ವೈಕುಂಠ ಏಕಾದಶಿಯ ವಿಶೇಷತೆ ಮತ್ತು ಮಹತ್ವ.
🌹"ಏಕಾದಶಿಗಳಲ್ಲೇ ವಿಶೇಷ ಈ ವೈಕುಂಠ ಏಕಾದಶಿ"🌹
ವೈಕುಂಠ ಏಕಾದಶಿ, ಏಕಾದಶಿಗಳಲ್ಲೇ ಅತ್ಯಂತ ಶ್ರೇಷ್ಠವಾದ ಏಕಾದಶಿ. ಧನುರ್ಮಾಸದ ಶುಕ್ಲ ಪಕ್ಷ ಏಕಾದಶಿಯಂದು ಶ್ರೀ ವಿಷ್ಣುವಿನ ವಾಸಸ್ಥಾನ ವೈಕುಂಠ ದ್ವಾರ ತೆರೆಯುವ ದಿನವಾದ್ದರಿಂದ ಈ ಏಕಾದಶಿ ಶ್ರೇಷ್ಠವಾದದ್ದು ಎಂಬ ನಂಬಿಕೆ. ಆದ್ದರಿಂದಲೇ ಇದನ್ನು ಮೋಕ್ಷದ ಏಕಾದಶಿ ಎಂಬ ಹೆಸರೂ ಇದೆ.
ಏಕಾದಶಿ ಶಬ್ದವು ಪಾಡ್ಯ, ಬಿದಿಗೆ, ತದಿಗೆ ಇತ್ಯಾದಿ ತಿಥಿಗಳ ಆದಿಯಾಗಿ ಬರುವ ಹನ್ನೊಂದನೇ ತಿಥಿ. ಏಕಾದಶಿಯ ಪ್ರತಿಯೊಂದು ಮಾಸದ ಶುಕ್ಲ ಹಾಗೂ ಕೃಷ್ಣ ಪಕ್ಷಗಳಲ್ಲಿ ಬರುವ ಪ್ರತ್ಯೇಕ ಪ್ರತ್ಯೇಕ ತಿಥಿಯಾಗಿದೆ. ಏಕಾದಶಿ ಎಂದರೆ ತಕ್ಷಣವೇ ನೆನಪಾಗುವುದು ಉಪವಾಸ. ಉಪವಾಸ ಆಚರಣೆಯೇ ಏಕಾದಶಿಯ ಒಂದು ಮುಖ್ಯ ಅಂಗ. ಏಕಾದಶಿ ಉಪವಾಸದ ಆಚರಣೆಯು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಹೆಚ್ಚಿನ ಪರಿಣಾಮಕಾರಿ. ಏಕಾದಶಿ ಆಚರಣೆಯು ಹದಿನೈದು ದಿನಗಳಿಗೊಮ್ಮೆ ಆಹಾರ ಪಾನೀಯಗಳ ಸೇವನೆ ವರ್ಜ್ಯ. ಈ ದಿನದಂದು ಕೆಲವರು ಅನ್ನವನ್ನು ಮಾತ್ರ ತ್ಯಜಿಸಿ ಉಪವಾಸ ಆಚರಿಸಿದರೆ,ಮತ್ತೆ ಕೆಲವರು ಹನಿ ನೀರನ್ನೂ ಕುಡಿಯದೆ,ನಿರಾಹಾರ ವ್ರತವನ್ನು ಆಚರಿಸುತ್ತಾರೆ. ಇನ್ನೂ ಕೆಲವರು ಏಕಾದಶಿಯಂದು ಮೌನ ವ್ರತ ಸಹ ಆಚರಿಸುತ್ತಾರೆ. ವೈಕುಂಠದ ಬಾಗಿಲು ತೆಗೆಯುವ ಹಿನ್ನೆಲೆಯಲ್ಲಿ ಉಪವಾಸವಿದ್ದು ವೆಂಕಟೇಶ್ವರ/ಶ್ರೀನಿವಾಸ/ವಿಷ್ಣು ದೇವರ ದರ್ಶನ ಪಡೆದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ಭಾವನೆಯೂ ಇದೆ.
ಮಾಸಕ್ಕೆ ಎರಡರಂತೆ ಪ್ರತಿ ಸಂವತ್ಸರವೂ ಒಟ್ಟಾರೆ 24 ಏಕಾದಶಿ ತಿಥಿಗಳಿಂದ ಕೂಡಿರುವುದಾದರೆ ಅದಕ್ಕೆ ಬದಲಾಗಿ ಮೂರು ವರ್ಷಕ್ಕೊಮ್ಮೆ ಬರುವ ಅಧಿಕ ಮಾಸದಿಂದಾಗಿ ಅಂಥ ಒಂದು ಸಂವತ್ಸರವು 26 ಏಕಾದಶಿ ತಿಥಿಗಳಿಂದ ಕೂಡಿರುತ್ತದೆ. ಪ್ರತಿಯೊಂದು ಏಕಾದಶಿಗೂ ಒಂದೊಂದು ಪುರಾಣೋಕ್ತ ಹೆಸರಿರುವುದಾಗಿದ್ದು ಒಂದಲ್ಲ ಒಂದು ವಿಧದಲ್ಲಿ ಅವು ಒಂದೊಂದು ಹೆಚ್ಚಿನ ಪುಣ್ಯಪ್ರದವಾಗಬಲ್ಲದಾಗಿದೆ. ಅವುಗಳ ಪೈಕಿ ಆಷಾಢ ಮಾಸ ಶುಕ್ಲ ಪಕ್ಷದ ಏಕಾದಶಿಗೆ ಶಯನಿ ಅಂತಲೂ ಕರೆದಿರುವುದಾಗಿದೆ. ಅಷ್ಟೇ ಮುಖ್ಯವಾಗಿ ಅವುಗಳೆರಡೂ ಕ್ರಮವಾಗಿ ಪ್ರಥಮೇಕಾದಶಿ ಮತ್ತು ವೈಕುಂಠ ಏಕಾದಶಿ ಅಂತಲೂ ಸಾವಿರಾರು ವರ್ಷಗಳಿಂದ ಕರೆಯಲಾಗಿದ್ದು, ಅವುಗಳ ಹಿನ್ನೆಲೆಯಾಗಿ ಅನೇಕ ಮಹಿಮೆಗಳು ಇರುವುದಾಗಿದೆ. ಶಯನೀ ಆ ದಿನ ಮಹಾವಿಷ್ಣುವು ನಿದ್ರಿಸಲು ತೆರಳುವನೆಂದೂ, ಮುಂದೆ ಕಾರ್ತೀಕ ಮಾಸದ ಶುಕ್ಲ ಪಕ್ಷದ ಏಕಾದಶಿ "ಪ್ರಬೋಧಿನೀ"ಯ ನಂತರ ಬರುವ ’ಉತ್ಥಾನ’ದ್ವಾದಶಿಯಂದು ಅವನು ನಿದ್ರೆ ಮುಗಿಸಿ ಎಚ್ಚರಗೊಳ್ಳುತಾನೆಂದು ಆಸ್ತಿಕರ ನಂಬಿಕೆ. ಈ ಎರಡೂ ಏಕಾದಶಿಗಳ. ನಡುವಿನ ನಾಲ್ಕು ತಿಂಗಳ ಅವಧಿಯನ್ನು ಚಾತುರ್ಮಾಸ್ಯ ಎನ್ನಲಾಗುತ್ತದೆ. ಇದಾದ ನಂತರ ಬರುವುದೇ ವೈಕುಂಠ ಏಕಾದಶಿ.
ವೈಕುಂಠ ಏಕಾದಶಿ ಬಗ್ಗೆ ಮತ್ತೂ ಒಂದು ಪೌರಾಣಿಕ ಹಿನ್ನೆಲೆ ಇದೆ. ಪೌರಾಣಿಕ ಕತೆಯೊಂದರ ಪ್ರಕಾರ ಗೋಕಲವೆಂಬ ನಗರದಲ್ಲಿ ವಾಸವಾಗಿದ್ದ ವೈಖಾನಸನೆಂಬ ರಾಜರ್ಷಿಗೆ ಮೃತಪಟ್ಟಿದ್ದ ತನ್ನ ತಂದೆ ನರಕವನ್ನು ಅನುಭವಿಸುತ್ತಿರುವುದು ದಿವ್ಯ ದೃಷ್ಟಿಗೆ ಗೋಚರವಾಗುತ್ತದೆ. ಖಿನ್ನನಾದ ರಾಜನು ಪಂಡಿತರ ಬಳಿ ತನ್ನ ತಂದೆಯ ಆತ್ಮವನ್ನು ನರಕದಿಂದ ಪಾರು ಮಾಡುವ ಬಗೆಯನ್ನು ಕೇಳುತ್ತಾನೆ. ಅದಕ್ಕೆ ಉತ್ತರವಾಗಿ ಅವರು ಅಂತಹ ನಿವಾರಣೆಯು ಕೇವಲ ಯಜ್ಞ ದಾನಗಳಿಂದ ಮಾತ್ರ ಆಗುವುದಲ್ಲ, ಜತೆಗೆ ಮಾರ್ಗಶಿರ್ಷ ಶುಕ್ಷ ಪಕ್ಷದ ಏಕಾದಶಿ ಆಚರಣೆಯ ಫಲವಾಗಿ ಅವನ ತಂದೆಯು ನರಕದಿಂದ ಪಾರಾಗುವನೆಂದರು. ಅವನು ಹಾಗೆಯೇ ಏಕಾದಶಿ ವೃತಾಚರಣೆಯನ್ನು ಒಂದಾದರ ಮೇಲೊಂದರಂತೆ ಆಚರಿಸಿ ಕೊನೆಗೆ ಮಾರ್ಗಶೀರ್ಷ ಶುಕ್ಲ ಪಕ್ಷದ ವೈಕುಂಠ ಏಕಾದಶಿ ವೃತವನ್ನು ಆಚರಿಸಿ ಸೂಕ್ತ ದಾನಾದಿಗಳನ್ನು ಮಾಡುತ್ತಿದ್ದಂತೆ ಅವನ ತಂದೆಯ ದೇಹವು ನರಕದಿಂದ ಬಿಡಲ್ಪಟ್ಟು, ಮುಂದೆ ಬೇರೆ ದೇಹವು ಪ್ರಾಪ್ತವಾಗಿ ಸ್ವರ್ಗವನ್ನು ಸೇರಿದನು ಎಂದು ಬ್ರಹ್ಮಾಂಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.
ಚಾಂದ್ರಮಾನ ಪುಷ್ಯಮಾಸ ಶುಕ್ಲಪಕ್ಷದ ಏಕಾದಶಿಯೇ ಈ ವಿಶೇಷ ದಿನ. ಈ ದಿನ ಉಪವಾಸವಿದ್ದು, ಭಗವಂತನು ವಿಶೇಷ ಸನ್ನಿಧಾನವಿರುವ ದೇವಸ್ಥಾನಗಳಿಗೆ ಹೋಗಿ ಭಕ್ತಿಯಿಂದ ದೇವರ ರೂಪವನ್ನು ಸಂದರ್ಶಿಸುವವರಿಗೆ ಮುಂದೆ ಮುಕ್ತಿ ಮತ್ತು ವೈಕುಂಠವನ್ನು ಪಡೆಯುತ್ತಾರೆ.
'ಏಕ' ಶಬ್ದವು ಒಂದನ್ನು ಸೂಚಿಸುವುದಾದರೆ 'ದಶ' ಶಬ್ದವು ಹತ್ತನ್ನು ಸೂಚಿಸುವುದಾಗಿದೆ. ಒಟ್ಟಾರೆ 'ಏಕಾದಶಿ' ಶಬ್ದವು ಹನ್ನೊಂದನ್ನು ಸೂಚಿಸುವುದಾಗಿದೆ. ಏಕಾದಶಿ ಶಬ್ದವು ಪಾಡ್ಯ, ಬಿದಿಗೆ, ತದಿಗೆ ಇತ್ಯಾದಿ ತಿಥಿಗಳ ಆದಿಯಾಗಿ ಬರುವ ಹನ್ನೊಂದನೇ ತಿಥಿ. ಏಕಾದಶಿಯ ಪ್ರತಿಯೊಂದು ಮಾಸದ ಶುಕ್ಲ ಹಾಗೂ ಕೃಷ್ಣ ಪಕ್ಷಗಳಲ್ಲಿ ಬರುವ ಪ್ರತ್ಯೇಕ ಪ್ರತ್ಯೇಕ ತಿಥಿಯಾಗಿದೆ. ಏಕಾದಶಿ ತಿಥಿಯ ಮಟ್ಟಿಗೆ ಉಪವಾಸವನ್ನು ಆಚರಿಸುವುದೇ ಆಚರಣೆಯ ಒಂದು ಮುಖ್ಯ ಅಂಗ.
ಒಂದು ಮಾಸದಲ್ಲಿ ಬರುವ 30 ತಿಥಿಗಳ ಪೈಕಿ ಇತರ ಎಲ್ಲ 28 ತಿಥಿಗಳ ನಿರ್ಣಯವು ಸೂರ್ಯೋದಯ ಸಮಯಕ್ಕಾದರೆ ಏಕಾದಶಿ ತಿಥಿಯ ನಿರ್ಣಯವು ಸೂರ್ಯೋದಕ್ಕೆ ಸ್ವಲ್ಪ ಮುಂಚಿತವಾಗಿ ಬರುವ ಅರುಣೋದಯ ಸಮಯಕ್ಕಾಗಿದೆ. ಸಂಪ್ರದಾಯ ಭೇದಗಳಿಂದಾಗಿ ಸ್ಮಾರ್ಥ, ಶ್ರೀ ವೈಷ್ಣವ ಮತ್ತು ವೈಷ್ಣವ ಏಕಾದಶಿ ದಿನದ ಆಚರಣೆಯ ಒಮ್ಮೊಮ್ಮೆ ಪರಸ್ಪರ ಒಂದು ದಿನದ ಮಟ್ಟಿಗೆ ವ್ಯತ್ಯಾಸವಾಗಬಹುದಾಗಿದೆ.
ಏಕಾದಶಿಯನ್ನು ಬಿಟ್ಟು ಬೇರೆ ಬೇರೆ ತಿಥಿ ದಿನಗಳಲ್ಲಿ ಉಪವಾಸವನ್ನು ಆಚರಿಸುವುದಕ್ಕೆ ಅಷ್ಟಾಗಿ ಕಡ್ಡಾಯದ ನಿಯಮವು ಇರುವುದಿಲ್ಲವಾದರೆ, ಹದಿನೈದು ತಿಥಿಗಳಿಗೊಮ್ಮೆ ಬರುವ ಏಕಾದಶಿಯಂದು ಮಾತ್ರ ಉಪವಾಸದ ಆಚರಣೆಯನ್ನು ಶಾಸ್ತ್ರಗಳು ಕಡ್ಡಾಯವಾಗಿ ವಿಧಿಸಿರುವುದಾಗಿದೆ. ಏಕಾದಶಿ ಉಪವಾಸದ ಆಚರಣೆಯು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಹೆಚ್ಚಿನ ಪರಿಣಾಮಕಾರಿ ಆಗುವುದು.
ಏಕಾದಶಿ ಆಚರಣೆಯು ಹದಿನೈದು ದಿನಗಳಿಗೊಮ್ಮೆ ಆಹಾರ ಪಾನೀಯಗಳ ಸೇವನೆ ವರ್ಜ್ಯ ಎನಿಸುವುದಾಗಿದ್ದು ನಿಟ್ಟಪವಾಸ ಎನಿಸುವುದಾಗಿದೆ. ಐದು ವರ್ಷಕ್ಕೊಳಪಟ್ಟವರೂ, 80 ವರ್ಷ ಮೇಲ್ಪಟ್ಟವರೂ, ರೋಗಿಗಳಾದವರೂ, ಗರ್ಭಿಣಿ ಹಾಗೂ ಬಾಣಂತಿಯರನ್ನು ಬಿಟ್ಟು ಪ್ರತಿಯೊಬ್ಬರೂ ಆ ದಿನದ ಮಟ್ಟಿಗೆ ನಿಟ್ಟುಪವಾಸವನ್ನು ತಪ್ಪದೇ ಆಚರಿಸಬೇಕಾಗುತ್ತದೆ. ಅಂಥ ಇತರರು ಮಾತ್ರ ಅಲ್ಪಾಹಾರವನ್ನು ಸ್ವೀಕರಿಸಬಹುದಾಗಿದೆ. ಏನೇ ಆಗಲಿ ಏಕಾದಶಿ ಮೂರನೇ ದಿನವಾದ ದ್ವಾದಶಿಯಂದು ಪ್ರಾತಃಕಾಲ ಸೂರ್ಯೋದ ನಂತರ ಊಟವನ್ನು ಮಾಡಿ ಪಾರಾಯಣ ಮಾಡಬೇಕು.
ಮಾನವರು ಕಣ್ಣು, ಕಿವಿ, ನಾಲಿಗೆ, ಚರ್ಮ ಮತ್ತು ಮೂಗುಗಳನ್ನು ಐದು ಜ್ಞಾನೇಂದ್ರಿಯಗಳನ್ನಾಗಿಯೂ ಹಾಗೂ ಕೈ, ಕಾಲು, ಕಾಲು, ಕಿರುನಾಲಿಗೆ, ಪಾಯು ಮತ್ತು ಉಪಸ್ಥಗಳನ್ನು ಐದು ಕರ್ಮೇಂದ್ರಿಯಗಳನ್ನಾಗಿ ಪಡೆದಿರುತ್ತಾರೆ. ಮನಸು ಹನ್ನೊಂದನೆಯ ಇಂದ್ರಿಯವಾಗಿ ಪರಿಗಣಿಸಲಾಗಿದ್ದು ಒಟ್ಟಾರೆ ಹನ್ನೊಂದು ಇಂದ್ರಿಯಯಗಳು ಏಕಾದಶೇಂದ್ರಿಯ ಗಳೆನಿಸುವುದಾಗಿದ್ದು, ಅವುಗಳ ಸಲುವಾಗಿ ಅವರವರ ಇಚ್ಛೆಯಂತೆ ಅವರವರು ಕಾರ್ಯಾಚರಣೆಗಳನ್ನು ಮಾಡುವವರಾಗುತ್ತಾರೆ.
ಹದಿನಾಲ್ಕು ವರ್ಷಕ್ಕೆ ಮೇಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಯೂ ಕೊನೆಯ ಪಕ್ಷ ಪ್ರತಿಯೊಬ್ಬ ವ್ಯಕ್ತಿಯೂ ಕೊನೆಯ ಪಕ್ಷ ಪ್ರತಿದಿನದಂತೆ ಹತ್ತು ಜನ್ಮಗಳಿಗೆ ಬೇಕಾಗುವಷ್ಟು ಕರ್ಮಫಲಗಳನ್ನು ಸಂಗ್ರಹಿಸುವವನಾಗಿರುತ್ತಾನೆ. ತಮ್ಮ ಹೃದಯದೊಳಗೆ ಭಗವಂತನನ್ನು ಸಂದರ್ಶಿಸಿರುವ ಅಪರೋಕ್ಷ ಜ್ಞಾನಿಗಳು, ಯೋಗಿವರ್ಯರು, ಧರ್ಮಿಷ್ಟರು ಇತ್ಯಾದಿಗಳನ್ನು ಬಿಟ್ಟರೆ ಇತರ ಸಾಮಾನ್ಯರೆಲ್ಲರೂ ದಿನಂಪ್ರತಿ ಒಟ್ಟಾರೆಯಾಗಿ ಪುಣ್ಯ ಫಲಗಳಿಗಿಂತ ಹೆಚ್ಚಾಗಿ ಪಾಪ ಫಲಗಳನ್ನೇ ಸಂಗ್ರಹಿಸುವವರಾಗುತ್ತಾರೆ. ಆದರೆ ಏಕಾದಶಿಯ ಆಚರಣೆಯಿಂದಾಗಿ ಹಿಂದಿನ ಹದಿನೈದು ದಿನಗಳಲ್ಲಿ ಸಂಗ್ರಹವಾಗಿರುವ ಅವರ ಪಾಪವು ನೀಗಿ ಅವರವರ ಜ್ಞಾನದ ಮಟ್ಟದಂತೆ ವಿಶೇಷವಾದ ಪುಣ್ಯವನ್ನು ಅವರು ಪಡೆಯಬಹುದಾಗಿದೆ.
ಏಕಾದಶಿ ಆಚರಣೆಯಿಂದ ಆಯುಸ್ಸು, ಆರೋಗ್ಯ ಮತ್ತು ಮನಸ್ಸಿನ ಧಾರ್ಡ್ಯತೆ ವೃದ್ಧಿಯಾಗುತ್ತದೆ. ಆದರೆ ಈಗ ನೂರಿನ್ನೂರು ವರ್ಷಗಳಿಂದಾಗಿ ಜೀವನಶೈಲಿಯಲ್ಲಿ ಅನೇಕ ಬದಲಾವಣೆಗಳು ಉಂಟಾಗಿದ್ದು ಏಕಾದಶಿಯನ್ನು ಆಚರಿಸುವವರ ಸಂಖ್ಯೆಯು ತೀವ್ರವಾಗಿ ಕಡಿಮೆಯಾಗುವುದಾಯಿತು. ಅಷ್ಟಾಗಿಯೂ ಆಧುನಿಕ ಜೀವನಶೈಲಿಯ ಒತ್ತಡದ ಸಲುವಾಗಿಯೂ ಇಂಥ ಕ್ಲಿಷ್ಟಕರ ಸನ್ನಿವೇಶಗಳನ್ನು ಎದುರಿಸಿ ಕೆಲವರು ಹದಿನೈದು ದಿನಕ್ಕೊಮ್ಮೆ ಏಕಾದಶಿಯನ್ನು ತಪ್ಪದೆ ಆಚರಿಸುವವರು.
ಮಾಸಕ್ಕೆ ಎರಡರಂತೆ ಪ್ರತಿ ಸಂವತ್ಸರವೂ ಒಟ್ಟಾರೆ 24 ಏಕಾದಶಿ ತಿಥಿಗಳಿಂದ ಕೂಡಿರುವುದಾದರೆ ಅದಕ್ಕೆ ಬದಲಾಗಿ ಮೂರು ವರ್ಷಕ್ಕೊಮ್ಮೆ ಬರುವ ಅಧಿಕ ಮಾಸದಿಂದಾಗಿ ಅಂಥ ಒಂದು ಸಂವತ್ಸರವು 26 ಏಕಾದಶಿ ತಿಥಿಗಳಿಂದ ಕೂಡುವುದಾಗಿದೆ. ಪ್ರತಿಯೊಂದು ಏಕಾದಶಿಗೂ ಒಂದೊಂದು ಪುರಾಣೋಕ್ತ ಹೆಸರಿರುವುದಾಗಿದ್ದು ಒಂದಲ್ಲ ಒಂದು ವಿಧದಲ್ಲಿ ಅವು ಒಂದೊಂದು ಹೆಚ್ಚಿನ ಪುಣ್ಯಪ್ರದವಾಗಬಲ್ಲದಾಗಿದೆ. ಅವುಗಳ ಪೈಕಿ ಆಷಾಢ ಮಾಸ ಶುಕ್ಲ ಪಕ್ಷದ ಏಕಾದಶಿಗೆ ಶಯನಿ ಅಂತಲೂ ಕರೆದಿರುವುದಾಗಿದೆ. ಅಷ್ಟೇ ಮುಖ್ಯವಾಗಿ ಅವುಗಳೆರಡೂ ಕ್ರಮವಾಗಿ ಪ್ರಥಮೇಕಾದಶಿ ಮತ್ತು ವೈಕುಂಠ ಏಕಾದಶಿ ಅಂತಲೂ ಸಾವಿರಾರು ವರ್ಷಗಳಿಂದ ಕರೆಯಲಾಗಿದ್ದು, ಅವುಗಳ ಹಿನ್ನೆಲೆಯಾಗಿ ಅನೇಕ ಮಹಿಮೆಗಳು ಇರುವುದಾಗಿದೆ.
ವೈಕುಂಠ ಏಕಾದಶಿಯ ದಿನ ಉಪವಾಸವಿದ್ದು, ಭಗವಂತನು ವಿಶೇಷ ಸನ್ನಿಧಾನವಿರುವ ದೇವಸ್ಥಾನಗಳಿಗೆ ಹೋಗಿ ಭಕ್ತಿಯಿಂದ ದೇವರ ರೂಪವನ್ನು ತಮ್ಮ ಹೃದಯದಲ್ಲಿ ಸಂದರ್ಶಿಸುವವರಿಗೆ ಅವರ ಹಿಂದಿನ ಘೋರ ಪಾಪಗಳು ನೀಗುತ್ತದೆ. ಮುಂದೆ ಮುಕ್ತಿ ಮತ್ತು ವೈಕುಂಠವನ್ನು ಪಡೆಯುತ್ತಾರೆ.
🌹"ಏಕಾದಶಿ ಉಪವಾಸ - ವೈಜ್ಞಾನಿಕ ಮತ್ತು ಪೌರಾಣಿಕ ಮಹತ್ವ"🌹
ಇಂದಿನ ದಿನದಲ್ಲಿ ದೇಹದ ಗಾತ್ರ ಕಡಿಮೆ ಮಾಡಲು, ಕೊಬ್ಬಿನಂಶ ಕಡಿಮೆ ಮಾಡಿಕೊಳ್ಳಲು ಡಯಟೀಷಿಯನ್ ಬಳಿ ಹೋಗಿ ಹಣ ಕೊಟ್ಟು ವಿಧ ವಿಧದ ಆಹಾರೋಪಾಯ, ವ್ಯಾಯಾಮ, ವಿಹಾರಗಳನ್ನು ಇಂದಿನವರು ಮಾಡುತ್ತಿದ್ದೇವೆ. ಧಾರ್ಮಿಕವಾಗಿ ವಿವಿಧ ಧರ್ಮಗಳು ಉಪವಾಸದ ಕುರಿತಾದ ಆಚರಣೆಗಳ ಬಗ್ಗೆ ತಿಳಿ ಹೇಳಿದೆ ಎಂಬುದು ನಮಗೆ ತಿಳಿದಿರುವ ವಿಚಾರ. ಹಿಂದೂಧರ್ಮದಲ್ಲಿ ಏಕಾದಶಿ ದಿನ ಉಪವಾಸದ ದಿನ.
ಏಕಾದಶಿಯ ಬಗ್ಗೆ ಕೇಳಿರದ, ನಮ್ಮ ಪುರಾಣ ಪರಂಪರೆಗಳ ಬಗೆಗೆ ಏನೂ ಗೊತ್ತಿರದ, ಜಗತ್ಪ್ರಸಿದ್ಧ ಶಸ್ತ್ರವೈದ್ಯ ಅಲೆಕ್ಲಿಸ್ ಕಾರೆಲ್ ತನ್ನ ಖ್ಯಾತಕೃತಿ ‘Man the Unknown (ಅವ್ಯಕ್ತ ಮಾನವ)’ದಲ್ಲಿ ಒಂದು ಮಾತು ಹೇಳುತ್ತಾನೆ: “ಮನುಷ್ಯ ತಿಂಗಳಿಗೊಮ್ಮೆ, ಎರಡು ಬಾರಿ ಸಂಪೂರ್ಣ ನಿರಾಹಾರನಾಗಿರಲು ಕಲಿತರೆ ಅನಾರೋಗ್ಯದ ನಿಮಿತ್ತ ವೈದ್ಯರ ಬಳಿ ಹೋಗಬೇಕಾದ ಅಗತ್ಯವಿಲ್ಲ. ಉಪವಾಸವೇ ದೊಡ್ಡ ಚಿಕಿತ್ಸೆ.”
ನಮ್ಮ ಆಯುರ್ವೆದವೂ ಎಲ್ಲ ರೋಗಗಳಿಗೂ ಅಜೀರ್ಣವೆ ಕಾರಣ ಎನ್ನುತ್ತದೆ: “ಅಜೀರ್ಣಪ್ರಭಾವಾ ರೋಗಾಃ.”
ಹೊಟ್ಟೆಕೆಟ್ಟು ಜೀರ್ಣಶಕ್ತಿ ಕಡಿಮೆಯಾದಾಗ ಎಲ್ಲ ರೋಗಗಳೂ ದಾಳಿ ಮಾಡುತ್ತವೆ. ಉಂಡದ್ದೆಲ್ಲ ಕರಗುತ್ತಿರುವ ತನಕ ಯಾವ ರೋಗವೂ ಬರುವುದಿಲ್ಲ. ಹೊಟ್ಟೆ ಹಾಳಾದಾಗ ದೇಹವೂ ಹಾಳಾಗುತ್ತದೆ.
ಹೊಟ್ಟೆ ಹಾಳಾಗದಂತೆ ಕಾಪಾಡುವ ವಿಧಾನ ಅದಕ್ಕೆ ಪೂರ್ಣ ವಿಶ್ರಾಂತಿ. ಮಲಗಿದಾಗ ಕಣ್ಣಿಗೆ, ಕಿವಿಗೆ, ಇತರ ಇಂದ್ರಿಯಗಳಿಗೆ ವಿಶ್ರಾಂತಿ. ಬೆಳಗ್ಗಿನಿಂದ ರಾತ್ರಿಯ ತನಕವೂ ತಿನ್ನುತ್ತಲೇ ಇದ್ದರೆ, ತಿಂದದ್ದನ್ನು ಬೆಳಗಿನ ತನಕ ಜೀರ್ಣಿಸಿಕೊಳ್ಳಲೂ ಅವಕಾಶ ನೀಡದೆ ಇದ್ದರೆ ಪಚನೆಂದ್ರಿಯಕ್ಕೆ ವಿಶ್ರಾಂತಿಯೇ ಇಲ್ಲ. ಅದು ಸೋತು ಕೈಕಟ್ಟಿ ಕೂತಿತು ಎಂದರೆ ಅಜೀರ್ಣ. ಹಾಗಾಗಿ 15ದಿನಗಳಿಗೊಮ್ಮೆ 24 ಗಂಟೆಗಳ ಕಾಲ ಪೂರ್ಣ ವಿಶ್ರಾಂತಿ ದೊರಕಿತೆಂದರೆ ಈ ಪಚನೆಂದ್ರಿಯ ಮತ್ತೆ ದಕ್ಷವಾಗಿ ಕೆಲಸ ಮಾಡಲು ಸಿದ್ಧವಾಗುತ್ತದೆ.
ಇದು ಅಲೆಕ್ಸಿಸ್ ಕಾರೆಲ್ ಹೇಳಿದ ಮಾತು. ನಮ್ಮ ಪ್ರಾಚೀನ ಶಾಸ್ತ್ರಕಾರರೂ ಇದೇ ಮಾತನ್ನು ಹೇಳಿದರು. ಅಲೆಕ್ಸಿಸ್ ಕಾರೆಲ್ ಇದನ್ನು ವೈಜ್ಞಾನಿಕವಾಗಿ ಬರೆದರೆ ಪ್ರಾಚೀನರು ಏಕೆ-ಏನು ಅನ್ನೋ ವಿವರ ನೀಡದೆ ವಿಧಿವಾಕ್ಯವಾಗಿ ಬರೆದರು. ಹೊಸ ಗಾಳಿ ಕಿವಿಯೊಳಗೆ ಹೊಕ್ಕ ಜನಕ್ಕೆ ಈ ಮಾತು ಪ್ರಿಯವಾಗಲಿಲ್ಲ. ಅದಕ್ಕೆಂದೆ ಕಾರೆಲ್ ಹೀಗೆ ಹೇಳುತ್ತಾನೆ: “ಜನರಿಗೆ ನಾಗರಿಕತೆಯ ಭ್ರಮೆ ಹತ್ತಿದೆ. ಹೀಗೆ ನಾಗರಿಕತೆಯ ಅಮಲು ಹತ್ತಿದ ಜನಕ್ಕೆ ಈ ಉಪವಾಸದ ಉಪದೇಶ ಹಿಡಿಸಲಿಕ್ಕಿಲ್ಲ. ನಾಗರಿಕತೆ ಜನಾಂಗವನ್ನು ಹಾಳುಗೆಡಹುತ್ತಿದೆ. ಅದರಿಂದ ಸಕಾರಣವಾಗಿ ಹೇಳಿದರೂ ಜನ ನಂಬುವುದು ಕಷ್ಟ.”
ಈ ಎಲ್ಲ ದೃಷ್ಟಿಯಿಂದ ಏಕಾದಶಿ ತುಂಬ ಮಹತ್ವದ ದಿನ. ಅಂದು ವಾತಾವರಣದಲ್ಲಿ ಕೂಡ ಒಂದು ವಿಶಿಷ್ಟ ಶಕ್ತಿ ತುಂಬಿರುತ್ತದೆ. ಏಕಾದಶಿಯನ್ನು ‘ಹರಿದಿನ’ ಎಂದು ಕರೆಯುತ್ತಾರೆ. ಅಂದು ವೈಷ್ಣವೀಶಕ್ತಿ ಜಾಗೃತವಾಗಿ ಕೆಲಸ ಮಾಡುತ್ತದೆ ಎನ್ನುವುದು ತಾತ್ಪರ್ಯ.
ಗ್ರಹಣ ಕಾಲದಲ್ಲೂ ಹೀಗಾಗುತ್ತದೆ. ಆ ಸಮಯದಲ್ಲಿ ಶರೀರಕ್ಕೆ ಮೈಲಿಗೆ ಆದರೂ ಬುದ್ಧಿಗೆ ಮಹಾಮಡಿ. ಆಗ ನಮ್ಮ ಮೆದುಳಿನಲ್ಲಿ ಒಂದು ವಿಶಿಷ್ಟವಾದ ಶಕ್ತಿ ಜಾಗೃತವಾಗುತ್ತದೆ.
ಏಕಾದಶಿ ದಿನ ಆಹಾರತ್ಯಾಗ ಮಾಡಬೇಕು. ಆದರೆ ಮನಸ್ಸಿಗೆ ಹೆಚ್ಚು ಆಹಾರ ಕೊಡಬೇಕು. ಹೊಟ್ಟೆ ತುಂಬಿದರೆ ಬುದ್ಧಿ ಕೆಲಸ ಮಾಡೋದಿಲ್ಲ. ಹೀಗೆ ದೇಹ-ಬುದ್ಧಿ ಎರಡನ್ನೂ ಸಮತೋಲನದಲ್ಲಿಡಬೇಕಾಗುತ್ತದೆ. ಆಹಾರವನ್ನು ವರ್ಜಿಸುವುದು ಎಂದರೆ ಬುದ್ಧಿಯನ್ನು ಶುದ್ಧೀಕರಿಸುವುದು, ಚುರುಕುಗೊಳಿಸುವುದು ಎಂದೇ ಅರ್ಥ.
ಪ್ರತಿಪಕ್ಷದ ಹನ್ನೊಂದನೆಯ ದಿನ ಇಂಥ ಉಪವಾಸವನ್ನು ಆಚರಿಸುತ್ತಾರೆ. ಇಂಥ ಉಪವಾಸದೀಕ್ಷೆಯ ಮಹತ್ವದ ಬಗೆಗೆ ಪುರಾಣಗಳಲ್ಲಿ ಅನೇಕ ಕಥೆಗಳಿವೆ. ಅಂಬರೀಷ ಇಂಥ ಏಕಾದಶಿ ದೀಕ್ಷಿತರಲ್ಲಿ ಒಬ್ಬ.
ಏಕಾದಶಿಯ ದಿನ ಶುದ್ಧನಾಗಿ ನಿರಾಹಾರದಿಂದಿದ್ದು, ದ್ವಾದಶಿಯಂದು ಬೆಳಿಗ್ಗೆದ್ದು ದೇವರ ಪೂಜೆ ಮಾಡಿ ತೀರ್ಥ ಸ್ವೀಕರಿಸಿ ಆಹಾರ ಸೇವಿಸುವುದು ಅವನ ದೀಕ್ಷೆ.
ಇಂಥ ಒಂದು ಘಟನೆಯ ಮೂಲಕ ಅಂಬರೀಷನ ಉಪವಾಸದ ಮಹತ್ವ, ಭಗವದ್ ಭಕ್ತಿಯ ಮಹತ್ವ ಇವೆರಡನ್ನೂ ಶುಕಾಚಾರ್ಯರು ಭಾಗವತದಲ್ಲಿ ವಿವರಿಸಿದ್ದಾರೆ.
ಒಂದು ಏಕಾದಶಿ. ಅಂಬರೀಷ ಉಪವಾಸವನ್ನಾಚರಿಸಿ ಮರುದಿನ ಬೆಳಗ್ಗೆದ್ದು ಮುಹೂರ್ತ ದಾಟುವುದರೊಳಗೆ ಪಾರಣೆ ಮಾಡಬೇಕು ಎನ್ನುವಷ್ಟರಲ್ಲಿ ದೂರ್ವಾಸರು ಅತ್ತ ಬಂದರು. ಅಂಬರೀಷ ಅವರನ್ನೂ ಪಾರಣೆಗೆ ಆಹ್ವಾನಿಸಿದ. ದುರ್ವಾಸರು ಮಹಾ ಕೋಪಿಷ್ಠ. “ಸ್ವಲ್ಪ ಕಾದಿರು, ಸ್ನಾನ ಮಾಡಿ ಬರುತ್ತೇನೆ,” ಎಂದು ಹೊರಟು ಹೋದರು.
ದುರ್ವಾಸರು ಇವನ ವ್ರತನಿಷ್ಟೆಯನ್ನು ಪರೀಕ್ಷಿಸಲೆಂದೇ ಬಂದವರು. ಅವರ ಕೋಪವೂ ಒಂದು ಅನುಗ್ರಹವೆ. ಮಕ್ಕಳು, ತಪ್ಪು ಮಾಡಿದಾಗ ದೊಡ್ಡವರು ಶಿಕ್ಷೆ ಕೊಡುವುದಿದೆ. ಅದು ಶಿಕ್ಷೆ ಅಲ್ಲ; ಶಿಕ್ಷಣ. ದುರ್ವಾಸರದೂ ಹಾಗೆಯೆ. ಭಕ್ತರ ಶಿಕ್ಷಣಕ್ಕಾಗಿ ಅವರದೊಂದು ನಾಟಕ.
ಇನ್ನೇನು ಪಾರಣದ ಮುಹೂರ್ತ ದಾಟುತ್ತದೆ. ಆದರೆ ದುರ್ವಾಸರ ಸುಳಿವಿಲ್ಲ. ಬಂದ ಅತಿಥಿಗೆ ಅಪಚಾರವಾಗಬಾರದು; ತನ್ನ ವ್ರತಕ್ಕೂ ಭಂಗ ಬರಬಾರದು. ಹೇಗೆ ನಡೆದುಕೊಳ್ಳಬೇಕು ಎನ್ನುವುದು ಸಮಸ್ಯೆ. ಅಂಬರೀಷನಿಗೆ ಉಭಯಸಂಕಟ.
ಹೊತ್ತು ಮೀರಿದರೆ ಏನು ಮಾಡುವುದು? ವ್ರತಲೋಪವಾಗಬಾರದಲ್ಲ? ಅಂಬರೀಷ ಈ ಸಮಸ್ಯೆಗೆ ಒಂದು ತಾತ್ಕಾಲಿಕ ಪರಿಹಾರ ಕೊಂಡುಕೊಂಡ. ಪಾರಣದ ಸಮಯ ಮೀರುವ ಮುನ್ನ ಊಟದ ಬದಲು ನೀರು ಕುಡಿದು ಬಿಡುವುದು. ನೀರು ಕುಡಿದರೆ ಊಟದ ಫಲವೂ ಆಯಿತು. ಉಪವಾಸದ ಫಲವೂ ಆಯಿತು. ಶಾಸ್ತ್ರಕಾರರು ನೀರನ್ನು ಆಹಾರದ ಪ್ರತಿನಿಧಿಯೂ ಹೌದು, ಉಪವಾಸದ ಪ್ರತಿನಿಧಿಯೂ ಹೌದು ಎಂದು ಒಪ್ಪಿಕೊಂಡಿದ್ದಾರೆ. ನಮ್ಮ ವೈದ್ಯಪದ್ಧತಿಗಳೂ ಇದನ್ನು ಅನುಮೋದಿಸಿವೆ.
ಹೀಗೆ ಯೋಚಿಸಿ ಅಂಬರೀಷ ಮಹಾರಾಜ ನೀರು ಕುಡಿದ. ಅಷ್ಟರಲ್ಲಿ ದುರ್ವಾಸರು ಬಂದರು. ವಿಷಯ ತಿಳಿದು ಸಿಟ್ಟುಗೊಂಡರು” “ನೀನು ಅತಿಥಿಗೆ ಅಪಚಾರ ಮಾಡಿದ್ದೀಯ, ನೀನು ಮೋಸಗಾರ, ನಿನಗೆ ಶಾಪ ಕೊಡುತ್ತೇನೆ,” ಎಂದು ಗುಡುಗಿದರು. ಕೃತ್ಯೆಯನ್ನು ಅಭಿಮಂತ್ರಿಸಿ ಅವನ ಮೇಲೆ ಛೂಬಿಟ್ಟರು. ಅಂಬರೀಷ ಮಹಾಭಗವದ್ ಭಕ್ತ. ಆತ ಭಗವಂತನಿಗೆ ಮೊರೆಹೊಕ್ಕ. ವಿಷ್ಣು ತನ್ನ ಭಕ್ತನ ರಕ್ಷಣೆಗಾಗಿ ಚಕ್ರವನ್ನು ಕಳುಹಿಸಿದ.
ದುರ್ವಾಸರ ಮಂತ್ರ ತಿರುಮಂತ್ರವಾಯಿತು. ವಿಷ್ಣುಚಕ್ರಕ್ಕೆ ಹೆದರಿದ ಕೃತ್ಯೆ ದುರ್ವಾಸರನ್ನೆ ಬೆನ್ನಟ್ಟಿತು. ಇದರಿಂದ ತಪ್ಪಿಸಿಕೊಳ್ಳಲು ದುರ್ವಾಸರು ಬ್ರಹ್ಮನಿಗೆ ಶರಣಾದರು. ತನ್ನನ್ನು ವಿಷ್ಣುಚಕ್ರದಿಂದ ಪಾರುಮಾಡಬೇಕೆಂದು ಪ್ರಾರ್ಥಿಸಿದರು. ಆಗ ಬ್ರಹ್ಮದೇವ ಹೇಳಿದ ಮಾತು: “ನಾರಾಯಣ ಜಗತ್ತಿನ ನಿಯಮಾಶಕ್ತಿ. ಅವನ ಆಜ್ಞೆಯಂತೆ ಚಲಿಸುವ ಭಕ್ತರು ನಾವು. ವಿಷ್ಣುಭಕ್ತನನ್ನು ತಡೆಯುವ ಶಕ್ತಿ ನಮಗಿಲ್ಲ. ನಾನು, ರುದ್ರಾದಿ ಸಮಸ್ತ ದೇವತೆಗಳು ಅವನ ಆಜ್ಞೆಯನ್ನು ತಲೆಯಲ್ಲಿ ಹೊತ್ತು ಬದುಕುವವರು. ಆ ಆಜ್ಞೆಯನ್ನು ಮೀರಿ ನಡೆಯುವ ಶಕ್ತಿ ಯಾರಿಗೂ ಇಲ್ಲ.”
ದುರ್ವಾಸರು ರುದ್ರನಲ್ಲಿಗೆ ಹೋಗಿ ಬೇಡಿದರು. ವಾಸ್ತವವಾಗಿ ದುರ್ವಾಸರು ಸ್ವಯಂ ರುದ್ರಾಂಶಸಂಭೂತರು. ಇದೆಲ್ಲ ಅಂಬರೀಷನ ಭಗವದ್ ಭಕ್ತಿಯ ಯೋಗ್ಯತೆಯ ಆಳವನ್ನು ಪರೀಕ್ಷಿಸಲು ದೊಡ್ಡವರು ಮಾಡಿದ ಒಂದು ನಾಟಕ. ಅದರಲ್ಲಿ ದುರ್ವಾಸರಿಗೆ ದ್ವಿಪಾತ್ರಾಭಿನಯ. ರುದ್ರದೇವರಿಂದಲೂ ನಿರಾಸೆಯ ಉತ್ತರವೆ ಬಂತು, “ಇಂಥ ಬ್ರಹ್ಮಾಂಡಗಳು ಎಷ್ಟೋ ಬಾರಿ ಸೃಷ್ಠಿಯಾಗಿವೆ; ನಾಶವಾಗಿವೆ. ಬ್ರಹ್ಮಾಂಡದಲ್ಲಿ ನೂರಾರು ಬಾರಿ ಸತ್ತು ಹುಟ್ಟುವ ಜೀವಗಳು ನಾವು. ಭಗವಂತನ ಲೀಲಾನಾಟಕದಲ್ಲಿ ನಾವೂ ಚಿಕ್ಕ ಪಾತ್ರಧಾರಿಗಳು. ಅವನು ಸೂತ್ರಧಾರ. ಅವನ ಆಜ್ಞೆಯನ್ನು ಮೀರಿ ನಾವೇನೋ ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಿನಗೆ ರಕ್ಷೆ ಬೇಕಿದ್ದರೆ ವಿಷ್ಣುವಿಗೇ ಶರಣಾಗು. ಅವನು ನಿನ್ನನ್ನು ಕಾಪಾಡುತ್ತಾನೆ.”
ದುರ್ವಾಸರು ನೇರ ವಿಷ್ಣುವಿನ ಬಳಿಗೆ ಬಂದರು. “ನಿನ್ನ ಚಕ್ರದಿಂದ ನನ್ನನ್ನು ಪಾರುಮಾಡು,” ಎಂದು ಪ್ರಾರ್ಥಿಸಿಕೊಂಡರು. ಆಗ ವಿಷ್ಣು ಹೇಳಿದ: “ನನ್ನಿಂದಲೂ ಸಾಧ್ಯವಿಲ್ಲ. ಏಕೆಂದರೆ, ನಾನು ಭಕ್ತರ ಪರಾಧೀನ. ನಾನೂ ಅವರ ಮಾತನ್ನು ಮೀರಲಾರೆ. ನಾನೆಂದರೆ ಅವರಿಗೆ ಮೆಚ್ಚು. ಅವರೆಂದರೆ ನನಗೆ ಮೆಚ್ಚು. ನಮ್ಮಿಬ್ಬರ ಹೃದಯವೂ ಒಂದೇ. ಅಂಬರೀಷ ನನ್ನ ಮಹಾಭಕ್ತ. ನನ್ನನ್ನು ಬಿಟ್ಟು ಇನ್ನೊಬ್ಬರನ್ನು ಸ್ಮರಿಸಿದವನಲ್ಲ. ನಾನೂ ಅವನನ್ನು ಬಿಟ್ಟು ಕೊಡಲಾರೆ. ಭಕ್ತರ ಮೇಲೆ ನನಗೂ ಅಂಥ ಗೌರವ. ಅಂಬರೀಷ ಇನ್ನೊಬ್ಬನಿಗೆ ತಲೆಬಾಗಿದವನಲ್ಲ. ಆತನಲ್ಲಿಗೇ ಹೋಗಿ ಕ್ಷಮೆ ಯಾಚಿಸು.”
ದುರ್ವಾಸರು ಮರಳಿ ಅಂಬರೀಷನಲ್ಲಿಗೆ ಬರುತ್ತಾರೆ. “ಅಯ್ಯಾ, ನೀನು ಗೆದ್ದೆ. ನಾನೇ ಸೋತೆ. ತಪ್ಪಾಯಿತು,” ಎಂದು ಕೇಳಿಕೊಳ್ಳುತ್ತಾರೆ. ಅಂಬರೀಷನ ಪ್ರಾರ್ಥನೆಯಂತೆ ವಿಷ್ಣುಚಕ್ರ ಮರಳಿ ಹೋಗುತ್ತದೆ.
ಹೀಗೆ ದುರ್ವಾಸರ ಪ್ರಸಂಗದ ಏಕಾದಶಿಯ ಮಹತ್ವವನ್ನೂ ಭಗವದ್ ಭಕ್ತಿಯ ಮಹಿಮೆಯನ್ನೂ ಭಾಗವತ ವಿವರಿಸುತ್ತದೆ.
No comments:
Post a Comment