Thursday, 28 May 2020

ಸಂಜೀವಿನಿ ಮಂತ್ರ

ಸಂಜೀವಿನಿ ಮಂತ್ರ
*****************
ಸಂಜೀವಿನಿ ಮಂತ್ರ ಇರುವುದು ಬದುಕಿಸುವುದಕ್ಕಾಗಿ.ಲಕ್ಷ್ಮಣ ಮೂರ್ಛಿತನಾಗಿದ್ದಾಗ ಸಂಜೀವಿನಿ ಬೇರಿನಿಂದ ಸಂಜೀವಿನಿ ಮಂತ್ರದಿಂದ ಜೀವಿತನಾಗುವಂತೆ ಮಾಡಿದರು ....

ಮೃತ ಸಂಜೀವಿನಿ.... ಇದು ಕಚನ ಕಥೆ. ದೇವಾಸುರ ಸಂಗ್ರಾಮದಲ್ಲಿ ಹತರಾದ ರಾಕ್ಷಸರನ್ನೆಲ್ಲಾ ಶುಕ್ರಾಚಾರ್ಯರು ಸಂಜೀವಿನಿ ಮಂತ್ರದಿಂದ ಬದುಕಿಸುತ್ತಿದ್ದರು. ಹೀಗಾಗಿ ದೇವತೆಗಳು ಯುದ್ಧವನ್ನು ಗೆಲ್ಲುವುದು ಕಠಿಣವಾಯಿತು. ದೇವತೆಗಳು ಒಟ್ಟಿಗೆ ಸೇರಿ ಆಲೋಚನೆ ಮಾಡಿ ಶುಕ್ರಾಚಾರ್ಯರ ಮಂತ್ರ ಪ್ರಭಾವದಿಂದ ರಾಕ್ಷಸರು ಬದುಕುತ್ತಿದ್ದಾರೆಂದು ಕಂಡುಕೊಂಡರು. ದೇವಗುರು ಭೃಹಸ್ಪತಿಗಳ ಮಗ ಕಚನನ್ನು ಶುಕ್ರಾಚಾರ್ಯರ ಬಳಿ ಶಿಷ್ಯನಾಗಿ ಕಳಿಸಬೇಕೆಂದು ತೀರ್ಮಾನಿಸಿದರು. ಕಚ ಸ್ವಭಾವತಃ ಬಹಳ ವಿನಯವಂತ. ಅವನ ಈ ಗುಣದಿಂದ ಶುಕ್ರಾಚಾರ್ಯರ ಮನಸನ್ನು ಗೆದ್ದ. ಅಲ್ಲದೆ ಶುಕ್ರಾಚಾರ್ಯರ ಮಗಳು ದೇವಯಾನಿ ಕಚನತ್ತ ಆಕರ್ಷಿತಳಾದಳು .ಕಚನು ಸಂಜೀವಿನಿ ವಿದ್ಯೆ ಕಲಿಯುತ್ತಿದ್ದಂತೇ ರಾಕ್ಷಸರಿಗೆ ಭಯ ಆರಂಭವಾಯಿತು.. ಅವನನ್ನು ಮುಗಿಸಿಬಿಡಲು ಪ್ರಯತ್ನಿಸಿದರು. ಬಾವಿಯಿಂದ ನೀರು ತರಲು ಕಚ ಹೋದಾಗ ಅವನನ್ನು ಬಾವಿಗೆ ತಳ್ಳಿದರು. ಅವನನ್ನು ಮೇಲಕ್ಕೆತ್ತಿದ ಶುಕ್ರಾಚಾರ್ಯರು ,ಮಗಳ ಸಂಕಟ ನೋಡಲಾಗದೆ ,ಅವನನ್ನು ಮಂತ್ರ ಬಲದಿಂದ ಬದುಕಿಸಿದರು. ಅನೇಕಬಾರಿ ರಾಕ್ಷಸರು ಮತ್ತೆ ಮತ್ತೆ ಕಚನ ಸಾವಿಗಾಗಿ ಪ್ರಯತ್ನಿಸಿದರು. ಕಡೆಗೆ ಮತ್ತೊಂದು ಉಪಾಯ ಮಾಡಿದರು . ಅವನ ಬೂದಿಯೂ ಸಿಗಬಾರದು ಎಂದು ಉಪಾಯ ಮಾಡಿದರು. ಕಚನನ್ನು ಕೊಂದು ಅವನನ್ನು ಸುಟ್ಟುಹಾಕಿ ಬೂದಿಯನ್ನು ಸುರೆಯಲ್ಲಿ ಬೆರೆಸಿ ದೇವಯಾನಿಗೆ ಕುಡಿಸಿಬಿಟ್ಟರು...
ಈಗ ದೇವಯಾನಿಯ ಉದರದೊಳಗೆ ಕಚ....
ಬದುಕಿಸಿದರೆ ಮಗಳು ಸಾಯುತ್ತಾಳೆ .ತಾನು ಎರಡು ಬಾರಿ ಮಂತ್ರ ಪ್ರಯೋಗ ಮಾಡುವಂತಿಲ್ಲ.... ಈಗೇನು ಮಾಡುವುದು ಎಂದು ಚಿಂತಾಕ್ರಾಂತರಾದ ಶುಕ್ರಾಚಾರ್ಯರು .ಆಗ ತುಂಬಾ ಚಿಂತಿಸಿ ಒಂದು ತೀರ್ಮಾನಕ್ಕೆ ಬಂದರು . ಮೊದಲು ಮಂತ್ರ ಪ್ರಯೋಗ ಮಾಡಿದಾಗ ಕಚ ದೇವಯಾನಿಯ ಹೊಟ್ಟೆ ಸೀಳಿ ಹೊರಗೆ ಬಂದ. ಶುಕ್ರಾಚಾರ್ಯರು ಈಗ ಕಚನಿಗೆ ಮಂತ್ರ ಉಪದೇಶ ಮಾಡಿ ,ಅದನ್ನು ಪ್ರಯೋಗಿಸಿ ಮಗಳನ್ನು ಬದುಕಿಸುವಂತೆ ಪ್ರಾರ್ಥಿಸಿಕೊಂಡ. ಕಚನು ಮಂತ್ರ ಪ್ರಯೋಗದಿಂದ ದೇವಯಾನಿಯನ್ನು ಬದುಕಿಸುತ್ತಾನೆ. ಬದುಕಿದ ದೇವಯಾನಿ ತನ್ನನ್ನು ಮದುವೆಯಾಗುವಂತೆ ಕಚನಲ್ಲಿ  ತನ್ನ ಅನುರಕ್ತಿಯನ್ನು ವ್ಯಕ್ತಪಡಿಸುತ್ತಾಳೆ. ಕಚ ಅವಳ ಉದರದಿಂದ ಬಂದಿದ್ದರಿಂದ ಅವಳು ತನಗೆ ತಾಯಿಯ ಸ್ಥಾನದಲ್ಲಿ ಇರುವಳೆಂದು ವಿವಾಹದ ಪ್ರಸ್ತಾವನೆ ತಿರಸ್ಕರಿಸುತ್ತಾನೆ . ಆಗ ಕೋಪಗೊಂಡ ಶುಕ್ರಾಚಾರ್ಯರು ಕಚನಿಗೆ ಶಾಪ ಕೊಡುತ್ತಾರೆ ಕಲಿತ ವಿಧ್ಯೆ ಮರೆತರು ಹೋಗಲಿ ಎಂದು .
ಇದು ಸಂಜೀವಿನಿ ಮಂತ್ರದ ಕತೆ. 

ಮಂತ್ರಗಳೆಲ್ಲಾ ಅತ್ಯಂತ ಗುಪ್ತವಾದದ್ದು. ಅದು ಕೇವಲ ಶಬ್ಧಗಳಲ್ಲ .ಫಲದ ನಿರ್ದೇಶ.....ಅದನ್ನು ಸಿದ್ಧಪುರುಷರ ಬಳಿ ಮಂತ್ರ ದೀಕ್ಷೆ ತೆಗೆದುಕೊಳ್ಳಬೇಕು....ಅದರ ಉಚ್ಛಾರಣೆ ತುಂಬಾ ಮುಖ್ಯ. ಅದರ ಉಚ್ಚಾರಣೆ ತಪ್ಪಿದ್ದರೆ ಪ್ರಭಾವ ವಿರುದ್ಧವಾಗುತ್ತದೆ. ಈ ವಿಷಯಗಳು ನಷ್ಟವಾಗಿ. ಮಂತ್ರವನ್ನು ತುಂಬಾ ಸಲೀಸಾಗಿ ಪರಿಗಣಿಸುತ್ತಾರೆ. ಈಗ ಅಂತರ್ಜಾಲವೇ ಗುರು ಆಗಿಬಿಟ್ಟಿದೆ..... ಎಂತಹ ವಿಪರ್ಯಾಸ....

No comments:

Post a Comment