🙏ಮಹಾಭಾರತ ಸಾರ- 54 🙏
======================
#ಶ್ರಾದ್ಧದ #ಮಹತ್ವ ಹೇಳಿದ ಭೀಷ್ಮ|
*ಪಿತೃಗಳ ಪ್ರಿತ್ಯರ್ಥವಾಗಿ ಕೊಡುವ ಯಾವ ವಸ್ತು ಅಕ್ಷಯವನ್ನು ಹೊಂದುತ್ತದೆ,?
*ಯಾವ ವಸ್ತು ಕೊಡುವುದರಿಂದ ಪಿತೃಗಳು ತೃಪ್ತರಾಗುತ್ತಾರೆ ?
ಎಂದು ಯುಧಿಷ್ಠಿರ ಭೀಷ್ಮಾಚಾರ್ಯರನ್ನು ಕೇಳುತ್ತಾನೆ.
ಶ್ರಾದ್ಧವಿಧಿಗಳ ರಹಸ್ಯವನ್ನು ತಿಳಿದ ವಿದ್ವಾಂಸರು ಯಾವ ಹವಿಸ್ಸುಗಳನ್ನು ನಿಯತ ಗೊಳಿಸುವವರೋ ಅವೆಲ್ಲವೂ ಕಾಮ್ಯಗಳನ್ನೇ ಕೊಡುತ್ತವೆ.
ಎಳ್ಳು, ಕೆಂಬತ್ತ, ಜವೆ, ಉದ್ದು,ನೀರು, ಗಡ್ಡೆ- ಗೆಣಸು ಮತ್ತು ಹಣ್ಣುಗಳು ಇವುಗಳ ಮೂಲಕವಾಗಿ ಮಾಡಿದ ಶ್ರಾದ್ಧದಿಂದ ಪಿತೃಗಳು ಒಂದು ಮಾಸ ಪರ್ಯಂತರ ತೃಪ್ತರಾಗಿರುತ್ತಾರೆ.
ಯಾವ ಶ್ರಾದ್ದದಲ್ಲಿ ಎಳ್ಳಿನ ಪ್ರಮಾಣ ಹೆಚ್ಚಾಗಿರುತ್ತದಯೋ ಆ ಶ್ರಾದ್ಧವು ಅಕ್ಷಯವಾದದ್ದು ಎಂದು ಮನು ಹೇಳಿದ್ದಾನೆ. ಶ್ರಾದ್ಧದ ಸಂಬಂಧವಾದ ಎಲ್ಲ ಬೋಜ್ಯ ಪದಾರ್ಥದಲ್ಲಿ ಎಳ್ಳನ್ನು ಹೆಚ್ಚಾಗಿ ಬಳಸಬೇಕು.
ಗೋ ಸಂಬಂದವಾದ ವಸ್ತುಗಳಾದ ಹಾಲು, ಮೊಸರು, ತುಪ್ಪಗಳಿಂದ ಮಾಡಲ್ಪಟ್ಟ ಶ್ರಾದ್ಧದಿಂದ ಪಿತೃಗಳು ಒಂದು ಸಂವತ್ಸರದ ವರೆಗೂ ತೃಪ್ತರಾಗಿರುತ್ತಾರೆ
ಮನುಷ್ಯರು ಬಹು ಪುತ್ರರನ್ನು ಪಡೆಯುವ ಅಭಿಲಾಷೆ ಇಟ್ಟುಕೊಳ್ಳಬೇಕು. ಅವರಲ್ಲಿ ಒಬ್ಬ ಮಗನಾದರೂ ಗಯಾದಲ್ಲಿ ಶ್ರಾದ್ಧ ಕರ್ಮ ಮಾಡಿದರೆ ಪಿತೃಗಳಿಗೆ ಅಕ್ಷಯ ತೃಪ್ತಿಯಾಗುತ್ತದೆ.
ಕೃತಿಕಾ ನಕ್ಷತ್ರದಲ್ಲಿ ಶ್ರಾದ್ಧಮಾಡಿದರೆ ಪುತ್ರವಂತನಾಗಿ ರೋಗ ಮುಕ್ತನಾಗಿರುವನು, ರೋಹಿಣಿ ನಕ್ಷತ್ರದಲ್ಲಿ ಮಾಡಿದರೆ ತೇಜಸ್ಸು, ಆಶ್ಲೇಷ ನಕ್ಷತ್ರದಲ್ಲಿ ಶ್ರಾದ್ಧಮಾಡುವವರು ಧೀರ ಮಕ್ಕಳನ್ನು ಪಡೆಯುತ್ತಾರೆ. ಪೂರ್ವ ಪಾಲ್ಗುಣದಲ್ಲಿ ಮಾಡಿದರೆ ಸೌಭಾಗ್ಯ ಶಾಲಿ, ಉತ್ತರ ಪಾಲ್ಗುಣದಲ್ಲಿ ಮಾಡಿದರೆ ಪುತ್ರವಂತನಾಗುವನು ಎಂದು ಭೀಷ್ಮ ಹೇಳಿದ.
ಶ್ರಾದ್ಧ ಹೇಗೆ ಪ್ರಾರಂಭವಾಯಿತು,? ಯಾವ ಕಾಲದಲ್ಲಿಪ್ರಾರಂಭವಾಯಿತು?
ಎಂದು ಯುಧಿಷ್ಢಿರ ಕೇಳುತ್ತಾನೆ.
ಸ್ವಯಂಭು ಬ್ರಹ್ಮನ ಮಗ ಅತ್ರಿ ಮಹರ್ಷಿ. ಆ ಅತ್ರಿಯ ವಂಶದಲ್ಲಿಯೇ ದತ್ತಾತ್ರೇಯ ಜನಿಸಿದನು. ದತ್ತಾತ್ರೇಯನ ಮಗನೇ ನಿಮಿ. ನಿಮಿಗೆ ಶ್ರೀಮಂತ ಎಂಬ ಮಗ ಹುಟ್ಡಿದನು. ಶ್ರೀಮಂತನು ತಪ್ಪಸ್ಸು ಆಚರಿಸುವಾಗಲೇ ಕಾಲ ಧರ್ಮಕ್ಕೆ ಅಧೀನನಾಗಿ ನಿಧನ ಹೊಂದಿದನು. ತಂದೆಯಾದ ನಿಮಿಯೂ ಶಾಸ್ತ್ರೋಕ್ತವಾದ ಕರ್ಮ ಗಳಿಂದ ಅಶೌಚ ನಿವಾರಿಸಿಕೊಂಡು ಪುತ್ರ ಶೋಕದಲ್ಲಿ ಮಗ್ನನಾಗಿ ದುಃಖಿಸತೊಡಗಿದನು. ಶಾಸ್ತ್ರೋಕ್ತವಾಗಿ ಶ್ರಾದ್ಧ ಮಾಡಿದನು. ಭೂಮಂಡಲದಲ್ಲಿ ನಿಮಿಯೇ ಪ್ರಥಮ ಶ್ರಾದ್ಧಕರ್ತನು. ನಮ್ಮ ಪೂರ್ವಜರು ಮಾಡದ ಈ ಶ್ರಾದ್ಧ ಕರ್ಮ ನಾನೇಕೆ ಮಾಡಿದೆ. ಧರ್ಮ ಸಂಕರ ಉಂಟಾಗುವುದೇ ಎಂದು ಚಿಂತಿಸುತ್ತ ತನ್ನ ವಂಶ ಪ್ರವರ್ತಕರಾದ ಅತ್ರಿಯ ಮುನಿಯನ್ನು ಧ್ಯಾನಿಸಿದ. ಅತ್ರಿ ಮುನಿಗಳು ಆಗಮಿಸಿ ಶ್ರಾದ್ಧ ಕರ್ಮ ಆಚರಣೆಯಿಂದ ಧರ್ಮ ಸಂಕರ ಉಂಟಾಗವುದಿಲ್ಲ ಎಂದು ಉಪದೇಶ ನೀಡಿದರು ಎಂದು ಭೀಷ್ಮರು ಯುಧಿಷ್ಠಿರನಿಗೆ ಶ್ರಾದ್ಧ ಆರಂಭದ ಮಹಿಮೆ ಕುರಿತು ಹೇಳಿದರು.
ಹೆತ್ತು ಹೊತ್ತು, ತಾವು ಕಷ್ಟ ಪಟ್ಟು ನಮ್ಮನ್ನು ಬೆಳೆಸಿದ ತಂದೆ ತಾಯಿಗಳಿಗೆ ವರ್ಷದಲ್ಲಿ ಒಂದು ದಿನ ಶ್ರಾದ್ಧ ಮಾಡಲು ನಾವು ಸಿದ್ಧರಿಲ್ಲ. ನಮ್ಮ ವಂಶ ಉದ್ಧಾರಕ್ಕಾಗಿ ನಾವು ಶ್ರಾದ್ದವನ್ನು ಮಾಡಬೇಕು ಎಂಬ ಸಂದೇಶ ಮಹಾಭಾರತ ನೀಡಿದೆ.
ಶ್ರಾದ್ಧ ಕ್ರಿಯೆಯು ಅಂಚೆ ವ್ಯವಸ್ಥೆ ಇದ್ದಂತೆ. ಒಂದು ಪತ್ರದ ಮೇಲೆ ಸರಿಯಾದ ವಿಳಾಸ ಬರೆದು ಅಂಚೆ ಪೆಟ್ಟಿಗೆಯಲ್ಲಿ ಹಾಕಿದರೆ ಅದು ಯಾರನ್ನು ತಲುಪಬೇಕೋ ಅವರು ಯಾವ ಮೂಲೆಯಲ್ಲಿದ್ದರೂ ತಲುಪುತ್ತದೆ. ಅದರಂತೆ ನಾಮ-ಗೋತ್ರಾದಿಗಳನ್ನು ಸರಿಯಾಗಿ ಉಚ್ಚರಿಸಿ ಶ್ರದ್ಧೆಯಿಂದ ಮಾಡಿದ ಶ್ರಾದ್ಧವೂ ನಮ್ಮ ಪಿತೃಗಳು ಎಲ್ಲಿಯೇ , ಯಾವ ಜನ್ಮದಲ್ಕೇ ಇದ್ದರೂ ಅವರಿಗೆ ಅನ್ನಾದಿಗಳನ್ನು ತಲುಪಿಸುವ ವ್ಯವಸ್ಥೆಯನ್ನು ಚಿರಪಿತೃಗಳು ಮಾಡುತ್ತಾರೆ.
ತಪ್ಪು ವಿಳಾಸ ಬರೆದ ಪತ್ರವು ಯಾರಿಗೆ ತಲುಪಬೇಕೊ ಅವರಿಗೆ ತಲುಪದೆ ಎಲ್ಲ ಕಡೆ ಸುತ್ತಾಡಿ ಕೊನೆಗೆ ಅಂಚೆ ಕಚೇರಿಯಲ್ಲಿ ಬಿದ್ದಿರುವಂತೆ. ನಾವು ಗೋತ್ರಾದಿ ಸರಿಯಾಗಿ ಉಚ್ಚರಿಸದಿದ್ದರೆ ನಮ್ಮ ಪಿತೃಗಳಿಗೆ ಅನ್ನಾದಿ ತಲುಪದೇ ಚಿರಪಿತೃಗಳ ಹತ್ತಿರವೆ ಬಿದ್ದಿರುತ್ತದೆ.
🙏 | ಶ್ರೀ ಕೃಷ್ಣಾರ್ಪಣಮಸ್ತು 🙏
No comments:
Post a Comment