ಒಂದು ಮನಸ್ಸಿಗೆ ಮುಟ್ಟುವ ಕತೆ . ಜಾತಿ ಧರ್ಮಕ್ಕಿಂತ ಭಕ್ತಿಯೇ ಶ್ರೇಷ್ಠವಾದದ್ದು ಎನ್ನುವುದಕ್ಕೊಂದು ಪುಟ್ಟ ಕತೆ .
ಹೀಗೆ ನೂರಾರು ವರ್ಷಗಳ ಹಿಂದಿನ ಮಾತು .
ಓಷಿಣೀಪುರ ಎಂಬ ಊರು ಇತ್ತು ಜನ ಸುಖದಿಂದಿದ್ದರು ಮಳೆ ಒಳ್ಳೆ ಬೆಳೆ ಬಂದು ಜನರ ಜೀವನ ಸುಖವಾಗಿದ್ದಿತು . ಅಂದು ಶ್ರೀರಾಮ ನವಮಿ ಊರಿನ ಶ್ರೀರಾಮರ ದೇವಸ್ಥಾನದಲ್ಲಿ ಬಹಳ ವಿಜೃಂಭಣೆಯಿಂದ ಶ್ರೀರಾಮ ನವಮಿಯನ್ನು ಆಚರಿಸುತ್ತಿದ್ದರು .
ರಾಮ ನವಮಿ ಅಂದರೆ ಕೇಳಬೇಕಾ ಪಾನಕ ಕೋಸಂಬರಿ ಮಜ್ಜಿಗೆ ಪಾಯಸಗಳ ಆಸೆಗೆ ಊರಿನ ಜನರೆಲ್ಲಾ ಪಾತ್ರೆ ಚೊಂಬುಗಳನ್ನು ಹಿಡಿದು ತಂದಿದ್ದರು .
ಮೇಲ್ವರ್ಗದವರಿಗೆಲ್ಲಾ ದೇವಸ್ಥಾನದ ಒಳಗೆ ಅವಕಾಶ . ಕೆಳ ವರ್ಗದ ಜನ ದೇವಸ್ಥಾನದ ಹೊರಗೆ ಬಿಸಿಲಲ್ಲಿ ನಿಂತು ಪಾನಕ ಮಜ್ಜಿಗೆಗಾಗಿ ಬಾಯಾರಿದ ಪಕ್ಷಿಯಂತೆ ಕಾಯುತ್ತಾ ನಿಂತಿದ್ದರು .
ಶ್ರೀರಾಮನ ಉತ್ಸವದ ಮೂರ್ತಿಯ ಮೆರವಣಿಗೆಯೂ ನಡೆಯುತ್ತಿತ್ತು ಉತ್ಸವ ಮೂರ್ತಿಯನ್ನು ಕೆಳಗಿಟ್ಟ ತಕ್ಷಣ ಮಹಾಮಂಗಳಾರತಿ ನಂತರ ಪಾನಕ ಕೋಸಂಬರಿಯ ಸಂತರ್ಪಣೆ .
ದಗ ದಗ ಬಿಸಿಲಿಗೆ ಹೊರಗೆ ನಿಂತಿದ್ದ ಕೆಳ ವರ್ಗದ ಜನ ತಲ್ಲಣಿಸಿ ಹೋಗಿದ್ದರು ಸೂರ್ಯನ ರಣ ಬಿಸಿಲು ಬಾಯಾರಿದ ಗಂಟಲುಗಳು ಎಂದು ಪಾನಕ ಗಂಟಲಿನೊಳಗೆ ಹಾಕಿ ಕೊಳ್ಳುತ್ತೇವೋ ಎಂದು ತುದಿಗಾಲಲ್ಲಿ ನಿಂತಿದ್ದರು .
ಅವರ ಗುಂಪಲ್ಲಿ ಒಬ್ಬ ಚಿಕ್ಕ ಹುಡುಗ ಹತ್ತು ವಯಸ್ಸಿನವ ಸ್ನಾನವನ್ನೂ ಮಾಡದೆ ಬಂದಿದ್ದ . ಹರಿದ ಬಟ್ಟೆ ಹಾಕಿದ್ದ ಚಿಕ್ಕವ ಪಾನಕದ ಹಂಡೆಯನ್ನು ನೋಡಿದ ತಕ್ಷಣವೇ ಹೋಗಿ ಕುಡಿದು ಬಿಡಲೆ ಎಂದು ಯೋಚಿಸಿ ಸಂದು ಗೊಂದುಗಳಲ್ಲಿ ನುಗ್ಗಿ ಕಡೆಗೂ ಪಾನಕದ ಹಂಡೆ ಬಳಿ ನಿಂತ .ಅಲ್ಲೋ ಸಾಲು ಸಾಲು ಪಾನಕದ ಹಂಡೆಗಳು .
ತಡೆಯಲಾರದೆ ಹಂಡೆಗೆ ಲೋಟ ಹಾಕಿಬಿಟ್ಟ ಇನ್ನೇನು ಅತ್ಯಾಸೆಯಿಂದ ಲೊಟದಲ್ಲಿದ್ದ ಪಾನಕವನ್ನು ಬಾಯಿಗೆ ಸುರಿದು ಕೊಳ್ಳಲು ಮೇಲಕ್ಕೆತ್ತಿದ ಆ ಪಾನಕ ಬಾಯೊಳಗೆ ಹೋಗುವುದರೊಳಗಾಗಿ ಅಲ್ಲೇ ಒಬ್ಬ ಪೂಜಾರಿ ಲೋಟವನ್ನು ಜಾಡಿಸಿ ಬಿಸಾಡಿದ .
ಅಯ್ಯೋ ಹೊಲಸು ಮುಂಡೇದೇ ಹಂಡೆಗೆ ಕೈಹಾಕಿ ಮೈಲಿಗೆ ಮಾಡಿದೆಯಾ ಇನ್ನೂ ಮಹಾಮಂಗಳಾರತಿ ಆಗಿಲ್ಲ ಅಷ್ಟರಲ್ಲಿ ಎಂಜಲು ಮಾಡಿದೆಯಾ ಪ್ರಾರಬ್ಧವೇ ಎಂದು ಅರಚಾಡಿದ .
ಅಷ್ಟರಲ್ಲಿ ಮೇಲ್ವರ್ಗದವರೆಲ್ಲಾ ಅಯ್ಯೋ ಅನಿಷ್ಟ ಮುಂಡೇದೇ ಪ್ರಸಾದ ಮುಟ್ಟಿ ಅಪಚಾರ ಮಾಡಿದೆ ಇವನನ್ನು ಬಿಡಬಾರದು ಎಂದು ಹಿರಿಯ ಮುಖಂಡ ಚಾಟಿ ಯಿಂದ ಹೊಡೆಯಿರಿ ಅಂದರು .
ಪಾಪ ಪುಟ್ಟ ಬಾಲಕ ಗಡ ಗಡ ನಡುಗುತ್ತಾ ಇದ್ದಾನೆ ಒಬ್ಬ ಬಂದವನೇ ಚಾಟಿ ಬೀಸಿಯೇ ಬಿಟ್ಟ ಹತ್ತು ಛಡಿ ಏಟು ಕೊಟ್ಟ ಪಾಪ ಮಗು ಅಳುತ್ತಾ ನೆಲದಲ್ಲಿ ಬಿದ್ದು ಓ ಎಂದು ಅಳುತ್ತಾ ವಿಲ ವಿಲ ಒದ್ದಾಡಿದ .
ಹೊಡೆದ ಏಟಿಗೆ ರಾಮಾ ಅನ್ನುತ್ತಾ ಹಾಗೆ ಪ್ರಜ್ಞೆತಪ್ಪಿದ . ರಾಮಾ ಅಂದಾಕ್ಷಣ ಆಕಾಶದಿಂದ ಮಿಂಚು ಹೊಳೆಯಿತು ದಿವ್ಯ ಪ್ರಕಾಶವೊಂದು ಬಾಲಕನ ಮುಂದೆ ಇಳಿಯಿತು .
ಆ ಪ್ರಕಾಶದಿಂದ ದೇದೀಪ್ಯಮಾನವಾಗಿ ರಾರಾಜಿಸುತ್ತಿದ್ದ ಒಂದು ಆಕೃತಿ ಮೂಡಿತು ಕಣ್ ಉಜ್ಜಿ ಬಿಟ್ಟಾಗ ಸಾಕ್ಷಾತ್ ಶ್ರೀರಾಮನೇ ಕೋದಂಡಧರನಾಗಿ ನಿಂತಿದ್ದ .
ನೆಲದಲ್ಲಿ ಪ್ರಜ್ಞಾಶೂನ್ಯನಾಗಿ ಬಿದ್ದಿದ್ದ ಬಾಲಕನನ್ನು ನೋಡಿ ಕುಳಿತು ಕೊಂಡು ಬಾಲಕನ ತಲೆಯನ್ನು ತನ್ನ ತೊಡೆಯ ಮೇಲಿರಿಸಿ ನೇವರಿಸಿದಾಕ್ಷಣ ಬಾಲಕ ಎಚ್ಚರಗೊಂಡ . ಮೈಮೇಲೆ ತನ್ನ ಮಂಗಳ ಹಸ್ತವನ್ನು ಇಟ್ಟು ಬಾಲಕನ ಮೈ ಸವರಿದಾಕ್ಷಣ ಮೈಮೇಲಿದ್ದ ಬರೆಗಳು ಮಾಯವಾಗಿ ಹುಡುಗನಲ್ಲಿ ನವಚೇತನವು ಮೂಡಿತು .
ಆಗ ಶ್ರೀರಾಮಚಂದ್ರನು ಅಲ್ಲೇ ಹಂಡೆಯಲ್ಲಿದ್ದ ಪಾನಕವನ್ನು ಹುಡುಗನಿಗೆ ಕುಡಿಸಿದನು . ಬಾಲಕನನ್ನು ಆಶೀರ್ವಧಿಸಿ ಅದೃಷ್ಯರಾದನು .
ಯಾರ ಪೂಜೆಗೆ ಮೈಲಿಗೆ ಆಯ್ತೋ ಎಂದು ಹೇಳಿದ್ದರೋ ಸಾಕ್ಷಾತ್ ಆ ಶ್ರೀರಾಮನೇ ಬಾಲಕನನ್ನು ತನ್ನ ಅಮೃತ ಹಸ್ತದಿಂದ ಮುಟ್ಟಿದನು ಎಂದ ಮೇಲೆ ಮೈಲಿಗೆಯ ಮಾತೆಲ್ಲಿ .
ಮುಂದೆ ಆ ಬಾಲಕನೇ ಶ್ರೀರಾಮನ ಪರಮ ಭಕ್ತನಾಗಿ ಶ್ರೀರಾಮದಾಸನಾಗಿ ರಾಮಧ್ಯಾನ ಮಾಡುತ್ತಾ ಸಂಕೀರ್ತನೆಗಳನ್ನು ಹಾಡುತ್ತಾ ಜನ್ಮ ಪಾವನ ಮಾಡಿ ಕೊಂಡನು .
ಈ ಕಥಾಸಾರಾಂಶದಲ್ಲಿ ದೇವರಿಗೆ ಬೇಕಿರುವುದು ಭಕ್ತಿಯೇ ಹೊರತು ಮಡಿ ಮೈಲಿಗೆ ಆಡಂಬರವಲ್ಲ ಅದು ಕೇವಲ ಮನುಷ್ಯ ತನ್ನ ಮನಸ್ಸಿನ ತೃಪ್ತಿಗಾಗಿ ಮಾಡಿಕೊಂಡಿರುವ ಪದ್ದತಿ . ಮನುಷ್ಯನಿಗೆ ಆಡಂಬರದಿಂದ ಮಡಿ ವಂತಿಕೆಯಿಂದ ಮಾಡಿದ ಪೂಜೆಯೇ ಶ್ರೇಷ್ಠ ಎನ್ನುವ ಭಾವನೆ ಬೇರೂರಿದೆ ಸಾಕ್ಷಾತ್ ದೇವರೇ ಮನುಷ್ಯನ ಮನಸ್ಸನ್ನು ಬದಲಿಸಲಾರದಾದನು .
ದೇವರಿಗೆ ಬೇಕಿರುವುದು ಭಕ್ತಿ ಪ್ರೀತಿ ಅದಕ್ಕಾಗಿಯೇ ಶಬರಿ ಎಂಜಲು ಮಾಡಿದ ಹಣ್ಣನ್ನು ರಾಮನಿಗೆ ಕೊಟ್ಟರೂ ರಾಮ ತಿಂದಿದ್ದು ಆ ಹಣ್ಣಲ್ಲಿ ರಾಮ ಭಕ್ತಿ ಕಂಡನೇ ಹೊರತು ಎಂಜಲನ್ನಲ್ಲ .
ಎಲ್ಲಿ ಶ್ರೀರಾಮನಿಗೆ ಹುಳಿಯಾದ ಹಣ್ಣು ಕೊಡುವೆನೋ ಹಣ್ಣಾದ ರುಚಿಯಾದ ಹಣ್ಣು ಕೊಡುವ ಉದ್ದೇಶ ಮಾತ್ರ ಶಬರಿಯಲ್ಲಿತ್ತು ಅದು ರಾಮನಿಗೂ ಗೊತ್ತಿತ್ತು .
ಸತ್ಯಭಾಮೆಯ ಆಡಂಬರದ ಅಹಂಕಾರದ ಪೂಜೆ ರುಕ್ಮಿಣೀ ದೇವಿಯ ತುಳಸಿ ದಳಕ್ಕೆ ಸಮವಾಗಲಿಲ್ಲ . ಭಕ್ತ ಕಣ್ಣಪ್ಪನ ಮುಗ್ಧ ಭಕ್ತಿಯೇ ಸಾಕು ಶಿವನಿಗೆ .
ಹೀಗೆ ಮಹಾನುಭಾವರಾದ ದೇವರುಗಳೇ ಕೇವಲ ಭಕ್ತಿಗೆ ಮನಸೋಲುವರು . ಜಾತಿ ಧರ್ಮ ಕುಲ ವರ್ಣಕ್ಕಲ್ಲ .
ಆದರೆನುಷ್ಯ ಮಾತ್ರ ಜಾತಿ ಕುಲ ಅನ್ನುವ ದೇವರಿಗಿಲ್ಲದ ಜಾತಿ ಮಾನವರಿಗೇಕೋ . ಮನುಷ್ಯನ ಮನಸ್ಸಿಗೆ ಮಾತ್ರ ಜಾತಿ ಭೇದ ಬಾವ . ಎಲ್ಲದಕ್ಕಿಂತ ದೊಡ್ಡದು ಭಕ್ತಿ ಮಾನವೀಯತೆ .
ಧನ್ಯವಾದಗಳು
ಮಮತಾ ಎಸ್ ಗೌಡ
No comments:
Post a Comment