Monday, 16 December 2019

ಸಂಕಷ್ಟಹರ ಚತುರ್ಥಿಯ ಮಹತ್ವ

🕉 ಓಂ ಶ್ರೀ ಗುರುಭ್ಯೋ ನಮಃ 🕉

*ಸಂಕಷ್ಟಹರ ಚತುರ್ಥಿಯ ಮಹತ್ವ*

ನಮ್ಮ ಸಮಯವನ್ನು ಅಂದರೆ ನಮ್ಮ ಕಾಲವನ್ನು ಸರಿ ಮಾಡಿಕೊಳ್ಳುವುದಕ್ಕೆ ಈ  ಸಂಕಷ್ಟ ಹರ ಚತುರ್ಥಿ ನಮಗೆ ಒಂದು ವರವಾಗಿದೆ.

*ಆ ದಿನ ನಾವು ಏನು ಮಾಡಬೇಕು ?*

ಪ್ರಾತ ಕಾಲದಲ್ಲಿ ಬೆಳಗ್ಗೆ ಬೇಗನೆ ಎದ್ದು , ಗಣೇಶನಿಗೆ ನಮಸ್ಕಾರವನ್ನು ಮಾಡಿ, ಮೊದಲು ಸಂಕಲ್ಪವನ್ನು ಮಾಡಬೇಕು.

ನಿರಾಹಾರವಾಗಿ ಇರುತ್ತೇನೆ ಎಂದು ಮೊದಲು ಸಂಕಲ್ಪವನ್ನು ಮಾಡಿಕೊಳ್ಳಬೇಕು. 

ನಂತರ ಸಾಯಂಕಾಲ ನಮ್ಮ ಶಕ್ತಿಗೆ ಅನುಗುಣವಾಗಿ ಗಣೇಶನ ದೇವಾಲಯಕ್ಕೆ ಹೋಗಿ, ಸಂಕಲ್ಪವನ್ನು ಮಾಡಬೇಕು. 

ಸಂಕಷ್ಟಹರ ಚತುರ್ಥಿಯನ್ನು ನಿರಾಹಾರವಾಗಿ ಆಚರಣೆ ಮಾಡಿದ್ದೇನೆ. 
ನನ್ನ ಜೀವನದಲ್ಲಿ ಇರುವ ಸಂಕಷ್ಟಗಳೆಲ್ಲವನ್ನೂ ಪರಿಹರಿಸು. 
ಎಂದು ಭಕ್ತಿ, ಶ್ರದ್ಧೆಯಿಂದ ಆ ಮಹಾ ಗಣಪತಿಯನ್ನು ಕೇಳಿಕೊಂಡು ಪ್ರಾರ್ಥಿಸಬೇಕು. ಸಂಪೂರ್ಣವಾಗಿ ವ್ರತವನ್ನು ಆಚರಣೆ ಮಾಡಬೇಕು.

ರಾತ್ರಿ ಚಂದ್ರೋದಯದ ಸಮಯಕ್ಕೆ ಚಂದ್ರನ ದರ್ಶನವಾಗಲಿದೆ. 

ನಂತರ ಚಂದ್ರನ ದರ್ಶನ ಮಾಡಿ ಚಂದ್ರನಿಗೆ ಅರ್ಘ್ಯ ನೀಡಿ, ಪ್ರಾರ್ಥನೆ ಸಲ್ಲಿಸಿ, ನಮಸ್ಕಾರ ಮಾಡಿ. ಲವಣವಿಲ್ಲದ ಆಹಾರವನ್ನು ಸ್ವೀಕರಿಸಬೇಕು.

ನಂತರ ಬೆಳಗ್ಗೆ ಸೂರ್ಯೋದಯವಾದ ಮೇಲೆ ಸ್ನಾನ ಮಾಡಿ,

ಶುಚಿರ್ಭೂತರಾಗಿ ಇಷ್ಟ ದೇವತೆಗೆ ತುಪ್ಪದ ದೀಪವನ್ನು ಹಚ್ಚಿ, ಲವಣವನ್ನು ಉಪಯೋಗಿಸಿ. 

ಈ ರೀತಿ ಯಾರು ನಿಯಮಬದ್ಧವಾಗಿ  ಸಂಕಷ್ಟಹರ ಚತುರ್ಥಿಯನ್ನು ಆಚರಣೆ ಮಾಡುತ್ತಾರೋ, 

ಅವರಿಗೆ ಸಂಕಷ್ಟಗಳೆಲ್ಲವೂ ನಿವಾರಣೆಯಾಗುತ್ತವೆ. ಜೊತೆಗೆ ಗಣೇಶನ 21 ಹೆಸರುಗಳನ್ನು ಜಪಿಸಿ.

ಮತ್ತು ಅದರ ಜೊತೆ ಈ ಶ್ಲೋಕ ಪಠನೆ ಮಾಡಿ
******"******************************
*ಸಂಕಟ ಹರ ಗಣೇಶ ಸ್ತೋತ್ರ:*

ಓಂ ಪ್ರಣಮ್ಯ ಶಿರಸಾ ದೇವಂ ಗೌರಿ ಪುತ್ರಂ ವಿನಾಯಕಂ | ಭಕ್ತವಾಸಂ ಸ್ಮರೇನ್ನಿತ್ಯಂ ಆಯುಃ ಕಾಮಾರ್ಥ ಸಿದ್ಧಯೇ ||

ಪ್ರಥಮಂ ವಕ್ರತುಂಡಂ ಚ ಏಕದಂತಂ ದ್ವಿತೀಯಕಂ ತೃತೀಯಂ ಕೃಷ್ಣ ಪಿಂಗಾಕ್ಷಂ, ಗಜವಕ್ತ್ರಂ ಚತುರ್ಥಕಂ |

ಲಂಬೋದರಂ ಪಂಚಮಂ ಚ ಷಷ್ಠಂ ವಿಕಟಮೇವ ಚ ಸಪ್ತಮಂ ವಿಘ್ನ ರಾಜಂ ಚ ಧೂಮ್ರವರ್ಣಂ ತಥಾಷ್ಠಕಂ |

ನವಮಂ ಬಾಲಚಂದ್ರಂ ಚ ದಶಮಂ ತು ವಿನಾಯಕಂ ಏಕಾದಶಂ ಗಣಪತಿಂ ದ್ವಾದಶಂತು ಗಜಾನನಂ |

ದ್ವಾದಶೈತಾನಿ ನಾಮಾನಿ ತ್ರಿ ಸಂಧ್ಯಂ ಯಃ ಪಠೇನ್ನರಃ ನ ಚ ವಿಘ್ನ ಭಯಂ ತಸ್ಯ ಸರ್ವ ಸಿದ್ಧಿ ಕರಂ ಪ್ರಭೋ |

ವಿದ್ಯಾರ್ಥಿ ಲಭತೇ ವಿದ್ಯಾಂ  ಧನಾರ್ಥಿ ಲಭತೇ ಧನಂ ಪುತ್ರಾರ್ಥಿ ಲಭತೇ ಪುತ್ರಂ ಮೋಕ್ಷಾರ್ಥಿ ಲಭತೇ ಗತಿಂ ಜಪೇತ್ ಗಣಪತಿ ಸ್ತೋತ್ರಂ ಷಡ್ಭೀರ್ಮಾಸೈ ಫಲಂ ಲಭೇತ್, ಸಂವತ್ಸರೇಣ ಸಿದ್ಧಿಂ ಚ ಲಭತೇ ನಾತ್ರ ಸಂಶಯಃ ಅಷ್ಟಭ್ಯೋ ಬ್ರಹ್ಮಣೇಭ್ಯಾಷ ಚ ಲಿಖಿತ್ವ ಯಃ ಸಮರ್ಪಯೇತ್ ತಸ್ಯ ವಿದ್ಯಾ ಭವೇತ್ಸರ್ವ ಗಣೇಶಸ್ಯ ಪ್ರಸಾದತಃ

ಇತಿ ಶ್ರೀ ನಾರದ ಪುರಾಣೇ ಸಂಕಷ್ಟ ನಾಶನ ಗಣಪತಿ ಸ್ತೋತ್ರಂ ಸಂಪೂರ್ಣಂ ||

ವಿನಾಯಕನ ಜನ್ಮ ನಕ್ಷತ್ರ ಹಸ್ತ, ಕನ್ಯಾರಾಶಿ. 'ಹಸ್ತ' ಎಂದರೆ ಸೊಂಡಿಲು ಹೊಂದಿರುವ ಪ್ರಾಣಿ ಎಂದು. 

ಸೊಂಡಿಲು ಹೊಂದಿರುವುದು ಆನೆ ಮಾತ್ರ.

ಆನೆಯ ಮುಖ ಹೊಂದಿರುವವನು ಗಣಪತಿ ಮಾತ್ರ. ಆದ್ದರಿಂದ ವಿನಾಯಕನ ಜನ್ಮ ನಕ್ಷತ್ರ ಹಸ್ತವಾಯಿತು.

ಕನ್ಯಾರಾಶಿಯ ಅಧಿಪತಿ ಬುಧಗ್ರಹ. ಬುಧ ಎಂದರೆ ಪಂಡಿತ ಎಂದರ್ಥ. 

ವಿನಾಯಕನು ಮಹಾಪಂಡಿತ ಹಾಗೂ ಬುದ್ಧಿವಂತ. ಈ ಕಾರಣದಿಂದಲೇ ಯಾವುದೇ ಕಾರ್ಯಸಿದ್ಧಿ ಆಗಬೇಕಾದರೆ ಬುದ್ಧಿಶಕ್ತಿಯನ್ನು ಆರಾಧಿಸಬೇಕು. 

ಅಂದರೆ ಗಣಪತಿಯನ್ನು ಪೂಜಿಸಬೇಕು. ಬುಧನು ಹಸಿರು ಬಣ್ಣದಲ್ಲಿರುವುದರಿಂದ ಗಣಪತಿಯನ್ನು ಹಸಿರು ಪತ್ರೆಗಳಿಂದ ಪೂಜಿಸಬೇಕು. 

ಈ ಪತ್ರೆಗಳು ಸಾಮಾನ್ಯವಾಗಿ ಮಳೆಗಾಲದಲ್ಲಿ ಮಾತ್ರ ಲಭಿಸುತ್ತವೆ. ಭಾದ್ರಪದ ಮಾಸದಲ್ಲಿ ಮಳೆ ಇರುವುದರಿಂದ ಈ ಸಮಯದಲ್ಲಿ ಎಲೆಗಳು ಹಸಿರಿನಿಂದ ಕೂಡಿರುತ್ತದೆ.

ಆದ್ದರಿಂದ 21 ಪತ್ರೆಗಳಿಂದ ಪೂಜಿಸಬೇಕು.

ಗಣಪತಿಗೆ ಕೆಂಪು ಬಣ್ಣ ಬಲು ಇಷ್ಟ:

ಗಣಪತಿಯು ರಕ್ತವರ್ಣ ಶರೀರದವನು.

ಅಂದರೆ ಕುಜನ ಅಂಶ ಹೆಚ್ಚು ಇರುವನು.

ಕುಜನು ಕೆಂಪು ಬಣ್ಣಕ್ಕೆ ಅಧಿಪತಿ. ಆದ್ದರಿಂದ ಇವನನ್ನು ರಕ್ತಗಂಧಾನು ಲಿಪ್ತಾಂಗಂ ರಕ್ತ ಪುಷ್ಪೈಸ್ಸುಪೂಜಿತಂ ಎಂದು ವರ್ಣಿಸಲಾಗಿದೆ.

ಆದ್ದರಿಂದ ಗಣಪತಿಗೆ ಕೆಂಪು ಬಣ್ಣದ ಹೂ, ಕೆಂಪು ಬಣ್ಣದ ಅಕ್ಷತೆ ಹಾಗೂ ಕೆಂಪು ಬಣ್ಣದ ಬಟ್ಟೆಯಿಂದ ಪೂಜಿಸಬೇಕು.

ವಿನಾಯಕನ ಅಧಿಪತಿ ರವಿಗ್ರಹ. 

ಈ ವಿನಾಯಕನಿಗೆ ನಾಯಕನೇ ಇಲ್ಲ. ಅವನಿಗೆ ಅವನೇ ನಾಯಕ, 

ಆದ್ದರಿಂದ ಇವನು ಶಿವನ ಪ್ರಮಥ ಗಣಗಳಿಗೆ ಅಧಿಪತಿಯಾಗಿದ್ದಾನೆ. 

ಈ ಕಾರಣದಿಂದಲೇ ಈತನನ್ನು ಗಣನಾಥ ಅಥವಾ ಗಣಪತಿ ಎನ್ನುವರು.

12 ಮಾಸಗಳಲ್ಲಿ ಕೆಲವು ಮಾಸಗಳು ಗಣಪತಿಗೆ ಅತಿ ಶ್ರೇಷ್ಠ. ಭಾದ್ರಪದ ಮಾಸದಲ್ಲಿ ಶುಕ್ಲಪಕ್ಷದ ಚೌತಿ ದಿನ ಪೂಜಿಸಿದರೆ ಅಪನಿಂದನೆಗಳು ತೊಲಗಿ ಶುಭವಾಗುವುದು.

ಆಶ್ವೀಜ ಮಾಸದಲ್ಲಿ ಪೂಜಿಸಿದರೆ ಸಂತಾನ ಭಾಗ್ಯ ಸಿಗುವುದು. 

ಫಾಲ್ಗುಣ ಮಾಸದಲ್ಲಿ ಪೂಜಿಸಿದರೆ ಧನಲಾಭವಾಗುವುದು. 

ಚೈತ್ರ ಮಾಸದಲ್ಲಿ ಪೂಜಿಸಿದರೆ ವಾಹನದಿಂದ ಆಗುವ ಅಪಾಯವನ್ನು ತಪ್ಪಿಸಬಹುದು. 

ಪ್ರತಿ ಮಾಸದಲ್ಲಿ ಕೃಷ್ಣ ಪಕ್ಷದ ಚೌತಿದಿನ ಪೂಜಿಸಿದರೆ ಸಂಕಟಗಳು ನಿವಾರಣೆ ಆಗುವುದು. 

ಇದಕ್ಕೆ ಸಂಕಷ್ಟಹರ ಗಣಪತಿ ಪೂಜೆ ಎನ್ನುವರು.

*ಗಣಪತಿ ಮತ್ತು 21ಕ್ಕೂ ಇರುವ ಸಂಬಂಧ:* ಗಣಪತಿಗೆ ಇಷ್ಟವಾದ ಸಂಖ್ಯೆ 21. ಇದನ್ನು ಕೂಡಿದರೆ 2+1=3 ಆಗುವುದು. ಇದು ಓಂಕಾರಕ್ಕೆ ಸಂಕೇತವಾಗಿರುತ್ತದೆ. 

ಸಂಸ್ಕೃತದ ಓಂ ಅನ್ನು ಬಳಸಿ ಗಣಪತಿಯನ್ನು ರಚಿಸಬಹುದು. 

ಗಣಪತಿ ಹಬ್ಬದ ದಿನ ವಿನಾಯಕನಿಗೆ ಏಕವಿಂಶತಿ ಪತ್ರೆ ಪೂಜೆ ಮಾಡುವೆವು.

ಅಂದರೆ 21 ಬಗೆಯ ಪತ್ರೆಗಳಿಂದ. ಮಾನವ ದೇಹದಲ್ಲಿ ಜ್ಞಾನೇಂದ್ರಿಯ, ಕರ್ಮೇಂದ್ರಿಯ ಹತ್ತು. ಅವು ಮಾಡುವ ಕಾರ್ಯಗಳು ಹತ್ತು. ಇದರ ಜೊತೆಗೆ ಮನಸ್ಸು ಸೇರಿದರೆ 21 ಆಗುವುದು. 

ಈ 21 ತತ್ವವು ಒಟ್ಟಿಗೆ ಸೇರಿದಾಗ ಪೂಜೆ ಏಕಾಗ್ರತೆ ಹೊಂದಿ ಪೂರ್ಣವಾಗುವುದು. ಆದ್ದರಿಂದ ಗಣಪತಿಗೆ 21 ಹೂ, 21 ಗರಿಕೆ, 21 ಹಣ್ಣು, 21 ಕಾಯಿ, 21 ಪತ್ರೆಗಳು, 21 ಕಡುಬು. 21 ಮೋದಕ ಹೀಗೆ ಗಣಪತಿಗೆ 21 ಬಗೆಪ್ರಿಯವಾದ ತಿಂಡಿಗಳನ್ನು ಮಾಡಿ ಸಮರ್ಪಿಸಬೇಕು.

*32 ಗಣಪತಿ ರೂಪಗಳು*

ಬಾಲ ಗಣಪತಿ, ತೋರಣ ಗಣಪತಿ, ಭಕ್ತಿ ಗಣಪತಿ, ವೀರ ಗಣಪತಿ, ಶಕ್ತಿ ಗಣಪತಿ, ದ್ವಿಜಗಣಪತಿ, ಸಿದ್ಧಿ ಗಣಪತಿ, ಉಚ್ಚಿಷ್ಟ ಗಣಪತಿ, ವಿಘ್ನ ಗಣಪತಿ, ಹೇರಂಬ ಗಣಪತಿ, ಲಕ್ಷ್ಮೀವಲ್ಲಭ ಗಣಪತಿ, ಊರ್ಧ್ವ ಗಣಪತಿ, ಏಕಾಕ್ಷರ ಗಣಪತಿ, ಪ್ರಸನ್ನ ಗಣಪತಿ, ಹರಿದ್ರಾ ಗಣಪತಿ, ತ್ರಯಾಕ್ಷರ ಗಣಪತಿ, ಏಕದಂತ ಗಣಪತಿ, ಸೃಷ್ಟಿ ಗಣಪತಿ, ದ್ವಿಮುಖ ಗಣಪತಿ, ತ್ರಿಮುಖ ಗಣಪತಿ, ಯೋಗ ಗಣಪತಿ, ದುರ್ಗಾ ಗಣಪತಿ, ಸಂಕಷ್ಟಹರ ಗಣಪತಿ, ವರಸಿದ್ಧಿ ಗಣಪತಿ, ಗಕಾರ ಗಣಪತಿ,  ಪಂಚಮುಖಿ ಗಣಪತಿ, ಋಣ ವಿಮೋಚನ ಗಣಪತಿ, ವಿಘ್ನಹರ ಗಣಪತಿ, ವಿದ್ಯಾ ಗಣಪತಿ, ಜಲಗಣಪತಿ, 

ಗಣಪತಿಯ ಅಷ್ಟೋತ್ತರ 108. ಗಣಪತಿಯ ಸಹಸ್ರನಾಮ 1000. ತಿಥಿಗಳಲ್ಲಿ 4ನೇಯ ಪಾದ ಚೌತಿ ಅಂದರೆ ಗಣಪತಿಗೆ ಬಲು ಪ್ರಿಯ.

ಏಕೆಂದರೆ ಸೃಷ್ಟಿಯ ಆರಂಭದಲ್ಲಿ ಬ್ರಹ್ಮದೇವನಿಗೆ ಎದುರಾದ ವಿಘ್ನಗಳನ್ನು ನಿವಾರಿಸಲು ಪ್ರಣವ ಸ್ವರೂಪನಾಗಿ ವಕ್ರತುಂಡಾಕೃತಿಯಲ್ಲಿ ಪ್ರತ್ಯಕ್ಷನಾದುದು ಇದೇ ದಿನದಂದು. 

ಆದ್ದರಿಂದ ಚೌತಿ ತಿಥಿ ಎಂದರೆ ಗಣಪತಿಗೆ ಬಲು ಪ್ರೀತಿ.

*ಶನಿದೋಷಕ್ಕೆ ಪರಿಹಾರ ಗಣಪತಿ ಪೂಜೆ:*

ಶನಿಗ್ರಹವು ತ್ರಿಮೂರ್ತಿಗಳನ್ನೂ ಬಿಡದೆ ಎಲ್ಲಾ ದೇವಾನುದೇವತೆಗಳನ್ನೂ ಕಾಡಿರುವನು. ಆದರೆ ಗಣಪತಿ ಮತ್ತು ಆಂಜನೇಯನನ್ನು ಮಾತ್ರ ಹಿಡಿಯಲು ಆಗಲಿಲ್ಲವಂತೆ. 

ಆದ್ದರಿಂದ ಸಾಡೇ ಸಾತ್‌ ಶನಿ, ಶನಿದೋಷ, ಶನಿ ದೆಶೆ ಪಂಚಮ ಶನಿಯ ತೊಂದರೆ ಇರುವವರು ಗಣಪತಿಯನ್ನು ಹೆಚ್ಚು ಆರಾಧಿಸಿದರೆ ಉತ್ತಮ.

ಆಗ ಮನಸ್ಸಿಗೆ ನೆಮ್ಮದಿ ಶಾಂತಿ ಸಿಗುವುದು. ಗಣಪತಿಯನ್ನು ನೀರಿಗೆ ಏಕೆ ಬಿಡಬೇಕು?

ಆನೆಗೆ ನೀರು ಎಂದರೆ ಬಲು ಪ್ರಿಯ, ಹಾಗೆ ಗಣಪತಿಗೂ ನೀರು ಎಂದರೆ ಬಲು ಇಷ್ಟ. 

ವಿಷ್ಣು ಅಲಂಕಾರ ಪ್ರಿಯ. ಶಿವ ಭಕ್ತಿಪ್ರಿಯ. ಹಾಗೆ ಗಣಪತಿ ತರ್ಪಣ ಪ್ರಿಯ. ಈ ಕಾರಣಕ್ಕಾಗಿಯೇ ಗಣಪತಿಯನ್ನು ನೀರಿನಲ್ಲಿ ಬಿಡುವುದು. 

ಆ ಸಮಯದಲ್ಲಿ ಭಕ್ತರು, ಚಿಕ್ಕ ಚಿಕ್ಕ ಮಕ್ಕಳು 'ಚಿಕ್ಕೆರೆಯಲ್ಲಿ ಬಿದ್ದಾ, ದೊಡ್ಡ ಕರೆಯಲ್ಲಿ ಎದ್ದಾ' ಎನ್ನುತ್ತಾ ಸಂತೋಷ ಪಡುತ್ತಾರೆ. 

ಇದರ ಒಳ ಅರ್ಥ ದೊಡ್ಕೆರೆ ಎಂದರೆ ಸಪ್ತ ಸಮುದ್ರಗಳ ವೈಶಾಲ್ಯ ಮೀರಿಸಿ ನಿಂತಿರುವ ಮಾನವನ ಹೃದಯ. 

ಅಂದರೆ ಮತ್ತೆ ಏಳಲಿ ಎದ್ದುರಾಷ್ಟ್ರಕ್ಕೆ, ಸಮಾಜಕ್ಕೆ ರಕ್ಷಣೆ ನೀಡಲಿ ಹಾಗೂ ತೊಂದರೆಗಳನ್ನು ಪರಿಹರಿಸಿ ಶುಭವನ್ನು ನೀಡಲಿ ಎಂದು.

ಗಣಪತಿ ಏನು ಇದರ ಒಳ ಅರ್ಥ? ಗ ಎಂದರೆ ಬುದ್ದಿ, ಣ ಎಂದರೆ ಜ್ಞಾನ, ಪತಿ ಎಂದರೆ ಹಿಡಿತ ಸಾಧಿಸುವನು.

ಅಂದರೆ ಯಾರು ಬುದ್ಧಿ ಮತ್ತು ಜ್ಞಾನದ ಮೇಲೆ ಹಿಡಿತ ಸಾಧಿಸುತ್ತಾನೋ ಆತನೇ ಗಣಪತಿ.

ಜಲತತ್ವರಾಶಿಯಾದ ಕಟಕ, ವೃಶ್ಚಿಕ ಮತ್ತು ಮೀನ ರಾಶಿಯವರು ಹೆಚ್ಚು ಗಣಪತಿಯನ್ನು ಪೂಜಿಸುವರು. 

ಗಣಪತಿಯದು ಕನ್ಯಾ ರಾಶಿ. ಈ ರಾಶಿಯವರೂ ಸಹ ಹೆಚ್ಚು ಪೂಜಿಸುವರು.

No comments:

Post a Comment