Saturday, 30 May 2020

ವರಾಹಮಿಹಿರ

#ಮಹಾನ್ #ಜ್ಯೋತಿಷ್ಯಾಚಾರ್ಯ #ವರಾಹಮಿಹಿರ!

ಪ್ರಾಚೀನ ಸಮಯದಲ್ಲಿ ಉಜ್ಜಯನಿಯಲ್ಲೊಂದು ಶಾಸ್ತ್ರಗೋಷ್ಠಿ ನಡೆಯುತ್ತಿತ್ತು.ನಾಳೆ
ಸೂರ್ಯಗ್ರಹಣವಿದೆ ಎಂದರಿತ ವಿದ್ವಾಂಸರು ಹೀಗೆ ಚರ್ಚಿಸುತ್ತಿದ್ದರು.”ನಾಳೆ ಸೂರ್ಯೋದಯದ
ನಂತರ ನಾಲ್ಕು ಘಂಟೆ ೨೦ ನಿಮಿಷಕ್ಕೆ ಸೂರ್ಯಗ್ರಹಣ ಸಂಭವಿಸಲಿದೆ.ರಾಹುಗ್ರಹ ಅಥವಾ
ಕೇತುಗ್ರಹ ಸೂರ್ಯನನ್ನು ನುಂಗಲಿವೆ.ಆಗ ರಾಹು,ಕೇತುಗಳ ಗಾತ್ರ ಹೇಗಾಗಬಹುದು..?ಸೂರ್ಯನ
ಪರಿಸ್ಥಿತಿ ಹೇಗಾಗಬಹುದು..?” ಎಂಬ ಬಗ್ಗೆಯೇ ಚರ್ಚೆ ಸಾಗುತ್ತಿತ್ತು.ಆಗ ಅವರಲ್ಲೊಬ್ಬ
ವಿದ್ವಾಂಸ ಕಂಚಿನ ಕಂಠದಿಂದ ಹೇಳಿದ.”ನಿಜ ನಾಳೆ ಸೂರ್ಯಗ್ರಹಣ ನಡೆಯಲಿದೆ.ಅದರಲ್ಲಿ
ಸಂದೇಹವೇ ಇಲ್ಲ.ಆದರೆ ಗ್ರಹಣದಲ್ಲಿ ರಾಹು,ಕೇತುಗಳ ಪಾತ್ರ ಕಿಂಚಿತ್ತೂ
ಇರಲಾರದು.ಗ್ರಹಣವೆಂದರೆ ಆಕಾಶದಲ್ಲಿ ನಡೆಯುವ ಬೆಳಕು ಹಾಗೂ ಕತ್ತಲೆಯ ಕ್ರೀಡೆ.ಈ
ಕ್ರೀಡೆಯಲ್ಲಿ ಸೂರ್ಯ,ಚಂದ್ರ ಹಾಗೂ ಭೂಮಿ ಪ್ರಮುಖ ಪಾತ್ರವನ್ನು
ವಹಿಸುತ್ತಾರೆ.ಚಂದ್ರಗ್ರಹಣ ಕಾಲದಲ್ಲಿ ಚಂದ್ರ ಭೂಮಿಯ ಛಾಯೆಯನ್ನು
ಪ್ರವೇಶಿಸುತ್ತಾನೆ.ಯಾವಾಗ ಭೂಮಿ,ಸೂರ್ಯ,ಚಂದ್ರರು ಸಮಾನರೇಖೆಯಲ್ಲಿರುತ್ತಾರೋ ಆಗ
ಚಂದ್ರಗ್ರಹಣ.ಸೂರ್ಯಗ್ರಹಣಕಾಲದಲ್ಲಿ ಚಂದ್ರ ಸೂರ್ಯನ ಛಾಯೆಯನ್ನು
ಪ್ರವೇಶಿಸುತ್ತಾನೆ.ಯಾವಾಗ ಸೂರ್ಯ,ಚಂದ್ರ ಹಾಗೂ ಭೂಮಿ ಸಮಾನರೇಖೆಯಲ್ಲಿರುತ್ತಾರೋ ಆಗ
ಸೂರ್ಯಗ್ರಹಣ”ವಿದ್ವಾಂಸರ ಈ ಮಾತನ್ನು ಕೇಳೆದವರೆಲ್ಲಾ ಆಶ್ಚರ್ಯಚಕಿತರಾದರು.ಯಾವುದೇ
ಆಧುನಿಕ ವಿಜ್ಞಾನೋಪಕರಣಗಳಿಲ್ಲದ ಆ ಸಮಯದಲ್ಲಿ ನಿಖರವಾಗಿ ಸೂರ್ಯ,ಚಂದ್ರ,ಭೂಮಿಯ
ಗತಿ,ಗ್ರಹಣ ಇವುಗಳನ್ನೆಲ್ಲಾ ಅನ್ವೇಷಿಸಿದವರು ಯಾರು..?ಬೇರೆ ಯಾರೂ ಅಲ್ಲ,ಪ್ರಾಚೀನ
ಭಾರತದ ಖಗೋಲವಿಜ್ಞಾನಿ,ಗಣಿತಜ್ಞ,ತತ್ವಜ್ಞಾನಿ ಹಾಗೂ ಜ್ಯೋತಿಷಿ ವರಾಹಮಿಹಿರ.

ಮಹಾನ್ ಜ್ಯೋತಿಷ್ಯಾಚಾರ್ಯ ವರಾಹಮಿಹಿರ ಹುಟ್ಟಿದ್ದು ಸುಮಾರು ಐದನೇ ಶತಮಾನದ
ಅಂತ್ಯಭಾಗದಲ್ಲಿ. ಈತನ ಜನ್ಮಸ್ಥಳ ಮಧ್ಯಪ್ರದೇಶದ ಉಜ್ಜಯನಿಯಿಂದ ೨೦ ಕಿಲೋಮೀಟರ್
ದೂರದಲ್ಲಿರುವ ಕಾಯಥಾ (ಕಾಯಿತ್ಥಕಾ).ತಂದೆ ಆದಿತ್ಯದಾಸ,ತಾಯಿ ಸತ್ಯವತೀ.ತಂದೆ
ಆದಿತ್ಯದಾಸರು ಸೂರ್ಯನ ಉಪಾಸಕರಾಗಿದ್ದರು.ಸೂರ್ಯನ ಅನುಗ್ರಹದಿಂದ ಜನಿಸಿದ ಮಗುವಿಗೆ
“ಮಿಹಿರ” ಎಂದು ನಾಮಕರಣ ಮಾಡಿದರು.ಸಂಸ್ಕೃತದಲ್ಲಿ “ಮಿಹಿರ” ಎಂದರೆ ಸೂರ್ಯ
ಎಂದರ್ಥ.ಮಿಹಿರ ತಂದೆಯಿಂದ ಜ್ಯೋತಿಷ್ಯವನ್ನು ಅಧ್ಯಯನ ಮಾಡಿ ವಿಕ್ರಮಾದಿತ್ಯನ ಆಸ್ಥಾನದ
ನವರತ್ನಗಳಲ್ಲೊಂದಾಗಿದ್ದ.ಒಮ್ಮೆ ವಿಕ್ರಮಾದಿತ್ಯನ ಒಬ್ಬ ಮಗನನ್ನು ನೋಡಿ “ಈ ಮಗುವಿಗೆ
೧೮ ವರ್ಷವಾದಾಗ ವರಾಹ (ಕಾಡು ಹಂದಿ) ಈತನನ್ನು ಕೊಲ್ಲುತ್ತದೆಂದು ಭವಿಷ್ಯ
ನುಡಿದಿದ್ದ.ಇದರಿಂದ ಚಿಂತಿತನಾದ ವಿಕ್ರಮಾದಿತ್ಯ ಮಗುವಿಗೆ ಸೂಕ್ತ ರಕ್ಷಣೆಯನ್ನು
ಕಲ್ಪಿಸಿದ್ದ.ಆದರೆ ಮಿಹಿರನ ಭವಿಷ್ಯ ನಿಜವಾಯಿತು.೧೮ ವರ್ಷ ತುಂಬಿದ ಬಾಲಕನನ್ನು ವರಾಹ
ಕೊಂದಿತ್ತು.ಇದರಿಂದ ಮಿಹಿರ ವರಾಹಮಿಹಿರನೆಂದೇ ಪ್ರಸಿದ್ಧನಾದ.ಕಾಯಿತ್ಥಕದಲ್ಲಿ
ವರಾಹಮಿಹಿರ ಒಂದು ಗುರುಕುಲವನ್ನೇ ಸ್ಥಾಪಿಸಿದ್ದನೆಂಬುದಕ್ಕೆ ಅನೇಕ ಪುರಾವೆಗಳು
ದೊರೆಯುತ್ತವೆ.

ವರಾಹಮಿಹಿರ ಆರು ಶ್ರೇಷ್ಟಗ್ರಂಥಗಳನ್ನು ರಚಿಸಿದ್ದಾನೆ.
೧.ಪಂಚಸಿದ್ಧಾಂತಿಕಾ (ಸಿದ್ಧಾಂತ ಗ್ರಂಥ)
೨.ಬೃಹಜ್ಜಾತಕ (ಜನ್ಮಕುಂಡಲಿಗೆ ಸಂಬಂಧಿಸಿದ ಗ್ರಂಥ)
೩.ಬೃಹತ್ ಯಾತ್ರಾ (ಯಾತ್ರೆಗೆ ಸಂಬಂಧಿಸಿದ ಗ್ರಂಥ)
೪.ಯೋಗಯಾತ್ರಾ (ರಾಜರ ಯಾತ್ರೆಗಳಲ್ಲಿ ಶಕುನಗಳಿಗೆ ಸಂಬಂಧಿಸಿದ್ದು)
೫. ವಿವಾಹಪಟಲ (ಮುಹೂರ್ತ ವಿಷಯ)
೬.ಬೃಹತ್ ಸಂಹಿತಾ (ಸಿದ್ಧಾಂತ ಹಾಗೂ ಫಲಿತ)

ಇವುಗಳಲ್ಲಿ ಅತ್ಯಂತ ಪ್ರಸಿದ್ಧವಾದದ್ದು,ಪಂಚಸಿದ್ಧಾಂತಿಕಾ ಹಾಗೂ ಬೃಹತ್
ಸಂಹಿತಾ.ಬೃಹತ್ ಸಂಹಿತೆಯಲ್ಲಿ ಒಟ್ಟೂ ೧೦೬ ಅಧ್ಯಾಯಗಳಿವೆ.ಜ್ಯೋತಿಷ್ಯಕ್ಕೆ ಸಂಬಂಧಿಸಿದ
ಅತಿದೊಡ್ಡ ಗ್ರಂಥವೆಂಬ ಹೆಗ್ಗಳಿಕೆಯನ್ನು ಗಳಿಸಿದೆ.ಇದರಲ್ಲಿ ಸೂರ್ಯ,ಚಂದ್ರ ಹಾಗೂ
ಅನ್ಯಗ್ರಹಗಳ ಗತಿ ಹಾಗೂ ಗ್ರಹಣ,ಗ್ರಹಗಳಿಂದ ಮನುಷ್ಯ ಹಾಗೂ ಭೂಮಿಯ ಮೇಲಾಗುವ
ಪರಿಣಾಮಗಳು,ವರ್ಷಫಲ (ಗೋಚರ),ಋತುಗಳ ಲಕ್ಷಣ,ಕೃಷಿ ಉತ್ಪಾದನೆ,ವಸ್ತುಗಳ
ಮೌಲ್ಯ,ವಾಸ್ತುವಿದ್ಯೆಯಲ್ಲಿ ಜ್ಯೋತಿಷ್ಯದ ಮಹತ್ವ ಇತ್ಯಾದಿ ವಿಷಯಗಳ ವಿಸ್ತೃತ
ವಿವರಣೆಯಿದೆ.ಇದು ಸಿದ್ಧಾಂತ ಜ್ಯೋತಿಷ್ಯ ಹಾಗೂ ಫಲಿತ ಜ್ಯೋತಿಷ್ಯಗಳ ಸಂಯುಕ್ತ
ಗ್ರಂಥವಾಗಿದೆ.ಭಾರತೀಯ ಭೂಗೋಳದ ವಿಸ್ತೃತ ನಿರೂಪಣೆಯನ್ನು ಮಾಡಲಾಗಿದೆ.ಈ ಗ್ರಂಥಕ್ಕೆ
ಭಟ್ಟೋತ್ಪಲನ ಟೀಕೆಯೂ ಲಭ್ಯವಿದೆ.
ಪಂಚ ಸಿದ್ಧಾಂತಿಕದಲ್ಲಿ ವರಾಹಮಿಹಿರ ಪಂಚಸಿದ್ಧಾಂತಗಳ ವರ್ಣನೆಯನ್ನು ಮಾಡಿದ್ದಾನೆ.

ಪಂಚಸಿದ್ಧಾಂತಗಳು –
೧.ಪೌಲಿಶ
೨.ರೋಮಕ
೩.ವಶಿಷ್ಠ
೪.ಸೌರ
೫. ಪಿತಾಮಹ

ಪ್ರಾಚೀನ ಭಾರತದಲ್ಲಿ ವರಾಹಮಿಹಿರ ಶ್ರೇಷ್ಟ ಜೋತಿಷ್ಯಾಸ್ತ್ರಜ್ಞ ಹಾಗೂ ಖಗೋಲ
ವಿಜ್ಞಾನಿಯಾಗಿದ್ದ.ಪಂಚಸಿದ್ಧಾಂತಿಕಾ ಗ್ರಂಥದ ಮೊದಲನೆಯ ಖಂಡದಲ್ಲಿ ಖಗೋಲ ವಿಜ್ಞಾನದ
ಬಗ್ಗೆ ವಿಸ್ತಾರವಾದ ಚರ್ಚೆಯನ್ನು ಕಾಣಬಹುದು.ನಾಲ್ಕನೇ ಖಂಡದಲ್ಲಿ ತ್ರಿಕೋಣಮಿತಿಯ
ನಿಯಮಗಳ ಬಗ್ಗೂ ಸಹ ವಿವರಿಸಲಾಗಿದೆ.೨೪ ಜ್ಯಾ ಮಾನದ (R sin A value) ಸರಣಿಯನ್ನು
(sine Table)  ವಿವರಿಸಿದ ಖ್ಯಾತಿಯೂ ವರಾಹಮಿಹಿರನಿಗೇ ಸಲ್ಲುತ್ತದೆ.ತನ್ನ ಬೃಹತ್
ಸಂಹಿತಾ ಗ್ರಂಥದಲ್ಲಿ ಸಂಚಯವನ್ನು ತಿಳಿಯಲು ಆತ ಹೊಸದಾದ “ಲೋಷ್ಠ ಪ್ರಸ್ತಾರ” ಎಂಬ
ಪದ್ಧತಿಯನ್ನು ಕಂಡುಹಿಡಿದಿದ್ದ.ಇದು ಪಾಸ್ಕಲ್ ತ್ರಿಕೋಣದ ನಿಯಮಾವಳಿಯೊಂದಿಗೆ
ಹೊಂದಿಕೆಯಾಗುತ್ತದೆ. ಸುಗಂಧಿತ ದ್ರವ್ಯಗಳನ್ನು ತಯಾರಿಸಲು (Pan diagonal Magic
Square) ಅತ್ಯಾವಶ್ಯಕವೆಂಬುದನ್ನೂ ವಿವರಿಸಿದ್ದಾನೆ.ಇವುಗಳ ಹೊರತಾಗಿ ನಕ್ಷತ್ರ
ವಿದ್ಯೆ,ವನಸ್ಪತಿ ವಿಜ್ಞಾನ,ಭೂಗೋಳಶಾಸ್ತ್ರ,ಪ್ರಾಣಿಶಾಸ್ತ್ರ ಹಾಗೂ ಕೃಷಿವಿಜ್ಞಾನದ
ಬಗ್ಗೆಯೂ ತನ್ನ ಗ್ರಂಥಗಳಲ್ಲಿ ವಿಸ್ತಾರವಾಗಿ ಚರ್ಚಿಸಿದ್ದಾನೆ.ಈತನ ಗ್ರಂಥಗಳಿಂದ ನಮಗೆ
ಪ್ರಾಚೀನ ಭಾರತದ ಚಿಕಿತ್ಸಾ ಪದ್ಧತಿ,ಪ್ರಾಚೀನ ಭಾರತದ ವೈಜ್ಞಾನಿಕ
ದೃಷ್ಟಿಕೋಣ,ಪ್ರಾಚೀನ ಭಾರತದ ವೈಜ್ಞಾನಿಕ ಅನ್ವೇಷಣೆ ಮುಂತಾದ ವಿಷಯಗಳ ಮಾಹಿತಿ
ಲಭಿಸುತ್ತದೆ.ತನ್ನ ಬಹುಮುಖ ಪ್ರತಿಭೆಯಿಂದ ವರಾಹಮಿಹಿರ ಇಂದಿಗೂ ಭಾರತದ ವೈಜ್ಞಾನಿಕ
ಕ್ಷೇತ್ರದಲ್ಲಿ ವಿಶಿಷ್ಟವಾದ ಸ್ಥಾನವನ್ನು ಪಡೆದಿದ್ದರು.

No comments:

Post a Comment