್ನ ( ಹುಗ್ಗಿ ) ವನ್ನು ಸಮರ್ಪಿಸಿ ಪೂಜಿಸಿ ಜಗತ್ ಸ್ವಾಮಿಯಾದ ಶ್ರೀ ಲಕ್ಷ್ಮೀ ನಾರಾಯಣರ ಪರಮಾನುಗ್ರಹಕ್ಕೆ ಪಾತ್ರರಾಗೋಣ....
#ಅಗಸ್ತ್ಯ
#ಸೂರ್ಯನು ಒಂದೊಂದು ತಿಂಗಳು ಒಂದೊಂದು ರಾಶಿಯಲ್ಲಿ ಸಂಚರಿಸುವ ನಿಯಮವಿದ್ದು ಈ #ಮಾರ್ಗಶೀರ್ಷ ಮಾಸದಲ್ಲಿ #ಧನು ರಾಶಿಯಲ್ಲಿ ಬರುವುದರಿಂದ ಇದಕ್ಕೆ #ಧನುರ್ಮಾಸವೆಂದು ಹೆಸರು. ಚಳಿ ಬಹಳವಿರುತ್ತದೆ. ದೇವತೆಗಳಿಗೆ ಇದು ಉಷಃ ಕಾಲವಗಿದ್ದು ಪರಮಾತ್ಮನಿಗೆ ಹುಗ್ಗಿ ಮಾಡಿ #ನೈವೇದ್ಯ ಮಾಡುತ್ತಾರೆ. ಹಾಗೆಯೇ ನಾವು ಕೂಡ ಉಷಃಕಾಲದಲ್ಲಿಯೇ ಶುಚಿರ್ಭೂತರಾಗಿ #ದೇವರ #ಪೂಜೆ ಮಾಡಿ ದೇವರಿಗೆ ಹುಗ್ಗಿ ನೈವೇದ್ಯ ಮಾಡಬೇಕು. ಇದರಿಂದ ದೇವತೆಗಳಿಗೂ ಅವರ ಮುಖಾಂತರ ಪರಮಾತ್ಮನಿಗೂ ಸಂತೋಷವಾಗುತ್ತದೆ. ಧರ್ಮಾತ್ಮರಾದ #ಪಾಂಡವರು ಧನುರ್ಮಾಸದಲ್ಲಿ #ಶ್ರೀಕೃಷ್ಣ ಪರಮಾತ್ಮನನ್ನು ಬರಮಾಡಿಕೊಂಡು ಪೂಜಿಸಿ ಅನೇಕ ಪಕ್ವಾನ್ನ ಮಾಡುವುದಲ್ಲೆದೆ ಮುಖ್ಯವಾಗಿ ಹುಗ್ಗಿ #ಗೊಜ್ಜು ಮಾಡಿ ಆತನಿಗೆ ಸಮರ್ಪಿಸಿ ಉಡುಗೊರೆ ಕೊಟ್ಟು ಧನ್ಯರಾಗಿದ್ದಾರೆ. ಇದನ್ನು ತಿಳಿಸಿಕೊಡುವ #ಪುರಂದರದಾಸರು ಮಾಡಿದ ಪದವನ್ನು ಉದಯ ಕಾಲದಲ್ಲಿ ಪಠಿಸುವುದರಿಂದ ವಿಶೇಷ ಪುಣ್ಯವಿದೆ.
ಧನುರ್ಮಾಸದಲ್ಲಿ ಚಳಿ ವಿಶೇಷವಾಗಿದ್ದರಿಂದ ಮೈಯಲ್ಲಿ ಚಳಿ ತುಂಬಿರುತ್ತದೆ. ಈ ನಿಮಿತ್ತ ಹೆಸರು ಬೇಳೆ, ಜೀರಿಗೆ, ಮೆಂಥೆ, ಇಂಗು, ಒಣಕೊಬ್ಬರಿಯಿಂದ ಕೂಡಿದ ಮತ್ತು ವಿಶೇಷ ತುಪ್ಪ ಬೆರೆಸುವುದರಿಂದ ಬಿಸಿ ಬಿಸಿಯಾದ ಹುಗ್ಗಿಯನ್ನು ಬೆಳಿಗ್ಗೆ ತಿನ್ನುವುದರಿಂದ ಇಡೀ ದಿನ ಮೈಯಲ್ಲಿಯ ಚಳಿ ಬಿಟ್ಟು ಮನುಷ್ಯನಿಗೆ ಕೆಲಸ ಮಾಡಲು ಉತ್ತೇಜನ ಬರುತ್ತದೆ.
ನಮ್ಮ ಧಾರ್ಮಿಕ ಕರ್ಮಗಳು ನಮಗೆ ಧರ್ಮದಲ್ಲಿ ನಡೆಯುವುದನ್ನು ಹೇಳಿಕೊಡುವುದರ ಜೊತೆಗೆ ಆರೋಗ್ಯವಂತರಾಗಲೂ ಕಲಿಸುತ್ತದೆ. #ಸರಳವಾಗಿ #ಹುಗ್ಗಿ #ಮಾಡುವ #ವಿಧಾನವನ್ನು ಮುಂದಿನ ಸಂಚಿಕೆಯಲ್ಲಿ ತಿಳಿಸಿಕೊಡುತ್ತೇನೆ.
ನಮ್ಮ #ನಾಡು, ನಮ್ಮ #ನುಡಿ, ನಮ್ಮ #Someಸ್ಕೃತಿ.
No comments:
Post a Comment