Saturday, 30 May 2020

ಕಾಲಯವನ

#ಕಾಲಯವನ

ಗರ್ಗ್ಯ ಗೋತ್ರದ ತ್ರಿಗರ್ತ ರಾಜ್ಯದ ಕುಲಗುರು ಮಹರ್ಷಿ ಶಿಶಿರಾಯಣ ಮಹಾನ್ ಬ್ರಹ್ಮಚಾರಿ ಶಿವಭಕ್ತರಾಗಿದ್ದರು.

ಒಮ್ಮೆ ಬ್ರಹ್ಮರ್ಷಿ, ರಾಜರ್ಷಿ, ಮಹರ್ಷಿ, ಋಷಿಗಳ ಸಭೆಯಲ್ಲಿ  ಒಬ್ಬಾತ ಆ ಮಹರ್ಷಿಗೆ ನೀನು ನಪುಂಸಕ, ಸಂತಾನವೇ ಇಲ್ಲ ಎಂದು ಯಾರೋ ಆ ಸಭೆಯಲ್ಲಿ ಹೇಳಿದರು. ಆದರೂ ನಮ್ಮೊಡನೆ ಚರ್ಚೆಗೆ ನಮ್ಮ‌ಸರಿಸಮ ಕುಳಿತಿರುವೆ ಅಂತ ಅಣಕದ ಮಾತಾಡಿದರು.

ಈ ವಿಷಯ ಮಹರ್ಷಿ ಶಿಶಿರಾಯಣರ ಮನಸ್ಸಿಗೆ ನಾಟಿ ತೀವ್ರತರವಾದ ನೋವುಂಟಾಯಿತು. ಸರಿ ತಾನು ಈ ಕುರಿತು ಶಿವನಲ್ಲಿ ಪ್ರಾರ್ಥಿಸೋಣ ಎಂದುಕೊಂಡು ತಪಸ್ಸಿಗೆ ಕುಳಿತರು. ಸತತ ಎಡಬಿಡದಂತೆ ಘೋರವಾಗಿ ಹನ್ನೆರಡು ವಸಂತಗಳ ಕಾಲ ತಪವನ್ನಾಚರಿಸಿದ ನಂತರ ಮಹಾದೇವನು ಪ್ರತ್ಯಕ್ಷವಾಗಿ ವರ ಕೇಳಲು

ಮಹರ್ಷಿಯು ತನಗೆ ಒಂದು ಸಂತಾನ ಬೇಕು, ಆತ ಮಹಾಬಲಶಾಲಿಯಾಗಿದ್ದು, ಯಾವುದೇ ಅಸ್ತ್ರ ಶಸ್ತ್ರಗಳಿಂದ ಮರಣ ಬಾರದಂತೆ, ಅತುಲ್ಯ ಬಲಶಾಲಿಯಾಗಿರಬೇಕು ಎಂದು ಕೋರಿದ.

ಬೋಲೇಶಂಕರನು ತಥಾಸ್ತು ಎಂದು ವರವನ್ನಿತ್ತು ಅಂತರ್ಧಾನನಾದನು.

ವರ ಪಡೆದ ನಂತರ ಮಹರ್ಷಿ ಶಿಶಿರಾಯಣ ಸ್ಪುರದ್ರೂಪಿಯಾದ ನವಯುವಕನಂತೆ ಪರಿವರ್ತಿತವಾದರು. ನಂತರ ತನ್ನ ಆಶ್ರಮಕ್ಕೆ ಹಿಂದಿರುಗುವ ಸಮಯದಲ್ಲಿ ನದಿ ತೀರದ ಬಳಿ ಸಂಧ್ಯಾವಂದನೆ ಮಾಡುತ್ತಿರುವ ಸಂದರ್ಭದಲ್ಲಿ, ಅದೇ ಸಮಯಕ್ಕೆ ಸರಿಯಾಗಿ ಅಪರೂಪದ ರತ್ನದಂತ ಕನ್ಯೆ ಧರೆಗಿಳಿದು ಬಂದಿಹಳೇನೋ ಎಂಬಂತ ಅಪ್ಸರ ಸ್ತ್ರೀ ಕೂಡ ಅದೇ ನದಿ ತೀರದಲ್ಲಿ ತನ್ನ ಸಖಿಯರೊಡನೆ ಜಲಕ್ರೀಡೆ ಆಡುತ್ತಿರುವಾಗ ಈ ನವಮನ್ಮಥನಂತ ಮಹರ್ಷಿಯ ಕಂಡು‌ ಮನ ಸೋಲುತ್ತಾಳೆ ಹಾಗೂ ತಾನು ನಿಮ್ಮನ್ನು ಪ್ರೇಮಿಸುತ್ತಿರುವುದಾಗಿ ನಿವೇದಿಸಿಕೊಳ್ಳುತ್ತಾಳೆ. ಮಹರ್ಷಿಗೂ ಅಪರೂಪ ಲಾವಣ್ಯವತಿಯಾದ ಅಪ್ಸರ ಸ್ತ್ರೀಯ ಕಂಡು ತನ್ನ ಒಪ್ಪಿಗೆ ಸೂಚಿಸುತ್ತಾನೆ. ಇಬ್ಬರೂ ಗಾಂಧರ್ವ ವಿವಾಹವಾಗುತ್ತಾರೆ.

ಪ್ರತಿಫಲವಾಗಿ ಕೊಂಚ ಕಾಲಗಳ ತರುವಾಯ ಒಂದು ಪುತ್ರ ಸಂತಾನವಾಗುತ್ತದೆ. ಅಪ್ಸರ ಸ್ತ್ರೀಗೆ ಸ್ವರ್ಗದಿಂದ ತನ್ನ ಕರ್ತವ್ಯದ ಕುರಿತು ಆಜ್ಞೆಯ ಕರೆ ಬಂದಾಗ ಆಕೆ ಮಗುವನ್ನು ಮುನಿಯ ವಶಕ್ಕೊಪ್ಪಿಸಿ ತಾನು ಸ್ವರ್ಗಕ್ಕೆ ಹಿಂತಿರುಗುತ್ತಾಳೆ.

ಮುನಿಯು ಮಗುವಿನ ಯೋಗಕ್ಷೇಮವನ್ನು ತಾನೇ ನೋಡಿಕೊಂಡು ಹೋಗುತ್ತಿದ್ದನು.

ದೂರದ ಯವನ (ಈಗಿನ ಗ್ರೀಸ್) ದೇಶದ ರಾಜನೊಬ್ಬನಿಗೆ ಶೂರ ವೀರನಾಗಿದ್ದನು. ಈತನಿಗೆ ಸಂತಾನ ಇಲ್ಲದುದ್ದುದು ಒಂದು ಚಿಂತೆಯಾಗಿತ್ತು. ಆತ ಬಹಳವಾಗಿ ನೊಂದುಕೊಳ್ಳುತ್ತಿದ್ದ. ಆಗ ಆತನ ಮಂತ್ರಿಯೋರ್ವ ಹಿಮಾಲಯದ ನಂದಗಿರಿಯ ಬಳಿಯೊಬ್ಬ ಮುನಿಯಿದ್ದಾನೆ. ಆತನ ಬಳಿ ನಮ್ಮ ಸಮಸ್ಯೆಯನ್ನು ಹೇಳಿಕೊಳ್ಳೋಣ ಬಹುಶಃ ಆತ ಸಹಾಯ ಮಾಡಬಹುದು ಎಂದು ಹೇಳುತ್ತಾನೆ.

ಆ ರಾಜ ತನ್ನ ಮಂತ್ರಿಯೊಂದಿಗೆ ನಂದಗಿರಿಯ ಬೆಟ್ಟದ ಬಳಿಯ ಮುನಿಯ ಬಳಿ ಬಂದು ತನ್ನ ಸಮಸ್ಯೆ ತೋಡಿಕೊಂಡು ದುಃಖಿಸುತ್ತಾನೆ. ಆಗ ಆ ಮುನಿ ತ್ರಿಗರ್ತದ ಬಳಿ ಇರುವ ಶಿಶಿರಾಯಣನ ಪುತ್ರನನ್ನು ಸಂತಾನವಾಗಿ ಪಡೆದುಕೊಳ್ಳಲು ಸಲಹೆ ನೀಡುತ್ತಾನೆ. ಆದರೆ ಆ ರಾಜ ಆ ಮಹರ್ಷಿ ಕೊಡಲು ಒಪ್ಪುವರೇ, ನನ್ನ ಬಳಿ ಸಂತಾನವಿದೆ ಎಂದು ನಿಮಗೆ ಹೇಗೆ ತಿಳಿಯಿತು ಎಂದೆಲ್ಲಾ ಪ್ರಶ್ನಿಸಿದರೆ ಎಂತು ಮಾಡುವುದು ಎಂದಾಗ.....

ಮುನಿಯು ಮಹರ್ಷಿ ಶಿಶಿರಾಯಣರ ವೃತ್ತಾಂತವೆಲ್ಲ ತಿಳಿಸುತ್ತಾರೆ. ಆತ ಶಿವನಿಂದ ವರವನ್ನು ಪಡೆದದ್ದು, ಹಾಗೂ ಈ ಸಂತಾನ ನೀಡಿದಲ್ಲಿ ಮಹರ್ಷಿಗಳ ಉನ್ನತ ಸಾಧನೆಗೆ ಈ ಅನುಕೂಲವಾಗುವುದು, ಹಾಗೂ ಅವರ ಸಾಧನೆಗೆ ಮಗುವಿನ ಯೋಗಕ್ಷೇಮವೇ ಅಡ್ಡಿಯಾಗುವುದೆಂದು ತಿಳಿಯ ಹೇಳಿ ಕಳಿಸುತ್ತಾರೆ.

ಅದರಂತೆ ರಾಜ ಹಾಗೂ ಮಂತ್ರಿ ಇಬ್ಬರೂ ಬಂದು ಮಹರ್ಷಿ ಶಿಶಿರಾಯಣರಲ್ಲಿ ತಮ್ಮ‌ ಬಿನ್ನಹ ಹೇಳಿಕೊಂಡಾಗ ಮುನಿಯು ಮೊದಲು ನಿರಾಕರಿಸಿ, ನಂತರ ಹೇಗೂ ತಾನು ನಪುಂಸಕನಲ್ಲ ಅಂತ ನಿರೂಪಿಸಿದ್ದಾಯಿತಲ್ಲ. ಇನ್ನು ಈ ಕಂದ ರಾಜನ ಬಳಿ ಇದ್ದರೆ ಸಕಲ ಯುದ್ದ ವಿದ್ಯೆ ಕಲಿತು ಅಜೆಯನಾಗುವನು ಎಂದೆಣಿಸಿ ಮಗುವನ್ನು ರಾಜನಿಗೆ ನೀಡಿದನು.

ಆ ಮಗು ಬೆಳೆದು ಅಪ್ರತಿಮ ಶೂರವೀರನಾಗಿ ಬೆಳೆದು ಅಜೇಯನಾಗಿದ್ದನು. ಆತನಿಗೆ ಯಾವುದೇ ಅಸ್ತ್ರ ಶಸ್ತ್ರಗಳಿಂದ ಸಾವು ಇರಲಿಲ್ಲ. ಆತನು ಹೋರಾಡುವಾಗ ಶತ್ರುಗಳ ಪಾಲಿಗೆ ಕಾಲನಂತೆ ಪರಿಣಮಿಸುತ್ತಿದ್ದರಿಂದ ಹಾಗೂ ಯವನ ದೇಶದ ರಾಜನಾಗಿದ್ದರಿಂದ ಆತನನ್ನು ಕಾಲಯವನ ಎಂದು ಕರೆಯುತ್ತಿದ್ದರು. ಒಮ್ಮೆ ಆತನು ತಾನು ಸಾವನ್ನು ಗೆದ್ದವನು, ಅತ್ಯಂತ ಶಕ್ತಿ ಶಾಲಿ ಅಂತ ಪ್ರಚಾರ ಮಾಡಿದ್ದ. ತನಗಿಂತ ಹೆಚ್ಚಿನ ಶಕ್ತಿಶಾಲಿ ಯೋಧನ ಜೊತೆ ಹೋರಾಡಬೇಕೆಂಬ ಮನಸ್ಸಾಯಿತು. ಆಗ ನಾರದರು ಆತನಿಗೆ ಶ್ರೀ ಕೃಷ್ಣನ ಕುರಿತಾಗಿ ಹೇಳಿದ್ದರು.

ಇತ್ತ ಮಗಧ ನರೇಶ ಜರಾಸಂಧ ದ್ವಾರಕೆಗೆ ಹದಿನೆಂಟು ಬಾರಿ ದಾಳಿ ಮಾಡಿದರೂ ಕೃಷ್ಣ ಬಲರಾಮರಿಂದ ಮುಖಭಂಗವಾಗಿ ಪ್ರತಿಭಾರಿಯೂ ಸೋಲನುಭವಿಸುತ್ತಿದ್ದ. ಈ ಸಮಯದಲ್ಲಿ ಶಲ್ಯನು ಜರಾಸಂಧನಿಗೆ ಕಾಲಯವನನ ಸಹಾಯ ಪಡೆಯಲು ಸಲಹೆ ನೀಡುತ್ತಾನೆ. ಹಾಗೂ ಕಾಲಯವನನಿಗೆ ಯಾವುದೇ ಅಸ್ತ್ರ ಶಸ್ತ್ರಗಳಿಂದ ಸಾವಿಲ್ಲ ಇದು ಮಹಾದೇವನ ವರವಾದ್ದರಿಂದ ಅವನ ಸಹಾಯ ಪಡೆದಲ್ಲಿ, ಕೃಷ್ಣ ಹಾಗೂ ಹಲಧಾರಿ ಬಲಭದ್ರರಿಬ್ಬರನ್ನೂ ಯುದ್ಧದಲ್ಲಿ ಸುಲಭದಲ್ಲಿ ಜಯಿಸಬಹುದು ಎಂದು ಸೂಚಿಸಿದ.

ಅದರಂತೆ ಜರಾಸಂಧನು ವಿದರ್ಭದ ರುಕ್ಮಿ ಹಾಗೂ ಮದ್ರಾಧಿಪತಿ ಶಲ್ಯರ ರಾಯಭಾರಿ ಮಾಡಿ ಮಥುರೆಯ ಮೇಲೆ ದಾಳಿ ಮಾಡುವಂತೆ, ನಾವುಗಳು ಕಾಲಯವನನಿಗೆ ಸಹಾಯ ಮಾಡುವುದಾಗಿ ಕೋರಿಕೊಳ್ಳುತ್ತಾರೆ. ಇತ್ತ ಕಾಲಯವನನಿಗೆ ಬಯಸಿದ ಬಳ್ಳಿ ಕಾಲ ಬಳಿಯೇ ಸೇರಿತು ಎನ್ನುವಂತೆ ಶತ್ರುಗಳ ಶತ್ರು ತನಗೆ ಮಿತ್ರರು ಎಂದು ಮಥುರೆಯ ಮೇಲೆ ದಾಳಿ ಮಾಡಲು ಸೈನ್ಯ ಸಹಿತ ಬರುತ್ತಾನೆ. ಹಾಗೂ ಯುದ್ಧ ಮಾಡಲು ಶ್ರೀ ಕೃಷ್ಣನಿಗೆ ಪಂಥಾಹ್ವನ ನೀಡುತ್ತಾನೆ. 

ಪ್ರತ್ಯುತ್ತರವಾಗಿ ಕೃಷ್ಣನು ವೃಥಾ ಸೈನ್ಯದ ಜೀವ ಹಾನಿ ಮಾಡುವುದಕ್ಕಿಂತ ನಮ್ಮಿಬ್ಬರಲ್ಲೇ ಒಂಟಿಯಾಗಿ ಏಕಾಂತವಾದ ಜಾಗದಲ್ಲಿ ಹೋರಾಟ ಮಾಡೋಣ ಎಂದು ಕಳುಹಿಸಿದ.

 ಸರಿ ಎಂದು ಕಾಲಯವನ ಪ್ರತ್ಯತ್ತರ ನೀಡಿದ. ಆಗ ಬಲರಾಮ, ಅಕ್ರೂರ ಮತ್ತು ಸಾತ್ಯಕಿ ಬೇಡ ಎಲ್ಲರೂ ಸಹಾಯ ಮಾಡುವುದಾಗಿ ತಿಳಿಸಿದರು. ಆಗ ಅವರಿಗೆ ಕೃಷ್ಣನು ಸಮಾಧಾನ ಮಾಡಿ ಕಾಲಯವನನ ಚರಿತ್ರೆ ಹಾಗೂ ಅವನನ್ನು ಯುಕ್ತಿಯಿಂದ ಸೋಲಿಸಬೇಕು ಹಾಗೂ ಆತನ ಸಾವು ಮೊದಲೇ ವಿಧಿ ನಿರ್ಧರಿತವಾದಂತೆಯೇ ಆಗಬೇಕಿದೆ ಎಂದು ತಿಳಿಸಿದನು.

#ಮುಚುಕುಂದ_ಕಥೆ

ತ್ರೇತಾಯುಗದಲ್ಲಿ ಇಕ್ಷಾಕು ವಂಶದ ಮಹಾರಾಜ ಮುಚುಕುಂದ ಮಹಾ ಧರ್ಮನಿಷ್ಟ, ಪ್ರಜಾನುರಾಗಿ, ಶತ್ರುಗಳ ಎದೆಯಲ್ಲಿ ಕಂಪನ ಉಂಟುಮಾಡುವಂತ ಶೂರ. ಅನೇಕ ಆಶ್ವಮೇಧ ಯಾಗ ಮಾಡಿ ದೇವತೆಗಳ ಸ್ನೇಹಿತನಾಗಿದ್ದ, ಸಶರೀರಿಯಾಗಿ ಸ್ವರ್ಗಕ್ಕೆ ಸಭೆ ಸಮಾರಂಭಗಳಲ್ಲಿ ಭಾಗವಹಿಸಲು ಹೋಗುತ್ತಿದ್ದ.

ಒಮ್ಮೆ ಸ್ವರ್ಗಕ್ಕೆ ಅಸುರರ ದಾಳಿಯಾದಾಗ ಶಚಿಪತಿಯು ಮಹಾರಾಜ ಮುಚುಕುಂದನ ಸಹಾಯ ಬೇಡಿದ. ಮುಚುಕುಂದನ ನೇತೃತ್ವದಲ್ಲಿ ದೇವಸೇನೆಯು ದಾನವರೊಂದಿಗೆ ಪ್ರತಿದಾಳಿ ಆರಂಭಿಸಿತು. ಮುಚುಕುಂದನು ಹದಿನೆಂಟು ರೀತಿಯ ವ್ಯೂಹಗಳಿಂದ ಅಸುರರನ್ನು ಹಿಮ್ಮೆಟ್ಟಿಸುತ್ತಿದ್ದನು.

ಈತನ ವ್ಯೂಹ ಮಾದರಿಯ ದಾಳಿಗೆ ದಾನವರು ಕಾಲನ ವಶವಾಗುತ್ತಿದ್ದರು. ಹೀಗೆ ವರ್ಷಗಳ ಕಾಲದಲ್ಲಿ ಅಸುರರು ಸಂಪೂರ್ಣವಾಗಿ ಸೋತು ಸುಣ್ಣವಾಗಿ ಪಾತಾಳದ ಗಡಿ ಎಲ್ಲಿದೆ ಎಂದು ಅಳಿದುಳಿದ ಅಸುರರು ಯುದ್ಧ ಭೂಮಿಗೆ ಬೆನ್ನು ತೋರಿಸುತ್ತಾ ಪಲಾಯನ ಮಾಡಿದರು.

ಯುದ್ಧ ಜಯಿಸಿದ ನಂತರ ದಿಕ್ಪತಿಯು ಸಮಾರಂಭವನ್ನಿಟ್ಟುಕೊಂಡನು. ಅಪ್ಸರೆಯರು ನರ್ತಿಸುತಿರಲು, ಗಂಧರ್ವ ಕಿನ್ನರರು‌ ಗಾಯನವ ಹಾಡುತಿರುವಾಗ, ಸಹಸ್ರಾಕ್ಷನು ಮುಚುಕುಂದ ಮಹಾರಾಜನಿಗೆ ಸಹಾಯ ಮಾಡಿದ ಪ್ರತಿಯಾಗಿ ವರವನ್ನು ಕೇಳು ಹಾಗೂ ಸ್ವರ್ಗದಲ್ಲಿ ಇರಲು ಮುಚುಕುಂದನಿಗೆ ಆಗ್ರಹಿಸುತ್ತಾನೆ. ಆದರೆ ಮುಚುಕುಂದನಿಗೆ ತನ್ನ ಪರಿವಾರವನ್ನು ಬಹು ದಿನಗಳಿಂದ ಬಿಟ್ಟು ಬಂದಿರುವುದಾಗಿ ಅವರುಗಳನ್ನು ನೋಡಬೇಕೆನಿಸುತ್ತಿದೆ ನಾನು ಮನೆಗೆ ಹಿಂತಿರುಗಬೇಕಿದೆ ಎನ್ನುತ್ತಾನೆ.

ಆದರೆ ಸ್ವರ್ಗಾಧಿಪನು ಇದು ದ್ವಾಪರ ಕಾಲ, ಆಗಲೇ ಭೂಲೋಕದಲ್ಲಿ ದ್ವಾಪರಯುಗ ಆರಂಭವಾಗಿದೆ. ಅಲ್ಲದೇ ನಿನ್ನ ಪತ್ನಿ ಪುತ್ರ ಪೌತ್ರರು ಯಾರೂ ಇಲ್ಲ. 

ಅಲ್ಲದೇ ಸ್ವರ್ಗಕ್ಕೂ ಭೂಮಿಗೂ ದಿನಗಳ ವ್ಯತ್ಯಾಸ ಬಹಳ ಅಂತರವಿದೆ. ಇಲ್ಲಿನ ಒಂದು ದಿನ ಇಳೆಯಲ್ಲಿ ಹನ್ನೆರಡು ವಸಂತಗಳಿಗೆ ಸಮ. ಹಾಗಾಗಿ ಹೆಚ್ಚುಕಡಿಮೆ ದಿನಮಾನಕಗಳು ಭುವಿಗೂ ಸ್ವರ್ಗಕ್ಕೆ ಉಂಟು. ನೀನು ಇಲ್ಲಿ ವರ್ಷಗಳವರೆಗೆ ನೀನು ಇಲ್ಲಿಯೇ ಇದ್ದುದರಿಂದ ಅಲ್ಲಿ ಶತಮಾನಗಳು ಸಂದಿವೆ ಎನ್ನುತ್ತಾನೆ ದೇವರಾಜ. 

ಹಾಗಾದರೆ ಮಿತ್ರ ಶಚಿಪತಿಯೇ ನನಗೆ ಯುದ್ಧದಿಂದ ನನ್ನ ದೇಹವು ತುಂಬಾ ದಣಿದಿರುವುದರಿಂದ ವಿಶ್ರಮಿಸಬೇಕು ಹಾಗಾಗಿ ನನಗೆ ವಿಶ್ರಾಮಕ್ಕೆ ಯಾರೂ ಅಡೆತಡೆ ಮಾಡದಂತೆ ಅನುವು ಮಾಡಿಕೊಡು ಎಂದ.

 ಸರಿ ಎಂದು ದೇವರಾಜನು ಮಥುರೆಯಿಂದ ಕೊಂಚವೇ ದೂರದಲ್ಲಿ ಇರುವ ಬಂಡೆಗಳ ಗುಹೆಯ ಬಳಿ ಮುಚುಕುಂದನಿಗೆ ನಿದ್ರಿಸುವಂತೆ ಹಾಗೂ ಆತನ ನಿದ್ರಾಭಂಗವಾದಲ್ಲಿ ಆತನ ಎದುರು ಯಾರಾದರೂ ಕಂಡಲ್ಲಿ ಅವರು ಸುಟ್ಟು ಭಸ್ಮ ಆಗುವಂತೆ ಹರಸಿ ಸ್ವರ್ಗಕ್ಕೆ ಹಿಂತಿರುಗುತ್ತಾನೆ.
====================
ಇತ್ತ ಯುದ್ಧ ಆಹ್ವಾನ ಸ್ವೀಕರಿಸಿದ ಶ್ರೀ ಕೃಷ್ಣನ ಮಥುರೆ ಸುತ್ತ ಕಾಲಯವನನ ಹಾಗೂ ಜರಾಸಂಧ, ಶಲ್ಯ ರುಕ್ಮಿ ಇವರುಗಳ ಸೈನ್ಯ ಮುತ್ತಿಗೆ ಹಾಕಿತ್ತು. ಯುದ್ದಕ್ಕೆ ಕೃಷ್ಣನು ಕೋಟೆಯ ‌ಹೆಬ್ಬಾಗಿಲಿನಿಂದ ಒಬ್ಬಂಟಿಯಾಗಿ‌ ಹೊರಬಂದನು. ಕಾಲಯವನನಿಗೆ ಜರಾಸಂಧ ಕೃಷ್ಣನು ಏನಾದರೂ ಕುಯುಕ್ತಿ ಮಾಡಬಹುದು,ನಾವು ಜೊತೆಯಿರುತ್ತೇವೆ ಎಂದರೂ, ಕಾಲಯವನ ಅವರ ನುಡಿಯನ್ನು ಧಿಕ್ಕರಿಸಿ, ಕೃಷ್ಣನ ನುಡಿಯಂತೆ ಒಂಟಿಯಾಗಿ ಕೃಷ್ಣನನ್ನೇ ಹಿಂಬಾಲಿಸಿದನು. ಸ್ವಲ್ಪ ದೂರ ನಡೆದು ಹೋದ ಕೃಷ್ಣ ಇದ್ದಕ್ಕಿದ್ದಂತೆ ಜೋರಾಗಿ ಓಡಲು ಪ್ರಾರಂಭಿಸಿದ. ಕಾಲಯವನನಿಗೆ ಗಲಿಬಿಲಿಯಾಯ್ತು ಯಾಕೆ ಇವನು ತಪ್ಪಿಸಿಕೊಂಡು ಓಡುತ್ತಿದ್ದಾನೆ ಎಂದು ಕೃಷ್ಣನ ಹಿಂದೆಯೇ ಜೋರಾಗಿ ಓಡಿದ. 

 ಕೃಷ್ಣನು ಓಡುತ್ತಾ ಒಂದು ಬಂಡೆಯ ಗುಹೆಯೊಳಗೆ ಮರೆಯಾಗಿ ಹೋದ. ಅವನನ್ನೆ ಹಿಂಬಾಲಿಸುತ್ತಾ ಕಾಲಯವನ ಬಂದ. 

ಗುಹೆಯ ಒಳಕ್ಕೆ ಬಂದ ಕಾಲಯವನ ಕೃಷ್ಣನನ್ನು ನಿಂಧಿಸಲು ಆರಂಭಿಸಿದ. ಎಲ್ಲಿ ಓಡಿ ಬಂದು ಅವಿತಿರುವೆ ಹೇ ರಣಹೇಡಿ ಬಾ ಹೊರಗೆ ಅನ್ನುತ್ತಾ ಹುಡುಕುತ್ತಿದ್ದ. 

ಅಷ್ಟರಲ್ಲಿ ಕೃಷ್ಣನ ‌ಉತ್ತರೀಯ ಕಾಣಿಸಿತು. ಯಾರೋ ಮಲಗಿರುವಂತಿದೆಯಲ್ಲಾ. ಬಹುಶಃ ಅವನೇ ಇರಬಹುದು. ಹೇ ಕಳ್ಳ ರಣಹೇಡಿ, ವಂಚಕ, ಮೋಸಗಾರ ಏಳು ಎದ್ದೇಳು ಮೇಲೆ ಹೋರಾಡು, ಓಡಿ ಬಂದು ಮುಖವನ್ನು ಮುಚ್ಚಿಕೊಂಡು ಮಲಗಿರುವೆಯಾ ಏಳು ಮೇಲೆ ಎಂದು ಝಾಡಿಸಿ ಒದ್ದು ಒದ್ದು ಏಳಿಸ ಹೊರಟ. 

ಓ ಓಡಿಬಂದು ಸುಸ್ತಾಗಿ ಮಲಗಿದ್ದೀಯಾ ಕಳ್ಳ, ರಣಹೇಡಿ ಅಂತ ನಿಂಧಿಸುತ್ತಾ ಹತ್ತಿರ ಬಂದು ಕಾಲಿನಿಂದ ಜಾಡಿಸಿ ಒದೆಯಲು ಆರಂಬಿಸಿದನು. ಬಹು ದೀರ್ಘಕಾಲದ ವರ್ಷಗಳಿಂದ ಮಲಗಿದ್ದ ಮುಚುಕುಂದನಿಗೆ ಒದೆತ ಏಟು ತಾಳಲಾಗದೆ ಎಚ್ಚರವಾಯ್ತು. ಕಣ್ಣುಜ್ಜುತ್ತಾ ಸುತ್ತ ನೋಡಿದ ಯಾರೂ ಕಾಣಲಿಲ್ಲ, ಆದರೆ ಎದುರಿಗೆ ಕಾಲಯವನ ಕಂಡನು, ಅವನನ್ನು ನೋಡುತ್ತಿದ್ದಂತೆ ಕಾಲಯವನ ಅಲ್ಲಿಯೇ ಸುಟ್ಟು ಭಸ್ಮವಾಗಿ ಹೋದ.

ನಂತರ ಅತ್ತ ಪಕ್ಕದಲ್ಲಿಯೇ ಇದ್ದ ಶ್ರೀಕೃಷ್ಣ ಮುಚುಕುಂದನಿಗೆ ಶ್ರೀ ಮಹಾವಿಷ್ಣುವಿನ ರೂಪದಲ್ಲಿ ಕಾಣಿಸಿಕೊಂಡ ಮುಚುಕುಂದನಿಗೆ ಪರಮಾತ್ಮನು ಎದುರಿಗೆ ಕಂಡಿದ್ದೇ ತಡ ಕಣ್ಣಲ್ಲಿ ಧಾರೆಯಾಗಿ ಅಶ್ರುಧಾರೆ ಬರಲಾರಂಬಿಸಿತು. ನನ್ನ ಈ ಅಪರಾಧಕ್ಕೆ ಕ್ಷಮೆ ಇರಲಿ ಎಂದ. ಆದರೆ ಮಹಾವಿಷ್ಣುವು, ವಿಧಿಲಿಖಿತ ಹೀಗೆಯೇ ಆಗಬೇಕೆಂದು ಮೊದಲೇ ನಿರ್ಧರಿಸಿಯಾಗಿತ್ತು. ನಿನ್ನ ಕಾರ್ಯ ಸಮಾಪ್ತಿಯಾಗಿದೆ ನಿನಗೆ ಶಾಶ್ವತ ಮುಕ್ತಿ ದೊರೆಯಲಿದೆ ಎಂದು ಮುಚುಕುಂದನ ಆತ್ಮವನ್ನು ತನ್ನಲ್ಲಿ ಐಕ್ಯಗೊಳಿಸಿಕೊಳ್ಳುತ್ತಾನೆ.

ಒಮ್ಮೊಮ್ಮೆ ನಾವು ಎಲ್ಲರಿಗೂ ಮೀರಿದ ಶಕ್ತಿವಂತರು ಬುದ್ದಿವಂತರೆಂದು ಅಂದಕೊಳ್ತೇವೆ. ಆದರೆ ನಮಗಿಂತ ಚತುರ, ಚಾಣಾಕ್ಷ, ದೇವ ದೇವನಿದ್ದಾನೆ ಹಾಗೂ ನಮ್ಮನ್ನ ಸೃಷ್ಟಿಸಿದವ ನಮಗಿಂತಲೂ ನೂರು ಪಟ್ಟಿನ ಮಹಾನ್ ಬುದ್ದಿವಂತ ಅನ್ನುವುದು ಮರೆಯುತ್ತೇವೆ. ಅಹಂಕಾರದಿಂದ ಅನ್ಯರ ಮೇಲೆ ಹಗೆ ಸಾಧಿಸಿ ಗೆಲ್ಲಲು ಪ್ರಯತ್ನಿಸಿ, ಗೆದ್ದೆ ಎಂದು ಬೀಗುತ್ತೇವೆ. ಆದರೆ ಪರಮಾತ್ಮನ ಮುಂದೆ ನಮ್ಮ ಶಕ್ತಿ ಶೌರ್ಯ ಎಲ್ಲ ನಿರರ್ಥಕ.  ನಾವ್ಯಾರೂ ಸಾವನ್ನು ಗೆಲ್ಲಲು ಹಾಗೂ ಮರಣದ ಮೇಲೆ ಗೆಲುವು ಸಾಧಿಸಲು ಆಗದು.

No comments:

Post a Comment