Thursday, 28 May 2020

ಅಜಾಮಿಳನ ಮಗ ನಾರಾಯಣ

#ಅಜಾಮಿಳನ_ಕಥೆ

ಅಜಾಮಿಳನ ಮಗ ನಾರಾಯಣ

‘ಅರಿವು-ಮರೆವುಗಳ ಕಣ್ಣಾಮುಚ್ಚಾಲೆಯಾಗಿರುವಂತಿದೆ’ ಈ ಬದುಕು. ಮೊದಲು ‘ಅರಿವು’. ಅದಕ್ಕೆ ತಾನು ಅರಿವೆಂದೇ ತಿಳಿದಿರಲಿಲ್ಲವೇನೋ. 

ಅದು ನಿಜಕ್ಕೂ ಮುಗ್ಧವಾಗಿತ್ತೇನೋ. ಆದುದರಿಂದಲೇ ‘ಅರಿವು’ ತನ್ನನ್ನು ತಾನು ಮರೆತು- ಮೈಮರೆವಿನಲ್ಲಿ ಹುದುಗಿತು.

 ಬೆಳಕೆ ಬೆಳಕಾಗಿದ್ದು ಕತ್ತಲೆಯು ತುಂಬಿತು ಹೇಗೆ -ಎಂದು ಕವಿ ಕೇಳಿದಂತೆ. ನಾವಿದನ್ನು ಪಟ್ಟು ಹಿಡಿದು ಪ್ರಶ್ನಿಸುವುದು ಬೇಡ. ಕತ್ತಲೆ ತುಂಬಿದ್ದು ಹೌದು. ಅರಿವು ತನ್ನನ್ನು ಮರೆತುದು ಹೌದು. 

ಕತ್ತಲೆ ತಾನು ಕತ್ತಲೆ ಎಂದೇ ಮರೆತಿತ್ತಲ್ಲ. ಅಂಥ ಮೈ ಮರೆವು ಒಂದು ಉದ್ವೇಗವಾಗಿ, ಉದ್ವಿಗ್ನತೆ ಸಂಸಾರದಲ್ಲಿ ಬೇಕೆನಿಸುವುದೂ ಹೌದು. ಮರೆವು ಉಂಟಾದಂತೆ ಅರಿವೂ ಉಂಟಾಗಲಾರದೆ? 

ಮರೆತದ್ದು ನೆನಪಾಗಲಾರದೆ? ಕತ್ತಲೆ ಕಳೆದು ಬೆಳಕಾಗಲಾರದೆ? ನೆನಪಾಗುವುದೂ ಒಂದು ರೋಮಾಂಚನವಲ್ಲವೆ?

 ಇದುವರೆಗೆ ಇದ್ದುದು ಮರೆವು- ಕತ್ತಲೆ, ಎಂದು ಬೆಳಕಾಗುವಾಗಲೇ ತಿಳಿಯುವುದಾದರೆ, ತಾನು ಅರಿವು, ತಾನು ಬೆಳಕು ಎನ್ನುವುದೂ ಕತ್ತಲೆ ಕಳೆದ ಮೇಲಿನ ಬೆಳಕಿಗೇ ತಿಳಿಯುವುದಾಗಿರಬೇಕು! ಆಗ ಅರಿವಿನ ಅರಿವು! ಇದು ಅರಿವಿನ ಸಾಧ್ಯತೆ! ಅರಿವು ಇರುವ ಮನುಷ್ಯನ ಸಾಧ್ಯತೆ! ಈ ಅರಿವಿನ ಅರಿವನ್ನು ಉಪನಿಷತ್ತು ‘ಸತ್ಯಸ್ಯ ಸತ್ಯಂ’ -ಸತ್ಯದ ಸತ್ಯ ಎಂದು ಅದ್ಭುತವಾಗಿ ಕರೆದಿತ್ತು; ಯಾವ ಅರಿವನ್ನೂ ನಿರಾಕರಣ ಮಾಡದೆ.

ಅರಿವು-ಮರೆವು-ಅರಿವುಗಳ ಈ ಕಣ್ಣಾಮುಚ್ಚಾಲೆಯಲ್ಲಿ ‘ಅಭಿಜ್ಞಾನ’ವೊಂದು ಅಗತ್ಯವಾಗಿದೆ. ಅಭಿಜ್ಞಾನವೆಂದರೆ, ಮರೆತುದನ್ನು ನೆನಪಿಸುವ ಗುರುತು; ಕುರುಹು; ಒಂದು ಸಂಕೇತ. 

ಇದ್ದಕ್ಕಿದ್ದಂತೆ ದಾರಿ ಬದಲಿಸುವ ಸೂಚನೆಯನ್ನು ಕೊಡಬಲ್ಲ ಒಂದು ಸನ್ನೆ. ತಿರುವು. ನಿಜಕ್ಕಾದರೆ, ಈ ಲೋಕವೇ ಒಂದು ಅಭಿಜ್ಞಾನ. ನಾವೀ ಲೋಕಕ್ಕೆ ಬಂದೆವು. ಲೋಕವನ್ನು ಅವಲೋಕನ ಮಾಡಿದೆವು. ಅಂದರೆ ನೋಡಿದೆವು.

 ‘ಲೋಕ’ವೆಂದರೆ ನೋಡಲ್ಪಡುವಂಥದು ಎಂದೇ ಅರ್ಥ. ಲೋಕವನ್ನು ನೋಡಿದ್ದಕ್ಕೆ, ನೋಡಿದ ತಪ್ಪಿಗೆ ಯಾವುದನ್ನು ನೋಡಿದೆವೋ ಅದರಂತೆ ಆದೆವು. ನಮ್ಮೊಳಗಿನ ವಾಸನಾ ಪ್ರಪಂಚವನ್ನು ನಾವು ಕಂಡ ಲೋಕ; ನಾವು ಕಂಡ ದೃಶ್ಯವು ಪ್ರಚೋದಿಸಿತು. ಅಲ್ಲಿಗೆ ನಮ್ಮ ಮನಸ್ಸು ಚಲಿಸುವ ದಾರಿ, ಧಾಟಿ, ನಕಾಶೆಯೊಂದು ಸಿದ್ಧವಾಯಿತು. 

ಉಳಿದುದೆಲ್ಲ ಸಂಸಾರದ ಇತಿಹಾಸ! ಇಲ್ಲಿ ಲೋಕ, ಅಭಿಜ್ಞಾನವಾಗಿ ಕೆಲಸ ಮಾಡಿತೆನ್ನಬೇಕು. ಅದು ತನ್ನನ್ನು ಕಂಡ ನಮ್ಮನ್ನು ತನ್ನಂತೆ ಮಾಡಿತೆನ್ನಬೇಕು. ನಮ್ಮೊಳಗೆ ತನ್ನ ತದ್ರೂಪವನ್ನು ಸಾದೃಶ್ಯವನ್ನು, ಪ್ರತಿಬಿಂಬವನ್ನು, ಸಂತತಿಯನ್ನು ಸೃಷ್ಟಿಸಿತೆನ್ನಬೇಕು! ಇದು ಇಂದ್ರಿಯ ಲೋಕ!

ಇನ್ನೊಂದು ರೀತಿಯ ಅಭಿಜ್ಞಾನವಿದೆ. ಕವಿ ವಾಲ್ಮೀಕಿಗೆ ಕ್ರೌಂಚಪಕ್ಷಿಯ ದುರಂತವನ್ನು ಕಂಡಾಗ ಉಂಟಾದ ಸಂವೇದನೆಯಂಥದು. 

ಈ ಲೋಕದಲ್ಲಿ ನಿಜಕ್ಕೂ ಗುಣಾಢ್ಯನೊಬ್ಬನಿದ್ದಾನೆಯೆ ಎಂಬ ವಾಲ್ಮೀಕಿಯ ಪ್ರಶ್ನೆಗೆ ನಾರದ ರಾಮನ ಕಥೆಯನ್ನು ಹೇಳಿದ್ದ. ಆ ಕಥೆ ವಾಲ್ಮೀಕಿಯ ಮನದಲ್ಲಿ ಸುಳಿಯುತ್ತಿತ್ತು. ಆಗ ಅವನ ಕಣ್ಣ ಮುಂದೆ ನಡೆಯಿತು ಕ್ರೌಂಚ ಹಕ್ಕಿಯ ದುರಂತ ನಾಟಕ. 

ಸರಸದಲ್ಲಿದ್ದವು ಎರಡು ಹಕ್ಕಿಗಳು. ಬೇಟೆಗಾರನೊಬ್ಬ ಮರೆಯಿಂದ ಬಾಣ ಹೊಡೆದ. ಬಿದ್ದುರುಳಿದ್ದು ಗಂಡು ಹಕ್ಕಿ. ರಸಭಂಗವಾಯಿತು. ಹೆಣ್ಣು ಕ್ರೌಂಚ ಹೊರಳಿ ಹೊರಳಿ ಅತ್ತಿತು. ಇದನ್ನೆಲ್ಲ ನೋಡುತ್ತಿದ್ದ ವಾಲ್ಮೀಕಿಯಲ್ಲಿ ಕರುಣಭಾವ ಉಕ್ಕಿತು. ರಸಭಂಗದ ಪರಿಣಾಮವಾಗಿ ಹೊಸ ರಸವೊಂದು ಚಿಮ್ಮಿತು. ಇಲ್ಲಿಯೂ ಕ್ರೌಂಚ ದುರಂತ ಅಭಿಜ್ಞಾನವಾಗಿ ಕೆಲಸ ಮಾಡಿತು. 

ಆದರೆ, ಇಲ್ಲಿ ವಾಲ್ಮೀಕಿಯ ಅಂತ:ಕರಣ ಲೋಕದ ತದ್ರೂಪವನ್ನು ಪಡೆಯುವುದಿಲ್ಲ. ಲೋಕ ಹೀಗಿರಬಾರದು; ಈ ಕ್ರೌರ್ಯ ಸಲ್ಲದು ಎಂಬ ಭಾವವಿಲ್ಲಿದೆ. ಕ್ರೂರ ಲೋಕವನ್ನು ಕರುಣದಿಂದ ತಿದ್ದುವ ಪರಿ ಇದೆ. ಇದು ಕಲೆಯ ಲೋಕ. ಕಾವ್ಯದ ಲೋಕ. ಮನಸ್ಸಿನ ಪರಿಣಾಮದ ಲೋಕ. ಇಲ್ಲಿ ಎಚ್ಚರವಿದೆ. ಮರೆವು ಎಚ್ಚರವಾಗಿ, ಅಭಿಜ್ಞಾನವು ಇಲ್ಲಿ ಸೂಕ್ಷ್ಮವಾಗಿದೆ. ಇಲ್ಲಿ ಅಂತ:ಕರಣಕ್ಕೆ ತನ್ನದೇ ಕಾಣ್ಕೆ ಇದೆ.

ಇನ್ನೂ ಒಂದು ರೀತಿಯ ಅಭಿಜ್ಞಾನವಿದೆ ಎನ್ನುತ್ತದೆ ಭಾಗವತ. ಇದು ಅರಿವಿನ ಅರಿವನ್ನು, ಸತ್ಯದ ಸತ್ಯವನ್ನು ನೆನಪಿಸುವ ಅಭಿಜ್ಞಾನ. ಶಬ್ದದ ವಾಚ್ಯವಾದ ಬಳಕೆಯ ಅರ್ಥವನ್ನಲ್ಲ, ಶಬ್ದದ ‘ಧ್ವನಿ ಶಕ್ತಿ’ಯನ್ನು ಉದ್ದೀಪಿಸುವ ಅಭಿಜ್ಞಾನ. 

‘ಹಂಸ’ ಎಂದಾಗ ‘ಸೋ ಹಂ’ (ಅವನೇ ನಾನು) ಎಂಬುದು ತಿರುವು ಮುರುವಾಗಿ ಕುಳಿತಂತಿದೆ ಎಂದು ಉದ್ದೀಪನವಾಗುವ ಧ್ವನಿಶಕ್ತಿ ಇದು. ‘ಕೃಷ್ಣ’ ಎಂದಾಗ ಆಕರ್ಷಣೆಯಂಟಾಗಿ, ಕೃಷ್ಣ ಎಂಬ ಪದಕ್ಕೆ ಕಪ್ಪು ಎಂದಲ್ಲ ಆಕರ್ಷಣೆ ಎನ್ನುವುದೇ ನಿಜವಾದ ಅರ್ಥ- ನಮಗೇನು ಅನುಭವವಾಗುವುದೋ ಅದೇ ಆ ಪದದ ಅರ್ಥ- ಎಂಬ ಉದ್ದೀಪನವಾಗುವ ಧ್ವನಿ ಶಕ್ತಿ ಇದು. 

ಗುಡುಗು ಮೂರು ಬಾರಿ ಗುಡುಗಿದಾಗ ‘ದ-ದ-ದ’ ಎಂದಂತೆ ಕೇಳಿಸಿತಂತೆ ಉಪನಿಷತ್ತಿನ ಋಷಿಗಳಿಗೆ. ಹಾಗೆಂದರೆ, ದತ್ತ; ದಯಧ್ವಂ; ದಮ್ಯತ- ದಾನಮಾಡು; ದಯೆ ಇಡು; ಇಂದ್ರಿಯ ದಮನ ಮಾಡು ಎಂಬ ಅರ್ಥವಂತೆ. ಇಂಥ ಸ್ಫುರಣವಾಗುವುದಕ್ಕೆ, ಈ ಅರ್ಥ ನೆನಪಾಗುವುದಕ್ಕೆ ಕಾರಣವಾಗುವ ಅಭಿಜ್ಞಾನ, ಧ್ವನಿ ಶಕ್ತಿ ಒಂದಿದೆಯಂತೆ. ಅಂಥದೊಂದು ಕಥೆ ಇದು. ಅಜಾಮಿಳೋಪಾಖ್ಯಾನ:ಚಿತ್ರ: ಎಂ.ಆರ್.ಪಾವಂಜೆ

ಅವನೊಬ್ಬ ಬ್ರಾಹ್ಮಣ. ಸರಳ; ಮಿತಭಾಷಿ, ಭೂತದಯಾಪರ, ಮಂತ್ರಜ್ಞ; ಸಾತ್ತ್ವಿಕ; ವಿದ್ವಾಂಸನಿದ್ದ.  ಗುರು, ಅಗ್ನಿ, ಅತಿಥಿ, ಹಿರಿಯರ ಸೇವೆ ಮಾಡುತ್ತಿದ್ದ. ಅವನ ಸುತ್ತಲಿನ ಸನ್ನಿವೇಶಕ್ಕೆ ತಕ್ಕಂತೆ, ತದ್ರೂಪವಾಗಿ ಇದ್ದ. 

ವಿರುದ್ಧವನ್ನು ಎಣಿಸುವವನೇ ಅಲ್ಲ. ಇದೇ ತಾನೇ ಸರಳತೆ; ಸಾತ್ತ್ವಿಕತೆ! ಅವನ ಹೆಸರು ಅಜಾಮಿಳ. ಮನೆಯ ಪಕ್ಕದಲ್ಲಿ ಕಾಡು. ಸಮಿಧೆಗಾಗಿ, ಹೂ-ಹಣ್ಣುಗಳಿಗಾಗಿ, ಕಟ್ಟಿಗೆಗಾಗಿ ಕಾಡಿನಲ್ಲಿ ತಿರುಗಾಟವಿದ್ದೇ ಇದೆ ಅಜಾಮಿಳನಿಗೆ. ಇಂಥ ಒಂದು ದಿನ ತಿರುಗಾಟದಲ್ಲಿ, ಅದುವರೆಗೆ ತಾನು ನೋಡದ ನೋಟವೊಂದನ್ನು ನೋಡಬಾರದ್ದನ್ನು (?) ನೋಡಿದ. ಸುಂದರಿಯಾದ ಒಬ್ಬಳು ಹೆಣ್ಣು, ಆಕೆಯ ಮೈಗೆ ಒರಗಿರುವ ಓರ್ವ ಗಂಡು, ಪಕ್ಕದಲ್ಲಿ ಮದ್ಯದ ಮಡಕೆ! ಇಬ್ಬರಿಗೂ ನಶೆ ಏರಿದೆ. 

ಅರಿವೆಯೂ ಇಲ್ಲ; ಪರಿವೆಯೂ ಇಲ್ಲ; ಲೋಕಕ್ಕೆಲ್ಲ ತಾವಿಬ್ಬರೇ ಎಂಬಂತೆ, ಅಥವಾ ಲೋಕವೇ ಸುಳ್ಳೆಂಬಂತೆ- ಮೈಯ ಮೋಜಿನ ಮೇಜವಾನಿಯಲ್ಲಿ ಕಾಡಕುದುರೆ ಕೆನೆಯುತ್ತಿದ್ದಂತೆ ಕಾಮ ಕಾಡ್ಗಿಚ್ಚಿನಂತೆ ಉರಿಯುತ್ತಿದ್ದ. ನಿಜಕ್ಕೂ ಕಾಡೆಂಬುದೇ ಒಂದು ರೂಪಕ! ಕಾಡೆಂಬುದೇ ಅನೂಹ್ಯ ಆಕರ್ಷಣೆ! ಕಟ್ಟಿದ್ದನ್ನೆಲ್ಲ ಕೆಡಹೆನ್ನುವುದೇ ಕಾಡಿನ ಕರೆ! ಆ ಕರೆ ಕೇಳದಂತೆ ಬದುಕುವುದೇ ಅಸಾಧ್ಯ. ನಿಜಕ್ಕೂ ಕಾಡು ದೂರದಲ್ಲಿಲ್ಲ. ಪಕ್ಕದಲ್ಲೇ ಇದೆ. ಸುಮ್ಮನೆ ಮೈ ಮುರಿದರೆ ಅಲ್ಲಿ ಕಾಡು ಸಿಕ್ಕೀತು. ಕಾಡಿನ ಕಡೆಗೆ ನಡೆಯುವುದೇ ಹೆಜ್ಜೆಗೆ ಸಹಜ ಗತಿ!

ಈ ಅಜಾಮಿಳನೆಂಬ ಯವಕ, ದೇಹ; ಮನಸ್ಸು; ಬುದ್ಧಿಗಳಿಗೆ ಶಾಸ್ತ್ರೀಯವಾದ ತರಬೇತಿಯನ್ನು ಕೊಡುತ್ತಿದ್ದವ- ಇವನಿಗೆ ಮೊತ್ತ ಮೊದಲ ಬಾರಿಗೆ ಕಾಡಿನ ಪರಿಚಯವಾಯಿತು! ಮದಜಲ ಸುರಿಯುತ್ತಿದ್ದಂತೆ ಮದ್ದಾನೆ, ಹೆಮ್ಮರಗಳನ್ನು ಮುರಿಯುವುದೇಕೆಂದು ಗೊತ್ತಾಯಿತು. 

ಅಂದಿನಿಂದ ಅಜಾಮಿಳನಿಗೆ ಮನೆಯ ದಾರಿ ಮರೆತು ಹೋಯಿತು. ಅದುವರೆಗಿನ ಬದುಕೇ ತೀರ ಜೊಳ್ಳು ಎನಿಸಿ ಬಿಟ್ಟಿತು. ಆ ಕಾಡ ಹುಡುಗಿಯ ಜತೆ ಬಾಳದಿದ್ದರೆ ಬದುಕು ಬದುಕೇ ಅಲ್ಲ ಎನ್ನಿಸಿಬಿಟ್ಟಿತು. ಯಜ್ಞಕ್ಕೆ ಬೇರೆಯೇ ಅರ್ಥ ಬಂದೊದಗಿತು. ಪ್ರಕೃತಿಯನ್ನು ಪಳಗಿಸುವ ಪ್ರಯತ್ನವಷ್ಟೂ  ವ್ಯರ್ಥ ಪ್ರಯಾಸ ಎಂಬ ಹೊಸ ಕಾಣ್ಕೆ ಉಂಟಾಯಿತು. ಅವನು ತಾನು ಕಂಡ ಕಾಡಿನ ಹುಡುಗಿಯ ಸಂಗದಲ್ಲಿ, ಪಳಗಿಸುವುದೇ ದೈನಿಕವಾಗಿರುವ ಲೋಕವನ್ನು ಮರೆತ. ಲೋಕವೂ ಅವನನ್ನು ಮರೆಯಿತು.

ಕಾಡಿನ ಸಂಸಾರ ಬೆಳೆಯಿತು. ಮಕ್ಕಳಾದವು. ಎಲ್ಲ ಮಕ್ಕಳ ಮೇಲೂ ಪ್ರೀತಿ ಇದ್ದರೂ ಅಜಾಮಿಳನಿಗೆ ಕೊನೆಯ ಮಗನ ಮೇಲೆ ಇನ್ನಿಲ್ಲದ ಅಕ್ಕರೆ ಸೂಸುತ್ತಿತ್ತು. ಆ ಕೊನೆಯ ಮಗನ ಹೆಸರು ‘ನಾರಾಯಣ’.  ಬಾಯ್ತುಂಬ ಹೆಸರು ಹೇಳಿ ಅವನನ್ನು ಕರೆದರೆ, ಅಜಾಮಿಳನಿಗೆ ಏನೋ ಹೇಳಲಾಗದ ಸಂತೋಷವಾಗುತ್ತಿತ್ತು. 

ಓಡೋಡುತ್ತಿವೆಯೋ ಎಂಬಂತೆ ದಿನ-ರಾತ್ರಿಗಳು ಉರುಳಿದವು. ಕಾಡಿನಲ್ಲಿ ಚಳಿಗಾಲದಲ್ಲಿ ಎಲೆ ಉದುರಿಸುವ ಮರಗಳು ಮರಳಿ ವಸಂತದಲ್ಲಿ ಹೊಸ ನನೆಯ ಸಂಭ್ರಮ ಅನುಭವಿಸುತ್ತಿರುವುದು ಅಜಾಮಿಳನಿಗೆ ಕಾಣಿಸುತ್ತಿತ್ತಾದರೂ, ಮನುಷ್ಯ ಜೀವಕ್ಕೆ ಮಾತ್ರ ಆ ಭಾಗ್ಯವಿಲ್ಲ ಎನ್ನುವಂತೆ ಕಡು ಮುಪ್ಪು ಅವನನ್ನು ಆವರಿಸಿತು. ಸಾವಿನ ನೆರಳು ಕವಿಯುತ್ತಿತ್ತು. ಅದರ ನೀಳ ತೋಳು ಕೊರಳನ್ನು ಔಕುವಂತೆ ಅವನಿಗೆ ಭಾಸವಾಗುತ್ತಿತ್ತು. ಸಾವಿನ ಕುರಿತೇ ಚಿಂತೆ ಶುರುವಾಯಿತು. 

ಒಂದಿರುಳು ಅಜಾಮಿಳನಿಗೆ ಘೋರ ರೂಪದ ಯಮದೂತರೇ ಕಣ್ಣೆದುರು ನಿಂತಂತಾಯಿತು. ಅವರ ಕೈಯಲ್ಲಿ ಯಮಪಾಶ! ಹೌದು ಮತ್ತೆ. ಯಾವ ಜೀವಿ ತಾನೇ ಸಾಯಲು ಸಿದ್ಧವಿದೆ? ಪಾಶ ಹಾಕಿ ದರದರ ಎಳಕೊಂಡು ಹೋಗಬೇಕಷ್ಟೆ. ಅವರ ಕಣ್ಣು ನಿರ್ದಯವಾಗಿ ದುರುಗುಟ್ಟುತ್ತಿದ್ದವು. ಘೋರ ದೃಶ್ಯ.  ಅಜಾಮಿಳನಿಗೆ ನಿಜಕ್ಕೂ ಭಯವಾಯಿತು. ತನ್ನ ಮಗನನ್ನೇ ಇರಬೇಕು; ‘ನಾರಾಯಣ’ ಎಂದು ಕೂಗಿ ಕರೆದ! ಮರುಕ್ಷಣ ಬಾಹ್ಯ ಪ್ರಜ್ಞೆ ತಪ್ಪಿತು.

ಯಮದೂತರು ಎಂದಿನಂತೆ ಜೀವವನ್ನು ಹೊರ ಸೆಳೆದು ಕೊಂಡೊಯ್ಯುವ ಕೆಲಸಕ್ಕೆ ಉಪಕ್ರಮಿಸಬೇಕು- ಅಷ್ಟರಲ್ಲಿ ಅಲ್ಲಿಗೆ ಪ್ರಸನ್ನ ರೂಪದ ವಿಷ್ಣು ದೂತರು ಹೊದ್ದ ಪೀತಾಂಬರದ ನೆರಿಯಂತೆ ಶಾಂತವಾದ ನಗು ತುಳುಕಿಸುತ್ತ ಬಂದರಂತೆ. ಆಗ ಅವರೊಳಗೆ ಹೀಗೊಂದು ಸಂವಾದ ಶುರುವಿಟ್ಟಿತು.

ಯಮದೂತರು: ನೀವೇಕೆ ಇಲ್ಲಿ? ಇದು ಪಾಪಿಯೊಬ್ಬನ ಸಾವಿನ ಸೂತಕದ ಜಾಗ. ಇಂಥಲ್ಲಿ ನಿಮ್ಮನ್ನು ನಿರೀಕ್ಷಿಸಿರಲಿಲ್ಲ.

ವಿಷ್ಣು ದೂತರು: ಪಾಪ! ನೀವು ಯಮದೂತರು. ಅನಿರೀಕ್ಷಿತವಾದುದು ಎಂದೂ ನಿಮ್ಮ ಅನುಭವಕ್ಕೆ ಬಂದಿಲ್ಲ. ಹುಟ್ಟಿದ ಮೇಲೆ ಎಲ್ಲ ಜೀವಿಗಳಿಗೂ ಸಾವು ನಿರೀಕ್ಷಿತವೇ ಅಲ್ಲವೆ? ನಮಗೆ ಹಾಗಲ್ಲ. ನಾವು ಅನಿರೀಕ್ಷಿತದ ಕಡೆಗೆ ಸದಾ ಒಂದು ಮನಸ್ಸನ್ನಿಟ್ಟ ಮಂದಿ. ಅಜಾಮಿಳನೆಂಬ ಈ ಜೀವ ನಮ್ಮವನು!  ನಿಮಗೆ ಸೇರಬೇಕಾದವನಲ್ಲ.

ಯಮದೂತರು: ಈತ ಪಾಪಿ. ತನ್ನ ಪೂರ್ವ ಸಂಸ್ಕಾರವನ್ನು ಮರೆತು ಕಾಮುಕನಾಗಿ ಇಷ್ಟು ಕಾಲ ಬದುಕಿದ. ಇವನು ನಿಮ್ಮವನಾಗುವುದೆಂತು!

ವಿಷ್ಣುದೂತರು: ನಿಮಗೆ ಪಾಪದ ಕಡೆಗೇ ಕಣ್ಣು! ನಮಗೋ ಪುಣ್ಯದ ಕಡೆಗೆ. ಆತನು ನುಡಿದ ‘ನಾರಾಯಣ’ ನಾಮ ನಿಮಗೆ ಕೇಳಿಸಲಿಲ್ಲವೇನು? ನಾರಾಯಣನೆಂದರೆ ಯಮನೇನು? ಹೋಗಿ, ಯಮನನ್ನೇ ಕೇಳಿ.

ಯಮದೂತರು: ಈತ ‘ನಾರಾಯಣ’ ಎಂದದ್ದು ಹೌದು. ಅದು ಈ ಪಾಪಿಯ ಮಗನ ಹೆಸರು.  ಸಾಯುವ ಭಯದಲ್ಲಿ ಮಗನನ್ನು ಕರೆದ ಅಷ್ಟೆ!

ವಿಷ್ಣುದೂತರು: ಹೋ ಹೋ ನಿಲ್ಲಿಸಿ ನಿಮ್ಮ ತಲೆ ಹರಟೆ. ‘ನಾರಾಯಣ’ ಎಂದರೆ, ಈತನ ಮಗನ ಹೆಸರೇನು? ‘ನಾರಾಯಣ’ ಎಂದರೆ ಲೋಕದ ಅಧಿ ದೈವದ ಹೆಸರು. ಕಾಣುವ, ಕಾಣದ, ಜೀವನದ ಸಾರಭೂತವಾದ ವಸ್ತು ಎಂದು ಆ ನಾಮದ ಅರ್ಥ. 

ಈ ಅಜಾಮಿಳ ಆ ‘ನಾರಾಯಣ’ ನಾಮವನ್ನು ಉಚ್ಚರಿಸಿದನೋ ಇಲ್ಲವೋ- ತತ್ ಕ್ಷಣ- ಈತನ ಬಾಲ್ಯದ ಸಂಸ್ಕಾರಗಳೆಲ್ಲ ಉದ್ ಬುದ್ಧವಾಗಿ, ಈತ ಒಂದು ಹಸುಳೆಯೇ ಆಗಿ, ನಿಸ್ಸಹಾಯಕನಾಗಿ, ಭಗವಂತನನ್ನು ನೆನೆದ. ತಾನೇ ಮಗುವಿನಂತಾಗಿ ತಂದೆಯಂಥ ದೇವರನ್ನು ಕರೆದ.

 ನಿಮ್ಮನ್ನು ಕಂಡವನಿಗೆ ತಾನು ಮಕ್ಕಳ ತಂದೆ ಎಂಬ ಅಹಂಕಾರವಾದರೂ ಉಳಿಯುತ್ತದೆಯೇ! ಅದೇ ನೀವು ಮಾಡುವ ಉಪಕಾರ! ಅದೇ ನಿಮಗೆ ಗೊತ್ತಿಲ್ಲ.  ತಾನು ಮಗುವಿನಂತಾಗದೆ, ತಂದೆಯನ್ನು ಕರೆಯಲಾಗದು. ಈತ ತನ್ನ ಮಗನ ನೆನಪಿನಲ್ಲಿ ತಾನು ಮಗನಂತೇ ಆಗುತ್ತಿದ್ದನಯ್ಯ. 

ಯಾವಾಗ ದೇವರ ನಾಮ ಉಚ್ಚರಿಸಿದನೋ ಆಗ ಇದು ಜಗದ ತಂದೆಯ ಹೆಸರು ಎಂದು ಅರಿವಿಗೆ ಬಂದು, ದೇವರ ಸಂಸಾರಕ್ಕೆ ಸೇರಿ ಬಿಟ್ಟನಯ್ಯ. ಇದು ಸಂಸಾರದ ಮಹತ್ತ್ವ.  ಸಂಸಾರದಲ್ಲಿ ಅಡಗಿರುವ ದೇವರ ನಾಮದ ಮಹತ್ತ್ವ. ನೀವು, ಯಮದೂತರು. 

ಬರೀ ವಾಚ್ಯಾರ್ಥ ನೋಡುತ್ತೀರಿ. ಬರಿಯ ಮೇಲ್ನೋಟದ ಅರಿವು ನಿಮ್ಮದು. ಆದರೆ, ಅರಿವಿನ ಅರಿವು ಒಂದಿದೆ. ಸತ್ಯದ ಸತ್ಯ ಎಂದ ಹಾಗೆ. ಇದನ್ನೇ ಸ್ವಲ್ಪ ಮುಂದುವರಿಸಿ, ‘ಸಾವಿನ ಸಾವೂ’ ಒಂದಿದೆ ಎಂದರೆ ತಬ್ಬಿಬ್ಬಾಗಬೇಡಿ.  ನಿಮ್ಮೊಡೆಯನಾದ ಯಮನಲ್ಲಿ ಹೋಗಿ ಕೇಳಿ. ನೀನೇ ಎಲ್ಲದಕ್ಕೂ ಕೊನೆಯೋ? ಅಥವಾ ನಿನಗೂ ಕೊನೆ ಎಂಬುದುಂಟೋ? ಇದ್ದರೆ, ಆ ಕೊನೆಯುಂಟು ಮಾಡುವವನು ಯಾರು ಎಂದು ಕೇಳಿ. ಯಮನಿಗೆ ಯಮನಾರೆಂದರೆ ಅವನೊಬ್ಬನೇ ‘ನಾರಾಯಣ’. ‘ನಾರಾಯಣ’ನನ್ನು ಕೂಗಿಕರೆದರೆ ನಾವು ತಪ್ಪದೆ ಬರುತ್ತೇವೆ. ಇನ್ನೊಮ್ಮೆ ಹೇಳುತ್ತೇವೆ. ಈ ‘ಜೀವ’ ನಮ್ಮವನು.

ಯಮದೂತರು: ಹಾಗಾದರೆ, ಈ ಅಜಾಮಿಳ ಪಾಪ ಮಾಡಿಲ್ಲವೆ? ಅದಕ್ಕೇನು ಉತ್ತರ?

ವಿಷ್ಣುದೂತರು: ಪಾಪ? ಎಲ್ಲಿದೆ ಅದು ಈಗ? ಕಾಡ್ಗಿಚ್ಚಿಗೆ ಕಾಡನ್ನು ಸುಟ್ಟು ಬೂದಿ ಮಾಡುವುದಕ್ಕೆ ಎಷ್ಟು ಹೊತ್ತು ಬೇಕೆನ್ನುತ್ತೀರಿ? ಮೂರು ತಿಂಗಳ ಬೇಸಗೆಯ ಉರಿ ಒಂದು ಮಳೆಗೆ ತಂಪಾಗುವುದಿಲ್ಲವೆ?  ನಿಮಗೆ ಇಷ್ಟು ಕಾಲ ನರಕದ ಶಿಕ್ಷೆ, ಇಷ್ಟು ಕಾಲ ಸ್ವರ್ಗದ ಪುರಸ್ಕಾರ ಎಂದು ಕಾಲ ಗಣನೆ ಮಾಡಿ ಮಾತ್ರ ಗೊತ್ತು. ಇದೇ ದೊಡ್ಡ ಆಶ್ಚರ್ಯ! ಶಿಕ್ಷೆ ಕೊಡುವುದಕ್ಕೆ ನಿಯುಕ್ತರಾದವರಿಗೆ ಪಶ್ಚಾತ್ತಾಪದ ಮಹತ್ತ್ವವೇ ತಿಳಿಯದೆ ಹೋಗುವುದು!

ಅಜಾಮಿಳ, ಯಾವಾಗ ‘ನಾರಾಯಣ’ ನಾಮ ಉಚ್ಚರಿಸಿದ ಆ ನಾಮದ ಮಾಂಗಲ್ಯದಿಂದಾಗಿಯೇ ಅವನಾಳದಲ್ಲಿ ಪಶ್ಚಾತ್ತಾಪದ ಅಗ್ನಿ ಹೋತ್ರ ಉರಿಯಲಾರಂಭಿಸಿತು. ಅಗ್ನಿ ಶುದ್ಧಿ! ತಾನು ನಾಮೋಚ್ಚಾರ ಮಾಡಿದ ಕೂಡಲೇ ತನ್ನ ಬಳಿಗೆ ಬಂದ ಭಗವಂತ! ಅಂದರೆ ತಾನು ಹೇಗಿದ್ದರೂ, ಅವನನ್ನು ಮರೆತೇ ಬಾಳಿದ್ದರೂ, ಅವನು ತನ್ನನ್ನು ಮರೆತಿರಲಿಲ್ಲ! ಆದುದರಿಂದಲೇ ಯಾರನ್ನೇ ಕರೆದರೂ, ಅವನನ್ನೇ ಕರೆದಂತೆ, ಎಂದು ಅವನಿಗೆ ತಿಳಿದಿತ್ತು. ತನಗೆ ಬೇಕಾದಂತೆ ತಾನು ಬದುಕಿದರೂ, ಅವನು ತಾನು ಕರೆದಾಗ ಓಗೊಡದೇ ಇರಲಿಲ್ಲ. ಓಗೊಡುವುದೇ ಅವನ ಸ್ವಭಾವ.  ಅವನ ಚರಿತ್ರೆ. ಆದುದರಿಂದ ಈಗ ತಾನು ಹೇಳಬೇಕಾದುದೇನು? ನಿನಗೆ ಬೇಕಾದಂತೆ ನಾನು ಬದುಕುವ ಹಾಗೆ ಕರುಣಿಸು- ಎಂದಲ್ಲದೆ!

ಅಜಾಮಿಳನ ಹಿಂದಣ ಉದ್ರೇಕವೆಲ್ಲ ಈಗ ಪಶ್ಚಾತ್ತಾಪವಾಗಿ ಹರಿಯುತ್ತಿದೆ. ಹೀಗೆ ಪಶ್ಚಾತ್ತಾಪವಾಗದಿದ್ದರೆ, ದೇವರನ್ನು ಧಾರಣ ಮಾಡುವುದು ಸಾಧ್ಯವಿರಲಿಲ್ಲ. ಅಥವಾ ಪಶ್ಚಾತ್ತಾಪಕ್ಕೆ ದೇವರನ್ನು ಧಾರಣ ಮಾಡುವ ಸಾಮರ್ಥ್ಯ ಎನ್ನುವುದಕ್ಕಿಂತ ತನ್ನನ್ನು ಧಾರಣ ಮಾಡಿಕೊಳ್ಳುವಂತೆ ದೇವರು ಜೀವಿಯಲ್ಲಿ ಪಶ್ಚಾತ್ತಾಪ ಭಾವಕ್ಕೆ ಎಡೆಕೊಡುತ್ತಿದ್ದಾನೆ ಎಂದರೆ ಹೆಚ್ಚು ಸರಿ.

ಪಶ್ಚಾತ್ತಾಪವೆನ್ನುವುದು ಜನ್ಮ ನಿವೃತ್ತಿಗೆ ಕಾರಣವಾಗಬಲ್ಲುದು. ಪಶ್ಚಾತ್ತಾಪ ಪಡುವುದು ಅಂತ:ಕರಣದ ಅಸಾಧಾರಣ ಸಾಮರ್ಥ್ಯ. ಪೆಡಸು ಮನಸ್ಸಿಗೆ ಇದು ಸಾಧ್ಯವೇ ಇಲ್ಲ. ರಸಾಲ ಮನಸ್ಸಿಗೆ ಮಾತ್ರ ಸಾಧ್ಯ.  ಪಶ್ಚಾತ್ತಾಪದ ಕುಲುಮೆಯಲ್ಲಿ ಬೇಯುತ್ತ ಅಜಾಮಿಳ ತಾನು ಹಿಂದೆ ಬದುಕಿದ್ದ ಇಂದ್ರಿಯೋದ್ರೇಕದ ಬದುಕನ್ನು ಇನ್ನೊಮ್ಮೆ ಇನ್ನೊಂದು ರೀತಿಯಲ್ಲಿ ಬದುಕುತ್ತಿದ್ದಾನೆ. ಈಗ ಬದುಕು ಪೂರ್ತಿಯಾಯಿತು.   ಬದುಕಿನ ಪೂರ್ವಾರ್ಧ ಮತ್ತು ಉತ್ತರಾರ್ಧಗಳು ಸೇರಿದವು.

‘ನಾಮ’ದಲ್ಲಿ ಕರಗಿದ್ದಾನೆ; ಕರಗುತ್ತಾನೆ ‘ಜೀವ;. ನಮ್ಮನ್ನು ಕರಗಿಸುವಂಥದು ಒಂದಿದೆ ಎಂದು ತಿಳಿಯುವುದೇ ಆಗ. ದೇವರ ನಾಮವೆಂದರೆ, ಜೀವ ಕರಗುವ ಹೊತ್ತು! ಇನ್ನೊಮ್ಮೆ ಹೇಳುತ್ತೇವೆ; ಈ ಜೀವ ನಮ್ಮದು ಎಂದರಂತೆ ವಿಷ್ಣು ದೂತರು.

ತನ್ನೊಳಗೇ ನಡೆಯುತ್ತಿದ್ದ ಈ ಅಸಾಧಾರಣವಾದ ಸಂವಾದವನ್ನು ಸುಪ್ತವಾಗಿಯೇ ಕೇಳುತ್ತಿದ್ದನಂತೆ ಅಜಾಮಿಳ. ‘ಈ ಜೀವ ನಮ್ಮದು’ -ಎಂಬ ಮಾತು ಕೇಳುತ್ತಿದ್ದಂತೆ ಅವನಲ್ಲಿ ಕಂಬನಿಯುಕ್ಕಿತಂತೆ. ಆ ಒಂದು ಮಾತು ಕೇಳುವುದೇ ಬದುಕಿನ ಸಾರ್ಥಕತೆಯೇನು!

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು

No comments:

Post a Comment